‘ಪುರುಶ ಅಹಂಕಾರಕ್ಕೆ ಸವಾಲ್’

ಸುಮಂಗಲಾ ಮರಡಿ.

women

1881ರಲ್ಲಿ ಗುಜರಾತ್‍ನ ಸೂರತ್ ಬಳಿ ಇರುವ ಒಂದು ಪುಟ್ಟ ಗ್ರಾಮದಲ್ಲಿ ವಿಜಯಲಕ್ಶ್ಮಿ ಎಂಬ 24 ವರ‍್ಶದ ಬ್ರಾಹ್ಮಣ ವಿದವೆ ಅತ್ಯಾಚಾರಕ್ಕೊಳಗಾಗಿ ಗರ‍್ಬಿಣಿಯಾಗುತ್ತಾಳೆ. ಮಗುವನ್ನು ಹೆತ್ತು ನಂತರ ಕೊಂದು ಹಾಕಿದ ಕಾರಣಕ್ಕಾಗಿ ಆಕೆಯನ್ನು ಕೋರ‍್ಟಿಗೆ ಹಾಜರು ಪಡಿಸಲಾಯಿತು. ತಪ್ಪೊಪ್ಪಿಕೊಂಡ ಆಕೆಗೆ ನ್ಯಾಯಾದೀಶ ಮರಣದಂಡನೆ ವಿದಿಸಿದಾಗ ತೀವ್ರ ಪ್ರತಿಬಟನೆ ಉಂಟಾಯಿತು. ನಂತರ ಆಕೆಗೆ ಜೀವಾವದಿ ಶಿಕ್ಶೆ ವಿದಿಸಲಾಯಿತು. ಕೊನೆಗೆ ಮರುಕಗೊಂಡ ನ್ಯಾಯಾದೀಶರು ಆಕೆಯ ಶಿಕ್ಶೆಯ ಅವದಿಯನ್ನು ಐದು ವರ‍್ಶಗಳಿಗೆ ಇಳಿಸಿದರು. ಈ ಸುದ್ದಿ ಪತ್ರಿಕೆಗಳಲ್ಲಿ ಬಹಿರಂಗವಾಗಿ ಆಕೆಯ ಬಗ್ಗೆ ಅಪಪ್ರಚಾರವಾದಾಗ ತಾರಾಬಾಯಿ ಶಿಂದೆ ಎಂಬ ಮಹಿಳೆಯೊಬ್ಬರ ಸಹನೆ ಮೀರಿ, ಒಟ್ಟಾರೆ ಮಹಿಳೆಯರ ಮೇಲೆ ನಡೆಯುವ ಶೋಶಣೆ, ಅತ್ಯಾಚಾರಗಳ ಕುರಿತಾಗಿ ಬಲು ಆವೇಶದಿಂದ ‘ಸ್ತ್ರೀ-ಪುರುಶ ತುಲನಾ’ ಎಂಬ ಮರಾಟಿ ಪುಸ್ತಕದಲ್ಲಿ ತಮ್ಮ ಅಬಿಪ್ರಾಯಗಳನ್ನು ದಾಕಲಿಸಿದರು. ಇದು ಮೊಟ್ಟ ಮೊದಲ ಮಹತ್ವದ ಸ್ತ್ರೀವಾದಿ ಬಾವನೆಗಳ ಅಬಿವ್ಯಕ್ತಿ ಎಂದೇ ಪರಿಗಣಿಸಲ್ಪಟ್ಟಿದೆ. ಬಿ. ಸುಜ್ನಾನಮೂರ‍್ತಿಯವರು `ಪುರುಶ ಅಹಂಕಾರಕ್ಕೆ ಸವಾಲ್’ ಎಂಬ ತಲೆಬರಹದಡಿ ಈ ಪುಸ್ತಕ್ಲ ಬಾಶಾಂತರಿಸಿದ್ದಾರೆ. ಮದ್ಯಮ ವರ‍್ಗದ ಮಹಿಳೆ ಆರ‍್ತಿಕವಾಗಿ ಸ್ವಾವಲಂಬಿಯಾಗಿದ್ದರೂ ಪುರುಶನ ವಿರುದ್ದ ಅನೇಕ ತಕರಾರುಗಳಿದ್ದರೂ ದ್ವನಿ ಎತ್ತದ ಸ್ತಿತಿಯಲ್ಲಿದ್ದಾಳೆ. ಸಮಾಜ ವ್ಯವಸ್ತೆಯ ಬಾಗವಾಗಿ ಬದುಕುತ್ತಿರುವುದರಿಂದ ನಿರ‍್ಬಿಡೆಯಿಂದ ಮಾತನಾಡುವ ಸ್ತಿತಿಯಲ್ಲಿ ಅವಳಿಲ್ಲ. ನೂರಿಪ್ಪತ್ತು ವರ‍್ಶಗಳ ಹಿಂದೆಯೇ ಶಿಂದೆಯವರು ಸ್ಪಶ್ಟವಾದ ಮಹಿಳಾಪರ ಹಾಗೂ ಪುರುಶ ವಿರೋದಿ ದ್ವನಿಯೆತ್ತಿದ್ದು ಮೆಚ್ಚುವಂತದ್ದು. `ಮಹಿಳಾ ದಿನ’ದ ಸಂದರ‍್ಬದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಶೋಶಣೆ, ದೌರ‍್ಜನ್ಯಗಳ ಹಿನ್ನೆಲೆಯಲ್ಲಿ ಶಿಂದೆಯವರ ಅಬಿಪ್ರಾಯಗಳನ್ನು ಅವಲೋಕಿಸಿದಾಗ ಅವು ಎಶ್ಟು ಸೂಕ್ತ ಹಾಗೂ ಪ್ರಸ್ತುತ ಎಂಬ ಅಬಿಪ್ರಾಯ ಕಂಡಿತವಾಗಿ ಓದುಗನನ್ನು ಚಕಿತಗೊಳಿಸುತ್ತದೆ.

ಆದುನಿಕ ಮಹಿಳೆಯರ ಸ್ತಿತಿಗತಿಗಳನ್ನು ಒಟ್ಟಾರೆಯಾಗಿ ವ್ಯಾಕ್ಯಾನಿಸುವುದು ಕಶ್ಟಕರ ಹಾಗೂ ಅದಕ್ಕೆ ಯಾವುದೇ ನಿರ‍್ದಿಶ್ಟ ಸ್ವೀಕ್ರುತ ಮಾನದಂಡಗಳಿಲ್ಲ. ಮಹಿಳೆಯರ ಆರ‍್ತಿಕ, ಸಾಮಾಜಿಕ, ರಾಜಕೀಯ ಸ್ತಾನಮಾನಗಳ ಕುರಿತಾಗಿ ಹಲವು ಅಸಮಾದಾನಗಳು ಇಂದಿಗೂ ಇವೆ. ದಶಕಗಳಶ್ಟು ಹಿಂದೆ ಬಡವ ಅತವಾ ಶ್ರೀಮಂತ ಎಂಬ ಬೇದವಿಲ್ಲದೇ ಎಲ್ಲ ಮಹಿಳೆಯರು ಕೆಲವು ನಿರ‍್ಬಂದಗಳಡಿಯಲ್ಲಿ ಬದುಕಬೇಕಾಗುತ್ತಿತ್ತು. ಈಗ ತಮ್ಮನ್ನು ತಾವು `ಆದುನಿಕ’ ಎಂದು ಕರೆದುಕೊಳ್ಳುವ ಕೆಲವು ಸ್ತ್ರೀಯರು ಎಲ್ಲ ನಿರ‍್ಬಂದನೆ, ಸಂಪ್ರದಾಯ, ಹತೋಟಿಗಳನ್ನು ದಿಕ್ಕರಿಸಿ ಸ್ವತಂತ್ರವಾಗಿ ಬದುಕುವ ಎದೆಗಾರಿಕೆ ತೋರಿಸುತ್ತಿದ್ದರೂ ಮದ್ಯಮ ವರ‍್ಗದ ಬಹುತೇಕ ಮಹಿಳೆಯರು ಪುರುಶನ ದಬ್ಬಾಳಿಕೆ ಎದುರಿಸಲೂ ಆಗದೆ, ಹೊರಬರಲೂ ಆಗದೇ ತ್ರಿಶಂಕು ಸ್ತಿತಿಯಲ್ಲಿದ್ದಾರೆ. ಅಂತವರಿಗೆ ಹೊಂದಾಣಿಕೆ ಅನಿವಾರ‍್ಯ ಕರ‍್ಮವಾಗಿದೆ. ಕುಟುಂಬದ ಪ್ರತಿಶ್ಟೆಗಾಗಿಯೋ, ಮಕ್ಕಳ ಬವಿಶ್ಯದ ದ್ರುಶ್ಟಿಯಿಂದಲೋ ಅತವಾ ಪುರುಶನ ಸಾಂಗತ್ಯ ಇಲ್ಲದೆ ಒಂಟಿಯಾಗಿರುವ ಹೆಣ್ಣು ಸುರಕ್ಶಿತಳಲ್ಲ ಎಂದು ಮನಗಂಡೋ ಸ್ತ್ರೀ ಈ ಅನಿವಾರ‍್ಯತೆಗೆ ತನ್ನನ್ನು ತಾನು ಒಡ್ಡಿಕೊಂಡಿದ್ದಾಳೆ. ಶಿಂದೆಯವರು ಉದಾಹರಣೆಗೆ ತೆಗೆದುಕೊಂಡ ಒಂದು ಕತೆಯಂತೆ `ಗಂಡ ಒದ್ದರೆ ಹಾಗೆ ಮಾಡಬೇಡಿ ನಿಮ್ಮ ಪಾದ ನೋಯುತ್ತದೆ’ ಎಂದೋ, ಆತ ಮುಶ್ಟಿಯಿಂದಾಗಲೀ, ದೊಣ್ಣೆಯಿಂದಾಗಲೀ ಹೊಡೆದರೆ ಆತನ ಕೈಗೆ ಬೆಣ್ಣೆ ಲೇಪಿಸುವ ಮಹಿಳೆಯರು ಇಂದು ಕಂಡು ಬರದಿದ್ದರೂ, ತಾನು ತಿಂದ ಹೊಡೆತಗಳನ್ನು, ಒದೆತಗಳನ್ನು ಸಹಿಸಿಕೊಂಡು ಮತ್ತೆ ತಾಳಿಯನ್ನು ಹಣೆಗೊತ್ತಿಕೊಳ್ಳುವ ಸ್ತ್ರೀಯರು ಇನ್ನೂ ಕಾಣಿಸಿಗುತ್ತಾರೆ. ವಿವೇಕಾನಂದರು ಹೇಳುವಂತೆ `ಶಕ್ತಿ ಇರುವುದು ಸಾದು ಸ್ವಬಾವದಲ್ಲಿ, ಚಾರಿತ್ರ್ಯ ಶುದ್ದಿಯಲ್ಲಿ’ ಎಂಬ ಮಾತು ಬಹುತೇಕ ಪುರುಶರಿಗೆ ಇಂದಿಗೂ ಮನದಟ್ಟಾದಂತೆ ಕಾಣುವುದಿಲ್ಲ. ಶಕ್ತಿಯ ದುರುಪಯೋಗ ಅತವಾ ಅಪವ್ಯಯವೇ ಬಹುತೇಕ ಕಡೆ ಕಂಡುಬರುತ್ತಿದೆ.

ಹೆಣ್ಣು ಸ್ವಬಾವತಹ ಮಾತ್ರು ಹ್ರುದಯದವಳು. ಕರುಣೆ, ದಯೆ, ಕಾಳಜಿ, ಸೇವಾಬಾವ ಇವೆಲ್ಲ ಅವಳ ವ್ಯಕ್ತಿತ್ವದ ಬಾಗಗಳಾಗಿವೆ. ಇದನ್ನು ಅವಳ ದೌರ‍್ಬಲ್ಯ ಎಂದು ತಿಳಿದಿರುವ ಪುರುಶ `ಕೈಯಲ್ಲಿ ಮೊಲವಿರುವವನೇ ಬೇಟೆಗಾರ, ಉಳಿದಿದ್ದೆಲ್ಲ ಸುಳ್ಳು’ ಎಂಬಂತೆ ಅವಳಿಗೆ ಒತ್ತಡ ಹಾಕಿ, ಹಿಂಸಿಸಿ, ಹೆದರಿಸಿ ತಾನು `ಬಲಶಾಲಿ’ ಎಂದು ತೋರಿದರೆ ಅದು ಒಳ್ಳೆಯ ಲಕ್ಶಣವೇ ಎಂದು ನೇರವಾಗಿ ಪ್ರಶ್ನಿಸುತ್ತಾರೆ ಶಿಂದೆಯವರು. ಈಗ ಕಾಲ ಬದಲಾಗಿದ್ದರೂ ಹೆಣ್ಣು ಸ್ವತಂತ್ರಳು ಎಂಬ ಬಾವನೆ ಮೇಲ್ನೋಟಕ್ಕೆ ಬಂದಂತೆ ಕಾಣುತ್ತಿದ್ದರೂ ಇಡೀ ಹೆಣ್ಣು ಕುಲವೇ ಸ್ವತಂತ್ರವಾಗಿದೆ ಎಂದು ಹೇಳುವಂತೇನೂ ಇಲ್ಲ. ಮೇಲ್ನೋಟಕ್ಕೆ ಹೆಣ್ಣು ಸ್ವತಂತ್ರ, ಸ್ವಾವಲಂಬಿ ಎನಿಸಿದರೂ ಮೂಲದಲ್ಲಿ ಅವಳೊಬ್ಬ ಶೋಶಿತಳೇ. ದುಶ್ಚಟಗಳಿರುವ, ನಿರುದ್ಯೋಗಿ, ಬೇಜವಾಬ್ದಾರಿ, ಸತ್ಯವನ್ನೇ ಸುಳ್ಳೆಂದು, ಸುಳ್ಳನ್ನೇ ಸತ್ಯವೆಂದು ಬಿಂಬಿಸುವ, ಒರಟು ಸ್ವಬಾವದ, ದಬ್ಬಾಳಿಕೆ ಮನೋಬಾವದ, ನೈತಿಕ ಮಟ್ಟ ಕುಸಿದಿರುವ ಪುರುಶರ ಹತೋಟಿಯಲ್ಲಿ ಬಹುತೇಕ ಮಹಿಳೆಯರು ಜೀವನ ಸಾಗಿಸುತ್ತಿದ್ದಾರೆ. ತಾವು ಮಾಡುವ ದುಶ್ಚಟಗಳಿಗೂ, ಅನಾಚಾರಕ್ಕೂ, ತಪ್ಪಿಗೂ, ತಾವು ತೆಗೆದುಕೊಂಡ ತಪ್ಪು ನಿರ‍್ದಾರಗಳಿಗೂ ಪರೋಕ್ಶವಾಗಿ ಹೆಣ್ಣೇ ಕಾರಣವೆಂದು ಬಿಂಬಿಸುವ ಬೂಪರಿದ್ದಾರೆ.

ಹೆಚ್ಚಿನ ಉದ್ಯೋಗಸ್ತ ಮಹಿಳೆಯರು ಕಚೇರಿ ಕೆಲಸಗಳನ್ನು, ಮನೆ ಜವಾಬ್ದಾರಿಯನ್ನು ಸಮರ‍್ತವಾಗಿ ನಿಬಾಯಿಸುತ್ತಿದ್ದಾರೆ. ಗ್ರುಹಿಣಿಯರ ಪಾಡಂತೂ ಹೇಳತೀರದು. ಉದ್ಯೋಗಸ್ತ ಮಹಿಳೆಗೆ ಮನೆಗೆಲಸದಲ್ಲಿ ಸ್ವಲ್ಪ ರಿಯಾಯಿತಿ ಇದ್ದೀತೇನೋ ಆದರೆ ಗ್ರುಹಿಣಿ ಪಡುವ ಶ್ರಮಕ್ಕೆ ಯಾವುದೇ ಮನ್ನಣೆ ಇಲ್ಲದಾಗಿದೆ. ಅವಳದು ಅನುತ್ಪಾದನಾ ದುಡಿತವೆಂಬಂತೆ ಪರಿಗಣಿತವಾಗಿದೆ. ಕೊಂಚವೂ ವಿಶ್ರಾಂತಿ ಪಡೆಯದೇ ನಿರಂತರ ದುಡಿಯುವ ಮಹಿಳೆಗೆ ಗಂಡನ ಮನವೊಪ್ಪುವ ಹಾಗೆ ನಡೆದುಕೊಳ್ಳದಿದ್ದರೆ ಆತ ಚಿತ್ತಚಂಚಲನಾಗಿಬಿಡಬಹುದು ಎಂಬ ಅಳಕು ಸದಾ ಕಾಡುತ್ತದೆ. ಪುರುಶರು ಬೊಜ್ಜು ಬೆಳೆಸಿಕೊಂಡು ತಾವು ವಿಕಾರವಾಗಿದ್ದರೂ ತಮ್ಮ ಹೆಂಡತಿ ಮಾತ್ರ ನವತರುಣಿಯಂತೆ ತಮ್ಮ ಕಾಮದ ಅಮಲಲ್ಲಿ ಬಾಗಿಯಾಗಬೇಕೆಂದು ಆಶಿಸುತ್ತಾರೆ. ಹೆಣ್ಣು ನಿಸರ‍್ಗದತ್ತವಾದ ಎಶ್ಟೋ ಪಡಿಪಾಟಲುಪಟ್ಟರೂ ಅವಳು ಶೋಕೇಸಿನಲ್ಲಿಯ ಬೊಂಬೆಯಂತಿರಬೇಕು ಎಂದು ಬಯಸುವ ಗಂಡಸರಿದ್ದಾರೆ. ಎಶ್ಟೇ ನೋವು, ಸಂಕಟ, ಹತಾಶೆ, ನಿರಾಶೆ ಅನಾರೋಗ್ಯವಿದ್ದರೂ ಹೆಣ್ಣು ಅದನ್ನು ಹೊರಗೆ ತೋರಿಸುವಂತಿಲ್ಲ.

ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತಿದೆ. ಅದು ಎಲ್ಲ ಸಂಬಂದದಲ್ಲಿ ನಿಜವಲ್ಲದಿದ್ದರೂ ಅತ್ತೆ ಸೊಸೆಯರ ಹಾಗೂ ಗಂಡನ ಅನೈತಿಕ ಸಂಬಂದದಲ್ಲಿ ಬರುವ `ಅವಳು’ ಮತ್ತು ಆತನ `ಹೆಂಡತಿ’ ವಿಶಯವಾಗಿ ನೂರಕ್ಕೆ ನೂರರಶ್ಟು ಸತ್ಯ. ಅತ್ತೆ-ಸೊಸೆಯರ ಜಗಳ ಜಗದ್ವ್ಯಾಪಿಯಾದದ್ದು ಅದಕ್ಕೆ ಕಾಲ-ದೇಶದ, ದರ‍್ಮದ ಸೀಮಾರೇಕೆಯಿಲ್ಲ. ಆದರೆ `ಹೆಂಡತಿ’ ಮತ್ತು `ಅವಳು’ ಎಂಬ ವಿಶಯ ಬಂದಾಗ ಹತ್ತಾರು ವರ‍್ಶಗಳ ಕಾಲ ಗಂಡನ ಸುಕ-ದುಕ್ಕದಲ್ಲಿ ಬಾಗಿಯಾಗಿ, ಸಮರ‍್ತವಾಗಿ ಸಂಸಾರ ತೂಗಿಸಿ, ಗಂಡನಿಗೆ ಪ್ರೋತ್ಸಾಹ ನೀಡಿ ಅವನ ಜೊತೆ ಬಾಳುವೆ ಮಾಡಿದ ಹೆಂಡತಿ ನಗಣ್ಯಳಾಗಿ ಬಿಡುತ್ತಾಳೆ. ಪುರುಶ ತಾನು ಮಾಡಿದ ತಪ್ಪನ್ನು ಸಮರ‍್ತಿಸಿಕೊಳ್ಳುವುದರಲ್ಲಿ ನಿಸ್ಸೀಮ. ತನ್ನದಲ್ಲದ ಜಾತಿಯ ಸ್ತ್ರೀಯೊಡನೆ ಸಂಬಂದ ಬೆಳೆಸಿ ಅತವಾ ರಹಸ್ಯವಾಗಿ ಮದುವೆಯಾದ ನಂತರ ಪಾಲಕರ ಕುಶಿಗಾಗಿ ಅವರೊಪ್ಪಿದ ಹೆಣ್ಣನ್ನು ಮನಸ್ಸಿಲ್ಲದಿದ್ದರೂ ಮದುವೆಯಾಗಿ ಆ ಹುಡುಗಿಯ ಬಾಳನ್ನು ನರಕವಾಗಿಸುವ ಗಟನೆಗಳನ್ನು ಟಿ.ವಿ.ಯಲ್ಲಿ, ಪತ್ರಿಕೆಗಳಲ್ಲಿ ಹಾಗೂ ನಮ್ಮ ಸುತ್ತಮುತ್ತ ಕಾಣುತ್ತೇವೆ. ಒಬ್ಬ ಮಹಿಳೆ ವಿವಾಹೇತರ ಸಂಬಂದ ಇಟ್ಟುಕೊಂಡಿದ್ದಾಳೆಂದರೆ, ಅವಳ ಮನಸ್ಸಿನಲ್ಲಿ ಈ ಕೆಡುಬೀಜಗಳನ್ನು ಬಿತ್ತಿದವರು ಗಂಡಸರೇ ಎಂದು ಬಲವಾಗಿ ವಾದ ಮಾಡುವ ಶಿಂದೆಯವರು ಅಂತ ಹೆಣ್ಣಿನ ಪರವಾಗಿ ನಿಲ್ಲುತ್ತಾರೆ. ಗಂಡನ ಈ ರೀತಿಯ ವಿವಾಹೇತರ ಸಂಬಂದದಿಂದ ಹೆಂಡತಿಯ ರಕ್ತ ಕುದಿಯುತ್ತದೆ. ಹಂಚಿ ತಿನ್ನೋಕೆ ಪ್ರೀತಿಯೆಂಬುದು ಹಣ್ಣಲ್ಲ ಎನ್ನುವ ಶಿಂದೆಯವರು ಹೆಣ್ಣಿನ ಅಂತರಂಗ ಹೊಕ್ಕು ನೋಡುತ್ತಾರೆ. ಆದರೆ ಪುರುಶ, ತನ್ನ ಹೆಂಡತಿ ಯಾರನ್ನಾದರೂ ಸ್ವಲ್ಪ ಗಮನವಿಟ್ಟು ನೋಡಿದರೂ ಅವನು ಕೋಪದಿಂದ ಕುದಿಯುತ್ತಾನೆ. ಪರಿಣಾಮ ಆಕೆಗೆ ಹೊಡೆತ, ಬಡಿತ, ಕಿರುಕುಳ ಇತ್ಯಾದಿ. ಇವ್ಯಾವು ನಿಮಗೆ ಅನ್ವಯಿಸುವುದಿಲ್ಲವೇ ಎಂದು ನೇರವಾಗಿಯೇ ಅವರು ಪುರುಶನನ್ನು ಪ್ರಶ್ನಿಸುತ್ತಾರೆ.

ಹೆಣ್ಣು ವಿದವೆಯಾದರೆ, ಅವಿವಾಹಿತೆಯಾಗಿದ್ದರೆ, ಅಸಹಾಯಕಳಾಗಿದ್ದರೆ, ಮಗನಿಂದ ತಿರಸ್ಕಾರಕ್ಕೊಳಪಟ್ಟ ವ್ರುದ್ದೆಯಾದರೆ ಅವಳ ಕಶ್ಟ ಹೇಳತೀರದು. ಶಿಂದೆಯವರು ಮುಚ್ಚುಮರೆಯಿಲ್ಲದೇ ಅನೇಕ ಪ್ರಶ್ನೆಗಳನ್ನು ಪುರುಶರಿಗೆ ಕೇಳುತ್ತಾರೆ. ಅಂತ ಪುರುಶ ಅಹಂಕಾರಕ್ಕೆ ಅವರು ಹಾಕುವ ಸವಾಲುಗಳಲ್ಲಿ ಬಹುಮಟ್ಟಿನವು ಇಂದಿಗೂ ಪ್ರಸ್ತುತವಾಗಿವೆ. ಅಪರಾದ ಎಸಗುವಲ್ಲಿಯೂ ಪುರುಶನದೇ ಮೇಲುಗೈ ಎನ್ನುವ ಲೇಕಕಿ ಹೆಣ್ಣು ತಪ್ಪು ಮಾಡಿದರೂ ಸಾವಿರ ಗಂಡಸರಿಗೆ ಪ್ರತಿಯಾಗಿ ಒಂದು ನೂರು ಮಹಿಳೆಯರೂ ಕೂಡ ಇರುವುದಿಲ್ಲ ಎನ್ನುತ್ತಾರೆ. ತಾನು ಬದಲಾಗಬೇಕೆಂಬ ಮನಸ್ತಿತಿ ಇರುವ, ಹೆಣ್ಣಿನ ಬಗ್ಗೆ ಸ್ವಲ್ಪಾದರೂ ಕಾಳಜಿ, ಗೌರವ ಹೊಂದಿರುವ, ಅವಳನ್ನು ತನ್ನ ಸಮಾನಳೆಂದು ಪರಿಗಣಿಸುವ ಪ್ರತಿಯೊಬ್ಬ ವ್ಯಕ್ತಿಯೂ ಓದಲೇಬೇಕಾದ ಪುಸ್ತಕವಿದು. ತನ್ನ ಅಹಂನ್ನು ಪಕ್ಕಕ್ಕಿಟ್ಟು ಲೇಕಕಿ ಕೇಳುವ ಪ್ರತಿಯೊಂದು ಪ್ರಶ್ನೆಯನ್ನೂ ಆತ ಗಂಬೀರವಾಗಿ ಪರಿಗಣಿಸಿ ಮಾರ‍್ಪಾಡಾದರೆ ಇಂತ ದಿನಾಚರಣೆಗಳಿಗೆ ಒಂದಿಶ್ಟು ಅರ‍್ತ ಬಂದೀತು. ಇನ್ನೂ ಕೆಲವು ಗಂಡಸರು ಯಾವ ಪುಸ್ತಕದಿಂದಲೂ, ಗಟನೆಯಿಂದಲೂ, ಜೀವಂತ ಉದಾಹರಣೆಗಳಿಂದಲೂ, ಮಹಾಪುರುಶರ ಉಪನ್ಯಾಸಗಳಿಂದಲೂ, ಕೊನೆಗೆ ತಮ್ಮ ಸ್ವಂತ ಅನುಬವಗಳಿಂದಲೂ ಬದಲಾಗದ ಮನೋಬೂಮಿಕೆ ಹೊಂದಿದವರಾಗಿದ್ದಾರೆ.

ಈ ವಿಚಾರಗಳು ಸಾಮೂಹಿಕವಾಗಿ ಪುರುಶರೇ ದುಶ್ಟರು, ಮೋಸಗಾರರು, ನಯವಂಚಕರು, ಸುಳ್ಳುಗಾರರು ಎಂದು ಹೇಳುವುದಕ್ಕಲ್ಲ. ಹಾಗೆಯೇ ಪ್ರತಿಯೊಬ್ಬ ಸ್ತ್ರೀಯೂ ಸಾದ್ವಿ, ಪ್ರಾಮಾಣಿಕಳು ಎಂದು ಸಾಬೀತುಪಡಿಸುವುದಕ್ಕಾಗಿಯೂ ಅಲ್ಲ. ಒಟ್ಟಾರೆ ಜೀವನಚಕ್ರ ಸುಗಮವಾಗಿ ಸಾಗಬೇಕಾದರೆ ಸ್ತ್ರೀ ಪುರುಶರಿಬ್ಬರೂ ತಮ್ಮ ಅಹಂ ಬಿಟ್ಟು, ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಪ್ರಸ್ತುತ ಮಹಿಳೆ ಸಬಲಳಾಗುತ್ತಿದ್ದಾಳೆ ಎಂಬುದು ದಿಟವಾದರೂ ಅದರ ಪಲಶ್ರುತಿ ಪಡೆಯುವವರ ಸಂಕ್ಯೆ ತೀರಾ ವಿರಳ. ನಮ್ಮ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ತಮ್ಮ ಸ್ವಾತಂತ್ರ್ಯದ ಹಾಗೂ ಹಕ್ಕುಗಳ ಅರಿವು ಉಂಟಾಗಬೇಕು. ಬಾಲ್ಯವಿವಾಹದಂತ ಕೂಪಕ್ಕೆ ಅವಳನ್ನು ತಳ್ಳುವುದು ನಿಲ್ಲಬೇಕು. ಹಗಲಿಡೀ ಕತ್ತೆ ಹಾಗೆ ದುಡಿದು ರಾತ್ರಿ ವಿಶ್ರಾಂತಿ ಪಡೆಯಬೇಕೆನ್ನುವಾಗ ದುಡಿದಿದ್ದನ್ನೆಲ್ಲ ಮದ್ಯಕ್ಕೆ ಸುರಿದು ಕಂಟಪೂರ‍್ತಿ ಕುಡಿದು ಬಂದು ಸಣ್ಣ ಪುಟ್ಟ ವಿಶಯಗಳಿಗೆ ಕ್ಯಾತೆ ತೆಗೆದು ಹೆಂಡತಿಯನ್ನು ದನ ಬಡಿದಂತೆ ಬಡಿದು, ಮನೆಯನ್ನು ನರಕಸದ್ರುಶ್ಯವಾಗಿಸುವ ಪುರುಶರು ಜಾಗ್ರುತರಾಗಬೇಕು. ಅಂದಾಗ ಮಾತ್ರ ಕೌಟುಂಬಿಕ ಕಲಹಗಳಿಂದ ಬೇಸತ್ತ ಮಹಿಳೆ ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡು ಅಮೂಲ್ಯ ಜೀವಹಾನಿಯಾಗುವುದನ್ನು ತಪ್ಪಿಸಬಹುದು. ಅನೇಕ ಕ್ಶೇತ್ರದಲ್ಲಿ ಶೇಕಡಾ ಮೂವತ್ಮೂರರಶ್ಟು ಮೀಸಲಾತಿ ಪಡೆದಾಗಲೂ ಮಹಿಳೆ ಸುಕದಿಂದ ಇಲ್ಲ. ಅವಳಿನ್ನೂ ತುಳಿಯಲ್ಪಡುತ್ತಿದ್ದಾಳೆ ಹಾಗೂ ಅವಳ ತೊಂದರೆ, ಸಂಕಟಗಳ ಬಗ್ಗೆ ಎಶ್ಟು ಚರ‍್ಚಿಸಿದರೂ ಇನ್ನೂ ಹೇಳಲಾಗದ ದುಕ್ಕ ಸಾಕಶ್ಟಿದೆ. ಅವಳ ಸಾಮಾಜಿಕ ಸ್ತಿತಿಗತಿ ಸುದಾರಿಸಿದಾಗ ಮಾತ್ರ ಪ್ರತಿವರ‍್ಶ ಬರುವ `ಮಹಿಳಾದಿನ’ ಅರ‍್ತಪೂರ‍್ಣವಾಗುತ್ತದೆ. ಇಲ್ಲದಿದ್ದರೆ ಅದೊಂದು ಕಾಟಾಚಾರದ ಆಚರಣೆಯಾಗುತ್ತದೆ ಎಂದು ಹೇಳುವ ಸಂದರ‍್ಬದಲ್ಲಿ ತಾರಾಬಾಯಿ ಶಿಂದೆಯವರಂತೆ ಶೋಶಿತ ಮಹಿಳೆಯರ ಪರವಾಗಿ ದೈರ‍್ಯವಾಗಿ ಮಾತನಾಡುವವರ ಸಂತತಿ ಹೆಚ್ಚಾಗಬೇಕಾಗಿದೆ. ನಮ್ಮ ವ್ಯವಸ್ತೆ ಹೇಗೆ ಮಹಿಳಾ ವಿರೋದಿಯಾಗಿದೆ ಎಂಬುದನ್ನೂ ಬಿಚ್ಚಿಡುವ ಗಟ್ಟಿದನಿಗಳು ಮೊಳಗಬೇಕಾಗಿದೆ.

( ಚಿತ್ರ ಸೆಲೆ:  abbyhopeskinnerart.tumblr.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: