ಗೌರಿ ಗಣಪ ಹಬ್ಬದ ಸಂಬ್ರಮ ನಾಡಲಿ..

– ಸುನಿಲ್ ಮಲ್ಲೇನಹಳ್ಳಿ.

Lord-Ganesha-HD-Wallpaper

ಗೌರಿ ಗಣಪ ಹಬ್ಬದ ಸಂಬ್ರಮ ನಾಡಲಿ
ಕಟ್ಟಿ ಹಸಿರ ತಳಿರು ತೋರಣ ಬಾಗಿಲಲಿ
ಮಾಡಿ ಹಲವು ಶ್ರುಂಗಾರವ ಅಂಗಳದಲಿ
ದಣಿದ ಮನದಲಿ, ನೆನೆದೆನು ನಾ ಚಕ್ಕಲಿ

ಹಬ್ಬಕ್ಕೆ ಅಮ್ಮ ಮಾಡಿದ ಗರಿಗರಿ ಚಕ್ಕಲಿ
ತಿನ್ನುತಾ ಏರಿದೆ ಮನೆಯಂಗಳದ ಜಗಲಿ
ಪೂಜೆಗೆ ಮುಂಚಿತ ಚಕ್ಕಲಿ, ನಾ ತಿನ್ನವುದಾ
ಮರೆಯಲಿ ಕಂಡ ಗಣಪನ ವಾಹನ ಮೂಗಿಲಿ

ಹೇಳಲು ದೂರ, ಓಡಿತಾ ಗಜಾನನ ಬಳಿ
ಹೇಳಿತಾ ಚಾಡಿ ವಿದವಿದ ಪರಿಯಲಿ
ಮೂಗಿಲಿ ಮಾತ ಕೇಳಿ
ಮೈಯೆಲ್ಲ ಕೋಪ ಮೂಡಿ

ಕಡುಬನು ತಿನ್ನುವುದಾ ಅರ‍್ದಕ್ಕೆ ಬಿಟ್ಟೆದ್ದ ಗಣಪ
ಪ್ರತ್ಯಕ್ಶನಾದನು ನಮ್ಮ ಮನೆ ಅಂಗಳ ಸಮೀಪ
ಆ ವೇಳೆಗೆ ನಾ ತಿನ್ನುತಾ, ತಿನ್ನುತಾ ಗರಿಗರಿ ಚಕ್ಕಲಿ
ಆಗಲೇ ಸೆರೆಯಾಗಿದ್ದೆ ನಿದ್ರಾದೇವಿಯ ಮಡಿಲಲಿ

ಗಣನಾಯಕ ಬಂದ ಕೊಂಚ ಅರಿವಾದರು ನನಗೆಲ್ಲಿ?
ನಾ ಮಲಗಿರುವುದಾ ಕಾಣುತಾ ಮೂಗಿಲಿ
ಕಡುಕೋಪದಿ ಏರಿತಾ ನಾ ಮಲಗಿದ ಜಗಲಿ
ಓಡಾಡುತಾ ಇಟ್ಟಿತಾ ನನಗಾ ಕಚಗುಳಿ

ಇಟ್ಟಿತಾ ನನಗಾ ಕಚಗುಳಿ
ನಿಂತಿತು ಗಣಪನ ಸನಿಹದಲಿ
ನಾ ತಪ್ಪಿನ ಅರಿವಿನಲಿ, ಗಣಪನ ಕ್ಶಮೆ ಕೇಳಲು
ಒಡನೆಯೇ ಜಗುಲಿಯಿಂದ ಎದ್ದೇಳಲು
ಇದ್ದೆನು ಹಾಸಿಗೆಯಲಿ
ಸೊಗಸಾದ ಕನಸ ಕಂಡಿದ್ದೆನು ನಿದ್ರೆಯಲಿ

(ಚಿತ್ರ ಸೆಲೆ:  shortday.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: