ಕಲ್ತಪ್ಪ – ಕರಾವಳಿ ಹಾಗು ಮಲೆನಾಡಿನ ನೆಚ್ಚಿನ ತಿನಿಸು

ಸಿಂದು ನಾಗೇಶ್.

Kalathappam 1

ಕಲ್ತಪ್ಪ! ಕರುನಾಡ ಕರಾವಳಿಗರ ಹಾಗು ಮಲೆನಾಡಿಗರ ಸಾಂಪ್ರದಾಯಿಕ ತಿಂಡಿಗಳಲ್ಲಿ ಒಂದು. ತುಳುವಿನಲ್ಲಿ ಇದಕ್ಕೆ ಗೆಂಡದಡ್ಯ ಎನ್ನುವರು. ಇದಕ್ಕೆ ಗೆಂಡದಡ್ಯ ಎಂದು ಕೇರಳಿಗರು ಕೊಟ್ಟ ಹೆಸರು. ಆದರೆ ಕನ್ನಡಿಗರಿಗೆ ಇದು ಕಲ್ತಪ್ಪವಾಗಿಯೇ ಮುಂದುವರಿದಿದೆ. ಗೆಂಡದಡ್ಯದ ಹುರುಳನ್ನು ತಿಳಿಯಬೇಕೆಂದರೆ ಅದನ್ನು ಹೀಗೆ ಬಿಡಿಸಿ ಬರೆಯಬಹುದು; ಗೆಂಡದಡ್ಯ – ಕೆಂಡದ + ಅಡ್ಯ(ತಿಂಡಿ), ಅಂದರೆ ಕೆಂಡದಲ್ಲಿ ಬೇಯಿಸುವ ತಿಂಡಿಗೆ ಗೆಂಡದಡ್ಯ ಎಂದು ಹೆಸರು. ಹಾಗೆಯೇ ಕಲ್ತಪ್ಪ – ಕಲ್ಲಿನಂತೆ ಗಟ್ಟಿಯಾಗಿ (ತಿನ್ನಲಾರದಶ್ಟು ಗಟ್ಟಿಯಲ್ಲ!), ಅಪ್ಪ – ಅಂದರೆ ಉಬ್ಬಿದಾಕಾರದ ತಿಂಡಿ ಎಂಬ ಹುರುಳು ಕೊಡುತ್ತದೆ. ಇನ್ನೂ ಹೇಳಬೇಕಾದರೆ, ಕರಾವಳಿಯ ಕಡೆ ನೆಸಲುದಡ್ಯ(ತುಳುವಿನ ಪದವಿದು) ಮಾಡುತ್ತಾರೆ, ಅದರ ಮುಂದುವರಿದ ಬಾಗವೇ ಈ ಗೆಂಡದಡ್ಯ.

ಸಾಮಾನ್ಯವಾಗಿ ಕಲ್ತಪ್ಪವನ್ನು ಹಲವಾರು ಬಗೆಗಳಲ್ಲಿ ಮಾಡಬಹುದು. ಅಲ್ಲದೇ ಅನುಬವವೂ ಬೇಕಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೇ ಕಲ್ತಪ್ಪದ ರುಚಿಯು ಅನುಬವ ಮತ್ತು ಮಾಡುವ ಬಗೆಯನ್ನು ಹೆಚ್ಚು ನೆಚ್ಚಿಕೊಂಡಿರುತ್ತದೆ.

ಇದನ್ನು ಮಾಡಲು ಬೇಕಾಗುವ ಸಾಮಾನುಗಳು:

ಅಕ್ಕಿ – 1 ಲೋಟ
ಬೆಲ್ಲ – 1 ಅಚ್ಚು
ಸೌತೆಕಾಯಿ – 1
1/2 ಬಾಗ ಕಾಯಿ ತುರಿ (ದಪ್ಪಗೆ ತುರಿದಿದ್ದು)
ಏಲಕ್ಕಿ ಪುಡಿ
ಉಪ್ಪು
ಎಣ್ಣೆ
ಈರುಳ್ಳಿ 3/4

ಮಾಡುವ ಬಗೆ:

ಮೊದಲು ಅಕ್ಕಿಯನ್ನು ಕೆಲಹೊತ್ತು ನೀರಿನಲ್ಲಿ ನೆನೆಸಿಡಬೇಕು. ಜೊತೆಗೆ ಬೆಲ್ಲ ಮತ್ತು ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿಕೊಂಡಿರಬೇಕು. ಬಳಿಕ ಅಕ್ಕಿಯ ಜೊತೆ ಬೆಲ್ಲ, ಸೌತೆಕಾಯಿ, ಕಾಯಿತುರಿ, ಏಲಕ್ಕಿ ಪುಡಿ ಮತ್ತು ರುಚಿಗೆ ತಕ್ಕಶ್ಟು ಉಪ್ಪನ್ನು ಸೇರಿಸಿಕೊಂಡು ರುಬ್ಬಿಕೊಳ್ಳಬೇಕು (ಕಾರ ಬೇಕಾದವರು ಕಾರವನ್ನೂ ಹಾಕಿಕೊಳ್ಳಬಹುದು). ರುಬ್ಬಿದ ಹಿಟ್ಟನ್ನು ಸುಮಾರು ಅರ‍್ದಗಂಟೆಯಿಂದ ಒಂದು ಗಂಟೆಯವರೆಗೆ ಹಾಗೆಯೇ ಇಡಬೇಕು. ಒಂದು ಅಗಲ ತಳದ ಪಾತ್ರೆಗೆ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಿ ಕತ್ತರಿಸಿದ ಈರುಳ್ಳಿ ಹಾಕಿ ಹುರಿದುಕೊಳ್ಳಬೇಕು. ಬಳಿಕ ಆ ಪಾತ್ರೆಗೆ ರುಬ್ಬಿದ ಹಿಟ್ಟನ್ನು ಹಾಕಿ ಸರಿಯಾಗಿ ಕಲಸಿಕೊಂಡು ಸಣ್ಣ ಉರಿಯಲ್ಲಿ ಬೇಯಿಸಬೇಕು (ಹೀಗೆ ಚೆನ್ನಾಗಿ ಬೆಂದ ತಿಂಡಿಯೇ ನೆಸಲುದಡ್ಯ. ಕೇರಳಿಗರು ಇದಕ್ಕೆ ಕಡಾಯಿ ಅಪ್ಪಮ್ ಎನ್ನುವರು. ಈ ಹೆಸರೂ ಕೂಡ ಕರ‍್ನಾಟಕದಲ್ಲಿ ಕೆಲವೆಡೆ ಬಳಸುತ್ತಾರೆ). ಬಳಿಕ ಇನ್ನೊಂದು ಮಣ್ಣಿನ ಪಾತ್ರೆಯಲ್ಲಿ ಕೆಂಡವನ್ನು ಹಾಕಿಕೊಂಡು ಬೆಂದ ತಿಂಡಿಯನ್ನು ಹದವಾಗಿ ಕತ್ತರಿಸಿಕೊಂಡು ಕೆಂಡದಲ್ಲಿ ಕೆಲ ಹೊತ್ತು ಹುರಿದರೆ ಕಲ್ತಪ್ಪ ಸವಿಯಲು ಸಿದ್ದ.

(ಚಿತ್ರಸೆಲೆ: kitchentreats.blogspots.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: