ನೋಡ ಬನ್ನಿ ಕವಲೇದುರ‍್ಗದ ಚೆಲುವನ್ನು

ಕಿರಣ್ ಮಲೆನಾಡು.

Main Image

ಕವಲೇದುರ‍್ಗ ಕೋಟೆಯು ಪಡುವಣ ಗಟ್ಟದ ತೀರ‍್ತಹಳ್ಳಿ ತಾಲ್ಲೂಕಿನ ಹಸಿರು ಸಿರಿಯನ್ನು ಹೊದ್ದುನಿಂತ ಕಣ್ಸೆಳೆಯುವ ಒಂದು ತಾಣ. ಕೋಟೆಯನ್ನು ಕಟ್ಟಿ ಮಂದಿಗೆ ಒಳ್ಳೆಯ ಆಡಳಿತವನ್ನು ನೀಡುವಲ್ಲಿ ಕನ್ನಡದ ಅರಸರುಗಳು ಯಾವಾಗಲೂ ಹೆಸರುವಾಸಿ, ಅಂತಹ ಕೋಟೆಗಳ ಸಾಲಿಗೆ ಕೆಳದಿ ನಾಯಕರ ಕವಲೇದುರ‍್ಗದ ಕೋಟೆಯೂ ಸೇರುತ್ತದೆ.

ಕವಲೇದುರ‍್ಗ ಕೋಟೆ ಇರುವುದು ಶಿವಮೊಗ್ಗ ಜಿಲ್ಲೆಯ ತೀರ‍್ತಹಳ್ಳಿಯಲ್ಲಿ.

ಕವಲೇದುರ‍್ಗ ಕೋಟೆಯು ತೀರ‍್ತಹಳ್ಳಿಯಿಂದ 18 ಕಿಲೋಮೀಟರ್, ಬೆಂಗಳೂರಿನಿಂದ 364 ಕಿಲೋಮೀಟರ್ ಮತ್ತು ಶಿವಮೊಗ್ಗದಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿದೆ. ತೀರ‍್ತಹಳ್ಳಿಯಿಂದ ಸಾಲೂರಿಗೆ ಹೋಗುವ ಹಾದಿಯಲ್ಲಿ ದಟ್ಟಕಾಡುಗಳಿಂದ ಕೂಡಿದ ಪಡುವಣ ಗಟ್ಟದ ಮಡಿಲಲ್ಲಿ ಸಾಗಿದಾಗ ಈ ಕೋಟೆ ಸಿಗುತ್ತದೆ. ಕೋಟೆಯನ್ನು ಬೆಟ್ಟದ ಮೇಲೆ ಕಟ್ಟಲಾಗಿದೆ. ಕೋಟೆಯಿರುವ ಬೆಟ್ಟವು ಕಡಲಮಟ್ಟದಿಂದ (Sea Level) ಸುಮಾರು 3011 ಅಡಿಗಳಶ್ಟು ಎತ್ತರದಲ್ಲಿದೆ. ಸುತ್ತಾಡುಗರಿಗಾಗಿ ಹಳ್ಳಿಯ ಮೇಲುಗರು ಒಂದು ಉಣುಗೋಲನ್ನು (Gate) ಮಾಡಿದ್ದಾರೆ, ಅಲ್ಲಿಂದ ಕೋಟೆಯ ತುದಿಯವರೆಗೆ ಸುಮಾರು 2 ಕಿಲೋಮೀಟರ್ ನಶ್ಟು ನಡೆಯಬೇಕಾಗುತ್ತದೆ.

ಮೊಗಲರ ಪಡೆಯಿಂದ ತೊಂದರೆಗೊಳಗಾಗಿದ್ದ ಶಿವಾಜಿಯ ಮಗ ರಾಜರಾಮನಿಗೆ, ರಾಣಿ ಚೆನ್ನಮ್ಮ ಕವಲೇದುರ‍್ಗದಲ್ಲಿಯೇ ನೆಲೆ ಒದಗಿಸಿದ್ದಳು.

Koteya Mettilu

ಕವಲೇದುರ‍್ಗದಲ್ಲಿ ಒಂದು ಚಿಕ್ಕ ಕೋಟೆಯನ್ನು ಒಂಬತ್ತು ನೂರರಲ್ಲೇ ಕಟ್ಟಲಾಯಿತೆಂದು ಹಿನ್ನಡವಳಿಯರಿಗರ ನಂಬುಗೆ, ಆದರೆ ಅದರ ಬಗ್ಗೆ ಅಶ್ಟು ತಿಳಿಹುಗಳು (Proofs) ಸಿಕ್ಕಿಲ್ಲ. ಸುಮಾರು ಹದಿನಾಲ್ಕು ನೂರರಲ್ಲಿ ಬೆಳಗುತ್ತಿಯ ಪಾಳೇಗಾರ ಚೆಲುವರಂಗಪ್ಪ ಒಂದು ಸುಮಾರಾದ ಕೋಟೆಯನ್ನು ಕಟ್ಟಿಸಿದನು. ಚೆಲುವರಂಗಪ್ಪನ ನಂತರದಲ್ಲಿ ಬಂದ ತೊಲೆತಮ್ಮ ಮತ್ತು ಮುಂಡಿಗೆತಮ್ಮ ಎಂಬ ಬೆಳಗುತ್ತಿಯ ಪಾಳೇಗಾರ ಅಣ್ಣತಮ್ಮಂದಿರು ಕವಲೇದುರ‍್ಗದಲ್ಲಿ ಐದು ಸುತ್ತಿನ ಕೋಟೆಯನ್ನು ಕಟ್ಟಿಸಿದರು. ಆ ಹೊತ್ತಿನಲ್ಲಿ ಕೆಳದಿಯ ನಾಯಕರು ಇಕ್ಕೇರಿಯಿಂದ ಆಳ್ವಿಕೆ ನಡೆಸುತ್ತಿದ್ದರು, ಕೆಳದಿ ನಾಯಕರಿಗಿದ್ದ ಇನ್ನೊಂದು ಹೆಸರು ಮಲ್ಲವರು. ಕೆಳದಿ ನಾಯಕರು ವಿಜಯನಗರದರಸರ ಸಾಮಂತರಾಗಿದ್ದರು. ವಿಜಯನಗರದ ಅರಸರು ಅಳಿದಮೇಲೆ ಕೆಳದಿ ನಾಯಕರು ತಮ್ಮಾಳ್ವಿಕೆಯನ್ನು (Independent Rule) ನಡೆಸುತ್ತಿದ್ದರು. ಕಾಳಗದಲ್ಲಿ ಮಲ್ಲವರ ಅರಸ ಕೆಳದಿಯ ಹಿರಿಯ ವೆಂಕಟಪ್ಪ ನಾಯಕ (1582-1629 A.D) ಬೆಳಗುತ್ತಿಯ ಪಾಳೇಯಗಾರರನ್ನು ಸೋಲಿಸಿ ಕವಲೇದುರ‍್ಗದ ಕೋಟೆಯನ್ನು ಕೈವಶ ಮಾಡಿಕೊಂಡನು. ಹಿರಿಯ ವೆಂಕಟಪ್ಪ ನಾಯಕನು ಕೋಟೆಯನ್ನು ವಶಪಡಿಸಿಕೊಂಡ ನಂತರ ಕೋಟೆಯ ಸುತ್ತ ಕಂದಕ ಮತ್ತು ಕೊತ್ತಲಗಳನ್ನು ಮಾಡಿಸಿ ಕೋಟೆಯನ್ನು ಗಟ್ಟಿಗೊಳಿಸಿದನು. ತದನಂತರದಲ್ಲಿ ಹಿರಿಯ ವೆಂಕಟಪ್ಪ ನಾಯಕನು ಕವಲೇದುರ‍್ಗವನ್ನು ತನ್ನ ಆಡಳಿತದ ಕೇಂದ್ರವನ್ನಾಗಿ ಮಾಡಿಕೊಂಡು ಅದಕ್ಕೆ ಬುವನಗಿರಿ ಎಂದು ಕರೆದನು.

ಹೈದರಾಲಿ (1761–1782 A.D) ಈ ಕೋಟೆಯನ್ನು ವಶಪಡಿಸಿಕೊಂಡು ಕೋಟೆಯನ್ನು ಕಾವಲುಪಡೆಗೆ ಮೀಸಲಿಟ್ಟಿದ್ದನು ಆದ್ದರಿಂದ ಇದಕ್ಕೆ ಕಾವಲುದುರ‍್ಗ ಎಂದು ಕರೆಯುತ್ತಿದ್ದರು, ಇದೇ ಮುಂದೆ ಕವಲೇದುರ‍್ಗ ಎಂಬ ಹೆಸರನ್ನು ಪಡೆಯಿತು. ಕೆಳದಿಯ ಬದ್ರಪ್ಪ ನಾಯಕ, ಚೌಡಪ್ಪ ನಾಯಕ, ಶಿವಪ್ಪ ನಾಯಕ ಮತ್ತು ರಾಣಿ ಚೆನ್ನಮ್ಮರ ಹೊತ್ತಿನಲ್ಲಿ ಕೂಡ ಕವಲೇದುರ‍್ಗ ಏಳಿಗೆಯನ್ನು ಕಂಡಿತ್ತು. ವೇಣಿಪುರದ ಹಗೆಗಾರರಿಂದ ತಪ್ಪಿಸಿಕೊಳ್ಳಲು ಕೆಳದಿಯ ರಾಣಿ ಚೆನ್ನಮ್ಮ ಕವಲೇದುರ‍್ಗದ ಕೋಟೆಯಲ್ಲಿ ನೆಲೆಪಡೆದು ಕೋಟೆಯನ್ನು ಇನ್ನೂ ಗಟ್ಟಿಗೊಳಿಸಿದಳು. ಮೊಗಲರಿಗೆ ಹೆದರಿ ಓಡಿ ಬಂದ ಶಿವಾಜಿಯ ಮಗ ರಾಜರಾಮನಿಗೆ ರಾಣಿ ಚೆನ್ನಮ್ಮ (1671-1696 A.D) ಕವಲೇದುರ‍್ಗದಲ್ಲಿಯೇ ನೆಲೆ ಒದಗಿಸಿದಳು ಮತ್ತು ಬೆನ್ನಟ್ಟಿ ಬಂದ ಮೊಗಲರ ಪಡೆಯನ್ನು ಹಿಮ್ಮೆಟ್ಟಿಸಿದ್ದಳು. ಕವಲೇದುರ‍್ಗ ಕೆಳದಿಯ ನಾಯಕರ ಹೊತ್ತಿನಲ್ಲಿ ನ್ಯಾಯ ತೀರ‍್ಮಾನಗಳಿಗೆ ಹೆಸರುವಾಸಿಯಾಗಿತ್ತು.

ಬೆಟ್ಟದ ದಿಣ್ಣೆಗಳ ಮೇಲೆ ಪೆಡಸುಕಲ್ಲುಗಳ ಇಟ್ಟಿಗೆಗಳನ್ನು ಬಳಸಿ ಕೋಟೆಯನ್ನು ಕಟ್ಟಲಾಗಿದೆ.

Kote
ಕವಲೇದುರ‍್ಗದ ಕೋಟೆಯು ದಟ್ಟವಾದ ಕಾಡಿನಿಂದ ಸುತ್ತುವರೆಯಲ್ಪಟ್ಟಿದೆ ಮತ್ತು ಕೋಟೆಯ ಒಳಗೆ ಹುಲ್ಲು, ಗಿಡ-ಮರಗಳು ಬೆಳೆದುಕೊಂಡಿದ್ದರರಿಂದ ಅದರ ಚೆಲುವು ಇಮ್ಮಡಿಸುತ್ತದೆ. ಕವಲೇದುರ‍್ಗದ ಕೋಟೆಯು ಐದು ಸುತ್ತಿನ ಕೋಟೆಯಾಗಿದ್ದರು ಕೂಡ ನಮಗೆ ಕಾಣಸಿಗುವುದು ಮೂರು ಸುತ್ತಿನ ಕೋಟೆ, ಬೆಟ್ಟದ ದಿಣ್ಣೆಗಳ ಮೇಲೆ ಪೆಡಸುಕಲ್ಲುಗಳ ಇಟ್ಟಿಗೆಗಳನ್ನು ಬಳಸಿ ಕೋಟೆಯನ್ನು ಕಟ್ಟಲಾಗಿದೆ. ಎಲ್ಲಾ ಸುತ್ತಿನಲ್ಲೂ ಒಂದು ಹೆಬ್ಬಾಗಿಲಿದ್ದು ಅದರ ಇಕ್ಕೆಲಗಳಲ್ಲಿ ಕಾಪುಕೋಣೆಗಳಿವೆ. ಕೋಟೆಯ ನಡುವಿನಲ್ಲಿ ಗುಡಿಗಳು, ಒಂದು ಪಾಳುಬಿದ್ದ ಅರಮನೆ ಹಾಗೂ ಇತರ ನೆನಪುಗೆಗಳಿವೆ (Monuments).

ಐದು ಕಡೆಯಿಂದ ಬೆಂಕಿಯನ್ನು ಹೊರಸೂಸುವ ಕಲ್ಲಿನ ಉರಿಕದ(burner) ಒಲೆಯನ್ನು ಈಗಲೂ ನೋಡಬಹುದು. ಇದು ಕೆಳದಿ ಅರಸರ ಕಾಲದ್ದು.

ಕೋಟೆಯ ಒಳಗಿರುವ ಅರಮನೆ

ಕೋಟೆಯ ಒಳಗಿರುವ ಅರಮನೆ

ದುರ‍್ಗದ ತುತ್ತತುದಿಯಲ್ಲಿ ಪಡುವಣ ದಿಕ್ಕಿಗೆ ಮೋರೆಯಿರುವ ಶಿಕರೇಶ್ವರನೆಂದು ಕರೆಯಲ್ಪಡುವ ಶ್ರೀಕಂಟೇಶ್ವರ ಗುಡಿಯಿದೆ ಮತ್ತು ಅದರ ಎದುರಿಗೆ ನಂದಿ ಕೆತ್ತನೆಯಿದೆ. ಕೋಟೆ ಒಳಗಿರುವ ಅರಮನೆಯ ಜಾಗದಲ್ಲಿ ದೊಡ್ಡ ಅಡಿಪಾಯ ಕಂಡುಬರುತ್ತದೆ ಅದರ ಒಳಗೆ ಅಗಲವಾದ ಕಂಬದ ಜಗುಲಿ, ಪೂಜೆಮನೆ, ಅಡಿಗೆ ಕೋಣೆ ಮತ್ತು ಅದರಲ್ಲಿರುವ ಕಲ್ಲಿನ ಐದು ಉರಿಕದ (Burner) ಒಲೆ, ಕಲ್ಲಿನ ವೇದಿಕೆಯಿರುವ ಮೀಯುವ ಕೋಣೆ, ಕಲ್ಲಿನ ಒರಳು, ಒಕ್ಕಲಿನ ಪಣತ(ಕಣಜ), ಒಂದು ಅಗಲವಾದ ಒಳ ಅಂಗಳ ಹಾಗು ಮೆಟ್ಟಿಲಿನಿಂದ ಕೂಡಿದ ಒಂದು ಕೊಳ ಕಾಣಸಿಗುತ್ತದೆ. ಅಂದಿನ ಕಾಲದಲ್ಲೇ ಐದು ಕಡೆ ಬೆಂಕಿಯನ್ನು ಹೊರಸೂಸುವ ಕಲ್ಲಿನ ಉರಿಕದ ಒಲೆಯು ಕೆಳದಿ ಅರಸರ ಹೊತ್ತಿನ ಚಳಕಕ್ಕೆ ಕನ್ನಡಿಯಾಗಿದೆ. ಚೆಲುವಾದ ಈ ಅರಮನೆಯ ಮೇಲುಹಾಸು (Floor) ಬಿದ್ದುಹೋಗಿದ್ದರೂ ಕೂಡ ಅದು ಸುತ್ತಾಡುಗರ ಕಣ್ಸೆಳೆಯುತ್ತದೆ.

ಕೋಟೆಯ ಇಕ್ಕೆಲಗಳಲ್ಲಿ ಎಚ್ಚರದಿಬ್ಬ (Inspection Bungalow) ಮತ್ತು ಬತೇರಿಗಳನ್ನು ಕಾಣಬಹುದು. ಕೋಟೆಯ ಮೊದಲ ಹೆಬ್ಬಾಗಿಲಿನ ಇಕ್ಕೆಲೆಗಳಲ್ಲಿ ಸುಮಾರು 50-60 ಅಡಿ ಎತ್ತರದ ಗೋಡೆಗಳನ್ನು ನೋಡಬಹುದು. ಕಾವಲುಗಾರರು ಉಳಿದುಕೊಳ್ಳಲು ಮಾಡಿದ್ದ ನಾಲ್ಸರಿಬದಿಯಾಕಾರದ (Square Shape) ಕಾವಲುಗಾರರ ಕೋಣೆಯನ್ನು ಹಾಗೂ ಒಳಬಾಗದಲ್ಲಿನ ಮುಕಮಂಟಪವನ್ನು ಎರಡನೇ ಹೆಬ್ಬಾಗಿಲ ನಂತರದಲ್ಲಿ ನೋಡಬಹುದು. ಮೂರನೆ ಹೆಬ್ಬಾಗಿಲ ಬಲಬದಿಯಲ್ಲಿ ಒಂದು ನಗಾರಿ ಕಟ್ಟೆಯಿದೆ ಇದರ ಹತ್ತಿರದಲ್ಲಿ ಒಂದು ಸುರಂಗದ ಹಾದಿಯನ್ನು ಕಾಣಬಹುದು. ನಾಲ್ಕನೆಯ ಹೆಬ್ಬಾಗಿಲನ್ನು ತಲುಪಲು ಇಳಿಜಾರಿನ ಹಾಸುಗಲ್ಲನ್ನು ದಾಟಬೇಕು ಹಾಗು ಅಲ್ಲೊಂದು ಮುಕಮಂಟಪವನ್ನು ಕೂಡ ಕಾಣಬಹುದು.

ಇಲ್ಲಿ ಕೆಳದಿ ನಾಯಕರ ಕಾಲದ ನಾಣ್ಯಗಳನ್ನು ಅಚ್ಚುಹಾಕುವ ಟಂಕಸಾಲೆಯಿತ್ತು.

Lakshminarayana Gudi

ಕವಲೇದುರ‍್ಗದಲ್ಲಿ ವಿಶ್ವನಾತೇಶ್ವರ ಗುಡಿಯಿದೆ, ಈ ಗುಡಿಯ ಹೊರಬದಿಯಲ್ಲಿ ಹಲವು ಚೆಂದದ ಕೆತ್ತನೆಗಳನ್ನು ಕಾಣಬಹುದು. ಗುಡಿಯ ಹತ್ತಿರ ಅರಸರ ಕಾಲದಲ್ಲಿ ತುಪ್ಪ ಹಾಗೂ ಎಣ್ಣೆಯನ್ನು ತುಂಬಿಡಲು ಬಳಸುತ್ತಿದ್ದ ಒಂದು ಕಲ್ಲಿನ ಹೊಂಡವನ್ನು ಕಾಣಬಹುದು, ಇದಕ್ಕೆ ಎಣ್ಣೆ ಹಾಗೂ ತುಪ್ಪದ ಬಾವಿಯೆಂದೇ ಈಗಲೂ ಕರೆಯುತ್ತಾರೆ. ವಿಶ್ವನಾತೇಶ್ವರ ಗುಡಿಯ ಎದುರಿಗಿನ ದೊಡ್ಡ ಬಂಡೆಯ ಮೇಲೆ ಲಕ್ಶ್ಮೀನಾರಾಯಣ ಗುಡಿಯಿದೆ. ಕವಲೇದುರ‍್ಗದಲ್ಲಿ ಹಲವಾರು ದುಡ್ಡುಗಟ್ಟಿಗಳು (Coins) ದೊರೆತಿವೆ ಮತ್ತು ಈಗಲೂ ಇರುವ ಒಂದು ಟಂಕಸಾಲೆಯನ್ನು ಕಾಣಬಹುದು. ಕೆಳದಿ ನಾಯಕರ ದುಡ್ಡಾದ ಇಕ್ಕೇರಿವೆರಹ ಎಂಬ ನಾಣ್ಯಗಳನ್ನು ಇಲ್ಲಿಯೇ ಅಚ್ಚು ಹಾಕಿಸಲಾಗುತ್ತಿತ್ತು. ಕೆಳದಿಯ ನಾಯಕರು ಕವಲೇದುರ‍್ಗದ ಕೋಟೆಯ ಒಳಬದಿಯಲ್ಲಿ ಮಾರುಕಟ್ಟೆ, ಸುಂಕದಕಟ್ಟೆ, ತಳವಾರಕಟ್ಟೆಗಳನ್ನು ಕಟ್ಟಿಸಿದ್ದರಂತೆ, ಈಗ ಅವುಗಳನ್ನು ಸರಿಯಾಗಿ ಗುರುತು ಹಿಡಿಯುವುದು ಕಶ್ಟ.

ಕವಲೇದುರ‍್ಗದ ಕೋಟೆಯ ಸುತ್ತಳತೆ ಸುತ್ತಳತೆ ಸುಮಾರು 8 ಕಿಲೋಮೀಟರ್, ಅಲ್ಲಲ್ಲಿ ದಟ್ಟ ಕಾಡುಗಳು ಬೆಳೆದಿದ್ದರಿಂದ ಕೋಟೆಯ ಎಲ್ಲಾ ಬದಿಗಳನ್ನು ನೋಡಲಾಗದು, ಆದರೆ ಕೋಟೆಯೊಳಗಿನ ಎಲ್ಲಾ ಪಳೆಯುಳಿಕೆಗಳನ್ನು ನೋಡಬಹುದು. ಅಂದಿನ ಕಾಲದಲ್ಲಿ ಹೊತ್ತನ್ನು ನೋಡಲು ಬಳಸುತ್ತಿದ್ದ ತಾಮ್ರದ ಗಳಿಗೆ ಬಟ್ಟಲನ್ನು ಕಾಣಬಹುದು. ಕೋಟೆಯ ಒಳಗೆ ಅಲ್ಲಲ್ಲಿ ಯಾವಾಗಲೂ ನೀರಿಂದ ತುಂಬಿಬಿರುವ ಒಟ್ಟು ಏಳು ಚಿಕ್ಕ ಚಿಕ್ಕ ಕೊಳಗಳಿವೆ. ಕೋಟೆಯ ಒಳಬಾಗದಲ್ಲಿ ಗುಂಡಿನ ತೋಪನ್ನು ಇಡುವ ಒಂದು ತೊಪುಕೋಣೆಯನ್ನು (Cannon fort) ಕಾಣಬಹುದು.

ಕೋಟೆಯ ಒಳಗೆ ಮಟದಿಂದ ಹಿಡಿದು ಏತ-ನೀರಾವರಿಯವರೆಗೆ ಎಲ್ಲವೂ ಇದೆ.

Kalyani-1
ಹಿರಿಯ ವೆಂಕಟಪ್ಪನಾಯಕನು ಕವಲೇದುರ‍್ಗದಲ್ಲಿ ಮತ್ತಿನಮಟ ಎಂಬ ಶ್ರುಂಗೇರಿ ಮಟ, ಒಂದು ಬೊಕ್ಕಸ, ಒಂದು ಕಣಜ, ಆನೆಗಳಿಗಾಗಿ ಆನೆಕೊಟ್ಟಿಗೆ, ಕುದುರೆಗಳಿಗಾಗಿ ಕುದುರೆಕೊಟ್ಟಿಗೆ ಮತ್ತು ಕೊಳಗಳನ್ನು ಕಟ್ಟಿಸಿದ್ದನು, ಈಗ ಇವೆಲ್ಲವೂ ಪಾಳುಬಿದ್ದಿವೆ ಮತ್ತು ಕುರುಹುಗಳು ಅಳಿದಿವೆ. ವೀರಶೈವರಾದ ಕೆಳದಿಯ ನಾಯಕರು ಹಿಂದೆ ಹಲವಾರು ವೀರಶೈವಮಟಗಳನ್ನು ಕಟ್ಟಿಸಿದ್ದರು. ಕವಲೇದುರ‍್ಗ ಊರ ಮುಂಬಾಗದಲ್ಲಿ ತಿಮ್ಮಣ್ಣ ನಾಯಕನಿಂದ ಕಟ್ಟಲ್ಪಟ್ಟ ದೊಡ್ಡದಾದ ಕೆರೆಯಿದೆ. ಶಿವಪ್ಪ ನಾಯಕನ ಕಾಲದಲ್ಲಿ ಕವಲೇದುರ‍್ಗದಲ್ಲಿ ಏತ-ನೀರಾವರಿ ಮಾಡುತ್ತಿದ್ದರಂತೆ.

ಮಳೆ, ಚಳಿ, ಬೇಸಿಗೆ ಯಾವ ಕಾಲದಲ್ಲಿ ಬೇಕಾದರು ಇಲ್ಲಿಗೆ ಹೋಗಬಹುದು.

Vishvanatheshvara Temple

ವಿಶ್ವನಾತೇಶ್ವರ ಗುಡಿ

ಕೋಟೆಗೆ ಮಳೆಗಾಲ, ಚಳಿಗಾಲ, ಬೇಸಿಗೆಗಾಲವೆನ್ನದೆ ಎಲ್ಲಾ ಹೊತ್ತಿನಲ್ಲೂ ಹೋಗಬಹುದು. ಬೇಸಿಗೆ ಮತ್ತು ಚಳಿಗಾಲದಲ್ಲಿ ಕೋಟೆಯ ಬೆಟ್ಟದ ತುತ್ತತುದಿಯಲ್ಲಿ ನೇಸರ ಮುಳುಗುವ ನೋಟವನ್ನು (Sunset View) ಸವಿಯಬಹುದು. ಚಳಿಗಾಲದ ಮುಂಜಾನೆಯಲ್ಲಿ ಬಂದರೆ ಎಲ್ಲೆಲ್ಲೋ ಮಂಜು ಮುಸುಕಿರುವುದರಿಂದ ಕೋಟೆಯ ನೋಟವು ಸಗ್ಗಕ್ಕೆ ಮೂರು ಗೇಣಿದ್ದಂತೆ ಕಾಣುತ್ತದೆ. ತುತ್ತತುದಿಯಿಂದ ವರಾಹಿಯ ಹಿನ್ನೀರು (Varahi Backwater) ಮತ್ತು ಪಡುವಣ ಗಟ್ಟದ ಕಾಡುಗಳ ನೋಟವನ್ನು ಸವಿಯಬಹುದು. ಕರ‍್ನಾಟಕದ ಮಂದಿಯಾಳ್ವಿಕೆಯು ಚೆಲುವಾದ ಈ ಕವಲೇದುರ‍್ಗದ ಕೋಟೆಯನ್ನು ಕಾಪಾಡುಕೊಳ್ಳುವಲ್ಲಿ ಹಮ್ಮುಗೆಗಳನ್ನು ಹಮ್ಮಿಕೊಳ್ಳಬೇಕು.

(ಮಾಹಿತಿಸೆಲೆ: vijaykarnataka.indiatimes.comprajavani.netvijaykarnataka.indiatimes.com/lavalavkkn.wikipedia.orgrakeshholla.blogspot.in)
(ಚಿತ್ರ ಸೆಲೆrackcdn.comಕಿರಣ್ ಮಲೆನಾಡು)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. NITHIN.G.N Gowda says:

    ಬರಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ ☺

  2. ಯತೀಶ್ ಕುಮಾರ್ says:

    ಬರಹ ತುಂಬಾ ಚೆನ್ನಾಗಿ ಮೂಡಿಬಂದಿದೆ.
    ಇನ್ಮುಂದೆ ಕವಲೇದುರ್ಗಾ ಪೋಟೋ ಜೊತೆಗೆ ಇತಿಹಾಸ ಕೂಡ ಹೇಳಬಹುದು. ಧನ್ಯವಾದಗಳು ☺

ಅನಿಸಿಕೆ ಬರೆಯಿರಿ: