ಬರುತಿದೆ ಬಂಡಿಗಳ ಮೇಲೊಂದು ಬಸ್ಸು!

– ವಿಜಯಮಹಾಂತೇಶ ಮುಜಗೊಂಡ.

TEB3

ನಿಮಗೆ ಬೆಂಗಳೂರಿನ ಓಡಾಟದಿರುಕು(Traffic Jam) ಅತಿದೊಡ್ಡ ತಲೆನೋವು ಅನಿಸಿದ್ದರೆ ನೀವು ಹಿಂದೆಂದೂ ಕಂಡು ಕೇಳಿರದ ಹಲವು ಓಡಾಟದಿರುಕು‍ಗಳ ಬಗೆಗೆ ಸ್ವಲ್ಪ ತಿಳಿದುಕೊಳ್ಳಬೇಕು.

  • ಚೀನಾದ ಬೀಜಿಂಗ್‍ನಲ್ಲಿ ಆಗಸ್ಟ್ 2010ರಲ್ಲಿ ಉಂಟಾದ ಒಂದು ಓಡಾಟದಿರುಕು ಸುಮಾರು 62 ಮೈಲಿ ಉದ್ದ ಹಬ್ಬಿತ್ತಂತೆ. ಇದನ್ನು ಸರಿಪಡಿಸಲು ಕಳೆದದ್ದು 12 ದಿನ!
  • ಅಮೆರಿಕದ ನ್ಯೂಯಾರ್‍ಕ್‍ನಲ್ಲಿ ನಡೆದ ಹಾಡು ಹಬ್ಬದಿಂದಾಗಿ(Music fest) ಸುಮಾರು 3 ದಿನಗಳ ಹೊತ್ತು ಉಂಟಾದ ಓಡಾಟದಿರುಕಿನ ಉದ್ದ 20 ಮೈಲಿ, ಅದೂ 1969ರಲ್ಲಿ!
  • ಇತ್ತೀಚಿಗೆ ಬ್ರೆಕ್ಸಿಟ್(BrExit) ಹೊತ್ತಿನಲ್ಲಿ ಇಂಗ್ಲೆಂಡ್-ಪ್ರಾನ್ಸ್ ಗಡಿಯಲ್ಲಿ 15 ಗಂಟೆಗಳ ವರೆಗೆ ಉಂಟಾದ ಓಡಾಟದಿರುಕು ಸುಮಾರು 19 ಕಿ.ಮೀ. ಉದ್ದ ಇತ್ತಂತೆ!

ಇಂದು ಬೆಳೆಯುತ್ತಿವ ಊರುಗಳಲ್ಲಿ ಅತಿದೊಡ್ಡ ತಲೆನೋವು ಅಂದರೆ ಓಡಾಟದಿರುಕು. ಇದಕ್ಕೆ ಉತ್ತರ ಕಂಡುಕೊಳ್ಳಲು ಇಂದು ಸರಕಾರೀ ಸಂಸ್ತೆಗಳು ಹಲ ಬಗೆಯ ಪ್ರಯತ್ನಗಳನ್ನು ನಡೆಸುತ್ತಿವೆ ಮತ್ತು ಸಾಕಶ್ಟು ಆಯ್ಕೆಗಳನ್ನು ಅರಸುತ್ತಲೇ ಇವೆ. ಮೊದಲಿಗೆ, ಎತ್ತರಿಸಿದ ಮೇಲ್ದಾರಿ(elevated flyover), ನೆಲದಡಿಯ ಹಾದಿ(subway)ಗಳಿಂದ ಹಿಡಿದು ಇತ್ತೀಚಿನ ಮೆಟ್ರೋ ರಯ್ಲುಗಳು ಕೂಡ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಸರಿಯಾದ ಉತ್ತರವಾಗುತ್ತಿಲ್ಲ. ಮೆಟ್ರೋ ರಯ್ಲುಗಳ ಹೆಚ್ಚಳದಿಂದಲೂ ಓಡಾಟದಿರುಕುಗಳನ್ನು ದೂರಮಾಡಲು ಆಗುತ್ತಿಲ್ಲ ಎಂದಮೇಲೆ ಇನ್ನೇನು ಎನ್ನುವ ಅತಿದೊಡ್ಡ ಚಿಂತೆ ಎಲ್ಲರಿಗೂ ಆಗಿದೆ. ಅಲ್ಲದೇ ಮೆಟ್ರೋ ಅತವಾ ನೆಲದಡಿಯ ದಾರಿಗಳನ್ನು ಕಟ್ಟಲು ತಗಲುವ ಹೊತ್ತು ಮತ್ತು ವೆಚ್ಚ ಎರಡೂ ಅತಿಹೆಚ್ಚು.

ಹೆಚ್ಚುತ್ತಿರುವ ಓಡಾಟದಿರುಕುಗಳಿಂದ ರೋಸಿಹೋಗಿದ್ದ ಚೀನಾ ಇದೀಗ ಹೊಸದೊಂದು ಹೊಳಹು ಹುಡುಕಿದೆ. ದಾರಿಯಲ್ಲಿ ಹೋಗುತ್ತಿರುವ ಬಂಡಿಗಳ ಮೇಲೆ ಬಸ್ಸೊಂದು ಹೋಗುವ ಹಾಗಿದ್ದರೆ?! ಹವ್ದು, ಚೀನಾ ಇಂತಹುದೊಂದು ಬಸ್ಸನ್ನು ತಯಾರಿಸಿದ್ದು ಸುದ್ದಿಹಾಳೆಗಳಲ್ಲಿ, ಮಿಂಬಲೆ(internet)ಯಲ್ಲಿ ಈಗ ಅದರದೇ ಮಾತು. ಇಂತಹ ಬಸ್ಸಿನ ಓಡುತಿಟ್ಟ ಮತ್ತದರ ಸುದ್ದಿ ಮಿಂಬಲೆಯಲ್ಲಿ ಕಿಚ್ಚೆಬ್ಬಿಸಿದೆ. ಈ ಹೊಸಬಗೆಯ ಬಸ್ಸನ್ನು ನೆಲೆಗೊಳಿಸಲು(install) ಬೇಕಾಗುವ ವೆಚ್ಚ  ಮತ್ತು  ಹೊತ್ತು, ಮೆಟ್ರೋ ಅತವಾ ನೆಲದಡಿಯ ದಾರಿಗಳಿಗೆ ಹೋಲಿಸಿದಲ್ಲಿ  ತುಂಬ ಕಡಿಮೆ ಆಗುವುದು ಎನ್ನಲಾಗಿದೆ. ಈ ಹಿಂದೆ 2010ರಲ್ಲಿ ಶೆಂಜೆನ್ ಹಾಶಿ ಪ್ಯೂಚರ್ ಪಾರ್‍ಕಿಂಗ್ ಇಕ್ವಿಪ್‍ಮೆಂಟ್ ಕಂಪನಿಯ ಬಿಣಿಯರಿಗ ಸಾಂಗ್ ಯೂಜು(Song Youzhou) ಇದರ ಕುರಿತು ಹೇಳಿದ್ದರು. ಅಂದಿನಿಂದ ಇಲ್ಲಿಯವರೆಗೂ ಇದರ ಕುರಿತು ಮಿಂಬಲೆಯಲ್ಲಿ ಹಲವು ಸುದ್ದಿಗಳು ಓಡಾಡುತ್ತಲೇ ಇದ್ದವು. ಇತ್ತೀಚಿಗೆ ಚೀನಾದ ಹೇಬೆ ನಾಡಿನ ಚಿನ್‍-ಹ್ವಾಂಗ್‍-ಡೋವ್ ಪಟ್ಟಣದಲ್ಲಿ ಇಂತಹ ಬಸ್ಸೊಂದು ದಾರಿಗೆ ಇಳಿದಿದ್ದನ್ನು ಕಂಡ ಹಲವು ಮಂದಿ ಇದು ಬರಿ ಕನಸಲ್ಲ ನನಸು ಎಂದಿದ್ದಾರೆ. ಈ ಹೊಸಬಗೆಯ ಬಸ್‍ಗೆ ಟೆಬ್(TEB – Transit Elevated Bus) ಎನ್ನಲಾಗಿದೆ.

TEB2

ಈ ಬಸ್ಸು ದಾರಿಯಲ್ಲಿರುವ ಬಂಡಿಗಳ ಮೇಲಿಂದ ಹೋಗಬಹುದಾಗಿದ್ದು, ಇದರ ಎರಡು ಬದಿಗಳಶ್ಟೇ ನೆಲಕ್ಕೆ ತಾಕುತ್ತವೆ. ಸುಮಾರು 25 ಅಡಿ ಅಗಲ ಅರುವ ಇದರ ಕೆಳಗೆ ಎರಡು ಬಂಡಿಗಳು ಒಟ್ಟಿಗೇ ನುಗ್ಗಬಲ್ಲವು. ಒಟ್ಟು 16 ಅಡಿ ಎತ್ತರವಿರುವ ಈ ಬಸ್ಸಿನ ಕೆಳಗೆ 7 ಅಡಿಯಶ್ಟು ಎತ್ತರದ ಬಂಡಿಗಳು ಸುಳುವಾಗಿ ಹಾದುಹೋಗಬಹುದು. ಮಿನ್ನಾರ್‍ಪಿನಿಂದ(electricity) ನಡೆಯುವ ಈ ಬಸ್ಸು 300 ಮಂದಿಯನ್ನು ಹೊತ್ತೊಯ್ಯಬಲ್ಲುದು. ಇದು ದಾರಿಯ ಇಬ್ಬದಿಯಲ್ಲಿ ಅಡಕಿಸಿದ(embeded) ಹಳಿಗಳ ಮೇಲೆ ಓಡುತ್ತದೆ. ಟೆಬ್ ಗಂಟೆಗೆ 60 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದ್ದು, ಇದಕ್ಕೆಂದೇ ವಿಶೇಶವಾಗಿ ಕಟ್ಟಲಾದ ನಿಲುಗಡೆಗಳಲ್ಲಿ ಮಂದಿಗೆ ಹತ್ತುವ ಮತ್ತು ಇಳಿಯುವ ಏರ್‍ಪಾಡು ಇರಲಿದೆಯಂತೆ. ಅಲ್ಲದೇ ಬಾಗಿಲುಗಳಿಗೆ ಜೋಡಿಸಿರುವ ಎಳೆಯಬಲ್ಲ ಮೆಟ್ಟಿಲು ಮತ್ತು ಏರಿಳಿತೇರು(elevator)ಗಳ ಮೂಲಕ ಇದನ್ನು ಹತ್ತಬಹುದಾಗಿದೆ. ಒಟ್ಟಿಗೆ ಇಂತಹ ನಾಲ್ಕು ಬಸ್ಸುಗಳನ್ನು ಒಂದರ ಹಿಂದೆ ಒಂದನ್ನು ಜೋಡಿಸಿ, ಒಮ್ಮೆಲೆ 1200 ಮಂದಿಯನ್ನು ಹೊತ್ತೊಯ್ಯಲು ರಯ್ಲಿನಂತಹ ಏರ‍್ಪಾಡು ಮಾಡಬಹುದು ಎನ್ನುತ್ತಾರೆ ಇದರ ಬಿಣಿಯರಿಗರು. ಇದಕ್ಕೆ ತಗಲುವ ವೆಚ್ಚ ನೆಲದಡಿಯ ಹಾದಿ(subway)ಗೆ ಹೋಲಿಸಿದರೆ ಬರೀ ಅಯ್ದನೆಯ ಒಂದರಶ್ಟು ಮಾತ್ರ ಅಂತೆ!

ಕೆಲವೊಮ್ಮೆ ನೀವು ಕುಳಿತಿರುವ ರಯ್ಲು ಅಲ್ಲೇ ನಿಂತಿದ್ದು ಪಕ್ಕದ ರಯ್ಲು ಮುಂದೆ ಹೊರಟರೆ ನೀವಿರುವ ಬಂಡಿ ಹಿಂದೆ ಹೋದ ಹಾಗೆ ಅನಿಸುತ್ತದೆ. ಅದೇ ತರ ಟೆಬ್‍ನ ಕೆಳಗೆ ಸಾಗುವ ಬಂಡಿಯ ನಡೆಸುಗನ ಕಣ್ಣೆಲೆ(perspective) ಗೊಂದಲಕ್ಕೀಡಾಗುವುದಿಲ್ಲವೇ ಎನ್ನುವ ಕಳವಳಕ್ಕೂ ಇಲ್ಲಿ ಉತ್ತರವಿದೆ. ಟೆಬ್‍ನ ಕೆಳಗೆ ಇರುವ ಮಿಡುಕುವ ಬೆಳಕಿ(animated light)ಗಳು ಚಲಿಸುಗರಿಗೆ ಸರಿಯಾದ ಕಣ್ಣೆಲೆ ನೀಡುವುದು. ಮಿಂಬಲೆಯಲ್ಲಿರುವ ಹಲವು ಓಡುತಿಟ್ಟಗಳು ಟೆಬ್‍ನ ಕೆಳಗೆ ಇರುವ ಮೋಡಗಳು ಕಣ್ಣೆಲೆಯ ಹೊಂದಿಕೆಗೆ ಅನುವು ಮಾಡಿಕೊಡಬಲ್ಲುವು ಎನ್ನುವ ಕುತೂಹಲವನ್ನು ಮೂಡಿಸಿವೆ. ಕೆಳಗೆ ಹೊರಟಿರುವ ಬಂಡಿಗಳು ಹೆಚ್ಚು ಹತ್ತಿರ ಬರದಂತೆ ತಡೆಯಲು ಎಚ್ಚರಿಕೆ ಗಂಟೆಗಳು ಇವೆ. ಅಲ್ಲದೇ ಇದರಲ್ಲಿರುವ ಅರಿವುಕಗಳು(sensors) ಮುಂದೆ ಬರಬಹುದಾದು ಹೆಚ್ಚು ಎತ್ತರದ ಬಂಡಿಗಳು ಅತವಾ ಬೇರೆ ತಡೆಗಳ ಬಗ್ಗೆ ಎಚ್ಚರಿಸುತ್ತವೆ ಎನ್ನಲಾಗಿದೆ.

ಚೀನಾದ ಸುದ್ದಿದಾಣ(news-site) ಪೀಪಲ್ಸ್ ಡೈಲಿ ಆನ್ಲೈನ್ ಹೇಳುವಂತೆ ಇದು ಒಳಾಳ್ವಿಕೆಯ ಒರೆ(internal testing)ಗಾಗಿ ನಡೆಸಲಾಗಿದ್ದು, ಇನ್ನೂ ದಾರಿಗೆ ಇಳಿಯಲು ಕೆಲ ವಾರಗಳ ಹೊತ್ತು ಬೇಕಾಗಿದೆಯಂತೆ. ಹಲವು ಅಂತೆ-ಕಂತೆಗಳ ನಡುವೆ ಇರುವಾಗಲೇ ಇದು ನಮ್ಮ ದೇಶದಲ್ಲೂ ಬಂದರೆ ಹೇಗೆ ಅನುಕೂಲ ಆಗಬಲ್ಲುದು ಅನ್ನುವ ಕುರಿತು ನಮ್ಮ ಪ್ರದಾನಿಗಳು ಕುತೂಹಲ ತೋರಿದ್ದಾರೆ. ಈ ಹೊಸಬಗೆಯ ಬಸ್ಸು ಆದಶ್ಟು ಬೇಗ ನಮ್ಮ ನಡುವೆ ಬಂದು ಓಡಾಟದಿರುಕಿನ ತಲೆನೋವು ದೂರವಾಗಲಿ.

(ಮಾಹಿತಿ ಮತ್ತು ಚಿತ್ರಸೆಲೆ: yahoo.com, bbc.com, vox.com, en.people.cn, youtube.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಈ ತರಹದ ಬಂಡಿಗಳು ಭವಿಷ್ಯದ ಾಶಾ ಕಿರಣವೆನಿಸುತ್ತದೆ. ಸುದ್ದಿಗಾಗಿ ಧನ್ಯವಾದಗಳು.

  2. ಬರುತಿದೆ ಬಂಡಿಗಳ ಮೇಲೊಂದು ಬಸ್ಸು thumba channagide

ಅನಿಸಿಕೆ ಬರೆಯಿರಿ: