ಕೆಲಸದಲ್ಲಿ ಬಿರುಸು ಹಾಗು ಒಳ್ಳೆಯ ಮುಂದಾಳ್ತನವಿದ್ದರೆ ಏಳಿಗೆ ಕಟ್ಟಿಟ್ಟಬುತ್ತಿ

– ರತೀಶ ರತ್ನಾಕರ.

race

ಚಿಟಿಕೆ ಹೊಡೆಯುವುದರೊಳಗೆ ಕೆಲಸಗಳೆಲ್ಲಾ ಮುಗಿಯಬೇಕು. ಒಂದೇ ಉಸಿರಿಗೆ ಕೆಲಸಮಾಡಿ ಮುಗಿಸಬೇಕು. ಪೈಪೋಟಿಯ ಈಗಿನ ಜಗತ್ತು ನಮ್ಮ ಕೈಯಿಂದ ಕೆಲಸಗಳನ್ನು ಬಿರುಸಾಗಿ ಮಾಡಿಸುತ್ತಿದೆ. ಅದರ ಬಿರುಸಿಗೆ ಹೊಂದಿಕೊಂಡು ನಾವು ಬಿರುಸಾಗಿ ಕೆಲಸಮಾಡಿದರೆ ಸರಿ, ಇಲ್ಲವಾದರೆ ಮೂಲೆ ಗುಂಪಾಗುವುದಂತು ದಿಟ. ಅದರಲ್ಲೂ ಒಂದು ಕೆಲಸದ ಮುಂದಾಳ್ತನವನ್ನು ವಹಿಸಿಕೊಂಡವರು ಬಿರುಸಿನಿಂದ ಇರಬೇಕಾಗಿರುವುದು ತುಂಬಾ ಅರಿದಾದದ್ದು (important). ಏಕೆಂದರೆ, ಮುಂದಾಳುವಿನ ಬಿರುಸಿನ ಮೇಲೆ ಇಡೀ ತಂಡದ ಕೆಲಸದ ಬಿರುಸು ನಿಂತಿರುತ್ತದೆ.

ಹಾಗಾದರೆ ಮುಂದಾಳುವಿನ ಕೆಲಸದ ಬಿರುಸು ಮತ್ತು ಮುಂದಾಳ್ತನಕ್ಕೂ ಏನಾದರು ನಂಟಿದೆಯೇ? “ಹೌದು” ಎನ್ನುತ್ತವೆ ಅರಕೆಗಳು(researches). ಕೆಲಸ ಇಲ್ಲವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡವರು ತಮ್ಮ ಕೆಲಸದಲ್ಲಿ ಬಿರುಸಾಗಿದ್ದರೆ ಅವರ ಮುಂದಾಳ್ತನವು ಚೆನ್ನಾಗಿರುತ್ತದೆ ಎನ್ನುತ್ತವೆ ಅರಕೆಗಳು. ಈ ಅರಕೆಗೆ ಆರಿಸಿಕೊಂಡಿದ್ದು ಒಬ್ಬಿಬ್ಬರ ಮಾಹಿತಿಯನ್ನಲ್ಲ, ಸುಮಾರು 50,711 ಮುಂದಾಳುಗಳಿಗೆ ಅವರವರ ತಂಡದವರು ನೀಡಿದ ಹಿನ್ನುಣಿಕೆ(feedback)ಯ ಮಾಹಿತಿಯನ್ನು ಕಲೆಹಾಕಿ ಈ ಮಾತುಗಳನ್ನು ಹೇಳಲಾಗುತ್ತಿದೆ.

ಮುಂದಾಳುಗಳ ಬಿರುಸನ್ನು ಮತ್ತು ಮುಂದಾಳ್ತನದ ಬಗೆಯನ್ನು ಲೆಕ್ಕಹಾಕಲು ಹಿನ್ನುಣಿಕೆಗಳಲ್ಲಿ ಈ ಕೆಳಗಿನ ಮೂರು ಅಂಶಗಳ ಕಡೆಗೆ ಗಮನಹರಿಸಲಾಯಿತು.
1. ತಂಡ ಹಾಗು ಕೆಲಸಗಳಲ್ಲಿರುವ ತೊಡಕುಗಳನ್ನು ಅವು ಕೈಮೀರಿ ಹೋಗುವ ಮುಂಚೆಯೇ ಕಂಡುಹಿಡಿಯುವ ಚುರುಕುತನ ಇದೆಯೇ?
2. ತಂಡ ಹಾಗು ಕೆಲಸಗಳಲ್ಲಿರುವ ತೊಡಕುಗಳನ್ನು ಎಶ್ಟು ಬೇಗ ಹಾಗು ಎಶ್ಟು ಚೆನ್ನಾಗಿ ಬಗೆಹರಿಸುವರು?
3. ತಂಡ ಹಾಗು ಕೆಲಸಕ್ಕೆ ಬೇಕಾಗಿರುವ ಮಾರ‍್ಪಾಟುಗಳನ್ನು ಎಶ್ಟು ಬೇಗ ಹಾಗು ಎಶ್ಟು ಚೆನ್ನಾಗಿ ಮಾಡುವರು?

ಈ ಮೇಲಿನ ಕೇಳ್ವಿಗಳಿಗೆ ಸರಿಹೊಂದುವಂತೆ ಹಿನ್ನುಣಿಕೆಗಳಲ್ಲಿ ಸಿಕ್ಕ ಮಾಹಿತಿಯನ್ನು ಸೇರಿಸಿ ಮುಂದಾಳುಗಳಿಗೆ ಇಶ್ಟಿಶ್ಟು ಎಂದು ಅಂಕಿಗಳನ್ನು ನೀಡಲಾಯಿತು. ಆ ಅಂಕಿಗಳನ್ನು ಕಲೆಹಾಕಿದಾಗ ಹೊರಬಂದ ದಿಟವೆಂದರೆ, 50,711 ಮುಂದಾಳುಗಳಲ್ಲಿ ಸುಮಾರು 2% ಮಂದಿ ಬಿರುಸಾಗಿ ಕೆಲಸಮಾಡುತ್ತಾರೆ ಆದರೆ ಒಳ್ಳೆಯ ಮುಂದಾಳ್ತನವಿಲ್ಲ, ಸುಮಾರು 3% ಮಂದಿಯ ಮುಂದಾಳ್ತನ ತುಂಬಾ ಚೆನ್ನಾಗಿದೆ ಆದರೆ ಬಿರುಸಾಗಿ ಕೆಲಸಮಾಡುವುದಿಲ್ಲ, ಇನ್ನು ಉಳಿದ 95% ಮಂದಿ (5,400 ಮಂದಿ) ಬಿರುಸಾಗಿಯೂ ಕೆಲಸಮಾಡುವರು ಜೊತೆಗೆ ಒಳ್ಳೆಯ ಮುಂದಾಳುಗಳು ಕೂಡ!

chart1

ಹಾಗದರೆ ಈ 95% ಮಂದಿ ಹೇಗೆ ಒಳ್ಳೆಯ ಮುಂದಾಳ್ತನದ ಜೊತೆಗೆ ಬಿರುಸಾಗಿಯು ಕೆಲಸ ಮಾಡುತ್ತಾರೆ?
ಇದನ್ನು ಅರಿಯಲು ಅರಕೆಗಾರರು ಮತ್ತೆ ಆ ಹಿನ್ನುಣಿಕೆಗಳ ಮೊರೆ ಹೋದರು. 50,711 ಮುಂದಾಳುಗಳಿಗೆ ಸುಮಾರು 7 ಲಕ್ಶ ಜೊತೆಕೆಲಸಗಾರರು/ತಂಡದವರು ಹಿನ್ನುಣಿಕೆಗಳನ್ನು ನೀಡಿದ್ದರು. ಅರಕೆಗಾರರಿಗೆ ಬೇಕಾದಶ್ಟು ಮಾಹಿತಿಗಳು ಕಣ್ಣೆದುರಿಗೆ ಇದ್ದವು. ಅವುಗಳನ್ನು ಕಲೆಹಾಕಿ ಒಳ್ಳೆಯ ಮುಂದಾಳ್ತನ ಮತ್ತು ಬಿರುಸಾಗಿ ಕೆಲಸ ಮಾಡುತ್ತಿದ್ದವರಲ್ಲಿ ಇದ್ದ ಸಾಮಾನ್ಯ ಗುಣಗಳೇನು ಎಂದು ತಿಳಿಸಿದ್ದಾರೆ. ಈ ಗುಣಗಳೇ ಒಬ್ಬರನ್ನು ಬಿರುಸಿನ ಕೆಲಸ ಮಾಡುವ ಒಳ್ಳೆಯ ಮುಂದಾಳುವನ್ನಾಗಿ ಮಾಡುತ್ತವೆ ಎಂಬುದು ಅವರ ಅನಿಸಿಕೆ. ಅಂತಹವರಲ್ಲಿರುವ ಗುಣಗಳೆಂದರೆ;

1. ತಾವು ತೆಗೆದುಕೊಳ್ಳುವ ತೀರ‍್ಮಾನಗಳ ಮೇಲೆ ತಂಡದವರ ನಂಬಿಕೆ ಗಳಿಸಿವುದು: ‘ನಂಬಿಕೆಯೇ ಬದುಕು’ ಎಂದಮೇಲೆ ಅದು ನಮ್ಮ ಕೆಲಸದ ಜಾಗದಲ್ಲಿಯು ಇರಬೇಕಲ್ಲವೇ? ಒಬ್ಬ ಒಳ್ಳೆಯ ಮುಂದಾಳುವಿನ ಅರಿದಾದ ಗುಣವೆಂದರೆ ತನ್ನ ತಂಡದವರ ನಂಬಿಕೆ ಗಳಿಸುವುದು, ಆಗ ಆತ ತೆಗೆದುಕೊಳ್ಳುವ ತೀರ‍್ಮಾನಗಳ ಮೇಲೆ ತಂಡದವರಿಗೆ ನಂಬಿಕೆ ಹುಟ್ಟುತ್ತದೆ ಮತ್ತು ಒಟ್ಟಾಗಿ ಒಂದು ಕೆಲಸವನ್ನು ಮಾಡಿ ಮುಗಿಸಲು ಅವರೆಲ್ಲಾ ನೆರವಾಗುತ್ತಾರೆ. ಒಳ್ಳೆಯ ಹೊಂದಾಣಿಕೆ ಮತ್ತು ಒಡನಾಟದಿಂದ ತಂಡದವರ ನಂಬಿಕೆ ಗಳಿಸುವುದು ಅರಿದಾದದ್ದು.

2. ತಮ್ಮ ಗುರಿ ಮತ್ತು ದಾರಿಗಳೇನು ಎಂಬುದನ್ನು ತಂಡದವರಿಗೆ ಮನದಟ್ಟು ಮಾಡಿಸುವುದು: ಒಂದು ದೊಡ್ಡ ಮರದ ದಿಮ್ಮಿಯನ್ನು ಹತ್ತು ಮಂದಿ ಕೆಲಸಗಾರರು ಕಬ್ಬಿಣದ ಸಲಾಕೆಗಳನ್ನು ಬಳಸಿ ಲಾರಿಗೆ ಏರಿಸುವುದನ್ನು ಎಲ್ಲಾದರು ನೀವು ನೋಡಿರಬಹುದು. ಆ ದಿಮ್ಮಿಯನ್ನು ಸಾಗಿಸುವಾಗ ‘ತಾಕತ್ ಹಾಕಿ – ಐಸಾ…’ ‘ಇನ್ನೂ ಸ್ವಲ್ಪ – ಐಸಾ’ ಎಂಬ ಸದ್ದು ಕೇಳಿಬರುತ್ತಿರುತ್ತದೆ. ಆ ಗುಂಪಿನಲ್ಲಿ ಒಬ್ಬ ‘ತಾಕತ್ ಹಾಕಿ’ ಎಂದರೆ ಉಳಿದವರೆಲ್ಲಾ ಒಟ್ಟಿಗೆ ‘ಐಸಾ’ ಎನ್ನುವ ಜೊತೆಗೆ ಒಟ್ಟಿಗೆ ಬಲಕೊಟ್ಟು, ಸಲಾಕೆಯ ಮೂಲಕ ದಿಮ್ಮಿಯನ್ನು ಹಂತ ಹಂತವಾಗಿ ಸಾಗಿಸುತ್ತಾರೆ. ಅದು ಸುಲಬದ ದಾರಿಯೂ ಹೌದು. ಇಲ್ಲವಾದರೆ ಒಬ್ಬಬ್ಬರು ಬೇರೆ ಬೇರೆ ಹೊತ್ತಿನಲ್ಲಿ ಬಲಕೊಟ್ಟು, ಯಾವುದ್ಯಾವುದೋ ದಿಕ್ಕಿನತ್ತ ದಿಮ್ಮಿಯನ್ನು ದೂಡಿ, ಒಟ್ಟಿನಲ್ಲಿ ದಿಮ್ಮಿಯನ್ನು ಸಾಗಿಸಲು ಹರಸಾಹಸ ಪಡಬೇಕಾಗುತ್ತದೆ.
‘ಐಸಾ…’ ಎಂದು ಹೇಳುವ ಜೊತೆಗೆ ಬಲವನ್ನು ಹಾಕಿ, ಮೊದಲೇ ನಿಗದಿಪಡಿಸಿದ ದಿಕ್ಕಿನತ್ತ ದಿಮಿಯನ್ನು ದೂಡಬೇಕು ಎಂಬುದು ಕೆಲಸದ ‘ದಾರಿ’. ಇನ್ನು ಅದನ್ನು ಲಾರಿಗೆ ಏರಿಸಬೇಕು ಎಂಬುದು ‘ಗುರಿ’. ಇಂತಹ ವಿವರಗಳನ್ನು ಮುಂದಾಳುಗಳು ತನ್ನ ತಂಡದವರಿಗೆ ಸರಿಯಾಗಿ ಮನವರಿಕೆ ಮಾಡಿಕೊಡಬೇಕು. ಆಗ ತಂಡದವರೆಲ್ಲರ ಕೆಲಸ ಸುಲಬವಾಗುವುದು ಮತ್ತು ಅವರು ಹುರುಪಿನಿಂದ ಕೆಲಸಮಾಡುವರು.

3. ಎದೆಗಾರಿಕೆ ತೋರುವುದು: ತಮ್ಮ ಕೈಲಾದಶ್ಟು ಕೆಲಸವನ್ನು ಆರಾಮಾಗಿ ಮಾಡುವುದು ಹೆಚ್ಚಿನವರ ಬಯಕೆಯಾಗಿರುತ್ತದೆ. ಹಾಗೆ ಕೆಲಸ ಮಾಡುತ್ತಿರುತ್ತಾರೆ ಕೂಡ. ಇಂತಹವರ ನಡುವೆ ಪಟ ಪಟನೆ ಕೆಲಸಮಾಡುತ್ತಾ ಉಳಿದವರನ್ನೂ ತಮ್ಮ ಬಿರುಸಿಗೆ ಹೊಂದಿಕೊಂಡು ಕೆಲಸಮಾಡುವಂತೆ ಕೇಳಲು ಎದೆಗಾರಿಕೆ ಬೇಕು. ಬಿರುಸಿನ ಕೆಲಸ ಮಾಡುವುದರ ಜೊತೆಗೆ ಬಿರುಸಿನ ಕೆಲಸ ಮಾಡಿಸುವ ಎದೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು.

4. ಅರಿವಿನ ಗಣಿಯಾಗಿರುವುದು ಜೊತೆಗೆ ಕೆಲಸದಲ್ಲಿ ನುರಿತಿರುವುದು: ಇವೆರಡಕ್ಕೂ ಸಾಕಶ್ಟು ಕಲಿಕೆಯನ್ನು ನಡೆಸಬೇಕು, ಪಳಗಿಕೆ(practice)ಯನ್ನು ಮಾಡಬೇಕು. ಮುಂದಾಳ್ತನದ ಯಾವುದೇ ಹಂತದಲ್ಲಿ, ಅರಿವಿನ ಕೊರತೆ ಇದೆ ಎಂದು ಕಂಡುಕೊಂಡರೆ ಕೂಡಲೇ ಅದಕ್ಕೆ ಬೇಕಾದ ಕಲಿಕೆಯನ್ನು ನಡೆಸಿ ಸರಿದೂಗಿಸಿಕೊಳ್ಳಬೇಕು. ಕೆಲಸದ ವಿಶಯದಲ್ಲಿಯೂ ಅಶ್ಟೆ, ಕಲಿಕೆಗೆ ಕೊನೆಯಿರಬಾರದು.

5. ಕೊಂಚ ಮಿತಿಮೀರಿದ ಗುರಿಯಿಟ್ಟುಕೊಳ್ಳುವುದು: ಒಂದು ಕೆಲಸವನ್ನು ಮುಗಿಸಲು ಮೂರುದಿನಗಳು ಬೇಕಿದ್ದರೆ ಅದನ್ನು ಎರಡುವೆರೆ ದಿನಗಳಲ್ಲಿ ಮುಗಿಸುವ ಗುರಿಯಿಟ್ಟುಕೊಳ್ಳುವುದು. ದಿನಕ್ಕೆ ನೂರು ಕಡತಗಳನ್ನು ನೋಡಿ ಸರಿಪಡಿಸುವ ಕೆಲಸವಿದ್ದರೆ ನೂರಾ ಐದು ಕಡತಗಳನ್ನು ನೋಡುವ ಗುರಿಯಿಟ್ಟುಕೊಳ್ಳುವುದು. ಇಂತಹ ಮಿತಿಮೀರಿದ ಗುರಿಗಳು ಕೆಲಸದ ಬಿರುಸನ್ನು ಹೆಚ್ಚಿಸುತ್ತವೆ. ಆದರೆ ಕೆಲಸದಲ್ಲಿ ತಪ್ಪುಗಳು ಆಗದಂತೆ ಎಚ್ಚರವಹಿಸಬೇಕು ಮತ್ತು ಒತ್ತಡಕ್ಕೆ ಎಡೆಮಾಡಿಕೊಡದಂತಿರಬೇಕು.

ನೆನಪಿರಲಿ, ಕೆಲಸವನ್ನು ಬಿರುಸಾಗಿ ಮಾಡುವ ನೆವದಲ್ಲಿ ಉಳಿದವರಿಗೆ ತುಂಬಾ ಕಿರಿಕಿರಿ ಆಗದಂತೆ ಎಚ್ಚರವಹಿಸಬೇಕು. ಕೆಲಸದಲ್ಲಿ ಬಿರುಸಿರಲಿ ಆದರೆ ಅವಸರ ಬೇಡ. ಬಿರುಸಿನ ಕೆಲಸ ಹಾಗು ಒಳ್ಳೆಯ ಮುಂದಾಳ್ತನ ಹಾಲು ಜೇನಿನಂತೆ ಬೆರೆತರೆ ಕೆಲಸದಲ್ಲಿ ಏಳಿಗೆಯ ಸವಿ ಕಟ್ಟಿಟ್ಟಬುತ್ತಿ.

(ಮಾಹಿತಿ ಸೆಲೆ: hbr.org)
(ಚಿತ್ರ ಸೆಲೆ: costelloracing.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications