ಪುಸಿಯನಿಸಿಕೆಗಳ ಗುಡಾಣವಲ್ತದು ಪಾಲ್ದೊರೆಯ ಪರಿಯಕ್ಕುಮೇ…

– ಅಮರ್.ಬಿ.ಕಾರಂತ್.

fb-addiction

ಬಯ್ಗ ಕೆಂಗದಿರಿಳಿದು ನೆಲವ ತಾಂಕುತಿರೆ
ಪಡುವ ತಂಬೆಲರೆರೆದು ಮರವ ಅಮಂಕುತಿರೆ
ಬಿಡದೆ ಆ ಪೊಳ್ತಿಗೆ ಮಡಿಲೆಣಿಯೊಳ್ ಪೊಕ್ಕುವವಳಿವಳ
ನಗೆಮುಗುಳುಮಿಂದೇಕೋ ಮಾಂದಿತ್ತು
ಪಳೆನೆನಿಕೆಗಳಿಂದೇಕೋ ಪೊಯ್ದಿತ್ತು
ಪೂವೆಸಳುಗಳನ್ ಕಳರ‍್ಚಿ ಗಾಡಿಗೆಟ್ಟಗಿಡವೋಲ್.

ಇದೆಂತಕ್ಕುಂ ಈ ಪರಿಯ ಬಿಳುಚುಮೋರೆಯುಂ
ಎಂತಕ್ಕುಮಾ ಕುಗ್ಗಿಸಿದ ನಲಿವುತನವುಂ
ಎಂದೆನಿತು ಬಗೆಗೆದಕಿದರೂ ಸಿಗದ ಪಡಿನುಡಿಂಗೆ
ಅವರಿವರ ಬದಿನೋಟಂಗಳ್ ನಣ್ಪಿಗರ ಕೊಗೆಮಾಟಂಗಳ್
ನೂರಿನ್ನೂರು ಮೆಚ್ಚುಗೆಗಳ್ ಪತ್ಪದಿನಯ್ದು ಒಕ್ಕಣಿಗಳ್
ಎಂಬ ಪೊಸ ಕೇಳ್ವಿಗಳನ್ ಪೆರ‍್ಚಿದುದು ಮೋರೆಯೋದುಗೆಯೊಳ್.

ಈಯೆಡೆಯೊಳ್ ಎನಿತು ನಾಳ್ಗಳಲೆಯಲೆಯುತಿರಲ್
ಕೂಡ್ದಾಣದೊಳ್ ಎನಿತು ನೆನ್ನೆನಾಳೆಗಳನ್ಕಳೆದಿರಲ್
ಏಳಿಗೆಯನೇಮ್ಕಂಡೆನಾನ್ ಇವು ಸೂಳ್ಗೊಲ್ಲುವ ನೆಗಳ್ತೆಗಳ್
ಪೊಸಕಲಿಕೆಗಳಿನಿತಿಲ್ಲ ತಿಳಿವಿಲ್ಲ ಅರಿವಿಲ್ಲ
ಪೊಸಪೊಳರ‍್ಪುಗಳಿನಿತಿಲ್ಲ ಪುರುಳಿಲ್ಲ ಪಡಪಿಲ್ಲ
ಪುಸಿಯನಿಸಿಕೆಗಳ ಗುಡಾಣವಲ್ತದು ಪಾಲ್ದೊರೆಯ ಪರಿಯಕ್ಕುಮೇ.

ಎಳವೆಯೊಳ್ ಕೂಡಿಬೆಳೆದವಳ್ ಮದುವೆಯಾದಳ್
ಪಣಂ ಪೆರವೆಣ್ಣನ್ಕೂಡಿದ ನಲ್ಲ ಬಲ್ಲಿದನಾದನ್
ಎಂಬುದನ್ನಡಿಗಡಿಗು ಎವೆಯಿಕ್ಕುತಿರಲ್ ಪೊರೆಗಟ್ಟಿದ ಕಣ್ಗಳ
ಮುಂಬಯಕೆಗಳುಮಂ ಪಿರಿಗನಸುಗಳುಮಂ ತರಿದು
ಕೆಡುಕುರುಬುಗಳುಮಂ ಕೀಳರಿಮೆಗಳುಮಂ ಪೊರೆದು
ಆವುದೊಳಿತುಕೆಡುಕೆಂಬುದನೇ ಬಿಸುಟು ಅರಿವುಂ ಪರಿಗುಂ.

ಅನ್ನೆಗಂ ಇನ್ನಾವಮಾಳ್ಕೆಯುಳಿದಿದೆಯೋ ಬಾಳ್ವೆಯೊಳ್
ತನ್ನಿರ‍್ಕೆಯನೇ ಪೊಯ್ದು ಪರದಾಡುತಿರಲ್ ಬಗೆಯು
ಅಳಸಿದಂಟುಗೆರೆಗಳನ್ ಕಾಣದ ಒಂಟಿಯಿರುವೆಗಳ್ ಪಾಯ್ದವೋಲ್
ಎಂಬುದನ್ನರಿತ ಚೆಲುವೆಣ್ಣಿನ ಮೆದುಳಿಂಗೆರಗಿದ
ಸಿಡಿಲಿಗೆಚ್ಚರಮಾಗೆ ಮೊಳಗಿರ‍್ಪ ತಿಳಿವಿಂಗಲುಗಿದ
ಬಗೆಯೊಳ್ ಅಂಜದೆ ಅಳ್ಕದೆ ಅಳವುನುಡಿ ತಾಳ್ದಳ್.

ಪೊಲ್ಲಮೆಲ್ಲವೂ ಪೆರರ ಸೊಮ್ಪುನುಡಿಗಳ್ ನಡೆಗಳ್
ಪೊಲ್ಲಮೆಲ್ಲವೂ ಅವರಿವರ ತನ್ನಿಗಳ್ ತಿಟ್ಟಂಗಳ್
ಪೊಲ್ಲಮಾಯ್ತಿಂದೆನ್ಬಗೆಯು ಪೆರರ ಬಾಳ್ ಪೋಲ್ಗೆಯೊಳ್
ಎಂದೊಡನೆಯೇ ಪೊಣೆಸೆಲೆಯಳವಡಿಕೆಗಳೊಳಪೋಗಿ
ಚುರುಕುಕಳೆ ಗುಂಡಿಯನಮಂಕಿದಳ್ ಉಸಿರುನಿಡುಸುಯ್ದಳ್
ಪೊಲ್ಲಮೆಲ್ಲವಂ ಪೊನ್ನಪುರುಳಂಮಾಡಲ್ ಅಣಿಯಾದಳ್ ತಿಳಿವೆಣ್ಣಾದಳ್.

( ಈ ಕವಿತೆಯ ಕಿರುಕೊಗೆತ ಹೀಗಿದೆ:

ಮೋರೆಯೋದುಗೆಯ (Facebook) ಗುಂಗಿನಲ್ಲೇ ಕಳೆದ ಹೆಣ್ಣೊಬ್ಬಳು ಅವರಿವರ ಬದಿನೋಟಗಳ (profile ) , ಕೊಗೆತಗಳ (description) , ಮೆಚ್ಚುಗೆಗಳ, ಒಕ್ಕಣಿಗಳ (comments) ನಾಟುಗೆಯಿಂದ, ಅವರ ಬದುಕಿನೊಂದಿಗೆ ಮಾಡುವ ಹೋಲಿಕೆಗಳಿಂದ ತನ್ತನವನ್ನೇ ಕಳೆದುಕೊಳ್ಳುತ್ತಾಳೆ ಮತ್ತು ಹಾಗಾಗುತ್ತಿದ್ದಂತೆಯೇ ಅದರ ಅರಿವನ್ನು ಪಡೆಯುತ್ತಾಳೆ. ಕೊನೆಗೆ, ಉಳಿದವರ ನುಡಿನಡೆಗಳೆಲ್ಲವೂ ಮೋರೆಯೋದುಗೆಯಲ್ಲಿ ತನಗೆ ಸಲ್ಲದೆಂದು (ಒಂದು ಹೆಜ್ಜೆ ಮುಂದೆ ಹೋಗಿ ಅವುಗಳನ್ನು “ಪೊಲ್ಲ” ಎಂದೂ ಕೊಗೆಯುವಳು) ಹೊಣೆಸೆಲೆ ಅಳವಡಿಕೆಗೆ ಹೋಗಿ (account settings) , ತನ್ನ ಬದಿನೋಟವನ್ನೇ ಚುರುಕುಕಳೆಯುತ್ತಾಳೆ (deactivate) ಮತ್ತು ಮರಳಿ ತನ್ನ ನಿಜಬದುಕಿಗೆ ಮರಳುತ್ತಾಳೆ  )

(ಚಿತ್ರ ಸೆಲೆ: economictimes.indiatimes.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: