ಜಳಕ ಮಾಡಲೊಂದು ಹೊಸ ಚಳಕ

ವಿಜಯಮಹಾಂತೇಶ ಮುಜಗೊಂಡ.

dry-20120625085216

ಶನಿವಾರ-ಬಾನುವಾರ ಬಂದರೆ ನಡುಹೊತ್ತಾದರೂ ಹಾಸಿಗೆ ಬಿಟ್ಟು ಎದ್ದೇಳುವುದೆಂದರೆ ಬೇಸರ. ಅದರಲ್ಲೂ ಎದ್ದು ಜಳಕ ಮಾಡುವುದೆಂದರೆ ಅಯ್ಯೋ ಕೇಳಲೇಬೇಡಿ. ತಡವಾಗಿ ಎದ್ದು  ಅಡುಗೆ ಮನೆಗೋ ಅತವಾ ಹತ್ತಿರದ ಹೋಟೆಲ್ಲಿಗೋ ನುಗ್ಗಿ ತಿಂಡಿ ತಿಂದ ಮೇಲಂತೂ ಮತ್ತೆ ಕಣ್ಣುಗಳು ತಾವೇ ಮುಚ್ಚಿಕೊಳ್ಳುತ್ತವೆ. ಮತ್ತೆ ನಿದ್ದೆ ಮಾಡಲು ಹಾಸಿಗೆಗಳು ಕಯ್ಚಾಚಿ ಕರೆಯುತ್ತವೆ. ಕೆಲವು ಕಡೆ ನೀರಿನ ತೊಂದರೆ. ಇನ್ನೂ ಕೆಲವರಿಗೆ ತಡವಾಗಿ ಎದ್ದ ಮೇಲೆ ಅರಿವಾಗುವುದು ಬೇಗ ಎಲ್ಲೋ ಹೋಗಬೇಕು, ಜಳಕ ಮಾಡಿ ಹೋಗಲು ಪುರುಸೊತ್ತಿಲ್ಲ. ಮಗದೊಮ್ಮೆ ಒಳತೊಟ್ಟಿಯಲ್ಲಿ ಇರುವ ನೀರನ್ನು ಮೇಲೆ ಏರಿಸಲು ಮಿನ್ಹರಿವು(Electric Current) ಇಲ್ಲ. ಇಂತಹ ಎಶ್ಟೋ ಸಂದರ‍್ಬಗಳಲ್ಲಿ ಜಳಕದ ಮಾತ್ರೆಯೊಂದು ಇದ್ದರೆ? ಅಂತ ನಾವು ಅಂದುಕೊಂಡಿರುತ್ತೇವೆ.

ಹವ್ದು, ಈಗ ಜಳಕ ಮಾಡಲೂ ಮಾತ್ರೆಯೊಂದಿದೆ ಅಂದರೆ ಅದನ್ನು ನೀವು ನಂಬಲೇಬೇಕು.ತೆಂಕಣ ಆಪ್ರಿಕಾದ ಲುಡ್ವಿಕ್ ಮಾರಿಶೇನ್ (Ludwick Marishane) ಎನ್ನುವ ಯುವಕ ಇಂತಹ ಒಂದು ನೀರುಹಚ್ಚುಗೆ(Lotion)ಯನ್ನು ಕಂಡು ಹಿಡಿದಿದ್ದಾನೆ. ನೀರಿನಿಂದ ಜಳಕ ಮಾಡಲು ಬದಲಿಯಾಗಿ ಇದನ್ನು ಒಣ ಜಳಕಕ್ಕೆ ಬಳಸಬಹುದಾಗಿದೆ. ಲುಡ್ವಿಕ್ ಇದನ್ನು ಕಂಡು ಹಿಡಿಯಲು ಹೊಳಹು ಹೇಗೆ ಮೂಡಿತು ಎನ್ನುವದು ತುಂಬಾ ಕುತೂಹಲದ ಕತೆ. ಒಮ್ಮೆ ಗೆಳೆಯನೊಂದಿಗೆ ನೇಸರನ ಬಿಸಿಲಿನಡಿ ಮೈ ಕಾಯಿಸುತ್ತಿರುವಾಗ(Sunbathing) ನಡೆದ ಮಾತುಕತೆಯೇ ಇದಕ್ಕೆ ಮುನ್ನುಡಿ ಆಯಿತಂತೆ. ಮೈಗಳ್ಳನ್ನಾದ ಗೆಳೆಯನೊಬ್ಬ ಜಳಕ ಮಾಡಲು ಯಾರೂ ಮಾತ್ರೆ ಅತವಾ ನೀರುಹಚ್ಚುಗೆಯನ್ನು(Lotion) ಕಂಡು ಹಿಡಿದಿಲ್ಲವೇ ಎಂದು ಕೇಳಿದ್ದನಂತೆ. ಅದೇ ಹೊಳಹನ್ನು ಬೆನ್ನಟ್ಟಿ ಲುಡ್ವಿಕ್ ಅಂತಹ ಒಂದು ನೀರುಹಚ್ಚುಗೆ ಕಂಡುಹಿಡಿದ್ದಾನೆ.

ಜಗತ್ತಿನಲ್ಲಿ ಸುಮಾರು 250 ಕೋಟಿ ಜನರಿಗೆ ದಿನಬಳಕೆಗೆ ಸಾಕಾಗುವಶ್ಟು ನೀರು ಸಿಗುವದಿಲ್ಲ. ಕೊಳಕು ನೀರಿನ ಬಳಕೆಯಿಂದ ಟ್ರ್ಯಾಕೋಮ(Trachoma) ಎನ್ನುವ ಕಾಯಿಲೆ ತೆಂಕಣ ಆಪ್ರಿಕಾದ ಸುಮಾರು 35 ಕೋಟಿ ಮಂದಿಗೆ ಬಂದಿದ್ದು ಅದರಲ್ಲಿ ಸುಮಾರು 80 ಲಕ್ಶ ಮಂದಿಯ ಕಣ್ಣುಗಳನ್ನು ಬಲಿತೆಗೆದುಕೊಂಡಿದೆ. ಈ ಕಾಯಿಲೆಯು ಕೊಳಕು ನೀರು ಕಣ್ಣೊಳಗೆ ನುಗ್ಗುವದರಿಂದ ಬರುತ್ತದೆ. ಇದಕ್ಕೆ ಪರಿಹಾರ ಎಂದರೆ ಸ್ವಚ್ಚ ನೀರಿನಲ್ಲಿ ಕಯ್ ಮತ್ತು ಮುಕವನ್ನು ತೊಳೆಯುವದು ಅಶ್ಟೇ. ಕಯ್ ಮತ್ತು ಮುಕ ತೊಳೆಯಲು ಸ್ವಚ್ಚ ನೀರು ಸಿಗದೇ ಅಶ್ಟೊಂದು ಜನ ಈ ಕಾಯಿಲೆಗೆ ಒಳಗಾಗುತ್ತಾರೆ ಅಂದರೆ ನೀರಿನ ಕೊರತೆಯನ್ನು ಊಹಿಸಬಹುದು.

ಲುಡ್ವಿಕ್ ತನ್ನ ನೋಕಿಯಾ ಮೊಬಯ್ಲಿನಲ್ಲೇ ಸುಮಾರು 2 ತಿಂಗಳ ಹುಡುಕಾಟ ನಡೆಸಿದ ನಂತರ ತಾನು ತಯಾರಿಸಬೇಕೆಂದಿರುವ ನೀರುಮದ್ದಿಗೆ ಇರ‍್ಪಿನ ಸೂತ್ರವೊಂದನ್ನು(Chemical Formula) ತಯಾರಿಸುತ್ತಾನೆ. ಸತತ ನಾಲ್ಕು ವರ‍್ಶಗಳ ನಂತರ ಮಾಡುಗೆ(Product) ಒಣಜಳಕದ ನೀರುಮದ್ದು(Dry Bathing Lotion) ತಯಾರಾಗುತ್ತದೆ.ಹುಡುಕಾಟಕ್ಕೆ ಬಳಸಿದ ಅದೇ ನೋಕಿಯಾ ಮೊಬಯ್ಲಿನಲ್ಲಿ 8000 ಪದಗಳ ಜಂಬಾರದ ಯೋಜನೆ(Business Plan)ಯನ್ನು ತಯಾರಿಸುತ್ತಾನೆ. ತೆಂಕಣ ಆಪ್ರಿಕಾದಲ್ಲಿಯೇ ಅತಿ ಸಣ್ಣ ವಯಸ್ಸಿನಲ್ಲಿ ಪೇಟೆಂಟ್ ಹೊಂದಿರುವ, ಲುಡ್ವಿಕ್ ತನ್ನ ಹಕ್ಕೋಲೆ ಅರಕೆಹಾಳೆ (research paper)ಯನ್ನು ಬರೆದದ್ದು ಇದೇ ನೋಕಿಯಾ 6234 ಮೊಬಯ್ಲಿನಲ್ಲಿಯೇ! ಇದರ ಕುರಿತು ನೀರಿಲ್ಲದ ಜಳಕ (A bath without water) ಹೆಸರಿನ ಟೆಡ್ ಮಾತುಕತೆ(TED Talk) ಒಂದರಲ್ಲಿ ಲುಡ್ವಿಕ್ ಹೇಳಿದ್ದಾನೆ. ಅಂದಹಾಗೆ ಲುಡ್ವಿಕ್ ತನ್ನ ಹಕ್ಕೋಲೆ ಬರಹಕ್ಕೆ ನೀಡಿರುವ ಹೆಸರೇನು ಗೊತ್ತೇ? ಅದು ‘ನೋ ಮೋರ್ ಬಾತಿಂಗ್(No More Bathing)’! ಈ ಮಾಡುಗೆಯನ್ನು ಹೆಡ್ ಬಾಯ್ (head boy) ಎನ್ನುವ ಕಂಪನಿಯಿಂದ ತಯಾರಿಸಿ ಮಾರಲಾಗುತ್ತದೆ.

ಹೆಚ್ಚು ಬಡವರು ತುಂಬಿರುವ ಆಪ್ರಿಕಾ ದೇಶದಲ್ಲಿ ಈ ಮಾಡುಗೆಯ ಮಾರಾಟವೂ ಮೊದಲು ಸರಳವಾಗಿರಲಿಲ್ಲ. ಸಗಟು ಮಾರಾಟ ಮಾಡಲು ಆಗಲಿಲ್ಲ. ನಂತರ ಬಡವರು ಸಗಟು ಮಾಡುಗೆಯನ್ನು ಕೊಳ್ಳಲು ಆಗದೇ ಇರುವುದನ್ನು ಕಂಡ ಹೆಡ್ ಬಾಯ್ ಕಂಪನಿಯು ಒಂದು ಬಾರಿಗೆ ಆಗುವಶ್ಟು ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಮಾರಲು ಶುರುಹಚ್ಚಿಕೊಂಡಿದೆ. ಮಾರಾಟವಾಗುವ ಪ್ರತಿಯೊಂದು ಪೊಟ್ಟಣಕ್ಕೂ ಒಂದು ಪೊಟ್ಟಣವನ್ನು ದಾನವಾಗಿ ಹೆಡ್ ಬಾಯ್ ಕಂಪನಿ ನೀಡುತ್ತದೆ. ಒಂದು ಪೊಟ್ಟಣದ ಬಳಕೆಯಿಂದ ಸುಮಾರು 80 ಲೀಟರ್ ನೀರು ಉಳಿಯುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

2011ನೇ ಏಡಿನ ’ಗ್ಲೋಬಲ್ ಸ್ಟೂಡೆಂಟ್ ಎಂಟರ್‌ಪ್ರೇನರ್ ಆಪ್ ದ ಇಯರ‍್’ಎನ್ನುವ ಕೊಡುಗೆಯನ್ನು ಲುಡ್ವಿಕ್ ಪಡೆದಿದ್ದಾನೆ. ಗೂಗಲ್ ಈತನನ್ನು ‘ಜಗತ್ತಿನ ಅತ್ಯಂತ ಪ್ರತಿಬಾವಂತ ಯುವಕರಲ್ಲಿ ಒಬ್ಬ(One of the brightest young minds in the world)’ ಎಂದು ಗುರುತಿಸಿದೆ. ಇಂದು ಈ ಮಾಡುಗೆಯು ನಾಡನಡುವಿನ ಮಾರುಕಟ್ಟೆ(International Market)ಗಳಲ್ಲಿ ಸಿಗುತ್ತಿರುವುದು ಜಳಕ ಮಾಡಲೊಲ್ಲದ ಮೈಗಳ್ಳ ಮಂದಿಗೆ ಒಳ್ಳೆಯ ಸುದ್ದಿ!

ಈ ಕುರಿತು ಟೆಡ್‌ನಲ್ಲಿ ಮೂಡಿಬಂದಿರುವ ಲುಡ್ವಿಕ್‌ರವರ ಮಾತುಕತೆಯ ಓಡುತಿಟ್ಟವನ್ನು ಇಲ್ಲಿ ನೋಡಬಹುದು.

[ted id=1611]

(ಮಾಹಿತಿ ಮತ್ತು ತಿಟ್ಟ ಸೆಲೆ: engineering.com,ted.com,nunnovation.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: