ಮಂದಿಗೆ ನಾಳು ನಾಳಿಗೂ ಕೊಂಡಾಟವೇ!

– ಅಮರ್.ಬಿ.ಕಾರಂತ್.

candle

( ಕೊಂಡಾಟ : celebration )

ಮಗು ಹುಟ್ಟಿದರೂ ಬದುಕಿ ಉಳಿದರೂ
ಬೆಳೆಯುತ ಅಲ್ಲಲ್ಲಿ ತಡವರಿಸಿದರೂ
ಗೆಂದು ತೇಗಿದರೂ ಕೊಂಡಾಟವೇ
ಕೊನೆಯುಸಿರೆಳೆಯುವವರೆಗೆ.

ಸತ್ತರೂ ಬಿಟ್ಟಾರೆಯೇ ನಮ್ಮ ಮಂದಿ?
ಹಣೆಬರಹ ನೆಟ್ಟಗಿದ್ದು ಸತ್ತರೆ
ಅವರು ಎಣಿಸಿದ್ದು, ಕುಣಿಸಿದ್ದು
ಆಡಿದ್ದು, ಮಾಡಿದ್ದು ಎಲ್ಲವೂ
ಪೆಂಪಿನ ಪುಂಡಾಟಿಕೆಗಳ ಪೇಳ್ವಿಗಳೇ!
ಬೇಕಿಲ್ಲವೇ ಅವಕಿಶ್ಟು ಕೊಂಡಾಟದ ಮೆರುಗು?

ಅಂದಿನಿಂದಿಂದಿನವರೆಗೂ
ಮಂದಿಗಳ ನಡಿಗೆಯ ಹಿಂದೂ ಮುಂದೂ
ಅಡಿಗಡಿಗೂ ಸೊಂಡೆಮುಸುಡುಗಳಿಗೂ ಕೊಂಡಾಟದ್ದೇ ಒರಪು.
ಚಂಡೆ ತಮಟೆ ಮದ್ದಳೆಗಳ ಮೊರೆತದ ನಡುವೆ
ನಿಡಿಯುಸಿರ ಹುಯ್ದಾಟದ ಉಲಿ ಕೇಳ್ವವರಿರುವರೇ?
ನಲಿವಿಗೆ ಮಯ್ಮೆತ್ತಿದ ಮಾಳ್ಕೆಯ ಹೊಗರು
ನೋವಲಿ ನೆತ್ತರ ಕೆಂಬಣ್ಣ ಹೊಂದಿತಂತೆ
ನಮ್ಮ ಕೊಂಡಾಟಗಳಲಿ

ಮಿಗಿಲ್ಬಾನಿಗುಂಟೇ ಕೊಂಡಾಟದ ತೆವಲು ತನ್ನುಟ್ಟಿಗೆ?
ತೆರೆದು ಬೆಳೆದವಗೆ, ಹಬ್ಬಿದಿಡಿಯೆಡೆಗೆ
ಉಂಟೇ ಉರಿದು ಉಸಿರನೀಯ್ವ ಅರಿಲುಗಳ ಉರಿಮೆಗೆ
ನೆಲದ ಹಿರಿ ಪೊರೆಗೆ, ಹೊಲದ ಮೊಗೆ ಬೆಳೆಗೆ
ಎಣೆಯಿಲ್ಲದ ತಾಯೊಲುಮೆಯ ಹೊಳೆಗೆ
ಕೊಂಡಾಟದ ಸೋಗ ಒಪ್ಪುವವೇ ಅವಕೆ?

ಹಳೆಯ ಹಬ್ಬಗಳು ಹೊಸ ಏಡುಗಳು
ಮರಳಿ ಮರಳಿ ಎದುರಾದರೂ
ಕೊಂಡಾಟದ ಸೆರಗೊಳಗೆ ತಿರುಳನ್ನೇ ಕಳೆದಿಹುದು
ಇನಿಹೊತ್ತಿನ ಬೇಟದ ಅಮಲಿನಲ್ಲಿ.

ಎಶ್ಟು ಕುಣಿದರೂ ಕೊಂಡಾಡಿದರೂ
ಕಂಗೆಟ್ಟ ಕೆಡುಗನಸುಗಳ ಕೊಡದಂತಿರುವೀ ಬಾಳು
ಹೆಚ್ಚೆಂದರೆ ಬುಗ್ಗಿಮುಚ್ಚಿದ ಕೆಂಜೊಡರಿನಂತೆ
ಸೊಮ್ಮಿನ ಸಿಹಿಬಯಕೆಗಳ ಬಿತ್ತಿ
ಹೊಗೆಯಾಡುವುದು ಒಳಗಿನ ಕಾವಿನಲ್ಲಿ

ಆದರೂ, ಮಂದಿಗೆ ನಾಳು ನಾಳಿಗೂ ಕೊಂಡಾಟವೇ
ಸಾಯುವ ಕೊನೆಸೂಳನ್ನು ಹೊರತು.
ಯಾಕೆಂದರೆ, ಆಡಿ ಕೊಂಡಾಡಿ ಬದುಕಿದ ಬಾಳ್ಗೆ
ನೋವಿನ ನೋಂಪೆಲ್ಲವನು ನೆನಪಿಸುವುದು
ಸಾವಿನ ಚಾಟಿಯೊಂದೇ, ಅಲ್ಲವೇ?

( ಚಿತ್ರಸೆಲೆ: colourbox.com ) 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: