ಕಾಂಕ್ರೀಟ್ ರಸ್ತೆಗಳಿಂದ ನಮಗೆ ಒಳಿತಿದೆಯೇ?

ಸಿದ್ದಮ್ಮ ಎಸ್.

Road

ನರಮನುಶ್ಯ ಕಲಿಯೊಲ್ಲ, ಒಳ್ಳೇದು ಉಳಿಸೊಲ್ಲ
ಅವನು ನಡೆಯೊ ದಾರಿಲಿ ಗರಿಕೇನು ಬೆಳೆಯೊಲ್ಲ!

ಚಲನಚಿತ್ರವೊಂದರ ಗೀತೆ. ಈ ಗೀತೆಯು ಬಹಳಶ್ಟು ಅರ‍್ತಗರ‍್ಬಿತವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಮನುಶ್ಯ ತಾನು ನಡೆದಾಡುವ ಎಲ್ಲಾ ಜಾಗವನ್ನು ಕಾಂಕ್ರೀಟನ್ನಾಗಿ ಮಾಡುತ್ತಿದ್ದಾನೆ. ನೀರಿನ ಮೇಲೆಯೂ ಸಿಮೆಂಟ್ ಬಳಸಿ ಕಟ್ಟಡ ಕಟ್ಟಿದ ಹಿರಿಮೆ ಮನುಶ್ಯನದು. ಆದ್ದರಿಂದಲೇ ಏನೊ ಮನುಶ್ಯನು ನೆಡೆದಾಡುತ್ತಿರುವ ದಾರಿಯಲ್ಲಿ ಗರಿಕೆಯೂ ಕಣ್ಮರೆಯಾಗಿರುವುದು. ಇತ್ತೀಚಿನ ದಿನಗಳಲ್ಲಿ ಅಂದರೆ 10 ವರ‍್ಶಗಳಿಂದ ಈಚೆಗೆ ನಗರದ ಎಲ್ಲಕಡೆ ಅಶ್ಟೇ ಏಕೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ಕಾಂಕ್ರೀಟ್ ರಸ್ತೆಗಳು ನಿರ‍್ಮಾಣವಾಗುತ್ತಿದೆ. ರಸ್ತೆ ನಿರ‍್ಮಾಣ ಕಾರ‍್ಯದಲ್ಲಿ ಡಾಂಬರಿಗೆ ಬದಲಾಗಿ ಕಾಂಕ್ರೀಟನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ. ಕಾಂಕ್ರೀಟ್ ರಸ್ತೆಯ ನಿರ‍್ವಹಣೆ ಸುಲಬ ಸಾದ್ಯ ಎನ್ನುವುದೇ ಈ ರಸ್ತೆಗಳು ಹೆಚ್ಚಾಗಿ ನಿರ‍್ಮಾಣವಾಗಲು ಕಾರಣವಾಗಿದೆ.

ಡಾಂಬರನ್ನು ಬಳಸುವ ರಸ್ತೆಗಳಲ್ಲಿ ಮಳೆಯ ನೀರು ಸುಲಬವಾಗಿ ಇಂಗುತ್ತದೆ ಹಾಗು ರಸ್ತೆಯ ಬದಿಗಳಲ್ಲಿ ಗರಿಕೆಯಂತ ಗಿಡಗಳು ಬೆಳೆಯಲು ಸಾದ್ಯವಿದೆ. ಆದರೆ ಕಾಂಕ್ರೀಟ್ ರಸ್ತೆಗಳು ಹಾಗಲ್ಲ. ಈ ರಸ್ತೆಗಳು ನೀರನ್ನು ಇಂಗಲು ಬಿಡುವುದಿಲ್ಲ. ಇದರಿಂದಾಗಿ ಹೆಚ್ಚಿನ ಮಳೆನೀರು ವ್ಯರ‍್ತವಾಗಿ ಒಳಚರಂಡಿ ಸೇರುತ್ತಿದೆ.

ಸಾಮಾನ್ಯವಾಗಿ ನಗರಗಳಲ್ಲಿ ರಸ್ತೆಗಳನ್ನು ಆಗ್ಗಿಂದಾಗ್ಗೆ ಅಗೆಯಲಾಗುತ್ತಿರುತ್ತದೆ. ಏಕೆಂದರೆ ಒಂದೇ ರಸ್ತೆಯಲ್ಲಿ ನೀರಿನ ಮತ್ತು ಒಳಚರಂಡಿ ಪೈಪುಗಳನ್ನು ಅಳವಡಿಸಲಾಗಿರುತ್ತದೆ. ಈ ರಸ್ತೆಗಳಲ್ಲಿ ಮೊದಲು ಕಾಂಕ್ರೀಟ್ ರಸ್ತೆಯನ್ನು ನಿರ‍್ಮಿಸಿ ನಂತರ ಅದನ್ನು ಅಗೆಯಲಾಗುತ್ತಿದೆ. ಇದರಿಂದ ಸಾರ‍್ವಜನಿಕರ ಹಣ ಪೋಲಾಗುತ್ತಿದೆ. ಅಶ್ಟೇ ಅಲ್ಲ ಮೂಲಬೂತ ಅವಶ್ಯಕತೆಗಳಲ್ಲಿ ಪ್ರಮುಕವಾದುದು ನೀರು. ಈಗಾಗಲೇ ನೀರಿಗೆ ಎಲ್ಲೆಡೆಯೂ ಹಾಹಾಕಾರ ಎದ್ದಿರುವುದು ತಿಳಿದಿರುವ ಸಂಗತಿ. ಆದರೆ ನಾವು ನೀರನ್ನು ಉಳಿಸುವ ಪ್ರಯತ್ನಕ್ಕೆ ಇನ್ನೂ ಮುಂದಾಗದಿರುವುದು ಮಾತ್ರ ವಿಪರ‍್ಯಾಸವೇ ಸರಿ.

ಒಟ್ಟಾರೆಯಾಗಿ ನೋಡಿದಾಗ ಕಾಂಕ್ರೀಟ್ ರಸ್ತೆಗಳು ಪರಿಸರಕ್ಕೆ ಪೂರಕವಾಗಿಲ್ಲ. ಇದು ಬೂಮಿಯ ಒಳಗೆ ನೀರು ಇಂಗುವುದನ್ನು ತಡೆಗಟ್ಟುತ್ತಿದೆ. ಇದರಿಂದಾಗಿ ಅಂತರ‍್ಜಲದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ ಮತ್ತು ಅಂತರ‍್ಜಲದ ನೀರೂ ಕಲುಶಿತಗೊಳ್ಳುತ್ತಿವೆ. ಹೀಗೆ ಮುಂದುವರೆದರೆ ನೀರಿಗಾಗಿ ಯುದ್ದವಚನ್ನು ಮಾಡುವ ಸಂಬವ ಬಂದರೂ ಆಶ್ಚರ‍್ಯವಿಲ್ಲ. ಆದ್ದರಿಂದ ಕಾಂಕ್ರೀಟ್ ರಸ್ತೆಗಳ ನಿರ‍್ಮಾಣ ಕಾರ‍್ಯವನ್ನು ತಡೆಗಟ್ಟುವುದು ನಮ್ಮೆಲ್ಲರ ಆದ್ಯ ಕರ‍್ತವ್ಯವಾಗಿದೆ. ರಸ್ತೆ ಬದಿಯಲ್ಲಿ ಹೆಚ್ಚಾಗಿ ಮರ-ಗಿಡಗಳನ್ನು ಬೆಳೆಸುವುದು, ಇಂಗುಗುಂಡಿಗಳನ್ನು ನಿರ‍್ಮಿಸಿ ನೀರಿನ ರಕ್ಶಣೆಯನ್ನು ಮಾಡಬೇಕಾಗಿದೆ.

(ಚಿತ್ರ ಸೆಲೆ: constructionreviewonline.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: