ಪತ್ತೇದಾರಿ ಕತೆ: ಕನಸಿನಲ್ಲಿ ಕೊಲೆ

– ಬಸವರಾಜ್ ಕಂಟಿ.

poison

( ಕತೆಯಲ್ಲಿನ ಪಾತ್ರಗಳು ನೇರವಾಗಿ ನೋಡುಗರ/ಓದುಗರ ಜೊತೆ ಮಾತನಾಡುವದು “ಕತೆಯಾಚೆ (Metafiction)” ಎಂಬುದರ ಬಗ್ಗೆ  ‘4ನೇ ಗೋಡೆಯನ್ನು ಒಡೆಯುವುದು’ ಎಂದರೇನು? ಎಂಬ ಬರಹದಲ್ಲಿ ತಿಳಿಸಲಾಗಿತ್ತು. ಈ ಬಗೆಯನ್ನೇ ಬಳಸಿ ‘ಕನಸಿನಲ್ಲಿ ಕೊಲೆ” ಎಂಬ ಪತ್ತೇದಾರಿ ಕತೆಯನ್ನು ನಿಮ್ಮ ಮುಂದೆ ಇಡುತ್ತಿದ್ದೀನಿ. ಓದಿ ನಿಮ್ಮ ಅನಿಸಿಕೆ ತಿಳಿಸಿ )

*****************************************

ಕುಡಿದು ಅಮಲೇರಿ ಮಲಗಿದ ಗಂಡನನ್ನು ತಿರಸ್ಕಾರದಿಂದ ನೋಡಿದಳು ಮಹಾರಾಣಿ ಗಾಯತ್ರಿ. ಅವನ ಗೊರಕೆಯನ್ನು ಸಹಿಸಲಾಗದೆ, ಆ ಕತ್ತಲಿನ ಏಕಾಂತದಲ್ಲಿ ಏನು ಮಾಡಬೇಕೆಂದು ತೋಚದೆ, ವಚನಗಳ ತಾಳೆಗರೆಗಳನ್ನು ಓದತೊಡಗಿದಳು. ಸ್ವಲ್ಪ ಹೊತ್ತಿನಲ್ಲಿ ಹೊರಗಡೆ ಸದ್ದಾಯಿತು. ಮುಚ್ಚಿದ್ದ ಬಾಗಿಲ ಬಳಿ ಹೋಗಿ, “ಏನದು ಗದ್ದಲ?” ಎಂದು ದಾಸಿಯನ್ನು ಕೇಳಿದಳು.

ಹೊರಗಿನಿಂದ ದಾಸಿಯ ದನಿ, “ಸೇನೆ ನಾಯಕರು ಬಂದಿದ್ದಾರೆ. ರಾಜರನ್ನು ನೋಡಬೇಕಂತೆ”

“ಓಹ್! ಮಹಾವೀರ ಬಂದಿರುವುದು. ಇಶ್ಟೊತ್ತಿನಲ್ಲಿ ಯಾಕಿರಬಹುದು?” ಎಂದು ಮನಸ್ಸಿನಲ್ಲಿ ಯೋಚಿಸುತ್ತಾ, ಗಂಡನನ್ನು ಎಬ್ಬಿಸಲು ಮುಂದಾದಳು. ಎಶ್ಟು ಅಲುಗಾಡಿಸಿದರೂ ಏಳದಿದ್ದಾಗ, ತುಸು ಹಿಂಜರಿಕೆಯಿಂದಲೇ ಕೆನ್ನೆಗೆ ಪೆಟ್ಟು ಕೊಟ್ಟಳು. ಆಗಲೂ ಕಣ್ಣು ತೆರೆಯಲಿಲ್ಲ. ಕಯ್ ತುಸು ಬೀಸಿ ಪಟ್ ಎಂದು ಕೆನ್ನೆಗೆ ಬಾರಿಸಿದಳು. ಕೆನ್ನೆ ಉಜ್ಜುತ್ತಾ ಕಣ್ಣು ತೆರೆದು, “ಏನು?” ಎನ್ನುವಂತೆ ಹೆಂಡತಿಯೆಡೆಗೆ ನೋಡಿದ ನರಸಿಂಹ ನಾಯಕ.

“ಸೇನೆ ನಾಯಕರು ಬಂದಿದ್ದಾರೆ. ಏನು ಅಂತಾ ಕೇಳಿ” ಎಂದಳು.

ಇಶ್ಟೊತ್ತಿನಲ್ಲಿ ಇಲ್ಲಿಯವರೆಗೂ ಬರುವಶ್ಟು ಮುಂದುವರಿದನೇ ಎಂದು ಬೆರಗಾದನು ನರಸಿಂಹ. ನಿಶೆ ತುಸು ಇಳಿದು ಅವನ ನಿತ್ಯದ ಯೋಚನೆಗಳು ತಲೆಯಲ್ಲಿ ತುಂಬಿಕೊಂಡವು. ರಾಜ್ಯದ ಜೊತೆಗೆ ತನ್ನ ಹೆಂಡತಿಯನ್ನೂ ಕಬಳಿಸಬೇಕೆಂದು ಸೇನೆನಾಯಕ ಹೊಂಚು ಹಾಕುತ್ತಿದ್ದಾನೆ ಎಂದು ನರಸಿಂಹನಿಗೆ ತುಂಬಾ ದಿನಗಳಿಂದ ಅನುಮಾನವಿತ್ತು. ದಿನಗಳೆದಂತೆ ಆ ಅನುಮಾನ ಬಲಿತು, ಚಿಂತೆಗೆ ತಿರುಗಿ, ರಾಜ್ಯದ ವ್ಯವಹಾರಗಳಲ್ಲಿ ಉತ್ಸಾಹವನ್ನೇ ಕಳೆದುಕೊಂಡಿದ್ದ. ಆದರೆ ಅವನ ಅನುಮಾನಕ್ಕೆ ಯಾವುದೇ ಪುರಾವೆ ಇರಲಿಲ್ಲ. ಈಗ ಇವನು ಈ ರಾತ್ರಿಯಲ್ಲಿ ಬಂದಿರುವ ವಿಶಯವಾದರೂ ಏನಿರಬಹುದು ಎಂದು ಯೋಚಿಸುತ್ತಾ ಎದ್ದು ಕುಳಿತ. ಹೆಂಡತಿ ಮತ್ತೊಮ್ಮೆ ಅವನ ಬುಜಕ್ಕೆ ತಿವಿದು ಬಾಗಿಲೆಡೆಗೆ ಸನ್ನೆ ಮಾಡಿದಳು. ಅವನು ಎದ್ದು ಬಾಗಿಲ ಅಗುಳಿ ತೆಗೆದು, ಹೊರಹೋಗಿ, ಬಾಗಿಲನ್ನು ಎಳೆದುಕೊಂಡನು. ಹೆಳೆಯದಾದ ಬಾಗಿಲು ಮುಚ್ಚಿಕೊಳ್ಳದೆ, ತುಸು ತೆರೆದುಕೊಂಡು ನಿಂತಿತು. ಸೇನೆ ನಾಯಕ ಮಹಾವೀರ ಅವನ ಎದುರಿಗೆ ಬಂದು ನಿಂತನು. ಮಯ್ಕಟ್ಟಿನಲ್ಲಿ ತನ್ನ ಎರಡರಶ್ಟಿದ್ದ ಮಹಾವೀರನನ್ನು ತಲೆ ಎತ್ತಿ ನೋಡುತ್ತಾ, “ಏನದು ಮಹಾವೀರ?” ಎಂದನು ನರಸಿಂಹ ನಾಯಕ.

“ನಮ್ಮ ಗೂಡಚಾರರು ತುರ‍್ತಾದ ವಿಶಯವೊಂದನ್ನು ತಂದಿದ್ದಾರೆ. ನಿಮಗೆ ತಿಳಿಸಲೆಂದು ನಾನೇ ಬಂದೆ”

“ಏನು?”

“ನಗರದವರು ನಮ್ಮ ಮೇಲೆ ಯುದ್ದ ಮಾಡೋ ಸಂಚು ನಡೆಸಿದ್ದಾರಂತೆ. ನಾವು ಮಯ್ ಮರೆತು ಕೂತರೆ ತುಂಬಾ ತಡವಾಗುತ್ತದೆ. ಅದಕ್ಕೇ ತುರ‍್ತಾಗಿ ಹೇಳಿ ಹೋಗೋಣ ಎಂದು ಬಂದೆ”

ಹೀಗೆ ಹೇಳುವಾಗ ಅರ‍್ದ ತೆರೆದಿದ್ದ ಬಾಗಿಲ ಕಡೆಗೆ ಮಹಾವೀರ ಮತ್ತೆ ಮತ್ತೆ ನೋಡಿದ್ದನ್ನು ನರಸಿಂಹ ಗಮನಿಸಿದ. ಹಿಂದೆ ತಿರುಗಿ, ಬಾಗಿಲನ್ನು ಪೂರ‍್ತಿ ಎಳೆದು, ಹೊರಗಿನಿಂದ ಅಗುಳಿ ಹಾಕಿ, “ಸರಿ. ನಾಳೆ ಬೆಳಗ್ಗೆ ಮಂತ್ರಿಗಳು ಮತ್ತು ಸೇನೆಯ ಇತರ ನಾಯಕರನ್ನು ಕರೆಸು. ಏನು ಮಾಡಬೇಕು ಎಂದು ತೀರ‍್ಮಾನಿಸೋಣ”, ಎಂದನು.

ನರಸಿಂಹ ಬಾಗಿಲು ಹಾಕಿದ್ದಕ್ಕೆ ತುಸು ಮುಜುಗರವಾದಂತೆ ಅನಿಸಿ, ತಗ್ಗಿದ ತಲೆಯಲ್ಲೇ, “ಆಯಿತು ನಾಯಕರೆ” ಎಂದು ಹೊರಟು ಹೋದನು ಮಹಾವೀರ.

ಮಹಾವೀರ ಬಾಗಿಲೆಡೆಗೆ ನೋಡಿದನ್ನೇ ತಲೆಯಲ್ಲಿ ತಿರುವಿಹಾಕುತ್ತಾ ಬಾಗಿಲು ತೆಗೆದು ಒಳಗೆ ಬಂದು ಅಗುಳಿ ಹಾಕಿದನು. ಅವನ ಬರುವಿಕೆಯನ್ನೇ ಎದಿರುನೋಡುವಂತೆ ಕೂತಿದ್ದ ಗಾಯತ್ರಿ, “ಏನಾಯಿತು?” ಎಂದು ಕೇಳಿದಳು.

ತಕ್ಶಣ ಸಿಟ್ಟೇರಿ, “ಯಾಕೆ? ಹೊರಗೆ ನಾವು ಮಾತಾಡಿದ್ದು ಕೇಳಿಸಲಿಲ್ಲವೇ?” ಎಂದು ಕೇಳಿದ. ಗಾಯತ್ರಿ ಸುಮ್ಮನಾದಳು. “ಇವಳಿಗೂ ಮಹಾವೀರನ ಮೇಲೆ ಮನಸ್ಸಿದೆಯೇ?” ಎಂದು ಕೆಲವೊಮ್ಮೆ ಅವನಿಗೆ ಅನಿಸುತ್ತಿತ್ತು. ಈ ಎಲ್ಲದಕ್ಕೂ ಕೊನೆಹಾಡಬೇಕು ಎಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡ.

ಮಾರನೆಯ ದಿನ ಮಂತ್ರಿ, ಮತ್ತು ಇತರ ಹಿರಿಯರೊಡನೆ ತಮಗೆ ಒದಗಿದ್ದ ಆಪತ್ತಿನ ಬಗ್ಗೆ ಚರ‍್ಚಿಸಿದನು ನಾಯಕ. ಇತ್ತೀಚಿಗೆ ನಾಯಕನಿಗೆ ತನ್ನ ಜವಾಬ್ದಾರಿಗಳನ್ನು ಸರಿಯಾಗಿ ನಿಬಾಯಿಸಲು ಆಗದೆ, ರಾಜ್ಯ ಬಲಹೀನವಾಗಿ, ಅದರ ಹೊರೆ ತಮ್ಮ ಮೇಲೆ ಬೀಳುತ್ತಿದೆ ಎಂದು ಮಂತ್ರಿಗಳು ತಮ್ಮ ಅಸಮಾದಾನ ಹೊರಹಾಕಿದರು. ಎಲ್ಲರೂ ಸೇರಿ ಸೇನೆಗಳ ಬಲಾಬಲದ ಲೆಕ್ಕಾಚಾರ ಹಾಕುತ್ತಾ ತುಂಬಾ ಹೊತ್ತು ಯೋಚಿಸಿದ ನಂತರ, ಹಂಪಿಗೆ ಹೋಗಿ ವಿಜಯನಗರದವರ ಸಹಾಯ ಕೇಳುವುದೊಂದೇ ದಾರಿಯೆಂದು ಮಂತ್ರಿಗಳು ತಿಳಿಸಿದರು. ನಾಯಕನಿಗೇಕೋ ಆ ಸಲಹೆ ಸರಿ ಬರಲಿಲ್ಲ. ತಾನು ಅತ್ತ ಹೋದಮೇಲೆ, ಇಲ್ಲಿ ರಾಜ್ಯವನ್ನೇ ಮಹಾವೀರ ತನ್ನ ವಶಕ್ಕೆ ತೆಗೆದುಕೊಂಡುಬಿಟ್ಟರೆ? ಎಂದು ದಿಗಿಲಾಯಿತು. ಆದರೆ, ಮಿಕ್ಕವರೂ ಮಂತ್ರಿಗಳ ಮಾತನ್ನು ಅನುಮೋದಿಸಿದ್ದರಿಂದ ಅವರ ಒತ್ತಡಕ್ಕೆ ನಾಯಕ ಮಣಿಯಲೇ ಬೇಕಾಯಿತು. ಅಲ್ಲಿದ್ದ ಎಲ್ಲರೂ ಅವನಿಗೆ ಶತ್ರುಗಳಂತೆ ಕಂಡರು. ಬೇರೆ ದಾರಿ ಕಾಣದೆ ಹಂಪಿಗೆ ಹೋಗಲು ಒಪ್ಪಿದ. ಅಂದು ಸಂಜೆ ತನ್ನ ನಂಬುಗೆಯ ಬಂಟ ಬಲರಾಮನನ್ನು ಏಕಾಂತದಲ್ಲಿ ಕಂಡ ನರಸಿಂಹ ನಾಯಕ, ಅವನ ಬಳಿ ತನ್ನ ದುಗುಡ ತೋಡಿಕೊಂಡ.

“ಯಾಕೋ ಎಲ್ಲಾ ಕಯ್ ಮೀರಿ ಹೋಗುತ್ತಿದೆ ಬಲರಾಮ”

“ಯಾಕೆ ಒಡೆಯಾ. ಏನಾಯಿತು?” ಕಳಕಳಿಯಿಂದ ಕೇಳಿದ ಬಲರಾಮ, ನಶ್ಯಪುಡಿ ಮೂಗಿನಲ್ಲಿ ಎಳೆದುಕೊಳ್ಳುತ್ತಾ.

“ಮಹಾವೀರ ನನ್ನನ್ನು ಬದಿಗೆ ಸರಿಸಿ ಇಡೀ ರಾಜ್ಯ ತನ್ನದಾಗಿಸಿಕೊಳ್ಳಬೇಕೆಂದು ಹೊಂಚು ಹಾಕುತ್ತಿದ್ದಾನೆ”

“ನನಗೂ ಹಾಗೇ ಅನಿಸುತ್ತಿದೆ ಒಡೆಯಾ. ಅರಮನೆಯಲ್ಲಿ ಎಲ್ಲರೂ ಅವನ ಮಾತನ್ನೇ ಕೇಳುತ್ತಾರೆ”

“ಅರಮನೆಯಲ್ಲಿ ಅವನ ಜೊತೆ ಎಲ್ಲರೂ ಶಾಮೀಲಾಗಿದ್ದಾರೆ ಎಂದು ನನಗೆ ಅನುಮಾನ”

“ಅವನನ್ನು ಮುಗಿಸಿಬಿಡಲಾ ಒಡೆಯಾ?” ಸಿಟ್ಟಿನಿಂದ ಕೇಳಿದ ಬಲರಾಮ.

“ಬೇಡ. ಅದು ಅಶ್ಟು ಸುಲಬ ಅಲ್ಲಾ. ಅದಕ್ಕೆ ನಾನು ಒಂದು ಉಪಾಯ ಮಾಡಿದ್ದೀನಿ”

“ಏನು ನನ್ನೊಡೆಯಾ?”

*****************************************

ಅಂದು ರಾತ್ರಿ ಮಲಗುವ ಮುನ್ನ ತನ್ನ ಕೋಣೆಯಲ್ಲಿದ್ದ ಗುಪ್ತ ಕವಾಟೊಂದರಿಂದ ತಾಮ್ರದ ಪುಟ್ಟ ಬರಣಿಯೊಂದನ್ನು ಹೊರತೆಗೆದು, ತನ್ನ ಹೆಂಡತಿಗೆ ಕೊಡುತ್ತಾ ಹೇಳಿದ ನಾಯಕ,
“ಗಾಯತ್ರಿ… ನಿನ್ನನ್ನು ನಾನು ನಂಬಬಹುದಾ?”

ತನ್ನ ಗಂಡ ಹಟಾತ್ತಾಗಿ ಕೇಳಿದ ಪ್ರಶ್ನೆಗೆ ಗಲಿಬಿಲಿಗೊಂಡ ಗಾಯತ್ರಿ, “ಯಾ… ಯಾಕೆ ಹಾಗೆ ಕೇಳುತ್ತೀರಿ? ನನ್ನಿಂದೇನಾದರೂ ತಪ್ಪಾಯಿತೆ?”

“ಇಲ್ಲ… ಹಾಗೇನಿಲ್ಲ. ಆದರೆ ನಿನ್ನಂದ ಸಹಾಯವಾಗಬೇಕಿತ್ತು”

“ಏನು ಹೇಳಿ”

“ಈ ತಾಮ್ರದ ಬರಣಿಯಲ್ಲಿರುವುದು ವಿಶ. ಇದನ್ನು ಮದುರಯ್ ನಿಂದ ಬಂದಿದ್ದ ರಾಮಚಂದ್ರ ಪಂಡಿತರು ನನಗೆ ಕೊಟ್ಟಿದ್ದರು. ಇಂತಹ ವಿಶ ಅವರು ರಾಜರುಗಳಿಗೆ ಮಾತ್ರ ಕೊಡುವುದಂತೆ”

ವಿಶದ ಮಾತು ಕೇಳುತ್ತಲೆ ಬೆಚ್ಚಿ ಬೆವರಿದಳು ಗಾಯತ್ರಿ. ನಾಯಕ ಮಾತು ಮುಂದುವರಿಸಿದ.

“ಇದನ್ನಾ ಹಾಲಲ್ಲಿ ಹಾಕಿ ಕುಡಿಸಿದರೆ ಎರಡು ನಿಮಿಶದ ಒಳಗೆ ಯಾರನ್ನಾದರೂ ಸಾಯಿಸಬಹುದು”

“ಇದನ್ನಾ ನನಗೇಕೆ ಹೇಳುತ್ತಿದ್ದೀರಿ?”

ಅವಳ ಕಯ್ಯಲ್ಲಿ ಬರಣಿ ಇಡುತ್ತಾ, “ನಾನು ಹಂಪಿಗೆ ಹೋದಾಗ ಇದನ್ನಾ ನೀನು ಹೇಗಾದರೂ ಮಾಡಿ ಮಹಾವೀರನಿಗೆ ಕುಡಿಸಬೇಕು”

ನಾಯಕನ ಮಾತು ಕೇಳಿ ಹೌಹಾರಿದಳು. ಮಯ್ಯಲ್ಲಾ ಬೆವರಿ, ಅವಳ ಕಯ್ ಕಾಲುಗಳು ನಡುಗಲು ಶುರುಮಾಡಿದವು.

“ಯಾಕೆ ಹೆದರಿಬಿಟ್ಟೆ? ನಿನ್ನಿಂದ ಸಾದ್ಯವಿಲ್ಲವೇ?”

ಏನು ಹೇಳಬೇಕೆಂದು ಗೊತ್ತಾಗದೆ ಅವಳು ಸುಮ್ಮನಿದ್ದಳು.

“ನೀನು ಈ ಕೆಲಸ ಮಾಡಿದರೆ ಮಾತ್ರ ನಿನ್ನನ್ನು ಪತಿವ್ರತೆಯೆಂದು ಒಪ್ಪುತ್ತೇನೆ. ನಾನು ಹಂಪಿಯಲ್ಲಿದ್ದಾಗಲೇ ನನಗೆ ಮಹಾವೀರ ಸತ್ತ ಸುದ್ದಿ ಬಂದು ತಲುಪಬೇಕು. ಇಲ್ಲದಿದ್ದರೆ, ನಾನು ಮರಳಿ ಬಂದ ದಿನ ನಿನ್ನ ಕೊನೆಯ ದಿನ. ನೆನಪಿಟ್ಟುಕೋ” ಎಂದು ಗದರಿಸಿ ಅಲ್ಲಿಂದ ಹೊರಟುಹೋದನು ನಾಯಕ.

ತನ್ನ ಇತಿಮಿತಿಗಳು ಗೊತ್ತಿದ್ದರೂ ಮಹಾವೀರನಿಗೆ ಮನಸೋತಿದ್ದ ಅವಳು ಈಗ ದರ‍್ಮಸಂಕಟದಲ್ಲಿ ಸಿಕ್ಕಿಬಿದ್ದಳು.

*****************************************

ಹದಿನೇಳನೇ ಶತಮಾನದ ಯಾವುದೋ ರೋಮಾಂಚಕ ಮತ್ತು ಶ್ರುಂಗಾರ ತುಂಬಿದ ಕತೆಯ ಹೊತ್ತಗೆ ಹಿಡಿದು ಓದುತ್ತಿದ್ದ ಪುಲಕೇಶಿಯ ರೆಪ್ಪೆಗಳು ಮುಚ್ಚಿ ಮುಚ್ಚಿ ತೆರೆದುಕೊಳ್ಳುತ್ತಿದ್ದವು. ಗಂಟೆ ರಾತ್ರಿ ಹನ್ನೊಂದಾಗಿತ್ತು. ಕೊನೆಗೆ ನಿದ್ದೆಯ ಒತ್ತಡಕ್ಕೆ ಸೋತ ಅವನ ಕಯ್ಯಿಂದ ಹೊತ್ತಗೆ ಕೆಳಗೆ ಬಿದ್ದು, ಕಣ್ಣುಗಳು ಮುಚ್ಚಿಕೊಂಡು, ಮಯ್ಯಿ ಹಾಸಿಗೆಯ ಮೇಲೆ ಉದ್ದವಾಯಿತು.

ಅವನ ಕನಸಿನಲ್ಲಿ…

“ನಿಮ್ಮ ಸಹಾಯ ಈಗ ನಮಗೆ ಅಗತ್ಯವಾಗಿ ಬೇಕಾಗಿದೆ ಪುಲಕೇಶಿಯವರೇ” ಹೇಳಿದ ನರಸಿಂಹ ನಾಯಕ.

“ಅಗತ್ಯವಿಲ್ಲದಿದ್ದರೆ ನೀವು ಇಶ್ಟು ದೂರ ಬಾದಾಮಿಯವರೆಗೂ ಬರುತ್ತಿದ್ದಿರೆ? ಕಂಡಿತವಾಗಿ ನಿಮಗೆ ಸಹಾಯ ಮಾಡುತ್ತೇವೆ. ಒಂದೆರಡು ದಿನ ಇಲ್ಲೇ ಇದ್ದುಬಿಡಿ… ಯಾವ ರೀತಿ ನಿಮಗೆ ಸಹಾಯ ಮಾಡಬಹುದು ಎಂದು ಚರ‍್ಚಿಸಬಹುದು”

“ನಿಮ್ಮಿಂದ ತುಂಬಾ ಉಪಕಾರವಾಯಿತು”

ಮೂರು ದಿನಗಳು ಕಳೆದ ಮೇಲೆ, ಪುಲಕೇಶಿ ಮತ್ತು ನರಸಿಂಹ ನಾಯಕ ಏನನ್ನೋ ಚರ‍್ಚಿಸುತ್ತಿದ್ದಾಗ, ನಾಯಕನ ರಾಜ್ಯದಿಂದ ಸುದ್ದಿಗಾರನೊಬ್ಬ ಬಂದಿದ್ದಾನೆಂದು ಆಳೊಬ್ಬ ಬಂದು ತಿಳಿಸಿದ. ಅವನನ್ನು ಅಲ್ಲಿಗೇ ಕರೆದುಕೊಂಡು ಬರಲು ಹೇಳಿದ ಪುಲಕೇಶಿ. ದೂರದ ಪ್ರಯಾಣದಿಂದ ದಣಿದು ಬಂದಿದ್ದ ಸುದ್ದಿಗಾರ, ಇವರಿಬ್ಬರ ಮುಂದೆ ತೊದಲುತ್ತಾ, “ಮಂತ್ರಿಗಳು ತೀರಿಹೋದರು” ಎಂದ. ಇಬ್ಬರೂ ಗಾಬರಿಯಿಂದ ಎದ್ದು ನಿಂತರು.

“ಹೇಗೆ?” ಕೇಳಿದ ನಾಯಕ.

“ನೀವು ಬಂದ ಒಂದು ದಿನದ ನಂತರ, ಸೇನೆ ನಾಯಕರು, ಮಂತ್ರಿಗಳು ಮತ್ತು ಮಿಕ್ಕವರು ಸಬೆ ಸೇರಿದ್ದಾಗ ಇದ್ದಕ್ಕಿದ್ದ ಹಾಗೇ ಕುಸಿದು ಬಿದ್ದರು. ಸ್ವಲ್ಪ ಸಮಯದಲ್ಲೇ ಅವರ ಮಯ್ ಬಣ್ಣ ನೀಲಿಯಾಯಿತು”

“ಒಹ್!” ಎಂದು ಉದ್ಗರಿಸಿ, ತನ್ನ ಕುರ‍್ಚಿಗೆ ಕುಸಿದು ಕುಂತ ನಾಯಕ. “ಮತ್ತೆ ಮಹಾವೀರ?” ಎಂದು ಕೇಳಿದ.

“ಅವರೇ ನನ್ನನ್ನು ಕಳುಹಿಸಿದ್ದು, ನಿಮಗೆ ಸುದ್ದಿ ಮುಟ್ಟಿಸಲು”

“ನೀನಿನ್ನು ಹೊರಡು” ಎಂದು ಸುದ್ದಿಗಾರನನ್ನು ಕಳುಹಿಸಿದ ಪುಲಕೇಶಿ, ನಾಯಕನತ್ತ ತಿರುಗಿ, “ಮಂತ್ರಿಗಳಿಗೆ ವಿಶ ಯಾರು ಉಣಿಸಿರಬಹುದು?” ಎಂದು ಕೇಳಿದ.

ಒಂದೆರಡು ನಿಮಿಶ ಸುದಾರಿಸಿಕೊಂಡ ನಾಯಕ ಮಾತಾಡಿದ, “ನಾನು ಬರುವ ಮುಂಚಿನ ಕತೆಯನ್ನು ನಿಮಗೆ ಹೇಳಬೇಕು”.

“ಆ ಕತೆಯನ್ನು ನಾನು ಈಗಾಗಲೇ ಓದಿದ್ದೇನೆ. ಇನ್ನೊಮ್ಮೆ ಹೇಳಿ ಓದುಗರನ್ನು ಬೋರ್ ಹೊಡೆಸುವುದು ಬೇಡ”

“ಬೋರ‍್?” ಗಲಿಬಿಲಿಗೊಂಡ ನಾಯಕ, “ಹಾಗಂದರೇನು?”

“ಅದೆಲ್ಲಾ ಇರಲಿ. ಈಗ ತುರ‍್ತಾಗಿ ನಿಮ್ಮ ರಾಜ್ಯಕ್ಕೆ ಹೋಗೋಣ. ಮಂತ್ರಿಗಳನ್ನು ಯಾರು ಸಾಯಿಸಿದ್ದಾರೆಂದು ಕಂಡು ಹಿಡಿಯೋಣ”

“ಇನ್ಯಾರು? ಅದೇ ಚಾಂಡಾಲ ಮಹಾವೀರ. ನನ್ನ ಹೆಂಡತಿಯನ್ನೂ ಮರಳು ಮಾಡಿದ್ದಾನೆ”

“ಸರಿಯಾಗಿ ವಿಚಾರಣೆ ಮಾಡದೆ ಹಾಗೆ ತೀರ‍್ಮಾನಿಸಲು ಬರುವುದಿಲ್ಲ”

“ಅಂದರೆ, ನೀವೇ ಅಲ್ಲಿಗೆ ಬರುತ್ತೀರಾ?”

“ಹೌದು. ಅದೇ ನಮ್ಮ ಕೆಲಸ”

(ಮುಂದುವರೆಯುವುದು : ಎರಡನೆ ಕಂತು ನಾಳೆಗೆ)

( ಚಿತ್ರಸೆಲೆ: ink361.com ) 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: