ಜೀವನದ ಸಂತೆಯಲಿ…

– ಸಿಂದು ಬಾರ‍್ಗವ್.

 

ಜೀವನದ ಸಂತೆಯಲಿ ತಿರುಗ ಹೊರಟಿರುವೆ
ನಿನ್ನೆ ಅಲ್ಲಿ ಇಂದು ಇಲ್ಲಿ ನಿಂತಿರುವೆ

ಕನಸುಗಳನ್ನೆಲ್ಲ ಹರಡಿ ಕುಳಿತಿರುವೆ
ಕೇಳಿದವರಿಗೆಲ್ಲ ಕತೆಯ ಹೇಳುತಿರುವೆ

ಕೊಳ್ಳುವರೋ ಮಾನ ಹರಾಜು ಹಾಕುವರೋ
ಅವರನೇ ನಂಬಿರುವೆ

ಮೋಸ ಮಾಡುವರೋ ಪ್ರೀತಿ ನೀಡುವರೋ
ಒಂದೂ ಅರಿಯದಾದೆ

ಮುಗ್ದೆ ನಾನು, ಮನಸ್ಸು ಮುದ್ದೆಯಂತೆ
ಕಣ್ಣೀರಿನಲ್ಲಿ ಅದ್ದಿ ತೆಗೆದ ಸ್ಪಾಂಜಿನಂತೆ

ಮೆದು ಮಣ್ಣಿಗೆ ಅಂಟಿಕೊಳ್ಳುವ ಬಾವನೆಗಳು
ಹಳಸದು ಹಳತಾದರೂ ಪಾಚಿಯಂತೆ

ಮಳೆಗಾಲಕೆ ನಳನಳಿಸುವ ಲಿಲ್ಲಿಹೂವು
ಬೇಸಿಗೆಗೆ ಬತ್ತಿ ಹೋಗುವ ಕೆರೆಯಂತೆ

ಸಾಗುತಿದೆ ಬಾಳು ನದಿಯಂತೆ ಉದ್ದವಾಗಿ
ಹರಡಿದೆ ಕನಸು ಬಾನಿನಂತೆ ವಿಶಾಲವಾಗಿ

ನಗುವು ಅಳುವು ಎಲ್ಲವೂ ಮಾಮೂಲಿ
ನೆನಪುಗಳ ಮಳಿಗೆಯೊಂದಿದೆ ಜೀವನದ ಸಂತೆಯಲಿ

( ಚಿತ್ರ ಸೆಲೆ: imageshunt.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: