ಮಳೀ ಬಂದ ಬಗೀ….

– ಅಜಿತ್ ಕುಲಕರ‍್ಣಿ.

heavyrains

ಊರ ನೆತ್ತಿ ಮ್ಯಾಲ
ಕರೀ ಮಾಡ ಕವಿದು
ಹಾಡ ಹಗಲ ಬೆಳಕ ಮಬ್ಬಾತು
ಹಕ್ಕಿಗಳು ಹೌಹಾರಿ
ಚಿಂವ್ ಚಿಂವ್ ಅಂತ ಚೀರಿ
ಗೂಡು ಸೇರಿದ ಬಳಿಕ ಚೀರಾಟ ಗಪ್ಪಾತು

ಬಿತ್ತಾಕಂತ ಹೊಲಕ್ಕ ಹೋಗಿದ್ದ ರೈತರು
ಒಂದ್ ಸರೆ ಮುಗಿಲು ನೋಡಿ ದಿಗಿಲಾದರು
ಗಳೆ ತಿರುಗಿಸಿ ಮನಿ ಮುಟ್ಟಿ
ಮಾಳಿಗಿ ಮ್ಯಾಲಿನ ಕರೇ ಹಂಚು ಮುಚ್ಚಿದರು

ಗುಡುಗು ಸಿಡಿಲಿಗೆ ಬೆದರಿದ ದನಗೋಳು
ಚಟ್ ಅಂತ ಹಟ್ಯಾಗ ಎದ್ದು ನಿಂತವು
ಕೊರಳ ಅಳಗ್ಯಾಡಿಸಿ ಗಂಟೀ ಸದ್ದ ಮಾಡಿ
ಬರೋ ಮಳೀನ ಬರಮಾಡಿಕೊಂಡವು

ಬೆಳಕಿಂಡ್ಯಾಗ ಹಾಸಿ ಮಿಂಚೊಂದು
ಮನೀ ಒಳಗ ಜಾರಿ ಬಿತ್ತು
ಕತ್ತಲಾಗ ಕಂದೀಲ ಹುಡುಕುತಿದ್ದ
ಕುಡ್ಡು ಮುದುಕಿಗೆ ಕಣ್ಣ ಹೊಡೀತು

ಅಪ್ಪನ ಬಾಕಲದಾಗ ನಿಂದರಿಸಿ ಸಣ್ಣ ಹುಡುಗ
ಚಣ್ಣ ಏರಿಸಿ ಉಚ್ಚಿ ಹೊಡದ ಬಂದ
ಬೆನ್ನಾಗ ತಂಡಿ ಏರಿ ತಡೀಲಾರದ ಓಡಿ ಬಂದು
ಅಪ್ಪನ ಕಂಬಳ್ಯಾಗ ನುಸುಳಿಕೊಂಡ

ಊರು ಮಲಗಿದ ಮ್ಯಾಲೆ, ಹಾರಿ ಬಂದ ಮಳೀ
ಊರ ತುಂಬ ಉರೋಣಿಗಿ ಇಟ್ಟತು
ಗಿಡಾಮರಾ, ಲಯ್ಟಿನ ಕಂಬಾ, ಬಣವಿ ಸಮೇತ
ಊರಿಗಿ ಊರ ತೋಯ್ದು ತೊಪ್ಪಡಿ ಆತು

( ಉರೋಣಿಗಿ = ಉರವಣಿಗೆ, ಹಟ್ಯಾಗ= ದನದ ಮನೆಯೊಳಗೆ )

( ಚಿತ್ರ ಸೆಲೆ: youtube.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: