ಹಸಿರುಮನೆ ಮತ್ತು ಪರಿಣಾಮಗಳು- 3ನೇ ಕಂತು

– ಡಾ. ರಾಮಕ್ರಿಶ್ಣ ಟಿ.ಎಮ್.

plantationsinternational.org

ಹಿಂದಿನ ಎರಡು ಕಂತುಗಳಲ್ಲಿ ಹಸಿರುಮನೆ ಅನಿಲಗಳ ಬಗ್ಗೆ ಅವುಗಳಿಂದ ಏರಿಕೆಯಾದ ಶಾಕದ ಬಗ್ಗೆ ನೋಡಿದ್ದೇವು. ಇದನ್ನು ಹತೋಟಿ ಇಡುವುದರ ಬಗ್ಗೆ ಈ ನೇ ಮತ್ತು ಕೊನೆಯ ಕಂತಿನಲ್ಲಿ ತಿಳಿಯೋಣ.

ಹಸಿರು ಮನೆಯ ಅನಿಲಗಳ ಹತೋಟಿಯಲ್ಲಿಡಲು ಮಾಡಿದ ಪ್ರಯತ್ನಗಳು:

ಹಸಿರು ಮನೆ ಅನಿಲಗಳನ್ನು ಹೊರಹಾಕುವುದನ್ನು ನಿಲ್ಲಿಸುವುದು ಕಶ್ಟ, ಆದರೂ ಪ್ರಮುಕವಾದ ಅನಿಲಗಳನ್ನು ನಿಯಂತ್ರಿಸಲು ಸಾದ್ಯ. ಕೆಲವು ಅಂತರಾಶ್ಟ್ರೀಯ ಮತ್ತು ಅಂತರ ಸರ‍್ಕಾರಿ ಸಂಸ್ತೆಗಳು (ಇಂಟರ್ ಗೌರ‍್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೆಟ್ ಚೇಂಜ್) ಈ ಅನಿಲಗಳನ್ನು ವಿಸರ‍್ಜಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯ ಮಾಡುತ್ತಿವೆ.  1997ರ ಕ್ಯೋಟೊ ಕರಡು ಪ್ರತಿಯಂತೆ ಆರು ಅನಿಲಗಳಾದ ಕಾರ‍್ಬನ್ ಡೈಯಾಕ್ಸೈಡ್, ಮೀತೆನ್, ನೈಟ್ರಸ್ ಆಕ್ಸೈಡ್, ಓಜೋನ್, ಹ್ಯಾಲೋಕಾರ‍್ಬನ್‌ಗಳು (ಸಿ.ಎಪ್.ಸಿ.) ಮತ್ತು ಸಲ್ಪರ್ ಹೆಕ್ಸಾಕ್ಲೋರೈಡ್‍ಗಳ ಹೊರಹಾಕುವುದನ್ನು ನಿಯಂತ್ರಿಸುವ ಸಲುವಾಗಿ ಮುಂದುವರೆದ ದೇಶಗಳ ಮೇಲೆ ಬಂದನವನ್ನು ಹಾಕಿದೆ. 1990ರಲ್ಲಿದ್ದ  ಶೇಕಡ ಮಟ್ಟಕ್ಕಿಂತ ಆರು ಅನಿಲಗಳನ್ನು 5%ರಶ್ಟು ಕಡಿಮೆ ಮಾಡಬೇಕೆಂದು ತಾಕೀತು ಮಾಡಿದೆ. ಈ ವಿಶಯದಲ್ಲಿ ವಾತಾವರಣ ಉತ್ತಮಗೊಳಿಸುವ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ತಾಂತ್ರಿಕ ವ್ಯವಸ್ತೆ ಮತ್ತು ಅದನ್ನು ಅಳವಡಿಸಲು ಬೇಕಾದ ಕರ‍್ಚುಗಳನ್ನು ಬರಿಸಲು ವ್ಯವಸ್ತೆ ಮಾಡಿದೆ.

ಹಸಿರು ಮನೆಯ ಅನಿಲಗಳ ಹತೋಟಿಯಲ್ಲಿಡಲು ಈ ಕ್ರಮಗಳನ್ನು ಅನುಸರಿಸಬೇಕಾದ ಅಗತ್ಯವಿದೆ:

ಅ) ಇಂದನದ ಬಳಕೆ ಕಡಿಮೆ ಮಾಡುವುದು. ಈಗ ತಯಾರಿ ಮಾಡುವ ಮೊಟಾರು ವಾಹನಗಳ ಸಮರ‍್ತ ತಂತ್ರಜ್ಞಾನ ಬದಲಾಯಿಸಿ ಇಂದನದ ಬಳಕೆ ಕಡಿಮೆಮಾಡುವಂತ ವಾಹನಗಳನ್ನು ತಯಾರಿಸುವುದು. ಶೇಕಡ 60ಕ್ಕಿಂತ  ಕಡಿಮೆ ನೈಟ್ರಸ್ ಆಕ್ಸೈಡ್ ಮತ್ತು ಶೇಕಡ 40ಕ್ಕಿಂತ ಕಡಿಮೆ ಹೈಡ್ರೋಕಾರ‍್ಬನ್‍ಗಳನ್ನು ಹೊರಹಾಕುವ ವಾಹನಗಳನ್ನು ತಯಾರಿಸಬೇಕಾಗಿದೆ.

ಆ) ಪೂರ‍್ತಿ  ದಹಿಸುವ ಇಂದನವನ್ನು ವಾಹನದಲ್ಲಿ ಬಳಸಬೇಕು. ಇಂಜಿನ್‍ನ ಸಮರ‍್ತತೆ ಹೆಚ್ಚಿಸಲು ವಾಹನವನ್ನು ಯಾವಾಗಲೂ ಸುಸ್ತಿತಿಯಲ್ಲಿಡಬೇಕು. ತೈಲ ಸರಬರಾಜು ಮಾಡುವ ಕಂಪೆನಿಗಳು ಉತ್ಕ್ರುಶ್ಟವಾದ ಇಂದನಗಳನ್ನು ತಯಾರಿಸುವುದು ಅವಶ್ಯಕ. ತೈಲವನ್ನು ತುಂಬಿಸುವಾಗ ಅದರ ಆವಿಯನ್ನು ಹಿಡಿಯಲು ಕ್ಯೆನಿಸ್ಟರ್ ವ್ಯವಸ್ತೆ ವಾಹನದಲ್ಲಿ ಅಳವಡಿಸಬೇಕಾಗುತ್ತದೆ.

ಇ) ಪಳಿಯುಳಿಕೆ ಇಂದನಗಳನ್ನು ಬಿಟ್ಟು ಬದಲಿ ಶಕ್ತಿ, ಅಂದರೆ  ಸೋಲಾರ್, ನೀರಿನ ವಿದ್ಯುತ್, ನ್ಯೂಕ್ಲಿಯಾರ್  ಇಂದನಗಳ ಬಳಕೆಯಾಗಬೇಕಾಗಿದೆ. ಆದಶ್ಟು ಬೇಗ ಈ ವ್ಯವಸ್ತೆ ಅಳವಡಿಸುವುದು ಕ್ಶೇಮ.

ಈ) ಶೇಕಡ 90 ವಿಶ ಅನಿಲಗಳ ವಾಯುಮಂಡಲಕ್ಕೆ ವಿಸರ‍್ಜಿಸುವುದನ್ನು ಕಡಿಮೆಮಾಡಬೇಕು. ಸಾದ್ಯವಾದರೆ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿದು, ಹೊಸ ಯೋಜನೆಗಳನ್ನು ಹುಟ್ಟು ಹಾಕಿ ವಿಶ ಅನಿಲಗಳ ಹೊರಹಾಕುವುದನ್ನು ನಿಯಂತ್ರಿಸಬೇಕಾಗಿದೆ.

ಉ) ಸಿ.ಎಪ್.ಸಿ. ಅಂದರೆ ಹ್ಯಾಲೊಕಾರ‍್ಬನ್‌ಗಳನ್ನು ಅಳವಡಿಸಿ ಮಾಡುವ ರೆಪ್ರಿಜಿರೇಟರ್, ಹವಾನಿಯಂತ್ರಿಕ ಯಂತ್ರಗಳ ಮತ್ತು ಟೆಟ್ರಾಕ್ಲೋರೈಡ್ ದ್ರಾವಕಗಳ ತಯಾರಿಕೆಯನ್ನು ನಿಶೇದಿಸುವುದು. ಅವುಗಳಿಗೆ ಬದಲಿ ರಸಾಯನಿಕಗಳನ್ನು ತಯಾರು ಮಾಡುವುದು.

ಊ) ಸ್ವಂತ ವಾಹನ ಬಳಸುವುದನ್ನು ನಿಲ್ಲಿಸುವುದು, ಸರ‍್ಕಾರಿ ಅತವಾ ಸರ‍್ಕಾರೇತರ ಸಾಮೂಹಿಕ ವಾಹನಗಳನ್ನು ಬಳಸುವುದು.  ಇಂದನವೇ ಬಳಸದ ವಾಹನಗಳಾದ ಬೈಸಿಕಲ್, ಕಯ್ಯಿಂದ ಎಳೆಯುವ ರಿಕ್ಶಾ ಮುಂತಾದವುಗಳಿಗೆ ಹೆಚ್ಚು ಪ್ರಾಶಸ್ಯ ನೀಡುವುದು. ಒಂದೇ ಸ್ತಳದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಒಂದೇ ಕಾರಿನಲ್ಲಿ ಹೋಗಿಬರುವುದು(ಕಾರ್ ಪೂಲಿಂಗ್) ಸೂಕ್ತ.  ಇದರಿಂದ ಇಂದನ ಬಳಕೆ ಕಡಿಮೆಯಾಗುತ್ತದೆ.

ಎ) ಬೇಸಾಯ ಮಾಡಲಾಗದ ಅತವಾ ಬರಡು ಜಮೀನಿನಲ್ಲಿ  ಕಾಡು ಬೆಳೆಸುವುದು. ಅಗ್ರೊ ಪಾರೆಸ್ಟ್ ಮತ್ತು ಸಾಮಾಜಿಕ ತಾಣಗಳಲ್ಲಿ ಕಾಡುಗಳನ್ನು ಸೊಶಿಯಲ್ ಪಾರೆಸ್ಟ್ ಬೆಳೆಸುವುದು, ಜತೆಗೆ ಕಾಡಿನ ನಾಶವನ್ನು ತಡೆಗಟ್ಟುವುದು.

ಏ) ಸಮುದ್ರಗಳಲ್ಲಿ  ತೇಲಾಡುವ ಸಸ್ಯಗಳನ್ನು ಬಳಸಿ ಆಹಾರವನ್ನು ತಯಾರಿಸುವುದು. ತೇಲಾಡುವ  ಸಸ್ಯಗಳನ್ನು ವ್ರುದ್ದಿಸಿದರೆ ವಾತಾವರಣದಲ್ಲಿರುವ ಶೇಕಡ ಕಾರ‍್ಬನ್ ಡೈಯಾಕ್ಸೈಡ್ ಕಡಿಮೆಯಗುತ್ತವೆ. ಈ ಸಸ್ಯಗಳಿಗೆ ಕಬ್ಬಿಣದ ಅಂಶವನ್ನು ಸರಬರಾಜು ಮಾಡಿದರೆ ಶೇಕಡ 20 ಹೆಚ್ಚು ವ್ರುದ್ದಿಯಾಗುತ್ತವೆ ಮತ್ತು  ವಾಯುಮಂಡಲದಲ್ಲಿ ಕಾರ‍್ಬನ್ ಡೈಯಾಕ್ಸೈಡ್‍ಗಳು ಶೇಕಡ 60 ಕಡಿಮೆಯಾಗುತ್ತವೆ. ಇದರಿಂದ ಬೂಮಂಡಲದ ಉಶ್ಣತೆ ಕಡಿಮೆ ಮಾಡಬಹುದು.

ಐ) ಅರ‍್ತಶಾಸ್ತ್ರಜ್ನರ ಪ್ರಕಾರ, ಕಾರ‍್ಬನ್ ಡೈಯಾಕ್ಸೈಡ್‍ಗಳ ಹೊರಹಾಕುವ ಪ್ರತಿ ದೇಶಕ್ಕೆ ಒಂದು ನಿಗದಿತ ಬಳಕೆ ಪರವಾನಗಿಯನ್ನು ಕೊಡುವುದು. ಅದಕ್ಕೂ ಮೀರಿದರೆ, ಪರವಾನಗಿಯನ್ನು ರದ್ದುಪಡಿಸುವುದು.  ಎರಡನೇಯದಾಗಿ ಕಾರ‍್ಬನ್ ತಯಾರಿಸುವ ಇಂದನಗಳ ಬಳಕೆ ಮೇಲೆ ಕಾರ‍್ಬನ್ ತೆರಿಗೆಯನ್ನು ವಿದಿಸುವುದು.

ಒ) ಕ್ಯೋಟೊ(Kyoto) ಕರಡಿನ ಕ್ಲಿನ್ ಡೆವೆಲಪ್‍ಮೆಂಟ್ ಮೆಕ್ಯಾನಿಸಮ್‌ (Clean Development Mechanism or CDM) ನಲ್ಲಿ ಹೇಳಿದಂತೆ ಮುಂದುವರೆಯುತ್ತಿರುವ ದೇಶಗಳಲ್ಲಿ ಅನಿಲಗಳ ಹೊರಹಾಕುವ ಮಟ್ಟ ಕಡಿಮೆ ಮಾಡುವ ಸಹಕಾರ ಸಂಸ್ತೆಗಳ ಪ್ರಾಜೆಕ್ಟಗಳನ್ನು ಹುಟ್ಟು ಹಾಕುವುದು.

ಓ) ಯುನೈಟೆಡ್ ನೇಶನ್ಸ್ ಒಕ್ಕೂಟ ರಿಯೊಡಿ ಜನೈರೋದಲ್ಲಿ ಜೂನ್ 20-22, 2012 ನಡೆಸಿದ “ಅರ‍್ತ ಸಮಿಟ್” ನಲ್ಲಿ ಸೇರಿದ ಸರ‍್ಕಾರಿ, ಸರ‍್ಕಾರೇತರ, ಎನ್‌ಜಿಒಗಳು ಮತ್ತು ಇತರೆ ಸಂಗಟನೆಗಳೆಲ್ಲ ಸೇರಿ ಮಾಡಿದ ಒಪ್ಪಿಗೆಗಳಲ್ಲೊಂದಾದ “ಪರಿಸರ  ಸುಸ್ತಿತಿಯನ್ನು ಕಾಪಾಡಿಕೊಳ್ಳುವುದು, ವಿಶೇಶವಾಗಿ  ಬೂಮಂಡಲ ಶಾಕ ಹೆಚ್ಚುವುದನ್ನು ತಡೆಯುವುದು ಮತ್ತು ಮುಂಬರುವ ದಿನಗಳಲ್ಲಿ ಜನಜೀವನ ಸುಕಮಯವಾಗಿರಲು ಬೇಕಾದ ವ್ಯವಸ್ತೆ ಮಾಡುವುದು” ಇದನ್ನು ಪಾಲಿಸುವುದು.

ಕಳೆದ ಎರಡು ಕಂತುಗಳಲ್ಲಿ ಮೂಡಿಬಂದ ಮಾಹಿತಿಯನ್ನು ಕಿರಿದಾಗಿ ಕೆಳಕಂಡ ಪಟ್ಟಿಗಳಲ್ಲಿ ನೀಡಲಾಗಿದೆ.

ಪಟ್ಟಿ-1 ಹಸಿರು ಮನೆ ಅನಿಲಗಳ ಮೂಲ ಮತ್ತು ಅವುಗಳಿಂದಾಗುವ ಪರಿಣಾಮಗಳು:

tabl1

 

ಪಟ್ಟಿ-2 ಹಸಿರು ಮನೆ ಅನಿಲಗಳನ್ನು ಹೊರಹಾಕುವ ಹತ್ತು ಅಗ್ರ ದೇಶಗಳ ಪಟ್ಟಿ:

ಕ್ರಮಾಂಕ ದೇಶ ಒಟ್ಟಾರೆ ಹಸಿರು ಮನೆ ಅನಿಲಗಳ ಹೊರಹಾಕುವುದು
1 ಉತ್ತರ ಅಮೇರಿಕ 17.6
2 ರಶ್ಯ ಮತ್ತು ಸುತ್ತಲಿನ ಸೋವಿಯತ್ ದೇಶಗಳು 12.0
3 ಬ್ರೆಜಿಲ್ 10.5
4 ಚೈನಾ 6.6
5 ಇಂಡಿಯಾ 3.9
6 ಜಪಾನ್ 3.9
7 ಜರ‍್ಮನಿ 2.8
8 ಯುನೈಟೆಡ್ ಕಿಂಗ್‍ಡಮ್ 2.7
9 ಇಂಡೋನೇಶ್ಯ 2.4
10 ಪ್ರಾನ್ಸ್ 2.1

 

ಪಟ್ಟಿ– 3 ಪ್ರಪಂಚದಲ್ಲಿ ಹೆಚ್ಚು ಕಾರ್ಬನ್ ಡೈಯಾಕ್ಸೈಡ್ ವಿಸರ‍್ಜಿಸುವ ವಿವಿದ ದೇಶಗಳು:

ಮುಂದುವರೆದ ದೇಶಗಳು 1995 ರಲ್ಲಿ (ಶೇಕಡಾವಾರು) 2035 ಹೊತ್ತಿಗೆ (ಶೇಕಡಾವಾರು)
ಉತ್ತರ ಅಮೇರಿಕಾ (ಅಮೇರಿಕಾ ಮತ್ತು ಕೆನಡಾ ಸೇರಿ) 22% 15%
ಪೂರ‍್ವ ಯುರೋಪ್ 73% 50%
ಪಶ್ಚಿಮ ಯುರೋಪ್ 17% 12%
ಪೂರ‍್ವ ಏಶ್ಯ 7% 4%
ಮುಂದುವರೆಯುತ್ತಿರುವ ದೇಶಗಳು
ಚೈನಾ 11% 17%
ಲ್ಯಾಟಿನ್ ಅಮೇರಿಕಾ 4% 6%
ಆಪ್ರಿಕಾ 3% 5%
ಮದ್ಯ ಏಶ್ಯ 3% 5%
ಇನ್ನುಳಿದ ಏಶ್ಯ 6% 14%

 

ಮಾಹಿತಿ ಸೆಲೆ:

1.Chapman JL and MJ Reiss, Ecology –principals and Applications 1995. Cambridge University Press, Cambridge.

2.Jacob Daniel J., Introduction to Atmosphere Chemistry, 1999 . The Greenhouse effect (chapter 7) Princeton University Press.

3.Dey, AK., Environmental Chemistry, 2001. New Age International Pvt. Ltd., New Delhi.

4. Firor, J and EJ Judith, Crowded greenhouse, 2003. University press.

5. Gribbin J, New scientist, 22, 1-4, 1988.

6. Peter H Raven and Lind R Berg, Environment (Third edition) 2001Harcourt College publishers Philadelphia

7. Karpagam M. , Environmental Economics, 2001 Stering Pub. Pvt. Ltd., New Delhi.

8. Sincero AP and GA Sincero, Environmental Engineering – a design approach, 1996. Prentice Hall New Delhi.

9. Sodhi GS Fundamental concepts of Environmental Chemistry, 2000, Narosa Publishing House, New Delhi.

10. www. Self. Org , glogster.com

11. chcchartar.org, cheaperpetrolparty.com, www.wrsc.org , wattsupwiththat.com

(ತಿಟ್ಟ ಸೆಲೆ: plantationsinternational.com)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: