ದೊಡ್ಡಾಲದ ಮರದ ಕಡೆಗೆ ಸೈಕ್ಲಿಂಗ್ ಬರ‍್ತೀರಾ?

ಗಿರೀಶ್ ಬಿ. ಕುಮಾರ್.

img_4450

‘ಹಾ ಒಂದು ಹಾ ಎರಡು ಹಾ ಮೂರು…’ ಹೀಗೆ ಎಣಿಸುತ್ತಾ ಮೈಸೂರು ರಸ್ತೆಯಲ್ಲಿ ನಿಂತರೆ, ವಾರದ ಕೊನೆಯಲ್ಲಿ ಬೆಂಗಳೂರಿನಿಂದ ದೊಡ್ಡ ಆಲದ ಮರದ ಕಡೆಗೆ ಸೈಕ್ಲಿಂಗ್ ಹೊರಟ ಜನರ ಸಂಕ್ಯೆ ಒಂದು ಐವತ್ತರ ಗಡಿ ದಾಟಬಹುದು. ಇವರಲ್ಲಿ ವಯಸ್ಸಾದವರು, ಮಕ್ಕಳು, ಹುಡುಗರು ಮತ್ತು ಹುಡುಗಿಯರು ಎಲ್ಲರೂ ಸೇರಿರುತ್ತಾರೆ. ಹೀಗೆ ಗುಂಪುಗುಂಪಾಗಿ ಹೋಗುವ ಇವರಲ್ಲಿ ಮೂರರಿಂದ ಐದು ಜನರ ಗುಂಪುಗಳಿಂದ ಹಿಡಿದು ಎಂಟು ಜನಕ್ಕೂ ಮೀರಿದ ದೊಡ್ಡ ಗುಂಪುಗಳಾಗಿಯೂ ಹಾಗೂ ಕೆಲವರು ಒಂಟಿಯಾಗಿಯೂ ಸೈಕ್ಲಿಂಗ್ ಹೋಗುವುದುಂಟು.

ಮೆಜೆಸ್ಟಿಕ್ ನಿಂದ ದೊಡ್ಡ ಆಲದ ಮರ ಸುಮಾರು 25 ಕಿ.ಮೀ ದೂರದಲ್ಲಿದೆ. ಮೆಜೆಸ್ಟಿಕ್ – ಮೈಸೂರು ರಸ್ತೆ – ಕೆಂಗೇರಿ ಮಾರ‍್ಗವಾಗಿ ಚಲಿಸಿ ನೈಸ್ ರಸ್ತೆಯನ್ನು ದಾಟಬೇಕು. ನಂತರ ಕುಂಬಳಗೋಡಿಗಿಂತ 1 ಕಿ.ಮೀ ಮುಂಚೆ ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನ ಹತ್ತಿರ ಬಲಕ್ಕೆ ತಿರುಗಿ, ರೈಲು ಹಳಿಯನ್ನು ದಾಟಿ ರಾಮೋಹಳ್ಳಿ ಮಾರ‍್ಗವಾಗಿ 8 ಕಿ.ಮೀ ಸಾಗಿದರೆ ನಿಮಗೆ ಆ 400 ವರ‍್ಶ ಹಳೆಯದಾದ ಆಲದ ಮರ ಕಾಣುತ್ತದೆ.

ಮೆಜೆಸ್ಟಿಕ್ ನಿಂದ ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನವರೆಗೂ ಬೆಂಗಳೂರು-ಮೈಸೂರು ರಸ್ತೆಯಲ್ಲೇ ಸೈಕಲ್ ತುಳಿಯಬೇಕಾಗಿರುವುದರಿಂದ 17 ಕಿ.ಮೀ ಗಳ ಈ ಸವಾರಿ ಸ್ವಲ್ಪ ಮಟ್ಟಿಗೆ ಬೇಜಾರು ಎನಿಸುತ್ತದೆ. ಅದಕ್ಕೆ ಈ ದಾರಿಯಲ್ಲಿ ಓಡಾಡುವ ದೊಡ್ಡ ದೊಡ್ಡ ವಾಹನಗಳೇ ಇದಕ್ಕೆ ಕಾರಣ. ಕರ‍್ರೋ ಪರ‍್ರೋ ಎಂದು ಅರಚುತ್ತಾ ಓಡಾಡುವ ಈ ವಾಹನಗಳು ಸೈಕಲ್ ತುಳಿಯುವವರನ್ನು ಲೆಕ್ಕಿಸದೆ ಯರ‍್ರಾ ಬಿರ‍್ರಿ ಹೋಗುವ ರಬಸಕ್ಕೆ ನಮ್ಮ ಸೈಕಲ್ ಗಳು ಅಲುಗಾಡಿ ಹೋಗುತ್ತವೆ. ಇಶ್ಟೆ ಅಲ್ಲದೇ ಹೆದ್ದಾರಿಯಲ್ಲಿ ಏಳುವ ದೂಳನ್ನು ಕುಡಿಯುತ್ತಾ, ಆಗಾಗ್ಗೆ ಕಣ್ಣು ಉಜ್ಜಿಕೊಳ್ಳುತ್ತಾ ಸೈಕಲ್ ತುಳಿಯುವುದಕ್ಕೆ ಸಾಕು ಸಾಕಾಗಿ ಹೋಗುವುದಂತು ನಿಜ.

ಮೈಸೂರು ರಸ್ತೆಯಿಂದ ದೊಡ್ಡ ಆಲದ ಮರದವರೆಗೆ 8 ಕಿ.ಮೀಗಳ ಸೈಕಲ್ ಸವಾರಿ ಸೊಗಸಾಗಿರುತ್ತದೆ. ಈ ರಸ್ತೆಯಲ್ಲಿ ಅಕ್ಕ ಪಕ್ಕ ಕೆಲವು ಸಣ್ಣ ಕಾರ‍್ಕಾನೆಗಳಿದ್ದರೂ ಯಾವುದೇ ಸದ್ದು ಗದ್ದಲವಿಲ್ಲದೆ ತಮ್ಮ ಪಾಡಿಗೆ ತಾವು ಇರುತ್ತವೆ. ಅಲ್ಲೊಂದು ಇಲ್ಲೊಂದು ವಾಹನ, ಕೆಲವು ಬಾರಿ ದೊಡ್ಡ ಲಾರಿಗಳು ಬಿಟ್ಟರೆ ವಾಹನ ಓಡಾಟ ತುಂಬಾ ಕಮ್ಮಿ. ಗುಂಪು ಗುಂಪಾಗಿ ಬರುವ ಸೈಕಲ್ ಸವಾರರನ್ನು ಕಂಡು ‘ಬಂತು ನೋಡ್ರಪ್ಪ ಹುಚ್ಚರ ಸವಾರಿ’ ಎಂದು ಸ್ತಳಿಯರು ಅಂದುಕೊಂಡರೂ ಸಹ ಇವರ ಈ ಮಾತು
ಪ್ರೀತಿಯಿಂದ ಬಂದದ್ದು ಎಂದು ನಮಗೆ ತಿಳಿಯಲು ಬಹಳ ಹೊತ್ತೇನು ಆಗುವುದಿಲ್ಲ.

ನೀವೇನಾದರು 5 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಹೊರಟರೆ 3 ಗಂಟೆಗಳ ಸಮಯದಲ್ಲಿ ದೊಡ್ಡ ಆಲದ ಮರ ತಲುಪಬಹುದು. ನೀವು ಸೈಕ್ಲಿಂಗ್ ನಲ್ಲಿ ತೀರಾ ಹಳಬರಾಗಿದ್ದರೆ 2 ಗಂಟೆ ಸಮಯ ಸಾಕು. ನಾನು ನಮ್ಮ ತಂಡದ ಜೊತೆ ಸೈಕ್ಲಿಂಗ್ ಹೋಗುವಾಗ ಸಾದಾರಣವಾಗಿ ನಾವು 14 ಕಿ.ಮೀ ವೇಗದಲ್ಲಿ ಹೋಗುತ್ತೇವೆ ಅದು ಸಮತಟ್ಟಾದ ರಸ್ತೆಗಳಿದ್ದರೆ ಮಾತ್ರ. ಏರುಪೇರಿನ ರಸ್ತೆಯಾದರಂತು ಈ ವೇಗ ಅರ‍್ದಕ್ಕೆ ಇಳಿದುಬಿಡುತ್ತದೆ. ದೊಡ್ಡ ಆಲದ ಮರದ ರಸ್ತೆಯಲ್ಲಿ ಒಂದೆರಡು ಕಡೆ ಸಣ್ಣ ಏರುಪೇರು ಇವೆ. ಇದು ಬಿಟ್ಟರೆ ತೊಡಕಿಲ್ಲದೆ ಗಂಟೆಗೆ 12 ಕಿ.ಮೀ ವೇಗದಲ್ಲಿ ಹೋಗಬಹುದು.

ಹಣ್ಣಿನಂಗಡಿ

img_20160515_073856868

ರೈಲ್ವೆ ಗೇಟ್ ನಿಂದ ಒಂದು 3 ಕಿ.ಮೀ ಸಾಗಿದರೆ ರಸ್ತೆಯ ಎಡ ಮತ್ತು ಬಲ ಬಾಗದಲ್ಲಿ ಎದುರು ಬದುರಾದ ಎರಡು ಮನೆಗಳ ಮುಂದೆ ಮೇಜಿನ ಮೇಲೆ ತರ ತರವಾದ ಹಣ್ಣುಗಳನ್ನು ಹವಳದ ದಿಣ್ಣೆಗಳಂತೆ ಜೋಡಿಸಿಟ್ಟಿರುತ್ತಾರೆ. ಸಪೋಟ, ಸೇಬು, ಸೀಬೆಹಣ್ಣು ಇವುಗಳ ಜೊತೆಗೆ ಆಯಾ ಕಾಲದಲ್ಲಿ ಮಾತ್ರ ಸಿಗುವ ಹಣ್ಣುಗಳು (ಮಾವು, ದ್ರಾಕ್ಶಿ ಇತ್ಯಾದಿ) ಸಹ ಅಲ್ಲಿ ಸಿಗುತ್ತವೆ. ಎಲ್ಲಾ ಹಣ್ಣುಗಳು ಪಳ ಪಳ ಹೊಳೆಯುವುದರಿಂದ ನೋಡುತ್ತಿದ್ದರೆ ಹಾಗೆ ಗುಳುಮ್ ಸ್ವಾಹ ಮಾಡಿಬಿಡಬೇಕು ಅನ್ನಿಸುತ್ತದೆ. ಇಲ್ಲಿರುವ ಹಣ್ಣುಗಳಲ್ಲಿ ಒಂದು ಸ್ಪೆಶಲ್ ಹಣ್ಣಿದೆ. ಕೊನೆಯ ಬಾರಿ ನಾನು ಸೈಕ್ಲಿಂಗ್ ಗೆ ಹೋಗಿದ್ದಾಗ ನನ್ನ ಕಣ್ಣಿಗೆ ಬಿದ್ದ ಆ ಸ್ಪೆಶಲ್ ಹಣ್ಣೇ ‘ರೋಸ್ ಆಪಲ್’.

ನೋಡುವುದಕ್ಕೆ ತಿಳಿಗೆಂಪು ಬಣ್ಣ, ಆಕಾರದಲ್ಲಿ ದೊಣ್ಣೆ ಮೆಣಸಿನಕಾಯಿ ಹಾಗೆ ಉದ್ದಕೆ ಇರುವ ರೋಸ್ ಆಪಲ್ ಹಣ್ಣು ಅಶ್ಟೇನು ಸಿಹಿಯಾಗಿಲ್ಲದಿದ್ದರೂ ಇದರಲ್ಲಿರುವ ನೀರಿನಂಶ ಸೈಕಲ್ ಸವಾರರಿಗೆ ಬಲು ಉಪಕಾರಿ. ಬೇಸಿಗೆಯಲ್ಲಿ ಸೈಕ್ಲಿಂಗ್ ಮಾಡುವಾಗ ನಾವು ಸಿಕ್ಕಾಪಟ್ಟೆ ನೀರು ಕುಡಿಯಬೇಕಾಗುತ್ತದೆ. ಎಶ್ಟು ನೀರು ಕುಡಿದರೂ ದಣಿದ ನಮ್ಮ ದೇಹ ಮತ್ತೆ ಮತ್ತೆ ನೀರನ್ನು ಬೇಡುತ್ತಿರುತ್ತದೆ ಹಾಗಾಗಿ 2-3 ಕಿ.ಮೀಟರಿಗೊಮ್ಮೆ ಸೈಕಲ್ ನಿಲ್ಲಿಸಿ ನೀರು ಕುಡಿದು ಮುಂದೆ ಸಾಗುವ ಪರಿಸ್ತಿತಿ ಇರುತ್ತದೆ. ಇದರ ಬದಲು ಒಂದು ರೋಸ್ ಆಪಲ್ ತಿಂದರೆ ಸಾಕು ಐದಾರು ಕಿ.ಮೀ ಹೋಗುವವರೆಗೂ ದಣಿವಾಗುವುದಿಲ್ಲ. ಈ ಹಣ್ಣನ್ನು ಬಾಯಿಗೆ ಹಾಕಿಕೊಂಡು ಜಗಿಯಲು ಶುರುಮಾಡಿದರೆ ತುಂಬಾ ಹೊತ್ತಿನ ತನಕ ಹಣ್ಣಿನ ರಸ ಬಾಯಲ್ಲೇ ಇದ್ದು ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಈ ಹಣ್ಣು ಬೇಸಿಗೆಯಲ್ಲಿ ಸೈಕ್ಲಿಂಗ್ ಮಾಡುವಾಗ ಬಲು ಉಪಕಾರಿ.

img_20160515_073843400

ನಾನು ಮೇಲೆ ಹೇಳಿದ ಹಣ್ಣಿನ ಅಂಗಡಿಯಲ್ಲಿ ಒಂದಿಶ್ಟು ಹಣ್ಣನ್ನು ತಿಂದು ದೊಡ್ಡ ಆಲದ ಮರದ ಕಡೆಗೆ ಮುಂದುವರೆದರೆ ನಿಮಗೆ ರಾಮೋಹಳ್ಳಿ ಸಿಗುತ್ತದೆ. ಇದನ್ನು ದಾಟಿ ಮುಂದುವರಿದ ಹಾಗೆ ಒಂದು ಏರು ರಸ್ತೆ ಸಿಗುತ್ತದೆ ಇದನ್ನು ಏರುತ್ತಿದ್ದ ಹಾಗೆ ತಲೆ ಕೆದರಿಕೊಂಡು ನಿಂತಿರುವ ಬೂತದ ಹಾಗೆ ದೊಡ್ಡ ಆಲದ ಮರ ನಿಮ್ಮ ಎದುರಿಗೆ ಕಾಣಿಸಿಕೊಳ್ಳುತ್ತಾ ಹೋಗುತ್ತದೆ. ರೈಲ್ವೆ ಗೇಟಿನಿಂದ ದೊಡ್ಡ ಆಲದ ಮರದವರೆಗು ಮಾಡುವ ಸೈಕ್ಲಿಂಗ್ ನಲ್ಲೆ ನೀವು ನಿಜವಾಗಿಯೂ ಎಂಜಾಯ್ ಮಾಡುವುದು. ಅಲ್ಲೊಂದು ಇಲ್ಲೊಂದು ಮನೆ, ರಸ್ತೆ ಬದಿಗಳಲ್ಲಿ ಹಸಿರು, ಕಡಿಮೆ ವಾಹನ ಓಡಾಟವಿರುವ ಈ ರಸ್ತೆ ನಿಜಕ್ಕೂ ನಿಮಗೆ ಇಶ್ಟವಾಗುತ್ತದೆ. ಈ ರಸ್ತೆಯಲ್ಲಿ ಹೂವಿನ ಗಿಡಗಳ ನರ‍್ಸರಿಗಳದ್ದೇ ಕಾರುಬಾರು ಕಣ್ರಿ, ಸುಮಾರು ಹತ್ತಿಪ್ಪತ್ತು ನರ‍್ಸರಿಗಳನ್ನು ಕಾಣಬಹುದು. ಇವೆಲ್ಲವನ್ನೂ ಕಣ್ಣಲ್ಲಿ ತುಂಬಿಕೊಳ್ಳುತ್ತಾ ಸೈಕಲ್ ತುಳಿಯುವುದೇ ಒಂದು ಸಂತೋಶ, ಕಣ್ಮುಚ್ಚಿ ಸೈಕಲ್ ತುಳಿಯಬಹುದು ನೋಡಿ (ನೋಡಿ ಅಶ್ಟೆ!!! ನಾನು ಹೇಳಿದ ಹಾಗೆ ಮಾಡಲು ಹೋಗಿ ಕೈ ಕಾಲು ಮುರಿದುಕೊಂಡೀರಾ ಮತ್ತೆ). ಆದರೆ ಹೆದ್ದಾರಿಗಳಲ್ಲಿ ಮಾತ್ರ ಸಮಸ್ಯೆಗಳದ್ದೆ ತಕರಾರು. ಇಲ್ಲಿ ರಸ್ತೆ ದಾಟುವಾಗ ಅತವಾ ರಸ್ತೆಯಂಚಿನಲ್ಲಿ ಸೈಕಲ್ ತುಳಿಯುವಾಗ ತುಂಬಾ ಹುಶಾರಾಗಿರಬೇಕು.

ಹೋ ಹೋ ಬಂದೇ ಬಿಡ್ತು ದೊಡ್ಡ ಆಲದ ಮರ…

img_4203

ನಾನು ಮೊದಲ ಬಾರಿಗೆ ಇಲ್ಲಿಗೆ ಸೈಕ್ಲಿಂಗ್ ಹೋದಾಗ ದೂರದಿಂದ ಈ ಮರ ತುಂಬಾ ಸೊಗಸಾಗಿ ಕಾಣುತ್ತಿತ್ತು. ಈ ಮರ ಹಾಗಿದೆ ಹೀಗಿದೆ ಎಂದೆಲ್ಲಾ ನನ್ನ ಗೆಳೆಯರು ಕುತೂಹಲ ಕೆರಳಿಸಿದ್ದರು. ದೂರದ ಬೆಟ್ಟ ನುಣ್ಣಗೆ ಅನ್ನುವ ಗಾದೆ ಮಾತಿನ ಹಾಗೆ ದೂರದಿಂದ ಸುಂದರವಾಗಿ ಕಾಣುವ ಈ ಮರ ಹತ್ತಿರದಿಂದ ನನಗೆ ಅಶ್ಟೇನು ಸುಂದರವಾಗಿ ಕಾಣಲಿಲ್ಲ. ಕಳೆದ 400 ವರ‍್ಶಗಳಿಂದ ಒಂದೇ ಜಾಗದಲ್ಲಿ ನಿಂತು ನಿಂತು ಬೇಜಾರಾಗಿ ಈಗ ಸುಮ್ಮನೆ ಮಲಗುವ ಪ್ರಯತ್ನ ಮಾಡುತ್ತಿದೆಯೆನೋ ಅನ್ನಿಸುತ್ತದೆ. ಹಾಗೆ ಸರಿಯಾದ ನಿರ‍್ವಹಣೆ ಇಲ್ಲದೆ ದಿನೇ ದಿನೇ ಸೊರಗುತ್ತಿದೆ. ಒಂದು ಕಡೆ ಬೀದಿ ನಾಯಿಗಳೆಲ್ಲಾ ಅಲ್ಲೆ ತುಂಬಿಕೊಂಡು, ಹೋಗಿ ಬರರುವವರಿಗೆಲ್ಲಾ ತೊಂದರೆ ಕೊಡುತ್ತಿದ್ದರೆ ಮತ್ತೊಂದೆಡೆ ವಿಪರೀತ ಕೋತಿಗಳ ಕಾಟ. ಒಟ್ಟಿನಲ್ಲಿ ಸೈಕ್ಲಿಂಗ್ ಹೋಗುವವರಿಗೆ ತಲುಪುವ ಸ್ತಳಕ್ಕಿಂತ ತಾವು ಹೋಗುವ ದಾರಿಯೇ ಅತಿ ಮುಕ್ಯವಾಗಿರುವುದರಿಂದ ಸ್ತಳಗಳ ಬಗ್ಗೆ ಅತಿಯಾಗಿ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿರುವುದಿಲ್ಲ.

ಹೊಟ್ಟೆ ಚುರ್ ಎಂದಾಗ ತಟ್ಟೆ ಇಡ್ಲಿ ನೆನಪು!

img_20160515_075214921

ಹೊಟ್ಟೆಗೆ ಏನು ತಿನ್ನದೆ ಸೈಕ್ಲಿಂಗ್ ಮಾಡುವುದು ತುಂಬಾ ಕಶ್ಟ ಹೀಗಾಗಿ ಸರಿಯಾದ ಸಮಯಕ್ಕೆ ಕಾಪಿ, ಟೀ, ತಿಂಡಿ, ಊಟ ಆಗುತ್ತಿರಬೇಕು ಇಲ್ಲದಿದ್ದರೆ ಕೈ ಕಾಲು ನಡುಕ ಶುರುವಾಗಿ ತಲೆ ತಿರುಗಿದರೂ ಆಶ್ಚರ‍್ಯವಿಲ್ಲ. ಬೆಂಗಳೂರು ಮತ್ತು ನಗರದ ಸುತ್ತಮುತ್ತ ಸಿಗುವ ಸಾಮಾನ್ಯ ತಿಂಡಿಯೆಂದರೆ ‘ತಟ್ಟೆ ಇಡ್ಲಿ’. ದೊಡ್ಡ ಆಲದ ಮರದ ರಸ್ತೆಯಲ್ಲಿ ಕೂಡ ತಟ್ಟೆ ಇಡ್ಲಿ ಮತ್ತು ರೈಸ್ ಬಾತ್ ತುಂಬಾ ಪೇಮಸ್. ಇಲ್ಲಿ ಯಾವುದೇ ಸಣ್ಣ ಹೋಟೆಲಿಗೆ ಹೋದರು ಬಿಸಿ ಬಿಸಿ ತಟ್ಟೆ ಇಡ್ಲಿ ಸಿಗುತ್ತದೆ. ನಾನು ಮತ್ತು ನನ್ನ
ಗೆಳೆಯರು ಸೈಕ್ಲಿಂಗ್ ಹೋದಾಗಲೆಲ್ಲಾ ಹುಡುಕಿಕೊಂಡು ಹೋಗಿ ತಟ್ಟೆ ಇಡ್ಲಿ ತಿನ್ನತ್ತೇವೆ.

ಹೂವಿನಂತಿರುವ ಎರಡು ಇಡ್ಲಿ, ಬೊಂಡ ಮತ್ತು ಒಂದಿಶ್ಟು ರೈಸ್ ಬಾತ್ ಗುಳುಮ್ ಮಾಡಿದರೆ ಸಾಕು ಮುಂದಿನ ಸೈಕ್ಲಿಂಗ್ ಸರಾಗ ಅಂತಾನೇ ಅರ‍್ತ. ಹೊಟ್ಟೆ ಬಿರಿಯ ತಿಂದರಂತೂ ಕತೆ ಮುಗಿಯಿತು, ಸೈಕ್ಲಿಂಗ್ ಮರೆತು ಅಲ್ಲೇ ಚಾಪೆ ದಿಂಬು ಹುಡುಕಬೇಕಾಗುತ್ತದೆ. ಹೀಗೆ ಒಮ್ಮೆ ಗೆಳೆಯರೊಡನೆ ಬನ್ನೇರುಗಟ್ಟದ ಸಮೀಪ ರಾಗಿಹಳ್ಳಿ ಕಡೆಗೆ ಸೈಕ್ಲಿಂಗ್ ಹೋಗಿದ್ದಾಗ ಮದ್ಯಾಹ್ನದ ಊಟಕ್ಕೆ ಎರಡೆರಡು ರಾಗಿ ಮುದ್ದೆ ಮತ್ತು ಅನ್ನ ತಿಂದು ಸೈಕಲ್ ತುಳಿಯಲಾರದೆ ಯಾವುದೋ ಹೊಲದಲ್ಲಿ
ಗಂಟೆಗಟ್ಟಲೆ ಮಲಗಿ ಸುದಾರಿಸಿಕೊಂಡಿದ್ದೆವು. ಹಾಗಾಗಿ ಊಟ ತಿಂಡಿಯಲ್ಲಿ ಸ್ಪಲ್ಪ ಹಿಡಿತ ಇಟ್ಟುಕೊಳ್ಳುವುದು ಮುಕ್ಯ.

ಹಾಗಾದರೆ ರೋಸ್ ಆಪಲ್ ಮೇಯುತ್ತಾ ದೊಡ್ಡ ಆಲದ ಮರದ ಕಡೆಗೆ ಹೋಗಿ ಬಿಸಿ ಬಿಸಿ ತಟ್ಟೆ ಇಡ್ಲಿ ತಿಂದು ಬರಲು ತಯಾರಿದ್ದೀರ? ಮತ್ತೇಕೆ ತಡ?

“ಎತ್ಕೊಳ್ಳಿ ನಿಮ್ಮ ಸೈಕಲ್ಲು, ಬಿಡ್ರಿ ಗಾಡಿನ ದೊಡ್ಡಾಲದ ಮರದ ಕಡಿಕೆ”…

(ಚಿತ್ರಸೆಲೆ: ಗಿರೀಶ್ ಬಿ. ಕುಮಾರ್)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: