ಕೈಜನ್ : ಸೋಂಬೇರಿತನಕ್ಕೆ ಜಪಾನೀ ಮದ್ದು

– ವಿಜಯಮಹಾಂತೇಶ ಮುಜಗೊಂಡ.

kaizen

ನಾವೆಲ್ಲ ಪ್ರತೀ ಸಲ ಹುಟ್ಟುಹಬ್ಬದಂದೋ ಅತವಾ ಹೊಸ ವರುಶದ ದಿನದಂದೋ ಹಳೆಯ ಚಟಕ್ಕೆ ಕೊನೆ ಹಾಡಿ  ಹೊಸದೊಂದು ಅಬ್ಯಾಸ ರೂಡಿಮಾಡಿಕೊಳ್ಳಬೇಕೆಂದು ಅಂದುಕೊಳ್ಳುತ್ತೇವೆ. ಹೊಸ ಅಬ್ಯಾಸ ಯಾವುದೇ ಆಗಿರಬಹುದು ಹೊತ್ತಗೆ ಓದುವುದು, ಬರೆಯುವುದು, ತಾಲೀಮು ಮಾಡುವುದು, ಹೊಸತನ್ನೇನಾದರೂ ಕಲಿಯುವುದು ಹೀಗೆ. ಆದರೆ ಕೆಲವೇ ದಿನಗಳ ಬಳಿಕ ಅದನ್ನು ಮುಂದುವರೆಸಲು ಆಗದೇ ಯೋಚನೆಯನ್ನು ಬಿಟ್ಟುಬಿಡುತ್ತೇವೆ. ಯಾವುದೇ ಹೊಸ ಅಬ್ಯಾಸ ಆದರೂ ಅದನ್ನು ರೂಡಿಯಾಗಿಸಿಕೊಳ್ಳಲು ತುಂಬಾ ಕಶ್ಟ ಎನಿಸುತ್ತದೆ. ಮೊದಲು ಮಾಡಿದ ಕೆಲವೇ ದಿನಗಳಲ್ಲಿ ಯಾವುದೋ ಒಂದು ನೆಪವೊಡ್ಡಿ ಅಲ್ಲಿಗೇ ನಿಲ್ಲಿಸಿ ಬಿಡುತ್ತೇವೆ. ಹೊಸ ಅಬ್ಯಾಸ ಶುರುಮಾಡಿದ ಒಂದೆರೆಡು ದಿನ ತೊಡಗಿಸಿಕೊಂಡ ಬಳಿಕ ನಾಳೆ ಮಾಡಿದರಾಯಿತು, ನಾಡಿದ್ದು ಮಾಡಿದರಾಯಿತು ಎನ್ನುತ್ತಾ ಮುಂದಿನ ವಾರ, ತಿಂಗಳುಗಳಿಗೆ ಹೋಗಿ ಅದು ಅಲ್ಲಿಗೇ ಕೊನೆಯಾಗುತ್ತದೆ.

ಯಾವುದೇ ಹೊಸ ಅಬ್ಯಾಸವನ್ನು ರೂಡಿಸಿಕೊಳ್ಳುವುದು ಏಕೆ ಕಶ್ಟ?

ಮೊದಲಿಗೆ ಎಶ್ಟೇ ಹುರುಪಿನಿಂದ ಶುರುಮಾಡಿದರೂ ಹೊಸದೊಂದು ಅಬ್ಯಾಸವನ್ನು ಮೈಗೂಡಿಸಿ ಮುಂದುವರೆಸಿಕೊಂಡು ಹೋಗುವುದು ಅಶ್ಟು ಸುಲಬವಲ್ಲ. ಕೆಲಸದಲ್ಲಿ ತೊಡಗಿಸಿಕೊಂಡ ಮೊದಲನೇ ದಿನವೇ ಸಿಕ್ಕಾಪಟ್ಟೆ ಸಾದಿಸಿದೆವು ಅನಿಸಿಬಿಡುತ್ತದೆ. ಮೊದಲ ದಿನ ಮೂಡಿದ ಸಮಾದಾನದಿಂದ ಆ ಕೆಲಸವನ್ನು ದಿನವೂ ತಪ್ಪದೇ ಮಾಡಬೇಕು, ವರುಶ ವರುಶ ಕಳೆದರೂ ಮುಂದುವರೆಸಬೇಕು ಹೀಗೆ ಹತ್ತು ಹಲವು ಎಣಿಕೆಗಳ ಸರಣಿ ಅದಕ್ಕೆ ಅಂಟಿಕೊಳ್ಳುತ್ತದೆ. ಆದರೆ ಕೆಲವೇ ದಿನಗಳ ಬಳಿಕ ಸೋಂಬೇರಿತನ ಅದನ್ನು ಕೊಂದುಹಾಕಿಬಿಡುತ್ತದೆ.

ಹೊಸ ಅಬ್ಯಾಸವನ್ನು ಸುಳುವಾಗಿ ಮೈಗೂಡಿಸಿಕೊಳ್ಳದೇ ಇರಲು ಕಾರಣ ತುಂಬಾ ಸಹಜವಾದುದು. ಯಾವುದೇ ಕೆಲಸ ಶುರುಮಾಡಿದ ಬಳಿಕ ನಾವು ಅದರಲ್ಲಿ ಸಾದಿಸಬೇಕಾದ ಹಲವು ವಿಶಯಗಳ ಬಗ್ಗೆ ತಲೆಕೆಡಿಸಿಕೊಂಡಿರುತ್ತೇವೆ. ಅಲ್ಲಿ ಮಾಡಬೇಕಿರುವ ಸಾದನೆಗಳನ್ನು ಬೆನ್ನಟ್ಟುವ  ನಾವು, ಅದರಲ್ಲಿ ಅತಿ ಬೇಗ ಮತ್ತು ಹೆಚ್ಚಿನ ಸಾದನೆಗಳನ್ನು ಮಾಡಬೇಕು ಎನ್ನುವ ಬರಾಟೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತೇವೆ. ಮೊದಲೆಂದೂ ತೊಡಗಿಸಿಕೊಂಡಿರದ ಕೆಲಸದಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವುದರಿಂದ ಕುತೂಹಲ ಒಂದೆರಡು ದಿನಗಳಿಗಶ್ಟೇ ಸೀಮಿತವಾಗಿ ಬೇಸರ ಹುಟ್ಟುತ್ತದೆ. ಮನುಶ್ಯನಿಗೆ ಹೊಸ ಅಬ್ಯಾಸಗಳನ್ನು ರೂಡಿಸಿಕೊಳ್ಳುವಶ್ಟೇ ಅತವಾ ಅದಕ್ಕಿಂತ ಕಶ್ಟದ ಕೆಲಸ ಎಂದರೆ ಹಳೆಯ ಅಬ್ಯಾಸಗಳನ್ನು ಬಿಟ್ಟುಕೊಡುವುದು. ಹೀಗಾಗಿ ಹೊಸ ಅಬ್ಯಾಸಕ್ಕೆ ಹೊಂದಿಕೊಳ್ಳಲಾಗದೇ ಮತ್ತೆ ಹಳೆಯ ಕೆಲಸಗಳ ಮೊರೆ ಹೋಗುತ್ತೇವೆ.

ಸೋಂಬೇರಿತನಕ್ಕಿದೆ ಮದ್ದು – ‘ಕೈಜನ್’

ಜಪಾನೀ ಸಂಸ್ಕ್ರುತಿಯಲ್ಲಿ ‘ಕೈಜನ್’(kaizen) ಎನ್ನುವ ಒಂದು ಪದ್ದತಿ ಇದೆ. ಕೈಜನ್ ಪದ್ದತಿಯನ್ನು ‘ಒಂದು ನಿಮಿಶದ ಸೂತ್ರ’ ಎಂದೂ ಕರೆಯುತ್ತಾರೆ. ತನ್ನೇಳಿಗೆಯಲ್ಲಿ ಬಳಸಲಾಗುವ ಈ ಸೂತ್ರ ಹೇಳುವುದೇನೆಂದರೆ ‘ಗೊತ್ತುಮಾಡಿದ ಹೊತ್ತಿನಲ್ಲಿ ಒಂದು ನಿಮಿಶದಶ್ಟೇ ಹೊತ್ತು ಹೊಸ ಅಬ್ಯಾಸದಲ್ಲಿ ಪ್ರತಿದಿನ ತಪ್ಪದೇ ತೊಡಗಿಸಿಕೊಳ್ಳುವುದು’. ಹೊಸದೊಂದು ಕೆಲಸದಲ್ಲಿ ಪ್ರತಿದಿನ ಬರೀ ಒಂದು ನಿಮಿಶದಶ್ಟು ಹೊತ್ತನ್ನು ಕಳೆಯುವುದು ಎಂತಹ ಸೋಂಬೇರಿಗಳಿಗೂ ದೊಡ್ಡದೆನಿಸುವುದಿಲ್ಲ.  ಅಲ್ಲದೇ ಒಂದು ನಿಮಿಶದ ಕೆಲಸ ಬೇಗನೇ ಮುಗಿದು ಬೇಸರ ತರಿಸುವುದಿಲ್ಲ. ಬದಲಾಗಿ ದಿನ ದಿನವೂ ತೊಡಗಿಕೊಳ್ಳುವುದರಿಂದ ನೆಮ್ಮದಿ ಮತ್ತು ಮನಸ್ಸಿಗೆ ತಣಿವನ್ನು ಉಂಟು ಮಾಡುತ್ತದೆ. ಇಲ್ಲಿ ಗಮನಿಸಬೇಕಾದ ವಿಶಯ ಎಂದರೆ ನೀವು ಪ್ರತಿ ದಿನ ಬರೀ ಒಂದು ನಿಮಿಶದಶ್ಟೇ ಹೊತ್ತು ತೊಡಗಿಸಿಕೊಳ್ಳಬೇಕಾದ ಕೆಲಸದಿಂದ ತಪ್ಪಿಸಿಕೊಳ್ಳಲು ಯಾವುದೇ ತರದ ನೆಪ ಅಡ್ಡಿಯಾಗುವುದಿಲ್ಲ. ಒಂದು ನಿಮಿಶದ ಹೊಸ ಅಬ್ಯಾಸವನ್ನು  ದಿನೇ ದಿನೇ ಮಾಡುತ್ತಿದ್ದರೆ ಅದು ಹೆಚ್ಚಿನ ಹೊರೆಯಾಗಿಯೂ ಕಾಣುವುದಿಲ್ಲ. ಇದರೊಂದಿಗೆ ನಿಮ್ಮ ಮೇಲಿರುವ ನಂಬಿಕೆ ಹೆಚ್ಚಿ ನಿಮ್ಮನ್ನು ಸಾದನೆಯ ದಿಕ್ಕಿನೆಡೆಗೆ ಕೊಂಡೊಯ್ಯುತ್ತದೆ.

ನೀವು ಬಿಡಬೇಕೆಂದಿರುವ ಹಳೆಯ ಚಟದ ಬಗ್ಗೆ, ನೀವು ಹೊಂದಿರುವ ತಪ್ಪಿತಸ್ತ ಮನೋಬಾವವನ್ನು ತೊಡೆದು ಹೊರಬಂದರೆ ನಿಮ್ಮ ಮೇಲಿರುವ ನಂಬಿಕೆಯು ಹೆಚ್ಚುತ್ತದೆ. ಇದರಿಂದ ಹೊಸ ಅಬ್ಯಾಸವನ್ನು ದಿನೇ ದಿನೇ ತಪ್ಪದೇ ಮಾಡಬಲ್ಲಿರಿ ಅಲ್ಲದೇ ಮನಸ್ಸಿಗೆ ಸಮಾದಾನವೂ ಸಿಗುತ್ತದೆ. ಹೊಸ ಅಬ್ಯಾಸದಲ್ಲಿ ತೊಡಗಿಸಿಕೊಂಡಾಗ ನಿಮಗೆ ಸಿಗುವ ನೆಮ್ಮದಿ ಹೆಚ್ಚು ಹೊತ್ತು  ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಹೀಗೆ ಹಲವು ದಿನಗಳ ಬಳಿಕ ನಿಮಗೆ ಗೊತ್ತಿಲ್ಲದಂತೆಯೇ ಹೆಚ್ಚು ಹೆಚ್ಚು ಹೊತ್ತನ್ನು ನೀವು ಹೊಸ ಅಬ್ಯಾಸದ ಸುತ್ತ ಕಳೆಯುತ್ತೀರಿ. ಇದೀಗ ಹೊಸದೊಂದು ಅಬ್ಯಾಸಕ್ಕೆ ನಿಮಗೆ ಗೊತ್ತಿಲ್ಲದೆಯೇ ಅಂಟಿಕೊಂಡಿರುತ್ತೀರಿ. ಒಂದು ನಿಮಿಶದಿಂದ ಮೊದಲುಗೊಂಡ ಅಬ್ಯಾಸಕ್ಕೆ ಒಂದೆರಡು ತಿಂಗಳುಗಳಲ್ಲಿಯೇ ಐದು ನಿಮಿಶ ಹಾಗೆಯೇ ಅರ್‍ದ ಗಂಟೆಯಶ್ಟು ಹೊತ್ತು ಕಶ್ಟ ಎನಿಸುವುದಿಲ್ಲ.

‘ಕೈಜನ್’ ಹಾಗೆಂದರೇನು? ಬಳಕೆ ಎಲ್ಲೆಲ್ಲಿ?

ಕೈಜನ್ ಎನ್ನುವುದು ಜಪಾನಿ ಬಾಶೆಯ ಪದಗೊಂಚಲು. ಇಲ್ಲಿ ಕೈ(‘kai’) ಎಂದರೆ ಬದಲಾಯಿಸು ಮತ್ತು ಜನ್(‘zen’) ಎಂದರೆ ಒಳಿತು  ಎಂದು ಅರ‍್ತ ಕೊಡುತ್ತವೆ. ಜಪಾನಿ ಬಾಶೆಯಲ್ಲಿ ಕೈಜನ್ ಎಂದರೆ ‘ಒಳಿತಿಗಾಗಿ ಬದಲಾವಣೆ’ ಎನ್ನುವ ಅರ‍್ತವಿದೆ. “ಕೈಜನ್ ಸೂತ್ರವನ್ನು ವೈಯಕ್ತಿಕ ಜೀವನದಲ್ಲಶ್ಟೇ ಅಲ್ಲದೆ ಜಂಬಾರದ(business) ಜಗತ್ತಿನಲ್ಲಿಯೂ ಅಳವಡಿಸಬಹುದು” ಎನ್ನುತ್ತಾರೆ ನಡೆಸುಗೆಯ ಸಲಹಾಕಾರ(management consultant) ಮಸಾಕಿ ಇಮಾಯ್.

ಮೊದಲಿಗೆ ನೋಡಿದರೆ ಕೈಜನ್ ಸೂತ್ರ ಜಂಬಾರದ ಜಗತ್ತಿಗೆ ಹೊಂದುವುದು ಎಂದರೆ ನಂಬಿಕೆ ಬರಲಿಕ್ಕಿಲ್ಲ. ಜಂಬಾರದಲ್ಲಿ ಹೊಳಹಿನ ಮೇಲೆ ಒತ್ತುಕೊಟ್ಟು ಹೆಚ್ಚು ದುಡಿದರೆ ಸಾದನೆ ಸಾದ್ಯ ಎನ್ನುವುದು ಎಲ್ಲರ ಅನಿಸಿಕೆ. ಆದರೆ ಇಲ್ಲಿ ಸ್ವಲ್ಪ ಬಿಡಿಸಿ ನೋಡಿದರೆ ಕಾಣುವುದು ಬೇರೆಯೇ. ತನ್ನೇಳಿಗೆಯ ಸವಾಲಿನ ಕೆಲಸದಲ್ಲಿ ಹೆಚ್ಚು ಕಶ್ಟಪಟ್ಟು ತೊಡಗಿಕೊಂಡರೆ ಕೆಲವೊಮ್ಮೆ ಅದು ಹೆಚ್ಚಿನ ಕಸುವನ್ನು ಹೀರಿ ಯಾವುದೇ ದೊರೆತಗಳನ್ನು ನೀಡದೇ ಹೋಗಬಹುದು. ಆದರೆ ಕೈಜನ್‍ಅನ್ನು ಯಾರಾದರೂ ತಮ್ಮ ಜೀವನದ ಯಾವುದೇ ವಿಶಯಕ್ಕೂ ಅಳವಡಿಸಿ ನೋಡಬಹುದಾಗಿದೆ. ಇದನ್ನು ಜಪಾನಿನಲ್ಲಿ ಹಲವು ನಡೆಸುಗೆ ಚಳಕಗಳನ್ನು(management technique) ಸುದಾರಿಸಲು ಅಳವಡಿಸಲಾಗುತ್ತದೆ.

ಸೋಂಬೇರಿತನಕ್ಕಶ್ಟೇ ಅಲ್ಲ – ಎಡೆಬಿಡದ ಒಳಿತಿಗಾಗಿ ಜಂಬಾರದಲ್ಲಿ ‘ಕೈಜನ್’ ಅಳವಡಿಕೆ

ಕೈಜನ್ ಸೂತ್ರವನ್ನು ನಮ್ಮ ವೈಯಕ್ತಿಕ ಜೀವನ ಅಶ್ಟೇ ಅಲ್ಲದೇ ಜಂಬಾರಗಳಲ್ಲಿಯೂ ಅಳವಡಿಸಬಹುದು.  ಇದನ್ನು ಹೊಸ ಅಬ್ಯಾಸ ರೂಡಿಸಿಕೊಳ್ಳಲು ಅಲ್ಲದೇ ಎಡೆಬಿಡದ ಒಳಿತಿಗಾಗಿ(Continuous Improvement) ಬಳಸಲಾಗುತ್ತದೆ. ಕೈಜನ್ ಸೂತ್ರ ಹೇಳುವಂತೆ ಪ್ರತಿದಿನ ಸಣ್ಣ ಸಣ್ಣ ಬದಲಾವಣೆಗಳನ್ನು ತಂದು ಅದು ಹೇಗೆ ಜಂಬಾರವನ್ನು ಹೆಚ್ಚು ಪರಿಣಾಮಕಾರಿ ಮಾಡುವುದು ಮತ್ತು ಮಾಡುಗತನವನ್ನು ಹೆಚ್ಚಿಸಲು ನೆರವಾಗುವುದು ಎಂದು ನೋಡಲಾಗುತ್ತದೆ. ಕೈಜನ್ ಮಾದರಿಯಲ್ಲಿ ದೊಡ್ಡ ಬದಲಾವಣೆಗಳನ್ನು ತಂದು ತರಾತುರಿಯಲ್ಲಿ ದೊರೆತಗಳನ್ನು ನೋಡುವ ಬದಲಾಗಿ ದಿನೇ ದಿನೇ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಅದರಿಂದ ಜಂಬಾರಕ್ಕಾಗುವ ಒಳಿತನ್ನು ಒರೆಹಚ್ಚಿ ನೋಡಲಾಗುತ್ತದೆ.

ಟೊಯೋಟಾ ಕಂಪನಿಯಲ್ಲಿ ಅಳವಡಿಸಿಕೊಂಡ ಹಲವು ನಡತೆ ಮತ್ತು ಅಡಿಕಟ್ಟಲೆಗಳು ‘ದಿ ಟೊಯೊಟಾ ವೇ’(The Toyota Way) ಎಂದೇ ಚಿರಪರಿಚಿತ ಆಗಿವೆ. ಎಡೆಬಿಡದ ಒಳಿತಿಗಾಗಿ ಕೈಜನ್ ಸೂತ್ರವನ್ನು ಬಳಸಿಕೊಂಡು ಬೇಡಿಕೆಗೆ ಮೀರಿದ ಉತ್ಪಾದನೆ, ಕೆಲಸವಿಲ್ಲದೇ ಕಾಯುವುದು, ಬೇಡದ ಸಾಗಾಣಿಕೆ ಹೀಗೆ ಹಲವು ಬಗೆಯ ಪೋಲುಗಳನ್ನು ತಡೆಯಲಾಗುತ್ತಿದೆ. ಬಂಡಿಗಳ ಉತ್ಪಾದನೆಯಲ್ಲಿ ಟೊಯೊಟಾ ಮೇಲುಗೈ ಸಾದಿಸಿ ಮುನ್ನುಗ್ಗಲು ಇದೂ ಒಂದು ಕಾರಣ.

ವೈಯಕ್ತಿಕ ಜೀವನದಲ್ಲಿ ಕೈಜನ್ ಸೂತ್ರವನ್ನು ಪ್ರಯತ್ನಿಸುವ ಮೊದಲು, ನೀವು ಮಾಡಬೇಕಿರುವ  ಕೆಲಸವೆಂದರೆ  –  ನೀವು ಏನನ್ನು ಸಾದಿಸಬೇಕು ಎಂಬುದನ್ನು ತಿಳಿಯುವುದು, ಅಶ್ಟೇ!

(ಮಾಹಿತಿ ಮತ್ತು ಚಿತ್ರ ಸೆಲೆ: brightside.mewikipedia.orgwikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: