ಇಶ್ಟಕ್ಕೂ ಕಲೆ ಎಂದರೇನು?

– ಬಸವರಾಜ್ ಕಂಟಿ.

art1

ಯಾವುದು ಕಲೆ? ಎಂದ ತಕ್ಶಣ ನಮಗೆ ನೆನಪಾಗುವದು ಚಿತ್ರಕಲೆ, ಸಂಗೀತ, ಶಾಸ್ತ್ರೀಯ ನ್ರುತ್ಯ, ಅಬಿನಯ. ತುಸು ಒತ್ತು ಕೊಟ್ಟು ನೆನಪಿಸಿಕೊಂಡರೆ, ಜಾನಪದ ಕುಣಿತಗಳು, ಯಕ್ಶಗಾನ. ಸಾಹಿತ್ಯವನ್ನೂ ಕಲೆಗಳ ಪಟ್ಟಿಗೆ ಸೇರಿಸಬಹುದು. ಆಮೇಲೆ? ಇನ್ನೂ ಹುಡುಕಿದರೆ ಇನ್ನೊಂದಿಶ್ಟು ಹೆಸರುಗಳು ಕೇಳಿ ಬರಬಹುದು (ಶಿಲ್ಪಕಲೆ, ಕುಸುರಿ, ನೇಯ್ಗೆ). ಆದರೆ, ಯಾಕೆ ನಾವು ಮಾಡುವ ಎಲ್ಲ ಕೆಲಸಗಳನ್ನೂ ಕಲೆ ಎನ್ನುವುದಿಲ್ಲ? ಕುಂಚಕ್ಕೆ ಬಣ್ಣ ಬಳಿದು ತೀಡಿದ್ದೆಲ್ಲವೂ ಕಲೆಯಾಗುತ್ತದೆಯೇ? ನಟನೆಯೇ ಗೊತ್ತಿರದೆ, ತಾನೇ ದುಡ್ಡು ಹಾಕಿ, ನಾಯಕನಾಗಿ ಸಿನಿಮಾ ಮಾಡಿದವರೆಲ್ಲರೂ ಕಲಾವಿದರೆ? ಕೊಳಲೆತ್ತಿ ಊದಿದ್ದೆಲ್ಲವೂ ಸಂಗೀತವೇ? ಇಲ್ಲ ಅಂತ ನಮಗೆ ಚೆನ್ನಾಗಿ ಗೊತ್ತು. ಹಾಗಾದರೆ ನಮ್ಮ ಸಮಾಜದಲ್ಲಿ ಯಾಕೆ ಕೆಲವು ಕೆಲಸಗಳಿಗೆ ಮಾತ್ರ ಕಲೆ ಎನ್ನುವ ಗೌರವ ಕೊಟ್ಟಿರುವುದು? ಎಲ್ಲರೂ ಗಮನವಿಟ್ಟು ಕೇಳುವಂತೆ ಮಾತನಾಡುವುದೂ ಒಂದು ಕಲೆ ಎನ್ನುತ್ತೇವೆ. ಹಾಗೆಯೇ, ತನ್ನ ಬೇಟೆಗೆ ಗೊತ್ತೇ ಆಗದ ರೀತಿ ಜೇಬು ಕತ್ತರಿಸುವ ಕಳ್ಳನದೂ ಒಂದು ಕಲೆಯೇ. ಇಶ್ಟಕ್ಕೂ ಕಲೆ ಎಂದರೇನು?

ಸುಮಾರು ತಾಸುಗಳನ್ನು ಕರ‍್ಚುಮಾಡಿ, ಗೂಗಲ್ ಬಳಸಿ, ಉತ್ತರಗಳಿಗೆ ಹುಡುಕಿದಾಗ, ಬೇರೆ ಬೇರೆ ರೀತಿಯ ಉತ್ತರಗಳು ಸಿಕ್ಕವು. ನನ್ನ ತಿಳುವಳಿಕೆ ಬಳಸಿ ಕಲೆಯನ್ನು ಎರಡು ಬಗೆಯಾಗಿ ವಿಂಗಡಿಸಿದ್ದೀನಿ. ಈ ಎರಡು ಬಗೆಗಳು ಮೇಲಿನ ಕೇಳ್ವಿಗಳಿಗೆ ಉತ್ತರ ಕೊಡಬಹುದು ಎಂದು ನನ್ನ ಅನಿಸಿಕೆ.

1. ಪ್ರಾಪಂಚಿಕ ನೋಟ (ಅತವಾ ಹೊರನೋಟ):

ಚಿಕ್ಕ ಮಗುವೊಂದು ಅಳುತ್ತದೆ, ನಗುತ್ತದೆ. ಅದನ್ನು ನಾವು ನಟನೆ ಎನ್ನುವುದಿಲ್ಲ, ಅದು ನಯ್ಸರ‍್ಗಿಕ. ಆದರೆ, ನಟಿಯೊಬ್ಬಳು ಬುದ್ದಿಮಾಂದ್ಯ ಮಗುವಿನ ಪಾತ್ರ ಮಾಡುವಾಗ, ಕರಾರುವಕ್ಕಾಗಿ ಮಗುವಿನಂತೆಯೇ ನಕ್ಕು-ಅತ್ತರೆ, ಅದು ನಟನೆ. ಆಗ ಅದು ಕಲೆಯಾಗುತ್ತದೆ. ಪುಟ್ಟ ಮಗುವೊಂದು ಬೆಟ್ಟಗಳ ನಡುವಿನಿಂದ ಮೂಡುವ ನೇಸರನನ್ನು ಬಿಡಿಸಿದ ತಿಟ್ಟ ಕಲೆಯಾಗುವುದಿಲ್ಲ. ಆದರೆ, ಚಿತ್ರಗಾರನೊಬ್ಬ ಸೂಕ್ಶ್ಮ ವಿವರಗಳನ್ನೆಲ್ಲ ಬಳಸಿ, ಕರಾರುವಕ್ಕಾಗಿ ಬಿಡಿಸಿದ ಅದೇ ನೇಸರನ ತಿಟ್ಟ ಕಲೆಯಾಗುತ್ತದೆ. ನಿಸರ‍್ಗಕ್ಕೆ ಅತವಾ ದೇವರ ಸ್ರುಶ್ಟಿಗೆ ಆದಶ್ಟು ಹತ್ತಿರವಾಗಿರುವಂತೆ ಇರುವ ಮಾಡುಗೆಗೆ ಕಲೆ ಎನ್ನಬಹುದು. ಅಂದರೆ, ಒಂದು ಕೆಲಸದಲ್ಲಿ ಅತೀ ಪರಿಣತಿ ಸಾದಿಸಿ, ದೇವರು ಆ ಕೆಲಸವನ್ನು ಮಾಡಿದರೆ ಯಾವ ಮಟ್ಟದಾಗಿರುತ್ತದೋ, ಆ ಮಟ್ಟಕ್ಕೆ ನಮ್ಮ ಕೆಲಸವನ್ನು ಕೊಂಡೊಯ್ದರೆ, ಅದು ಕಲೆಯಾಗುತ್ತದೆ. ಅದು ಯಾವ ಕೆಲಸವಾದರೂ ಸರಿ. ಹುಟ್ಟಿದ ಒಂದೆರಡು ದಿನಗಳ ಕೂಸಿಗೆ ಕೊಯ್ಮದ್ದು ಮಾಡುವ ವೈದ್ಯರ ನಿಪುಣತೆಯ ಕೆಲಸ ಯಾವ ಕಲೆಗೂ ಕಮ್ಮಿಯಿಲ್ಲ. ಆ ಕೆಲಸ ಬೇಡುವ ನಿಪುಣತೆಯೇ ಅಂತಹದ್ದು. ಹಾಗಂತ ಕೆಮ್ಮು ನೆಗಡಿಗೆ ಮದ್ದು ಕೊಡುವ ವೈದ್ಯರನ್ನೆಲ್ಲಾ ಕಲಾವಿದರು ಎನ್ನಲಾಗುವುದಿಲ್ಲ.

ಒಂದು ಸಾಮಾನ್ಯ ಕೆಲಸ, ಕಲೆಯ ಮಟ್ಟಿಗೆ ಏರಬೇಕಾದರೆ, ಅದು ದೇವರ ಅತವಾ ನಿಸರ‍್ಗದ ಮಟ್ಟಕ್ಕೆ ಆದಶ್ಟು ಹತ್ತಿರವಾಗಿರಬೇಕು. ಒಂದು ಮಾಡುಗೆ (product) ಕಲೆಯಾಗಬೇಕಾದರೆ, ದೇವರೇ ಅದನ್ನು ಮಾಡಿದ್ದಾನೆ ಎನ್ನುವಂತಿರಬೇಕು. ಅಂತಹ ಮಾಡುಗೆ ಯಾವ ಕುಂದುಗಳಿರದೆ, ಸುಂದರವಾಗಿ, ಸೊಗಸಾಗಿ, ತನ್ನ ಇತರ ಮಾಡುಗೆಗಳಿಗೆ ಮೇಲ್ಪಂಕ್ತಿಯನ್ನು ಹಾಕಿ ಕೊಡುತ್ತದೆ. ಇಂತಹ ಮಾಡುಗೆಯನ್ನು ಕಲೆಯೆಂದು ಎಲ್ಲರೂ ಒಪ್ಪುತ್ತಾರೆ. ಅದರಲ್ಲಿ ಬಿನ್ನಾಬಿಪ್ರಾಯಗಳಿರುವುದಿಲ್ಲ. ಇರುವರಿಮೆಯ ದೊಡ್ಡ ಗುಟ್ಟನ್ನು, E=mc2 ಎನ್ನುವುದಕ್ಕಿಂತ ಸರಳವಾಗಿ ಬಹುಶಹ ದೇವರೂ ಹಿಡಿದಿಡಲಾರ. ಕ್ರೀಡೆಗಳಲ್ಲಿ ಸಾದನೆ ಮಾಡಿರುವ ಅನೇಕರ ಆಟ, ನಮ್ಮ ಕಣ್ಣುಗಳನ್ನು ನಾವೇ ನಂಬದಂತೆ ಮಾಡುವ ಎಶ್ಟೋ ಜಾದೂಗಾರರ ಕಯ್ ಚಳಕ, ಬಿ.ಕೆ.ಎಸ್. ಅಯ್ಯಂಗಾರ್ ಅವರ ಯೋಗ, ಹೀಗೆ ಸಾಮಾನ್ಯ ಕೆಲಸವನ್ನು ಕಲೆಯ ಮಟ್ಟಕ್ಕೆ ಕೊಂಡೊಯ್ದ ಅನೇಕ ಎತ್ತುಗೆಗಳನ್ನು ಕೊಡಬಹುದು.

2. ಮನಸ್ಸಿನ ನೋಟ (ಅತವಾ ಒಳನೋಟ):

ಯಾವುದೇ ಒಂದು ಮಾಡುಗೆಯು (ಎತ್ತುಗೆಗೆ- ಸಂಗೀತ, ಚಿತ್ರ, ಅಬಿನಯ, ಸಿನಿಮಾ, ಸಾಹಿತ್ಯ, ಮುಂ) ನಮ್ಮಲ್ಲಿ ಬಾವನೆಗಳನ್ನು ಹುಟ್ಟುಹಾಕಿ, ತನ್ನ ಯೋಚನೆಗಳಿಗೆ ನಮ್ಮನ್ನು ಸೆಳೆದುಕೊಂಡರೆ, ಅದು ಕಲೆಯಾಗುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಉದಾಹರಣೆಗೆ, ಯುದ್ದ ನಡೆಯುತ್ತಿರುವ ಸನ್ನಿವೇಶದ ಒಂದು ಚಿತ್ರವನ್ನು ನೋಡಿ ಒಬ್ಬರಲ್ಲಿ ಬಯವುಂಟಾದರೆ, ಮತ್ತೊಬ್ಬರಲ್ಲಿ ರೋಶ ತುಂಬಿ ಬರಬಹುದು, ಮಗದೊಬ್ಬರಿಗೆ ಏನೂ ಅನ್ನಿಸದಿರಬಹುದು. ಇಲ್ಲಿ ಮಾಡುಗೆಯ ಗುಣಮಟ್ಟಕ್ಕಿಂತ, ಅದು ತೋರ‍್ಪಡಿಸುವ ಬಾವನೆಗೆ ಹೆಚ್ಚು ಆದ್ಯತೆ. ಮಗುವೊಂದು ತನ್ನ ತಂದೆ-ತಾಯಿಯಿಂದ ದೂರವಾಗುತ್ತಿರುವಂತೆ ಬಿಡಿಸಿದ ಚಿತ್ರ ಕಲೆಯಾಗುತ್ತದೆ. ಹಾಗಾಗಿಯೇ, ಇವತ್ತು ನೆರಳುತಿಟ್ಟವನ್ನೂ (photography) ಕಲೆಯೆಂದು ಪರಿಗಣಿಸುವುದು. ನಮ್ಮನ್ನು ಯೋಚನೆಗೆ ನೂಕುವ ಅತವಾ ಬಾವನೆ ಹುಟ್ಟಿಸುವ ಯಾವುದೇ ಮಾಡುಗೆ, ನಮ್ಮ ಮಟ್ಟಿಗೆ ಕಲೆಯಾಗುತ್ತದೆ.

ಕಲೆಯ ಈ ಬಗೆಯಲ್ಲಿ ಕಲೆಗಾರ ಮಾತ್ರವಲ್ಲದೇ, ಕಲಾಸಕ್ತರೂ ಮುಕ್ಯವಾಗುತ್ತಾರೆ. ಕಲಾಸಕ್ತರನ್ನು ತಲುಪದೇ ಈ ಕಲೆಗೆ ಸಾರ‍್ತಕತೆ ಇರುವುದಿಲ್ಲ. ಕಲೆಗಾರನ ಮನಸ್ಸಿನಲ್ಲಿ ಮೂಡಿದ ಬಾವನೆ, ಯೋಚನೆಗಳನ್ನು ಕಲೆಯ ಮೂಲಕ ಕಲಾಸಕ್ತರಿಗೆ ಮುಟ್ಟಿಸುವುದರಲ್ಲೇ ಅದರ ಸಾರ‍್ತಕತೆ ಅಡಗಿರುತ್ತದೆ. ನಟನೆ ಬರದ ನಾಯಕ, ಸನ್ನಿವೇಶವೊಂದರಲ್ಲಿ ಅಳುವುದನ್ನು ಕಂಡು, ನೋಡುಗನಿಗೆ ನಗು ಬಂದರೆ, ಆ ನಟ ಸೋತಂತೆ. ಅಣ್ಣಾವ್ರ ಬಾವುಕ ಸನ್ನಿವೇಶಗಳನ್ನು ನೋಡುವಾಗ, ನಾವೂ ಅವರ ಪಾತ್ರದ ಬಾವನೆಯನ್ನು ಅನುಬವಿಸುತ್ತಿರುತ್ತೇವೆ, ಹಾಗಾಗಿ ಅವರ ನಟನೆ ಸಾರ‍್ತಕ. ಇದೇ ಕಟ್ಟಳೆ ಸಾಹಿತ್ಯಕ್ಕೂ ಅನ್ವಯಿಸುತ್ತದೆ. ಈ ಬಗೆಯು ಬರೀ ಬಾವನೆಗಳಿಗೆ ಸೀಮಿತವಗಬೇಕಿಲ್ಲ. ನಮ್ಮ ಮನಸ್ಸಿನಲ್ಲಿ ಯಾವುದೇ ಬಾವನೆ ಹುಟ್ಟುಹಾಕದೇ, ಯೋಚನೆಗಳನ್ನು ಹುಟ್ಟುಹಾಕಿದರೂ ಅದನ್ನು ಕಲೆ ಎನ್ನಬಹುದು. ಎತ್ತುಗೆಗೆ, ಕೆಳಗಡೆ ತೋರಿಸಿರುವ ತಿಟ್ಟ. ತಮ್ಮನ್ನು ತಾವೇ ಬಂದಿಸಿಕೊಂಡಂತೆ, ಹೊರ ಜಗತ್ತನ್ನು ಕೇವಲ ಮಿಂದಾಣದ ಮೂಲಕವೇ ನೋಡುತ್ತಿರುವ ಇಂದಿನ ಪೀಳಿಗೆಯ ಗುಣವನ್ನು ಎತ್ತಿ ತೋರಿಸುತ್ತದೆ ಈ ತಿಟ್ಟ.

ಈ ಒಳನೋಟದ ಕಲೆಯ ಬಗ್ಗೆ ಮುಂದಿನ ದಿನಗಳಲ್ಲಿ ಇನ್ನಶ್ಟು ವಿವರಗಳನ್ನು ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ.

(ಮುಂದುವರೆಯುವುದು)

(ಚಿತ್ರ ಸೆಲೆ: trueactivist.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. 04/03/2016

    […] ಎಂದರೇನು?’ ಎಂದು ಹಿಂದಿನ ಬರಹದಲ್ಲಿ ನನ್ನ ಅನಿಸಿಕೆ ತಿಳಿಸಿದ್ದೆ. […]

  2. 04/05/2016

    […] ಮೊದಲ ಮತ್ತು ಹಿಂದಿನ ಬರಹದಲ್ಲಿ ಎರಡು […]

ಅನಿಸಿಕೆ ಬರೆಯಿರಿ: