ಇನ್ಮುಂದೆ ಸುಳುವಾಗಿ ಬಟ್ಟೆ ಒಣಗಿಸಿ

ವಿಜಯಮಹಾಂತೇಶ ಮುಜಗೊಂಡ.

ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ?

ನಿನ್ನ ಮುಗಿಲ ಸಾಲೇ, ದರೆಯ ಕೊರಳ ಪ್ರೇಮದ ಮಾಲೆ

ಸುರಿವ ಒಲುಮೆಯಾ ಜಡಿಮಳೆಗೆ, ಪ್ರೀತಿ ಮೂಡಿದೆ…

ಹೀಗೆ ಯೋಗರಾಜ್ ಬಟ್ಟರು ಮಳೆಯನ್ನು ಕುರಿತು ಸಿನೆಮಾದ ಹಾಡೊಂದರಲ್ಲಿ ಬಣ್ಣಿಸಿದ್ದಾರೆ. ಎಂತಹ ಅದ್ಬುತ ಸಾಲುಗಳು! ಮಳೆ ಅಂದರೆ ಯಾರಿಗೆ ತಾನೇ ಬೇಡ? ಬೂತಾಯಿಯನ್ನು ನಂಬಿ ಬದುಕುತ್ತಿರುವ ರಯ್ತಾಪಿ ಮಂದಿಗೆ ಮಳೆ ಬಂದರೆ ಅಮ್ರುತ ಕುಡಿದಶ್ಟೇ ಹಿಗ್ಗು. ಬೆಳೆದು ಎಶ್ಟೇ ದೊಡ್ಡವರಾದರೂ ಮಳೆಯಲ್ಲಿ ನೆನೆದು ಬರುವ ಮಜವೇ ಬೇರೆ. ಅಂದಹಾಗೆ ಮಳೆಗಾಲ ಜೋರಾಗುತ್ತಿದೆ, ಈ ಮಳೆಗಾಲ ಎಲ್ಲರಿಗೂ ಹಿಗ್ಗನ್ನು ತಂದರೆ ಕೆಲವರಿಗೆ ಅದರಲ್ಲೂ ಗ್ರುಹಿಣಿಯರಿಗೆ ಒಂದು ದೊಡ್ಡ ತಲೆ ನೋವನ್ನು ಕೂಡ ಕುಶಿಯೊಟ್ಟಿಗೇ ತರುತ್ತದೆ. ಅದೇನೆಂದು ನೀವು ಆಗಲೇ ಊಹಿಸಿರಬಹುದು. ಹವ್ದು, ಮಳೆಗಾಲದ ಮೋಡ ಕವಿದ ವಾತಾವರಣದಲ್ಲಿ ಬಟ್ಟೆ ಒಣಗಿಸುವುದು ದೊಡ್ಡ ತಲೆನೋವೆನ್ನುವುದು ದಿಟ.

ಇತ್ತೀಚಿನ ಚಳಕದರಿಮೆಯ ಹೊಸ ಮಾಡುಗೆಗಳು ಎಲ್ಲ ಸಮಸ್ಯೆಗಳಿಗೂ ಒಂದಲ್ಲ ಒಂದು ತರದ ಉತ್ತರವನ್ನಿತ್ತಿವೆ. ಅಂತೆಯೇ ಬೇಗನೆ ಬಟ್ಟೆ ಒಣಗಿಸುವುದು ಇಂದಿನ ದಿನಗಳಲ್ಲಿ ಅಶ್ಟಾಗಿ ತಲೆನೋವಿನ ವಿಶಯವಾಗಿ ಉಳಿದಿಲ್ಲ. ಬಟ್ಟೆ ಒಣಗಿಸಲು ಬೇಕಿರುವ ಒಣಗುಬಿಣಿಗೆಗಳು(Dryer) ಇಂದು ಮಾರುಕಟ್ಟೆಯಲ್ಲಿ ಬಂದಿವೆ. ಆದರೆ ಈ ಒಣಗುಬಿಣಿಗೆಗಳ ಕುರಿತು ಕಾಡುವ ಕೆಲವು ಸಂಗತಿಗಳು ನೀವು ಒಣಗುಬಿಣಿಗೆ ಬಳಸುಗರಾದರೆ ಗೊತ್ತೇ ಇರುತ್ತದೆ. ಇಂದು ಮಾರುಕಟ್ಟೆಯಲ್ಲಿ ಸಿಗುವ ಒಣಗುಬಿಣಿಗೆಗಳು ಹೆಚ್ಚಿನ ಬಿಸುಪನ್ನು ಹೊರಹಾಕುತ್ತವೆ ಮತ್ತು ದೊಡ್ಡದಾಗಿ ಸದ್ದನ್ನು ಮಾಡುತ್ತವೆ. ಇದೊಂತರ ಕಿರಿಕಿರಿ. ಅಲ್ಲದೇ ಹಲವು ಒಣಗುಬಿಣಿಗೆಗಳು ಬಟ್ಟೆಗಳನ್ನು ಹಾಳುಮಾಡುತ್ತವೆ ಎನ್ನುವ ಕಳವಳ ಸುಮಾರು ಮಂದಿಯಲ್ಲಿದೆ. ಚಳಕದರಿಮೆ ಇದಕ್ಕೂ ಒಂದು ಹೊಳಹಿನೊಂದಿಗೆ ಮುಂದೆ ಬಂದಿದೆ. ಅಮೇರಿಕೆಯ ಟೆನಿಸ್ಸೀ ನಗರದಲ್ಲಿರುವ ಓಕ್ ರಿಡ್ಜ್ ನ್ಯಾಶನಲ್ ಲ್ಯಾಬೋರೇಟರಿ(Oak Ridge National Laboratory) ಅರಕೆಮನೆಯು ಒಂದು ಹೊಸ ಬಗೆಯ ಒಣಗುಬಿಣಿಗೆಯನ್ನು ಮಾರುಕಟ್ಟೆಗೆ ತರುತ್ತಿದೆ. ಈ ಹೊಸ ಮಾಡುಗೆಯಿಂದ ಬಳಸುಗರು ಬಿಸುಪು ಮತ್ತು ಬಟ್ಟೆಯ ಹಾಳಾಗುವಿಕೆಯ ಚಿಂತೆಯನ್ನು ದೂರವಿಡಿ ಎಂದು ಓಕ್ ರಿಡ್ಜ್ ನ್ಯಾಶನಲ್ ಲ್ಯಾಬೋರೇಟರಿ ಹೇಳಿಕೊಂಡಿದೆ.

ಡ್ರಾಯರ್

ಹೊಸ ಒಣಗುಬಿಣಿಗೆ ಕೆಲಸ ಮಾಡುವ ಬಗೆ:

ಈ ಹೊಸ ಮಾಡುಗೆಯ ಅರಸುಗ ಅಯ್ಯೂಬ್ ಮೊಮೆನ್ ಹೇಳುವಂತೆ ಈ ಎಣಿಕೆಯು ಹಳೇ ಪದ್ದತಿಯ ಒಣಗುಬಿಣಿಗೆಗಳಲ್ಲಿರುವ ಬಿಸಿ ಮಾಡಿ ಜಾಡಿಸುವ ದಾಟಿಯ ಬದಲು ನೀರನ್ನು ಹೆಚ್ಚು ಸಲದೆಣಿಕೆಯ(Frequency) ಕಂಪನಗಳಿಂದ ಬದಲಿಸುವ ಚಳಕ ಅಳವಡಿಸಿಕೊಂಡಿದೆ. ಮೆಮೊನ್ ಮತ್ತು ಅವರ ತಂಡದವರು ಪೀಜೋಎಲೆಕ್ಟ್ರಿಕ್ ಟ್ರಾನ್ಸ್‍ಡ್ಯೂಸರ್‍(piezoelectric transducers) ಎನ್ನುವ ಮಿನ್ನೆಣಿ(electric devices)ಗಳನ್ನು ಬಳಸಿದ್ದಾರೆ. ಈ ಮಿನ್ನೆಣಿಗಳು ಅತಿ ಹೆಚ್ಚು ಸಲದೆಣಿಕೆಯ ಹೊರಡಿಸುವ ಮೂಲಕ ಬಟ್ಟೆಯನ್ನು ಸೂಕ್ಶ್ಮವಾಗಿ ಹೊಯ್ದಾಡುತ್ತವೆ. ಹೀಗೆ ತಣ್ಣನೆ ಗಾಳಿಯಲ್ಲೂ ನೀರಿನ ಅಣುಗಳು ಬಟ್ಟೆಯಿಂದ ಹೊರಬಂದು ಇಬ್ಬನಿಯಾಗಿ ಒಂದು ತೊಟ್ಟಿಯಲ್ಲಿ ಕಲೆಹಾಕಲಾಗುತ್ತದೆ. ಹೀಗೆ ನಡೆಯುವ ಈ ಒಣಗುಬಿಣಿಗೆ ಯಾವುದೇ ತರದ ಬಿಸಿ ಹೊರಸೂಸುವುದಿಲ್ಲ, ಅಲ್ಲದೇ ಇದು ಬಟ್ಟೆಗಳಿಗೆ ಯಾವುದೇ ಹಾನಿ ಮಾಡುವದಿಲ್ಲ ಎನ್ನುವುದು ಅರಸುಗರ ಮಾತು.

Dryer

ಈ ಹೊಸಬಗೆಯ ಒಣಗುಬಿಣಿಗೆ ಹಳೆ ದಾಟಿಯವುಗಳಿಗಿಂತ ಹೆಚ್ಚು ಒಳ್ಳೆಯ ದೊರೆತವನ್ನು(Result) ಕೊಡುತ್ತವೆ. ಹಳೆಯ ದಾಟಿಯ ಒಣಗುಬಿಣಿಗೆಗಳಿಗೆ ಹೋಲಿಸಿದರೆ ಅರ್‍ದದಶ್ಟು ಕಡಿಮೆ ಹೊತ್ತಿನಲ್ಲಿ ಅಶ್ಟೇ ಬಟ್ಟೆಗಳನ್ನು ಒಣಗಿಸಬಲ್ಲವು ಅಲ್ಲದೇ ಕಡಿಮೆ ಮಿಂಚೆಯನ್ನು ಬಳಸಿಕೊಳ್ಳುತ್ತವೆ ಎಂದು ಓಕ್ ರಿಡ್ಜ್ ನ್ಯಾಶನಲ್ ಲ್ಯಾಬೋರೇಟರಿ ಹೇಳುತ್ತದೆ.

ಹೊಸ ಒಣಗುಬಿಣಿಗೆಯ ಜಂಬಾರದ ಹಮ್ಮುಗೆ(Business Plan):

ಈ ಹೊಸ ಮಾಡುಗೆಯ ಮೊದಲ ಮಾದರಿ ಈ ವರುಶದ ಆಗಸ್ಟ್ ತಿಂಗಳ ಹೊತ್ತಿಗೆ ತಯಾರಾಗಬಹುದಾಗಿದ್ದು ಮಾರುಕಟ್ಟೆಯಲ್ಲಿ ಕೊಳ್ಳುಗರಿಗೆ ಸಿಗಲು ಇನ್ನೂ ಮೂರ್‍ನಾಲ್ಕು ವರುಶ ಬೇಕಾಗಬಹುದು. ಇದರ ಅರಸುಗ ಅಯ್ಯೂಬ್ ಮೊಮೆನ್ ಜನರಲ್ ಎಲೆಕ್ಟ್ರಿಕ್ ಕಂಪನಿಯೊಂದಿಗೆ ಇದರ ವೆಚ್ಚ ಕಡಿಮೆಗೊಳಿಸಲು ಮತ್ತು ಕಟ್ಟುಬಗೆಯನ್ನು ತಿರುಚಿ ಹೆಚ್ಚು ದೊರೆತ ತರಲು ಕೆಲಸಮಾಡುತ್ತಿದಾರೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು ಅಯ್ನೂರರಿಂದ ಒಂದು ಸಾವಿರ ಅಮೆರಿಕನ್ ಡಾಲರ್ ಆಗಬಹುದಾಗಿದ್ದು ಜನರಲ್ ಎಲೆಕ್ತ್ರಿಕ್ ಕಂಪನಿಯು ಇದರ ಮಾರಾಟವನ್ನು ನೋಡಿಕೊಳ್ಳಲಿದೆ.

ಈ ಮಾಡುಗೆಯು ಆದಶ್ಟು ಬೇಗ ನಾಡನಡುವಿನ ಮಾರುಕಟ್ಟೆ(International Market)ಗೆ ಬಂದು ನಮ್ಮ ಕೈಗೂ ತಲುಪಲಿ.  ಮಳೆಗಾಲವಾದರೂ ತೊಂದರೆಯಿಲ್ಲದೇ ನೀವು ಮನೆಯಲ್ಲಿ ಬಟ್ಟೆ ಒಣಗಿಸುವಂತಾಗಲಿ, ಮೋಡಗಳಿಗೆ ಹೆದರಿ ನೇಸರ ಒಂದೆರಡು ದಿನ ಕಾಣದಿದ್ದರೂ ನಮ್ಮ ಹಸಿ ಬಟ್ಟೆಗಳು ಅವನಿಗಾಗಿ ಕಾಯಬೇಕಿಲ್ಲ!

( ಮಾಹಿತಿ ಮತ್ತು ತಿಟ್ಟ ಸೆಲೆ: money.cnn.com, youtube.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.