ನಾಟಕ: ಕಳ್ಳರಿದ್ದಾರೆ, ಎಚ್ಚರಿಕೆ! (ಕೊನೆ ಕಂತು)

 ಸಿ.ಪಿ.ನಾಗರಾಜ.

kalla

ಕಂತು-1 ಕಂತು-2

[ಪುಟ್ಟಸ್ವಾಮಿ, ಈರಯ್ಯ ಮತ್ತು ರಮೇಶ ಮಂತ್ರಿಯ ಮನೆಗೆ ಬಂದಿರುತ್ತಾರೆ. ರಂಗದ ಮೇಲೆ ಬೆಳಕು ಮೂಡಿದಾಗ, ಮಂತ್ರಿಗಳು ಕುಳಿತಿರುವ ಕೊಟಡಿಯ ನೋಟ ಕಂಡು ಬರುತ್ತದೆ. ಅಲ್ಲಿಗೆ ಈ ಮೂರು ಮಂದಿಯು ರಂಗದ ಎಡಬದಿಯಿಂದ ಒಳಬರುತ್ತಾರೆ. ಪುಟ್ಟಸ್ವಾಮಿಯು ಹೂವಿನ ಹಾರವನ್ನು ಮಂತ್ರಿಯ ಕೊರಳಿಗೆ ಹಾಕಿ, ಅವರ ಕಯ್ಗೆ ನಿಂಬೆಹಣ್ಣನ್ನು ನೀಡುತ್ತಿದ್ದಂತೆಯೇ , ಉಳಿದವರಿಬ್ಬರೂ ಕಯ್ ಮುಗಿಯುತ್ತಾರೆ ]

ಮಂತ್ರಿ—ಏನು ಬಂದ್ರಿ?

ಪುಟ್ಟಸ್ವಾಮಿ—ನಮ್ಮ ಈರಯ್ಯನವರ ಮಗನಿಗೆ ಸರ‍್ಕಾರಿ ಕಾಲೇಜಿನಲ್ಲಿ ಲೆಕ್ಚರರ್ ಕೆಲಸಕ್ಕೆ ಇಂಟರ್‍ವ್ಯೂ ಬಂದಿತ್ತು. ಅದಕ್ಕೆ ತಮ್ಮನ್ನ ನೋಡ್ಕೊಂಡು ಹೋಗೋಣ ಅಂತ ಬಂದೊ.

ಈರಯ್ಯ—ಇವನೇ ನನ್ನ ಮಗ…ಎಂ.ಎ.,ಮಾಡವ್ನೆ ಬುದ್ದಿ.

ರಮೇಶ—ನಮಸ್ಕಾರ ಸಾರ್.

ಮಂತ್ರಿ—(ರಮೇಶನನ್ನು ಕುರಿತು) ಸಬ್ಜೆಕ್ಟ್ ಯಾವುದು? ಪರ‍್ಸಂಟೇಜ್ ಎಶ್ಟು ಬಂದಿದೆ?

ರಮೇಶ—ಕನ್ನಡ ಎಂ.ಎ., ಸಾರ್, ಎಂಬತ್ತೇಳು ಪರ‍್ಸೆಂಟ್ ಬಂದಿದೆ. ಮೂರನೆಯ ರ‍್ಯಾಂಕ್, ಎರಡು ಚಿನ್ನದ ಪದಕ ಬಂದಿವೆ, ಸಾರ್.

ಮಂತ್ರಿ—ಗುಡ್. ಪರವಾಗಿಲ್ಲ ಕಣಯ್ಯ, ನಿನ್ನ ಮಗ ಚೆನ್ನಾಗಿ ಸ್ಕೋರ್ ಮಾಡಿದ್ದಾನೆ.

ಈರಯ್ಯ—ಎಲ್ಲಾ ನಿಮ್ಮಂತವ್ರ ಆಶೀರ‍್ವಾದ ಬುದ್ದಿ. ಈ ಕೆಲ್ಸನ ತಾವು ಕೊಡುಸ್ಲೆಬೇಕು.

ಪುಟ್ಟಸ್ವಾಮಿ—ನಿಮ್ಮನ್ನೆ ನಂಬ್ಕೊಂಡು ಬಂದಿದ್ದೀವಿ ಸಾರ್.

ಮಂತ್ರಿ—ಆಗ್ಲಿ ನೋಡೋಣ. ಈಗ ವಿದಾನಸಬೆ ನಡೀತಾಯಿದೆ. ನನಗೆ ಸ್ವಲ್ಪನೂ ಬಿಡುವಿಲ್ಲ. ಪುಟ್ಟಸ್ವಾಮಿ, ನಿನಗೆ ನನ್ನ ಮಗ ಚೆನ್ನಾಗಿ ಗೊತ್ತಲ್ವೆ?

ಪುಟ್ಟಸ್ವಾಮಿ—ಗೊತ್ತು ಸಾರ್. ಮೊನ್ನೆ ಚುನಾವಣೆನಲ್ಲಿ ಒಂದು ತಿಂಗಳು ಅವರ ಜೊತೇಲೆ ತಿರುಗಾಡಿದ್ದೆ.

ಮಂತ್ರಿ—ನನ್ನ ಮಗನ ಹತ್ತಿರ ನೀವು ಎಲ್ಲಾ ವಿಚಾರವನ್ನು ಹೇಳಿ, ಇಂಟರ್‍ವ್ಯೂ ಕಾರ‍್ಡ್ ನಂಬರ್ ಕೊಟ್ಟು ಹೋಗಿರಿ. ಅನಂತರ ನಾನು ಅಟೆಂಡ್ ಮಾಡ್ತೀನಿ.

ಪುಟ್ಟಸ್ವಾಮಿ—ಆಗ್ಲಿ ಸಾರ್. ಹಂಗೆ ಮಾಡ್ತೀವಿ.

[ಮಂತ್ರಿಗಳು ಅಲ್ಲಿಂದ ಹೊರಡುತ್ತಾರೆ]

ಈರಯ್ಯ—[ಕಯ್ ಮುಗಿಯುತ್ತಾ]

ತಮ್ಮಿಂದ ಇದೊಂದು ಉಪ್ಕಾರ ಆಗ್ಲೇಬೇಕು ಬುದ್ದಿ.

ಮಂತ್ರಿ—ಆಗ್ಲಿ ಕಂಡಿತ ಮಾಡೋಣ. ಈಗ ನನ್ನ ಮಗ ಇಲ್ಲಿಗೆ ಬರ‍್ತನೆ. ಅವನ ಜೊತೇಲಿ ಮಾತಾಡಿ.

[ರಂಗದ ಬಲಬದಿಯಿಂದ ಮಂತ್ರಿಗಳು ಒಳಕ್ಕೆ ಸರಿಯುತ್ತಾರೆ]

ಈರಯ್ಯ—ಇದೇನಯ್ಯ? “ನನ್ನ ಮಗನಿಗೆ ಹೇಳಿ” ಅಂದ್ಬುಟ್ಟು ಹೊಯ್ತಾವ್ರೆ! ಇವರ ಮಗನಿಗೂ ಇವರಶ್ಟೆ ಅದಿಕಾರ ಇದ್ದದೊ?

ಪುಟ್ಟಸ್ವಾಮಿ—ಮಗನಿಗೆ ಅದಿಕಾರ ಇಲ್ಲ. ಆದ್ರೆ ಇವರಿಗೆ ಕಯ್ ತುಂಬಾ ಕೆಲ್ಸ ಇರ‍್ತದಲ್ಲ, ಅದಕ್ಕೆ ತಮ್ಮ ನೆಂಟರಿಶ್ಟರ , ಹತ್ತಿರದವರ ಕೆಲಸ ಮಾಡ್ಸುಬೇಕಾದ್ರೆ, ಹಿಂಗೆ ತಮ್ಮ ಮಕ್ಕಳಿಗೆ ಅಳಿಯದೀರ‍್ಗೆ ವಹಿಸುಬುಟ್ಟವ್ರೆ. ಅವರು ‘ರೈಟ್’ ಅಂದುದ್ದನ್ನ, ಇವರು ಮಾಡ್ತರೆ.

ಈರಯ್ಯ—ಅದು ಒಂತರ ಸರಿಯೆ ಬುಡು. ಪಾಪ, ಒಬ್ಬರು ಎಶ್ಟು ಅಂತ ನೋಡೋಕಾದದು! ಇವರು ತಾನೆ ಇಡೀ ರಾಜ್ಯನೇ ಆಳಬೇಕಲ್ಲ.

(ಅಶ್ಟರಲ್ಲಿ ರಂಗದ ಎಡಬದಿಯಿಂದ ಮಂತ್ರಿಯ ಮಗ ಬಹಳ ದಿಮಾಕಿನಿಂದ ಬರುತ್ತಾನೆ. ಪುಟ್ಟಸ್ವಾಮಿ ಅವನಿಗೆ ನಿಂಬೆ ಹಣ್ಣನ್ನು ಕೊಟ್ಟು ಕಯ್ ಮುಗಿಯುತ್ತಾನೆ. ಈರಯ್ಯ ಮತ್ತು ರಮೇಶ ಕಯ್ ಮುಗಿಯುತ್ತಾರೆ. ಮಂತ್ರಿಯ ಮಗ ಕುರ‍್ಚಿಯಲ್ಲಿ ಕುಳಿತುಕೊಳ್ಳುತ್ತಾನೆ.)

ಪುಟ್ಟಸ್ವಾಮಿ—ನಿಮ್ಮ ತಂದೆಯವರ ನೋಡ್ದೊ. ಅವರು ನಿಮ್ಮ ಜೊತೇಲಿ ಮಾತಾಡಿ ಅಂದ್ರು.

ಈರಯ್ಯ—ನಾವು ನಿಮ್ಮ ಅಪ್ಪಾವರ‍್ಗೆ ಕಾಲದಿಂದ್ಲೂ ಓಟು ಹಾಕಿ, ಗೆಲ್ಲಿಸ್ಕೊಂಡು ಬಂದಿದ್ದೀವಿ ಸ್ವಾಮಿ. ನಿಮ್ಮಪ್ಪಾರು ಎತ್ತಗಾರ ಹೋಗ್ಲಿ. ಅತ್ತಗೆ ನಮ್ಮೂರೆಲ್ಲಾ ಬತ್ತದೆ. ಊರಲ್ಲಿ ಒಂದೆರಡು ಕುಳ ಬುಟ್ರೆ, ಇಡಿ ಊರೇ ನಿಮಗೆ ನಿಯ್ಯತ್ತಾಗದೆ ಸ್ವಾಮಿ.

ಪುಟ್ಟಸ್ವಾಮಿ—ಅವರು ಕಾಣ್ರೆ. ಅದ ಬಾಯ್ಬುಟ್ಟು ಒಂದ್ಸತಿ ಹೇಳ್ಬೇಕೆ? ಸ್ವಾಮಿ, ಇವರು ಈರಯ್ಯ ಅಂತ. ಅವನು ರಮೇಶ ಅಂತ ಈರಯ್ಯನವರ ಮಗ.

ಮಂತ್ರಿ ಮಗ—ಏನು ಬಂದ್ರಿ?

ಪುಟ್ಟಸ್ವಾಮಿ—ಇವನ್ಗೆ ಇಂಟರ್‍ವ್ಯೂ ಬಂದಿತ್ತು ಸ್ವಾಮಿ.

(ರಮೇಶನನ್ನು ಕುರಿತು)

ರಮೇಶ, ಆ ಕಾರ‍್ಡ್ ಕೊಡು ಸ್ವಾಮಿ ಅವರ ಕೈಗೆ. ಹಂಗೇನೆ ನಿನ್ನ ಮಾರ‍್ಕ್ಸ್ ಕಾರ‍್ಡ್, ರ‍್ಯಾಂಕ್ ಸರ‍್ಟಿಪಿಕೇಟು ಎಲ್ಲಾನು ತೋರ‍್ಸು.

(ರಮೇಶ ಮೊದಲು ಇಂಟರ್‍ವ್ಯೂ ಕಾರ‍್ಡನ್ನು ಮಂತ್ರಿಯ ಮಗನಿಗೆ ನೀಡುತ್ತಾನೆ. ಅನಂತರ ತನ್ನ ಅಂಕಪಟ್ಟಿ, ರ‍್ಯಾಂಕ್ ಪ್ರಶಸ್ತಿ ಪತ್ರ ಮುಂತಾದವುಗಳ ಕಟ್ಟನ್ನು ಆತನಿಗೆ ನೀಡುತ್ತಾನೆ. ಮಂತ್ರಿಯ ಮಗ ಒಂದೆರಡು ಗಳಿಗೆ ಅವುಗಳ ಮೇಲೆ ಕಣ್ಣಾಡಿಸಿ, ಮತ್ತೆ ಹಿಂತಿರುಗಿಸುತ್ತಾನೆ.)

ಪುಟ್ಟಸ್ವಾಮಿ—ನಿಮ್ಮ ತಂದೆಯವರ ಕಯ್ಯಲ್ಲಿ ಸೆಲೆಕ್ಶನ್ ಕಮಿಟಿಯವರಿಗೆ ಒಂದು ಮಾತು ಹೇಳಿಸೋಣ ಅಂತ ಬಂದೊ ಸ್ವಾಮಿ.

ಮಂತ್ರಿ ಮಗ—ಬರಿ ಮಾತ್ಗೆಲ್ಲಾ ಕೆಲಸ ಸಿಗೂದಿಲ್ಲ ಕಣ್ರಿ ಈಗ.

ಈರಯ್ಯ—ಏನೊ ಸ್ವಾಮಿ, ತಾವು ದೊಡ್ಡ ಮನಸ್ಸು ಮಾಡುದ್ರೆ ಆಯ್ತದೆ.

ಮಂತ್ರಿ ಮಗ—ಈಗ ಒಂದೊಂದು ಸರ‍್ಕಾರಿ ಕೆಲಸಕ್ಕೆ ಎಂತಾ ಪಯ್ಪೋಟಿ ಇರುತ್ತೆ ಅನ್ನೋದು ನಿಮಗೆ ಗೊತ್ತಾಗುದಿಲ್ಲ.

ಪುಟ್ಟಸ್ವಾಮಿ—ಇವರು ಹಳೆಕಾಲ್ದೋರು ಬುಡಿ ಸ್ವಾಮಿ. ಆ ಕಾಲ ಹೋಯ್ತು. ಈಗ ಸ್ವಲ್ಪ ಅಶ್ಟೊ-ಇಶ್ಟೊ ಕೊಟ್ಬುಟ್ಟೆ ಕೆಲಸ ಮಾಡಿಸ್ಕೊಂಡು ಹೋಗೋಣ ಅಂತ ಬಂದಿದ್ದೀವಿ.

ಮಂತ್ರಿ ಮಗ—ನೀವು ನಮ್ಮೋರೆ ಅಲ್ವೆ. ನಿಮ್ಜೊತೇಲಿ ಎಂತಾ ಮುಚ್ಚುಮರೆ. ಈಗ ಲೆಕ್ಚರರ್ ಪೋಸ್ಟ್‍ಗೆ ಎಶ್ಟು ನಡೀತಾಯಿದೆ ಗೊತ್ತೆ?

ಪುಟ್ಟಸ್ವಾಮಿ—ಅದೇ ಮೂರರಿಂದ ಅಯ್ದು ಲಕ್ಶದವರೆಗೆ ನಡೀತಾದೆ ಅಂತ ಕೇಳ್ದೆ.

ಮಂತ್ರಿ ಮಗ—ಎಲ್ಲಿದ್ದೀರಿ ನೀವು? ಹತ್ತರಿಂದ ಹನ್ನೆರಡು ಲಕ್ಶದವರೆಗೆ ನಡೀತಾದೆ. ಅಶ್ಟು ಕೊಟ್ಟರೂ, ಕೆಲ್ಸ ಸಿಕ್ಕೇ ಸಿಗುತ್ತೆ ಅನ್ನೂ ಗ್ಯಾರಂಟಿಯಿಲ್ಲ.

ಈರಯ್ಯ—ಸ್ವಾಮಿ ನಾವು ರೈತಾಪಿ ಜನ. ಅಶ್ಟೊಂದು ಕೊಡೂಕಾಗೂದಿಲ್ಲ. ನೀವು ಹೆಂಗಾರ ಮಾಡಿ ಕಡಿಮೆ ಮಾಡಿಸ್ಬೇಕು.

ಮಂತ್ರಿ ಮಗ—ನೋಡಿ, ಎಲ್ಲಾ ಸಬ್ಜೆಕ್ಟ್‍ಗಳು ಸೇರಿ ನೂರಿಪ್ಪತ್ತು ಲೆಕ್ಚರರ್ ಪೋಸ್ಟ್‍ಗಳನ್ನು ಕರೆದವ್ರೆ. ಇವುದರಲ್ಲಿ ನಮ್ಮ ತಂದೆಯವರು ಅತಿ ಹೆಚ್ಚು ಅಂದ್ರೆ ನಾಲ್ಕು ಪೋಸ್ಟ್‍ಗೆ ಸ್ಟ್ರಾಂಗ್ ಆಗಿ ರೆಕ್ಮಂಡ್ ಮಾಡಬಹುದು ಅಶ್ಟೆ. ಈಗಾಗ್ಲೆ ನಾನು ಮೂರಕ್ಕೆ ಒಪ್ಕೊಂಡು, ನಮ್ಮ ತಂದೆಯವರ ಮೂಲಕ ಸೆಲೆಕ್ಶನ್ ಕಮಿಟಿ ಮೆಂಬರ್ ಒಬ್ಬರಿಗೆ ಹೇಳಿದ್ದೀನಿ. ಆ ಮೆಂಬರ್ ನಮ್ಮೋರೆ. ನೀವೇನಾದ್ರು ಕೆಲ್ಸ ತಕೊಳ್ಳೇಬೇಕು ಅನ್ನು ಮನಸ್ಸಿದ್ರೆ, ಯಾವುದನ್ನು ಸರಿಯಾಗಿ ಹೇಳಿ.

ಪುಟ್ಟಸ್ವಾಮಿ—ಈರಯ್ಯನೋರೆ, ಈಗ ಏನು ಅಂತ ಹೇಳಿ?

ಈರಯ್ಯ—ಏನು ಅಂತ ಹೇಳನಪ್ಪ? ಒಂದು ಯಾವಾರ ಅಂತ ಕೈ ಹಾಕದ್ಮೇಲೆ, ಒಸಿ ಉದ್ದವೊ ತುಂಡವೊ ತುಯ್ಯಲೇ ಬೇಕಲ್ಲ.

ಪುಟ್ಟಸ್ವಾಮಿ—ಹಂಗಾದ್ರೆ ಕಮಿಟಿ ಮೆಂಬರ್ ಹತ್ರ ಹೋಗ್ಬುಟ್ಟು ಬರೋಣ ಬನ್ನಿ ಸ್ವಾಮಿ.

ಮಂತ್ರಿ ಮಗ—ನಾನು ಅಲ್ಲಿಗೆ ಬರೋದು ಬೇಡಿ. ಇಲ್ಲಿಂದ್ಲೆ ಪೋನ್ ಮಾಡ್ತೀನಿ. ಪುಟ್ಟಸ್ವಾಮಿ. ಸ್ವಲ್ಪ ಬನ್ನಿ ಈ ಕಡೆ.

(ಪುಟ್ಟಸ್ವಾಮಿಯನ್ನು ರಂಗದ ಬಲ ತುದಿಯತ್ತ ಕರೆದುಕೊಂಡು ಹೋಗಿ, ಪಿಸು ಮಾತುಗಳಲ್ಲಿ ಏನನ್ನೋ ಹೇಳತೊಡಗುತ್ತಾನೆ. ಅವನ ಮಾತುಗಳಿಗೆ ಪುಟ್ಟಸ್ವಾಮಿಯು ಒಪ್ಪಿಗೆಯನ್ನು ಸೂಚಿಸುವಂತೆ ತಲೆಯಾಡಿಸುತ್ತಾನೆ. ಅನಂತರ ಮಂತ್ರಿಯ ಮಗ ಅಲ್ಲಿಂದ ಹಿಂತಿರುಗಿ ಬಂದು ಕುರ‍್ಚಿಯಲ್ಲಿ ಕುಳಿತುಕೊಳ್ಳುತ್ತಾನೆ)

ಪುಟ್ಟಸ್ವಾಮಿ—ಈರಯ್ಯನೋರೆ, ಸ್ವಲ್ಪ ಬನ್ನಿ ಇಲ್ಲಿ.

(ರಂಗದ ಎಡತುದಿಯತ್ತ ಕರೆದುಕೊಂಡು ಬಂದು, ಈರಯ್ಯನವರ ನಡುವಿನ ಕಡೆಗೆ ಕೈ ತೋರಿಸುತ್ತಾ)

ಅದರಲ್ಲಿ ಎಂಬತ್ತು ಸಾವಿರ ತೆಗೆದುಕೊಡಿ.

ಈರಯ್ಯ—ಇವರ‍್ಗೂ ಕೊಡಬೇಕೊ?

ಪುಟ್ಟಸ್ವಾಮಿ—ಆಮೇಲೆ ಎಲ್ಲಾನು ಹೇಳ್ತೀನಿ. ಈಗ ಕೊಡಿ.

(ಈರಯ್ಯನವರು ತಮ್ಮ ನಡುವಿನಲ್ಲಿ ಕಟ್ಟಿದ್ದ ಹಣದ ಗಂಟಿನಿಂದ ಎಂಬತ್ತು ಸಾವಿರ ರೂಗಳನ್ನು ಎಣಿಸಿ ತೆಗೆದು, ಮತ್ತೆ ಗಂಟನ್ನು ಹಾಗೆಯೇ ಬಿಗಿದು ಕಟ್ಟಿ, ಮತ್ತೆ ಈಚೆಗೆ ತೆಗೆದಿದ್ದ ನೋಟುಗಳನ್ನು ಎಣಿಸಿ)

ಈರಯ್ಯ—ತಕೊಪ್ಪ.

ಪುಟ್ಟಸ್ವಾಮಿ—ನೀವೇ ಕೊಡ್ಬನ್ನಿ.

(ಈರಯ್ಯನವರು ಬಹಳ ವಿನಯದಿಂದ ಎಂಬತ್ತು ಸಾವಿರ ರೂಪಾಯಿಗಳನ್ನು ಮಂತ್ರಿಯ ಮಗನಿಗೆ ನೀಡುತ್ತಾರೆ)

ಮಂತ್ರಿ ಮಗ—(ನೋಟುಗಳ ಕಂತೆಯನ್ನು ಕೈಯಲ್ಲಿ ಹಿಡಿದುಕೊಂಡು) ಎಶ್ಟಿದೆ ಇಲ್ಲಿ?

ಈರಯ್ಯ—ಎಂಬತ್ತು ಸಾವಿರ ಅದೆ ಸ್ವಾಮಿ.

(ನೋಟುಗಳ ಕಟ್ಟನ್ನು ಎಣಿಸದೆ ಹಾಗೆಯೇ ಮೇಜಿನೊಳಗೆ ಇಟ್ಟ ಬಳಿಕ)

ಮಂತ್ರಿ ಮಗ–ಈ ದುಡ್ಡನ್ನ ನಾವೇ ಇಟ್ಕೊಳ್ತೀವಿ ಅಂತ ತಿಳ್ಕೊಬೇಡಿ.

ಪುಟ್ಟಸ್ವಾಮಿ—ಹಾಗೇನಿಲ್ಲ ಬುಡಿ ಸ್ವಾಮಿ, ನಮಗೆ ಗೊತ್ತಿದೆ ಎಲ್ಲ.

ಮಂತ್ರಿ ಮಗ-–ಸ್ವಲ್ಪ ಇಲ್ಲೆ ಇರಿ, ನಾನು ಒಳಕ್ಕೆ ಹೋಗಿ ಕಮಿಟಿ ಮೆಂಬರ‍್ಗೆ ಪೋನ್ ಮಾಡಿ ಬರ‍್ತೀನಿ. ರಮೇಶ, ನಿನ್ನ ವಿವರ ಎಲ್ಲಾ ಕೊಡಯ್ಯ ಇಲ್ಲಿ.

(ರಮೇಶ ತನ್ನ ಕೈಯಲ್ಲಿದ್ದ ಇಂಟರ್‍ವ್ಯೂ ಕಾರ‍್ಡ್ ಮತ್ತು ಇತರ ವಿವರಗಳ ಕಟ್ಟನ್ನು ಮಂತ್ರಿಯ ಮಗನಿಗೆ ನೀಡುತ್ತಾನೆ. ಮಂತ್ರಿಯ ಮಗ ರಂಗದ ಬಲಬದಿಯಿಂದ ಒಳ ನಡೆಯುತ್ತಾನೆ.)

ಈರಯ್ಯ—ದುಡ್ಡ ಈಸ್ಕೊಂಡುದ್ದು ನಮಗಲ್ಲ ಅಂತಾರೆ, ಇನ್ಯಾರ‍್ಗೆ ಕೊಡ್ತರೆ?

ಪುಟ್ಟಸ್ವಾಮಿ—ಪಾರ‍್ಟಿ ಪಂಡು ಅಂತ ಹಿಂಗೆ ಕಲೆಕ್ಟ್ ಮಾಡ್ತರೆ.

ಈರಯ್ಯ—ಹಂಗಂದ್ರೆ?

ಪುಟ್ಟಸ್ವಾಮಿ—ಎಂ.ಎಲ್.ಎ.ಆಗ್ಬೇಕು…ಎಂ.ಪಿ.ಆಗ್ಬೇಕು ಅಂತ ಚುನಾವಣೆಗೆ ನಿಂತ್ಕೊತರಲ್ಲ , ಅವರಿಗೆ ಪಾರ‍್ಟಿಯಿಂದ ಎಲೆಕ್ಶನ್ ಕರ‍್ಚಿಗೆ ಅಂತ ಲಕ್ಶ ಲಕ್ಶ ಕೊಡ್ತಾರೆ. ಅದಕ್ಕೆ ಈಗಿನಿಂದ್ಲೆ ಕೆಲಸ ಕೇಳ್ಕೊಂಡು ಬಂದೋರ‍್ತಾವೆಲ್ಲ ಹಿಂಗೆ ದುಡ್ಡು ಈಸ್ಕೊಳ್ತರೆ.

ಈರಯ್ಯ—ಎಲೆಕ್ಶನ್ ಟೇಮಲ್ಲಿ ಆಪಾಟಿ ಸರಾಪಿನ ಪೊಟ್ಲೆ , ಬ್ರಾಂದಿ ಬಾಟ್ಲು , ಬಾಡು , ದುಡ್ಡು ಎಲ್ಲಾನು ಹಂಚತರಲ್ಲ…ಇವರ‍್ತಾನೆ ಇನ್ನೆಲ್ಲಿಂದ ತಂದರು?

(ಅಶ್ಟರಲ್ಲಿ ಮಂತ್ರಿಯ ಮಗ ಬರುತ್ತಿರುವುದನ್ನು ಕಂಡ ರಮೇಶ)

ರಮೇಶ—ಬತ್ತಾವ್ರೆ, ಸುಮ್ನಿರಪ್ಪ.

(ಮಂತ್ರಿಯ ಮಗ ರಂಗದ ಬಲಬದಿಯಿಂದ ಬರುತ್ತಾನೆ. ರಮೇಶನ ವಿವರಗಳಿದ್ದ ಕಟ್ಟನ್ನು ಮತ್ತೆ ರಮೇಶನ ಕೈಗೆ ನೀಡಿ, ಈರಯ್ಯನವರನ್ನು ಕುರಿತು )

ಮಂತ್ರಿ ಮಗ—ಕಮಿಟಿ ಮೆಂಬರ್ ಸಿಕ್ಕಿದ್ರು, ಎಲ್ಲಾ ವಿವರವಾಗಿ ಹೇಳಿದ್ದೇನೆ. ನಿಮ್ಮ ಹುಡುಗನ ಹೆಸರು, ಇಂಟರ್‍ವ್ಯೂ ಕಾರ‍್ಡ್ ನಂಬರ್, ಎಲ್ಲಾನು ಅವರ ಗುರುತು ಹಾಕೊಂಡ್ರು. ನಿಮ್ಮನ್ನ ನಮ್ಮ ಕಡೆಯವರು, ನಮ್ಮ ಜಾತಿಯವರು, ನಮ್ಮ ತಂದೆಗೆ ಬಹಳ ಬೇಕಾದವರು ಅಂತ್ಲೆ ಹೇಳಿದ್ದೇನೆ. ಈಗ್ಲೆ ಹೋಗಿ ನೀವು ಅವರನ್ನ ನೋಡಿ.

ಪುಟ್ಟಸ್ವಾಮಿ—ನಾನು ಹೋಗಿ ನೋಡ್ತೀನಿ ಬಿಡಿ ಸ್ವಾಮಿ.

ಮಂತ್ರಿ ಮಗ—ನೀವು ಬೇಡಿ, ಅವರ‍್ಗೆ ಮೂರನೆ ಪಾರ‍್ಟಿ ಅಂದ್ರೆ ಆಗೂದಿಲ್ಲ.

(ಈರಯ್ಯನವರತ್ತ ಕಯ್ ತೋರಿಸುತ್ತಾ)

ಹುಡುಗನ ತಂದೆ, ಇವರ‍್ನೆ ಕಳ್ಸಿ, ಹುಡುಗನೂ ಬೇಡ, ಇವರೊಬ್ಬರೇ ಹೋಗ್ಲಿ.

ಮಂತ್ರಿ ಮಗ—ನೀವೇನೂ ಹಿಂಜರಿಯಬೇಡಿ. ಬಹಳ ಒಳ್ಳೆಯವರು ಅವರು. ನೇರವಾಗಿ ಮಾತನಾಡಿ, ಸ್ವಲ್ಪ ಹೆಚ್ಚು ಕಮ್ಮಿ ಒಪ್ಕೊಳಿ. ನಮ್ಮ ತಂದೇನೂ ಇವತ್ತೆ ಅವರಿಗೆ ಪೋನ್ ಮಾಡಿ ಹೇಳ್ತರೆ. ಪುಟ್ಟಸ್ವಾಮಿ, ನಿಮಗೆ ಅವರ ಮನೆ ಅಡ್ರೆಸ್ ಗೊತ್ತಲ್ವೆ?

ಪುಟ್ಟಸ್ವಾಮಿ—ನನ್ತಾವು ಅದೆ ಸ್ವಾಮಿ.

ಮಂತ್ರಿ ಮಗ—ನೀವೇನು ಚಿಂತೆ ಮಾಡ್ಬೇಡಿ, ಎಶ್ಟು ಬೇಕಾದ್ರು ದುಡ್ಡು ಕೊಡಿ. ಒಂದು ವೇಳೆ ಕೆಲಸ ಆಗ್ದೆ ಹೋದ್ರೆ, ನಿಮ್ಮ ದುಡ್ಡನ್ನ ಪೂರ‍್ತಾ ಹಿಂದಿರುಗಿಸ್ತಾರೆ. ನೀವು ಅವರಿಗೆ ಕೊಡುವ ದುಡ್ಡಿಗೆ ನಾನು ಗ್ಯಾರಂಟಿ.

ಪುಟ್ಟಸ್ವಾಮಿ—ಇದೇನ್ ಸ್ವಾಮಿ ಹಿಂಗಂತೀರಿ! ಹಂಗಿಲ್ದೇದ್ರೆ ನೀವು ನಮ್ಮನ್ನ ಅವರ ಹತ್ರಕ್ಕೆ ಕಳಿಸ್ತಿದ್ರ…ಹೋಗ್ಬತ್ತೀವಿ ಸ್ವಾಮಿ.

ಮಂತ್ರಿ ಮಗ—ಹೋಗ್ಬನ್ನಿ, ಒಳ್ಳೇದಾಗಲಿ.

(ಮಂತ್ರಿಯ ಮಗ ರಂಗದ ಬಲಬದಿಯಿಂದ ಒಳಕ್ಕೆ ಸರಿಯುತ್ತಾನೆ. ಮೂವರು ಅಲ್ಲಿಂದ ಹೊರಡುತ್ತಿದ್ದಂತೆಯೇ)

ರಮೇಶ—(ಸ್ವಲ್ಪ ಮೆಲ್ಲನೆಯ ದನಿಯಲ್ಲಿ) ಹಿಂಗೆಲ್ಲಾ ಉದ್ದಕ್ಕೂ ದುಡ್ಡು ಸುರ‍್ಕೊಂಡು ಕೆಲಸ ತಕೊಳೂದು ನಂಗ್ಯಾಕೋ ಸರಿ ಕಾಣ್ತಿಲ್ಲ.

ಪುಟ್ಟಸ್ವಾಮಿ—ಇದೇನಯ್ಯ? ಇಲ್ಲೀಗಂಟ ಬಂದಾದ್ಮೇಲೆ ಹಿಂಗಂತಿ! ಊರಲ್ಲೆ ಈ ಮಾತ ನೀನು ಹೇಳಿದ್ರೆ, ನಾವೆಲ್ಲ ಅಲ್ಲೆ ಇರ‍್ಬೊದಾಗಿತ್ತು. ಇಂಟರ್‍ವ್ಯೂ ದಿವಸ ನೀನೊಬ್ಬನೆ ಬಂದೋಗಿದ್ರೆ ಆಯ್ತಿತ್ತು.

ಈರಯ್ಯ—ಹಂಗೆ ಬರಿ ಕಯ್ಯಲ್ಲಿ ಬಂದೋದ್ರೆ ಕೆಲ್ಸ ಇಡ್ರಿಸ್ಬುಟ್ಟರೆ?

ಪುಟ್ಟಸ್ವಾಮಿ—ಬರಿ ಕೈಲಿ ಬಂದೋದ್ರೆ, ಇನ್ನು ಹತ್ತು ವರ‍್ಶ ಕಾದ್ರು ಸರ‍್ಕಾರಿ ಚಾಕ್ರಿ ಸಿಕ್ಕೂದಿಲ್ಲ.

ರಮೇಶ—ಹಂಗಲ್ಲ ಪುಟ್ಟಸ್ವಾಮಣ್ಣ. ಮೊದಲು ಒಂದು ಇಲ್ಲವೇ ಎರಡು ಲಕ್ಶ ಆಗ್ಬೋದು ಅಂತಿದ್ರಿ, ಆಮೇಲೆ, ಬೆಂಗಳೂರ‍್ಗೆ, ಒಂದ್ಸತಿ ಹೋಗ್ ಬಂದ್ಮೇಲೆ ಮೂರು ಆಯ್ತದೆ ಅಂದ್ರಿ. ಈಗ ನೋಡುದ್ರೆ, ಅಯ್ದು ಲಕ್ಶದ ಮೇಲೆ ಆಗುವಂಗೆ ಕಾಣ್ತಾದೆ.

ಈರಯ್ಯ—ರಮೇಶ, ನೀನು ಸುಮ್ನೆ ನಡಿ, ನೀರಲ್ಲಿ ಇಳುದ್ಬುಟ್ಟಾಗದೆ, ಹೆಂಗೊ ಅತ್ತಗೆ ದಡ ಸೇರ‍್ಕೊವ.

ರಮೇಶ—ಹಂಗಲ್ಲ ಕಣಪ್ಪ.

ಈರಯ್ಯ—ಇನ್ನೆಂಗ್ಲ? ಊರಲ್ಲಿ ನಿಮ್ಮಣ್ಣಂದಿರು ಇಬ್ಬರು ಆಗ್ಲೆ ನೆಲಕೆರೀತಾವ್ರೆ. ಅವರ‍್ಜೊತೇಗೆ ನೀನು ನೆಲ ಕೆರಿದೀಯ? ನಡೀಲಾ ಸುಮ್ಮನೆ. ಹೊಟ್ಟೆ ಬಟ್ಟೆ ಕಟ್ಟಿ, ದುಡ್ಡು ಕೊಡೋನು ನಾನು. ಹೆಂಗೊ ಒಂದು ಒಳ್ಳೆ ಜಾಗ ಸೇರ‍್ಕೊದ ನೋಡು.

ಪುಟ್ಟಸ್ವಾಮಿ—ರಮೇಶ, ನೀನು ಇನ್ನು ಹುಡುಗ, ಇಂತಾದ್ನೆಲ್ಲ ಈಗ ಕಣ್ಬುಟ್ಟು ನೋಡ್ತಾ ಇದ್ದೀಯೆ. ಅದ್ಕೆ ಹಿಂಗೆ ಅನ್ಸುತ್ತೆ.

(ನಿಟ್ಟುಸಿರು ಬಿಡುತ್ತ)

ಬೇಲಿಯೆ ಎದ್ದು ಹೊಲ ಮೇಯ್ತಿರುವಾಗ, ನೀನು ನಾನು ಏನು ಮಾಡೂಕಾದದಪ್ಪ? ಸಿಕ್ಕಿರೂ ಅವಕಾಶ ಕಳ್ಕೊಬಾರದು, ಸುಮ್ನೆ ಬಾ.

(ರಮೇಶ ಸುಮ್ಮನಾಗುತ್ತಾನೆ)

ಈರಯ್ಯ—ಈಗ ನಡೀರಪ್ಪ ಬೇಗ ಬೇಗ. ಅವರ ಮನೇತಕೆ ಹೋಗ್ಮ. ಇನ್ನೆತ್ತಗಾರ ಹೊಂಟೋದರು ಅವರು.

(ರಂಗದ ಬಲಬದಿಯಿಂದ ಒಳಕ್ಕೆ ಸರಿಯುತ್ತಿದ್ದಂತೆಯೇ, ರಂಗದ ಮೇಲೆ ಕತ್ತಲು ಆವರಿಸುತ್ತದೆ. ತುಸು ಸಮಯದ ನಂತರ ಮತ್ತೆ ರಂಗದ ಮೇಲೆ ಬೆಳಕು ಮೂಡಿದಾಗ, ಕಮಿಟಿ ಮೆಂಬರ್ ಅವರ ಮನೆಯಲ್ಲಿನ ಕೊಟಡಿಯ ಪರಿಸರ. ಕುರ‍್ಚಿಯೊಂದರಲ್ಲಿ ಮೆಂಬರ್ ಕುಳಿತಿದ್ದಾರೆ. ಈರಯ್ಯನವರು ಅಲ್ಲಿಗೆ ರಂಗದ ಎಡಬದಿಯಿಂದ ಬರುತ್ತಾರೆ.)

ಈರಯ್ಯ—ನಮಸ್ಕಾರ ಬುದ್ದಿ.

ಮೆಂಬರ‍್—ನಮಸ್ಕಾರ, ಏನು ಬಂದ್ರಿ?

ಈರಯ್ಯ—ಈಗ್ತಾನೆ ಮಂತ್ರಿಗಳ ಮಗಾರು ” ತಮಗೆ ಪೋನ್ ಮಾಡಿದ್ದೀನಿ, ಹೋಗಿ ನೋಡು ” ಅಂದ್ರು.

(ಕೈಯಲ್ಲಿದ್ದ ಮಗನ ಇಂಟರ್‍ವ್ಯೂ ಕಾರ‍್ಡನ್ನು ಮತ್ತು ವಿಳಾಸ, ಅಂಕಪಟ್ಟಿ, ರ‍್ಯಾಂಕ್ ಪ್ರಶಸ್ತಿಯ ವಿವರಗಳನ್ನೊಳಗೊಂಡ ಹಾಳೆಯೊಂದನ್ನು ಅವರಿಗೆ ಈರಯ್ಯ ನೀಡುತ್ತಾರೆ. ಅವರು ಅದರ ಮೇಲೆ ಒಂದೆರಡು ಗಳಿಗೆ ಕಣ್ಣಾಡಿಸಿ)

ಮೆಂಬರ‍್—ನಿಮ್ಮ ಮಗ ಇಂಟರ್‍ವ್ಯೂನಲ್ಲಿ ಚೆನ್ನಾಗಿ ಮಾಡ್ಲಿ , ನೋಡೋಣ.

(ಕಾರ‍್ಡ್ ಮತ್ತು ಹಾಳೆಯನ್ನು ಮತ್ತೆ ಈರಯ್ಯನಿಗೆ ಹಿಂದಿರುಗಿಸುತ್ತಾರೆ.)

ಈರಯ್ಯ—ಅದಕ್ಮುಂಚೆ ನಿಮ್ತಾವು ಸ್ವಲ್ಪ ಮಾತಾಡ್ಕೊಂಡು ಬಾ ಅಂದ್ರು ಬುದ್ದಿ.

ಮೆಂಬರ‍್—ಈಗ ಮಾತಾಡ್ತನೇ ಇದ್ದೀರಲ್ಲ, ಇನ್ನೇನು?

ಈರಯ್ಯ—ಹಂಗಲ್ಲ ಬುದ್ದಿ, ಕೆಲ್ಸ ತಕೊಬೇಕಾದ್ರೆ ಸ್ವಲ್ಪ ದುಡ್ಡು ಕರ‍್ಚಾಗುತ್ತೆ ಅಂತ ಹೇಳುದ್ರು.

ಮೆಂಬರ‍್—ಯಾರು ಹೇಳುದ್ರು?

ಈರಯ್ಯ—ಮಂತ್ರಿ ಮಗಾರೆ ಹೇಳಿ ಕಳ್ಸುದ್ರು ಬುದ್ದಿ.

ಮೆಂಬರ‍್—ನೋಡಿ, ನಿಮ್ಮ ಹುಡುಗ ತೆಗೆದುಕೊಂಡಿರುವ ನಂಬರ‍್ಗೆ ದುಡ್ಡು ಕೊಟ್ರು, ಈ ಕೆಲಸ ಸಿಗೂದಿಲ್ಲ .

ಈರಯ್ಯ—ಯಾಕ್ ಬುದ್ದಿ? ನನ್ನ ಮಗ ಮೂರನೇ ರ‍್ಯಾಂಕ್‍ನಲ್ಲಿ ಪಾಸ್ ಮಾಡವ್ನೆ. ಚಿನ್ನದ ಪದಕ ಎರಡು ಬಂದವೆ.

ಮೆಂಬರ‍್—ನಿಮ್ಮ ಮಗ ಒಬ್ಬನೇ ಅಲ್ಲ ರ‍್ಯಾಂಕ್ ಬಂದು , ಚಿನ್ನದ ಪದಕ ಪಡೆದಿರೋನು. ನಮ್ಮ ರಾಜ್ಯದಲ್ಲಿ ಆರು ಯೂನಿವರ‍್ಸಿಟಿಗಳಿವೆ. ಅಯ್ದಾರು ವರುಶದಿಂದಲೂ ರ‍್ಯಾಂಕ್ ಪಡೆದು , ಚಿನ್ನದ ಪದಕ ಗಳಿಸಿರೂರು ಹತ್ತಾರು ಮಂದಿ ಕೆಲಸವಿಲ್ಲದೆ ಅಲೀತಾವ್ರೆ. ಈಗ ಅವರೆಲ್ಲಾ ಕೆಲಸಕ್ಕೆ ಅರ‍್ಜಿ ಹಾಕೊಂಡವ್ರೆ. ಒಟ್ಟು ನೂರಿಪ್ಪತ್ತು ಲೆಕ್ಚರರ್ ಪೋಸ್ಟ್‍ಗಳಲ್ಲಿ, ಕನ್ನಡ ಉಪನ್ಯಾಸಕರ ಹುದ್ದೆ ಆರು ಇವೆ. ಆರಕ್ಕೆ ಅರವತ್ತು ಜನ ಇಂಟರ್‍ವ್ಯೂಗೆ ಬರ‍್ತಾವ್ರೆ. ಈಗ ನೀವೇ ಹೇಳಿ ಇವರಲ್ಲಿ ಯಾರಿಗೆ ಕೆಲಸ ಕೊಡೋಣ?

ಈರಯ್ಯ—ಹಂಗೆಲ್ಲಾ ಹೇಳ್ಬೇಡಿ, ಬುದ್ದಿ. ನಿಮ್ಮ ಪಾದ ಅಂತೀನಿ. ನನ್ನ ಮಗನಿಗೆ ಮಾತ್ರ ಹೆಂಗಾದ್ರು ಮಾಡಿ ನೀವು ಕೆಲಸ ಕೊಡ್ಲೇಬೇಕು ಬುದ್ದಿ.

ಮೆಂಬರ‍್—ಹೇಗೆ ಕೊಡೂದು ನೀವೇ ಹೇಳಿ?

ಈರಯ್ಯ—ಅದೇನೊ ಎಲ್ಲಾ ತಮಗೆ ಬುಟ್ಟುದ್ದು ಬುದ್ದಿ. ನಮ್ಮಂತ ಮೂಡಾತ್ಮರಿಗೆ ಇವೆಲ್ಲ ಏನು ತಾನೆ ಗೊತ್ತಾದದು? ಏನೊ ಒಂದಿಶ್ಟು ದುಡ್ಡು ಅಂತ ತಾವು ಬಾಯ್ಬುಟ್ಟು ಹೇಳುದ್ರೆ, ಕಶ್ಟವೊ ಸುಕವೊ ಹೆಂಗೊ ಜೊತೆ ಮಾಡಿ ಕೊಡ್ತೀನಿ ಬುದ್ದಿ.

(ತುಸು ಸಮಯ ಆಲೋಚಿಸುತ್ತ ಸುಮ್ಮನಿದ್ದ ಮೆಂಬರ್…ಅನಂತರ)

ಮೆಂಬರ‍್—-ನೋಡಿ, ನೀವು ಅಯ್ದು ಲಕ್ಶ ರೂಪಾಯಿ ಜೊತೆ ಮಾಡೋದಾದ್ರೆ, ನಾನು ನನ್ ಜತೇಲಿರುವ ಮೆಂಬರ‍್ಸ್‍ಗೆ, ಚೇರ‍್ಮನ್ನರಿಗೆ ಹೇಳ್ಕೊಂಡು ಸ್ವಲ್ಪ ಪ್ರಯತ್ನ ಮಾಡ್ತೇನೆ.

ಈರಯ್ಯ—ಅಯ್ದು ಲಕ್ಶವ ಬುದ್ದಿ!

ಮೆಂಬರ‍್—ಯಾಕೆ ಬೆಚ್ಬುಟ್ರಲ್ಲ? ಇದೇ ಹುದ್ದೆಗೆ ಹತ್ತು ಲಕ್ಶ ಕೊಡುವವರು ಇದ್ದಾರೆ.

ಈರಯ್ಯ—ಕೊಡೋರಿಲ್ಲ ಅಂತ ನಾ ಹೇಳೂದಿಲ್ಲ ಬುದ್ದಿ. ಆದ್ರೆ ನಾನು ಅಶ್ಟರೋನಲ್ಲ. ನನ್ ಮಕ್ಕಳಲ್ಲಿ ಇನ್ಯಾರು ಇದ್ಯೆ ಕಲೀಲಿಲ್ಲ ಬುದ್ದಿ. ಇವನೊಬ್ಬ ಓದೂದರಲ್ಲಿ ಮುಂದಕ್ಕೆ ಬಂದಿದ್ದ. ಅದಕ್ಕೆ ಇವನ ಒಂದು ತಿಟ್ಟು ಹತ್ತಿಸ್ಬುಡವಾ ಅಂತ ಇಶ್ಟು ಹೋರಾಡ್ತಿವ್ನಿ. ಸ್ವಲ್ಪ ಕಮ್ಮಿ ಮಾಡ್ಕೊಳಿ ಬುದ್ದಿ.

ಮೆಂಬರ‍್—ನೀವು ಕೊಡುವ ದುಡ್ಡೆಲ್ಲಾ ನನಗೊಬ್ಬನಿಗೆ ಸೇರ‍್ತದೆ ಅಂತ ತಿಳ್ಕೊಬೇಡಿ.

ಈರಯ್ಯ—ಅದೇನೊ ಬುದ್ದಿ, ಅವೆಲ್ಲ ನಂಗೊತ್ತಾಗೂದಿಲ್ಲ. ಈಗ ನೀವು ಮಾತ್ರ ಸ್ವಲ್ಪ ಕರುಣೆ ತೋರಿಸ್ಲೇಬೇಕು.

ಮೆಂಬರ‍್—ಹೋಗ್ಲಿ…ನಾಲ್ಕು ಲಕ್ಶ ಕೊಡಿ. ನೋಡೋಣ, ನನ್ನ ಕೈಲಾದ ಪ್ರಯತ್ನ ಮಾಡ್ತೇನೆ.

ಈರಯ್ಯ—‘ಗ್ಯಾರಂಟಿಯಾಗಿ ಕೆಲಸ ಕೊಡ್ತೀನಿ’ ಅನ್ನಿ ಬುದ್ದಿ.

(ತನ್ನ ನಡುವಿನ ಕಡೆ ಕಯ್ ಹಾಕುತ್ತ)

ಇವತ್ತು ಸ್ವಲ್ಪ ಮುಂಗಡ ಕೊಡ್ತೀನಿ, ತಕೊಬೇಕು ಬುದ್ದಿ.

ಮೆಂಬರ‍್—ಎಶ್ಟು ತಂದಿದ್ದೀರಿ?

ಈರಯ್ಯ—ಈಗ ಒಂದು ಲಕ್ಶ ಅದೆ ಬುದ್ದಿ, ಉಳುದುದ್ದನ್ನು ಇನ್ನೊಂದು ನಾಲ್ಕು ದಿನದಲ್ಲಿ ತಂದು ಒಪ್ಪಿಸ್ತೀನಿ. ನನ್ನ ಮಗನ್ನ ಮಾತ್ರ ಕಯ್ ಬುಡಬ್ಯಾಡಿ ಬುದ್ದಿ.

(ನಡುವಿಗೆ ಬಿಗಿದು ಕಟ್ಟಿದ್ದ ಗಂಟಿನಿಂದ ಹಣವನ್ನು ತೆಗೆದು, ನೋಟಿನ ಕಟ್ಟುಗಳನ್ನು ಬಹಳ ಬಯಬಕುತಿಯಿಂದ ಕೊಡುತ್ತಾ)

ಎಣಿಸ್ಕೊಳಿ ಬುದ್ದಿ.

ಮೆಂಬರ‍್—ಪರವಾಗಿಲ್ಲ ಬಿಡಿ.

(ನೋಟಿನ ಕಟ್ಟುಗಳನ್ನು ಎತ್ತಿ ತೋರಿಸುತ್ತಾ)

ನೋಡಿ, ನಿಮ್ಮ ದುಡ್ಡು ನನಗೆ ವಿಶ ಇದ್ದಂಗೆ. ಈಗ ಇದನ್ನು ಕಯ್ಯಲ್ಲಿ ಮುಟ್ಟಿದ್ದೇನೆ ಅಶ್ಟೆ. ನಿಮ್ಮ ಕೆಲಸ ಆದ್ರೆ, ಇದು ನನ್ನದು; ಕೆಲಸ ಆಗಿಲಿಲ್ಲವೇ, ಇದೇ ನೋಟುಗಳ ಕಟ್ಟನ್ನು ನಾನು ನಿಮಗೆ ಹಿಂತಿರುಗಿಸ್ತೇನೆ.

ಈರಯ್ಯ—ನಿಮ್ಮ ದಮ್ಮಯ್ಯ ಅಂತೀನಿ, ದುಡ್ಡ ಹಿಂದಕ್ಕೆ ಕೊಡಬ್ಯಾಡಿ ಬುದ್ದಿ. ಮಂತ್ರಿ ಮಗಾರು ಆಗ್ಲೆ ಹೇಳಿದ್ರು, ನೀವು “ಬೋ ಕಂಡೀಸನ್ನು” ಅಂತ. ಹೆಂಗಾದ್ರು ಮಾಡಿ, ನನ್ನ ಮಗನಿಗೆ ಸರ‍್ಕಾರಿ ಚಾಕ್ರಿ ಕೊಡ್ಲೇಬೇಕು ಬುದ್ದಿ.

ಮೆಂಬರ‍್—ಬಾಕಿ ಹಣವನ್ನು ಇನ್ನು ನಾಲ್ಕು ದಿನದಲ್ಲಿ ತಂದು ಕೊಡಿ.

ಈರಯ್ಯ—ಕಂಡಿತ ತತ್ತೀನಿ ಬುದ್ದಿ.

ಮೆಂಬರ‍್—ಒಳ್ಳೇದಾಗ್ಲಿ ಹೋಗ್ಬುಟ್ಟುಬನ್ನಿ. ನನ್ನ ಕಯ್ಯಲ್ಲಿ ಆಗುವ ಪ್ರಯತ್ನ ಮಾಡ್ತೇನೆ.

(ಈರಯ್ಯನವರು ಮೆಂಬರ್ ಅವರಿಗೆ ನಮಸ್ಕರಿಸಿ, ರಂಗದ ಎಡಬದಿಯಿಂದ ತೆರಳುತ್ತಿದ್ದಂತೆಯೇ, ರಂಗದ ಮೇಲೆ ಕತ್ತಲು ಆವರಿಸುತ್ತದೆ. ತುಸು ಸಮಯದ ನಂತರ ರಂಗದ ಮೇಲೆ ಬೆಳಕು ಹರಡುತ್ತದೆ. ಬೆಂಗಳೂರು ಸರ‍್ಕಾರಿ ಬಸ್ ನಿಲ್ದಾಣದ ಆವರಣ. ಈರಯ್ಯ ಮತ್ತು ಪುಟ್ಟಸ್ವಾಮಿ ಮಾತನಾಡುತ್ತ ಊರಿಗೆ ಹಿಂತಿರುಗಲೆಂದು ಬಸ್ಸಿಗಾಗಿ ಕಾಯುತ್ತ ನಿಂತಿದ್ದಾರೆ.)

ಪುಟ್ಟಸ್ವಾಮಿ—ಅದ್ಸರಿ, ಇನ್ನು ನಾಲ್ಕು ದಿನದಲ್ಲಿ ಅಶ್ಟೊಂದು ದುಡ್ಡು ಹೆಂಗೆ ಜೊತೆ ಮಾಡ್ತಿರಿ.

ಈರಯ್ಯ—ಏರಿ ಕೆಳಗಿನ ಗದ್ದೆ ಒಂದು ಎಕರೆಯ “ಮಾರ‍್ತೀನಿ” ಅಂದ್ರೆ, ಊರಲ್ಲಿ ಯಾರಾದ್ರು “ನಾ ಮುಂದು, ತಾ ಮುಂದು” ಅಂತ ದುಡ್ಡು ಕೊಡ್ತಾರೆ.

ಪುಟ್ಟಸ್ವಾಮಿ—ಚಿನ್ನದಂತಹ ಗದ್ದೆ ಮಾರ‍್ಬುಡ್ತೀರಾ?

ಈರಯ್ಯ—ಇನ್ನೇನು ಮಾಡಿಯೆ? ಹೆಂಗೊ ಇವನ್ಗೆ ಒಂದು ದಾರಿ ಅಂತ ಆಯ್ತದಲ್ಲ.

ಪುಟ್ಟಸ್ವಾಮಿ—(ಅತ್ತ ಇತ್ತ ನೋಡುತ್ತಾ) ಇದೇನು? ಇಶ್ಟೊತ್ತಾದ್ರು ನಮ್ಮ ಕಡೆ ಬಸ್ಸೆ ಬರ‍್ಲಿಲ್ವಲ್ಲ.

ಈರಯ್ಯ—ಬರ‍್ಲಿ ಬುಡು, ಈಗೇನು ಆತ್ರ? ಹೆಂಗೊ ಬಂದ ಕೆಲಸ ಆಯ್ತಲ್ಲ.

ಪುಟ್ಟಸ್ವಾಮಿ—ಅದು ನಿಜವೇ ಅನ್ನಿ. ಒಂದೊಂದು ದಿವ್ಸ, ಯಾರ್ ಮನೇತಕೆ ಹೋದ್ರು, ಯಾವ ಆಪೀಸ್ತಕೆ ಹೋದ್ರು “ಅಲ್ಲೋಗವ್ರೆ-ಇಲ್ಲೋಗವ್ರೆ” ಅಂತರೆ. ಒಬ್ಬರೂ ಸಿಗೂದಿಲ್ಲ.

ಈರಣ್ಣ—(ಸುತ್ತಲೂ ನೋಡುತ್ತಾ, ರಮೇಶನನ್ನು ಕಾಣದೆ) ಇವನು ಎತ್ತಗ್ಹೋದ?

ಪುಟ್ಟಸ್ವಾಮಿ—“ಬಸ್ಸು ಎಶ್ಟೊತ್ಗೆ ಇದ್ದದು, ಕೇಳ್ಕೊಂಡು ಬತ್ತೀನಿ” ಅಂತ ಹೋಗವ್ನೆ. ಅಗೋ, ಅಲ್ಲೆ ಬತ್ತಾವ್ನಲ್ಲ.

(ಅಲ್ಲಿಗೆ ಬರುತ್ತಿರುವ ರಮೇಶ ಗಾಬರಿಗೊಂಡಿದ್ದಾನೆ. ತನ್ನ ಜೇಬುಗಳನ್ನೆಲ್ಲಾ ಮತ್ತೆ ಮತ್ತೆ ಒಳಗೆ ಮತ್ತು ಹೊರಗೆ ಮುಟ್ಟಿ ನೋಡಿಕೊಳ್ಳುತ್ತಾ, ಅವುಗಳ ಒಳಕ್ಕೆ ಕಯ್ ಹಾಕಿ ತಡಕಾಡುತ್ತಿದ್ದಾನೆ.)

ಪುಟ್ಟಸ್ವಾಮಿ—ಏನು ರಮೇಶ, ಹಿಂಗೆ ಹುಡುಕುತ್ಲೆ ಇದ್ದೀಯೆ?

ಈರಯ್ಯ—ಏನಪ್ಪ ? ಏನಾರ ಕೆಡೀಕೊಂಡ?

(ಇವರ ಪ್ರಶ್ನೆಗಳಿಗೆ ಉತ್ತರ ನೀಡದೆ, ರಮೇಶ ಮತ್ತೆ ತನ್ನ ಜೇಬುಗಳ ಒಳಗೆ ಕೈಹಾಕಿ ತಡಕಾಡುತ್ತಾ , ನೆಲವನ್ನೇ ನೋಡುತ್ತಾ ಮತ್ತೆ ಸ್ವಲ್ಪ ದೂರ ಹಿಂದಕ್ಕೆ ಹೋಗಿ , ಮತ್ತೆ ಬರುತ್ತಾನೆ)

ಈರಯ್ಯ—ಏ…ಅದೇನ ಹಂಗೆ ಹುಡುಕ್ತನೇ ಇದ್ದೀಯೇ ?

ಪುಟ್ಟಸ್ವಾಮಿ—ದುಡ್ಡು ಗಿಡ್ಡು ಬೀಳಿಸ್ಕೊಂಡೇನಯ್ಯ?

ರಮೇಶ—ಬಿದ್ದೋಗ್ಲಿಲ್ಲ, ಯಾರೊ ಜೇಬ್ಗೆ ಬ್ಲೇಡ್ ಹಾಕ್ಬುಟ್ಟು, ದುಡ್ಡು ಎತ್ಬುಟ್ಟವ್ರೆ.

ಈರಯ್ಯ—ಏನಾ ದುಡ್ಡು ಹೊಡ್ದುಬುಟ್ರೆ?

ರಮೇಶ—ಹೂ….ಯಾರೊ ಪಿಕ್ ಪಾಕೆಟ್ ಮಾಡ್ಬುಟ್ಟವ್ರೆ.

ಪುಟ್ಟಸ್ವಾಮಿ—ಯಾವ ಜೇಬಲ್ಲಿ ಇಟ್ಟಿದ್ದೆ ದುಡ್ಡ?

ರಮೇಶ—ಈ ಮೇಲ್ಗಡೆ ಜೇಬಲ್ಲೆ ಇಟ್ಟಿದ್ದೆ…ಇಲ್ನೋಡಿ…ಹೆಂಗೆ ಬ್ಲೇಡ್ ಹಾಕಿ ಹರ‍್ದಾಕವ್ರೆ…(ಹರಿದು ಹೋಗಿದ್ದ ತನ್ನ ಜೇಬನ್ನು ಇಬ್ಬರಿಗೂ ತೋರಿಸುತ್ತಾನೆ.)

ಈರಯ್ಯ—ಜೋಬಲ್ಲಿ ಎಶ್ಟಿತ್ತು ದುಡ್ಡು ?

ರಮೇಶ—ಊರಲ್ಲಿ ನೀವು ಬೆಳಗ್ಗೆ ಕೊಟ್ಟಿದ್ದ ಅಯ್ನೂರು ರೂಪಾಯ್ನಲ್ಲಿ ಬಸ್ಸಿಗೆ, ಆಟೋಗೆ, ಊಟಕ್ಕೆ ಕೊಟ್ಟು ಇನ್ನೂರು ಉಳಿದಿತ್ತು. ಅಶ್ಟನ್ನು ಇದೊಂದೆ ಜೇಬಲ್ಲಿ ಮಡಗಿದ್ದೆ.

ಪುಟ್ಟಸ್ವಾಮಿ—ಒಂದರಲ್ಲೆ ಯಾಕೆ ಇಟ್ಟಿದ್ದೆ? ಇದು ಕಳ್ ನನ್ಮಗನ ಊರು ಅಂತ ಗೊತ್ತಿಲ್ವೆ ನಿಂಗೆ?

ಈರಯ್ಯ—ಅಯ್ಯೋ…ಉಂಡಂಗಲ್ಲ…ತಿಂದಂಗಲ್ಲ. ಅನ್ಯಾಯವಾಗಿ ಇನ್ನೂರು ರೂಪಾಯಿ ಕಳ್ದುಬುಟ್ಟಲ್ಲ, ಯಾವ ಬೋ.. ಮಕ್ಳು ಎತ್ಕೊಂಡ್ರೊ ಏನೊ? ಅವರ‍್ಮನೆ ಎಕ್ಕುಟ್ಟೋಗ.

ಪುಟ್ಟಸ್ವಾಮಿ—ಅಯ್ನಾತಿ ಕಳ್ಳರವ್ರೆ ಇಲ್ಲಿ.

ಈರಯ್ಯ—ಏ….ರಮೇಶ, ಬೆಪ್ ನನ್ಮಗ ಕಣೋ ನೀನು, “ಕಳ್ಳರು ಅವ್ರೆ, ಎಚ್ಚರಿಕೆಯಾಗಿರಿ” ಅಂತ ಅಲ್ಲಿ ಬೋರ‍್ಡ್ ಹಾಕವ್ರೆ. ಅದ ಹೊತಾರೆ ನೀನೆ ಓದಿ ಹೇಳಿದ್ದೆ ನಂಗೆ. ಅಂತಾದ್ದರಲ್ಲೂ ಹಿಂಗೆ ಮಾಡ್ಕೊಂಡಲ್ಲ.

(ಕಳ್ಳರ ಪೋಟೊಗಳ ಕಡೆ ನೋಡುತ್ತಾ)

ಯಾರೊ, ಇಲ್ಲಿರೂರಲ್ಲೇ ಒಬ್ಬ ಕತ್ತರಿಸಿರ‍್ಬೇಕು.

ಪುಟ್ಟಸ್ವಾಮಿ—ಇಶ್ಟು ಜನವೇ ಏನು? ದೇಶದ ಕಳ್ಳರೆಲ್ಲಾ ಈ ಊರಲ್ಲೆ ತುಂಬ್ಕೊಂಡವ್ರೆ.

(ಈರಯ್ಯನವರಿಗೆ ಏನು ಅನ್ನಿಸಿತೊ ಏನೋ, ಇದ್ದಕ್ಕಿದ್ದಂತೆಯೇ ಆವೇಶಗೊಂಡು , ರಮೇಶನನ್ನೆ ನೋಡುತ್ತಾ, ತಮ್ಮ ನಡುವಿನ ಕಡೆ ಕಯ್ಯನ್ನು ಇಟ್ಟು…)

ಈರಯ್ಯ—ನೋಡೋ ರಮೇಶ…ನೀ ಕಂಡಂಗೆ…ನಾನು ಇಲ್ಲೆ ಎರಡು ಲಕ್ಶ ರೂಪಾಯ್ನ ಊರಿಂದ ಬೆಳಗ್ಗೆ ಬರುವಾಗ ಇಟ್ಕೊಂಡು ತಂದಿದ್ದೆ. ಯಾವ ಕಳ್ ನನ್ ಮಕ್ಳಾದ್ರು ಇಲ್ಲಿಗೆ ಕತ್ರಿ ಹಾಕೋಕೆ ಆಯ್ತೆ?

(ನೋಟುಗಳನ್ನು ಕಟ್ಟಿ ತಂದಿದ್ದ, ಆ ಬಟ್ಟೆಯನ್ನು ತನ್ನ ನಡುವಿನಿಂದ ಬಿಚ್ಚಿ, ಮೇಲಕ್ಕೆ ಒದರಿ, ಅವನ ಮುಂದೆ ಒಡ್ಡಿ ತೋರಿಸುತ್ತಾ)

ಹೇಳೋ ರಮೇಶ, ಯಾವ ಮನಾಳ್ ನನ್ ಮಕ್ಳಾದ್ರು ಇದಕ್ಕೆ ಬ್ಲೇಡ್ ಹಾಕೂಕೆ ಆಯ್ತೇನೊ?

(ಅಪ್ಪನ ಕೇಳ್ವಿಗೆ ಬದಲು ಹೇಳದೆ ಮೂಕನಂತೆ ರಮೇಶ ನಿಲ್ಲುತ್ತಾನೆ. ಅಶ್ಟರಲ್ಲಿ ಬೆಳಗ್ಗೆ ಬಸ್ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ತರುಣ ಈಗ ರಂಗದ ಎಡಬದಿಯಿಂದ ಮತ್ತೆ ಅತಿ ವೇಗವಾಗಿ ನಿಲ್ದಾಣದೊಳಕ್ಕೆ ನುಗ್ಗಿ ಬರುತ್ತಾನೆ. “ಕಳ್ಳರಿದ್ದಾರೆ, ಎಚ್ಚರಿಕೆ” ಎಂಬ ಬೋರ‍್ಡಿನ ಬಳಿ ಬಂದು ನಿಂತು, ಅರೆಗಳಿಗೆ ಆ ಬೋರ‍್ಡಿನಲ್ಲಿದ್ದ ಕಳ್ಳರ ಪೋಟೊಗಳನ್ನೆ ದುರುಗುಟ್ಟಿಕೊಂಡು ನೋಡುತ್ತಾನೆ. ಮರುಗಳಿಗೆಯಲ್ಲಿಯೇ ಆ ಬೋರ‍್ಡಿನ ಸಣ್ಣ ತಂತಿಗಳನ್ನು ಮುರಿದು ಒಳಕ್ಕೆ ಕಯ್ ಹಾಕಿ, ಅಲ್ಲಿದ್ದ ಕಳ್ಳರ ಪೋಟೊಗಳನ್ನು ಪರಪರನೆ ಕೀಳತೊಡಗುತ್ತಾನೆ)

ಪುಟ್ಟಸ್ವಾಮಿ—ಅಲ್ನೋಡಿ ಅವನ ಕೆಲಸವ.

(ಮೂವರು ಅತ್ತ ನೋಡತೊಡಗುತ್ತಾರೆ. ಆ ತರುಣನು ಅಲ್ಲಿದ್ದ ಜೇಬುಗಳ್ಳರ ಪೋಟೊಗಳೆಲ್ಲವನ್ನೂ ಕಿತ್ತು ಹರಿದು ಹೊರಕ್ಕೆ ಎಸೆಯುತ್ತಾನೆ. ಆಮೇಲೆ ತನ್ನ ಬಗಲಲ್ಲಿದ್ದ ಚೀಲದಿಂದ ಲಂಚಕೋರ ರಾಜಕಾರಣಿಗಳ ಮತ್ತು ಅದಿಕಾರಿಗಳ ಪೇಪರ್ ಕಟಿಂಗ್ ಪೋಟೋಗಳನ್ನು ಹೊರ ತೆಗೆದು ಗೋಂದನ್ನು ಸವರಿ, ಆ ಬೋರ‍್ಡಿನೊಳಗೆ ಅಂಟಿಸುತ್ತಾನೆ. “ಕಳ್ಳರಿದ್ದಾರೆ, ಎಚ್ಚರಿಕೆ” ಎಂಬ ಹೆಸರಿನ ಹಲಗೆಯ ಅಡಿಯಲ್ಲಿದ್ದ ಈ ಪೋಟೋಗಳನ್ನು ನೋಡುತ್ತ ಒಮ್ಮೆ ಚಪ್ಪಾಳೆ ತಟ್ಟುತ್ತಾನೆ…ಮತ್ತೊಮ್ಮೆ ಜೋರಾಗಿ ಕಿರುಚುತ್ತಾನೆ…ಮಗದೊಮ್ಮೆ ಅಳತೊಡಗುತ್ತಾನೆ. ತರುಣನ ಅಳುವಿನ ದನಿಯು ರಂಗದ ತುಂಬಾ ಹರಡಿ, ಅಳುವಿನ ಮರುದನಿಯು ಅಲೆಅಲೆಯಾಗಿ ಎಲ್ಲೆಡೆ ಕೇಳಿಬರುತ್ತಿದ್ದಂತೆಯೇ , ರಂಗದ ಮೇಲೆ ಕತ್ತಲು ಆವರಿಸುತ್ತದೆ.)

(ಮುಗಿಯಿತು)

( ಚಿತ್ರ ಸೆಲೆ: kannadadunia.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: