ಜಾನಪದ ಸೊಗಡಿನ ‘ಸೋಮನ ಕುಣಿತ’

– ದೇವರಾಜ್ ಮುದಿಗೆರೆ.

ನಮ್ಮ ಮೂಲ, ನಮ್ಮತನಗಳ ಬೆನ್ನಟ್ಟಿ ಹೊರಟಾಗ ನಮಗೆ ತಿಳಿಯುವುದು ಜನಪದ-ದ್ರಾವಿಡತನ, ಜನರು ಆಗಿನ ಕಾಲಕ್ಕೆ ಅನುಗುಣವಾಗಿ ತಮಗೆ ಬೇಕಾದ ರೀತಿಯಲ್ಲಿ ಕಟ್ಟಿಕೊಂಡದ್ದೇ ಜನಪದ. ಸೋಮನ ಕುಣಿತ ಜನಪದದ ಒಂದು ಪ್ರಮುಕ ಕಲೆ, ನಮ್ಮ ಹಿರಿಯರಿಂದ ಕೊಡಲ್ಪಟ್ಟ ಅತ್ಯದ್ಬುತ ಕೊಡುಗೆಗಳಲ್ಲಿ ಇದೂ ಒಂದು. ಈ ಕುಣಿತವು ಹುಟ್ಟಿದ್ದು ದೈವ ಶಕ್ತಿಯ ಜೊತೆಯಾಗಿ, ಗ್ರಾಮದೇವತೆಯ ಅಂಗರಕ್ಶಣೆಗಾಗಿ ಎಂದು ಬಹಳಶ್ಟು ಕುತೂಹಲಕಾರಿ ಕತೆಗಳಿವೆ. ಇದನ್ನು ಕೆಲವು ಕಡೆ ಚೆನ್ನಾಗಿ ಪಾಲನೆ ಮಾಡಿಕೊಂಡು ಬಂದಿದ್ದಾರೆ, ಕೆಲವು ಕಡೆ ಕುಣಿತ ಗೊತ್ತಿಲ್ಲದೆ ಆಚರಣೆ ನಿಂತು ಹೋಗಿದೆ, ಇನ್ನು ಕೆಲವು ಕಡೆ ಸರಿಯಾದ ರೀತಿಯಲ್ಲಿ ಪಾಲನೆ ಮಾಡಲು ಆಗದೆ ಆಕರ‍್ಶಣೆ ಕಳೆದುಕೊಳ್ಳುತ್ತಿದೆ. ತುಮಕೂರು, ಚಿತ್ರದುರ‍್ಗ, ಮಂಡ್ಯ, ಹಾಸನ, ಮಯ್ಸೂರು, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಿಂದೆ ಗ್ರಾಮ ದೇವತೆ ಇದ್ದ ಊರಿನಲ್ಲೆಲ್ಲಾ ಸೋಮಗಳು ಇದ್ದವು. ಕಾಲಾಂತರದಲ್ಲಿ ಗುಡಿ ಹಾಳಾಗಿಯೋ, ಸೋಮಗಳು ಹಾಳಾಗಿಯೋ, ಮತ್ತೆ ಮಾಡಿಸದೆಯೋ, ಕಲೆಯನ್ನು ಅರಿಯದೆಯೋ, ಹಳ್ಳಿಗಳು ನಾಶವಾಗಿಯೋ ಸೋಮನ ಕುಣಿತ ನಿಂತು ಹೋಗಿರಬಹುದು.

ಇಂದಿಗೂ ಸೋಮನ ಕುಣಿತಕ್ಕೆ ಬಹಳ ಪ್ರಸಿದ್ದವಾದದ್ದು ತುಮಕೂರು ಜಿಲ್ಲೆ, ಅದರಲ್ಲೂ ತುರುವೇಕೆರೆಯ ಉಡುಸಲಮ್ಮ ಮತ್ತು ದಂಡಿನಶಿವರದ ಹೊನ್ನಮ್ಮ ದೇವಿಯ ಸೋಮಗಳು ಬಹಳ ಪ್ರಸಿದ್ದಿ ಪಡೆದಿವೆ. ಪ್ರತಿ ಹಬ್ಬದಲ್ಲೂ ಸೋಮನ ಕುಣಿತ ವಿಶೇಶತೆಯಾದ್ದರಿಂದ ನಮಗೆಲ್ಲ ಚಿಕ್ಕಂದಿನಿಂದಲೂ ಚಿರಪರಿಚಿತ. ತುಮಕೂರು ಜಿಲ್ಲೆಯ ಸುಮಾರು ಹಳ್ಳಿಗಳಲ್ಲಿ ಸೋಮನ ಕುಣಿತವನ್ನು ಕಾಣಬಹುದು. ದಂಡಿನಶಿವರದ ಹೊನ್ನಮ್ಮ ದೇವಿಯ ಸೋಮ ಇದೆಲ್ಲಕ್ಕೂ ವಿಬಿನ್ನ, ಇಲ್ಲಿಯ ಸೋಮಗಳನ್ನು ಕುರುಡು ಸೋಮಗಳೆಂತಲೂ ಕರೆಯುತ್ತಾರೆ, ಈ ಸೋಮಗಳು ಕುಣಿಯೋದು ಮದ್ಯ ರಾತ್ರಿ ಮಾತ್ರ, ಈ ಸೋಮಗಳಿಗೆ ಕೋಳಿ ಕೂಗೋದು ಮತ್ತು ಒಳ ಕಲ್ಲು ಅರೆಯೋದು ಕೇಳಿಸಬಾರದು ಅನ್ನುವ ನಂಬಿಕೆ ಈಗಲೂ ಇದೆ.

Dhootharaaya 2

ಒಂದು ದಂತ ಕತೆಯಂತೆ ಒಂದೂರಿನ ಹೆಣ್ಣು ಮಗಳನ್ನು ಇನ್ನೊಂದು ಊರಿಗೆ ಮದುವೆ ಮಾಡಿ ಕೊಟ್ಟಿರುತ್ತಾರೆ, ಅದೊಂದು ದಿನ ಅವಳನ್ನು ತನ್ನ ತವರು ಮನೆಗೆ ಕಳಿಸುವ ಸಲುವಾಗಿ ಮಾವನು ಜೊತೆಯಲ್ಲಿ ಹೋಗಿರುತ್ತಾನೆ. ದಾರಿ ಮದ್ಯದಲ್ಲಿ ಆಕೆಗೆ ಜಲಬಾದೆ ಕಾಣಿಸಿಕೊಳ್ಳುತ್ತದೆ, ಆಗ ಎತ್ತಿನ ಗಾಡಿಯನ್ನು ನಿಲ್ಲಿಸಲು ಹೇಳಿ ತಾನು ಮೂತ್ರ ವಿಸರ‍್ಜಿಸಿ ಬರುವುದಾಗಿಯೂ, ತಾನು ಹಿಂತಿರುಗುವವರೆಗೆ ತಿರುಗಿ ನೋಡದಂತಿರಲು ಮಾವನಿಗೆ ತಿಳಿಸಿ ಹುತ್ತದ ಮರೆಗೆ ಹೋಗುತ್ತಾಳೆ. ತುಂಬಾ ಹೊತ್ತಾದರೂ ಬಾರದ ಸೊಸೆಗಾಗಿ ಮಾವ ತಿರುಗಿ ನೋಡುತ್ತಾನೆ, ಇದರಿಂದ ಅವಮಾನಿತಳಾದ ಸೊಸೆಯು ಹುತ್ತದ ಕೋವೆಯೊಳಕ್ಕೆ ಹೋಗುತ್ತಾಳೆ. ನೋಡ ನೋಡುತ್ತಿದ್ದಂತೆ ಹುತ್ತದಿಂದ ದೇವತೆಯಾಗಿ ಈಚೆ ಬರುತ್ತಾಳೆ, ಜೊತೆಯಲ್ಲಿ ಇಬ್ಬರು ಬಂಟರು ಬರುತ್ತಾರೆ ಅವರನ್ನೇ ‘ಸೋಮ’ ಎಂದು ಕರೆದರು ಎಂಬ ಪ್ರತೀತಿಯಿದೆ. ಜನಪದರ ಬಾಯಿಯಲ್ಲಿ ಈ ಸೋಮ ಕೆಲವೊಂದು ಕಡೆ ಸ್ವಾಮ, ಚೋಮ ಆಗಿ ಹೋಗಿದ್ದಾನೆ.

Doddamma 2

ದಂತ ಕತೆಯನ್ನು ಗಣನೆಗೆ ತೆಗೆದುಕೊಂಡರೆ ಎಲ್ಲ ಊರುಗಳಲ್ಲಿಯೂ ಹೀಗೆ ಆಗಿತ್ತು ಎಂದು ಹೇಳಲಾಗುವುದಿಲ್ಲ, ಜಾನಪದವೇ ಹಾಗೆ ಜನರಿಂದ ಹುಟ್ಟಿದ್ದು. ಒಂದು ಊರಿನಲ್ಲಿ ಆಚರಿಸಿದ್ದನ್ನು ಮತ್ತೊಂದು ಊರಿನ ಜನ ಅನುಸರಿಸಿರಬಹುದು, ಊರಿನ ಹುಟ್ಟಿನಲ್ಲೇ ಇದನ್ನು ನಡೆಸಿಕೊಂಡು ಬಂದಿರಬಹುದು, ಊರಿಂದ ಊರಿಗೆ ಗುಳೆ ಹೋದ ಜನ ಅಲ್ಲಿಯೂ ಅದನ್ನು ಮುಂದುವರಿಸಿರಬಹುದು, ಸುಗ್ಗಿ ಕಾಲ ಮುಗಿದ ಮೇಲೆ, ಯುಗಾದಿ-ಮುಂಗಾರು ಮಳೆಯ ನಡುವಿನ ಬೇಸಿಗೆಯ ಬಿಡುವಿನ ಸಮಯದಲ್ಲಿ ಊರಿನ ದೇವರ ಹಬ್ಬ ಮಾಡಿ ಸಂಬ್ರಮಾಚರಣೆಗೆ, ಮನರಂಜನೆಗೆ ಮಾಡಿಕೊಂಡದ್ದು ಆಗಿರಬಹುದು. ತಮ್ಮ ರಕ್ಶಣೆಗಾಗಿ ದೇವಿಯ ಆರಾದಕರಾದವರು ಇದನ್ನು ಜಾರಿಗೆ ತಂದಿರಲುಬಹುದು. ಕರಾವಳಿ ಪ್ರದೇಶದಲ್ಲಿ ಬೂತಾರಾದನೆ ಇರುವ ಹಾಗೆ, ಬೆಂಗಳೂರಿನ ಸುತ್ತ ಮುತ್ತ ಕರಗ ಉತ್ಸವ ಇರುವ ಹಾಗೆ ಒಂದೊಂದು ಪ್ರದೇಶದಲ್ಲಿ ಒಂದೊಂದು ಕಲೆಯನ್ನೋ / ಆರಾದನೆಯನ್ನೋ ಆಚರಿಸಿಕೊಂಡು ಬಂದಿದ್ದಾರೆ ನಮ್ಮ ಹಿರಿಯರು.

ಸೋಮಗಳು ಗ್ರಾಮದೇವತೆಯ ಬಂಟರು, ಅಂಗರಕ್ಶಕರು, ಕುರಿ, ದನ ಇತ್ಯಾದಿ ಪ್ರಾಣಿಗಳಿಗೆ ಯಾವುದೇ ಕಾಯಿಲೆ ಬರದಂತೆ ತಡೆಯುವವರು ಎಂಬ ನಂಬಿಕೆಯ ನೆಲೆಗಟ್ಟಿನ ಮೇಲೆ ಮುಂದುವರೆದುಕೊಂಡು ಬಂದಿದೆ. ಸಾಮಾನ್ಯವಾಗಿ 2 ಸೋಮಗಳಿರುತ್ತವೆ, ಕೆಲವೊಂದು ಕಡೆ 3 ಸೋಮಗಳಿರುವುದು ಉಂಟು. ಕೆಂಪು, ಹಳದಿ, ಕಪ್ಪು, ಹಸಿರು ಬಣ್ಣದ ಸೋಮಗಳಿವೆ. ಕೆಂಪು ಬಣ್ಣದ ಸೋಮಕ್ಕೆ ದೂತರಾಯ-ಪಾಪಣ್ಣ-ಕೆಂಪಣ್ಣ-ಕೆಂಪರಾಯ ಎಂತಲೂ, ಹಳದಿ ಬಣ್ಣದ ಸೋಮಕ್ಕೆ ಕೆಂಚರಾಯ-ಈರಣ್ಣ-ಕೆಂಚಣ್ಣ ಎಂತಲೂ, ಕಪ್ಪು ಬಣ್ಣದ ಸೋಮಕ್ಕೆ ಕರಿಯಣ್ಣ ಎಂತಲೂ ಕರೆಯುತ್ತಾರೆ. ಸೋಮಗಳಿರುವ ಕಡೆಯಲ್ಲಿ ಕೆಂಚರಾಯ-ದೂತರಾಯ/ಈರಣ್ಣ-ಪಾಪಣ್ಣ ಜೋಡಿಯಾಗಿ ಇರುತ್ತವೆ, ಕೆಲವೊಂದು ಕಡೆ ಇವೆರಡರ ಜೊತೆಗೆ ಒಂದು ಕಪ್ಪು ಅತವಾ ಹಸಿರು ಸೋಮ ಇರುತ್ತದೆ. ಎಲ್ಲಿಯೂ ಒಂಟಿ ಸೋಮ ಇರುವ ಉದಾಹರಣೆಗಳಿಲ್ಲ.

Dhootharaaya 5

ಈ ಸೋಮನ ಮುಕವಾಡಗಳನ್ನು ದೇವ ಬೂತಾಳೆ/ರಕ್ತ ಬೂತಾಳೆ ಮರದಿಂದ ಮಾತ್ರ ತಯಾರಿಸುತ್ತಾರೆ. ಈ ಸೋಮಗಳನ್ನು ತಯಾರು ಮಾಡುವ ವಿದಾನವೇ ಬೇರೆ, ಎಲ್ಲ ಗೊಂಬೆಗಳಂತೆ ಇದನ್ನು ಯಾರ‍್ಯಾರೋ ತಯಾರಿಸುವುದಿಲ್ಲ, ಹಿಂದಿನಿಂದ ಮಾಡಿಕೊಂಡು ಬಂದ ವಂಶಜರೋ ಅತವಾ ಕೆಲವೇ ಕೆಲವು ವಿಶ್ವಕರ‍್ಮಿಗಳು ಮಾತ್ರ ಇದನ್ನು ತಯಾರಿಸುತ್ತಾರೆ, ಕಾರಣ ಇದನ್ನು ತಯಾರಿಸುವಾಗ ಅವರು ಪಾಲಿಸುವ ನಿರ‍್ದಿಶ್ಟ ವಿದಿ ವಿದಾನಗಳು. ನನಗೆ ತಿಳಿದಿರುವ ಹಾಗೆ ತುಮಕೂರಿನ ಕೋಟೆ ಆಂಜನೇಯ
ದೇವಸ್ತಾನದ ಪಕ್ಕದ ಬೀದಿಯಲ್ಲಿ, ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಮುನಿಯೂರಿನಲ್ಲಿ, ವಡಕೆಗಟ್ಟದಲ್ಲಿ, ಗುಬ್ಬಿ ಮತ್ತು ಸಿರಾಗಳಲ್ಲಿ ತಲಾ ಒಂದೊಂದು ಮನೆತನದವರು ಮಾಡುತ್ತಾರೆ.

ಅಗಲವಾದ ಹಣೆ, ವಿಶಾಲವಾದ ಕಿವಿ-ಕಣ್ಣುಗಳು, ದೊಡ್ಡ ಮೂಗು, ಬಾಚಿ ಹಲ್ಲು, ಕೋರೆಹಲ್ಲುಗಳ ಮುಕವಾಡವನ್ನು ಮರದಿಂದ ಕೆತ್ತಿದ ಮೇಲೆ ಅದನ್ನು ನಯಗೊಳಿಸುತ್ತಾರೆ. ಮುಕವಾಡದ ರೂಪ ಬಯ-ಬಕ್ತಿಗಳ ಪ್ರತೀಕವಾಗುವಂತೆ ಬಣ್ಣ ಬಳಿಯುತ್ತಾರೆ. ಮುಕವಾಡದಲ್ಲಿ ತಲೆಯನ್ನು ತೂರಿಸಿ ಅದನ್ನು ಹೊತ್ತು ಕುಣಿಯಲು ನಿಂತ ವ್ಯಕ್ತಿಗೆ ಹೊರಗಿನ ಪರಿಸರ ಕಾಣುವಂತೆ, ಮುಕವಾಡದ ಮೂಗಿನ ಹೊಳ್ಳೆಗಳಿಗೂ ಹೊರುವವನ ಕಣ್ಣಿಗೂ ಹೊಂದಿಕೆಯಾಗುವಂತೆ ಏರ‍್ಪಾಡು ಇರುತ್ತದೆ. ಮುಕವಾಡದ ಮೇಲೆ ದೊಡ್ಡದಾದ, ಪ್ರಬಾವಳಿಯಂತೆ ಕಾಣುವ, ಬಣ್ಣದ ಬಟ್ಟೆಯಿಂದ ಸಿಂಗರಿಸಲು ಅನುವಾಗುವಂತೆ ಬಿದಿರಿನ ಕಡ್ಡಿಗಳ ಕಮಾನು ಕಟ್ಟುತ್ತಾರೆ. ಗ್ರಾಮದೇವತೆಯ ವಿವಿದ ಬಣ್ಣಗಳ ಸೀರೆಗಳನ್ನು ಪ್ರಬಾವಳಿಯಿಂದ ಕೆಳಕ್ಕೆ, ಸೋಮ ಹೊರುವವರ ಹಿಂದಿನ ಶರೀರ ಕಾಣಿಸದಂತೆ ಇಳಿಬಿಟ್ಟಿರುತ್ತಾರೆ.

ಸುಮಾರು ಬಣ್ಣದ ವಿವಿದ ಸೀರೆಗಳು ಸೋಮನನ್ನು ಹೊರುವವರ ಕಾಲುಗಳವರೆಗೆ ಎರಡೂ ಬುಜಗಳ ಪಕ್ಕದಲ್ಲಿ ಇಳಿ ಬೀಳುವಂತೆ ಕಟ್ಟಿರುತ್ತಾರೆ. ಪ್ರಬಾವಳಿಯ ಮೇಲೆಲ್ಲ ಗಮಲು ಬೀರುವ ಹೊಂಬಾಳೆ,ಕೆಂಪು ಕಣಗಿಲೆ,ಕಾಕಟ,ದಾಸವಾಳ ಇತ್ಯಾದಿ ನಾನಾ ತರದ ಹೂವುಗಳಿಂದ ಅಲಂಕಾರ ಮಾಡಲಾಗುತ್ತದೆ.

Dhootharaaya 1

ದೂತರಾಯ ಮತ್ತು ಕೆಂಚರಾಯ

ಕೆಂಚರಾಯ – ಸಾತ್ವಿಕ ಮೂರುತಿ, ಹಣೆಯಲ್ಲಿ ಅಡ್ಡವಾಗಿ ಬಳಿದ ವಿಬೂತಿಯಿರುತ್ತದೆ. ಹಳದಿ ಸೋಮನನ್ನು ಹೆಣ್ಣು ಸೋಮವೆಂದು ಕೆಲವು ಕಡೆ ಹೇಳುತ್ತಾರೆ, ಕಾರಣ ಹೆಂಗಸರು ಕೆನ್ನೆಗೆ ಅರಿಶಿನ ಬಳಿಯುವುದರ ಸಲುವಾಗಿ ಇರಬಹುದು.

ದೂತರಾಯ – ರೌದ್ರ ಮೂರುತಿ, ಹಣೆಯಲ್ಲಿ ಉದ್ದನೆಯ 3 ಕೆಂಪು-ಬಿಳಿ ನಾಮಗಳಿರುತ್ತವೆ. ಕಪ್ಪು ಮತ್ತು ಹಸಿರು ಬಣ್ಣದ ಸೋಮಗಳ ಮುಕದ ಚಿತ್ತಾರವು ದೂತರಾಯನಿಗೆ ಸಮವಾಗಿರುತ್ತದೆ. ಹಣೆಗೆ ನಾಮ/ವಿಬೂತಿ, ಕೋರೆಹಲ್ಲು, ದೊಡ್ಡ ಕಣ್ಣು, ಉದ್ದನೆಯ ಕೊಂಕು ಮೀಸೆ, ಅಗಲವಾದ ಬಾಯಿ, ಉದ್ದನೆಯ ಮೂಗು, ಬಾಗಿ ನಿಂತಿರುವ ಹುಬ್ಬು, ಗಲ್ಲದ ಮೇಲೆ ಚಿಕ್ಕ ಚುಕ್ಕಿ ಚಿತ್ತಾರಗಳಿರುತ್ತವೆ. ಕೆಂಚರಾಯ ಸಾತ್ವಿಕ ಗುಣವುಳ್ಳ ಸೋಮ ಎಂದು ಹೇಳಿದರೂ ಕೆಲವೊಂದು ಬಾರಿ ದೂತರಾಯನಿಗಿಂತಲೂ ರುದ್ರಾವತಾರಿಯಾಗುತ್ತಾನೆ.

Somana Veshadhari with Soma

ಸೋಮನ ವೇಶದಾರಿ

ಸಾಮಾನ್ಯವಾಗಿ ಗ್ರಾಮದೇವತೆಯ ಪೂಜಾರಿ ಮನೆತನದವರು ಸೋಮನನ್ನು ಹೊರುವವರು. ಇವರು ಸಿದ್ದವಾಗುವ ವಿದಾನವೇ ಚೆಂದ, ದೇವರಿಗೆ ಹರಕೆಯಾಗಿ ಬಂದ ಸೀರೆಗಳನ್ನೇ ಇವರು ದರಿಸುತ್ತಾರೆ, ಸಣ್ಣ ನೆರಿಗೆಗಳ ಸಮೇತ ಸೆರಗಿಲ್ಲದೆ ಪಂಚೆಯ/ಲಂಗದ ತರಹ ಸೀರೆಯನ್ನುಟ್ಟು ಸೊಂಟದ ಸುತ್ತ ಬಟ್ಟೆಯೊಂದನ್ನು ಸುತ್ತುತ್ತಾರೆ, ತಲೆಯ ಮೇಲೆ ಸಿಂಬಿಯ ಹಾಗೆ ಸುತ್ತು ಕಟ್ಟುತ್ತಾರೆ, ಕಾಲಿಗೆ ಗೆಜ್ಜೆ, ಕೈಗಳಿಗೆ ಕಡಗ, ಕೊರಳಿನಲ್ಲಿ ಸರದೊಂದಿಗೆ ದೇವರ ಮುದ್ರೆಯಿರುವ ತಾಳಿಯನ್ನು ಎದೆಯ ಮದ್ಯದಲ್ಲಿ ರಾರಾಜಿಸುವಂತೆ ಇಳಿಬಿಟ್ಟು ಅಲಂಕಾರಗೊಳ್ಳುತ್ತಾರೆ.

ಅಲಂಕಾರ ಮಾಡಿದ ಸೋಮನನ್ನು ನೋಡಲು 2 ಕಣ್ಣು ಸಾಲದು, ಆ ಬಾವ ಬಕ್ತಿಗಳೇ ಬೇರೆ. ಸೋಮನ ಕುಣಿಯುವ ವ್ಯಕ್ತಿ, ಕೈಯಲ್ಲಿ ನೀಳವಾದ ಬೆತ್ತ/ನವಿಲು ಗರಿಯ ಗುಚ್ಚವನ್ನು ಹಿಡಿದು, ದೇವತೆಯನ್ನು ತನ್ನಲ್ಲಿಯೇ ನಿವೇದಿಸಿಕೊಂಡು ಒಂದಾಗುವ ಮನೋಬಾವದಿಂದ ಸೋಮನನ್ನು ಹೊರುವ ಹೊತ್ತಿಗೆ, ಅರೆ-ವಾದ್ಯ-ತಮಟೆ-ದೋಣು-ನಗಾರಿಗಳ ತಾಳದ ಜೊತೆಗೆ ಪದಗಾರನೊಬ್ಬ ಜನರಿಂದಲೇ ರಚಿತವಾದ ಸೋಮನ ಪದಗಳನ್ನು ಹಾಡುತ್ತಾನೆ. ಸೋಮನನ್ನು ಹೊರುವವರು ಉದ್ದನೆಯ ವ್ಯಕ್ತಿಯಾಗಿದ್ದಲ್ಲಿ ಅದರ ಅಂದವನ್ನು ನೋಡಿಯೇ ಅನುಬವಿಸಬೇಕು. ನಾನು ಕಂಡ ಹಾಗೆ ನಮ್ಮ ತುರುವೇಕೆರೆ ತಾಲೂಕಿನಲ್ಲಿ ನಾವು ಚಿಕ್ಕವರಿದ್ದಾಗ ತುರುವೇಕೆರೆ, ಕಾಡಸೂರು, ಹುಲಿಕಲ್ ಮತ್ತು ಗೋಣಿ ತುಮಕೂರಿನಲ್ಲಿ ಉದ್ದನೆಯ ವ್ಯಕ್ತಿಗಳಿದ್ದರು. ಆ ಗಳಿಗೆಗೆ, ಆ ಗೆಜ್ಜೆಯ ಸದ್ದಿಗೆ, ವಾದ್ಯದ ನಾದಕ್ಕೆ, ತಮಟೆಯ ತಾಳಕ್ಕೆ, ಸೋಮನ ಉಗ್ರ ರೂಪಕ್ಕೆ ಎಂತವರ ಎದೆಯು ಜಲ್ಲೆಂದು ಹೋಗುತ್ತದೆ, ಕುಣಿಯುತ್ತ ಬರುವ ಸೋಮ ಹತ್ತಿರ ಹತ್ತಿರ ಆಗುತ್ತಿದ್ದಂತೆ ನಾವು ದೂರ ಸರಿಯುತ್ತಿದುದು ಉಂಟು. ಈಗ ಅದರ ಪಕ್ಕದಲ್ಲೇ ನಿಂತು ಆನಂದಿಸುತ್ತೇವೆ, ನಮ್ಮೊಳಗೆ ಬೆರೆತು ಹೋಗಿದೆ.

ಜನರೇ ಕಟ್ಟಿದ ಜನಪದವಾದ ಸೋಮನ ಪದಗಳಲ್ಲಿ ಕುತೂಹಲಕಾರಿ ಅಂಶಗಳಿವೆ, ಊರಿನ ದೇವತೆಗೆ ಕೆಂಪಮ್ಮ, ದೊಡ್ಡಮ್ಮ ಅತವಾ ಆ ಊರಿನ ಹೆಸರಿನ ಜೊತೆಗೆ ಅಮ್ಮ ಎಂದು ಸೇರಿಸುತ್ತಾರೆ. ಸೋಮನ ಪದಗಳು ಇದರೊಟ್ಟಿಗೆ ಬೆಳೆದು ಬಂದಿವೆ. ಅದಕ್ಕೆ ತಕ್ಕನಾಗಿ ಹೊಂದುವ ಹಾಗೆ ಸೋಮನ ಪದಗಳನ್ನು ಕಟ್ಟಿರುತ್ತಾರೆ.

ನಮ್ಮೂರಿನ ಗ್ರಾಮ ದೇವತೆ ದೊಡ್ಡಮ್ಮನ ಕುರಿತಾಗಿ ಕಟ್ಟಿರುವ ಪದಗಳಲ್ಲಿ ಒಂದಾದ:

ಮೂಗುತಿ ಮುಂಭಾರ, ಹಣೆಗಟ್ಟು ಹಿಂಭಾರ
ದೊಡ್ದಂಚಿನ ಸೀರೆ ಉಡುಬಾರೆ। ದೊಡ್ಡಮ್ಮ
ನಿನ್ನ ನಡು ಸಣ್ಣ||

ಕನ್ನಡ-ಕನ್ನಡಿಗರ ಬಗ್ಗೆ ‘ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣತಿ ಮತಿಗಳ್’ ಎಂದು ಹೇಳಿರುವುದು ಇಂತ ಕಾರಣಗಳಿಗಾಗಿಯೇ. ಅಕ್ಶರ ಬರೆಯಲು ಗೊತ್ತಿಲ್ಲದ ಸಾಮಾನ್ಯ ಜನರ ಬಾಯಿಂದ ಎಂತ ಕಾವ್ಯ ಪ್ರಯೋಗಗಳು ಆಗಿದೆ ಅನ್ನುವುದಕ್ಕೆ ಇದೆ ಉದಾಹರಣೆ.

ಊರಿನ ದೇವರ ಹೆಸರು ಕೆಂಪಮ್ಮ ಎಂತಾದರೆ,

ಅಮ್ಮನ ನುಡಿಸುತ್ತ ಘಮ್ಮನ ದೇವಮ್ಮ
ಗಂಡುಭೂತಾಳೆ ಗಜನಿಂಬೆ। ಮರದಡಿ
ದಂಡು ಬಿಟ್ಟವಳೆ ಕೆಂಪವ್ವ||

ಕಾಡಸೂರಿನ ಕೆಂಪಮ್ಮ-ಮುದಿಗೆರೆ ದೊಡ್ಡಮ್ಮನ ಕುರಿತು,

ಆ ತೇರು, ಈ ತೇರು ಕಾಡ್ಸೂರವ್ವನ ತೇರು
ದೊಡ್ಡವ್ವ ಕಳಿಸವ್ವ ಹೊಸ ತೇರು |
ದೊಡ್ಡವ್ವ ಕಳಿಸಿದ ಹೊಸ ತೇರು ಹರಿವಾಗ
ಆಕಾಶದಾ ಗಂಟೆ ನುಡಿದ್ಯಾವೋ||

ಹಬ್ಬದ ಸಮಯದಲ್ಲಿ ಊರಿನ ಹೆಂಗಳೆಯರು ಹೊತ್ತು ತರುವ ಆರತಿಯ ಕುರಿತು,

ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗೀಯ
ಜಲ್ಲ ಜಲ್ಲಾನೆ ಉದುರಮ್ಮ | ನಮ್ಮನೆಯ
ಬೆಲ್ಲದಾರುತಿಯ ಬೆಳಗೇವು ||

ದೂತರಾಯ ರಸಿಕನೆಂಬ ಕಲ್ಪನೆ ಇರುವ ಕಡೆಗಳಲ್ಲಿ ಅದಕ್ಕನುಗುಣವಾದ ಪದಗಳನ್ನೇ ಹಾಡುತ್ತಾರೆ.

ಏರಿ ಮೇಲೋಗೋರು ಏಳು ಜನ ಸೂಳೇರು
ಯಾರಿಗೆ ಕಣ್ಣ ಇಟ್ಟಾರು | ನಮ್ಮ ತೇರಿಗೆ
ಮಾಲೆ ಬಿಡುವ ದೂತಯ್ಯಗೆ ಕಣ್ಣ ಇಟ್ಟಾರು ||

Dhootharaaya 3

ಸೋಮನ ಉಗಮದ ಬಗ್ಗೆ ನಿರ‍್ದಿಶ್ಟವಾದ ಮಾಹಿತಿಗಳಿಲ್ಲ. ಗೊ.ರು.ಚನ್ನಬಸಪ್ಪನವರು ಮಾತ್ರ ಇದರ ಬಗ್ಗೆ ಒಂದು ಮಟ್ಟದ ಸಂಶೋದನೆಯನ್ನು ಮಾಡಿದ್ದಾರೆಯೇ ಹೊರತು ಬೇರೆ ಎಲ್ಲಿಯೂ ಮಾಹಿತಿ ದೊರಕುವುದಿಲ್ಲ. ಬೇರೆ ಬೇರೆ ಪ್ರದೇಶಗಳಲ್ಲಿ ಬಿನ್ನ ಬಿನ್ನ ಕತೆಗಳು ಸಿಕ್ಕುತ್ತವೆ. ಅವರೇ ಹೇಳುವ ಪ್ರಕಾರ “ಮೂರು ನಾಲ್ಕು ಜಿಲ್ಲೆಗಳಲ್ಲಿ ಪ್ರಚಲಿತವಿದ್ದರೂ ಈ ಕಲೆಗೆ ಸಂಬಂದಿಸಿದಂತೆ ಇರುವ ದಾರ‍್ಮಿಕ ಕಲ್ಪನೆ ಮತ್ತು ಅಚಲವಾದ ಶ್ರದ್ದೆ ಮೆಚ್ಚುವಂತಹದು. ಬೇರೆ ಊರಿನ ಆಹ್ವಾನದ ಮೇಲೆ ಜಾತ್ರೆ ಉತ್ಸವಗಳಿಗೆ ಸೋಮನ ಕುಣಿತಕ್ಕೆ ಹೋಗಬೇಕಾದರೂ ದೇವಿಯ ಅಪ್ಪಣೆ ಕೇಳಿ ಒಪ್ಪಿಗೆ ನೀಡಿದ ನಂತರವೇ ಹೋಗುವುದು. ಒಟ್ಟಿನಲ್ಲಿ ಸಾಂಪ್ರದಾಯಿಕ ಹಿನ್ನಲೆಯಲ್ಲಿ, ದಾರ‍್ಮಿಕ ಪರಿವೇಶದಲ್ಲ ಬೆಳೆದು ಬಂದಿರುವ ಸೋಮನ ಕುಣಿತ ಜನಪದ ಕಲೆಗಳಲ್ಲಿ ಒಂದು ಗಂಡುಕಲೆ ಎಂದು ಹೇಳಬಹುದು.

ಜನಪದದ ಸೊಗಡು ಇಶ್ಟವಾಗುವುದು ಇಂತಹ ಆಚರಣೆಗಳಿಂದಲೇ. ಊರಿನ ಪ್ರಮುಕ ಹಬ್ಬಗಳಲ್ಲಿ ಸೋಮನ ಕುಣಿತ ಸಾಮಾನ್ಯವಾಗಿ ಇದ್ದೆ ಇರುತ್ತದೆ, ಗ್ರಾಮ ದೇವತೆ ಗುಡಿಯಿಂದ ಹೊರಗೆ ಹೊರಟಾಗೆಲ್ಲ ಸೋಮಗಳು ಜೊತೆಯಾಗಿ ಹೊರಡುವುದು ಸರ‍್ವೇ ಸಾಮಾನ್ಯ. ಊರೆಲ್ಲ ಮೆರವಣಿಗೆ ಮಾಡಿ ಮುಗಿದ ಮೇಲೆ ಸೋಮಗಳು ಗುಡಿದುಂಬುವುದು ಒಂದು ವಿಶೇಶ ಸಮಯ ಮತ್ತು ರೋಮಾಂಚನಕಾರಿ. ಕೆಲವೊಂದು ಸಲ ಗುಡಿದುಂಬಿಸುವಾಗ ದೂತರಾಯನಿಗೆ ಕೋಳಿ ಬಲಿ ಕೊಡುವುದೂ ಉಂಟು. ಬಹಳ ಹೊತ್ತು ಸೋಮ ಹೊತ್ತ ಕಾರಣ ರಕ್ತ ಬೂತಾಳೆ ತಲೆ ಹಿಡಿಯುತ್ತದೆ, ಎಶ್ಟೇ ಬಲ ಹಾಕಿದರು ಮುಕವಾಡ ತೆಗೆಯಲು ಕಶ್ಟವಾಗುತ್ತದೆ ಎಂಬ ನಂಬಿಕೆ ಇದೆ.

ಎಶ್ಟೋ ವಿಶಯಗಳು ನಂಬಿಕೆಯ ಮೇಲಶ್ಟೇ ಸಾಗುತ್ತಿವೆ, ಪ್ರತಿಯೊಂದಕ್ಕೂ ಉತ್ತರಗಳನ್ನು ಹುಡುಕುತ್ತ ಹೋದರೆ ತರ‍್ಕಕ್ಕೆ ಸಿಗುವುದಿಲ್ಲ, ನಮ್ಮ ಸಂಸ್ಕ್ರುತಿಯನ್ನು ಕಲಿಯಲು ಹೊರಗಿನಿಂದ ಬೇರೆಯವರು ನಮ್ಮಲ್ಲಿ ಬರುತ್ತಿದ್ದಾರೆ, ನಾವೇ ನಮ್ಮ ಆಚರಣೆಗಳನ್ನು ಕೈ ಬಿಟ್ಟರೆ ನಮ್ಮತನ ಕಳೆದುಕೊಳ್ಳುತ್ತೇವೆ. ಸೋಮನ ಕುಣಿತ ಒಂದು ಸಂಬ್ರಮದ ಆಚರಣೆ ಕೂಡ ಹೌದು. ಅದೆಶ್ಟೋ ಶಾಸ್ತ್ರ ಸಂಪ್ರದಾಯಗಳು ಸಂಬ್ರಮಕ್ಕೆ ಕಂಡುಕೊಂಡದ್ದು. ಇತ್ತೀಚೆಗೆ ಯಾವ ಕಾರಣವೋ ಏನೋ ಕೆಲವೊಂದು ಬದಲಾಗುತ್ತಿದೆ !!!. ಮೊನ್ನೆ ಹೀಗೆ ಮಂಡ್ಯ ಕಡೆಯ ಹಳ್ಳಿಯೊಂದರ ಗೆಳೆಯನೊಬ್ಬನನ್ನು’ನಿಮ್ಮೂರಲ್ಲಿ ಸೋಮನ ಕುಣಿತ ಮಾಡ್ತಾರಾ’ ಅಂತ ಕೇಳಿದ್ದಕ್ಕೆ ‘ಹಬ್ಬನೇ ಸರಿಯಾಗಿ ಮಾಡಲ್ಲ, ಇನ್ನು ಕುಣಿತ ಎಲ್ಲಿ ಮಾಡ್ತಾರೆ’ ಅನ್ನೋ ಉತ್ತರ ಬಂತು, ಹೀಗೆ ಕೆಲವೊಂದು ಕಡೆ ಕುಣಿತ ಬಾರದೆ ನಿಲ್ಲಿಸಿದ್ದಾರೆ.

ಆದುನಿಕತೆ, ಪಾಶ್ಚಿಮಾತ್ಯತೆ, ವೈಜ್ನಾನಿಕತೆಗಳ ನಡುವೆ ನಮ್ಮ ಜನಪದರು ಕಟ್ಟಿಕೊಟ್ಟ ಜಾನಪದ ಕಲೆಗಳು ಮರೆಯಾಗುವುದು ಬೇಡ, ಮುಂದಿನ ಪೀಳಿಗೆಗಳಿಗೂ ದಕ್ಕಲಿ, ಜಾನಪದ ಕಲೆಗಳನ್ನು ಪ್ರೋತ್ಸಾಹಿಸೋಣ, ನಮ್ಮ ಹಿರಿಯರು ಕೊಟ್ಟಿದ್ದನ್ನು ಹಾಗೆ ಉಳಿಸಿಕೊಳ್ಳೋಣ. ಸೋಮನ ಪದಗಳು ಬರಹ ರೂಪದಲ್ಲಿ ಸಿಕ್ಕುವುದು ಬಹಳ ವಿರಳ, ಜನರಿಂದ ರಚಿತವಾದ ಜನರ ಬಾಯಿಯಲ್ಲೇ ಇರುವ ಈ ಪದಗಳನ್ನು ಬರಹಕ್ಕೆ ಇಳಿಸುವ ಪ್ರಮುಕ ಕೆಲಸವೊಂದು ಆಗಬೇಕಿದೆ.

ಸೋಮನ ಕುಣಿತದ ಸೊಬಗನ್ನು ವೀಡಿಯೋದಲ್ಲಿ ಸೆರೆಹಿಡಿಯುವ ಪ್ರಯತ್ನವನ್ನು ನಾನು ಮಾಡಿರುವೆ ಅದರ ಕೆಲವು ವೀಡಿಯೋ ತುಣುಕುಗಳು ಇಲ್ಲಿವೆ ನೋಡಿ.

(ಚಿತ್ರ ಹಾಗು ವೀಡಿಯೋ ಸೆಲೆ: ದೇವರಾಜ್ ಮುದಿಗೆರೆ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: