“ನನ್ನ ತಂದೆ ನೆನಪಾದರು”

– ಸುರೇಶ್ ಗೌಡ ಎಂ.ಬಿ.

doddoru
ನಾನು ಬಿಎಂಟಿಸಿ ಡ್ರೈವರ್. ಇದು ಸುಮಾರು ದಿನಗಳ ಹಿಂದೆ ನಡೆದ ಗಟನೆ. ಎಂದಿನಂತೆ ನಾನು ಕೆಲಸಕ್ಕೆ ಹೋಗಿದ್ದೆ. ಮದ್ಯಾಹ್ನ ಊಟದ ಸಮಯ, ನಾನು ಹಾಗೂ ನಮ್ಮ ಕಂಡಕ್ಟರ್, ಇಬ್ಬರು ಊಟಕ್ಕೆಂದು ಮಾರತಹಳ್ಳಿ ಬ್ರಿಡ್ಜ್ ಬಳಿ ಬಸ್ ನಿಲ್ಸಿ, ಹೋಟೆಲ್ ಗೆ ಬಂದೊ. ಇಬ್ಬರು ಊಟ ಮಾಡ್ತಾ ಇದ್ದೋ. ಎದುರುಗಡೆ ಕಟ್ಟೆಯ ಮೇಲೆ, ಒಬ್ಬರು ವಯಸ್ಸಾದ ವ್ಯಕ್ತಿ ಕುಳಿತಿದ್ದರು.

ಸುಮಾರು 65 ವರ‍್ಶ ಇರಬೇಕು ವಯಸ್ಸು. ಶೇವಿಂಗ್ ಮಾಡಿಕೊಂಡು, ಬಿಳಿ ಶರ‍್ಟ್, ಬಿಳಿ ಪಂಚೆ ಹಾಕಿದ್ದರು. ನೋಡಿದ ತಕ್ಶಣ ತಿಳಿಯುತ್ತಿತ್ತು “ಯಾವುದೋ ಹಳ್ಳಿಯ ಯಜಮಾನ, ಚೆನ್ನಾಗಿ ಬಾಳಿ ಬದುಕಿದ ಜೀವ” ಎಂದು. ನಾವು ಊಟಕ್ಕೆ ಬಂದಾಗಿನಿಂದ ಮುಗಿಯುವವರೆಗೂ ನಾನು ಅವರನ್ನ ಗಮನಿಸುತ್ತಿದ್ದೆ. ಹೋಟೆಲ್ ಕಡೆ ನೋಡ್ತಾ ಕುಳಿತಿದ್ರು, ಮುಕ ಬಾಡಿತ್ತು. ಯಾವುದೋ ನೋವನ್ನು ಅನುಬವಿಸುತ್ತಿರುವ ಹಾಗೆ ಕಾಣುತ್ತಿತ್ತು. ಊಟ ಮುಗಿಸಿ, ಹೊರಡಬೇಕೆಂದು ಕೊಂಡೆ, ಆದರೆ ಮನಸ್ಸು ಯಾಕೋ ತಡೆಯಲಿಲ್ಲ. ಹೋಗಿ ಮಾತನಾಡಿಸೋಣ ಎಂದು ಕೊಂಡು, ಕಂಡಕ್ಟರ್ ಗೆ ನಾನು ಆಮೇಲೆ ಬರ‍್ತಿನಿ, ನೀವು ಗಾಡಿ ಹತ್ತಿರ ಹೋಗಿ ಅಂತ ಹೇಳಿ, ಆ ಯಜಮಾನರ ಬಳಿ ಹೋದೆ. ಮಾತನಾಡಿಸಿದೆ.

“ಯಾರು ನೀವು? ಯಾಕೆ ಹೀಗೆ ಕುಳಿತಿದ್ದೀರ” ಅಂತ ಕೇಳಿದೆ. ಅಶ್ಟೆ. ತುಂಬಿ ನಿಂತ ಕಟ್ಟೆಯ ಕೋಡಿ ಒಡೆದು ಹರಿದ ಹಾಗೆ, ಅವರ ಕಣ್ಣಲ್ಲಿ ನೀರು, ಗಳ ಗಳ ಅಂತ ಹರಿಯೋಕೆ ಶುರು ಆಯ್ತು. “ಅಳಬೇಡಿ, ಏನ್ ಆಯ್ತು ಹೇಳಿ” ಅಂದೆ. ತಮ್ಮ ಕತೆ ಹೇಳೋಕೆ ಶುರು ಮಾಡಿದರು.

“ನನ್ನದು ಮಂಡ್ಯ ಬಳಿಯ ಸಂಕನಹಳ್ಳಿ ಅನ್ನೋ ಊರು, ನಾನು ಆ ಊರಿನ ಹಿರಿಯ. ಊರಿನಲ್ಲಿ ನ್ಯಾಯ, ಪಂಚಾಯ್ತಿ ಮಾಡೋದು ನಾನೆ. ಮಗ ಸಾಪ್ಟ್ ವೇರ್ ಇಂಜಿನಿಯರ್. ಇಲ್ಲೇ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದಾನೆ. ಹೋದ ವರ‍್ಶ ಮದುವೆಯಾಯ್ತು. ಮಗ, ಸೊಸೆ ಇಬ್ರು ಬೆಂಗಳೂರಲ್ಲೇ ಇದ್ದಾರೆ. ನನ್ನಾಕೆ ಹೋದ್ ತಿಂಗಳು ತೀರಿಕೊಂಡ್ಲು. ಊರಲ್ಲಿ ನಂಗೆ ಆಡುಗೆ ಮಾಡಿಕ್ಕೋರಿಲ್ಲ. ಅಲ್ಲಿ ಇದ್ದು ಏನ್ ಮಾಡ್ತಿರ, ಬೆಂಗಳೂರಿಗೆ ಬಂದುಬಿಡಿ ಅಂತ ಮಗ ಅಂದ. ಸರಿ ಅಂತ ಇಲ್ಲೇ ಇರೋಣ ಅಂತ ಅಲ್ಲಿಂದ ಬಂದಿದ್ದೆ”

“ಯಾಕೋ ಸೊಸೆ ಸರಿಯಾಗಿ ಮಾತನಾಡಿಸಲಿಲ್ಲ. ನಾನು ಇರೋದು ಇಶ್ಪ ಇಲ್ಲ ಅಂತ ಕಾಣುತ್ತೆ. ಉಂಡಿದ್ದಕ್ಕು, ತಿಂದಿದ್ದಕ್ಕೂ, ಹಂಗುಸೋಳು. ಮಗ ಬೆಳಿಗ್ಗೆ, ಮನೆಯಿಂದ ಕೆಲಸಕ್ಕೆ ಹೋದ ಮೇಲೆ, ಬಾಯಿಗೆ ಬಂದಂತೆ ಬೈದಳು. ಮನಸ್ಸು ತಡೆಯಲಿಲ್ಲ. ತಿಂಡಿ ತಿನ್ನೋಕೆ ಆಗಲಿಲ್ಲ. ಮನೆಯಿಂದ ಆಚೆ ಬಂದುಬಿಟ್ಟೆ. ಊರಿಗೆ ಹೋಗಿ, ನನ್ ಪಾಡಿಗೆ ನಾನು ಗಂಜಿ, ಗಿಂಜಿ ಬೇಸಿಕೊಂಡು, ತಿನ್ಕಂಡು, ಜೀವನ ಮಾಡ್ತಿನಿ”

“ರಾತ್ರಿ ಬೇರೆ ಊಟ ಮಾಡಿರ‍್ಲಿಲ್ಲ. ಬೆಳಿಗ್ಗೆಯಿಂದ ನಾಶ್ಟ ಮಾಡೋಕೆ ಕಾಸಿಲ್ಲ. ಯಾರತ್ರಾನಾದ್ರು ಕೇಳೋಣ ಅಂತ ಅಂದ್ರೆ, ನೂರಾರು ಜನಕ್ಕೆ ಅನ್ನ ಹಾಕಿದ ಕೈ, ಬೇಡೋಕೆ ನಾಚಿಕೆ ಆಯ್ತು. ಅದಕ್ಕೆ ಸುಮ್ನೆ ಕುಂತಿದ್ದೆ” ಅಂದ್ರು.

ನನಗೆ ಕಣ್ಣಲ್ಲಿ ನೀರು ಬಂತು. ಸರಿ ನೀವು ಮೊದಲು ಊಟ ಮಾಡಿ ಅಂತ ಹೇಳಿ, ಊಟ ಕೊಡಿಸಿದೆ. ಆ ವಯಸ್ಸಾದ ಕಣ್ಣುಗಳು ಸಂತೋಶದಿಂದ ಅರಳಿದ್ದನ್ನು ನೋಡೋಕೆ ತುಂಬಾ ಕುಶಿ ಆಯ್ತು. ನಾವು ಬಿಎಂಟಿಸಿ ಡ್ರೈವರ್ ಹಾಗೂ ಕಂಡಕ್ಟರ್ ಗಳು, ದುಡ್ಡು ಇಟ್ಟಿಕೊಳ್ಳುವ ಹಾಗಿಲ್ಲ. ಹಾಗಾಗಿ ಎಟಿಎಂ ನಿಂದ 500 ರೂ ತೊಗೊಂಡು ಬಂದೆ. ಅದನ್ನ ಆ ಯಜಮಾನರ ಕೈಗಿತ್ತೆ. ಒಂದು ಕ್ಶಣ ಅವರ ಕಣ್ಣಾಲಿಗಳು ತುಂಬಿ ಬಂದೋ. ನಾನು ಊರು ತಲುಪಿದ ತಕ್ಶಣ ಕಾಸನ್ನ ಮನಿ ಆರ‍್ಡರ್ ಮಾಡುತ್ತೇನೆ ಅಂದ್ರು. ಬೇಡ, ನೀವು ಕ್ಶೇಮವಾಗಿ ಊರು ಸೇರಿಕೊಳ್ಳಿ ಅಂದೆ. ಅಶ್ಟರಲ್ಲಿ ಕಂಡಕ್ಟರ್ ಟೈಂ ಆಯ್ತು ಬಾರಪ್ಶ ಅಂದ. ಅವರನ್ನ ಬನಶಂಕರಿ ಬಸ್ ಹತ್ತಿಸಿದೆ. ಅಲ್ಲಿಂದ ನಾಯಂಡಹಳ್ಳಿಗೆ ಹೋಗಿ, ಅಲ್ಲಿಂದ ಮಂಡ್ಯ ಬಸ್ ಹತ್ತಿ ಅಂತ ಹೇಳಿ ಹೊರಟೆ.

ಅವರ ಕಣ್ಣಾಲಿಗಳು ತೇವದಿಂದ ನನ್ನನ್ನೇ ನೋಡುತಿತ್ತು. ನನ್ನ ತಂದೆ ನೆನಪಾದರು.

( ಚಿತ್ರ ಸೆಲೆ: en.wikipedia.org )

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: