ಬದುಕಿನ ಮುಸ್ಸಂಜೆಯಲ್ಲಿ…

– ಕೌಸಲ್ಯ.

towardsthesunset

“ಎಲ್ಲಿಗೆ ಪಯಣ… ದಾರಿ… ಏಕಾಂತ ಸಂಚಾರ…” ಹೀಗೊಂದು ಹಾಡು ಗುನುಗಿಸೋಕೆ ಮನಸು ಎಳೆಯುತ್ತಿರುತ್ತೆ. ಅವ್ಯಕ್ತ ಬಾವ ತಡಕಾಡೋಕೆ ಶುರುವಾಗುವುದೇ ಅಸ್ಪಶ್ಟ ಬಾವನೆ ಹ್ರುದಯಾಂತರಾಳದಲ್ಲಿ ಮೂಡಿದಾಗ. ಅದುವರೆಗೂ ಇದ್ದ ಜೀವನದ ಸೊಗಸು ಇಂಚು ಇಂಚಾಗಿ ನೆನಪಿನ ಬುಟ್ಟಿಗೆ ಸೇರಿಕೊಳ್ಳೋಕೆ ಅಡಿಯಿಡುತ್ತಾ ಸಾಗುತ್ತದೆ. ಮನೆ ಮಕ್ಕಳು ಅಪರಿಚಿತರ ಗುಂಪಿಗೆ ಸೇರೋ ಹೊತ್ತು. ತನ್ನವರನ್ನೆಲ್ಲಾ ಕಳೆದುಕೊಂಡು ಕಂಗಾಲಾಗುವ ಗಟ್ಟ!

ಪ್ರತಿಯೊಬ್ಬರ ಜೀವನದ ಮಹತ್ತರ ಮಜಲು ‘ಬದುಕಿನ ಮುಸ್ಸಂಜೆ’

ನೈಜ ಜೀವನದಲ್ಲಿ ಮುಸ್ಸಂಜೆಯ ಹೊತ್ತು ಸುಮದುರ ಕ್ಶಣವದು. ಹಕ್ಕಿಗಳೆಲ್ಲಾ ಗೂಡಿಗೆ ಹಿಂತಿರುಗುತ್ತಿದ್ದಾಗ, ಪಡುವಣದಲ್ಲಿ ನೇಸರ ಮರೆಯಾದಾಗ, ಸುಯ್ಯನೆ ತಂಗಾಳಿ ಮೆಲುವಾಗಿ ನಮ್ಮನ್ನು ಸೋಕುತ್ತಿರುತ್ತದೆ. ನಾವೆಲ್ಲಾ ಕುಣಿದು ಕುಪ್ಪಳಿಸಿ ಆಟವಾಡುತ್ತಿದ್ದರೆ, ಇಳಿ ವಯಸ್ಸಿನ ಮನಸು ಹೊರಲೋಕದಲ್ಲಿ ಪಾರ‍್ಕ್ ನ ಬೆಂಚಿನ ಅಂಚಿನಲ್ಲಿ ಕುಳಿತು ಸುಂದರ ಸಮಯವನ್ನು ಒಂಟಿಯಾಗಿ ಅನುಬವಿಸುತ್ತಿರುತ್ತದೆ.

ಬದುಕಿನ ಮುಸ್ಸಂಜೆ ಅನ್ನೋದು ಒಂದು ರೀತಿಯಲ್ಲಿ ಶಾಪವೂ ಹೌದು ವರವೂ ಹೌದು. ನೌಕರಿಯಿಂದ ರಿಟೈರ‍್ಡ್ ಆಗಿಬಿಟ್ರೆ ಮತ್ತೆ ಆ ಕೆಲ್ಸ ಇಲ್ಲ ಅಂತ ನೋವು ಪಡೋರು ಒಂದು ಕಡೆ. ಇನ್ನು ದೈನಂದಿನ ಚಟುವಟಿಕೆಗೆ ಮನಸು ದೇಹ ಒಗ್ಗಿಕೊಳ್ಳದೇ, ಮನಸು ಹಿಡಿತಕ್ಕೆ ಸಿಗದೆ ತೊಳಲಾಟದಲ್ಲಿ ಸಿಲುಕುವುದು ಮತ್ತೊಂದು ಕಡೆ. ಇನ್ನು ಕೆಲವರು ತಮ್ಮನ್ನ ಬೇರೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತ ಮನಸಿನ ಆರೋಗ್ಯ ಕಾಪಾಡಿಕೊಳ್ಳುತ್ತಾರೆ. ಕ್ರೀಯಾಶೀಲತೆಯಲ್ಲಿ ತನು-ಮನಗಳೆರಡು ಇದ್ದರೆ ಆ ಸಮಯ ಹೊರೆ ಅನ್ನಿಸೋದಿಲ್ಲ. ಅದರಲ್ಲಿ ಒಂದು ಚೂರು ಎಡರು ತೊಡರಾದ್ರೂ ಇನ್ನುಳಿದ ಜೀವನ ನರಕ ಸದ್ರುಶ ಅಶ್ಟೇ!

ನಿವ್ರುತ್ತಿಯ ನಂತರದ ಬದುಕು ಯಾವಾಗಲೂ ವಯೋಸಹಜದ ಆರೋಗ್ಯದ ತೊಂದರೆಯಿಂದ ಆಯಾಸ ವಿಶ್ರಾಂತ ಜೀವನ ಎಂದು ಪರಿಚಯ ಆಗಿಬಿಟ್ಟಿದೆ. ಯಾರೇ ಹಳೆಯ ಗೆಳೆಯ, ಬಂದುವರ‍್ಗದವರು ಬಂದರೂ ‘ಬಿಪಿ ಶುಗರ್ ಹೇಗಿದೆ. ಕಂಟ್ರೋಲ್ ನಲ್ಲಿ ಇದ್ಯಾ?” ಎಂದು ಹಿರಿಜೀವಗಳನ್ನು ಪೇಚಿಗೆ ಸಿಕ್ಕಿಹಾಕಿಸ್ತಾರೆ. ತನ್ನ ಆರೋಗ್ಯ ಸರಿ ಇಲ್ಲ ಎಂಬ ದೋರಣೆ ಯಾವ ಹಿರಿವಯಸ್ಸು ಒಪ್ಪಿಕೊಳ್ಳೋದೇ ಇಲ್ಲ. ಅವರ ದೇಹಕ್ಕೆ ವಯಸಾಗಿರುತ್ತೆಯೇ ಹೊರತು ಮನಸು ಚಿರಯೌವನದ ಗುಂಗಿನಲ್ಲಿ ಇರುತ್ತದೆ. ಮನಸು ಎಲ್ಲವನ್ನೂ ಬಯಸಿದರೂ ವಯಸ್ಸು ಕೈಕೊಡುತ್ತದೆ. ಅರ‍್ತಾತ್ ಬಾವನೆಗೆ ವಯಸ್ಸಾಗುವುದಿಲ್ಲ ಎಂದಲ್ಲವೇ?

ಒಂಟಿ ಜೀವನ ಯಾವ ವಯೋಮಾನದವರು ಅನುಬವಿಸೋಕೆ ಆಗದೇ ಇರುವ ಬಾವ. ಅಂತದರಲ್ಲಿ ಹಿರಿಜೀವ ಸಹಿಸುತ್ತದೆಯೇ? ಆ ಹಿರಿಜೀವಕ್ಕೆ ಬಾವನೆ ಹಂಚಿಕೊಳ್ಳಲು ಯಾರೂ ಇಲ್ದೇ ಇದ್ರೆ ಪಾಡು ಹೇಗೋ!

lonely-man-136400664789603901-150923153428

ಜೀವನ ಸಂಗಾತಿಯ ಅಗಲಿಕೆ, ಅದುವರೆಗೂ ಚುರುಕಿನ ಚಟುವಟಿಕೆಯಲ್ಲಿದ್ದ ಮನಸು ಒಮ್ಮೆಲೆ ಕುಸಿದ ಅನುಬವ. ಮಕ್ಕಳ ಇರಿಸು ಮುರಿಸಿಗೆ ಸಂಕಟ ನೋವಿನ ಅವ್ಯಕ್ತ ಬಾವ. ನಿದ್ರೆಯು ಕೈ ಕೊಡುತ್ತೆ. ಬೆಳಗ್ಗೆ ಮನೆಮಂದಿಯೆಲ್ಲಾ ಏಳೋಕೆ ಮುಂಚೆ ಎದ್ದು ಹೊರಗೆ ನಡೆದಾಗ “ಯಾವ ಮೋಹನ ಮುರಳಿ ಕರೆಯಿತು…” ಅಂತ ಅಡಿಗರ ಹಾಡು ಹ್ರುದಯಾಂತರಾಳದಿಂದ ಗುನುಗುತ್ತದೆ. ಹಾಗೇ ದಾರಿಯಲ್ಲಿ ಸಿಗುವ ಹಳೇ ಸ್ನೇಹಿತನ ಮನೆಗೆ ಹೋಗಿ ಹಾಸಿಗೆಯಲ್ಲೇ ಜೀವನ ಸಾಗಿಸುತ್ತಿರುವ ಅವನಿಗೆ ಮುಕ ತೋರಿಸಿದರೆ, ‘ಪಾಪಿ ಚಿರಾಯು’ ಅಂತ ಇಬ್ಬರೂ ಹರಟಿ ನಕ್ಕು ಮತ್ತೆ ಮನೆಗೆ ಬಂದಾಗ ಜಗಲಿಯ ಮೇಲಿನ ದಿನಪತ್ರಿಕೆಯತ್ತ ಕಣ್ಣು ಓಡುತ್ತದೆ. ‘ಮಾಡೋಕೆ ಇದೊಂದೇ ಕೆಲ್ಸ ಅಲ್ವಾ ಬೇರೇನಿಲ್ಲ, ಹೋಗಿ ಹಾಲು ತನ್ನಿ. ಮಗುವನ್ನು ಶಾಲೆಗೆ ಬಿಡಿ.’ ಅಂತ ಸೊಸೆಯೋ ಮಗನೋ ಅಂದಾಗ, ಕಣ್ಣಿನ ಅಂಚಲ್ಲಿ ಕಣ್ಣೀರಿನ ಹನಿಯೊಂದು ಇಣುಕಿ ನೋಡುತ್ತೆ.

ಹಸಿವು ಮಾಯವಾಗಿದೆ. ಬಾವನೆಗಳು ಬತ್ತಿಹೋಗಿ ಮನಸು ಮಗುವಂತಾಗಿದೆ. ಆ ಮನಸಿಗೆ ಸಂತೈಸಲು ಯಾರೂ ಹತ್ತಿರ ಸುಳಿಯಲ್ಲ. ಬೇರೆಯ ಒಂಟಿ ಬೆಡ್ರೂಮ್ನಲ್ಲಿ ತನ್ನ ಮನಸಿಗೆ ಹತ್ತಿರವಾದ ಮರದ ಕುರ‍್ಚಿಯಲ್ಲಿ ಮಲಗಿದ್ರೆ ನಿದ್ರೆ ಜೋಂಪು ಮಾತ್ರ… ನಿದ್ರೆ ಹತ್ತಿರ ಸುಳಿಯುವುದೇ ಇಲ್ಲ. ಹಲ್ಲು ಗಟ್ಟಿ ಇಲ್ಲ, ಮುಕದ ತುಂಬಾ ನೆರಿಗೆ, ಹಳೇ ಶಾಲು ಹೊದ್ದುಕೊಳ್ಳಲೇ ಬೇಕು ಮೈ ಬೆಚ್ಚಗಿಡಲು, ನಡೆಯಲು ಊರುಗೋಲು ಸಹಾಯಬೇಕು. ಮನಸು ಯಾರಾದ್ರು ಮಾತನಾಡೋಕೆ ಜೊತೆಗೆ ಬೇಕು ಅನ್ನಿಸುತ್ತದೆ. ಜೊತೆಗೆ ನಡೆಯಲು ಹರಟಲು ಸಮಯದ ಪರಿವೇ ಇಲ್ಲದೆ ಗೆಳೆಯನ ಸನ್ನಿಹ ಬೇಕೆನಿಸುತ್ತೆ. ಊಟ ಉದರಕ್ಕೆ ಸೇರಬಯಸದಿದ್ದರೂ ಎಲ್ಲರು ಸೇರಿ ಊಟ ಮಾಡುವಾಗ ಹೊಟ್ಟೆಗೆ ಬಲವಂತದಿಂದಾದರೂ ತಳ್ಳಬೇಕೆನಿಸುತ್ತೆ.

ಬಲಹೀನವಾದ ಕಾಲುಗಳು ನಡೆಯಲು ಅಸಕ್ತವಾದಾಗ ನಿಂತು ಹಿಂತಿರುಗಿ ನಾನು ಇಶ್ಟು ದೂರ ನಡೆದೇ ಬಿಟ್ಟನಲ್ಲ ಅನ್ನೊ ಕಾನ್ಪಿಡೆನ್ಸ್ ಮತ್ತೆ ಕಾಲುಗಳಿಗೆ ಚೈತನ್ಯ ಒದಗಿಸುತ್ತದೆ. ಹರಟಲು ಗೆಳೆಯರ ಬಳಗ ಸಿಕ್ಕಾಗ ‘ಬದುಕಿತು ಬಡಜೀವ’ ಎಂದು ಕಣ್ಣರಳಿಸೋರಿಗೇನು ಕಮ್ಮಿ ಇಲ್ಲ. ಹೊರಗಿನ ಕೆಲಸ ಏನು ಇಲ್ಲದಿದ್ದರೂ ಗೆಳೆಯರ ದಂಡು ಬರುತ್ತಾರೆಂದು ಬರುವ ಹಾದಿಯನ್ನೇ ಗಂಟೆಗಟ್ಟಲೆ ಚಹಾದ ಅಂಗಡಿಯಲ್ಲಿ ಕುಳಿತು ಕಾಯುತ್ತಿರುತ್ತಾರೆ. ಅವರ ಕಾಯುವಿಕೆ ಅವರ ದಿನದ ಚಟುವಟಿಕೆಯ ಆಶಾಕಿರಣ. ಮನೆಯಲ್ಲಿ ಸಿಗದೇ ಇರೋ ಸಂತೋಶ ಹೊರಗಡೆ ಸಿಗುವುದಲ್ಲ ಎಂಬ ಸಂತಸ ಅವರಿಗೆ. ಮಗನ ಬಳಿ ಏನು ಕೇಳಲು ಮನಸು ಒಪ್ಪದು. ಯಾಕೆಂದರೆ ಸ್ವಾಬಿಮಾನದ ಮನಸು ಕೆಣಕುತ್ತದೆ. ಸಂಗಾತಿ ಇದ್ದಿದ್ರೆ ಅಂತಾ ಮನಸು ಸೆಳೆಯುತ್ತಿರುತ್ತದೆ.

ಆ ಮುಗ್ದ ಮನಸು ಕೇಳೋದು ನಿಮ್ಮ ಸಿಟ್ಟು, ಸಿಡಿಮಿಡಿತನ ಅಲ್ಲ. ಒಂದು ತುತ್ತು ಪ್ರೀತಿ… ಕೊಟ್ಟುಬಿಡಿ. ಬದುಕಿನ ಮುಸ್ಸಂಜೆಯಲ್ಲಿ ತಂಪಾಗಿರಲು ಆ ಹಿರಿಜೀವಕ್ಕೆ.

(ಚಿತ್ರಸೆಲೆpicturenix.comhome.bt.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: