“ನನ್ನ ಬದುಕಿನ ಆದಾರವೇ ಬಂದ್ಯಾ”

– ಮಾದು ಪ್ರಸಾದ್ ಕೆ.

haLLi

“ಜೋಪಾನ ಕಣವ್ವಾ ನೀರುನಿಡಿ ಹಿಡಿವಾಗ, ಅಡುಗೆ ಮಾಡುವಾಗ ಬೆಂಕಿಯಿಂದ ದೂರ ಕುಂತ್ಕೊ, ತಿಂಗ್ಳ ತಿಂಗ್ಳ ಒಂದಿಸ್ಟು ಹಣ ಕಳುಸ್ತಿನಿ, ಈಗಿಸ್ಟದೆ ಹಿಡ್ಕೊ” ಅಂತೇಳಿ ಐನೂರರ ನೋಟೊಂದನ್ನು ಸಿದ್ದವ್ವನ ಕೈಗಿಡುತ್ತಾ “ಲೇ ಸಾಮಾನು ಸರಂಜಾಮು ಎಲ್ಲಾ ತಗೊಂಡ್ಯಾ? ಮಕ್ಕಳನ್ನ ಮುಂದೆನೆ ಕೂರುಸ್ಕೊ, ನಾನು ಸಾಮಾನು ತುಂಬಿರೊ ಕಡೆನೆ ಕುತ್ಕೋತೀನಿ, ಏನಾರು ಬಿದ್ದು ಕೆಟ್ಟು ಹೋದಾವು” ಅಂತ ತನ್ನ ಹೆಂಡತಿ ಕವಿತಳಿಗೆ ಕೂಗಿ ಹೇಳಿ ಲಾರಿಯ ಹಿಂದೆ ಏರಿ ನಿಂತನು ಮನೋಜ. ಮಕ್ಕಳು ಲಾರಿಯ ಮುಂಬಾಗದಿಂದಲೇ ಕಿಟಕಿಯಿಂದ ಕೈ ತೋರಿ “ಅಜ್ಜಿ ನಾವು ಹೊಗಿ ಬರುತ್ತೀವಿ ಟಾಟಾ” ಎನ್ನುತ್ತಿದ್ದವು. ಸಿದ್ದವ್ವ ದೊಣ್ಣೆಯೂರಿಕೊಂಡು ಲಾರಿಯ ಹತ್ತಿರ ಹತ್ತಿರ ಬರಲು ಪ್ರಯತ್ನಿಸುತ್ತಿದ್ದಂತೆ, ಲಾರಿ ಡುರ‍್ರೋ.. ಡುರ‍್ರೋ.. ಡುರ‍್ರೋ.. ಅಂತ ಸದ್ದು ಮಾಡಿಕೊಂಡು ಮುಂದೆ ಹೋಯಿತು. ಸಿದ್ದವ್ವ ತಲೆಯ ಮೇಲೆ ಕೈ ಇಟ್ಕೊಂಡು ದಿಟ್ಟಿ ಹರಿಯುವರೆಗು ನೋಡುತ್ತಾ ನಿಂತಳು. ಸೀರೆಯ ಸೆರಗಿಗೆ ಅವಳ ಕೈಹೋಗಿ ಅದರ ಮೊನೆಯಂಚಿನಿಂದ ಕಣ್ಣನ್ನು ಒರೆಸುತ್ತಾ, ಸುರಿಯುವ ಕಣ್ಣೀರಿಂದ ಸೆರಗನ್ನು ತೇವ ಮಾಡಿ ಕೊಂಡಳು. ಮಣ್ಣಿನ ರಸ್ತೆಯಲ್ಲಿ ದೂಳೆಬ್ಬಿಸಿ ಹೋದ ಲಾರಿ ಮರೆಯಾಯಿತು.

ತನ್ನ ಮುದಿ ವಯಸ್ಸಿನಲ್ಲಿ ಆದಾರವಾಗಬೇಕಿದ್ದ ಮಗನ ಸಂಸಾರವನ್ನು ಹೊತ್ಕೊಂಡು ಹೋದ ಲಾರಿಯನ್ನು ಶಪಿಸುತ್ತಾ, ಸಾಮಾನಿಲ್ಲದೆ ಕಾಲಿಕಾಲಿಯಾದ ತನ್ನ ಮನೆಯನ್ನು ಕಂಡು ಕಾಲಿಯಾದ ತನ್ನ ಮನವನ್ನು ನಿಂದಿಸಿದಳು. ಸೊಸೆಯು ತನಗಾಗಿ ಬಿಟ್ಟು ಹೋಗಿದ್ದ ಹಳೆ ತಟ್ಟೆಗಳನ್ನು ಎತ್ತಿಟ್ಟು, ಹಳೆಯ ಚಾಪೆಯನ್ನು ಬಿಚ್ಚಿ, ತನಗಿನ್ನು ಅದೇ ಗತಿಯೆಂದು ಅದರ ಮೇಲೊಂದು ದಿಂಬನ್ನು ಎಸೆದು ತುಸಕ್ಕನೆ ಅದರ ಮೇಲೆ ಬಿದ್ದಳು.

ಅದುವರೆಗೂ ಹಿಡಿದಿಟ್ಟಿದ್ದ ದುಕ್ಕದ ಕಟ್ಟೆಯೆಲ್ಲಾ ಒಡೆದು ಕಣ್ಣೀರಿನ ಮಳೆ ಸುರಿಸಿದಳು. ಮಡುವಾದ ಕಣ್ಣೀರಿನೊಳಗೆ ಕತ್ತಲಾವರಿಸಿತು. ಕತ್ತಲೆ ತುಂಬಿದ್ದು ಬೀದಿಯೆಲ್ಲೋ, ಬದುಕಿನಲ್ಲೋ ಎಂಬುದರಿಯದೇ ಸೀಮೇಯೆಣ್ಣೆಯ ದೀಪದ ಬತ್ತಿಗೆ ಬೆಂಕಿ ಹಚ್ಚಿ, ಅದರ ಮಂದಬೆಳಕಿನಲ್ಲಿ ತಟ್ಟೆಗೆ ಮುದ್ದೆ ಹಾಕಿಕೊಂಡು ಕಿವುಚುತ್ತಾ ನೆಟ್ಟ ದಿಟ್ಟಿಯಿಂದ ಬಿಟ್ಟ ಕಣ್ಣು ಬಿಟ್ಟಂಗೆ ಕುಳಿತಳು. ಅವಳ ಕಣ್ಣಿಂದ ನೀರು ದಾರೆಯಾಗಿ ಹರಿದು ತಟ್ಟೆ ಸೇರಿ ಊಟ ಅರುಚಿಯಾಯಿತೇನೋ, ಹೊಟ್ಟೆಯಲ್ಲಿನ ಸಂಕಟ ಹಸಿವಿಗೆ ಎಡೆಮಾಡಿಕೊಡದೆ ಊಟ ಸೇರಲಿಲ್ಲ. ಹಾಗೇಯೆ ತನ್ನ ಚಿಂತೆಗೆ ಕಾರಣವಾದ ಮಗನನ್ನು ಸಾಕಿ ಸಲುಹಿದ ನೆನಪಿನ ಸರಣಿ ಬಿಚ್ಚಿಕೊಂಡಿತು.

ಹಿಂದೊಂದು ದಿನ ಮಗನ ಓದಿಗೆ ಹಣ ಸಾಲದಿದ್ದಾಗ ಹೊಟ್ಟೆಗೆ ಆದಾರವಾಗಬೇಕಿದ್ದ ದನ,ಆಡು ರಾಗಿ,ಬತ್ತಾನ ಮಾರಿದುದು, ಮಗನಿಗಾಗಿ ಮಾಡಿದ ಸಾಲಕ್ಕೆ ಊರವರ ನೂರಾರು ನಿಂದನೆ ಮಾತುಗಳನ್ನು ಸಹಿಸಿದ್ದೂ, ಕರ‍್ಚಿಗಾಗಿ ಹಣ ಸಾಲದಿದ್ದಾಗ ಗಂಡನನ್ನ ಜೀತಕ್ಕೆ ತಳ್ಳಿದ್ದು, “ನಿನ್ನ ಮಗನ ಓದ್ಸಿ ಯಾವ ಲೋಕ ಉದ್ದಾರ ಮಾಡ್ತಿಯಾ?” ಎಂದ ಗೌಡನಿಗೆ “ಲೇ ಗೌಡ ನಿನ್ನ ಮಕ್ಕ್ಳಿಗಿಂತ ಜಾಸ್ತಿ ಓದುಸ್ತಿನೋ” ಅಂತ ಸೆಡ್ಡು ಹೊಡೆದು ನಿಂತಿದ್ದು, ಎಲ್ಲವೂ ಎಳೆಎಳೆಯಾಗಿ ಬಿಚ್ಚಿಬಂದಿತು. ದೀಪ ನಂದಿಸಿದಳು.ಆ ಕತ್ತಲು ಅವಳನ್ನು ಆವರಿಸಿತು.

ಮುಂಜಾನೆ ಅರಳಿಮರದ ಗಾಳಿ ಊರ ತುಂಬೆಲ್ಲಾ ಬೀಸಿ, ಸಿದ್ದವ್ವನ ಗತಿ ಗಾಳಿಸುದ್ದಿಯಾಗಿ ಊರನ್ನೆಲ್ಲಾ ತಬ್ಬಿತು.ಇದ ತಿಳಿದು ಎಶ್ಟೋ ದಿನದ ಹಿಂದೆಯೇ ಹೆಂಡತಿ ಮಾತಿಗೆ ಮರುಳಾಗಿ ತಾಯಿಯನ್ನು ಅನಾತರನ್ನಾಗಿಸಿ ಪ್ಯಾಟೆಗೆ ಹೋಗಿ ನೆಲೆ ನಿಂತಿದ್ದ ಮಕ್ಕಳ ತಾಯಿ ಲಕ್ಕವ್ವಳು ತನ್ನಂಗೆ ಇನ್ನೊಂದು ಜೀವ ಅನಾತವಾಗಿದೆಯೆಂದರಿತು ಸಿದ್ದವ್ವನ ಮನೆ ಕಡೆಗೆ ಬಂದಳು. “ಸಿದ್ದವ್ವೋ ಸಿದ್ದವ್ವೋ , ದೇವರು ದಿಂಡ್ರು ಬೇಡಿ ಮಕ್ಕಳನ್ನ ಹಡಿತೀವಿ, ಹೊಟ್ಟೆ ಬಟ್ಟೆ ಕಟ್ಟಿ ಮಕ್ಳ ಸಾಕ್ತಿವಿ, ನಮ್ಮನ್ನ ಸಾಕೋ ಕಾಲ್ದಲಿ ಹಿಂಗೆ ಬುಟ್ಟು ಹೋಯ್ತವೆ, ಇದು ಲೋಕಾರೂಡಿ ಅಲ್ವಾ?ನೀ ಯಾಕ್ ಅತ್ತು ಅತ್ತು ಸುಸ್ತಾದಿಯಾ ಎದ್ದೇಳು. ರಾತ್ರಿ ಉಂಡಿದ್ದಿಯೋ ಇಲ್ವೋ ಬಿಸಿಬಿಸಿ ಮುದ್ದೆ ಮಾಡ್ಕೋಂಡು ಬಂದಿವ್ನಿ” ಅಂತಾ ತಟ್ಟೆ ಕೆಳಗಿಟ್ಟು ಮನೇನೆಲ್ಲಾ ಒಂದು ಸುತ್ತು ನೋಡಿ “ಮುದ್ಕಿ ಇರೋ ಮನೆ ಯಾಕಾರ ಬೇಕಾದವು ಅಂತಾ ಒಂದಶ್ಟು ಸಾಮಾನಾದ್ರು ಬಿಟ್ಟು ಹೋಗಬಾರ‍್ದಾ ? ಎಲ್ಲಾನೂ ಗುಡಿಸಿ ಗುಂಡಾಂತರ ಮಾಡ್ಕೊಂಡು ಹೋಗವ್ರಲ್ಲಾ, ಇದ್ಕೆ ಮಕ್ಕಳು ಇಲ್ದೆ ಇದ್ರೆ ಏನು? ಸಿವ ಬಂಜೆಯಾಗದ್ರೂ ಮಾಡ್ಬಾರ‍್ದಾ” ಅಂದಳು. ಅದಕ್ಕೆ ಸಿದ್ದವ್ವ ತನ್ನ ದುಕ್ಕವನ್ನು ಮತ್ತಶ್ಟು ಹೆಚ್ಚಿಸಿಕೊಂಡು ಮೆಲ್ಲನೆ ಮೇಲೆದ್ದು ಕುಳಿತಳು.

ಸಿದ್ದವ್ವ ನಂಜಯ್ಯನ್ನ ಕೈಯಿಡಿದು ಹತ್ತಾರು ವರ‍್ಶ ಕಳೆದ್ರೂ ಮಕ್ಕಳಾಗಿರಲಿಲ್ಲ. ನೂರಾರು ದೇವರಿಗೆ ಕೈ ಮುಗಿದು ಬೇಡಿ ಬಾಯಿಬೀಗದ ಹರಕೆ ಹೊತ್ತರು ಮಕ್ಕಳಾಗದ ಕಾರಣ, ಮನೆಯ ದೇವರನ್ನು ಶಪಿಸುತ್ತಾ, ಊರ ಜನ ಹೇಳಿದ ದೇವರು ದಿಂಡರಿಗೆಲ್ಲಾ ಹರಕೆ ಹೊತ್ತು, “ಒಂದೇ ಒಂದು ಗಂಡು ಮಗ ಕರುಣಿಸಪ್ಪಾ, ನನ್ನ ಬಂಜೆತನ ನೀಗಿಸಪ್ಪಾ” ಅಂತ ಬೇಡಿದ್ದಳು. ಕೊನೆಗೆ ಮೂಡಲ ದಿಕ್ಕಿನ ಮಲ್ಲಯ್ಯ ದೇವರಿಗೆ ಹರಕೆ ಹೊತ್ತು ಗಂಡು ಮಗು ಹುಟ್ಟಿದ ಮೇಲೆ ಮನೋಜ ಅಂತ ಹೆಸರಿಟ್ಟಳು. ನಂಜಯ್ಯನು ಇವಳ ಹರಕೆಗೆಲ್ಲಾ ಕಳೆಯುವ ದುಡ್ಡಿಗೆ ಸಾಲ ಸೋಲ ಮಾಡಿ ಜೀತ ಸೇರಿಕೊಂಡಿದ್ದ. ಕೊನೆಗೂ ಮಗನಿಗಾಗಿ ದುಡೀತಾನೇ ಜೀತದ ಮನೆಯಲ್ಲೆ ಪ್ರಾಣತೆತ್ತ.

ಆದರೂ ಚಲ ಬಿಡದೆ ಇದ್ದ ಒಬ್ಬ ಮಗನನ್ನ ಓದಿಸಲು ಸಿದ್ದವ್ವ ನಾಲ್ಕಾರು ಮನೆಯ ಕಸ-ಮುಸುರೆ ಕೆಲ್ಸಕ್ಕೆ ಸೇರಿಕೊಂಡು ಜೀವವಿಡೀ ದುಡಿದಳು. ಮನೋಜನು ತಂದೆ ತಾಯಿಯರ ಕಶ್ಟಕಾರ‍್ಪಣ್ಯಗಳನ್ನು ಬಂಡವಾಳ ಮಾಡಿಕೊಂಡು ಬದುಕು ಕಟ್ಟಿಕೊಂಡ. ತಂದೆ ತಾಯಿಯರ ಸೇವೆ ಮಾಡುವ ಕನಸು ಕಾಣುತ್ತಿದ್ದವನು. ಸಮಾಜದಲ್ಲಿ ಒಳ್ಳೆಯ ಕೆಲಸವೂ ದಕ್ಕಿತು. ಒಳ್ಳೆಯ ಗೌರವವೂ ಸಿಕ್ಕಿತು. “ಮೇಶ್ಟ್ರು ಅಂದ್ರೆ ಸುಮ್ನೇನಾ ನಾಕಾರು ಜನ ನಮಸ್ಕಾರ ಮಾಡ್ತಾರೆ, ಅತ್ತಿತ್ತ ಬಾ ಅಂತ ಕರೀತಾರೆ. ಮಗಂಗೆ ಸಿಕ್ಕಾಪಟ್ಟೆ ಗೌರವ ಅದೆ. ನಾನವನ ತಾಯಿ ಇನ್ನೇನು ಬೇಕು ಈ ಜೀವಕ್ಕೆ” ಅಂತೆಲ್ಲಾ ತನಗೆ ತಾನೆ ಹೆಮ್ಮೆ ಪಟ್ಟುಕೊಂಡಿದ್ದವಳು ಸಿದ್ದವ್ವ.

ಮಗ ಕೆಲಸಕ್ಕೆ ಸೇರಿದ ಕೆಲವೇ ವರ‍್ಶಗಳಲ್ಲಿ ಅವಳ ವೇಶ-ಬಾವ-ಶ್ರೀಮಂತಿಕೆ ಎಲ್ಲವೂ ಬದಲಾಗಿ, ಆದುನಿಕತೆ ಆವರಿಸಿ ಮನೆಯಲ್ಲಿ, ಸೋಪಾ ಕುರ‍್ಚಿ, ಟಿ.ವಿ.ಯಂತಹ ಸೌಕರ‍್ಯಗಳನ್ನುಣ್ಣುತ್ತಾ ವಿರಾಜಮಾನವಾಗಿ ಸ್ವರ‍್ಗಕ್ಕೆ ನಾಲ್ಕೇ ಗೇಣು ಎಂಬಂತೆ ಬದುಕುತ್ತಿದ್ದಳು. ಮನೋಜನು ತಾಯಿ ಇಶ್ಟಪಟ್ಟಂತೆ, ತನ್ನ ಸಂಬಂದಿಕರಲ್ಲೊಬ್ಬಳನ್ನು ಕೈ ಹಿಡಿದು, ತನಗಾಗಿ ದುಡಿದ ತಾಯಿಯ ಸೇವೆಯನ್ನು ಮಾಡುತ್ತಾ ನಾಲ್ಕಾರು ವರ‍್ಶ ಕಳೆದ ಮೇಲೆ, ತನಗೂ ಮಕ್ಕಳಾಗಿ ಅವರೂ ದೊಡ್ಡವರಾಗಿ, ಅವರ ಶಿಕ್ಶಣದ ಚಿಂತೆ ಅವನಿಗೆ ಕಾಡಲಾರಂಬಿಸಿತು.

ತನ್ನಂತೆ ತನ್ನ ಮಕ್ಕಳು ಆದುನಿಕ ಕಾಲದಲ್ಲಿರುವ ಸ್ಪರ‍್ದಾತ್ಮಕತೆಗೆ ತಾನು ಓದಿದ ಹಳ್ಳಿಯಲ್ಲಿ ಅವಕಾಶ ಸಿಗುತ್ತಿಲ್ಲವೆಂದು ಬಾವಿಸಿ, ಮಕ್ಕಳಿಗಾಗಿ ಪೇಟೆ ಶಾಲೆಯಲ್ಲಿ ಓದಸಬೇಕೆಂದು ಹಂಬಲಿಸುತ್ತಿದ್ದ. ಹಳ್ಳಿಯಿಂದ ಪೇಟೆಗೆ ತುಂಬಾ ದೂರವಿದ್ದುದರಿಂದ, ತನ್ನ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಸಲಹೆಯ ಮೇರೆಗೆ ತಾನೂ ಪೇಟೆಯಲ್ಲಿ ನೆಲಸಬೇಕೆಂದು ತೀರ‍್ಮಾನಿಸಿದ. ನಡುವೆ ತನ್ನ ತಾಯಿಯ ಚಿಂತೆ ಕಾಡದೆ ಬಿಡಲಿಲ್ಲ. ತಾನು ಹುಟ್ಟಿ ಬೆಳೆದ ಹಳ್ಳಿಯ ಒಡನಾಟವನ್ನು ಬಿಟ್ಟು ಸಿದ್ದವ್ವ ಪೇಟೆಗೆ ಹೊಂದಿಕೊಳ್ಳಲು ಸಿದ್ದಳಿರಲಿಲ್ಲ. ಇದರಿಂದ ಚಿಂತೆಗೊಳಗಾಗಿದ್ದ ಮನೋಜನು ಕೊನೆಗೊಂದು ದಿನ ಪೇಟೆಯ ಪ್ರತಿಶ್ಟಿತ ಶಾಲೆಯಲ್ಲಿ ಪ್ರವೇಶ ಗಿಟ್ಟಿಸಿಕೊಂಡು ಬಂದು ಇಡೀ ಸಂಸಾರವನ್ನು ಪೇಟೆಗೆ ಸಾಗಿಸುವುದಾಗಿ ಮನೆಯಲ್ಲಿ ಹೇಳಿದಾಗ ಸಿದ್ದವ್ವನ ಕಿವಿಗೆ ಬರಸಿಡಿಲು ಬಡಿದಂತಾಯಿತು. ಅಶ್ಟೇ ಏಕೆ ತನ್ನ ಹೆಂಡತಿ ಕವಿತಳಿಗೂ ಹಳ್ಳಿಯಿಂದ ಕಾಲ್ಕೀಳುವುದು ಅತ್ತೆಯನ್ನು ಮುಪ್ಪಿನ ಕಾಲದಲ್ಲಿ ಒಂಟಿ ಮಾಡುವುದು ಕಿಂಚಿತ್ತೂ ಹಿಡಿಸಲಿಲ್ಲ. ಆದರೂ ಮಕ್ಕಳ ಬವಿಶ್ಯ ಇವೆಲ್ಲವನ್ನು ಗೌಣವಾಗಿಸಿತು.

ಸಿದ್ದವ್ವನ ಮನಸ್ಸು ಈಗ ಹಿಂದಿನ ಶೈಲಿಯ ಬಡತನಕ್ಕೆ ಒಗ್ಗಿಕೊಳ್ಳಲು ತವಕಿಸುತ್ತಿತ್ತು. ವಯಸ್ಸಾದ ದೇಹ, ಕುಂದಿದ ಶಕ್ತಿ, ಕೂಲಿನಾಲಿ ಮಾಡಲು ಆಗುತ್ತಿರಲಿಲ್ಲ. ಅತ್ತ ಪೇಟೆಗೆ ಮುಕ ಮಾಡಿದ ಮಗ, ತನ್ನ ಸಂಸಾರ ನಿರ‍್ವಹಣೆಯಲ್ಲಿ ತೊಡಗಿಕೊಂಡು ತಾಯಿಯ ಕಡೆ ಗಮನ ಹರಿಸುವುದು ದಿನೇ ದಿನೇ ಕಡಿಮೆಯಾಗತೊಡಗಿತು. ತುತ್ತಿಗೂ ಕಶ್ಟವಾದ ಸಿದ್ದವ್ವನ ಜೀವನ ದುಸ್ತರವೆನಿಸುತ್ತಿತ್ತು. ಅವಳ ಬದುಕಿಗೆ ಆಶಾಕಿರಣದಂತೆ ಕಂಡದ್ದು, ಸರ‍್ಕಾರದ ವ್ರುದ್ದಾಪ್ಯವೇತನ. ಅವರಿವರನ್ನು ಕಾಡಿಬೇಡಿ ಅದನ್ನು ಪಡೆಯುವಲ್ಲಿ ಯಶಸ್ವಿಯಾದಳು. ಅದರೇನೂ ಮಾಡುವುದು ಬೇಯಿಸಿ ತಿನ್ನಲು ಶಕ್ತಿಯಿಲ್ಲದ ಇವಳು ತನ್ನಂತೆಯೇ ನೊಂದಿದ್ದ ಲಕ್ಕವ್ವನನ್ನು ನೆರವು ಪಡೆದುಕೊಂಡಳು. ದುಕ್ಕಿಗಳಿಬ್ಬರೂ ಒಟ್ಟಾಗಿ ಬದುಕು ಸಾಗಿಸುತ್ತಿದ್ದರು.

ಇದರ ಮೇಲೂ ಬರಸಿಡಿಲು ಬಡಿದಂತೆ ಬಂದು, “ಯಾರಮ್ಮ ಮನೇಲಿ, ಸಿದ್ದಮ್ಮ ನಿಮ್ಮ ವ್ರುದ್ದಾಪ್ಯ ಹಣ ಬಂದಿದೆ. ಹಾಕು ಇಲ್ಲಿ ಹೆಬ್ಬೆಟ್ಟು, ತೆಗೋ ನಿನ್ನ ದುಡ್ಡು, ನೋಡಮ್ಮಾ ಇದೇ ಕೊನೆ, ನಾನಿನ್ನು ಹಣ ತೆಕ್ಕೊಂಡು ಬರಾಕಿಲ್ಲ. ನೀನೇ ಬ್ಯಾಂಕಿನಲ್ಲಿ ಕಾತೆ ತೆರೆದು ಆದಾರ್ ಕಾರ‍್ಡ್ ಮಾಡ್ಸಿ, ಬ್ಯಾಂಕ್ನ ಕಾತೆಗೆ ಕೊಟ್ಟು ಹಣ ತೆಗೋಬೇಕು ತಿಳೀತಾ”, ಅಂತ್ಹೇಳಿ ಹಣ ನೀಡಿ ದಡಬಡನೆ ಸೈಕಲ್ ಹತ್ತಿ ಮಿಂಚಿನಂತೆ ಮಾಯವಾದನು ಅಂಚೆಯವನು. ಸರ‍್ಕಾರದ ಬದಲಾದ ಕಾನೂನುಗಳ ತಿಳುವಳಿಕೆಯಿಲ್ಲದೆ ಚಡಪಡಿಸುತ್ತಿದ್ದ ಹಳ್ಳಿಯ ಮುದಿ ಜೀವಗಳಿಗೆ ದಿಕ್ಕು ಕಾಣದಂತಾಯಿತು. ಅಲ್ಲಿ ಇಲ್ಲಿ ಕಾಡಿ ಬೇಡಿ ಊರಿನ ವಿದ್ಯಾವಂತ ಯುವಕರ ಸಹಾಯ ಪಡೆದು ಬ್ಯಾಂಕು ಕಾತೆ ತೆರೆದು, ಪಂಚಾಯಿತಿಯಲ್ಲಿ ಆದಾರ್ ಕಾರ‍್ಡ್ ನೋಂದಾಯಿಸುವಶ್ಟರಲ್ಲಿ ಅವಳ ಜೀವ ಹಣ್ಣುಗಾಯಿ ನೀರುಗಾಯಿಯಾಯಿತು.

ಮನೋಜ ಹೆಂಡತಿ ಮಕ್ಕಳೊಂದಿಗೆ ಪೇಟೆಯ ಜೀವನ ಶೈಲಿಗೆ ಹೊಂದಿಕೊಂಡು ಬದುಕುವ ಬರದಲ್ಲಿ ಹೆಚ್ಚು ಕಡಿಮೆ ಹಳ್ಳಿ ಮರತೇಹೋಗಿತ್ತು. ತಾನು, ತನ್ನ ಹೆಂಡತಿ, ಮಕ್ಕಳಶ್ಟೆ ಸಂಸಾರ ಎನ್ನುವಂತಾಗಿ ತಾಯಿಯ ಚಿಂತೆ ದೂರದ ಮಾತಾಯಿತು. ಹೀಗಿರುವಾಗ “ರೀ ಮಕ್ಕಳು ಶಾಲೆಯಿಂದ ಇನ್ನೂ ಬಂದಿಲ್ಲ, ವ್ಯಾನ್ ಡ್ರೈವರ‍್ಗೆ ರಜಾ ಅಂತಾ ಬೆಳಿಗ್ಗೇನೆ ಹೇಳಿದ್ದಾ. ಸ್ವಲ್ಪ ಶಾಲೆಯವರೆಗೆ ಹೋಗಿ ನೋಡ್ಕೊಂಡು ಬರ‍್ತೀರಾ” ಅಂತ ಕವಿತ ದೂರದಿಂದಲೇ ಕೆಲಸ ಮುಗಿಸಿ ಬರುತ್ತಿದ್ದ ಮನೋಜನಿಗೆ ಹೇಳಿದಳು. ಬಂದ ಬೈಕಿನ ವೇಗವನ್ನು ಹೆಚ್ಚಿಸಿ ಹಿಂದಿರುಗಿ ಮಕ್ಕಳ ಶಾಲೆಯ ಕಡೆಗೆ ಹೊರಟನು. ಆಶ್ಚರ‍್ಯವೆಂದರೆ ಶಾಲೆ ಬಿಟ್ಟು ತುಂಬಾ ಹೊತ್ತಾಗಿತ್ತು. ಆವರಣದಲ್ಲೆಲ್ಲಾ ಮೌನವಾವರಿಸಿತ್ತು. ದಿಗ್ಬ್ರಮೆಗೊಂಡ ಮನೋಜ ಹಿಂದೆ ಮುಂದೆ ಅಕ್ಕ ಪಕ್ಕ ವಿಚಾರಿಸಿದ. ಶಾಲೆಯಲ್ಲಿ ಯಾರು ಇಲ್ಲದ ಕಾರಣ ಮತ್ತಶ್ಟು ಗಾಬರಿಗೊಂಡನು.

ಶಾಲೆ ಕಾಂಪೌಂಡಿನ ಹಿಂದೆ ಸರ‍್ಕಾರಿ ಶಾಲೆಯ ಆವರಣಕ್ಕೆ ಹೊಂದಿಕೊಂಡಂತೆ ಜನ ಜಂಗುಳಿ ಸಾಲುಗಟ್ಟಿ ನಿಂತಿತ್ತು. ಸಮಯ ಆಗಲೇ ಸಂಜೆ ಆರರ ಸಮೀಪವಿತ್ತು. ನಾ ಮುಂದು ತಾ ಮುಂದು ಎನ್ನುತ್ತಾ ನೂಕುನುಗ್ಗಲಾಟದ ನಡುವೆ ಅಲ್ಲಿಗೆ ಬಂದ ಮನೋಜ ಮಕ್ಕಳಿಗಾಗಿ ಹುಡುಕಾಡಿದ. ತುಸು ದೂರದಲ್ಲಿ ಜನ ಸುತ್ತುವರಿದಿದ್ದರು. ಅದರ ನಡುವೆ ತನ್ನ ಮಗಳನ್ನು ಕಂಡವನೆ ಗಾಬರಿಯಿಂದ ಏನಾಯಿತೋ ಎಂದು ಓಡಿದ. ಕುಸಿದು ಬಿದ್ದಿದ್ದ ಅಜ್ಜಿಯೊಬ್ಬಳಿಗೆ ತನ್ನ ನೀರಿನ ಡಬ್ಬಿಹಿಡಿದು ನೀರುಣಿಸುತ್ತಾ ಉಪಚರಿಸುತ್ತಿರುವ ಮಗಳನ್ನು ಕಂಡು ಸ್ವಲ್ಪ ಸಮಾದಾನದಿಂದ ನಿಂತನು.

‘ಅಯ್ಯೋ, ಉಸ್ ಅಪ್ಪೋ’ ಎಂದು ಮೆಲ್ಲನೆ ಉಸುರುತ್ತಾ ಮೇಲೆದ್ದು ಕುಳಿತ ಹಣ್ಣು ಹಣ್ಣಾದ ಮದುಕಿಯೊಬ್ಬಳು ಪುಟ್ಟ ಹುಡುಗಿಯ ಕಡೆಯ ತಿರುಗಿ “ತಿನ್ನಲು ಏನಾದ್ರೂ ಕೊಡು ತಾಯಿ” ಎನ್ನುತ್ತಿದ್ದಳು. ಪುಟಾಣಿ ರಮ್ಯ ಟಿಪಿನ್ ಬಾಕ್ಸ್ ಬಿಚ್ಚಿ ನೋಡಿದಳು. ಮದ್ಯಾಹ್ನವೇ ಅದು ಕಾಲಿಯಾಗಿತ್ತು. ಅಪ್ಪನ ಕಡೆಗೆ ನೋಡಿ ಏನಾದರೂ ತಿನ್ನಲು ತರುವಂತೆ ಕೋರಿದಳು. ಮಗಳ ಮಾತಿಗೆ ತಿರುಗಿ ಮಾತನಾಡಲಾಗದೆ ಮನೋಜನು ಹೊರನಡೆದು ಒಂದಶ್ಟು ಬನ್, ನೀರು, ದ್ರಾಕ್ಶಿ ಹಣ್ಣುಗಳನ್ನು ತಂದುಕೊಟ್ಟನು. ತಿಂದು ಸಮಾದಾನವಾದ ಮುದುಕಿ ಎದ್ದು ಕುಳಿತು, “ಅಪ್ಪೋ ನನ್ನ ಆದಾರ ಕೊಡ್ರಪ್ಪೋ. ಅದಿಲ್ಲಂದ್ರೆ ಪೋಸ್ಟಯ್ಯ ದುಡ್ಡು ತಂದ್ಕೊಡಲ್ಲಾ ಅಂತಾನೆ. ನಂಗೆ ಯಾರಪ್ಪ ದಿಕ್ಕು. ಆದಾರ ಕೊಡಿಸ್ರಪ್ಪೋ!” ಎಂದು ಅಂಗಲಾಚಿದಳು. ಮೆಲ್ಲನೆ ಕುಳಿತ ಮನೋಜನು “ಯಾರಜ್ಜಿ ನೀನು ? ಯಾಕಿಲ್ಲಿ ಬಂದಿದ್ದೀಯಾ ?” ಎಂದು ಕೇಳಿದನು.

ಅದಕ್ಕೆ ಅಜ್ಜಿಯು “ಅಪ್ಪಾ ನಾನು ಹಳ್ಳಿಯಿಂದ ಬಂದೀವ್ನಿ, ಅದೆಂತದೋ ‘ಆದಾರ’ ಕಾರ‍್ಡು ಬೇಕಂತೆ. ಅದಿಲ್ಲ ಅಂದರೆ ನಂಗೆ ವ್ರುದ್ದಾಪ್ಯ ಹಣ ಕೊಡಲ್ವಂತೆ. ಅದೇ ನಂಗೆ ದಿಕ್ಕು ಕಣಪ್ಪಾ ಅದು ಬಿಟ್ರೆ ನಾನು ಬದುಕೋದು ಯೆಂಗೆ ಹೇಳಪ್ಪ” ಅಂದಳು.

ಅದಕ್ಕವನು, “ಈ ವಯಸ್ಸಿನಲ್ಲಿ ಒಬ್ಬಳೆ ಬಂದಿದಿಯಲ್ಲಾ ಅದೂ ಈ ಪ್ಯಾಟೆಗೆ ಯಾರಾನ್ನಾದ್ರೂ ಕರ‍್ಕೊಂದು ಬರೋದಲ್ವಾ? ನಿಂಗ ಮಕ್ಕಳಿಲ್ವಾ?” ಎಂದು ಪ್ರಶ್ನಿಸಿದನು. ಮಕ್ಕಳು ಎಂದೊಡನೆ ಕಣ್ಣೀರು ಹಾಕಿದ ಅಜ್ಜಿಯು “ಅಪ್ಪೋ ನಂಗೆ ನಾಕು ಜನ ಗಂಡ್ಮಕ್ಕಳು, ತುಂಬ್ದ ಸಂಸಾರ, ತ್ವಾಟ ತುಡ್ಕೆ ಎಲ್ಲಾ ಅವೆ. ಅವೆಲ್ಲವನ್ನು ಬುಟ್ಟು, ದೊಡ್ಡ ದೊಡ್ಡ ಕೆಲ್ಸ ಸೇರ‍್ಕೊಂಡು ಮಕ್ಕಳೆಲ್ಲಾ ಪ್ಯಾಟೆ ಪಾಲಾದ್ರು. ಹೊಲ ಉಳೋ ಗಂಡ ಸಿವ್ನ ಪಾದ ಸೇರ‍್ಕಂಡ. ಈಗ ದಿಕ್ಕು ದೆಸೆ ಇಲ್ದೆ ಇರೋ ನಂಗೆ, ಈ ಸರ‍್ಕಾರದದ ಹಣಾನೆ ಗತಿ. ಅದಕ್ಕೂ ಪೋಸ್ಟಯ್ಯ ಮೂರ‍್ತಿಂಗ್ಲಿಂದ ಕಲ್ಲಾಕವ್ನೆ. ಅದೆಂತದೋ ‘ಆದಾರ‍್’ ಬೇಕಂತೆ. ಇಲ್ಲಿ ತೆಗೀತಾರಂತಲ್ಲಾ ಕೊಡಸಪ್ಪೋ, ನಿಂಗೆ ಪುಣ್ಯ ಬತ್ತದೆ, ವತಾರಿಂದ ಕಾದೀವ್ನಿ ಈ ಪ್ಯಾಟೆ ಜನ ಮುದ್ಕುರು ಮೋಟರು ಅಂತಾ ಮುಂದೆ ಬುಡೋಲ್ರು. ಇವರಿಗೆ ಕರುಣೇನೆ ಇಲ್ಲಾ ಕಣಪ್ಪೋ” ಅಂತ ತನ್ನ ನೋವನ್ನು ತೋಡಿಕೊಂಡಳು. ಮೌನವಾದ ಮನೋಜನು ಏನು ಮಾಡಲು ತೋಚದೆ ಜನಜಂಗುಳಿಯ ಕಡೆಗೆ ನೋಡುತ್ತಿರಲು ‘ಸಂಜೆಯಾಯ್ತು ನಾಳೆ ಬನ್ನಿ’ ಅಂತ ಆದಾರ್ ಸಿಬ್ಬಂದಿ ಹೇಳಿದ ಮಾತು ಎಲ್ಲಾರಿಗೂ ಕೇಳುವಂತಿತ್ತು. ಆದಾರ್ ಕಾರ‍್ಡ್ ಮಾಡಿಸಲು ಬಂದಿದ್ದ ಜನರೆಲ್ಲಾ ಕ್ಶಣಮಾತ್ರದಲ್ಲಿ ಚದುರಿದರು. ಆದರೂ ಈ ಮುದ್ಕಿ ಅಲ್ಲಿಂದ ಕದಡಲಿಲ್ಲ.

ಮನೋಜನು “ಈಗ ಕತ್ತಲಾಯ್ತು ಅಜ್ಜಿ, ನಿನ್ನೂರಿಗೆ ಹೋಗಿ ನಾಳೆ ಬಾ, ಹೇಳು ಯಾವ ಬಸ್ಸಿಗೆ ಹತ್ತಿಸಬೇಕು. ನಾನೇ ಹತ್ತಿಸುತ್ತೇನೆ” ಎಂದ. ಅದಕ್ಕೆ ಮುದ್ಕಿ “ಸಂಜೆಯಾಯ್ತು ಅಂದೆ ನನ್ನ ಕಣ್ಣು ಮಂಜಾಯ್ತವೆ ಕಣಪ್ಪೋ ನಾನು ಯಾವ ಊರ‍್ಗೆ ಹೋಗ್ಲಿ, ಎಂಗೂ ನೀನು ಬೆಡ್ಡು, ಹಣ್ಣು ಕೊಟ್ಟಿದ್ದೀಯಾ, ಅದನ್ನೇ ತಿನ್ಕಂಡು, ಈ ಬಾಗಿಲ್ತಾವ ಮಲ್ಕೋತಿನಿ. ಬೆಳಿಗೆ ಬಾಗಿಲು ತೆಗ್ದಾಗ ನಾನೇ ಮೊದಲ್ಕಿತಾ ‘ಆದಾರ‍್’ ಮಾಡಿಸ್ತೀನಿ ಬುಡಪ್ಪೋ. ನೀನು ನಿನ್ನ ಮಗಳ್ನ ಕರ‍್ಕೊಂಡು ನಿನ್ನ ಮನೆಗೆ ಹೋಗಪ್ಪಾ” ಅಂದಳು. ರಮ್ಯ ಮತ್ತು ಮನೋಜ ಅಜ್ಜಿಯನ್ನು ಆದಾರ್ ಕಚೇರಿ ಬಾಗಿಲಲ್ಲೇ ಇದ್ದ ಶೆಡ್ ಹತ್ರ ಬಿಟ್ಟು, ಒಲ್ಲದ ಮನಸ್ಸಿನಿಂದ ಮನೆಗೆ ಹಿಂದಿರುಗಿದರು.

ರಾತ್ರಿ ಊಟದ ಸಮಯ. ಮನೋಜ ಮಗಳೊಂದಿಗೆ ಕುಳಿತಿದ್ದಾನೆ. ತಟ್ಟೆಯಲ್ಲಿರುವ ಅನ್ನಕ್ಕೆ ಕೈಯೂರದೆ ಕುಳಿತಿರುವ ಮಗಳನ್ನು ಕಂಡು “ಯಾಕೋ ಮಗ್ಳೇ ಹಸಿವು ಆಗ್ತಾ ಇಲ್ವಾ, ಊಟ ಮಾಡು” ಎಂದು ಪೀಡಿಸಿದ. ಅದಕ್ಕವಳು ಮರುಕದಿಂದ “ಅಪ್ಪಾ ಆ ಅಜ್ಜಿ?” ಎಂದು ಕೇಳಿದಳು.

`ಯಾವ ಅಜ್ಜಿ?’ ಎಂದನು ಮನೋಜ. ಅಕದ್ದವಳು ಶಾಲೆಯ ಹತ್ತಿರ ಸಿಕ್ಕಿದ ಅಜ್ಜಿಯನ್ನು ನೆನೆಸಿಕೊಂಡು `ಅವಳಿಗೆ ಊಟ’? ಎಂದಳು. ಅದಕ್ಕವಳು “ನೀನಿನ್ನು ಆ ಅಜ್ಜೀನ ಮರೆತಿಲ್ವಾ ಅವಳ ಪಾಡು ಅವಳಿಗೆ ನೀನು ತಿನ್ನು” ಎಂದು ಗದರಿದನು. ಅದಕ್ಕವಳು “ನನಗೆ ಆ ಅಜ್ಜಿಯ ಬಗ್ಗೆ ಚಿಂತೆ ಇಲ್ಲಾ. ಊರ‍್ನಲ್ಲಿರೋ ನಮ್ಮಜ್ಜಿಯ ಪಾಡೇನು? ಅವಳಿಗೆ ಹಸಿವಾದ್ರೆ ಯಾರು ನೋಡ್ತಾರೆ?” ಎಂದೆಲ್ಲಾ ಪ್ರಶ್ನಿಸಿದಳು.

ಉತ್ತರಿಸಲಾಗದ ಮನೋಜ ಅರ‍್ದಕ್ಕೆ ಕೈ ತೊಳೆದು ಹಾಸಿಗೆ ಮೇಲೆ ಹೊರಳಿದನು. “ಹೌದು ನನ್ನವ್ವ ಅಲ್ಲಿ ಒಂಟಿಯಾಗಿದ್ದಾಳೆ. ನನಗಾಗಿ ಅದೆಶ್ಟೋ ಉಪವಾಸ ಮಾಡಿದ್ದಾಳೆ, ನಾವು ಸುಕವಾಗಿದ್ದೇವೆ. ನನ್ನ ಬದುಕು ಕಟ್ಟಲು ಹೆಣಗಾಡಿದ್ದಾಳೆ, ಈಗ ಅವಳಿಗೆ ಯಾರು ದಿಕ್ಕು? ನಾನು ನನ್ನ ಮಕ್ಕಳನ್ನು ಸಾಕುವಂತೆ ನನ್ನನ್ನು ಅವಳೂ ಸಾಕಿದ್ದಾಳೆ. ಕೊನೆಗಾಲದಲ್ಲಿ ಆದಾರವಾಗಬೇಕಾದ ನಾನು ದೂರದಲ್ಲಿದ್ದೇನೆ” ಇಶ್ಟೆಲ್ಲಾ ಚಿಂತೆಗಳು ಕಾಡತೊಡಗಿದವು. ಕಣ್ಣು ಮುಚ್ಚದ ನಿದ್ದೆ ಹತ್ತಲಿಲ್ಲ. ತಲೆಯಲ್ಲೆಲ್ಲಾ ಅವ್ವನ ನೆನಪು ಹೆಚ್ಚಾಗಿ, ಜೋರಾಗಿ ಒಮ್ಮೆಗೆ ‘ಅವ್ವಾ. . . ಅವ್ವಾ’ ಅಂತ ಚೀರಿದ. ಎಚ್ಚೆತ್ತ ಅವನ ಕೂಗು ಯಾರಿಗೂ ಕೇಳಿಸಲಿಲ್ಲ. ಮತ್ತೆ ಚೀರಿದ, ಆತ್ಮವಂಚನೆ ಮಾಡಿಕೊಂಡ ಬಾವನೆ ಕಾಡಿತು. ಮನಸ್ಸಿನಲ್ಲಿ ಏನೋ ಸಂಕಟ, ತೊಳಲಾಟ, ತಡೆಯಲಾಗದಾಗ,

“ಹೌದು ನಾನು ಅವ್ವನನ್ನು ಕೂಡಿ ಬಾಳಬೇಕು. ಕೊನೆಯವರೆಗೂ ಅವಳಿಗೆ ಆದಾರವಾಗಬೇಕು. ನನ್ನಂತ ವಿದ್ಯಾವಂತರೇ ಕ್ರುತಗ್ನರಾದರೆ! ನಾನೂ ಕ್ರುತಗ್ನನೆ? ಇಲ್ಲಾ. ಇಲ್ಲಾ. ಹಾಗಾಗಕೂಡದು. ನನ್ನ ಹೆತ್ತ ತಾಯಿ ಅನಾತಳಲ್ಲ. ಕಣ್ತೆರೆದು ನೋಡಿದ ತನ್ನ ಕಣ್ಣಿಂದ ನೀರು ದಾರೆಯಾಗಿ ಹರಿಯುತ್ತಿತ್ತು. ಇಣುಕಿ ನೋಡಿದ ಕಿಟಕಿಯಾಚೆ ಬೆಳಗಾಗಿ ಬೆಳಕು ಕಂಡಿತು. ಅಶ್ಟರಲ್ಲಿ ಎದ್ದು ಕುಳಿತ ಹೆಂಡತಿ, ಮಗಳು ಅವನನ್ನು ನೋಡಿ ಆತಂಕಗೊಂಡು “ಅಪ್ಪಾ…ಏನಾಯ್ತಪ್ಪಾ” ಎಂದಳು. “ಯಾಕ್ರೀ” ಎಂದಳು ಮಡದಿ. ಅದಕ್ಕೆ ಉತ್ತರಿಸಲಾರದ ಮನೋಜ “ನಾವು ಹೋಗೋಣ, ಅವ್ವನ ಜೊತೆ ಬಾಳೋಣ” ಎಂದಶ್ಟೆ ಹೇಳಿದ. ಎಲ್ಲರ ಮೌನವೂ ಸಮ್ಮತಿ ಸೂಚಿಸಿತು. ಹೊರಟರು. ಹಳ್ಳಿಯಲ್ಲಿ ಸಂಜೆಗತ್ತಲು ಆವರಿಸಲು ಅನುವಾಗುತ್ತಿದ್ದಂತೆ, ಲಕ್ಕವ್ವನು ಸಿದ್ದವ್ವನ ಮನೆ ಕಡೆ ನಡೆದು “ಸಿದ್ದವ್ವಾ, ಸಂಜೆಯಾಗದೆ ಯಾಕಿನ್ನು ಎದ್ದಿಲ್ಲಾ? ಮನೆತುಂಬಾ ಕತ್ತಲೆ ಗಂವ್ ಅಂತಾದೆ ದೀಪಾನು ಹಚ್ಚಿಲ್ಲಾ” ಎಂದು ಒಳಗೆ ನಡೆದಳು.

ಟ್ರಿಣ್ ಟ್ರಿಣ್ ಟ್ರಿಣ್ ಸೈಕಲ್ ಬೆಲ್ಲಾಯಿತು. “ಸಿದ್ದವ್ವಾ ಸಿದ್ದವ್ವಾ ಬಾ ಬೇಗ, ನಿನ್ನ ಆದಾರ್ ಕಾರ‍್ಡ್ ಬಂದೈತೆ” ಎಂದು ಕೂಗುತ್ತಿದ್ದ ಅಂಚೆಯವನು. ಅಶ್ಟರಲ್ಲಿ ಡುರ‍್ರೋ ಡುರ‍್ರೋ ಎಂದು ಸದ್ದು ಮಾಡುತ್ತಾ, ಹೊಗೆ ಕಕ್ಕುತ್ತಾ, ಸಾಮಾನು ತುಂಬಿದ ಲಾರಿಯೊಂದು ಸಿದ್ದವ್ವನ ಮನೆ ಮುಂದೆ ಬಂದು ನಿಂತಿತ್ತು. ಪುಟಾಣಿ ರಮ್ಯ ಕೆಳಗಿಳಿದು ಓಡೋಡಿ ಬಂದು ಅಜ್ಜಿಯ ಕೋಣೆ ಕಡೆಗೆ “ಅಜ್ಜಿ ನಾ ಬಂದೆ, ನಿನ್ಜೊತೆ ಇರೋಕೆ” ಎಂದೊಡನೆ, ಹಗಲು ನಿದ್ದೆಯಿಂದೆದ್ದ ಸಿದ್ದವ್ವ ತಡವರಿಸುತ್ತಾ ಚೈತನ್ಯ ತುಂಬಿಕೊಂಡು ಹೊರಬಂದಳು. ಸಾಮಾನು ಇಳಿಸುತ್ತಿದ್ದ ಮಗ ಮನೋಜ ಒಂದುಕಡೆ ಕಂಡನು. ಆದಾರ್ ಕಾರ‍್ಡ್ ಹಿಡಿದು ನಿಂತ ಅಂಚೆಯವನು ಮತ್ತೊಂದೆಡೆ ಕಂಡನು. ನಡುವೆ ಸೊಸೆ ಕವಿತ ಮನೆ ಒಳಹೊಕ್ಕು ಕತ್ತಲಿಗೆ ಬೆಳಕನ್ನು ನೀಡುತ್ತಿದ್ದಳು.

ಅಂಚೆಯವನು “ಅಜ್ಜಿ ನಂಗೆ ಲೇಟಾಯ್ತು ತೆಕ್ಕೋ ನಿನ್ನ ಆದಾರ್ ಕಾರ‍್ಡ್” ಎಂದು ಕರೆಯುತ್ತಲೇ ಇದ್ದನು. ಅದಕ್ಕೆ ಸಿದ್ದವ್ವ ಮಗನ ಕಡೆಗೆ ನೋಡುತ್ತಾ “ನನ್ನ ಬದುಕಿನ ಆದಾರವೇ ಬಂದ್ಯಾ” ಎಂದು ನಲಿದಾಡಿದಳು.

( ಚಿತ್ರ ಸೆಲೆ: kichulu.deviantart.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: