ಕಳೆಯಿರದ ಬೆಳೆಯೇ?

ಡಾ|| ಮಂಜುನಾತ ಬಾಳೇಹಳ್ಳಿ.

IMG_0198

“Every weed, every seed, every farm every year “- ಸತ್ಯವಾದ ಮಾತು. ಯಾವ ಬೂ ಬಾಗಕ್ಕೆ ಹೋದರೂ ಕಳೆ-ಕೊಳೆ ಇದ್ದೇ ಇರುತ್ತದೆ. ಎಲ್ಲೆಲ್ಲೂ ಕಳೆ. ಕೆರೆ, ಕಾಲುವೆ, ಗುಡ್ಡದಿಂದ ಹಿಡಿದು ರೈತ ಉತ್ತಿ ಬೆಳೆವ ಬೆಳೆಗಳ ನಡುವೆ ಎದ್ದು ನಿಲ್ಲುತ್ತವೆ ಕಳೆಗಳು. ಅವು ಹಿಮಾಲಯದ ಬೂ ಬಾಗಗಳನ್ನೂ ಬಿಟ್ಟಿಲ್ಲ. ಒಂದೆಡೆ ಸುಂದರ ನೈಸರ‍್ಗಿಕ ಹೂ ಗಿಡಗಳು,ಅದೇ ರೀತಿ ಚಿತ್ರ-ವಿಚಿತ್ರ ಕಳೆಗಳು. ಆ ಹಿಮಾಲಯದ ತಪ್ಪಲಿನಲ್ಲಿ, ಗೊತ್ತಾಗದೆಲೆ ಒಂದು ಜಾತಿ ಕಳೆ ಸಸ್ಯಗಳಿಗೆ ತಗುಲಿಸಿಕೊಂಡು, ಅಬ್ಬಾ! ಅದೆಂತಾ ಉರಿ, ಊತ, ನವೆ. ಆಮೇಲೆ ಶೆರ‍್ಪಾಗಳು ಹೇಳಿದ್ದು – ಅದರಿಂದ ದೂರವಿರಬೇಕೆಂದು, ಎರಡು ದಿನ ಒದ್ದಾಡಿದ್ದೆ. ನಾವು ಮಲೆನಾಡಿನವರು ಕಳೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಕಾನನದ ತುಂಬಾ ಹೆಚ್ಚು ಬೆಳೆವ ಕಳೆಗಳು, ಬಳ್ಳಿಗಳು, ಅವು ಬಿಡುವ ತರಹಾವರಿ ಹೂಗಳು ಎಲ್ಲಾ ಚೆಂದವೆ. ಮನಸ್ಸಿನ ಕೊಳೆ ತುಂಬಿಕೊಂಡಿದ್ದರೂ, ಕಳೆ ಎಂದೊಡನೆ ಕಿತ್ತುಹಾಕಬೇಕೆನಿಸುತ್ತದೆ.

ಕಳೆ ಎಂದರೇನು?

250 ಸಾವಿರದಶ್ಟು ಸಸ್ಯ ಜಾತಿಗಳಿದ್ದು ಬಾಗಶಹ 3 ಅಂದರೆ 8000 ಜಾತಿ ಸಸ್ಯಗಳು ನಿರುಪಯೋಗಿ ಸಸ್ಯಗಳಾಗಿದ್ದು ಕಳೆ ಎನಿಸಿಕೊಳ್ಳುತ್ತವೆ. ಯಾವ ಸಸ್ಯಗಳನ್ನು ಯಾರೂ, ಬೇಕೆಂದು ಬೆಳೆಯುವುದಿಲ್ಲವೋ, ಎಲ್ಲೆಂದರಲ್ಲಿ ಬೆಳೆಯುತ್ತವೆಯೋ, ಕ್ರುಶಿ, ವಾಣಿಜ್ಯ ಬೆಳೆಗಳ ನಡುವೆ ಪೈಪೋಟಿ ನಡೆಸುತ್ತವೋ ಅವೆಲ್ಲಾ ಕಳೆಗಳು.

ಕಳೆಗಳು ಎಂತಹಾ ವ್ಯತಿರಿಕ್ತ ಹವಾಮಾನಗಳಲ್ಲೂ, ವ್ಯವಸ್ತೆಗಳಲ್ಲೂ ಬೆಳೆಯಲು ತಮ್ಮದೇ ಆದ ರೂಪಾಂತರ, ಮಾರ‍್ಪಾಡುಗಳನ್ನು ಹೊಂದಿವೆ, ಹೊಂದಿಸಿಕೊಡಿವೆ. ಕಳೆಗಳು ಬಹು ಬೇಗ ಮೊಳಕೆ ಒಡೆದು ತ್ವರಿತವಾಗಿ ಬೆಳೆಯಬಲ್ಲವು. ಬೇಗ ಹೂ ಬಿಟ್ಟು, ಬೆಳೆಗಳಿಗಿಂತ ಶೀಗ್ರವಾಗಿ ಬೆಳೆದು ನಿಲ್ಲುವಂತವು. ಸಮ್ರುದ್ದ ಸಂತಾನೋತ್ಪತ್ತಿ ಹೊಂದಿದ್ದು ಬಹು ಪಲಪ್ರದವಾಗಿರುತ್ತವೆ. ಆ ಬೀಜಗಳಿಗೆ, ರೆಕ್ಕೆ, ಮುಳ್ಳು, ಕೂದಲು ಇತ್ಯಾದಿ ಹೆಚ್ಚುವರಿ ವ್ಯವಸ್ತೆಗಳಿದ್ದು ತ್ವರಿತಗತಿಯಲ್ಲಿ ಬಹು ದೂರ ಚಲಿಸಬಲ್ಲವು. ಎಲ್ಲಿ ಮಣ್ಣಿಗೆ ಸೇರುತ್ತವೋ ಅಲ್ಲೇ ಪ್ರತಿಶ್ಟಾಪಿತಗೊಳ್ಳುತ್ತವೆ. ಆ ಬೀಜಗಳು ಎಂತಹಾ ವ್ಯತಿರಿಕ್ತ ಪರಿಸ್ತಿತಿಯಲ್ಲೂ ಸುಪ್ತಾವಸ್ತೆಯಲ್ಲಿರಬಲ್ಲವು. ಅನುಕೂಲ ಪರಿಸ್ತಿತಿ ಒದಗಿದಾಗ ಒಮ್ಮೆಲೇ ಪುಟಿದೇಳಬಲ್ಲವು. ಕಳೆಗಳು ಬರಗಾಲವನ್ನೂ ತಪ್ಪಿಸಿಕೊಳ್ಳುತ್ತವೆ, ಸಹಿಸಿಕೊಳ್ಳುತ್ತವೆ ಕೂಡ. ಅವುಗಳಿಗೆ ನೀರನ್ನು ಹಿಡಿದಿಡುವ, ಮಣ್ಣಿನಿಂದ ನೀರಿನಂಶ ಪೂರೈಕೆಗೊಳಿಸಿಕೊಳ್ಳಬಲ್ಲ ವಿಶೇಶ ಶಕ್ತಿ ಇದೆ.ಮುಂಜಾವಿನ ಇಬ್ಬನಿಗಳ ಬಳಸಿಕೊಂಡು ಪೋಟೋಸಿಂತೆಸಿಸ್ ಕ್ರಿಯೆಯನ್ನು ಮುಗಿಸಿ ತನ್ನೆಲ್ಲಾ ಎಲೆಗಳಲ್ಲಿರುವ ರಂದ್ರಗಳ ಮುಚ್ಚಿಕೊಳಬಲ್ಲವು. ಅದೇ ರೀತಿ ಎಲೆಗಳ ಹೊರ ಕವಚದಲ್ಲಿ ಮೇಣದಂತಹ ಹೊದಿಕೆ ಹೊಂದಿರುವುದರಿಂದ ನೀರಿನಂಶ ಆವಿಯಾಗಿ ಹೋಗುವುದನ್ನು ತಪ್ಪಿಸುತ್ತದೆ. ಆವಿಯಾಗುವ ಪ್ರಕ್ರಿಯೆ ಎಲೆಗಳ ವಿಸ್ತೀರ‍್ಣವನ್ನು ಅವಲಂಬಿಸಿದ್ದಾದುದರಿಂದ, ಕಳೆಗಳಲ್ಲಿ ಎಲೆಗಳ ವಿಸ್ತೀರ‍್ಣ ಕಡಿಮೆಯೇ ಇರುತ್ತವೆ. ಉದಾಹರಣೆಗೆ ಗರಿಕೆ ಹುಲ್ಲುಗಳ ಗಮನಿಸಿ, ಎಲೆಗಳು ದಪ್ಪನಾಗಿದ್ದು ಚಿಕ್ಕದಾಗಿದ್ದಾಗ ನೀರಿನಂಶ ಹಿಡಿದಿಡಬಲ್ಲ ಶಕ್ತಿ ಹೆಚ್ಚುತ್ತದೆ. ಉದಾಹರಣೆಗೆ ಕ್ಯಾಕ್ಟಸ್ ಜಾತಿಗಳ ನೆನಪಿಸಿಕೊಳ್ಳಬಹುದು. ಕೆಲವು ಕಳೆಗಳ ಮಾರ‍್ಪಾಟು ಹೇಗಿರುತ್ತದೆಂದರೆ, ಅವುಗಳ ಎಲೆಗಳು ರವಿ ರಶ್ಮಿಗೆ ತೆರೆದುಕೊಳ್ಳುವುದಿಲ್ಲ. ಬದಲಾಗಿ ಸೂರ‍್ಯನ ವಿರುದ್ದ ದಿಕ್ಕಿಗೆ ತೆರೆದುಕೊಳ್ಳುತ್ತವೆ. ಹಾಗಾಗಿ ನೀರಿನಂಶ ಆವಿಯಾಗುವಿಕೆ ತಗ್ಗುತ್ತದೆ. ಅಶ್ಟೇ ಅಲ್ಲ, ಅವುಗಳ ಬೇರುಗಳು ಕೂದಲೆಳೆಗಳಂತಿದ್ದು ನೀರನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಸಹಕರಿಸುತ್ತವೆ. ಸಣ್ಣ ತುಂತುರು ಮಳೆ ಬಂದರೂ, ಬೇರುಗಳ ಸಾಂದ್ರತೆ ಜಾಸ್ತಿಯಾಗಿ ಒಮ್ಮೆಲೇ ಚಿಗುರಲು ಪೂರಕವಾಗುತ್ತವೆ. ಅದೇ ಒಣ ಬೂಮಿಯಲ್ಲೂ ಬೇರುಗಳ ಬೆಳವಣಿಗೆ ಹೆಚ್ಚಾಗಿದ್ದು, ಹೆಚ್ಚು ನೀರು, ಕನಿಜ, ಲವಣಗಳ ಹೀರಲು ಪರಿಣಾಮಕಾರಿಯಾಗುತ್ತವೆ.

IMG_0259

ಕಳೆಗಳಿಂದಾಗ ಬಹುದಾದ ನಶ್ಟವಾದರೂ ಏನು? ಮೊದಲನೆಯದಾಗಿ ಬೆಳೆಗಳೊಂದಿಗೆ ನೀರಿಗಾಗಿ, ಬೆಳಕಿಗಾಗಿ, ಪೌಶ್ಟಿಕಾಂಶಗಳಿಗಾಗಿ ಹಾಗೂ ಬೆಳೆಯುವ ಜಾಗಕ್ಕಾಗಿ ಪೈಪೋಟಿ ನಡೆಸುತ್ತವೆ. ಅನಾವಶ್ಯಕವಾಗಿ ಈ ಜೀವಾಂಶಗಳ ವ್ಯಯವಾಗಿ ಬೆಳೆಗಳು ಕ್ಶೀಣಿಸುತ್ತವೆ. ಅಲ್ಲದೇ ಹಲವಾರು ಕೀಟಗಳ ವಾಸಸ್ತಾನವಾಗಿ ಬೆಳೆಗಳ ನಾಶಕ್ಕೆ ಕಾರಣವಾಗುತ್ತವೆ. ಬೆಳೆಗಳ ಕೊಯ್ಲು ಹದಮಾಡುವಾಗ ಕಳೆಗಳ, ಅವುಗಳ ಬೀಜಗಳ ವಿಂಗಡಿಸಿ ತೆಗೆಯುವ ಕ್ರಮ ಕ್ಲಿಶ್ಟಕರವಾಗುತ್ತದೆ.

ಕಳೆಯಿದ್ದಲ್ಲಿ ಬೆಳೆಯಿಲ್ಲ. ಆ ಕಳೆಗಳ ನಿಯಂತ್ರಣಕ್ಕೆ ಔಶದಿ ಸಿಂಪಡಿಸುವುದು ಒಂದು ಕ್ರಮ. ಆದರೆ ಈಗೀಗ ಅವುಗಳ ಜೀನ್‍ಗಳಲ್ಲಿ (Genetic Transformation) ಮಾರ‍್ಪಾಟುಗಳಾಗಿ ಔಶದಿಗಳು ಪರಿಣಾಮಕಾರಿಯಾಗದೆ ವ್ರುತಾ ವೆಚ್ಚವಾಗುತ್ತದೆ. ಕಳೆಗಳ ನಿಯಂತ್ರಿಸಲು ಪದೇ ಪದೇ ಉಳುಮೆ ಮಾಡುತ್ತಾರೆ. ಒಟ್ಟಾರೆ ಬೆಳೆಯುವ ವೆಚ್ಚದಲ್ಲಿ ಶೇಕಡಾ 30 ರಶ್ಟು ಉಳುಮೆಗೇ ಕರ‍್ಚಾಗುತ್ತದೆ. ಹಾಗೇ ಕ್ರುಶಿ ಸಲಕರಣೆಗಳ ಸವಕಳಿ, ಲೆಕ್ಕಕ್ಕೆ ಸಿಗದಿದ್ದಾಗಿದೆ. ಕಾರ‍್ಮಿಕರಿಗೆ ವ್ಯಯಿಸುವ ವೆಚ್ಚವೂ ಹೇರಳವೇ!

ಅಂದಹಾಗೆ ಕಳೆಗಳು ಸಂಪೂರ‍್ಣ ನಿಶ್ಪ್ರಯೋಜಕವಲ್ಲ. ಅವುಗಳು ಮಣ್ಣಿನ ಸವಕಳಿಯನ್ನು ತಪ್ಪಿಸುತ್ತವೆ.ಅವುಗಳು ಬೆಳೆದು ನಿಲ್ಲುವ ಚಲ ಮೆಚ್ಚುವಂತಹುದೇ. ನಾವು ಆಟವಾಡುವ ಅಂಗಳವೊಂದಿದೆ. ಅಲ್ಲಿ ಈ ಸುಡು ಬೇಸಿಗೆಯಲ್ಲಿ ಬರೀ ದೂಳು ಮಣ್ಣು. ಓಡಾಡುವ ಜಾಗ ಗಟ್ಟಿಯಾಗಿ ಬಿಟ್ಟಿತು. ಮೊನ್ನೆ ಮೊನ್ನೆ ನಾಲ್ಕು ಹನಿ ತುಂತುರು ಮಳೆ ಬಂತು. ನೋಡ ನೋಡುತ್ತಿದ್ದಂತೆ, ನಾಲ್ಕಾರು ಎಲೆಗಳುಳ್ಳ ಕಳೆಗಳು ಉದ್ಬವಿಸಿದ್ದು ಅಚ್ಚರಿಗೆ ಕಾರಣವಾಯ್ತು. ಅದೇ ರೀತಿ ಹರಳೆ ಗಿಡಗಳು ಅದೆಶ್ಟು ಬೇಗ ಗಿಡವಾಗಿ ನಿಲ್ಲುತ್ತವೆ. ಎಲ್ಲೋ ಅಲ್ಲಲ್ಲಿ ಕಾಣಬಂದಂತಿರುವ ವಾಟರ್ ಲಿಲ್ಲಿ, ವಾಟರ್ ಎಲ್ಲೋ ಸಸ್ಯಗಳು ಕೆರೆಗಳಲ್ಲಿ ನೋಡ ನೋಡುತ್ತಲೇ ಇಡೀ ಕೆರೆಯನ್ನು ಆವರಿಸಿ ನೀರು ಕಾಣದಂತೆ ಮಾಡುತ್ತವೆ. ಕೆರೆ ಕ್ಶೀಣಿಸುತ್ತದೆ. ಇಲ್ಲಿ ನಮಗೆ ಅರಿಕೆಯಾಗುವ ವಿಶಯಗಳು ಹಲವಾರಿವೆ. ನಾವು ಕಶ್ಟಗಳು ಬಂದಾಗ ಮಾನಸಿಕವಾಗಿ, ದೈಹಿಕವಾಗಿ ಮುದುಡುತ್ತೇವೆ. ನಮ್ಮ ಕೈಲಾಗದೆಂದು ಕೈಚೆಲ್ಲಿ ನಿಂತು ಬಿಡುತ್ತೇವೆ. ಒತನದಿಂದ ಬಂದ ಎದೆಗಾರಿಕೆ ಇಲ್ಲವಾಗುತ್ತದೆ. ಕಳೆಗಳಿಂದ ಕಲಿಯಬೇಕಾದ್ದು ಆ ಚಲ, ಸುಪ್ತಾವಸ್ತೆಯಲ್ಲಿದ್ದರೂ ಮತ್ತೆ ಹುಟ್ಟಿ ನಿಲ್ಲುವ ಸದ್ರುಡತೆ, ಹೊಂದಾಣಿಕೆ. ಜೀವನದಲ್ಲಿ ಅಬದ್ರತೆ ಇದ್ದೇ ಇರುತ್ತದೆ. ಎಂಬುದು ನಿರಾಕರಿಸಲಾಗದ ಸತ್ಯ. ಅದನ್ನು ಸ್ವೀಕರಿಸಲೇಬೇಕು. ವಾಸ್ತವವನ್ನು ಮೊದಲು ಸ್ವೀಕರಿಸಿದರೆ, ಅದನ್ನೆದುರಿಸಿ ಮತ್ತೆ ಬೆಳೆಯಲು ಸಾದ್ಯ. ಕಳೆಗಳ ಸೂತ್ರ ಅದೇ ಆಗಿದೆ. ಪರಿಸ್ತಿತಿಗಳಿಗೆ ಹೊಂದಿಕೊಂಡು ಮಾರ‍್ಪಾಡಾಗುವುದು ಜೀವನದ ಕ್ರಮ. ಹೊಂದಿಕೊಳ್ಳದಿದ್ದರೆ, ಅವ್ಯವಸ್ತೆ ಉಂಟಾಗುತ್ತದೆ. ಅಸಿಡಿಟಿ ಉಂಟಾಗುತ್ತದೆಂದರೂ, ಬೆಡ್ ಕಾಪಿ ಬೇಕೇಬೇಕೆಂದರೆ? ಡಯಾಬಿಟಿಸ್ ಇದೆ ಎಂದು ಗೊತ್ತಿದ್ದರೂ ಸಿಹಿ ತಿನಿಸುಗಳ ಬಿಡಲಾಗದಿದ್ದರೆ? ಇವೆಲ್ಲಾ ಕ್ಶುಲ್ಲಕ ಉದಾಹರಣೆ ಎನಿಸಿದರೂ, ಹೊಂದಾಣಿಕೆ ಪ್ರತಿ ಹೆಜ್ಜೆಯಲ್ಲೂ ಇರಬೇಕು ತಾನೆ? ಕಳೆಯನ್ನು ಕಿತ್ತು ಬಿಡಬೇಕೆನ್ನುವ ನಮ್ಮಗಳ ಮನಸ್ಸಿನ ಕೊಳೆ ಪರಿಹರಿಸುವ ಬಗೆ ಎಂತು? ಉಳುಮೆಯೇ? ಔಶದಿಯೇ?

(ತಿಟ್ಟ ಸೆಲೆ: ಬರಹಗಾರರ ಆಯ್ಕೆ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: