ಪ್ರಿನ್ಸಿಪಾಲರ ಕುತಂತ್ರ

– ಸುರೇಶ್ ಗೌಡ ಎಂ.ಬಿ.


ಅದೊಂದು ಪ್ರತಿಶ್ಟಿತ ಕಾಲೇಜ್. ಕಾಲೇಜಿನ ತುಂಬಾ ವಿದ್ಯಾರ‍್ತಿಗಳು. ಅದಕ್ಕೆ ತಕ್ಕನಾಗಿ ಕಲಿಸುಗರ ಸಿಬ್ಬಂದಿ. ಒಳ್ಳೆಯ ಸಂಬಳ, ಅನುಕೂಲಕರ ವಾತಾವರಣ. ಎಲ್ಲಾ ಚೆನ್ನಾಗಿತ್ತು. ಆ ಕಾಲೇಜಿನಲ್ಲಿ ಒಬ್ಬ ಲೆಕ್ಚರರ್ ಇದ್ರು. ಅವರು ಇಡೀ ಕಾಲೇಜಿನಲ್ಲೇ, ಅತ್ಯಂತ ಪ್ರಾಮಾಣಿಕ ಹಾಗೂ ಕಟ್ಟುನಿಟ್ಟಿನ ಲೆಕ್ಚರರ್ ಅಂತಾನೆ ಪೇಮಸ್ ಆಗಿದ್ರು. ಅಶ್ಟೇ ಚೆನ್ನಾಗಿ ಪಾಟ ಮಾಡೋರು. ವಿದ್ಯಾರ‍್ತಿಗಳಿಗೆ ಅವರಂದ್ರೆ ಪ್ರಾಣ. ಅವರು ಕ್ಲಾಸ್ ಶುರು ಮಾಡಿದ ಮೇಲೆ, ತಡವಾಗಿ ಯಾರೇ ಬಂದ್ರು ಸೇರ‍್ಸ್ತಿರಲಿಲ್ಲ. ಪ್ರಿನ್ಸಿಪಾಲ್ ಹೇಳಿದ್ರೂ ಅಶ್ಟೆ, ಮ್ಯಾನೆಜ್ ಮೆಂಟ್ ಹೇಳಿದ್ರೂ ಅಶ್ಟೆ!

ಪ್ರಿನ್ಸಿಪಾಲ್ ಗೆ ಇವರನ್ನ ಕಂಡ್ರೆ ಅಶ್ಟಕಶ್ಟೆ. ಇವರನ್ನ ಕೆಲಸದಿಂದ ತೆಗೆದು ಹಾಕೋಕೆ ಕಾಯ್ತಾ ಇದ್ರು. ಅವರ ಜೊತೆ ಕೆಲ ಲೆಕ್ಚರರ‍್ಸ್ ಕೈ ಜೋಡಿಸಿದ್ರು. ಸಮಯಕ್ಕಾಗಿ ಹೊಂಚು ಹಾಕ್ತಾ ಇದ್ರು. ಇವರೋ ಯಾರಿಗೂ ತಲೆ ಬಾಗದ, ಯಾರ ತಂಟೆಗೂ ಹೋಗದ ವ್ಯಕ್ತಿ. ತಾನಾಯಿತು, ತನ್ನ ಕೆಲಸ ಆಯ್ತು ಅಂತ ಇದ್ರು. ಸರಿಯಾದ ಸಮಯಕ್ಕೆ ಕ್ಲಾಸ್ ತಗೊಳೋದು, ಟೈಮ್ ಮುಗುದ್ ಮೇಲೆ ಬಿಡೋದು. ಇದೇ ಅವರ ನಿತ್ಯ ಕಾಯಕ. 5 ಬೆರಳುಗಳು ಒಂದೇ ತರಹ ಇರಲ್ಲ. ಹಾಗೆ ವಿದ್ಯಾರ‍್ತಿಗಳು ಸಹ. ಕೆಲವು ವಿದ್ಯಾರ‍್ತಿಗಳು ದಿನಾ ತಡವಾಗಿ ಬರೋದು, ಆಚೆ ನಿಲ್ಲೋದು ಮಾಡೋರು. ಹೀಗೆ ದಿನ ಸಾಗ್ತಾ ಇತ್ತು.

ಒಂದಿನ ಪ್ರಿನ್ಸಿಪಾಲ್ ಬಾಮೈದ ಮಾಸ್ಟರ್ ಡಿಗ್ರಿ ಮುಗುಸ್ಕೊಂಡು ಬಂದ. ಪ್ರಿನ್ಸಿಪಾಲ್ ಗೆ ಆ ಲೆಕ್ಚರರ್ ಜಾಗದಲ್ಲಿ ತಮ್ಮ ಬಾಮೈದನನ್ನ ಸೇರಿಸಬೇಕು ಅಂತ ಆಸೆ ಇತ್ತು. ಅದಕ್ಕಾಗಿ ಒಂದು ಉಪಾಯ ಮಾಡಿದ್ರು. ಅದಕ್ಕೆ ಕೆಲವು ಲೆಕ್ಚರರ‍್ಸ್ ಬೆಂಬಲಿಸಿದ್ರು. ನಾಳೆನೆ ಕಾರ‍್ಯರೂಪಕ್ಕೆ ತರೋದು ಅಂತ ಮಾತುಕತೆನೂ ಆಯ್ತು. ಪಾಪಿಗಳಿಗೆ ನಾಳೆ ಅನ್ನೋದು ಬೇಗ ಬರುತ್ತೆ. ಹಾಗೆ ನಾಳೆ ಬಂದೇ ಬಿಡ್ತು.

ಎಂದಿನಂತೆ ತರಗತಿಗಳು ಪ್ರಾರಂಬ ಆದವು. ಪ್ರಿನ್ಸಿಪಾಲ್ ಪ್ರತಿ ದಿನ ಕಾಲೇಜಿಗೆ ಲೇಟಾಗಿ ಬರುತ್ತಿದ್ದ ಹುಡುಗರನ್ನ ನೆನ್ನೆ ರಾತ್ರಿಯೇ ಬೇಟಿಯಾಗಿ ಏನ್ ಮಾಡಬೇಕು ಅನ್ನೋದನ್ನು ಮೊದಲೇ ತಿಳಿಸಿದ್ರು. ಹಾಗೇ ನಡೆಯಬೇಕು ಅಂತಾನೂ ತಾಕೀತು ಮಾಡಿದ್ರು. ಸರಿ ಮೊದಲೇ ಪ್ಲಾನ್ ಮಾಡಿಕೊಂಡ ಹಾಗೆ, ಅಂದು ಕೆಲವು ವಿದ್ಯಾರ‍್ತಿಗಳು ತಡವಾಗಿ ಕ್ಲಾಸ್ ಗೆ ಬಂದ್ರು. ಸರಿ, ಮಾಮೂಲಿನಂತೆ ಇವರು ಆ ಹುಡುಗರನ್ನ ಕ್ಲಾಸ್ ಗೆ ಸೇರಿಸಲಿಲ್ಲ. ಕ್ಲಾಸ್ ಗೆ ಸೇರ‍್ಸಿಲ್ಲ ಅಂದ್ರೆ ಬುದ್ದಿ ಕಲಿಯುತ್ತಾರೆ ಅಂತ ಅಂದುಕೊಂಡಿದ್ರು. ಆದರೆ ಅಲ್ಲಿ ಆಗಿದ್ದೇ ಬೇರೆ. ಆ ಹುಡುಗರೆಲ್ಲ ಸೇರಿ ಪ್ರಿನ್ಸಿಪಾಲ್ಗೆ ಬರವಣಿಗೆಯಲ್ಲಿ ದೂರು ಕೊಟ್ರು. ಪ್ರಿನ್ಸಿಪಾಲ್ ಆ ಲೆಕ್ಚರರನ್ನ ಬರಹೇಳುದ್ರು. ಲೆಕ್ಚರರ್ ಬಂದ್ರು.

ಪ್ರಿನ್ಸಿಪಾಲ್ : “ಏನ್ ಸಾರ್ ನಿಮ್ಮ ಮೇಲೆ ದೂರು ಬಂದಿದೆ. ಈ ಹುಡುಗರನ್ನ ಕ್ಲಾಸ್ ಗೆ ಸೇರ‍್ಸಲ್ಲ ಅಂತ. ಅವರ ಮೇಲೆ ನೀವು ಹಗೆ ಸಾದಿಸುತ್ತಿರಂತೆ. ಯಾಕೆ ನಿಮಗೆ ಅಶ್ಪು ದ್ವೇಶ? ಅವರು ದೂರು ಕೊಟ್ಟಿದ್ದಾರೆ, ಇದಕ್ಕೆ ನೀವು ಏನ್ ಹೇಳ್ತಿರ?”

ಲೆಕ್ಚರರ್ : “ನೋಡಿ ಸಾರ್ ನಂಗೆ ಯಾರ ಮೇಲೆ ಹಗೆ ಇಲ್ಲ. ಎಲ್ಲಾ ನನ್ನ ಮಕ್ಕಳಿದ್ದ ಹಾಗೆ. ಆದರೆ ಶಿಸ್ತು ಕಲಿಸಬೇಕಾದ್ದು ನಮ್ಮ ಕರ‍್ತವ್ಯ. ದಿನಾ ತಡವಾಗಿ ಬರೋರು, ಹಾಗಾಗಿ ನಾನು ಅವರನ್ನ ಕ್ಲಾಸ್ ಗೆ ಸೇರಿಸಿಲ್ಲ. ಲೇಟಾಗಿ ಬರೋದ್ರಿಂದ, ಮದ್ಯೆ ಮದ್ಯೆ ಕ್ಲಾಸ್ ಒಳಗೆ ಬರೋದ್ರಿಂದ, ಕ್ಲಾಸ್ ನಲ್ಲಿ ಇರೋ ಮಕ್ಕಳಿಗೆ ತೊಂದರೆ ಆಗುತ್ತೆ ಅಂತ. ಆಚೆ ನಿಲ್ಸೋದ್ರಿಂದ, ಮಕ್ಕಳಲ್ಲಿ ಶಿಸ್ತು ಬೆಳೆದು ನಾಳೆನಾದ್ರು ಕ್ಲಾಸ್ ಗೆ ಬೇಗ ಬರ‍್ತಾರೇನೋ ಅಂತ ಅಶ್ಟೆ. ಇದನ್ನ ತಪ್ಪು ತಿಳಿದುಕೊಂಡ್ರೆ ಹೇಗೆ ಸಾರ‍್?”

ಪ್ರಿನ್ಸಿಪಾಲ್  : “ನೋಡ್ರಿ ಲೆಕ್ಚರರ‍್ರೆ, ನಾವು ಇರೋದು ಪಾಟ ಮಾಡೋಕಶ್ಟೆ. ಶಿಸ್ತನ್ನ ಕಲಿಸೋಕೆ ಅವರೇನು ಚಿಕ್ಕ ಮಕ್ಕಳಲ್ಲ. ಹಾಗೆ ಇದು ಸ್ಕೂಲು ಅಲ್ಲ, ಕಾಲೇಜು. ಅವರಿಗೂ ವಿವೇಕ ಅನ್ನೋದು ಇರುತ್ತೆ, ನೀವು ಈ ರೀತಿ ಆಚೆ ನಿಲ್ಸೋದ್ರಿಂದ ಅವರಿಗೆ ಅವಮಾನ ಆಗಿ, ಏನಾದ್ರು ಹೆಚ್ಚು ಕಮ್ಮಿ ಮಾಡ್ಕೊಂಡ್ರೆ ಯಾರ‍್ರೀ ಹೊಣೆ? ನಿಮಗೆ ಸಂಬಳ ಬರೋದು ಅವರು ಕಟ್ಟೋ ಪೀ ದುಡ್ಡಿಂದ. ಮತ್ತೆ ನಿಮಗೆ ಸಂಬಳ ಕೊಡೋದು ಪಾಟ ಮಾಡೋಕೆ, ಅವರ ಜೀವನದ ಜೊತೆ ಆಟ ಆಡೋಕಲ್ಲ. ಮೊದಲು ಆ ಮಕ್ಕಳ ಹತ್ರ ಸಾರಿ ಕೇಳಿ. ಮುಂದೆ ಈ ರೀತಿ ಮಾಡೋಲ್ಲ ಅಂತ ‘ತಪ್ಪೊಪ್ಪಿಗೆ’ ಬರೆದು ಕೊಡಿ”

ಲೆಕ್ಚರರ್ : “ಏನ್ ಸಾರ್ ನೀವು ಹೇಳ್ತಾ ಇರೋದು? ನಾನು ಒಬ್ಬ ಸಿನ್ಸಿಯರ್ ಲೆಕ್ಚರರ್ ಆಗಿ, ನಾನು ಕ್ಶಮೆ ಕೇಳಿ ತಪ್ಪೊಪ್ಪಿಗೆ ಬರೆದು ಕೊಡೋದ? ಆಗಲ್ಲ, ಆಗೋದೆ ಇಲ್ಲ ಸಾರ್. ಬೇಕಾದ್ರೆ ಅವರನ್ನೆ ಸಾರಿ ಕೇಳೋಕೆ ಹೇಳಿ”

ಪ್ರಿನ್ಸಿಪಾಲ್ : “ನೋ, ನೋ ಮೋರ್ ಡಿಸ್ಕಶನ್. ಜಸ್ಟ್ ಡೂ ವಾಟ್ ಐ ಸೆ. ಸಾರಿ ಕೇಳಿ, ಕೆಲಸಕ್ಕೆ ಹೋಗಿ, ಇಲ್ಲ ಅಂದ್ರೆ ಕೆಲಸದಿಂದ ತೆಗೆಯಬೇಕಾಗುತ್ತದೆ. ಎಚ್ಚರಿಕೆ!”

ಲೆಕ್ಚರರ್ : “ಓಹೋ ಕೆಲಸದಿಂದ ತೆಗೆಯುತ್ತೀರಾ. ಅದಕ್ಕೆ ನಾನು ಯಾವತ್ತೂ ಅವಕಾಶ ಮಾಡಿಕೊಡಲ್ಲ. ಮರ‍್ಯಾದೆ ಇಲ್ಲದ ಜಾಗದಲ್ಲಿ ನಾನು ಒಂದು ಕ್ಶಣ ಕೂಡ ಇರಲ್ಲ. ವಿದ್ಯೆ ಇದೆ, ಕೆಲಸ ಕಿತ್ಕೊಂಡ್ರು ವಿದ್ಯೆ ಕಿತ್ಕೊಳ್ಳೋಕೆ ಅಗಲ್ಲ” ಅಂತ ಹೇಳಿ ರಾಜೀನಾಮೆ ಓಲೆ ಬರೆದು, “ತಗೊಳ್ಳಿ ಸಾರ್ ನನ್ನ ರಾಜೀನಾಮೆ. ಕೈ ಮತ್ತು ಬಾಯಿ ಎರಡೂ ಸರಿಯಾಗಿ ಇದ್ರೆ ಎಲ್ಲಿ ಬೇಕಾದ್ರು ಬದುಕಬಹುದು. ಕೂಲಿ ಮಾಡಿಕೊಂಡು ಬದುಕುದ್ರು, ಈ ರೀತಿ ನನ್ನನ್ನ ನಾನು ಮಾರಿಕೊಂಡು ಕಂಡಿತ ಬದುಕಲ್ಲ ಸಾರ್. ಗುಡ್ ಬೈ”

ಪ್ರಿನ್ಸಿಪಾಲ್ ಮನಸ್ಸಲ್ಲೇ “ಒಳ್ಳೆಯವರನ್ನ ಹಳ್ಳಕ್ಕೆ ತಳ್ಳೋದು ಬಹಳ ಸುಲಬ” ಅಂತ ಗಹಗಹಿಸಿ ನಗುತ್ತಿದ್ದರು. ಕೊನೆಗೂ ಅವರ ಕುತಂತ್ರ ಗೆದ್ದಿತು.

( ಚಿತ್ರ ಸೆಲೆ: liningadrawer )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Kanchana V Joshi says:

    Namaste….
    Pls dont close the topic in very injustice mode…. continue the story and
    give a end which we always believe in old saying “Satya Meva Jayate” THe
    lecturer should get honor interms of Justice.

    Regards,
    KVJ

    *Kanchana H N*
    *| Bangalore | Karnataka | India |*

    2016-08-03 7:01 GMT+05:30 “ಹೊನಲು” :

    > ನಲ್ಬರಹ posted: “- ಸುರೇಶ್ ಗೌಡ ಎಂ.ಬಿ. ಅದೊಂದು ಪ್ರತಿಶ್ಟಿತ ಕಾಲೇಜ್. ಕಾಲೇಜಿನ
    > ತುಂಬಾ ವಿದ್ಯಾರ‍್ತಿಗಳು. ಅದಕ್ಕೆ ತಕ್ಕನಾಗಿ ಕಲಿಸುಗರ ಸಿಬ್ಬಂದಿ. ಒಳ್ಳೆಯ ಸಂಬಳ,
    > ಅನುಕೂಲಕರ ವಾತಾವರಣ. ಎಲ್ಲಾ ಚೆನ್ನಾಗಿತ್ತು. ಆ ಕಾಲೇಜಿನಲ್ಲಿ ಒಬ್ಬ ಲೆಕ್ಚರರ್ ಇದ್ರು.
    > ಅವರು ಇಡೀ ಕಾಲೇಜಿನಲ್ಲೇ, ಅತ್ಯಂತ ಪ್ರಾಮಾಣಿಕ ಹಾಗೂ ಕಟ್ಟುನಿಟ್ಟಿನ”
    >

ಅನಿಸಿಕೆ ಬರೆಯಿರಿ:

%d bloggers like this: