ಹೊಸತನವನ್ನು ಮೈಗೂಡಿಸಿಕೊಂಡು ಹೊರಬರಲಿದೆ ‘iOS 10’

– ರತೀಶ ರತ್ನಾಕರ.

iOS-10-release-date-news-and-features

ತನ್ನದೇ ಆದ ಚಳಕಗಳಿಂದ ಜಗತ್ತಿನ ಬಳಕೆದಾರರ ಮನಸ್ಸನ್ನು ಸೂರೆ ಮಾಡಿರುವ ಆಪಲ್ ಕಂಪನಿಯವರು ತಮ್ಮ ಹೊಸ ನಡೆಸೇರ‍್ಪಾಟಾದ (operating system) ಆಪಲ್ ಐಓಎಸ್ 10 ಅನ್ನು ಹೊರತರಲಿದ್ದಾರೆ. ತುಂಬಾ ಕುತೂಹಲದಿಂದ ಕಾದಿದ್ದ ಬಳಕೆದಾರರಿಗೆ ಈ ಹೊಸ ವರಸೆ(version)ಯಲ್ಲಿ ಏನೇನೆಲ್ಲಾ ಇರುತ್ತೆ ಎಂದು ತನ್ನ ಮರುನೋಟದಲ್ಲಿ ತಿಳಿಸಿದೆ. ಮರುನೋಟದಲ್ಲಿ ಹೆಚ್ಚು ಗಮನಸೆಳೆದ ಕೆಲವು ಆಯ್ಕೆಗಳ ಪಟ್ಟಿ ಇಲ್ಲಿದೆ.

ತಾನಾಗಿಯೇ ಎಚ್ಚರಗೊಳ್ಳುವ ತೆರೆ

ಅಲೆಯುಲಿಯ (mobile) ತೆರೆಗೆ ಬೀಗ ಹಾಕಿದ್ದರೆ ಅದರ ಕೆಳಗುಂಡಿಯನ್ನು (home button) ಒತ್ತಿ, ತೆರೆಯು ಎಚ್ಚರಗೊಂಡ ಬಳಿಕ ತೆರೆಯ ಬೀಗವನ್ನು ತೆಗೆಯಬೇಕಿತ್ತು. ಆದರೆ ಹೊಸ ವರಸೆಯಲ್ಲಿ ನೀವು ಅಲೆಯುಲಿಯನ್ನು ಕೈಗೆತ್ತಿಕೊಂಡ ಕೂಡಲೆ ತಾನಾಗಿಯೇ ತೆರೆಯು ಎಚ್ಚರಗೊಳ್ಳುತ್ತದೆ, ನಿಮಗೆ ಬೇಕಾದ ಮುನ್ಸುಳಿವುಗಳು (Notifications) ತೆರೆಯಮೇಲೆ ಕೂಡಲೆ ಕಾಣುತ್ತವೆ.

ಬೀಗದ ತೆರೆ

ತೆರೆಗೆ ಬೀಗ ಹಾಕಿದ್ದಾಗ ಅದನ್ನು ತೆರೆಯದೇ ಅದರ ಮೇಲಿರುವ ಮುನ್ಸುಳಿವುಗಳಿಗೆ ಮರುನುಡಿಯಬಹುದು. ಊಬರ್ (Uber) ಬಂಡಿಗಾಗಿ ಕಾಯುತ್ತಿದ್ದರೆ ಅದು ಬರುತ್ತಿರುವ ಮಾಹಿತಿ ಬೀಗದ ತೆರೆ(lock screen)ಯಲ್ಲೆ ಕಾಣುತ್ತದೆ. ಮುನ್ಸುಳಿವುಗಳನ್ನು ತೋರಿಸುವ ಬಗೆಯಲ್ಲೂ ಬದಲಾವಣೆಗಳಾಗಿವೆ. ಇವೆಲ್ಲದರ ಜೊತೆಗೆ ಈ ಮುನ್ಸುಳಿವುಗಳನ್ನು ಒಂದೇ ಸಲ ತೆರವುಗೊಳಿಸಲು (clear all) ಒಂದೇ ಸಲ ಒತ್ತಿದರೆ ಸಾಕು.

ios2

ಚುರುಕಾಗಿರುವ ಸಿರಿ (Siri)

ಆಪಲ್ ನ ಬಳಕಗಳಿಗಶ್ಟೇ (apps) ಅಲ್ಲದೆ ಬೇರೆ ಬೇರೆ ಬಳಕಗಳಲ್ಲಿಯೂ ಸಿರಿ ಮಾತನಾಡಲಿದೆ. ನೀವಿನ್ನು ಊಬರ್ ಬಂಡಿಯನ್ನು ಕರೆಯಲು, ವಾಟ್ಸಪ್ ನಲ್ಲಿ ಓಲೆಯನ್ನು ಕಳಿಸಲು ಸಿರಿಯನ್ನೇ ಕೇಳಬಹುದು. ನಿಮ್ಮ ಬೇಡಿಕೆಗಳನ್ನು ಸರಿಯಾದ ಬಗೆಯಲ್ಲಿ ಕೇಳಿ ಮರುನುಡಿಯುವ ಹಾಗೆ ಸಿರಿಯನ್ನು ಅಣಿಗೊಳಿಸಲಾಗಿದೆ.

ios3

ಚೂಟಿಯಾದ ಕೀಲಿಮಣೆ

ಕೀಲಿಮಣೆ ಈಗ ಮತ್ತಶ್ಟು ಚೂಟಿಯಾಗಲಿದೆ. “ಎಲ್ಲಿದ್ದೀಯಾ?” ಎಂದು ಯಾರಾದರು ನಿಮಗೆ ಓಲೆ ಬರೆದರೆ, ನೀವು ಮರುನುಡಿಯುವಾಗ ಆಪಲ್ ನ ಕೀಲಿಮಣೆ ನೀವು ಇರುವ ಜಾಗವನ್ನು ತಾನಾಗಿಯೇ ಆಯ್ಕೆಯಾಗಿ ಕೊಡುತ್ತದೆ. ಯಾರದ್ದಾದರು ಅಲೆಯುಲಿ ಅಂಕಿಯನ್ನೋ, ಮಿಂಚೆಯನ್ನೋ ನಿಮ್ಮ ಚುಟುಕೋಲೆ(SMS)ಯಲ್ಲಿ ಬರೆಯಬೇಕೆಂದರೆ ಕೀಲಿಮಣೆಯು ತಾನಾಗಿಯೇ ಅದನ್ನು ತಂದು ನಿಮ್ಮ ಮುಂದಿಡುತ್ತದೆ. ನೀವು ಇಂಗ್ಲೀಶ್ ಹಾಗು ಕನ್ನಡ ಎಂದು ಎರಡು ನುಡಿಗಳ ಆಯ್ಕೆ ಮಾಡಿಕೊಂಡಿದ್ದರೆ, ಒಂದೇ ಕೀಲಿಮಣೆಯಲ್ಲಿ ಎರಡೂ ನುಡಿಗಳ ಆಯ್ಕೆ ಇರುತ್ತದೆ. ಇನ್ನೊಂದು ನುಡಿಯನ್ನು ಬರೆಯಲು ಮತ್ತೊಂದು ಕೀಲಿಮಣೆಗೆ ನೆಗೆಯಬೇಕಿಲ್ಲ.

ಚದುರದ ಚಿತ್ರಗಳು!

ನಿಮ್ಮ ಅಲೆಯುಲ್ಲಿರುವ ನಿಮ್ಮ, ನಿಮ್ಮ ಮನೆಯವರ, ಗೆಳೆಯರ ಹಾಗು ಇತರೆ ಚಿತ್ರಗಳು ತಾವಾಗಿಯೇ ಗುಂಪುಗಳಾ ಗಿ ಕಡತದಲ್ಲಿ ಉಳಿದುಕೊಳ್ಳುತ್ತವೆ. ಹುಟ್ಟಿದಹಬ್ಬ, ಮದುವೆ, ತಿರುಗಾಟ ಹೀಗೆ ಹಲವು ಚಟುವಟಿಕೆಗಳ ಚಿತ್ರಗಳು ಕೂಡ ತಾವಾಗಿಯೇ ಗುಂಪುಗಳಾಗಿ ಉಳಿದುಕೊಳ್ಳುತ್ತವೆ. ನಿಮ್ಮ ಚಿತ್ರಗಳಿರುವ ತಿಟ್ಟಕಡತವನ್ನು(album) ಅದಾಗಿಯೇ ಅಣಿಗೊಳಿಸಿ ಇಡುತ್ತದೆ. ಇನ್ಮೇಲೆ ನಿಮ್ಮ ಅಲೆಯುಲಿಯ ಚಿತ್ರಗಳನ್ನು ಹುಡುಕುವುದು, ಬೇರೆ ಬೇರೆ ತಿಟ್ಟಕಡತಗಳನ್ನಾಗಿ ಮಾರ‍್ಪಡಿಸುವುದು ತುಂಬಾ ಸುಲಬದ ಕೆಲಸ. ಇದಲ್ಲದೇ, ನಿಮಗೆ ಬೇಕಾದ ಚಿತ್ರಗಳನ್ನು ಸೇರಿಸಿ ನಿಮ್ಮ ನೆನಪಿಗಾಗಿ ಒಂದು ಓಡುತಿಟ್ಟ(video)ವನ್ನು ಕೂಡ ಮಾಡಿಡುವ ಆಯ್ಕೆ ಇದೆ.

ದಾರಿತಿಟ್ಟ (map):

ಮೊದಲಿನ ದಾರಿತಿಟ್ಟವನ್ನು ಬಳಸುವಾಗ ಅದರಲ್ಲಿ ಅಕ್ಕಪಕ್ಕದ ಇನ್ನೊಂದು ಜಾಗವನ್ನು ನೋಡಲು ಆಗುತ್ತಿರಲಿಲ್ಲ. ಹೊಸ ವರಸೆಯ ದಾರಿತಿಟ್ಟದಲ್ಲಿ ಈ ತೊಂದರೆ ಇರುವುದಿಲ್ಲ. ಅದನ್ನು ಬಳಸುವಾಗ ನೀವು ಇರುವ ಜಾಗದ ಸುತ್ತಮುತ್ತ ಸಿಗುವ ಊಟದ ಮನೆ, ತಿರುಗಾಟದ ಜಾಗಗಳು ಹೀಗೆ ನಿಮಗೆ ಬೇಕಾದ್ದನ್ನು ಹುಡುಕಬಹುದು. ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗುತ್ತಿದ್ದರೆ, ನಿಮ್ಮ ಕಚೇರಿಯ ವಿಳಾಸವು ದಾರಿತಿಟ್ಟಕ್ಕೆ ಮೊದಲೇ ತಿಳಿದಿದ್ದರೆ, ನೀವು ಹೊರಟು ದಾರಿತಿಟ್ಟವನ್ನು ತೆರೆದರೆ ಸಾಕು, ಅದಾಗಿಯೇ ಕಚೇರಿಯ ದಾರಿಯನ್ನು ತೋರಿಸುತ್ತದೆ. ನೀವೆಲ್ಲಾದರು ಹೋಗಬೇಕು ಎಂದು ನಿಮ್ಮ ‘ನಾಳುತೋರ‍್ಪಿನಲ್ಲಿ'(calendar) ಗುರುತು ಹಾಕಿಕೊಂಡಿದ್ದರೆ, ನೀವು ಆ ಹೊತ್ತಿನಲ್ಲಿ ಹೊರಟು ದಾರಿತಿಟ್ಟವನ್ನು ತೆರೆದರೆ ಸಾಕು, ಅದಾಗಿಯೇ ನೀವು ಹೋಗಬೇಕಿರುವ ದಾರಿಯನ್ನು ತೋರಿಸುತ್ತದೆ. ಹೀಗೆ ಹತ್ತು ಹಲವು ಹೊಸ ಆಯ್ಕೆಗಳು ಇದರಲ್ಲಿವೆ.

ios4

ಹಾಡುಗಳು:

ಹಾಡುಗಳನ್ನು ಕೇಳುವಾಗ ಅದರ ಸಾಲುಗಳನ್ನು ನೀವು ನೋಡಬಹುದು. ಆ ಹಾಡಿನ ಸಾಲುಗಳನ್ನು ನೀವು ಓದುತ್ತಾ ಹಾಡಿನೊಂದಿಗೆ ಗುನುಗಬಹುದು. ನೇರತಿಟ್ಟ (Live photo)ವನ್ನು ತೆಗೆಯುವಾಗ ಹಾಡುಗಳನ್ನು ನಿಲ್ಲಿಸಬೇಕೆಂದಿಲ್ಲ, ಹಾಡನ್ನು ಕೇಳುತ್ತಲೇ ನೇರತಿಟ್ಟಗಳನ್ನು ತೆಗೆಯುತ್ತಾ ಸಾಗಬಹುದು.

ಮನೆ ನೋಡಿಕೊಳ್ಳುವುದು

ಐಓಎಸ್ 10 ಹೋಮ್ ಎಂಬ ಹೊಸ ಬಳಕವನ್ನು ಹೊರತರಲಿದೆ. ಇದನ್ನು ಬಳಸಿ ನಿಮ್ಮ ಮನೆಯ ತಂಪೆಟ್ಟಿಗೆ, ಒಲೆ, ಮನೆಯ ದೀಪಗಳು, ಬಾಗಿಲ ಚೀಲಕದಂತಹ ಚೂಟಿಗಳನ್ನು ಹೋಮ್ ಬಳಕದೊಂದಿಗೆ ಹೊಂದಿಸಿಕೊಳ್ಳಬಹುದು. (ಹೀಗೆ ಹೊಂದಿಸಿಕೊಳ್ಳಲು ಆ ಚೂಟಿಗಳಿಗೂ ಕೆಲವು ನಿಯಮಗಳಿವೆ, ಅಂತಹ ಚೂಟಿಗಳಿದ್ದರೆ ಮಾತ್ರ ಹೊಂದಿಕೊಳ್ಳುತ್ತವೆ). ಹೊಂದಿಸುವುದನ್ನು ಮುಗಿಸಿದ ಮೇಲೆ, ನಿಮ್ಮ ಅಲೆಯುಲಿ ಮೂಲಕವೇ ಒಲೆ, ತಂಪೆಟ್ಟಿಗೆ ಮತ್ತು ದೀಪಗಳನ್ನು ಆರಿಸುವುದು, ಬಾಗಿಲ ಚೀಲಕ ಹಾಕುವುದು. ಹೀಗೆ ಎಲ್ಲವನ್ನು ಬೆರಳತುದಿಯಲ್ಲಿ ಮಾಡಬಹುದು.

ios5

ಚುಟುಕೋಲೆಯಾಗಲಿದೆ ಮಾತೋಲೆ!

ಇದೊಂದು ದೊಡ್ಡ ಮಾರ‍್ಪಾಟು ಎನ್ನಬಹುದು. ನಿಮ್ಮ ಅಲೆಯುಲಿಗೆ ಬರುವ ಮಾತೋಲೆ(voicemail)ಯನ್ನು ಓದಲು ಆಗುವಂತೆ ಚುಟುಕೋಲೆಯಾಗಿ(SMS) ಈ ಹೊಸ ವರಸೆಯು ಮಾರ‍್ಪಡಿಸಲಿದೆ. ಇದಕ್ಕಾಗಿ ಮಾತನ್ನು ಬರಹಕ್ಕೆ ಮಾರ‍್ಪಡಿಸುವ (speech to text) ಚಳಕದ ನೆರವನ್ನು ಇದು ಪಡೆದಿದೆ.

ಚೆಂದಗಾಣಲಿವೆ ಚುಟುಕೋಲೆಗಳು:

ಹೊಸ ಹೊಸ ಮೊಗಬಗೆ(emoji)ಗಳು ನಿಮ್ಮ ಚುಟುಕೋಲೆಗಳನ್ನು ಚೆಂದಗಾಣಿಸಲಿವೆ. ಚುಟುಕೋಲೆ ಬರೆಯುವಾಗ ಬರೆಯುವ ಸಾಲನ್ನು ತಿಳಿದುಕೊಂಡು ತಾನಾಗಿಯೇ ಮೊಗಬಗೆಗಳು ನಿಮ್ಮ ಎದುರಿಗೆ ಬರುತ್ತವೆ. ಅವನ್ನು ಬೇಕಾದರೆ ಆಯ್ಕೆ ಮಾಡಿಕೊಳ್ಳಬಹುದು. ಎತ್ತುಗೆಗೆ, “ನಾನು ತುಂಬಾ ನಲಿವಿನಿಂದ ಇದ್ದೇನೆ” ಎಂದು ಸಾಲನ್ನು ಬರೆದರೆ ಸಾಲಿನ ಕೊನೆಗೆ ನಗುವ ಮೊಗಬಗೆ ಇಲ್ಲವೇ ನಲಿವಿನ ಮೊಗಬಗೆ ಆಯ್ಕೆಯಾಗಿ ಬರುತ್ತವೆ.

  • ಚುಟುಕೋಲೆಯನ್ನು ಕಳಿಸುವಾಗ ನೀರಿನ ಗುಳ್ಳೆಗಳ ಮಾದರಿಯಲ್ಲಿ ಕಳಿಸಬಹುದು.
  • ಮಸುಕಾದ ಚುಟುಕೋಲೆಗಳನ್ನು ಕಳಿಸಬಹುದು ಅಂದರೆ ಚುಟುಕೋಲೆಯನ್ನು ಪಡೆದವರು ಅದನ್ನು ಬೆರಳಿನಲ್ಲಿ ಮುಟ್ಟುವತನಕ ಅದು ಮಸುಕು ಮಸುಕಾಗಿರುತ್ತದೆ, ಬೆರಳಿಂದ ಜಾರಿಸಿದ ಮೇಲೆ ಚುಟುಕೋಲೆ ಚೆನ್ನಾಗಿ ಕಾಣುತ್ತದೆ.
  • ಚುಟುಕೋಲೆಗಳನ್ನು ಕೈಯಲ್ಲೇ ಬರೆದು ಕಳಿಸಬಹುದು, ಕೀಲಿಮಣೆ ಇಲ್ಲದೆ ಕೈಬರಹವನ್ನು ಬಳಸಿ ಚುಟುಕೋಲೆ ಬರೆದು ಕಳಿಸಬಹುದು. ಇವುಗಳಲ್ಲದೇ ಇನ್ನು ಹತ್ತು ಹಲವು ಹೊಸ ಆಯ್ಕೆಗಳು ಚುಟುಕೋಲೆಯನ್ನು ಚೆಂದಗಾಣಿಸಲಿವೆ.

ios6 ios7

ಐಓಎಸ್ 10 ನ್ನು ಯಾವ್ಯಾವ ಮಿಂಚೆಣಿ(devices)ಗಳಲ್ಲಿ ಬಳಸಬಹುದು?

ಐಪ್ಯಾಡ್ 4 ಮತ್ತು ಅದರ ಮೇಲಿನ ವರಸೆಗಳು
ಐಪ್ಯಾಡ್ ಮಿನಿ 2 ಮತ್ತು ಅದರ ಮೇಲಿನ ವರಸೆಗಳು
ಐಪಾಡ್ ಟಚ್ 6
ಐಪೋನ್ 5, ಐಪೋನ್ 5ಸಿ, ಐಪೋನ್ 5ಎಸ್, ಐಪೋನ್ 6, ಐಪೋನ್ 6ಎಸ್, ಐಪೋನ್ 6 ಪ್ಲಸ್ ಮತ್ತು ಐಪೋನ್ ಎಸ್‍ಇ

ಬಿಡುಗಡೆ ಯಾವಾಗ?

ಜುಲೈ 2016 ರಲ್ಲಿ ಐಓಎಸ್ 10 ನ್ನು ಮರುನೋಟಕ್ಕಾಗಿ ಬಿಡುಗಡೆ ಮಾಡಲಾಗಿತ್ತು. ಎಲ್ಲಾ ಬಳಕೆದಾರರಿಗೆ ಸಿಗುವಂತೆ ಸೆಪ್ಟೆಂಬರ್ 2016 ರಂದು ಇದರ ಬಿಡುಗಡೆಯನ್ನು ಮಾಡಲಾಗುವುದು ಎಂದು ಆಪಲ್ ಹೇಳಿಕೊಂಡಿದೆ.

(ಮಾಹಿತಿ ಮತ್ತು ಚಿತ್ರಸೆಲೆ: macworld.co.ukin.techradar.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: