ಕಣ್ಮನಸೆಳೆಯುವ ನಾಗಲಾಪುರದ ಹೊಯ್ಸಳರ ಶಿಲ್ಪಕಲೆಗಳು

– ದೇವರಾಜ್ ಮುದಿಗೆರೆ.

Channakeshava Temple

ಶ್ರೀ ಚೆನ್ನಕೇಶವ ದೇಗುಲ, ನಾಗಲಾಪುರ

ತುಮಕೂರು ಜಿಲ್ಲೆ ತುರುವೆಕೆರೆಯಿಂದ 10 ಕಿ.ಮೀ ಮತ್ತು ಮಾಯಸಂದ್ರದಿಂದ 8 ಕಿ.ಮೀ ದೂರದಲ್ಲಿರುವ ದಬ್ಬೆಗಟ್ಟ ಹೋಬಳಿಯ ನಾಗಲಾಪುರವು ಹೊಯ್ಸಳರ ಶಿಲ್ಪಕಲೆಯ ಸಮ್ರುದ್ದಿಯಿಂದ ತುಂಬಿದೆ. ನನ್ನೂರಾದ ಮುದಿಗೆರೆಯಿಂದ ತೋಟದ ಸಾಲಿನ ಹಾದಿ ಹಿಡಿದರೆ ಗದ್ದೆ ಬಯಲು, ಕೆರೆಯ ಏರಿಯ ಮೂಲಕ ಕಾಲ್ನಡಿಗೆಯಲ್ಲಿ ನಾಗಲಾಪುರ ತಲುಪಬಹುದು. ನನ್ನ ಬಾಲ್ಯದ ದಿನಗಳನ್ನು ಕಳೆದದ್ದು ಇಲ್ಲಿಯೇ, ಅಂದರೆ ಇದು ನನ್ನ ಅಜ್ಜಿಯ ಊರು.

ಇದು ಹೊಯ್ಸಳರ ಕಾಲದಲ್ಲಿ ಒಂದು ಅಗ್ರಹಾರವಾಗಿದ್ದು ಇದಕ್ಕೆ ನಾಗಪುರಿ ಪಟ್ಟಣವೆಂಬ ಹೆಸರಿದ್ದು ಇಲ್ಲಿ ನಾಗರಾಜನೆಂಬ ರಾಜ ಆಳುತ್ತಿದ್ದನು ಎಂದು ತಿಳಿಯಲಾಗಿದೆ. ಇದು ಹಿಂದೆ ಒಂದು ವಿದ್ಯಾ ಕೇಂದ್ರವೂ ಆಗಿತ್ತು. ಹೊಯ್ಸಳರ ರಾಜ ವೀರ ಬಲ್ಲಾಳನ ಕಾಲದಲ್ಲಿ ಶ್ರೀ ಚನ್ನಕೇಶವ ಮತ್ತು ಶ್ರೀ ಕೇದಾರೇಶ್ವರ ದೇವಾಲಯಗಳನ್ನು ಇಲ್ಲಿ ಸ್ತಾಪಿಸಲಾಗಿದೆ. ಈ ದೇವಾಲಯಗಳ ನಿರ‍್ಮಾಣ ಕ್ರಿ.ಶ. 13 ನೇ ಶತಮಾನದಲ್ಲಿ ಆಗಿದ್ದೆಂದು ಹೇಳಲಾಗಿದೆ. ಹೊಯ್ಸಳ ರಾಜರುಗಳ ಕಾಲದ ದೇವಾಲಯಗಳು ಕಲಾತ್ಮಕವಾಗಿ ಮೂಡಿ ಬಂದಿವೆ. ಹಳೇಬೀಡು, ಬೇಲೂರು, ಸೋಮನಾತಪುರ ದೇವಾಲಯಗಳ ಸಾಲಿಗೆ ಈ ದೇವಾಲಯಗಳೂ ಸಹ ಸೇರುತ್ತವೆ.

ಸೋಮನಾತಪುರದ ದೇವಾಲಯವನ್ನು ಕಟ್ಟಿದ ಶಿಲ್ಪಿ ಬೈಚೋದ ಎಂಬುವವನು ನಾಗಲಾಪುರದ ದೇವಾಲಯಗಳನ್ನು ಕಟ್ಟಿದ್ದಾನೆಂದು ಹೇಳಲಾಗಿದೆ. ಇವನ ಕಾಲ ಕ್ರಿ.ಶ 1268. ದಿಲ್ಲಿಯ ದೊರೆ ಅಲ್ಲಾವುದ್ದೀನ್ ಕಿಲ್ಜಿಯ ಸೇನಾಪತಿಯಾಗಿದ್ದ ಮಲ್ಲಿಕಾಪರನು ಬೇಲೂರು, ಹಳೆಬೀಡಿನ ಮೇಲೆ ದಾಳಿ ಮಾಡಿದಾಗ ನಾಗಲಾಪುರದ ಮೇಲೂ ದಾಳಿ ಮಾಡಿದನೆಂದು ಊಹಿಸಲಾಗಿದೆ. ಇದರಿಂದ ಸಾಕಶ್ಟು ವಿಗ್ರಹಗಳು ಮತ್ತು ಹೊರಗೋಡೆ ಹಾಳಾಗಿವೆ. ಒಂದೇ ವಿನ್ಯಾಸವುಳ್ಳ ಎರಡೂ ದೇವಾಲಯಗಳಲ್ಲಿ ಗರ‍್ಬಗುಡಿ, ಸುಕನಾಸಿ ಮತ್ತು ನವರಂಗಗಳಿವೆ. ಈ ಎರಡೂ ದೇವಾಲಯಗಳು ನಕ್ಶತ್ರಾಕಾರದ 16 ಮೂಲೆಗಳಿಂದ ಕೂಡಿದ ಜಗುಲಿಯ ಮೇಲೆ ನಿರ‍್ಮಾಣವಾಗಿವೆ.

ಚನ್ನಕೇಶವ ದೇವಾಲಯ ಊರಿನ ಪ್ರವೇಶ ಬಾಗದಲ್ಲಿದೆ. ಚನ್ನಕೇಶವ ದೇವಾಲಯದ ಪ್ರವೇಶ ದ್ವಾರ ಪೂರ‍್ವಾಬಿಮುಕವಾಗಿದ್ದು ಉತ್ತಮ ಕಲಾತ್ಮಕತೆಯಿಂದ ಕೂಡಿದೆ. ಶ್ರೀ ಚನ್ನಕೇಶವ ದೇವಾಲಯದಲ್ಲಿ ಶ್ರೀ ಚನ್ನಕೇಶವ ವಿಗ್ರಹವು ಹಿಂದಿನ ಕಾಲದಲ್ಲೇ ಕಳುವಾಗಿದೆ, ಈಗ ಅದೇ ಜಾಗದಲ್ಲಿ ವಿಜಯನಗರ ಅರಸರಿಂದ ಸ್ತಾಪಿತವಾದ ಶ್ರೀ ವೆಂಕಟೇಶ್ವರ ವಿಗ್ರಹವಿದೆ. ಈ ದೇವಾಲಯದ ಹೊರಗೋಡೆಯ ಬುಡದಲ್ಲಿ ಆನೆ, ಕುದುರೆ, ಬಳ್ಳಿ, ಸುರುಳಿ, ಮಕರ ಮತ್ತು ಹಂಸಗಳ ಸಾಲನ್ನು ಕಲ್ಲಿನಲ್ಲಿ ಕಡೆದಿರುವ ಚಿತ್ರಗಳು ಕಣ್ಮನ ಸೆಳೆಯುತ್ತವೆ. ಗೋಡೆಗಳ ಮೇಲ್ಬಾಗದಲ್ಲಿ ಕೆತ್ತಿರುವ ಅನೇಕ ಸುಂದರ ಮೂರ‍್ತಿಗಳು ನೋಡಲು ನಯನ ಮನೋಹರವಾಗಿವೆ. ಅವುಗಳಲ್ಲಿ ವಾಸುದೇವ, ನರಸಿಂಹ, ವರಹಾ, ಲಕ್ಶ್ಮೀನಾರಾಯಣ, ಹಯಗ್ರೀವ, ಯೋಗನಾರಾಯಣ, ಬ್ರಹ್ಮ, ಇಂದ್ರ, ಲಕ್ಶ್ಮಿ, ದುರ‍್ಗೆ, ಸರಸ್ವತಿ, ಮೋಹಿನಿ, ಮಹಿಶಾಸುರ ಮರ‍್ದಿನಿ, ಅಶ್ಟೇ ಅಲ್ಲದೆ ಪುರಾಣಗಳಿಗೆ ಸಂಬಂದಿಸಿದ ಅನೇಕ ಮೂರ‍್ತಿಗಳಿವೆ. ಇವುಗಳು ನೋಡಲು ಸುಂದರವಾಗಿಯೂ ಐತಿಹಾಸಿಕತೆಯನ್ನು ಪ್ರತಿಬಿಂಬಿಸುವಂತೆಯೂ ಇವೆ. ನವರಂಗದಲ್ಲಿ ಅಶ್ಟದಿಕ್ಪಾಲಕರ ನಡುವೆ ನೇತಾಡುವಂತಿರುವ ಕಮಲದ ಕೆತ್ತನೆ ಇದೆ. ಸುಕನಾಸಿಯಲ್ಲಿರುವ ದ್ವಾರಪಾಲಕರ ಬವ್ಯವಾದ ಕೆತ್ತನೆ ಇದೆ.

Kedareshwara Temple

ಶ್ರೀ ಕೇದಾರೇಶ್ವರ ದೇಗುಲ, ನಾಗಲಾಪುರ

ಇಲ್ಲಿರುವ ಕೇದಾರೇಶ್ವರ ದೇವಾಲಯವೂ ಹೊಯ್ಸಳರ ಕಾಲದ್ದು. ಇದರ ಪ್ರವೇಶದ್ವಾರವು ದಕ್ಶಿಣ ದಿಕ್ಕಿಗಿದೆ. ಆದರೆ ಕೇದಾರೇಶ್ವರ ಲಿಂಗವು ಪೂರ‍್ವಾಬಿಮುಕವಾಗಿ ಇದೆ. ಈ ದೇವಾಲಯವನ್ನು ಬಳಪದ ಕಲ್ಲಿನಿಂದ ಕಡೆದಿದ್ದಾರೆ. ದೇವಾಲಯದಲ್ಲಿರುವ ಕೇದಾರೇಶ್ವರ ಲಿಂಗವು ಹಳೆಬೀಡಿನ ಕೇದಾರೇಶ್ವರ ಲಿಂಗದಂತಿದೆ. ಅಲ್ಲದೆ ಉಮಾಮಹೇಶ್ವರ, ವ್ರುಶಬ ರೂಪ ಮೊದಲಾದ ಶಿವನ ವಿಶಿಶ್ಟ ಮೂರ‍್ತಿಗಳಲ್ಲದೆ ಬೈರವ, ಅರ‍್ಜುನ, ಮನ್ಮತ ಮೊದಲಾದ ವಿಶಿಶ್ಟ ಮೂರ‍್ತಿಗಳಿವೆ. ಬ್ರಹ್ಮ, ವಿಶ್ಣು, ಶಿವ ಇವರ ವಿವಿದ ಅವತಾರಗಳು, ತ್ರಿಪಾದ ಬಂಗಿ, ದುರ‍್ಗಾ, ಗಣಪತಿ, ತಾಂಡವೇಶ್ವರ, ಶಣ್ಮುಕ, ಕುಬೇರ, ವರುಣ ಮುಂತಾದ ವಿಗ್ರಹಗಳ ಕೆತ್ತನೆ ಕಲಾತ್ಮಕವಾದುದು. ಈ ಮೂರ‍್ತಿಗಳ ಮೇಲಿನ ಸಾಲಿನಲ್ಲಿ ತೋರಣದಂತಿರುವ ಒಂದು ಸಾಲಿನಲ್ಲಿ ಕಮಲದ ಮೊಗ್ಗುಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ.

ಎರಡೂ ದೇವಾಲಯಗಳು ಒಳಾಂಗಣ ಅಲಂಕರಣಗಳು ಒಂದೆ ರೀತಿಯಲ್ಲಿದ್ದರೂ ಕೇದಾರೇಶ್ವರ ದೇವಾಲಯದ ಅಲಂಕರಣ ಹೆಚ್ಚು ಆಕರ‍್ಶಣೀಯವಾಗಿದೆ. ಗಣಪತಿ, ಬ್ರುಹತ್ ನಂದಿ, ತಿರುಗಣಿಯಲ್ಲಿ ಕಡೆದ ನವರಂಗದ ಕಂಬಗಳು ಮಣಿಹಾರಗಳು, ಕೀರ‍್ತಿಮುಕಗಳು ಬೋದಿಗೆಯ ಸುತ್ತ ಮಣಿತೋರಣಗಳಿಂದ ತುಂಬಿ ಲಾವಣ್ಯಮಯವಾಗಿವೆ. ನವರಂಗಗಳ ಒಳ ಚಾವಣಿಯ ಅಂಕಣಗಳು ಬಗೆ ಬಗೆಯ ಕುಸುರಿ ಕೆಲಸಗಳಿಂದ ತುಂಬಿದ್ದು ಅತ್ಯಂತ ಮನಮೋಹಕವಾಗಿವೆ. ಆದುದರಿಂದ ನಾಗಲಾಪುರವನ್ನು ಪುಟ್ಟ ಬೇಲೂರು ಎಂದೂ ಕರೆಯಲಾಗಿದೆ.

ಈ ದೇವಾಲಯಗಳು ಶಿತಿಲವಾಗಿದ್ದರಿಂದ ಕೇಂದ್ರ ಸರ‍್ಕಾರದ ಪ್ರಾಚ್ಯ ವಸ್ತು ಮತ್ತು ಸಂಶೋದನಾ ಇಲಾಕೆಯ ನೇತ್ರುತ್ವದಲ್ಲಿ ಇತ್ತೀಚೆಗ ಜೀರ‍್ಣೋದ್ದಾರ ಮಾಡಲಾಗಿದೆ. ಮತ್ತೆ ಹಾಳಾಗದಂತೆ ರಕ್ಶಣೆಯನ್ನು ಒದಗಿಸಿದೆ. ತುಮಕೂರಿನ ಕಡೆ ಹೋದಾಗ ಈ ಜಾಗಕ್ಕೆ ಬೇಟಿಕೊಡುವುದನ್ನು ಮರೆಯದಿರಿ.

ಶ್ರೀ ಕೇದಾರೇಶ್ವರ ದೇಗುಲದ ಚಿತ್ರಗಳು:

Kedareshwara Temple2

Kedareshwara Temple1

(ಚಿತ್ರಸೆಲೆ: ದೇವರಾಜ್ ಮುದಿಗೆರೆ )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಇದರ ಬಗ್ಗೆ ಗೊತ್ತೇ ಇರಲಿಲ್ಲ. ಬೇಟಿ ಕೊಡಬೇಕು. ದನ್ಯವಾದಗಳು.

ಅನಿಸಿಕೆ ಬರೆಯಿರಿ: