ಇಂಡೋನೇಶಿಯಾದ ಜಾನಪದ ಕತೆ : ಹುಂಜ ಬಯಲುಗೊಳಿಸಿದ ನಿಜ

– ಪ್ರಕಾಶ ಪರ‍್ವತೀಕರ.

cindelaras

ರಾದೆನ್ ಪುತ್ರ ಜೆಂಗಾಲ ರಾಜ್ಯದ ಮಹಾರಾಜನಾಗಿದ್ದ. ಆತನ ಹೆಂಡತಿ, ಮಹಾರಾಣಿ ಅತ್ಯಂತ ಚೆಲುವೆ ಹಾಗು ಸದ್ಗುಣಗಳ ಕಣಿ ಆಗಿದ್ದಳು. ರಾಜನಿಗೆ ಓರ‍್ವ ಉಪಪತ್ನಿ ಕೂಡ ಇದ್ದಳು. ದುಶ್ಟಳಾದ ಆಕೆಗೆ ಮಹಾರಾಣಿಯ ಬಗ್ಗೆ ಮತ್ಸರವಿತ್ತು. ಮಹಾರಾಣಿಯನ್ನು ಅರಮನೆಯಿಂದ ಹೊರಗೆ ಹಾಕಿ ತಾನು ಮಹಾರಾಣಿಯಾಗುವ ಯೋಚನೆ ಮಾಡಿದಳು. ಈ ವಿಶಯದಲ್ಲಿ ಆಕೆ ರಾಜವೈದ್ಯನನ್ನು ತನ್ನ ಒಳಸಂಚಿನಲ್ಲಿ ಪಾಲುಗೊಳ್ಳಲು ಪ್ರೇರೇಪಿಸಿದಳು. ಒಂದು ದಿನ ಹೊಟ್ಟೆ ನೋವು ಎಂದು ನೆಲಕ್ಕೆ ಬಿದ್ದು ಆಕೆ ಅಳಲಾರಂಬಿಸಿದಾಗ, ಗಾಬರಿಯಾದ ರಾದೆನ್ ಪುತ್ರ ರಾಜವೈದ್ಯರನ್ನು ಕರೆಸಿದ. ರಾಜವೈದ್ಯ “ಮಹಾರಾಣಿಯವರು ಊಟದಲ್ಲಿ ವಿಶ ಹಾಕಿದ್ದರ ಪರಿಣಾಮ ಇದು” ಎಂದು ನಿಸ್ಸಂಕೋಚದಿಂದ ಸುಳ್ಳು ಹೇಳಿದಾಗ ರಾಜನಿಗೆ ಆಗಾತವಾಯಿತು. ಕೋಪಗೊಂಡ ಆತ ಮಹಾರಾಣಿಯನ್ನು ವಿಚಾರಿಸಿದಾಗ, ಅಮಾಯಕಳಾದ ಆಕೆ ಇದರಲ್ಲಿ ತನ್ನದು ಎಳ್ಳಶ್ಟೂ ಪಾತ್ರವಿಲ್ಲವೆಂದು ಆಣೆ ಮಾಡಿ ಹೇಳಿದರೂ, ರಾಜನಿಗೆ ಆಕೆಯ ಮೇಲೆ ನಂಬಿಕೆ ಬರಲಿಲ್ಲ. ಸೇನಾಪತಿಗೆ ಮಹಾರಾಣಿಯನ್ನು ಕಾಡಿಗೆ ಕರೆದುಕೊಂಡು ಹೋಗಿ ಆಕೆಯ ತಲೆ ತೆಗೆಯಲು ಆಜ್ನಾಪಿಸಿದ.

ಸೇನಾಪತಿ ಸಂವೇದನಶೀಲ ಮನುಶ್ಯನಾಗಿದ್ದ. ಮಹಾರಾಣಿಯ ಸ್ವಬಾವದ ಬಗ್ಗೆ ಆತನಿಗೆ ಚೆನ್ನಾಗಿ ಗೊತ್ತಿತ್ತು. ಅಲ್ಲದೆ ಮಹಾರಾಣಿ ಈಗ ಗರ‍್ಬಿಣಿಯೂ ಆಗಿದ್ದಳು. ಆತನಿಗೆ ಆಕೆಯ ಮೇಲೆ ದಯೆ ಬಂದಿತು.ಆತ ಕಾಡಿನಲ್ಲಿ ಮಹಾರಾಣಿಗಾಗಿ ಚಿಕ್ಕ ಗುಡಿಸಲು ಕಟ್ಟಿಕೊಟ್ಟು ರಾಜದಾನಿಗೆ ಮರಳಿ ಬರುವಾಗ ಕಾಡು ಪ್ರಾಣಿಯೊಂದನ್ನು ತನ್ನ ಕತ್ತಿಯಿಂದ ಕೊಂದು ರಾಜನಿಗೆ ರಕ್ತಸಿಕ್ತವಾದ ಕತ್ತಿಯನ್ನು ತೋರಿಸಿದ. ರಾಜನಿಗೆ ಅದನ್ನು ನೋಡಿ ಸಮಾದಾನವಾಯಿತು. 9 ತಿಂಗಳು ತುಂಬಿದ ಮೇಲೆ ಒಂದು ದಿನ ಮಹಾರಾಣಿ ಸುಂದರ ಪುತ್ರನಿಗೆ ಜನ್ಮವಿತ್ತಳು. ಆತನಿಗೆ ಸಿಂಡೆಲಾರಸ ಎಂದು ಹೆಸರಿಟ್ಟಳು. ಕಾಲಕಳೆದಂತೆ ಸಿಂಡೆಲಾರಸ ಸದ್ರುಡನಾಗಿಯೂ, ಚೆಲುವನಾಗಿಯೂ ಬೆಳೆಯುತ್ತ ಹೋದ ಮತ್ತು ಬೇಟೆಯಲ್ಲಿ ಪಾರಂಗತನಾದ.

ಒಂದು ದಿನ ಆತನ ಎದುರಿಗೆ ಗರುಡ ಹಕ್ಕಿಯೊಂದು ಮೊಟ್ಟೆ ಚೆಲ್ಲಿ ಹಾರಿ ಹೋಯಿತು.ಅದನ್ನು ಆತ ಮನೆಗೆ ತೆಗೆದುಕೊಂಡು ಬಂದ. ದಿನ ಕಳೆದಂತೆ ಮೊಟ್ಟೆಯಿಂದ ಒಂದು ಹುಂಜದಮರಿ ಹೊರಗೆ ಬಂದಿತು. ಕಾಲಸರಿದಂತೆ ಅದು ಸಾಮಾನ್ಯ ಹುಂಜವಲ್ಲವೆಂದು ಸಿಂಡೆಲಾರಸನಿಗೆ ಅರಿವಾಯ್ತು. ಅದು ಸುಶ್ರಾವ್ಯವಾಗಿ ಹಾಡುತ್ತಿತ್ತು.ಮುಂಜಾನೆ ತನ್ನ ಒಡೆಯನನ್ನು ಈ ಹಾಡು ಹಾಡಿ ಎಬ್ಬಿಸುತ್ತಿತ್ತು. ಪ್ರತಿದಿನವೂ ಬೆಳಿಗ್ಗೆ ಆ ಹುಂಜವು “ಸಿಂಡೆಲಾರಸ ನನ್ನ ದಣಿ, ಕಾಡಿನ ಮದ್ಯೆ ನಮ್ಮ ಮನೆ, ರಾಡೆನ್ ನ ಮಗ ನನ್ನ ದಣಿ“ ಎಂದು ತಪ್ಪದೆ ಹಾಡುತ್ತಿತ್ತು. ಸಿಂಡೆಲಾರಸ ಈ ಹಾಡನ್ನು ಕೇಳಿ, ಈ ರಾಡೆನ್ ಯಾರು? ಈ ಹಾಡಿನ ಅರ‍್ತವೇನು ಎಂದು ವಿಚಾರ ಮಾಡುತ್ತಿದ್ದ. ಆತ ತನ್ನ ತಾಯಿಗೆ ಈ ಬಗ್ಗೆ ಕೇಳಿದಾಗ ಮಹಾರಾಣಿ ಎಲ್ಲ ಕತೆಯನ್ನು ಹೇಳಿದಳು.

ಸಿಂಡೆಲಾರಸನಿಗೆ ಆಶ್ಚರ‍್ಯವಾಯಿತು. ತನ್ನ ತಂದೆಯನ್ನು ಬೇಟಿಯಾಗಿ ಅವನಿಗೆ ಸತ್ಯ ಸಂಗತಿಯನ್ನು ಮನವರಿಕೆ ಮಾಡಿಕೊಡಬೇಕು ಎಂದು ತೀರ‍್ಮಾನಿಸಿ, ತಾಯಿಯ ಒಪ್ಪಿಗೆ ತೆಗೆದುಕೊಂಡು ರಾಜದಾನಿಯ ಕಡೆಗೆ ಹೊರಟನು. ಜೊತೆಗೆ ಹುಂಜವನ್ನು ಎತ್ತಿಕೊಂಡ. ಸ್ವಲ್ಪ ದೂರ ಹೋಗುವದರಲ್ಲಿ ಗ್ರಾಮವೊಂದು ಕಾಣಿಸಿತು. ಜನ ನೆರೆದಿದ್ದನ್ನು ಕಂಡು ಕುತೂಹಲದಿಂದ ಸಿಂಡೆಲಾರಸ ಹೋಗಿ ನೋಡಿದ. ಅಲ್ಲಿ ಹುಂಜದ ಕಾಳಗ ನಡೆದಿತ್ತು. ಸಿಂಡೆಲಾರಸನ ಬಗಲಲ್ಲಿದ್ದ ಹುಂಜನ್ನು ನೋಡಿ ಆ ಊರಿನ ಜನ ಆತನಿಗೆ ಪಂದ್ಯದಲ್ಲಿ ಬಾಗವಹಿಸಲು ಆಹ್ವಾನವಿತ್ತರು. ಬಲಶಾಲಿಯಾದ ಸಿಂಡೆಲಾರಸನ ಹುಂಜ ತನ್ನ ಎದುರಾಳಿಗಳನ್ನು ಕೆಲವೇ ಕ್ಶಣಗಳಲ್ಲಿ ಸೋಲಿಸಿತು. ಮುಂದೆ ಸುತ್ತಮುತ್ತಲಿದ್ದ ಹಳ್ಳಿಗಳಲ್ಲಿ ನಡೆದ ಅನೇಕ ಹುಂಜದ ಕಾಳಗಗಳಲ್ಲಿ ಸಿಂಡೆಲಾರಸನ ಹುಂಜ ಬಾಗವಹಿಸಿ ಎಲ್ಲ ಕಡೆ ಗೆಲುವನ್ನು ಸಾದಿಸಿತು. ಅದರ ಕ್ಯಾತಿ ರಾಜನಾದ ರಾಡೆನ್ ಪುತ್ರನವರೆಗೆ ಹೋಯಿತು.

ರಾಜನು ಸಿಂಡೆಲಾರಸನನ್ನು ಅರಮನೆಗೆ ಆಹ್ವಾನಿಸಿದ. “ನಿನ್ನ ಹೆಸರೇನು?“ ಎಂದು ವಿಚಾರಿಸಿದ. ಸಿಂಡೆಲಾರಸ ತಂದೆಯ ಬೇಟಿಯಿಂದ ರೋಮಾಂಚನಗೊಂಡು ಬಲು ಕುಶಿಯಲ್ಲಿದ್ದ. ಈ ವೇಳೆಯಲ್ಲಿ ರಾಜ ತನ್ನ ಮಗನಿಗೆ ಸ್ಪರ‍್ದೆಗೆ ಆಹ್ವಾನವಿತ್ತ. ರಾಜನಲ್ಲಿ ಒಂದು ಒಳ್ಳೇ ತಳಿಯ ಶಕ್ತಿಶಾಲಿ ಹುಂಜವಿತ್ತು. ಆ ಸೀಮೆಯಲ್ಲಿ ಅದನ್ನು ಎದುರಿಸುವ ಎದುರಾಳಿ ಹುಂಜ ಇರಲೇ ಇಲ್ಲ. ರಾಜ ಸಿಂಡೆಲಾರಸನ ಎದುರು ಪಂದ್ಯ ಕಟ್ಟಿದ. ರಾಜನ ಹುಂಜ ಗೆದ್ದರೆ ಸಿಂಡೆಲಾರಸ ತಲೆದಂಡವಾಗಬೇಕು. ಸೋತರೆ ರಾಜ ತನ್ನ ಅರ‍್ದ ರಾಜ್ಯವನ್ನು ಸಿಂಡೆಲಾರಸನಿಗೆ ಕೊಡಬೇಕು ಎಂದು ಕರಾರು ಮಾಡಲಾಯಿತು. ಪಂದ್ಯದಲ್ಲಿ ಸಿಂಡೆಲಾರಸನ ಹುಂಜ ಗೆದ್ದಿತು.

ರಾಜ, ಈ ಬಾಲಕ ಸಾಮಾನ್ಯನಲ್ಲ, ಯಾರಿರಬಹುದು ಎಂದು ವಿಚಾರಮಗ್ನನಾದ. ಈ ಸಮಯದಲ್ಲಿ ಸಿಂಡೆಲಾರಸನ ಹುಂಜ ಹಾಡಲಾರಂಬಿಸಿತು. “ಸಿಂಡೆಲಾರಸ ನನ್ನ ದಣಿ, ಕಾಡಿನ ಮದ್ಯೆ ನಮ್ಮ ಮನೆ, ರಾಡೆನ್ ನ ಮಗ ನನ್ನ ದಣಿ“ ಎಂಬ ಹುಂಜದ ಹಾಡನ್ನು ಕೇಳಿ, “ಈ ಹುಂಜ ಹೇಳುತ್ತಿರುವದು ನಿಜವೇ ?”ಎಂದು ಕೇಳಿದ. ಆಗ ಸಿಂಡೆಲಾರಸ ”ಹೌದು ಮಹಾರಾಜ, ನನ್ನ ಹೆಸರು ಸಿಂಡೆಲಾರಸ. ನಾನು ಮಹಾರಾಣಿಯವರ ಹಾಗು ನಿಮ್ಮ ಮಗ” ಎಂದು ವಿನಯದಿಂದ ಹೇಳಿದ. ಅಚ್ಚರಿಗೊಂಡ ರಾಜ ಅಲ್ಲಿಯೇ ಮಗ್ಗುಲಲ್ಲಿ ನಿಂತಿದ್ದ ಸೇನಾಪತಿ ಕಡೆಗೆ ನೋಡಿದಾಗ, ಸೇನಾಪತಿ ಹೌದೆಂದು ತಲೆ ಅಲ್ಲಾಡಿಸಿದ. ಕೂಡಲೇ ರಾಜವೈದ್ಯನನ್ನು ಕರೆದುಕೊಂಡು ಬರಲಾಯಿತು. ತಾನು ಮಾಡಿದ ಅಪರಾದದಿಂದ ಪಾಪ ಪ್ರಜ್ನೆಯಿಂದ ಬಳಲುತ್ತಿದ್ದ ವೈದ್ಯ, ನನ್ನನ್ನು ಕ್ಶಮಿಸಬೇಕೆಂದು ರಾಜನ ಕಾಲು ಬಿದ್ದು ಕ್ಶಮೆಯಾಚಿಸಿದ. ರಾಜ ತಾನು ಆತುರದಲ್ಲಿ ಮಾಡಿದ ತಪ್ಪಿಗಾಗಿ ನೊಂದುಕೊಂಡ. ಕೂಡಲೆ ಕಾಡಿಗೆ ತೆರಳಿ ಮಹಾರಾಣಿಯನ್ನು ಅರಮನೆಗೆ ಕರೆದುಕೊಂಡು ಬಂದ. ಮುಂದೆ ದಂಪತಿಗಳು ಸುಕವಾಗಿ ಕಾಲ ಕಳೆದರು. ಉಪಪತ್ನಿ ತಾನು ಮಾಡಿದ ಅಪರಾದಕ್ಕಾಗಿ ಪ್ರಾಣ ಕಳೆದುಕೊಳ್ಳಬೇಕಾಯಿತು.

( ಮಾಹಿತಿ ಸೆಲೆ: indonesianfolktale.blogspot.in )

( ಚಿತ್ರಸೆಲೆ: ceritadongeng-indonesia.blogspot.in ) 

ನಿಮಗೆ ಹಿಡಿಸಬಹುದಾದ ಬರಹಗಳು

2 Responses

ಅನಿಸಿಕೆ ಬರೆಯಿರಿ:

%d bloggers like this: