ಅಪರೂಪದ ಕಲೆಗಾರ‍್ತಿ ‘ಕಾನ್ಸೆಟ್ಟಾ ಎಂಟಿಕೊ’

 

– ಸುಜಯೀಂದ್ರ ವೆಂ.ರಾ.

concetta_r900x493

ಕಲೆಗಳು ಹಲವಾರು, ಕಲಿಯುವವರು ಹಲವರು. ಕಲೆಗಾರಿಕೆ ದೇವರು ಕೊಟ್ಟ ವರ. ಅದು ಎಲ್ಲರಿಗೂ ಸಿಗುವುದಿಲ್ಲ. ಅಂತಹ ಕಲೆಗಾರರಲ್ಲಿ ಒಬ್ಬರು ಕಾನ್ಸೆಟ್ಟಾ ಎಂಟಿಕೊ (Concetta Antico) ಎಂಬ ಚಿತ್ರ ಕಲೆಗಾರರು. ಈಕೆ ಆಸ್ಟ್ರೇಲಿಯಾ ಮೂಲದವರು. ಚಿತ್ರ ಬಿಡಿಸುವ ಕಲೆಗಾರರು ಹಲವರು ಇದ್ದಾರೆ. ಆದರೆ ಈಕೆ ಬಿಡಿಸುವ ಚಿತ್ರಕಲೆ ವಿಬಿನ್ನತೆ ಪಡೆದುಕೊಳ್ಳುತ್ತದೆ. ಅದು ಹೇಗೆ ಎನ್ನುವಿರಾ. ಕಾನ್ಸೆಟ್ಟಾ ಎಂಟಿಕೊ ಎಲೆಯೊಂದರ ಚಿತ್ರ ಬಿಡಿಸುವಾಗ ಹಸಿರು ಬಣ್ಣಕಿಂತ ಹೆಚ್ಚು ಬಣ್ಣವನ್ನು ಎಲೆಯಲ್ಲಿ ಕಾಣುತ್ತಾರೆ. ಎಂಟಿಕೊ ಅವರೇ ಹೇಳುವಂತೆ “ಎಲೆಗಳ ಅಂಚಿನಲ್ಲಿ ಕೇಸರಿ ಇಲ್ಲವೆ ಕೆಂಪು ಇಲ್ಲವೆ ನೇರಳೆ ಬಣ್ಣ ನನಗೆ ಕಾಣುತ್ತದೆ. ಎಲೆಯ ನೆರಳಿನಲ್ಲಿ ನೀವು ದಟ್ಟ ಹಸಿರು ಬಣ್ಣವನ್ನು ಕಾಣಬಹುದು ಆದರೆ ಅಲ್ಲಿ ನೀಲಿ-ನೇರಳೆ(violet), ಪಚ್ಚೆ(turquoise) ಹಾಗು ನೀಲಿ ಬಣ್ಣವನ್ನು ನಾನು ನೋಡುತ್ತೇನೆ. ಅದೊಂದು ಜೋಡಿಸಿದ ಬಣ್ಣಗಳ ಪಲಕಗಳು(mosaic).”

ಎಂಟಿಕೊ ಚಿತ್ರಕಲೆಯಲ್ಲಿ ಅಚ್ಚುಹಾಕುವ ಕಲೆಗಾರ‍್ತಿ ಎಂಬ ಕಾರಣಕ್ಕೆ ಈ ಬಣ್ಣಗಳನ್ನು ತಿಳಿದಿಲ್ಲ(perceive), ಬದಲಾಗಿ ಅವರು ನಾಲ್ಕು ಬಣ್ಣಕಾಣುಗರು(tetrachromat)! ಅಂದರೆ ಅವರ ಕಣ್ಣುಗಳಲ್ಲಿ ಹೆಚ್ಚು ಹಿಡಿಕೆಗಳು(receptors) ಬಣ್ಣವನ್ನು ಹಿಡಿದುಕೊಳ್ಳಲು ಇವೆ ಎಂದರ‍್ತ. ಎಂಟಿಕೊ ಅವರ ಕಣ್ಣಿನ ಶಂಕುಗಳಲ್ಲಿ(cones) ನಿಶ್ಚಿತ ಬೆಳಕಿನ ಅಲೆಯಳತೆಗಳನ್ನು(wavelenths) ಹಿಡಿದುಕೊಂಡು, ಅದನ್ನು ಮಿದುಳಿಗೆ ವರ‍್ಗಾಯಿಸುವ ಪ್ರಕ್ರಿಯೆಯಿದೆ. ಸಾಮಾನ್ಯ ವ್ಯಕ್ತಿಯಲ್ಲಿ ಮೂರು ಶಂಕುಗಳಿರುತ್ತವೆ. ಅವು ಅವರಿಗೆ ಒಂದು ಲಕ್ಶ ಬಣ್ಣಗಳನ್ನು ಕಾಣುವಂತೆ ಮಾಡುತ್ತವೆ. ಆದರೆ ಎಂಟಿಕೊ ಅವರಿಗೆ ನಾಲ್ಕು ಶಂಕುಗಳಿವೆ, ಆದ್ದರಿಂದ ಅವರ ಕಣ್ಣುಗಳು ಬಣ್ಣಗಳ ಉದ್ದಳತೆ(dimensions) ಮತ್ತು ಕಿರುಮಾರ‍್ಪುಗಳ(nuances)ನ್ನು ಪಡೆದುಕೊಳ್ಳುಲು ಸಾದ್ಯವಾಗುತ್ತಿದೆ. ಅಂದರೆ 100 ಲಕ್ಶ ಬಣ್ಣಗಳನ್ನು ಪಡೆದುಕೊಳ್ಳಲು ಯಾವ ಸಾಮಾನ್ಯರಿಂದಾಗುವುದಿಲ್ಲವೊ, ಅಂತಹವನ್ನು ಪಡೆದುಕೊಳ್ಳುತ್ತಿದ್ದಾರೆ. “ಇದೊಂದು ಅಚ್ಚರಿ ಹುಟ್ಟಿಸುವ ಸಂಗತಿ, ಚಿಕ್ಕದಾದ ಬಣ್ಣಗಳ ಅಲೆಯಳತೆಗಳನ್ನು ಜನಗಳು ಹೇಗೆ ನೋಡುತ್ತಾರೆ!” ಎಂದು ಎಂಟಿಕೊ ಅವರೇ ಬೆರಗಾಗುತ್ತಾರೆ.

ಮೊದಲೆ ನಾಲ್ಕು ಬಣ್ಣಕಾಣುಗರಿಗೆ ಕಣ್ಣುಗಳಲ್ಲಿ ಹೆಚ್ಚು ಹಿಡಿಕೆಗಳಿರುತ್ತವೆ, ಆದರೂ ಅವರ ಮಿದುಳು ಬಣ್ಣಗಳ ಕಾಣಲು ಸಾಮಾನ್ಯ ವ್ಯಕ್ತಿಗಳಂತೆ ರಚಿಸಲ್ಪಟ್ಟಿರುತ್ತದೆ. ಆದರೆ ಹೇಗೆ ಎಂಟಿಕೊರಂತ ವ್ಯಕ್ತಿಗಳ ಮಿದುಳುಗಳಲ್ಲಿ ಹೆಚ್ಚು ಬಣ್ಣಗಳನ್ನು ನೋಡುವ ಸಾಮರ‍್ತ್ಯವಿದೆ? ಇದಕ್ಕೆ ಉತ್ತರ ಅಬ್ಯಾಸಬಲ. ಎಲ್ಲದರಂತೆ ಅಬ್ಯಾಸ ನಯ್ಪುಣ್ಯವನ್ನು ಬೆಳೆಸುತ್ತದೆ, ಅದು ನರಗಳ ಸಂಕೇತ ಹಾದಿಯಲ್ಲಿಯೂ(neural pathways) ಕೂಡ ನಿಜವಾಗಿದೆ.

ಹಲವು ವರುಶಗಳವರೆಗೂ ನಾಲ್ಕು ಬಣ್ಣಕಾಣುಗರಿದ್ದಾರೆಂಬುದನ್ನು ತಿಳಿದೇ ಇರಲಿಲ್ಲ. ಅದು ಇದ್ದರು, ಅದು ಎರಡು X (ಎಕ್ಸ್) ಬಣ್ಣಕಾಯಗಳನ್ನು (X chromosome) ಹೊಂದಿದ ಜನಗಳಲ್ಲಿ ಅಂದರೆ ಹೆಂಗಸರಲ್ಲಿ ಮಾತ್ರವೆಂದು ಊಹಿಸಿದ್ದರು. ಇದಕ್ಕೆ ಕಾರಣ ಪೀಳಿಕೆ(genes)ಗಳು. ಯಾವ ಜನರಿಗೆ ಸಾಮಾನ್ಯ ಬಣ್ಣ ಕಾಣುವಿಕೆ ಇರುತ್ತದೆಯೋ ಅವರಲ್ಲಿ ಮೂರು ಶಂಕುಗಳಿದ್ದು, ಕೆಂಪು, ಹಸಿರು ಮತ್ತು ನೀಲಿ ಬಣ್ಣಗಳ ಅಲೆಯಳತೆಗಳಿಗೆ ಹೊಂದಿಕೊಂಡಿರುತ್ತವೆ. ಇವು X ಬಣ್ಣಕಾಯಗಳಿಗೆ ಸಂಪರ‍್ಕದಲ್ಲಿರುತ್ತವೆ. ಈ X ಬಣ್ಣಕಾಯಗಳು ಗಂಡಸರಲ್ಲಿ ಒಂದೇ ಒಂದು ಇದ್ದು, ಹೆಚ್ಚಾಗಿ ಹೆಂಗಸರಲ್ಲಿ ಇವು ಎರಡಿರುತ್ತವೆ. ಒಂದು X ಬಣ್ಣಕಾಯದಲ್ಲಿ ಮಾರ‍್ಪಾಡು(mutations)ಗಳು ಕಂಡುಬಂದಲ್ಲಿ ಆ ವ್ಯಕ್ತಿಯು ಹೆಚ್ಚು ಇಲ್ಲವೆ ಕಡಿಮೆ ಬಣ್ಣಗಳನ್ನು ತಿಳಿಯುವ ಸಾದ್ಯತೆಯಿದೆ. ಆದ್ದರಿಂದಲೆ ಗಂಡಸರಲ್ಲಿ ಹೆಂಗಸರಿಗಿಂತ ಹುಟ್ಟಿನಿಂದಲೆ ಬಂದ(congenital) ಬಣ್ಣಕುರುಡು(colorblindness) ಕಂಡುಬರುತ್ತದೆ. ಆದರೇನಾದರು ಒಬ್ಬ ವ್ಯಕ್ತಿ ಎರಡು ಮಾರ‍್ಪಾಡಾದ X ಬಣ್ಣಕಾಯಗಳನ್ನು ಪಡೆದಿದ್ದೇಯಾದಲ್ಲಿ, ಅವರಲ್ಲಿ ಮೂರರ ಬದಲಿಗೆ ನಾಲ್ಕು ಶಂಕುಗಳಿರುತ್ತದೆ. ಇದೆ ಎಂಟಿಕೊರಲ್ಲಿ ಕಾಣುತ್ತಿರುವ ಲಕ್ಶಣ.

rainbow-gully

2012 ರಲ್ಲಿ ಇವರಲ್ಲಿರುವ ನಾಲ್ಕು ಬಣ್ಣಕಾಣುವಿಕೆಯನ್ನು ಅರಿಗರು ದ್ರುಡೀಕರಿಸಿದ್ದಾರೆ. ಪ್ರತಿ ನೂರಿಗೆ ಒಬ್ಬರಂತೆ ಇಂತಹ ನಾಲ್ಕು ಬಣ್ಣಕಾಣುಗರಿರುತ್ತಾರೆ. ಇದನ್ನು ಎಣಿಕೆಯಲ್ಲಿ ತೋರಿಸುವುದು ಸುಲಬವಶ್ಟೆ. ನಾಲ್ಕು ಬಣ್ಣಕಾಣುಗರಿಗೂ ಮತ್ತು ಸಾಮಾನ್ಯ ನೋಟದವರಿಗೂ ಇರುವ ವ್ಯತ್ಯಾಸ, ಸಾಮಾನ್ಯ ನೋಟದವರಿಗೂ ಮತ್ತು ಬಣ್ಣಕುರುಡರಿಗೂ ಇರುವ ವ್ಯತ್ಯಾಸದಂತಲ್ಲ – ಹೀಗೆಂದು ಕಿಮ್ಬರ‍್ಲಿ ಜೇಮ್ಸನ್ ಹೇಳುತ್ತಾರೆ. ಜೇಮ್ಸನ್ ಅವರು ಇರ‍್ವಿನ್ (Irvine) ನಲ್ಲಿರುವ ಕ್ಯಾಲಿಪೋರ‍್ನಿಯ ವಿಶ್ವವಿದ್ಯಾಲಯದಲ್ಲಿ ನಂಟಿನ ಅರಿಗರಾಗಿದ್ದಾರೆ (cognitive scientist). ಇವರು ಮತ್ತು ಇವರ ಸಹ ಅರಿಗರಾದ ಅಲಿಸ ವಿಂಕ್ಲರ್ ಎಂಟಿಕೊ ಅವರ ನೆರವಿನಿಂದ ಒಂದು ವರುಶದವರೆಗೂ ಅರಕೆ ನಡೆಸಿ ನಾಲ್ಕು ಬಣ್ಣತನ(tetrachromacy)ವನ್ನು ತಿಳಿದಿದ್ದಾರೆ. “ಇವರಲ್ಲಿನ ಬಣ್ಣ ತಿಳಿಯುವ ವ್ಯತ್ಯಾಸ ಬಹಳ ಚಿಕ್ಕದು, ಈಗಿನ ಪರೀಕ್ಶಿಸುವ ಪರಿ ಅದಕ್ಕೆ ಹೇಳಿ ಮಾಡಿಸಿದ್ದಲ್ಲ. ಅದು ಬರಿ ಕೆಂಪು, ಹಸಿರು ಮತ್ತು ನೀಲಿಗೆ ಮಾತ್ರ.” ಎಂದು ಜೇಮ್ಸನ್ ಹೇಳುತ್ತಾರೆ. ಎಂಟಿಕೊ ಅವರ ಪೀಳಿಕೆಗಳ ತಳಪಾಯವಿಟ್ಟುಕೊಂಡು ಅವರಲ್ಲಿನ ನಾಲ್ಕನೆ ಶಂಕುವನ್ನು ಜೇಮ್ಸನ್ ಪತ್ತೆಹಚ್ಚಿದ್ದಾರೆ. ಅವು “ಕೆಂಪಿನ-ಕೇಸರಿಯ-ಹಳದಿ ಬಣ್ಣವನ್ನು(reddish-orangey-yellow) ತಿಳಿಯುತ್ತವೆ. ಆದರೆ ಕೆಲವೊಮ್ಮೆ ಕಾನ್ಸೆಟ್ಟಾ ಕಂಡಿತವಾಗಿ ಕಂಡಿಲ್ಲವೆನ್ನುತ್ತಾರೆ. “ಮೊದಲೆ ಈ ಪರೀಕ್ಶೆಗಳು ಈ ಅಲೆಯಳತೆಗಳಿಗೆ ಅಳೆದದ್ದಲ್ಲವಾದ್ದರಿಂದ, ಎಣಿಕೆಯ ಲೆಕ್ಕದಲ್ಲಿ ನಾಲ್ಕು ಬಣ್ಣಕಾಣುವಿಕೆಯನ್ನು ಹೇಳಲು ಆಗುವುದಿಲ್ಲ.” ಎನ್ನುತ್ತಾರೆ ಎಂಟಿಕೊ.

ಜೇಮ್ಸನ್ ಮತ್ತು ವಿಂಕ್ಲರ್ ಇನ್ನಶ್ಟು ನಾಲ್ಕು ಬಣ್ಣಕಾಣುಗರನ್ನು ಹುಡುಕಲು ಅವರ ಮಿದುಳಿನ ರಚನೆ ತಿಳಿಯುವುದಕ್ಕೊಸ್ಕರ ಮುಂದಾದರು. ಕಲೆಯಲ್ಲಿ ವಿಚಾರಗಳನ್ನು ಹೇಗೆ ಬಿಂಬಿಸುತ್ತಾರೆ ಮತ್ತು ಹೇಗೆ ಸಂಪರ‍್ಕಿಸುತ್ತಾರೆ, ವಿಶೇಶವಾಗಿ ಹೇಗೆ ಪ್ರಪಂಚವನ್ನು ತಿಳಿಯುತ್ತಾರೆಂಬ ವಿಚಾರವನ್ನು ತಿಳಿಯುವ ಬಗ್ಗೆ ಜೇಮ್ಸನ್ ಹೆಚ್ಚು ಕುತೂಹಲಿಯಾಗಿದ್ದಾರೆ. “ನಿಮಗೇನಾದರೂ ಹೆಚ್ಚಾದ ಶಂಕುಗಳುಳ್ಳ ಕಣ್ಣುಪದರವಿದ್ದು(Retina), ಅದು ಹೇಗೆ ಸೂಚನೆಗಳನ್ನು(signal) ರಚಿಸುತ್ತಿದೆ ಎಂಬುದು ಹೆಚ್ಚಿನ ಸಿಕ್ಕಲನ್ನು ಉಂಟುಮಾಡುತ್ತಿದೆ. ನಾವು ಅದನ್ನು ಇನ್ನೂ ತಿಳಿಯಬೇಕಾಗಿದೆ.” ಎನ್ನುತ್ತಾರೆ ಜೆಮ್ಸನ್.

ನಮ್ಮ ಮಿದುಳು ಸೂಚನೆಗಳನ್ನು ಹೇಗೆ ಹಿಡಿದುಕೊಳ್ಳಲು ಆಗುತ್ತಿದೆ ಅದರಲ್ಲೂ – ನರನಡವಳಿಕೆಯ ರಚನೆ (neuroplasticity) ಬಗ್ಗೆ ತಿಳಿಯವುದು ಕುತೂಹಲಕಾರಿ. ಅನೇಕ ಪ್ರಾಣಿಗಳ ಮತ್ತು ಕೆಲವು ಮನುಶ್ಯರ ನರನಡವಳಿಕೆ ರಚನೆಯ ತಿಳುವಳಿಕೆಗಳಲ್ಲಿ ಕಂಡುಬಂದದ್ದೇನೆಂದರೆ, ಇಬ್ಬರು ಒಂದೇ ತೆರನಾದ ನೋಟದ ತಿಳುವಳಿಕೆಯಿದ್ದವರು ಮುಂದೆ ನೋಟದಲ್ಲಿನ ಬೇರ‍್ಮೆಯನ್ನು ತೋರುತ್ತಾರೆ, ಅದು ಅವರು ಎಂತಹ ವಾತಾವರಣಕ್ಕೆ ಒಡ್ಡಿಕೊಂಡರೆಂಬುದರ ಮೇಲೆ ನಿಂತಿರುತ್ತದೆ. ಆದರೂ ಅರಕೆಗಾರರು ಏಕೊ ಇದರ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ಹಾಗಾಗಿ ಎಶ್ಟೇ ನಾಲ್ಕು ಬಣ್ಣಕಾಣುಗರು ಪ್ರಪಂಚದಲ್ಲಿದ್ದರು, ಅವರಿಗೆ ವಿಬಿನ್ನ ಬಣ್ಣಕಾಣುವಿಕೆ ಬಂದಿರುವುದಿಲ್ಲ. ಯಾಕೆಂದರೆ ಅವರ ಮಿದುಳಿಗೆ ಬಣ್ಣಗಳ ತರಬೇತಿ ಆಗಿರುವುದಿಲ್ಲ. ಎಂಟಿಕೊ ಇಲ್ಲಿ ಅಪರೂಪದ ವ್ಯಕ್ತಿಯಾಗಿದ್ದಾರೆ. “ನಾನು ಸಾಮನ್ಯರಿಗಿಂತ ವಿಬಿನ್ನ. ನಾನು 7 ವರುಶದವಳಿದ್ದಾಗಿನಿಂದ ಚಿತ್ರಕಲೆ ಬಿಡಿಸುತ್ತಿದ್ದೇನೆ. ನಾನು ಹೆಚ್ಚಾಗಿ ಬಣ್ಣಗಳ ಸೆಳೆತಕ್ಕೊಳಗಾದ್ದೇನೆ.” ಎಂದು ಎಂಟಿಕೊ ಹೇಳುತ್ತಾರೆ. ಹಲವು ವರುಶಗಳವರೆಗೂ ಅವರು ಹೊರತಾದ ಬಣ್ಣಗಳಿಗೆ ಒಡ್ಡಿಕೊಂಡಿದ್ದಾರೆ, ಆದ್ದರಿಂದ ಅವರ ಮಿದುಳು ಹೀಗೆ ರಚನೆಯಾಗಿ ನಾಲ್ಕು ಬಣ್ಣಕಾಣುವಿಕೆಯ ಲಾಬ ಪಡೆದುಕೊಂಡಿದೆ.

tetrachromat-color-test

ನಾಲ್ಕು ಬಣ್ಣತನವನ್ನು ಕಂಡುಹಿಡಿಯಲು ಬಳಸುವ ಚಿತ್ರ.

ಈ ನಾಲ್ಕು ಬಣ್ಣಕಾಣುವಿಕೆಯ ಅರಕೆಯಲ್ಲಿ ಎಂಟಿಕೊರಿಗೆ ವಯಕ್ತಿಕ ದಸಿಗೋಲಿದೆ(stake). ಅಯ್ದು ವರುಶಗಳ ಹಿಂದೆ, ಎಂಟಿಕೊ ಅವರ ಮಗಳು 7 ವರುಶದವಳಾಗಿದ್ದಾಗ, ಅವಳಿಗೆ ಬಣ್ಣಕುರುಡಿದೆ ಎಂದು ತಿಳಿದಿದ್ದರು. “ಈ ವಿಚಾರ ನನ್ನ ತಲೆಕೆಡಿಸದು ಎಂದು ತಿಳಿದಿದ್ದೇನೆ, ಆದರೆ ಅವಳು ಬಣ್ಣಕುರುಡಿಯಾಗಿದ್ದಾಳೆ ಅದು ನನ್ನಿಂದಾಗಿ. ನನ್ನಲ್ಲಿ ಮಾರ‍್ಪಾಡಿದೆ.” ಎಂದು ಎಂಟಿಕೊ ಹೇಳುತ್ತಾರೆ. “ಹೀಗೆ ಹಲವು ವಿಚಾರಗಳನ್ನು ಅವರು ತಮ್ಮ ಬಗ್ಗೆ ಹಂಚಿಕೊಂಡಂತೆಲ್ಲಾ ಅರಿಗರಿಗೆ ಮತ್ತಶ್ಟು ಅವರ ಮಗಳಂತವರನ್ನು ತಿಳಿಯಲು ನೆರವಾಗುತ್ತದೆ. ಇವರ ಮೇಲೆ ಹೆಚ್ಚಿನ ಅರಕೆಯನ್ನು ನಡೆಸಿದರೆ, ಬಣ್ಣದ ನೋಟ ತಯಾರಿಸುವಿಕೆ ಬಗ್ಗೆ ನಾವು ಹಲವು ವಿಚಾರಗಳನ್ನು ತಿಳಿಯಬಹುದಾಗಿದೆ, ಅದು ಸದ್ಯಕ್ಕಂತೂ ತಿಳಿಯಲಾಗುತ್ತಿಲ್ಲ.” ಎಂದು ಜೇಮ್ಸನ್ ಒಪ್ಪುತ್ತಾರೆ.

ಆದರೆ ಎಂಟಿಕೊ ಕೆಲವು ಬಣ್ಣಕುರುಡರಿಗೆ ನೆರವಾಗಲು ಹೋಗಿ ಎಡವಿದ್ದಾರೆ ಎನಿಸುತ್ತದೆ. ಅವರು ವ್ರುತ್ತಿಪರ ಕಲೆಗಾರ‍್ತಿ, ಇಪ್ಪತ್ತು ವರುಶದಿಂದ ಚಿತ್ರಕಲೆಯನ್ನು ಹೇಳಿಕೊಡುತ್ತಿದ್ದಾರೆ ಮತ್ತು ಅವರ ಬಳಿ ಅನೇಕ ಬಣ್ಣಕುರುಡು ವಿದ್ಯಾರ‍್ತಿಗಳಿದ್ದಾರೆ. “ಮೇಲ್ನೋಟಕ್ಕೆ ಕಾಣುತ್ತಿರುವ ಒಂದು ವಿಚಾರವೇನೆಂದರೆ ಆ ವಿದ್ಯಾರ‍್ತಿಗಳ ಕಲೆಯಲ್ಲಿನ ಬಣ್ಣಗಳಿಗೆ ಮೆಚ್ಚುಗೆ ತೋರುವಂತದ್ದು. ಅವರು ಸಾಮಾನ್ಯ ಬಣ್ಣಕುರುಡರಿಗಿಂತ ಬೇರೆಯೇ ಆಗಿರುವುದು. ಇಂತಹದನ್ನು ಎಣಿಕೆಯ ಲೆಕ್ಕದಲ್ಲಿ ಹೇಳುವುದು ಸ್ವಲ್ಪ ಕಶ್ಟ. ಚಿತ್ರಕಲೆ ತರಬೇತಿಯಿಂದ ನಾಲ್ಕು ಬಣ್ಣಕಾಣುಗರ ಮೇಲಾಗುವ ಪರಿಣಾಮಗಳ ಮೇಲೆ ಇನ್ನಶ್ಟು ಅರಕೆ ನಡೆಯಬೇಕಿದೆ, ನರನಡವಳಿಕೆಯ ರಚನೆ ತಿಳಿಯಬೇಕಿದೆ. ಇದರ ಜೊತೆ ಎಂಟಿಕೊ ಒಂದು ಹೊಸ ಕಲಾಶಾಲೆಯನ್ನು ಬಣ್ಣಕುರುಡರಿಗೆ ತೆರೆಯಲಿದ್ದಾರಂತೆ, ಮಿಂದಾಣದಲ್ಲಿ ನೇರವಾಗಿ ನಾಲ್ಕು ಬಣ್ಣತನವನ್ನು ತಿಳಿಯಲು ವೇದಿಕೆಯೊಂದನ್ನು ಮಾಡಲಿದ್ದಾರಂತೆ. “ನಾನು ಸಾಯುವ ಮುನ್ನ ನಾಲ್ಕು ಬಣ್ಣತನವನ್ನು ಸಾಬೀತು ಮಾಡಬೇಕು. ಮುಂದೆ ಇನ್ನಶ್ಟು ನಾಲ್ಕು ಬಣ್ಣಕಾಣುಗರು ಸಿಗಬಹುದು, ಹಾಗಾಗಿ ನಾನು ಇದೇ ದಾರಿಯಲ್ಲಿ ಮುನ್ನಡೆಯುತ್ತೇನೆ.” ಎಂದು ಎಂಟಿಕೊ ಹೇಳುತ್ತಾರೆ.

ಒಟ್ಟಿನಲ್ಲಿ ಕಲೆಯೆಂಬುದು ಕೆಲವರಿಗೆ ಮಾತ್ರ ಒಲಿದುಬರುತ್ತದೆ. ಅದರಲ್ಲೂ ವಿಶೇಶ ಕಲೆಗಾರರೂ ಇರುತ್ತಾರೆ. ಕಾನ್ಸೆಟ್ಟಾ ಎಂಟಿಕೊ ಒಬ್ಬ ವಿಶೇಶ ಕಲೆಗಾರ‍್ತಿ. ಆರಂಬದಲ್ಲಿ ಇವರ ಮೇಲಿನ ಅರಕೆ ನಾಲ್ಕು ಬಣ್ಣತನವನ್ನು ತೋರಿದರೆ, ನಂತರ ಇದು ತರಬೇತಿಯಿಂದ ಬಂದ ಕಲಿಕೆ ಎನಿಸುತ್ತದೆ. ಮೂರು ಬಣ್ಣತನದ ಜನರಲ್ಲಿ ಕೆಂಪು, ಹಸಿರು, ನೀಲಿ ಬಣ್ಣಗಳ ತಿಳಿಯುವ ಶಂಕುಗಳಿದ್ದರೆ, ನಾಲ್ಕು ಬಣ್ಣತನದ ಜನರಲ್ಲಿ ಕೆಂಪಿನ-ಕೇಸರಿಯ-ಹಳದಿಯ ಬಣ್ಣವನ್ನು ತಿಳಿಯುವ ನಾಲ್ಕನೇ ಶಂಕು ಕಂಡು ಬರುತ್ತದೆ. ಮೂರು ಬಣ್ಣತನದ ಜನರಲ್ಲಿನ ಪೀಳಿಕೆಯಲ್ಲಿ ಮಾರ‍್ಪಾಡುಗಳಾದರೆ ಬಣ್ಣಕುರುಡು ಬರುತ್ತದೆ. ಆದರೆ ಎಂಟಿಕೊರಲ್ಲಿ ಇದು ಬೇರೆ ತರಹದ ಮಾರ‍್ಪಾಡು ಎನ್ನಬಹುದು. ಮನುಶ್ಯರಲ್ಲಿ ಗಂಡಸರಿಗೆ ಒಂದು X ಬಣ್ಣಕಾಯವಿದ್ದು, ಮತ್ತೊಂದು Y ಬಣ್ಣಕಾಯವಿರುತ್ತದೆ. ಅದೇ ಹೆಂಗಸರಲ್ಲಿ ಎರಡು X ಬಣ್ಣಕಾಯಗಳಿದ್ದು ಮಾರ‍್ಪಾಡುಗಳು ಆದರೆ ಬಣ್ಣಕುರುಡು ಕಂಡುಬರುತ್ತದೆ. ಎಂಟಿಕೊರ ಮಗಳಲ್ಲಿ ಬಣ್ಣಕುರುಡು ಕಂಡದ್ದರಿಂದ, ಅವಳು ಎರಡು X ಬಣ್ಣಕಾಯಗಳಿದ್ದರೂ ಬಣ್ಣಕುರುಡಿ ಎಂದು ಸ್ವತಹ ಎಂಟಿಕೊರೆ ಸಾಬೀತು ಪಡಿಸುತ್ತಾರೆ. ಇಲ್ಲಿ ತಂದೆಯಿಂದ ಬಂದ ಒಂದು X ನಲ್ಲಿ ಬಣ್ಣಕುರುಡಿನ ಪೀಳಿಕೆಯಿರಬಹುದು ಅದರ ಜೊತೆ ತಾಯಿಯಿಂದ ಬಂದ ಒಂದು X ನಲ್ಲಿಯೂ ಇದೇ ಬಣ್ಣಕುರುಡಿನ ಪೀಳಿಕೆಯಿರಬಹುದು. ಆದ್ದರಿಂದ ಮಗಳಲ್ಲಿ ಬಣ್ಣಕುರುಡುತನ ಬಂದಿದೆ ಎನ್ನಬಹುದಾಗಿದೆ.

ಜೇಮ್ಸನ್ ಮತ್ತು ಸಂಗಡಿಗರು ನಡೆಸಿದ ಅರಕೆಯಲ್ಲಿ ಮಿದುಳಿಗೆ ಕಣ್ಣುಗಳಿಂದ ಹೋಗುವ ಸೂಚನೆಗಳನ್ನು ತಿಳಿಯಲು ಹೋಗುತ್ತಾರೆ. ಅದು ಹೇಗೆ ಮಿದುಳಿನ ತೊಗಟೆಗೆ ಈ ಸಂಕೇತಗಳು ರವಾನೆಯಾಗುತ್ತವೆ, ಹೇಗೆ ಬಣ್ಣಗಳನ್ನು ಅದು ತಿಳಿಯುತ್ತದೆ ಎಂಬುದರ ಬಗ್ಗೆ ಅವರು ಹೇಳುತ್ತಾರೆ. ಕಲಿಕೆಯು ಮಿದುಳಿಗೆ ಅಬ್ಯಾಸಕೊಟ್ಟು ನರನಡವಳಿಕೆಯ ರಚನೆಯನ್ನು ಬದಲಾಯಿಸುತ್ತದೆ. ಎಶ್ಟೋ ಕಡೆ ಎಂಟಿಕೊ ಬಣ್ಣದ ಬಗ್ಗೆ ದ್ರುಡರಾಗಿಲ್ಲ ಎನ್ನುತ್ತಾರೆ. ನರನಡಾವಳಿಗಳ ಮೇಲೆ ಅನೇಕ ಅರಿಮೆ ಕೆಲಸಗಳು ನಡೆದಿವೆ, ಅದರಲ್ಲೆಲ್ಲಾ ಅಬ್ಯಾಸದ ಮತ್ತು ವಾತಾವರಣದ ಬಗ್ಗೆಯೇ ಪಲಿತಾಂಶಗಳು ದೊರೆತಿವೆ. ಎಂಟಿಕೊ ಇಪ್ಪತ್ತು ವರುಶದಿಂದ ಶಾಲೆ ನಡೆಸುತ್ತಿರುವುದರಿಂದ, ಅಲ್ಲಿರುವ ವಿದ್ಯಾರ‍್ತಿಗಳೆಲ್ಲಾ ಬಣ್ಣಕುರುಡರೇ ಆಗಿದ್ದಾರೆ. ಆದ್ದರಿಂದ ಇಂತಹ ನಾಲ್ಕು ಬಣ್ಣತನದ ಶಾಲೆ ನಡೆಸುವುದರಲ್ಲಿ ಸ್ವಲ್ಪ ಎಡವಿದ್ದಾರೆ ಅನಿಸುತ್ತದೆ. ಆದರೆ ಅವರ ವಿದ್ಯಾರ‍್ತಿಗಳು ಬಣ್ಣಗಳ ಕಲೆಯಲ್ಲಿ ಮೆಚ್ಚುಗೆ ಪಡೆದಿದ್ದಾರೆ. ತರಬೇತಿಯಿಂದ ನಯ್ಪುಣ್ಯತೆ ಪಡೆದಿದ್ದಾರೆ. ಇದು ಕೊಂಚ ನರನಡವಳಿಕೆ ತಿಳಿಯುವ ಅರಿಗರಿಗೆ ಸವಾಲಾಗಿದೆ. ಎಂಟಿಕೊ ಮುಂದೆ ಮತ್ತೊಂದು ಹೊಸ ಶಾಲೆ ತೆರೆದು ಅಲ್ಲಿ ಮಿಂದಾಣದಲ್ಲಿ ನೇರವಾಗಿ ನಾಲ್ಕು ಬಣ್ಣತನವನ್ನು ಸಾಬೀತು ಮಾಡಲು ಮುಂದಾಲಿದ್ದಾರೆ. ಇದು ಅರಿಗರಿಗೆ ಸುಲಬವಾಗಿ ಪ್ರಪಂಚದ ಜನರಲ್ಲಿನ ಬಣ್ಣಕುರುಡು, ಮೂರು ಇಲ್ಲವೆ ನಾಲ್ಕು ಬಣ್ಣತನವನ್ನು ತಿಳಿಯುವಲ್ಲಿ ಸಾಬೀತು ಪಡಿಸಲು ನೆರವಾಗುತ್ತದೆ. ಅಲ್ಲಿಯವರೆಗೂ ಕಾನ್ಸೆಟ್ಟಾ ಎಂಟಿಕೊ ಒಬ್ಬ ವಿಬಿನ್ನ ಕಲೆಗಾರ‍್ತಿಯಾಗೇ ಉಳಿದಿರುತ್ತಾರೆ. ಮುಂದೆ ಇಂತಹ ನಾಲ್ಕು ಬಣ್ಣಕಾಣುಗರು ನಮ್ಮ ನಿಮ್ಮಲ್ಲು ಸಿಗಬಹುದು, ಇದು ಪೀಳಿಕೆಯ ಮಹಿಮೆಯೋ, ಅಬ್ಯಾಸದ ಮಹಿಮೆಯೋ ಕಾದು ನೋಡೋಣವೇ?

(ಮಾಹಿತಿ ಸೆಲೆ: popsci.com, ConcettaAntico.com)

(ಚಿತ್ರಸೆಲೆ: sandiegouniontribune.comblogadilla.comconcettaantico.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: