ಇಂಡೋನೇಶಿಯಾದ ಜಾನಪದ ಕತೆ: ಜಿಂಕೆ ಮತ್ತು ಹುಲಿ

– ಪ್ರಕಾಶ ಪರ‍್ವತೀಕರ.

deerandtiger

ದಟ್ಟವಾದ  ಆ ಕಾಡಿನಲ್ಲಿ ಒಂದು ಚಿಕ್ಕ ಜಿಂಕೆ ವಾಸಿಸುತಿತ್ತು. ಆಕಾರದಿಂದ ಚಿಕ್ಕದಾದರೂ ಅದಕ್ಕೆ ಬಲು ದೈರ‍್ಯ. ತನಗಿಂತ ಎಶ್ಟೋ ಪಟ್ಟು ದೊಡ್ಡದಿರುವ ಪ್ರಾಣಿಗಳಿಗೂ ಕೂಡ ಅದು ಹೆದರುತ್ತಿದ್ದಿಲ್ಲ. ತುಂಬ ಚಾಣಾಕ್ಶ ಹಾಗು ಚುರುಕು ಬುದ್ದಿಯಿದ್ದ ಅದು ಕಟಿಣ ಪ್ರಸಂಗದಲಿ, ಪ್ರಾಣಕ್ಕೆ ಕುತ್ತು ಬಂದಾಗ ಯುಕ್ತಿಯಿಂದ ಪಾರು ಆಗುವದರಲ್ಲಿ ನಿಸ್ಸೀಮನಾಗಿತ್ತು. ಒಂದು ದಿನ ಅದೇ ಕಾಡಿನಲ್ಲಿ ಆಹಾರಕ್ಕಾಗಿ ಹುಲಿಯೊಂದು ಅಡ್ಡಾಡುತ್ತಿತ್ತು. ಸುಮಾರು ದಿನಗಳಿಂದ ಅದಕ್ಕೆ ಆಹಾರ ಸಿಕ್ಕಿರಲಿಲ್ಲ. ಹಸಿವೆಯಿಂದ ಕಂಗಾಲಾಗಿ ಬಳಲಿದ್ದ ಅದಕ್ಕೆ ಈ ಜಿಂಕೆ ಕಾಣಿಸಿತು. ಮೆಲ್ಲನೆ ತೆವುಳತ್ತ ಹೋಗಿ ಅದು ಜಿಂಕೆಯನ್ನು ಗಟ್ಟಿಯಾಗಿ ಹಿಡಿಯಿತು.

“ಎಲೆ ಜಿಂಕೆ. ನಾನೆಶ್ಟು ಬಾಗ್ಯಶಾಲಿ! ಇಂದು ನನಗೆ ವಿಶೇಶ ಬೋಜನ ಸಿಕ್ಕಿತು” ಎಂದು ಗಹಗಹಿಸಿ ನಕ್ಕಿತು. ಜಿಂಕೆ ಕ್ಶಣ ಹೊತ್ತು ಮೌನವಾಯಿತು. ನಂತರ ಶಾಂತಚಿತ್ತದಿಂದ ಈ ಹುಲಿಯ ಹತೋಟಿಯಿಂದ ತಪ್ಪಿಸಿಕೊಳ್ಳುವದು ಹೇಗೆ ಎಂದು ವಿಚಾರ ಮಾಡಲಾರಂಬಿಸಿತು. ಆಗ ಅದಕ್ಕೆ ಹತ್ತಿರದಲ್ಲಿ ಬಿದ್ದ ಸಗಣಿಯ ಗುಪ್ಪೆ ಕಾಣಿಸಿತು. ಅದನ್ನು ಕಂಡು ಅದಕ್ಕೆ ಹೊಸದೊಂದು ಕಲ್ಪನೆ ಮೂಡಿತು. “ ವನರಾಜನೆ, ಕ್ಶಮೆ ಇರಲಿ. ನಾನು ನಿನಗೆ ಇಂದು ಆಹಾರ ಆಗುವುದು ಅಸಾದ್ಯ. ನಮ್ಮ ರಾಜನು ಈ ಒಬ್ಬಟ್ಟನ್ನು ಸಂರಕ್ಶಿಸಲು ನನ್ನನ್ನು ನೇಮಿಸಿದ್ದಾನೆ. ನಾನು ನನ್ನ ಕರ‍್ತವ್ಯವನ್ನು ನಿಬಾಯಿಸಲೇಬೇಕು”.

ಹುಲಿ ಕುತೂಹಲದಿಂದ, ಆ ಸಗಣಿಯ ಗುಪ್ಪೆ ನೋಡಿ “ಇದು ಒಬ್ಬಟ್ಟೆ ?ಎಂದು ಕೇಳಿತು.

“ ಹೌದು. ಅದು ಕಡಲೆ ಹೂರಣ, ಗೋಡಂಬಿ ದ್ರಾಕ್ಶಿ ಒಳಗೊಂಡ ಒಬ್ಬಟ್ಟು. ತುಂಬ ಸ್ವಾದಿಶ್ಟ ಹಾಗು ರುಚಿಕರವಾಗಿದೆ. ರಾಜನಿಗೆ ಅದು ಅನ್ಯರ ಪಾಲಾಗುವದು ಬೇಡಾಗಿದೆ. ಅದಕ್ಕಾಗಿ ನನ್ನನ್ನು ಪಹರೆ ಮಾಡಲು ನೇಮಿಸಿದ್ದಾನೆ”

ಹುಲಿಗೆ ಒಬ್ಬಟ್ಟಿನ ವರ‍್ಣನೆ ಕೇಳಿ ಬಾಯಿಯಲ್ಲಿ ನೀರು ಬಂದಿತು. ಅದು ಆಸೆಯಿಂದ ”ನಾನು ಸ್ವಲ್ಪ ರುಚಿ ನೋಡಬಹುದೆ?” ಎಂದು ಕೇಳಿತು.

“ಅದು ಹೇಗೆ ಸಾದ್ಯ? ರಾಜನಿಗೆ ಒಬ್ಬಟ್ಟು ಅಂದರೆ ಬಲು ಪ್ರಾಣ. ನಿನಗೆ ಕೊಟ್ಟರೆ ನಾನು ಜೀವಕ್ಕೆ ಎರಬೇಕಾಗುತ್ತದೆ. ದಯವಿಟ್ಟು ಕ್ಶಮಿಸು ಹುಲಿರಾಯಾ” ಎಂದಿತು ಜಿಂಕೆ.

“ ಒಬ್ಬಟ್ಟಿನ ಒಂದು ಚಿಕ್ಕ ತುಣುಕು ಮಾತ್ರ ನಾನು ತಿನ್ನುತ್ತೇನೆ. ನಿನ್ನ ರಾಜನಿಗೆ ಸ್ವಲ್ಪವೂ ಸಂಶಯ ಬರುವದಿಲ್ಲ,” ಎಂದು ಹುಲಿ ಜಿಂಕೆಯನ್ನು ದಯನೀಯವಾಗಿ ಪ್ರಾರ‍್ತಿಸಿತು.

“ಆಗಲಿ, ಹುಲಿರಾಯಾ ಮೊದಲು ನಿನ್ನ ಬಂದನದಿಂದ ನನ್ನನ್ನು ಬಿಡಿಸು, ಇಲ್ಲಿಂದ ನಾನು ದೂರ ಓಡಿ ಹೋಗುತ್ತೇನೆ. ಅಂದರೆ ನನಗೆ ರಾಜನಿಂದ ಗಂಡಾಂತರವಿರುವದಿಲ್ಲ”

ಜಿಂಕೆಯ ಈ ಮಾತು ಕೇಳಿ ಹುಲಿ, ”ಇಗೋ ನಾನು ನಿನ್ನನ್ನು ಬಂದಮುಕ್ತ ಮಾಡಿದ್ದೇನೆ” ಎಂದು ನುಡಿದಾಗ ಬದುಕಿದೆ ಎಂದು ಜಿಂಕೆಯು ದೂರ ಓಡಿ ಹೋಯಿತು. ಹುಲಿ ಜೊಲ್ಲು ಸುರಿಸುತ್ತ ಆ ಸಗಣಿ ಗುಪ್ಪೆಯ ಕಡೆಗೆ ಸಾಗಿತು. ಎಲ್ಲ ಒಬ್ಬಟ್ಟನ್ನು ಒಮ್ಮೆಲೆ ತಿನ್ನುವ ಆಸೆಯಿಂದ ಇಶ್ಟು ಅಗಲ ಬಾಯಿ ತೆರೆದು ಸಗಣಿ ಗುಪ್ಪೆಗೆ ಬಾಯಿ ಹಾಕಿತು. ”ಅಯ್ಯಯ್ಯೋ, ತೂ, ತೂ ಇದು ಸಗಣಿ” ಎಂದು ಹೇಸಿಗೊಂಡು ಉಗುಳುತ್ತ ಉಗುಳುತ್ತ ಕಾಡಿನೊಳಗೆ ಓಡಿ ಹೋಯಿತು.

ಆದರೆ ದುರ‍್ದೈವವೆಂದರೆ, ಕೆಲ ಸಮಯದ ನಂತರ ಜಿಂಕೆ ಮತ್ತೆ ಹುಲಿಯ ಬಲೆಯಲ್ಲಿ ಸಿಕ್ಕು ಬಿದ್ದಿತು.

“ನೀನು ಒಂದು ಬಾರಿ ಮೋಸ ಮಾಡಿದ್ದಿ. ನಾನೇನು ಮೂರ‍್ಕನಲ್ಲ,  ಈಗ ನಿನ್ನನ್ನು ತಿಂದು ಬಿಡುತ್ತೇನೆ” ಎಂದಿತು ಹುಲಿ. ಹುಲಿಯ ಮಾತು ಕೇಳಿ ಜಿಂಕೆ ಬಯದಿಂದ ನಡುಗುತ್ತ ಅತ್ತ ಇತ್ತ ನೋಡಹತ್ತಿತು. ಅದಕ್ಕೆ ಮರದ ಕೊಂಬೆಗೆ ಜೋತು ಬಿದ್ದ ಕಣಜೀರಿಗೆ ಹುಳದ ಗೂಡು ಕಂಡು ಬಂದಾಗ ಹೊಸದೊಂದು ಕಲ್ಪನೆ ತಲೆಯಲ್ಲಿ ಮೂಡಿ ಬಂದಿತು.

“ಕ್ಶಮಿಸು ಹುಲಿರಾಯಾ, ನಾನು ನಿನ್ನ ಊಟವಾಗಲಾರೆ. ಆ ಗಿಡದ ಕಡೆಗೆ ನೋಡು. ಕಾಣುತ್ತಿದೆಯೇ? ನಮ್ಮ ರಾಜನು ನನಗೆ ಆ ಗಿಡದ ಟೊಂಗೆಗೆ ಜೋತು ಬಿದ್ದ ಡಂಗುರದ ಕಾವಲು ಮಾಡಲು ಹೇಳಿದ್ದಾನೆ.”

ಜಿಂಕೆಯ ಮಾತು ಕೇಳಿ ಹುಲಿ, “ ಅದು ರಾಜನ ಡಂಗುರವೇ ?” ಎಂದು ಆಶ್ಚರ‍್ಯದಿಂದ ಕೇಳಿತು.

“ಹೌದು, ಹೌದು. ಈ ಲೋಕದಲ್ಲಿಯೇ ಅಂತಹ ಡಂಗುರ ನೀವು ಕಾಣಲಾರರಿ. ಅದರ ಸುಮದುರ ದ್ವನಿ ತರಂಗಗಳು ಕರ‍್ಣಾನಂದವನ್ನು ಉಂಟು ಮಾಡುತ್ತವೆ. ಕೇವಲ ರಾಜನೊಬ್ಬನೇ ಡಂಗುರ ಬಾರಿಸಲು ಅದಿಕಾರ ಹೊಂದಿದ್ದಾನೆ. ಉಳಿದ ಜನ ಡಂಗುರವನ್ನು ಸ್ಪರ‍್ಶಿಸಿದರೆ ದಂಡನೆಗೆ ಒಳಗಾಗುತ್ತಾರೆ“

ಜಿಂಕೆಯ ಮಾತು ಕೇಳಿ ಹುಲಿ, “ನಾನು ಆ ಡಂಗುರ ಬಾರಿಸಬಹುದೆ? “ ಎಂದು ಆಸೆಯಿಂದ ಕೇಳಿತು.

“ಇಲ್ಲ ಹುಲಿರಾಯ, ನೀನು ಡಂಗುರ ಬಾರಿಸುವ ದೈರ‍್ಯ ಮಾಡಿದರೆ ರಾಜನ ಅವಕ್ರುಪೆಗೆ ಈಡಾಗಬೇಕಾಗುತ್ತದೆ”

“ದಯವಿಟ್ಟು ಒಮ್ಮೆ ಮಾತ್ರ ಡಂಗುರ ಬಾರಿಸಲು ಅವಕಾಶ ಮಾಡಿಕೊಡು. ಅಲ್ಲದೆ ನಿನ್ನ ರಾಜನಿಗೆ ಕಿಂಚಿತ್ತೂ ಸಂಶಯ ಬರದ ಹಾಗೆ ನಾನು ಡಂಗುರ ಬಾರಿಸುತ್ತೇನೆ ”

ಹುಲಿಯ ಪ್ರಾರ‍್ತನೆ ಕೇಳಿ ಜಿಂಕೆ, ”ಆಗಲಿ, ಆದರೆ ಮೊದಲು ನನ್ನನ್ನು ಬಿಡುಗಡೆ ಮಾಡು. ನಾನು ರಾಜನ ದ್ರುಶ್ಟಿಗೆ ಬೀಳದ ಹಾಗೆ ದೂರ ಓಡಿ ಹೋಗುತ್ತೇನೆ ” ಎಂದಿತು. ಜಿಂಕೆ ಮತ್ತೊಮ್ಮೆ ಬಂದನದಿಂದ ಬಿಡುಗಡೆ ಹೊಂದಿತು ಮತ್ತು  ದೂರ ಓಡಿತು. ಹುಲಿ ಸಂತೋಶದಿಂದ ಕಣಜೀರಿಗೆ ಹುಳದ ಗೂಡಿನ ಹತ್ತಿರ ಬಂದಿತು. ಹಾಗು ಸ್ವಲ್ಪ ಜೋರಾಗಿ ಗೂಡಿನ ಮೇಲೆ ಬಾರಿಸಿತು. “ಅರೆರೆ ಇದೇನಿದು ?ಇದು ಡಂಗುರವಲ್ಲ. ಕಣಜೀರಿಗೆ ಗೂಡು” ಎಂದು ಹುಲಿರಾಯನ ಅರಿವಿಗೆ ಬಂದ ಕ್ಶಣ ಅದು ಅಲ್ಲಿಂದ ಓಡಿ ಹೋಯಿತು.

ಆದರೆ ತಮ್ಮ ಗೂಡನ್ನು ನಾಶ ಮಾಡಿದ್ದಕ್ಕೆ ಕೋಪಗೊಂಡ ಕಣಜೀರಿಗೆ ಹುಳಗಳು ಹುಲಿಯನ್ನು ಅಟ್ಟಿಸಿಕೊಂಡು ಬಂದವು. ಪಾಪ, ಕಣಜೀರಿಗೆ ಹುಳದ ಕಡಿತದಿಂದ ಕಂಗೆಟ್ಟ ಹುಲಿರಾಯ ಸರೋವರದ ನೀರಿನಲ್ಲಿ ಅಡಗಿಕೊಳ್ಳಬೇಕಾಯಿತು. ಹುಳಗಳು ಮರಳಿ ಹೋಗುವವರೆಗೆ ಹುಲಿ ನೀರಿನಲ್ಲೇ ಇರಬೇಕಾಯಿತು. ನಂತರ ಅದು ನೀರಿನಿಂದ ಹೊರಬಂದು ಅರಣ್ಯದಲ್ಲಿ ಅಲೆದಾಡುತ್ತಿದ್ದಾಗ, ಮತ್ತೆ ಜಿಂಕೆ ಅದರ ಕೈಗೆ ಸಿಕ್ಕು ಬಿದ್ದಿತು.

“ ಈ ಸಾರಿ ನೀನು ನನ್ನಿಂದ ತಪ್ಪಿಸಿಕೊಳ್ಳಲಾರೆ.ನಿನ್ನ ಯಾವುದೇ ಮೋಸದ ಆಟಗಳು ನನ್ನ ಹತ್ತಿರ ನಡೆಯಲಾರವು. ನಿನ್ನ ಯಾವುದೇ ಕಪಟ ತಂತ್ರಗಳಿಗೆ ನಾನು ಬಲಿಯಾಗಲಾರೆ”

ಹುಲಿಯ ಮಾತು ಕೇಳಿ ಜಿಂಕೆ ಈ ರಾಕ್ಶಸನಿಂದ ಪಾರು ಆಗುವುದು ಹೇಗೆ ಎಂದು ಯೋಚಿಸುತ್ತಿರುವಾಗ, ಅದಕ್ಕೆ ಕಂಡಿದ್ದು ಒಂದು ನಾಗರ ಹಾವು. ಅದು ಸಿಂಬೆಯಂತೆ ಸುರುಳಿಯಾಗಿ ಮಲಗಿತ್ತು. ಅದನ್ನು ನೋಡಿ ಜಿಂಕೆಗೆ ಹೊಸ ಕಲ್ಪನೆ ಹುಟ್ಟಿತು.

“ಹುಲಿರಾಯ, ನಾನು ನಿನ್ನ ಆಹಾರವಾಗುವುದು ಸಾದ್ಯವಿಲ್ಲ. ಕ್ಶಮಿಸು, ಯಾಕೆಂದರೆ ಅಲ್ಲಿ ಕಾಣುತ್ತಿರುವ ನಡುಪಟ್ಟಿ (Belt) ರಾಜನದು. ಅದನ್ನು ಕಾಯುವ ಹೊಣೆ ನನ್ನ ಮೇಲಿದೆ.ಆದ್ದರಿಂದ ಈಗ ನಾನು ನಿನ್ನ ಆಹಾರವಾಗಲಾರೆ”

“ಅದು ನಡುಪಟ್ಟಿಯೇ?” ಅಚ್ಚರಿಯಿಂದ ಹುಲಿ ಕೇಳಿತು.

“ಹೌದು, ತುಂಬ ಬೆಲೆಬಾಳುವ ನಮ್ಮ ರಾಜನ ನಡುಪಟ್ಟಿ. ಮುತ್ತು ರತ್ನಗಳನ್ನು ಅದರಲ್ಲಿ ಅಳವಡಿಸಡಿಸಲಾಗಿದೆ. ಅದನ್ನು ಪರದೇಶದಿಂದ ತರಿಸಲಾಗಿದೆ. ಬಹಳ ಬೆಲೆ ಬಾಳುವ ಅದನ್ನು ಬೇರೆಯವರು ಮುಟ್ಟಲೂ ಕೂಡ ಅನುಮತಿ ಇಲ್ಲ”

“ನಾನು ಆ ನಡುಪಟ್ಟಿಯನ್ನು ದರಿಸಬಾರದೇ?” ಹುಲಿ ಕೇಳಿತು.

“ಇಲ್ಲ ಹುಲಿರಾಯಾ, ಅದು ಅಸಾದ್ಯ. ನನ್ನ ರಾಜನಿಗೆ ಈ ಸಮಾಚಾರ ಗೊತ್ತಾದರೆ ನನ್ನನ್ನು ಗಲ್ಲಿಗೇರಿಸುತ್ತಾನೆ”

“ಆದರೆ ಕೇವಲ ಕೆಲ ನಿಮಿಶ ಮಾತ್ರ ನಾನು ಅದನ್ನು ದರಿಸುತ್ತೇನೆ. ಅದರ ಸುಳಿವು ಕೂಡ ನಿಮ್ಮ ರಾಜನಿಗೆ ಗೊತ್ತಾಗಲಾರದು.ನೀನು ನಿಶ್ಚಿಂತನಾಗಿರು.ನೀನು ಬಯ ಪಡಬೇಡ”

ಹುಲಿಯ ಮಾತು ಕೇಳಿ ಜಿಂಕೆಯು ”ಆಗಲಿ, ಹುಲಿರಾಯಾ, ಈ ಬೂಮಿಗೆ ರಾಜನು ಅವನಾದರೆ, ನೀನು ಕಾಡಿನ ಒಡೆಯ. ನಿನ್ನ ಮನದ ಅಬಿಲಾಶೆ ಈಡೇರಲಿ. ಆದರೆ ಬಡ ಪ್ರಾಣಿಯಾದ ನಾನು ರಾಜನ ಕಣ್ಣಿಗೆ ಬೀಳಬಾರದು, ಮೊದಲು ನನ್ನನ್ನು ಬಿಟ್ಟುಬಿಡು” ಎಂದು ಕೇಳಿಕೊಂಡಿತು.

ಮೂರ‍್ಕ ಹುಲಿ ಜಿಂಕೆಯನ್ನು ಬಿಡುಗಡೆ ಮಾಡಿತು. ಕುಶಿಯಿಂದ ಜಿಂಕೆ ಓಡಿ ಹೋಯಿತು. ಈಗ ಹುಲಿ ಆ ಹಾವನ್ನು ಎತ್ತಿ ತನ್ನ ಟೊಂಕದ ಸುತ್ತ ಕಟ್ಟಿಕೊಳ್ಳಲು ಯತ್ನಿಸಿದಾಗ ಹಾವು ನಿದ್ರೆಯಿಂದ ಎಚ್ಚರಗೊಂಡು ಕೋಪದಿಂದ ಹುಲಿಯನ್ನು ಕಚ್ಚಿತು. ಹುಲಿಗೆ ಸತ್ಯ ಪರಿಸ್ತಿತಿ ಅರಿವಾಗಿ, ‘ಸಹಾಯ ಮಾಡಿ’ ಎಂದು ಕೂಗಿ ಕೊಂಡಿತು. ಆದರೆ ಅದಕ್ಕೆ ಸಹಾಯ ಮಾಡುವವರು ಹತ್ತಿರದಲ್ಲಿ ಯಾರೂ ಇರಲಿಲ್ಲ.

( ಮಾಹಿತಿ ಸೆಲೆ: aaronshep.com )

( ಚಿತ್ರಸೆಲೆ: myenglishclub.com ) 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: