ದುಂಡುಗಲ್ಲದ ಹುಡುಗ

– ಅಜಿತ್ ಕುಲಕರ‍್ಣಿ.

GEDSC DIGITAL CAMERA

(ಬರಹಗಾರರ ಮಾತು: ಬೆಂಗಳೂರಿಗೆ ದೂರದ ಹಳ್ಳಿಗಳಿಂದ ಬರುವ ಕೂಲಿ ಕೆಲಸಗಾರರ ಮಕ್ಕಳು ಬೀದಿಯಲ್ಲಿ ಆಟವಾಡುತ್ತಿರುತ್ತಾರೆ. ಅವರನ್ನು ಕುರಿತು ಬರೆದದ್ದು)

ದುಂಡುಗಲ್ಲದ ಹುಡುಗ
ಗುಂಡು ಮೊಗದ ಹುಡುಗ
ಈ ಓಣಿಯಲಿ ಬಂದಿಹನು
ಗೊತ್ತೆ ನಿಮಗೆ ?

ದಾರಿಯಲಿ ಸಿಕ್ಕುವನು
ಪಕ್ಕವೇ ಹಾಯುವನು
ಕೈ ಕೊಸರಿ ಓಡುವನು
ಹಿಡಿಯಲು, ಸಿಗನು ನನಗೆ

ಕಂದು ಬಣ್ಣದ ಚಣ್ಣ
ಮಾಸಿರುವ ಬಿಳಿಯಂಗಿ
ದೂಳಾದ ಅಂಗಾಲು
ಅವನ ಗುರುತು

ಓಡಿದ ಕಡೆಯೆಲ್ಲಾ
ರಂಗೋಲಿಯ ಬಿಡಿಸಿ
ನಗೆಯ ಹಾಡು ಹಾಡುವನು
ಯಾರ ಕುರಿತು?

ಪಕ್ಕದ ಕಟ್ಟಡದ
ಇಟ್ಟಿಗೆಯ ಕೆಲಸಕ್ಕೆ
ಅವನ ಅವ್ವ ಅಪ್ಪಂದಿರು
ಬಂದಿಹರೇನೋ

ರೊಟ್ಟಿ ಅಂಬಲಿ ಉಣಿಸಿ
ಹೊಟ್ಟೆಪಾಡಿಗಾಗಿ
ಇವನ ಆಟಕೆ ಬಿಟ್ಟು
ಹೋಗಿಹರೇನೋ

ಬಾ ರಾಜ ಬಾ ಪುಟ್ಟ
ಬಾ ಇಲ್ಲಿ ನನ್ನ ಬಳಿ
ತಂದಿರುವೆ ನಿನಗೊಂದು
ಮಜವೊಂದನು

ಪಡೆದು ಹೋಗುವ ಮುನ್ನ
ಹೆಸರು ಹೇಳಲುಬೇಕು
ಸುರಿದು ನನ್ನೆದುರಲ್ಲಿ
ನಗುವೊಂದನು

ಆ ದುಂಡುಗಲ್ಲದ ಹುಡುಗ
ಆ ಗುಂಡು ಮೊಗದ ಹುಡುಗ
ಬಂದನು ಎನ್ನ ಬಳಿ
ಕಯ್ಯ ಚಾಚಿ

ನಗುವ ಕರುಣೆ ತೋರಿ
ಹೆಸರು ಹೇಳುತ ಅವನು
ಓಡಿ ಹೋದನು ಎನ್ನ
ಕಯ್ಯ ಬಾಚಿ

( ಚಿತ್ರ ಸೆಲೆ: indiatogether.org  )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. chamshiku says:

    Chennaagide

ಅನಿಸಿಕೆ ಬರೆಯಿರಿ:

Enable Notifications OK No thanks