ದೋಸೆ ಹಿಂದೆಯೂ ಇದೆ ಒಂದು ಪುರಾಣ!

 ಕೆ.ವಿ.ಶಶಿದರ.

maxresdefault-3
ಅಹಾ… ದೋಸೆ, ಮಸಾಲೆ ದೋಸೆ. ಬಾಯಿ ಚಪ್ಪರಿಸುವಂತೆ, ಬಾಯಲ್ಲಿ ನೀರೂರುವಂತೆ ಮಾಡುವ ದೋಸೆಯ ಹೆಸರೇ ಅಪ್ಯಾಯಮಾನ. ದಕ್ಶಿಣ ಬಾರತದ ಮನೆ ಮನೆಗಳಲ್ಲಿ ನಿತ್ಯ ರಾರಾಜಿಸುವ ಮಹತ್ತರ ತಿಂಡಿ ದೋಸೆ. ಮಕ್ಕಳಾದಿಯಾಗಿ ವಯಸ್ಸಾದವರಿಗೂ ಎಲ್ಲಾ ವಯೋಮಾನದವರ, ಬಿಕ್ಶುಕರಿಂದ ಹಿಡಿದು ಮಿಲಿಯನಿಯರ್‍ವರೆಗೂ ಎಲ್ಲರಿಗೂ ಸಲ್ಲುವ, ಎಲ್ಲರೂ ಇಶ್ಟಪಡುವ ತಿಂಡಿ ದೋಸೆ, ಮಸಾಲೆ ದೋಸೆ. ರುಚಿಯಲ್ಲಿ ಆಹ್ಲಾದಕರ, ಹಾಗೂ ಉತ್ಕ್ರುಶ್ಟ, ಜೀರ‍್ಣಿಸಿಕೊಳ್ಳಲು ಅತಿ ಸುಲಬ. ದೋಸೆ ತಿಂದ ನಂತರದ ಅನುಬವ ಅನನ್ಯ. ಸಿಂಪಲ್ಲಾಗಿ ಹೇಳಬೇಕೆಂದರೆ ದೋಸೆ ಎಲ್ಲರ ಅಚ್ಚುಮೆಚ್ಚಿನ ತಿಂಡಿ.

ಮನೆಗಳಲ್ಲಿ, ದರ‍್ಶನಿಗಳಲ್ಲಿ, ಹೋಟೆಲ್‍ಗಳಲ್ಲಿ, ರೆಸ್ಟಾರೆಂಟ್‍ಗಳಲ್ಲಿ, ಆಟೋಗಳಲ್ಲಿ, ತಳ್ಳು ಗಾಡಿಗಳಲ್ಲಿ, ರಸ್ತೆ ಬದಿಯ ಗೂಡಂಗಡಿಯಿಂದ ಹಿಡಿದು ಪಂಚತಾರಾ ಹೋಟೆಲ್‍ಗಳವರೆಗೂ ಹಬ್ಬಿರುವ ಈ ತಿನಿಸಿಗೆ ಸಾಟಿ ಯಾವುದು? ಕೋಟ್ಯಾಂತರ ಜನರ ನಿತ್ಯ ಕಾಯಕವಾದ ದೋಸೆ ತಯಾರಿಕೆಯನ್ನು ಗಮನಿಸಿದಲ್ಲಿ, ಬ್ರುಹತ್ ಗ್ರುಹ ಕೈಗಾರಿಕೆಯ ಚಿತ್ರಣ ಕಣ್ಣೆದುರು ನಿಲ್ಲುತ್ತದೆ. ಬೆಳ್ಳಂಬೆಳಗ್ಗೆ ಆರು ಗಂಟೆಗೆ ಕಾವಲಿ ಬಿಸಿಯಾದ ಸಮಯದಿಂದ, ಸರಿ ರಾತ್ರಿ ಎರಡು ಮೂರು ಗಂಟೆಯ ನಂತರ ಕಾವಲಿ ತಣ್ಣಗಾಗುವವರೆಗೂ ಹಸಿದವರ ಹೊಟ್ಟೆಯನ್ನು ತುಂಬಿಸುವ, ತಣಿಸುವ ಏಕೈಕ ತಿನಿಸು, ದೋಸೆ.

ಬಿಸಿಬಿಸಿ ಚಿನ್ನದ ಬಣ್ಣಕ್ಕೆ ರೋಸ್ಟ್ ಆದ ದೋಸೆ, ಜೊತೆಗೆ ಉಂಡೆ ಬೆಣ್ಣೆ, ಕೊಬ್ಬರಿ ಚಟ್ನಿ, ಅಲೂಗಡ್ಡೆ ಈರುಳ್ಳಿ ಪಲ್ಯ, ಇದ್ದರೆ ಅದನ್ನು ಸವಿಯುವ ಮಜವೇ ಬೇರೆ. ನಂತರ ಹೊಗೆಯಾಡುವ ಬಿಸಿಬಿಸಿ ಸ್ಟ್ರಾಂಗ್ ಕಾಪಿಯಿದ್ದರಂತೂ ಸ್ವರ‍್ಗಕ್ಕೆ ಮೂರೇ ಗೇಣು. ಇಂತಹ ದೋಸೆ ತಿನ್ನಲು ಎಶ್ಟು ದೂರ ಬೇಕಾದರೂ ಹೋಗಲು ಇಚ್ಚಿಸುವ ಜನ ಸಾಕಶ್ಟು ಇದ್ದಾರೆ. ತೊಂಬತ್ತರ ದಶಕಕ್ಕೂ ಮುನ್ನ ದಕ್ಶಿಣ ಬಾರತದಲ್ಲಿ ದೋಸೆಯದೇ ಕಾರುಬಾರು. ಬಿಸಿಬಿಸಿ ಮಸಾಲೆ ದೋಸೆಯ ಜೊತೆಗೆ ಬಿಸಿಬಿಸಿ ಜಾಮೂನ್ ಇದ್ದರಂತೂ ಅದೇ ಸ್ವರ‍್ಗ.

ಉತ್ತರ ಬಾರತದ ತಿನಿಸುಗಳು ದಕ್ಶಿಣ ಬಾರತಕ್ಕೆ ಲಗ್ಗೆ ಹಾಕಿದ್ದು ತೊಂಬತ್ತರ ದಶಕದ ನಂತರ. ಐಟಿ ಬಿಟಿಗೆ ಉತ್ತರ ಬಾರತದಿಂದ ವಲಸೆ ಬಂದವರು ತಮ್ಮ ತನವನ್ನು ಉಳಿಸಿಕೊಳ್ಳುವ ಹುನ್ನಾರದಲ್ಲಿ ಅಲ್ಲಿನ ತಿಂಡಿಗಳನ್ನು ಇಲ್ಲಿ ಪರಿಚಯಿಸಿದರು. ಆ ತಿಂಡಿಗಳ ರುಚಿ ಬಿನ್ನವಾದ ಕಾರಣ ನಮ್ಮ ಯುವ ಜನತೆ ಹೊಸ ರುಚಿಗೆ ಮಾರುಹೋಗಿದ್ದು ಸಹಜ. ಬದಲಾವಣೆ ಬಯಸುವ ಯುವ ಪೀಳಿಗೆಗೆ ಉತ್ತರ ಬಾರತದ ತಿನಿಸುಗಳು ಅಪ್ಯಾಯವೆನಿಸಿದ್ದು ಒಂದೆಡೆಯಾದರೆ, ಅದನ್ನು ಎಲ್ಲರೆದುರು ಸವಿದಲ್ಲಿ ತಮ್ಮ ಅಂತಸ್ತು ಹೆಚ್ಚುತ್ತದೆಂಬ ಹುಚ್ಚು ಕಲ್ಪನೆ ಮತ್ತೊಂದೆಡೆ. ಉತ್ತರ ಬಾರತದ ಹೊಸ ರುಚಿಯ ತಿಂಡಿಗಳ ಹೊಡೆತವನ್ನು ಮೆಟ್ಟಿ ನಿಂತು ತನ್ನ ತನವನ್ನು, ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದು ದಕ್ಶಿಣ ಬಾರತದ ತಿಂಡಿಗಳಲ್ಲಿ ಮಂಚೂಣಿಯಲ್ಲಿದ್ದ ದೋಸೆ ಮತ್ತು ಇಡ್ಲಿ. ತನ್ನ ತನವನ್ನು ಉಳಿಸಿಕೊಳ್ಳುವುದರ ಜೊತೆಗೆ ವಲಸಿಗರಿಗೂ ಅಪ್ಯಾಯವಾಗಿದ್ದಲ್ಲದೆ ದೋಸೆ ತನ್ನ ಪರಿದಿಯನ್ನು ಉತ್ತರ ಬಾರತಕ್ಕೂ ವಿಸ್ತರಿಸಿದ್ದು ಆವಾಗಲೇ.

99-6

ದೋಸೆಯ ಪುರಾಣಕ್ಕೆ ಕೈ ಹಚ್ಚುವ ಮುನ್ನ ಇದರ ಇಂದಿನ ಮಹತ್ವವನ್ನು ಕೊಂಚ ನೋಡೋಣ. ಇಡೀ ವಿಶ್ವದಲ್ಲೇ ಅತಿ ಹೆಚ್ಚು ಉತ್ಪಾದನೆಯಾಗುವ ತಿನಿಸಿನಲ್ಲಿ ದೋಸೆಗೆ ನಾಲ್ಕನೇ ಸ್ತಾನ. ಪಿಡ್ಜಾ, ಬ್ರೆಡ್, ಮುಂತಾದವುಗಳ ಸರಿ ಸಮನಾಗಿರುವುದು ನಿಜಕ್ಕೂ ಶ್ಲಾಗನೀಯ. ಇದರಿಂದ ವಿಶ್ವದಲ್ಲಿ ದಿನವೊಂದಕ್ಕೆ ಎಶ್ಟು ಪ್ರಮಾಣ ಉತ್ಪಾದನೆಯಾಗುತ್ತದೆಂದು ಅಂದಾಜಿಸಬಹುದು. ಬೆಂಗಳೂರು ಒಂದರಲ್ಲೇ ದಿನವೊಂದಕ್ಕೆ ಕನಿಶ್ಟ ಐದಾರು ಲಕ್ಶ ದೋಸೆ ತಯಾರಾಗುತ್ತದೆ ಎಂದರೆ ಇದನ್ನು ಬಯಸುವ ಮಂದಿ ಎಶ್ಟಿರಬಹುದು? ಇದರ ರುಚಿಗೆ ಮಾರುಹೋದವರು ಎಶ್ಟಿರಬಹುದು? ಇದರ ಅಡಿಯಲ್ಲಿ ಜೀವನ ಕಂಡುಕೊಂಡ ಮಂದಿ ಎಶ್ಟಿರಬಹುದು? ಇಶ್ಟೆಲ್ಲಾ ಆಕರ‍್ಶಣೆಯಿರುವ ದೋಸೆಯ ಗುಣಾವಶೇಶಗಳು ಏನು?

ಲಕ್ಶಾಂತರ ಜನರ ಹೊಟ್ಟೆಗೆ ಪ್ರಮುಕ ಆಸರೆಯಾದ, ನೂರಾರು ವರ‍್ಶಗಳಾದರೂ ತನ್ನ ಇರುವನ್ನು ಉಳಿಸಿಕೊಂಡ ಏಕೈಕ ತಿಂಡಿ ದೋಸೆ. ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಲಾದ ಹಿಟ್ಟಿನಿಂದ ಇಂತಹ ಉತ್ಕ್ರುಶ್ಟವಾದ ತಿನಿಸನ್ನು ತಯಾರಿಸಬಹುದೆಂದು ವಿಶ್ವಕ್ಕೆ ತೋರಿಸಿಕೊಟ್ಟ ದೋಸೆಯ ಜನಕ ಯಾರೇ ಆಗಿರಲಿ, ಪ್ರಪಂಚದ ಎಲ್ಲಾ ಸ್ತರದ ಜನರ ಮನಸೊರೆಗೊಂಡ ತಿಂಡಿಯ ಕರ‍್ತ್ರುವಿಗೆ ಮಹಾಶಯನಿಗೆ ಒಂದು ದೊಡ್ಡ ಸಲಾಮ್.

ದೋಸೆ ಪುರಾಣ

”ಎಲ್ಲಾರ ಮನೆ ದೋಸೆನೂ ತೂತೆ” ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿರುವ ಗಾದೆ. ದೋಸೆಯು ಶತಮಾನಗಳ ಕಾಲದಿಂದ ಅಸ್ತಿತ್ವದಲ್ಲಿರುವುದರಿಂದ ಹುಟ್ಟಿದ ಗಾದೆ ಇದು. ಅಶ್ಟು ಪುರಾತನ ಇತಿಹಾಸ ದೋಸೆಗಿದೆ. ಶ್ರೇಶ್ಟ ಆಹಾರ ತಜ್ನ ಮತ್ತು ಆಹಾರ ಇತಿಹಾಸಕಾರ, “ದಿ ಸ್ಟೋರಿ ಆಪ್ ಅವರ್ ಪುಡ್” ಪುಸ್ತಕದ ಕರ‍್ತ್ರು ಕೆ.ಟಿ.ಆಚಾರ‍್ಯರವರು ಮೊದಲನೆಯ ಶತಮಾನದಲ್ಲೇ ದೋಸೆಯ ಅಸ್ತಿತ್ವ ಇತ್ತು. ತಮಿಳು ಸಂಗಮ್ ಸಾಹಿತ್ಯ ಸಂಪತ್ತಿನಲ್ಲಿ ಆರನೇ ಶತಮಾನದಲ್ಲೇ ದೋಸೆ ಇದ್ದ ಬಗ್ಗೆ ಉಲ್ಲೇಕಗಳಿವೆ, ದೋಸೆಯ ಜೊತೆಗೆ ‘ಅಪ್ಪಮ್’ ‘ಇಡಿಯಪ್ಪಮ್’ ‘ಅಡೈ’ ಇವುಗಳೂ ಸಹ ಅಂದಿನ ಕಾಲದವರಿಗೆ ಪರಿಚಯವಿತ್ತು ಎಂದು ತಮ್ಮ ಪುಸ್ತಕದಲ್ಲಿ ದಾಕಲಿಸಿರುತ್ತಾರೆ. 1054ರಲ್ಲಿ ಪಶ್ಚಿಮ ಚಾಲುಕ್ಯ ರಾಜ ಮೂರನೇ ಸೋಮೆಶ್ವರರ ಕಾಲದಲ್ಲೂ ದೋಸೆಯ ಉಲ್ಲೇಕಗಳಿರುವ ದಾಕಲೆಗಳು ಸಹ ಸಿಕ್ಕಿವೆ.

ಆಂಗ್ಲ ಲೇಕಕ ಪ್ಯಾಟ್ ಚಾಪ್ಮನ್ ಮತ್ತು ಲೀಸಾ ರೇನರ್ ಹಾಗೂ ಬಾರತದ ಲೇಕಕ ತಂಗಪ್ಪನ್ ನಾಯರ್ ಅವರುಗಳು ತಮ್ಮ ಲೇಕನಗಳಲ್ಲಿ ದೋಸೆಯ ಮೂಲ ಕರ‍್ನಾಟಕದ ಅಂದಿನ ದಕ್ಶಿಣ ಕನ್ನಡದ ಉಡುಪಿ ಎಂದು ದಾಕಲಿಸಿರುತ್ತಾರೆ. (ಉಡುಪಿ ಈಗ ಜಿಲ್ಲೆ) ಯಾವುದು ಸರಿ, ಯಾವುದು ತಪ್ಪು ಎಂದು ವಿಶ್ಲೇಶಿಸುವುದಕ್ಕಿಂತ, ದೋಸೆಗೆ ಎಲ್ಲಾ ರೀತಿಯ ಕ್ರೆಡಿಟ್ ನೀಡುವುದು ಸೂಕ್ತ.

(ಬರಹದ ಮುಂದಿನ ಕಂತು ನಾಳೆ ಮೂಡಿಬರುವುದು.)

(ಚಿತ್ರ ಸೆಲೆ: youtube.com, economydecoded.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 02/10/2016

    […] ಬರಹದಲ್ಲಿ ದೋಸೆಯ ಪುರಾಣವನ್ನು ಓದಿದ್ದೆವು. ಈ ಬರಹದಲ್ಲಿ ದೋಸೆಯ […]

ಅನಿಸಿಕೆ ಬರೆಯಿರಿ: