ಕಾರು ಸಾಗಣಿಯ ಬಾಳಿಕೆ ಹೆಚ್ಚಿಸುವ ಬಗೆ

ಜಯತೀರ‍್ತ ನಾಡಗವ್ಡ.

ಬಂಡಿಗಳೆಂದರೆ ಯಾರಿಗೆ ಇಶ್ಟವಿಲ್ಲ, ಪುಟ್ಟ ಮಕ್ಕಳಿಂದ ಹಿಡಿದು ಇಳಿವಯಸ್ಸಿನವರು ತಮ್ಮ ಬಳಿಯೂ ಬಂಡಿಯೊಂದನ್ನು ಹೊಂದ ಬಯಸುತ್ತಾರೆ. ಬೆಳೆಯುತ್ತಿರುವ ನಮ್ಮ ನಾಡಿನಲ್ಲಿ ಬಂಡಿ ಕೊಳ್ಳುಗರಿಗೂ ಬರವಿಲ್ಲ. ಅದಕ್ಕೆ ಪ್ರತಿ ತಿಂಗಳು ನಾಲ್ಕಾರು ಹೊಸ ಬಂಡಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ.

ಬಂಡಿ ಓಡಿಸುವಿಕೆಯ ವಿಶಯಕ್ಕೆ ಬಂದರೆ ಬಿಡಿಬಾಗ, ಚಳಕ ಮತ್ತು ಅರಿಮೆ ಎಲ್ಲವೂ ಒಂದೇ ತೆರನಾಗಿದ್ದರೂ ಬಂಡಿ ಓಡಿಸುವ ಒಬ್ಬೊಬ್ಬರದು ಒಂದೊಂದು ಬಗೆ. ಅಗ್ಗದ ಬೆಲೆಯ ಇಂದಿನ ಹೆಚ್ಚಿನ ಪಾಲು ಬಂಡಿಗಳಲ್ಲಿ ಓಡಿಸುಗನಿಡಿತದ ಸಾಗಣಿ (Manual Transmission) ಕಂಡುಬರುತ್ತವೆ. ಓಡಿಸುಗನಿಡಿತದ ಸಾಗಣಿ ಬಳಸುವ ಓಡಿಸುಗರು ಎಶ್ಟೋ ಸಲ ಕಾರು ಸರಿಯಾಗಿ ಓಡಿಸದೇ ಇಲ್ಲವೇ ಅರೆ ತಿಳುವಳಿಕೆಯಿಂದ ತಮ್ಮ ಬಂಡಿಯ ಬಾಳಿಕೆ ಕಡಿಮೆಯಾಗುವಂತೆ ಮಾಡಿರುತ್ತಾರೆ ಇಲ್ಲವೇ ನೆರವುತಾಣಗಳಿಗೆ ಬೇಟಿಕೊಟ್ಟು ಬಿಡಿಬಾಗ ಬದಲಾಯಿಸಿ ಹೆಚ್ಚು ಹಣ ವೆಚ್ಚ ಮಾಡುತ್ತಾರೆ. ಇದನ್ನು ಕಡಿತಗೊಳಿಸಲು ಓಡಿಸುಗನಿಡಿತದ ಸಾಗಣಿ ಹೊಂದಿರುವ ಬಂಡಿಯೊಡಿಸುವ ಒಳ್ಳೆಯ ರೂಡಿಗಳನ್ನು ಮಯ್ಗೂಡಿಸಿಕೊಂಡರೆ ಬಂಡಿಯ ಬಾಳಿಕೆಯೂ ಹೆಚ್ಚುತ್ತದೆ ಹಣದ ದುಂದುವೆಚ್ಚವೂ ಆಗದು. ಅಂತ ಕೆಲವು ಒಳ್ಳೆಯ ರೂಡಿಗಳನ್ನು ಈ ಕೆಳಗೆ ನೀಡಲಾಗಿದೆ. ಇವನ್ನು ಅಳವಡಿಸಿಕೊಂಡರೆ ಎಲ್ಲರೂ ಒಳ್ಳೆಯ ಓಡಿಸುಗನೆಂದೆನಿಸಿಕೊಳ್ಳಬಹುದು.

1. ಯಾವಾಗಲೂ ಹಲ್ಲುಗಾಲಿಯ ಗುಣಿಯ (Gear lever) ಮೇಲೆ ಕಯ್ ಇರಿಸುವುದು ಬೇಡ:
ಹೆಚ್ಚಾಗಿ ಓಡಿಸುಗನಿಡಿತದ ಸಾಗಣಿ ಬಳಸುವ ನಮ್ಮಲ್ಲಿ ಹಲವರಿಗೆ ಹಲ್ಲುಗಾಲಿ ಗುಣಿಯ ಮೇಲೆ ಕಯ್ ಇರಿಸಿ ಬಂಡಿ ಓಡಿಸುವ ರೂಡಿ. ಇಂದಿನ ಒಯ್ಯಾಟದ ದಟ್ಟಣೆಯಿಂದ ಪದೇ ಪದೇ ಹಲ್ಲುಗಾಲಿಯ ಬದಲಾಯಿಸಿ ವೇಗ ಹೆಚ್ಚು ಕಡಿಮೆ ಮಾಡಬೇಕಿರುವುದರಿಂದ ಕೆಲವರಿಗೆ ಈ ಗುಣಿಯ ಮೇಲೆ ಯಾವಾಗಲೂ ಕಯ್ ಇಟ್ಟುಕೊಂಡೇ ಸಾಗುವುದು ರೂಡಿಯಾಗಿರುತ್ತದೆ. ಆದರೆ ಇದರಿಂದ ಒಳ್ಳೆಯದಕ್ಕಿಂತ ಕೆಡುಕೇ ಹೆಚ್ಚು. ಯಾಕೆಂದರೆ ಮೊದಲನೇಯದಾಗಿ ನೀವು ಎಡಗಯ್ಯನ್ನು ಹಲ್ಲುಗಾಲಿಯ ಗುಣಿಯ ಮೇಲಿಟ್ಟು ಬಂಡಿಯ ತಿಗುರಿಯ (Steering) ಮೇಲೆ ಬಲಗಯ್ ಒಂದನ್ನೇ ಬಳಸುತ್ತಿರುತ್ತಿರಿ. ಆಗ ತಿಗುರಿಯ ಮೇಲಿನ ನಿಮ್ಮ ಹಿಡಿತ ಕಡಿಮೆಯಾಗುತ್ತದೆ. ಎರಡನೇಯದಾಗಿ ಯಾವಾಗಲೂ ಹಲ್ಲುಗಾಲಿಯ ಗುಣಿಯ ಮೇಲೆ ಕಯ್ ಇಟ್ಟುಕೊಂಡಿರುವುದರಿಂದ ಇದರ ಬಿಡಿಬಾಗಗಳು ಬೇಗನೇ ಸವೆದು ತಾಳಿಕೆ ಕಡಿಮೆಯಾಗುತ್ತದೆ. ಆದ್ದರಿಂದ ಹಲ್ಲುಗಾಲಿಯ ಗುಣಿಯನ್ನು ಅಗತ್ಯವಿದ್ದಾಗವಶ್ಟೇ ಬಳಸಿ.

lever11

2. ಒಯ್ಯಾಟದ ದೀಪಗಳ ಮುಂದೆ ಕಾರನ್ನು ಗೇಯರ್‌ನಲ್ಲೇ (ಹಲ್ಲುಗಾಲಿಯಲ್ಲೇ) ತಡೆಯದಿರಿ:
ನಮ್ಮಲ್ಲಿ ಹಲವರು ಟ್ರಾಪಿಕ್ ದೀಪಗಳಲ್ಲಿ ಬಂಡಿಯನ್ನು ಗೇಯರ್‌ಗಳಲ್ಲೇ ಬಿಟ್ಟು ಬೇರ‍್ಪಡಕ (Clutch) ಮತ್ತು ತಡೆತವನ್ನು (Brake) ತುಳಿದು ಕಾರು ಮುಂದೆ ಸಾಗದಂತೆ ನಿಲ್ಲಿಸಿರುವುದನ್ನು ನೋಡಿರಬಹುದು. ಟ್ರಾಪಿಕ್ ದೀಪಗಳ ಮುಂದೆ ಹೆಚ್ಚು ಹೊತ್ತು ನಿಲ್ಲಬೇಕಾಗಿ ಬಂದರೆ ಬಂಡಿಯನ್ನು ಪೂರ‍್ಣವಾಗಿ ಆರಿಸಿ ನ್ಯೂಟ್ರಲ್‌ಗೆ ತರಬೇಕು, ಕಯ್ ತಡೆತ (Hand Brake) ಬಳಸಿ ಬಂಡಿಯನ್ನು ಮುನ್ನುಗ್ಗುದಂತೆ ತಡೆದು ನಿಲ್ಲಿಸಬಹುದು. ಇಲ್ಲದೇ ಹೋದಲ್ಲಿ ಬೇರ‍್ಪಡಕದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದ ಬೇರ‍್ಪಡಕವೂ ಹೆಚ್ಚು ಸವೆತಕ್ಕೆ ಒಳಗಾಗುತ್ತದೆ. ಅಲ್ಲದೇ ಮೇಲಿಂದ ಮೇಲೆ ನೀವು ನೆರವುತಾಣಗಳಿಗೆ (Service Center) ತೆರಳಿ ಬೇರ‍್ಪಡಕ ಸರಿಯಾಗಿರುವಂತೆ ನೋಡಿಕೊಳ್ಳಲು ಹೆಚ್ಚು ಹಣ ಪೋಲು ಮಾಡಬೇಕು.

3. ಏರಿಕೆಯಲ್ಲಿ ಸಾಗುವಾಗ ಕಯ್ ತಡೆತ ಬಳಸಿ ಬಂಡಿ ಜಾರದಂತೆ ತಡೆಯಿರಿ:
ಬಂಡಿಯನ್ನು ಹೊತ್ತು ನಾವು ಏರು ಇಳಿಜಾರು ತಾಣಗಳಲ್ಲಿ ಸಾಗುವುದು ಸಾಮಾನ್ಯ ಇದಕ್ಕೆ ಗುಡ್ಡಗಾಡು ಜಾಗಗಳೇ ಆಗಿರಬೇಕೆಂದೆನು ಇಲ್ಲ. ಏರಿಕೆಯಲ್ಲಿ ಮುಂದೆ ಸಾಗಲು ಬಂಡಿಗೆ ಹೆಚ್ಚಿನ ಬಲ ಬೇಕಾಗುತ್ತದೆ ಆ ಹಂತದಲ್ಲಿ ಬಂಡಿಗೆ ಬೇಕಾದ ಬಲ ಸಿಗದೇ ಇದ್ದಲ್ಲಿ ಅದು ಹಿಂದೆ ಜಾರುವುದು ಸಹಜ ಆಗ ಸಾಕಶ್ಟು ಓಡಿಸುಗರು ದಿಡೀರ್‌ನೆ ಬೇರ‍್ಪಡಕವನ್ನು ತುಳಿದು ಹಿಂದೆ ಜಾರದಂತೆ ತಡೆಯುತ್ತಾರೆ. ಇಂತ ಸಂದರ‍್ಬ ಬಂದೊಗಿದಾಗ ಅಂದರೆ ಏರಿಕೆಗಳಲ್ಲಿ ಬಂಡಿಯನ್ನು ತಡೆಯಬೇಕಾಗಿ ಬಂದರೆ ಬೇರ‍್ಪಡಕದ ಬದಲು ಕಯ್ ತಡೆತವನ್ನು ಬಳಸುವುದು ಒಳ್ಳೆಯದು. ಬಂಡಿಯನ್ನು ಮುಂದೆ ಸಾಗಿಸಬೇಕೆಂದಾಗ ಮೆಲ್ಲಗೆ ಉರುಬುಹೆಚ್ಚುಕವನ್ನು (Accelerator) ತುಳಿಯುತ್ತ, ಬೇರ‍್ಪಡಕದ ತುಳಿಗೆಯನ್ನು ಬಿಡುತ್ತ ಕಯ್ ತಡೆತ ಹಿಂತೆಗೆಯಬಹುದು. ಈ ಮೊದಲೇ ಹೇಳಿದಂತೆ ಬೇರ‍್ಪಡಕದ ತುಳಿಗೆ ಹೆಚ್ಚು ಸವೆತಕ್ಕೆ ಒಳಗಾಗುತ್ತದೆ.

4. ಬಂಡಿಯ ಓಡಿಸುವಾಗ ಸುಮ್ಮನೇ ಬೇರ‍್ಪಡಕದ ತುಳಿಗೆ ಮೇಲೆ ಕಾಲಿಡುವುದು:
ಇದೊಂದು ಕೆಟ್ಟ ಅಬ್ಯಾಸವೆನ್ನಬಹುದು. ಕೆಲವು ಓಡಿಸುಗರಿಗೆ ಬಂಡಿಯು ಜುಮ್ಮನೇ ಸಾಗುವಾಗಲು ಬೇರ‍್ಪಡಕದ ತುಳಿಗೆ (Clutch Pedal) ಮೇಲೆ ಎಡಗಾಲನ್ನು ಕಾಲಿಟ್ಟುಕೊಂಡೇ ಹೋಗುವ ಅಬ್ಯಾಸವಾಗಿರುತ್ತದೆ. ಇದರ ಅಗತ್ಯವೇ ಇಲ್ಲ. ಇಂತ ಅಬ್ಯಾಸದ ಓಡಿಸುಗರಿಗೆ ಕೆಲವು ಬಂಡಿಗಳಲ್ಲಿ ಕಾಲಿಡಲು ಬೇರೆಯದೇ ಒಂದು ತುಳಿಗೆ ನೀಡಲಾಗಿರುತ್ತದೆ ಇದನ್ನು ಡೆಡ್ ಪೆಡಲ್ (Dead Pedal) ಎನ್ನುವರು. ಬೇರ‍್ಪಡಕದ ತುಳಿಗೆಯ ಬದಲು ಡೆಡ್ ಪೆಡಲ್ ಮೇಲೆ ಕಾಲಿಟ್ಟು ಜುಮ್ಮನೆ ಓಡಾಡಲು ಇದು ನೆರವಾಗುತ್ತದೆ.

dead pedal 2

5. ಹೆಚ್ಚು ಕಸುವು ಪಡೆಯಲು ಹೆಚ್ಚಿನ ವೇಗದ ಹಲ್ಲುಗಾಲಿಗೆ ಹೋಗುವುದು ಬೇಕಿಲ್ಲ:
ಎತ್ತುಗೆಗೆ 5-ವೇಗದ ಓಡಿಸುಗನಿಡಿತದ ಸಾಗಣಿ ಅಳವಡಿಸಲಾಗಿರುವ ಕಾರೊಂದು ಇದೆ ಎಂದುಕೊಳ್ಳಿ. ಸರಿಯಾದ ತಿಳುವಳಿಕೆಯಿಲ್ಲದ ಓಡಿಸುಗನೊಬ್ಬ ಹೆಚ್ಚು ಕಸುವು ಮತ್ತು ತಿರುಗುಬಲ ಪಡೆಯಲು ಬಂಡಿಯ ಸಾಗಣಿಯನ್ನು ಕೊನೆಯ ಅಂದರೆ 5-ನೇ ವೇಗದ ಹಲ್ಲುಗಾಲಿಗೆ ಬದಲಾಯಿಸಿ ಉರುಬುಹೆಚ್ಚುಕವನ್ನು ಪೂರ‍್ತಿಯಾಗಿ ತುಳಿದು ಕಾರನ್ನು ಓಡಿಸುತ್ತಿರುತ್ತಾನೆ. ಆದರೆ ಇದು ತಪ್ಪು. ಬಿಣಿಗೆಯಿಂದ ಹೆಚ್ಚು ಕಸುವು ಮತ್ತು ತಿರುಗುಬಲ ಪಡೆಯಲು ಓಡಿಸುಗ ಕೊನೆಯ ವೇಗದ ಹಲ್ಲುಗಾಲಿಗೆ ಬದಲಾಯಿಸಿಕೊಳ್ಳಬೇಕೆಂದೇನು ಇಲ್ಲ. ಸಾಗಣಿಯನ್ನು 4ನೇ ಇಲ್ಲವೇ 3ನೇ ವೇಗದ ಹಲ್ಲುಗಾಲಿಗೆ ಬದಲಾಯಿಸಿಕೊಂಡಾಗ ನಿಮಗೆ ಹೆಚ್ಚಿನ ಕಸುವು ಮತ್ತು ತಿರುಗುಬಲ ಸಿಗುವ ಸಾದ್ಯತೆ ಇರುತ್ತದೆ. ಇದು ಬಹುತೇಕ ಬಿಣಿಗೆಗಳ ಗುಣವಾಗಿರುವುದರಿಂದ ಕೊನೆಯ ಹಲ್ಲುಗಾಲಿಗೆ ಸಾಗಣಿ ಬದಲಾಯಿಸಿಕೊಂಡರೆ ಹೆಚ್ಚು ಕಸುವು ಪಡೆಯಲಾಗದು.

(ಮಾಹಿತಿ ಮತ್ತು ತಿಟ್ಟ ಸೆಲೆ: cartorq.com, oppositelock.kinja.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: