ನಾ ಕಂಡಂತೆ ‘ನೀರ್ ದೋಸೆ’

– ಪ್ರಶಾಂತ್ ಇಗ್ನೇಶಿಯಸ್.

neerdose-kannada-movie-review-rating-public-talk

ಚಿತ್ರದ ಕೊನೆಯ ದ್ರುಶ್ಯ. ’ನೀರ್ ದೋಸೆ ನೀರ್ ದೋಸೆ’ ಅಂತ ಹಾಡ್ ಹಾಡ್ಕೊಂಡ್, ಪ್ರಾತ್ರದಾರಿಗಳೆಲ್ಲಾ ವಾಹನದಲ್ಲಿ ಹೊರಟು ಹೋಗಿ, ಹೆಸರುಗಳು ತೆರೆಯ ಮೇಲೆ ಬರ‍್ತಾ ಇದೆ. ಜನಕ್ಕೆ ಮಾತ್ರ ಯಾಕೋ ಮನೆಗೆ ಹೋಗೋ ಮನಸಿಲ್ಲ. ಪೂರ‍್ತಿ ಹೆಸರುಗಳನ್ನೆಲ್ಲಾ ನೋಡ್ಕೊಂಡೇ ನಿಂತಿದ್ದಾರೆ. ಅಲ್ಲಿಗೆ ಚಿತ್ರ ಗೆಲ್ತು ಅನ್ಕೊಂಡೆ. ಗೆದ್ದಿದೆ ಅಂತಾ ವರದಿಗಳೂ ಬರ‍್ತಾ ಇವೆ. ನಿರ‍್ದೇಶಕ ವಿಜಯ ಪ್ರಸಾದ್ ಕುಶಿಯಾಗಿದ್ದಾರೆ. ಪೇಸ್ಬುಕ್ಕಲ್ಲಿ ’ಅದನ್ನ’ ವ್ಯಕ್ತಪಡಿಸ್ತಿದ್ದಾರೆ.

ಹೆಂಚಲ್ಲೇ ಸುಮಾರ್ ದಿನ ಇದ್ದ ‘ದೋಸೆ’ ಗೆ ನಾನೂ ಕಾಯ್ತಾನೇ ಇದ್ದೆ. ಯಾಕೆಂದರೆ ನಾನು ವಿಜಯ್ ಪ್ರಸಾದರ ಅಬಿಮಾನಿ. ’ಸಿದ್ಲಿಂಗು’ ನಾನು ಕಳೆದ 5 ವರ‍್ಶಗಳಲ್ಲಿ ನೋಡಿದ ಸಕ್ಕತ್ ಚಿತ್ರಗಳಲ್ಲಿ ಒಂದು. ಅದಕ್ಕಿಂತ ಮುಂಚೇನೇ ದಾರವಾಹಿಗಳ ಸಮಯದಿಂದ್ಲೂ ವಿಜಯ್ ಪ್ರಸಾದ್ ಸಾರ್ ನಮಗೆ ಪರಿಚಯವಿಲ್ಲದೆ ಇದ್ರೂ ಆತ್ಮೀಯರೇ, ಅದಕ್ಕೆ ಕಾರಣ ಅವರ ಹಾಸ್ಯ ಪ್ರಜ್ನೆ. ನಮ್ಮ ಕನ್ನಡ ಕಿರುತೆರೆಯಲ್ಲಿ ತಮಾಶೆಗೆ ಹೊಸ ಸ್ಪರ‍್ಶ ಕೊಟ್ಟೋರು ಅವ್ರು. ಸಿಲ್ಲಿ ಲಲ್ಲಿ, ಮಜಾ ವಿತ್ ಸ್ರುಜ, ಕಾಮಿಡಿ ಸರ‍್ಕಲ್ ಎಲ್ಲವನ್ನೂ ಮನೆಯ ಗಾಂದಿ ಕ್ಲಾಸಲ್ಲಿ ಕೂತು ನೋಡ್ದೋರು ನಾವು. ಅದಕ್ಕೆ ’ದೋಸೆ’ ಬಗ್ಗೆ ತವಕ ಇತ್ತು, ಎಲ್ಲಿ ಹೆಂಚಲ್ಲೇ ಸೀದು ಹೋಗುತ್ತೋ ಅನ್ನೋ ಬಯನೂ ಇತ್ತು.

ಮಲ್ಟಿಪ್ಲೆಕ್ಸ್ ಬೇಡ, ಸಾಮಾನ್ಯ ಚಿತ್ರಮಂದಿರದಲ್ಲೇ ನೋಡ್ಬೇಕು ಅನ್ನೋ ಆಸೆ ಇಟ್ಕೊಂಡಿದ್ದು ಒಳ್ಳೆದೇ ಆಯ್ತು. ಎರಡನೇ ದಿನಕ್ಕೆ ಆಗ್ಲೇ ಚಿತ್ರ ನೋಡ್ದೋರೆ ಮತ್ತೆ ಬಂದಿದ್ದರು, ನಮ್ಮ ಕಾಲೇಜ್ ಹುಡ್ಗುರು. ಸಕ್ಕತ್ ಕಮೆಂಟ್ ಬರ‍್ತಾ ಇದ್ವು ಸೆಕೆಂಡ್ ಕ್ಲಾಸಿಂದ. ಹೆಸರು ತೋರ‍್ಸೋ ಮೊದಲ ದ್ರುಶ್ಯದಿಂದಲೇ ವಿಜಯ ಪ್ರಸಾದರ ಕೈ ಚಳಕ ಶುರು. ನಿರೀಕ್ಶೆಯಂತೆ ಹೆಸರುಗಳಲ್ಲೇ ಬಾರಿ ಮಜಾ. ಜೊತೆ ಜೊತೆಗೆ ಕಡ್ಡಿ ಮುರಿದಂತ ಸಂಬಾಶಣೆ.

ಒಂದು ಹೊಸ ತರದ ಕತೆ ತೋರ‍್ಸೋ ಪ್ರಯತ್ನ ಪಟ್ಟಿದ್ದಾರೆ ಸಾರು. ಕತೆ ಸರಳ ಆದರೆ ಬಾವನೆಗಳ ತೊಳಲಾಟಗಳು ಸರಳವಲ್ಲ. ನಿರ‍್ದೇಶಕರು ಏನು ಹೇಳುತ್ತಿದ್ದಾರೆ ಎನ್ನುವುದು ಇಲ್ಲಿ ಬರೆಯುವುದೂ ಕಶ್ಟವೇ. ಚಿತ್ರ ನೋಡಿ ಪಾತ್ರದಾರಿಗಳೊಂದಿಗೆ ಒಂದಾಗಬೇಕು. ನಿರ‍್ದೇಶಕರು ಒಳ್ಳೆ ಕತೆ ಏನೋ ಆರಿಸಿಕೊಂಡಿದ್ದಾರೆ, ಆದರೆ ಚಿತ್ರಕತೆ ಆಗಾಗ ಅಲ್ಲಲ್ಲಿ ಗುರಿಯಿಲ್ಲದೆ ಸಾಗುತ್ತದೆ. ಆದರೂ ನೋಡುಗ ನಗುವಿನಲ್ಲೇ ಬದ್ರತೆ ಕಂಡುಕೊಳ್ಳುತ್ತಾನೆ. ಚಿತ್ರಕತೆಯಲ್ಲಿ ಗೊಂದಲ ಇದೆ ಅನ್ನೋವಾಗಲೆಲ್ಲಾ ಬಿಡಿ ಬಿಡಿ ದ್ರುಶ್ಯಗಳು ನಿಮ್ಮನ್ನು ಕಲಕುತ್ತವೆ. ಅದರಲ್ಲೇ ನೋಡುಗನನ್ನು ಹಿಡಿದಿಟ್ಟುಕೊಳ್ಳುತ್ತಾರೆ ವಿಜಯ್ ಸಾರ್. ಅದಕ್ಕೆ ಅಲ್ಲಲ್ಲಿ ಎರಡರ‍್ತದ ಮಾತುಗಳು, ಪೋಲಿತನ ಬಳಕೆಯಾಗಿದೆ. ಆದರೆ ಚಿತ್ರದ ಪ್ರಮುಕ ಇಬ್ಬರು ಪಾತ್ರದಾರಿಗಳು ಇರುವುದು, ಮಾತಾಡುವುದೇ ಹಾಗೆ ಎನ್ನುವುದನ್ನು ವಿಜಯ್ ಪ್ರಸಾದ್‍ರವರು ಮೊದಲ ದ್ರುಶ್ಯದಿಂದಲೇ ಸ್ತಾಪಿಸಿದ್ದಾರೆ. ಕೆಲವೊಮ್ಮೆ ಈ ಪೋಲಿ ಮಾತುಗಳು, ಸಬ್ಯತೆಯ ಗಡಿಯ ತೀರ ಹತ್ತಿರ ಹೋಗಿ ಕಿರುಬೆರಳಿನಲ್ಲಿ ಗಡಿರೇಕೆ ಮುಟ್ಟಿ ಮತ್ತೆ ವಾಪಸ್ ಬಂದು ಬಿಡುತ್ತವೆ. ಎಂತವರೂ ತಮ್ಮ ಸಬ್ಯತೆಯ ಮುಕವಾಡವನ್ನು ಸ್ವಲ್ಪ ಪಕ್ಕಕ್ಕಿಟ್ಟು ಮನಸಾರೆ ನಗುವ ಕ್ಶಣಗಳು ನೀರ್ ದೋಸೆಯಲ್ಲಿವೆ. ಹಾಗೆ ನೋಡಿದರೆ ದ್ವಂದ್ವಾರ‍್ತದ ಸಂಬಾಶಣೆಗಳಿಗಿಂತ, ನೇರ ಅರ‍್ತದ ಮಾತುಗಳೇ ಜಾಸ್ತಿ. ಕೆಲವು ನಿಮ್ಮನ್ನು ಸ್ತಬ್ದಗೊಳಿಸುತ್ತದವೆ, ಇನ್ನೂ ಕೆಲವು… ಮೂಕಸ್ತಬ್ದಗೊಳಿಸುತ್ತವೆ.

ಇದು ಜಗ್ಗೇಶ್‍ಗೆ ಹೇಳಿ ಮಾಡಿಸಿದ ಪಾತ್ರ. ಜಗ್ಗೇಶ್‍ರವರ ಶಕ್ತಿ ಇರುವುದೇ ಇಲ್ಲಿ. ಅವರು ಪಾತ್ರದೊಳಗೆ ’ಮೀ ಟೂ’ ಅನ್ಕೊಂಡೆ ಒಂದಾಗಿ ಬಿಟ್ಟಿದ್ದಾರೆ. ಆದರೂ ಏಕತಾನತೆಯ ’ಮಟ’ದಿಂದ ಅವರು ’ಎದ್ದೇಳ’ ಬೇಕಾಗಿದೆ. ಅವರ ಪಾತ್ರ ಪೋಶಣೆ ಬೇರೆ ಚಿತ್ರಗಳ ಮುಂದುವರಿದ ಬಾಗವೇನೋ ಅನಿಸುತ್ತದೆ. ಆದರೆ, ಈ ಪಾತ್ರದಲ್ಲಿ ಜಗ್ಗಣ್ಣನನ್ನು ಬಿಟ್ಟು ಇನ್ನಾರನ್ನೂ ಊಹಿಸುವುದು ಕಶ್ಟವೇ. ಚಿತ್ರದ ದ್ರುಶ್ಯವೊಂದರಲ್ಲಿ ಹರಿಪ್ರಿಯಾ ಬಾಗಿಲನ್ನು ರೊಪ್ಪನೆ ಮುಚ್ಚಿಬಿಡುತ್ತಾರೆ. ಇನ್ನೊಂದೇ ಕ್ಶಣದಲ್ಲಿ ಬಾಗಿಲು ಮತ್ತೆ ತೆರೆದುಕೊಳ್ಳುತ್ತದೆ. ಆಗ ಜಗ್ಗೇಶ್‍ರವರ ಮುಕದಲ್ಲಿ ಮೂಡುವ ಬಾವ, ಅವರೊಬ್ಬರಿಗೇ ಸಾದ್ಯವೇನೋ. ಅದೊಂದೆ ಸಾಕು ಅವರಲ್ಲಿನ ಕಲಾವಿದನನ್ನು ತಿಳಿಯಲು.

neer-dose

ಹಾಸ್ಯ ನಟನೆ ಕಶ್ಟ ಎಂಬ ಮಾತಿದೆ. ಆದರೆ ಜಗತ್ತಿನ ಅತ್ತ್ಯುತ್ತಮ ನಟರಲ್ಲಿ ಅನೇಕರು ಉತ್ತಮವಾದ ಹಾಸ್ಯ ನಟನೆ ಮಾಡಬಲ್ಲರು. ದತ್ತಣ್ಣ ತಾವೆಂತ ಪರಿಪೂರ‍್ಣ ನಟ ಎಂದು ಇಲ್ಲಿ ಸಾಬೀತಾಗಿದೆ. ಅವರು ಯಾವುದೇ ಪಾತ್ರಕ್ಕೂ ಸೈ ಎಂದು ವಿಜಯ್ ಸಾರ್ ಇಲ್ಲಿ ತೋರಿಸಿದ್ದಾರೆ. ಇಲ್ಲಿ ದತ್ತಣ್ಣ ಸಮನಾಂತರ ನಾಯಕ ಪಾತ್ರದಾರಿ. ಹರಿಪ್ರಿಯಾ ಹೊಸ ರೀತಿಯ ಪಾತ್ರಕ್ಕಾಗಿ ತಮ್ಮ ಪ್ರತಿಬೆಯನ್ನು ಒರೆಹಚ್ಚಿದ್ದಾರೆ. ಬೆಲ್ಲಿ ನ್ರುತ್ಯದಲ್ಲಿ ಸಿಕ್ಕ ಪರಿಣಿತಿ ದೂಮಪಾನದಲ್ಲಿ ಅವರಿಗೆ ಸಿಕ್ಕಿಲ್ಲ. ಸುಮನ್ ರಂಗನಾತ್ ಇಲ್ಲಿ ಸರಳ ಸುಂದರಿ. ಎಂದಿನಂತೆ ಸರಳ ಅಬಿನಯ. ಆದರೆ ಮಾತು ಸರಳವಾಗಿರದೆ ಜಗ್ಗೇಶ್, ದತ್ತಣ್ಣರಂತೆ ಮಾತಾನಾಡುವುದು ಸ್ವಲ್ಪ ಕಿರಿಕಿರಿ ಅನಿಸುತ್ತದೆ. ಜಾತಕ ದೋಶವಿರುವ, 36 ಆದರೂ ಮದುವೆಯಾಗದ ಹೆಣ್ಣು ಅಶ್ಟು ನಿರ‍್ಬಯವಾಗಿ ಮಾತಾನಾಡುತ್ತಾಳೆ ಎಂಬುದನ್ನು ಅರಗಿಸಿಕೊಳ್ಳುವುದು ಕಶ್ಟವಾದರೂ, ಹೆಣ್ಣು ಹಾಗಿರಲಿ ಎನ್ನುವ ನಿರ‍್ದೇಶಕರ ಆಶಯ ಮೆಚ್ಚತಕ್ಕದು.

ಇವರೆಲ್ಲಾ ಚೆನ್ನಾಗಿ ನಟಿಸಿದ್ದಾರೆ ಸರಿ, ಆದರೆ ಚಿತ್ರದಲ್ಲಿ ಬರುವ ಶಾಲೆಯ ದ್ರುಶ್ಯಗಳಲ್ಲಿ ಬರುವ ಕಿರಿಯ ಕಲಾವಿದರ ಅಬಿನಯ ನಿಜಕ್ಕೂ ಅದ್ಬುತ. ಚಿತ್ರದ ಅತ್ಯಂತ ಪರಿಣಾಮಕಾರಿ ಹಾಗೂ ಬಾವಾನಾತ್ಮಕ ದ್ರುಶ್ಯಗಳಲ್ಲಿ ಈ ಎಳೆ ಕಲಾವಿದರದು ಬರ‍್ಜರಿ ಅಬಿನಯ. ಶಾಲೆಯ ದ್ರುಶ್ಯಗಳು ಚಿತ್ರವನ್ನು ಎತ್ತರಕ್ಕೇರಿಸಿವೆ. ಚಿತ್ರದ ನಾಯಕನ ತಂದೆಯ ಪ್ರೇಮ ಪ್ರಸಂಗ ಸ್ವಲ್ಪ ಎಳೆದಂತಿದೆ. ಆ ಸಮಯದಲ್ಲಿ ಬಳಕೆಯಾಗಿರುವ ಸಂಗೀತ ಚೆನ್ನಾಗಿದೆ. ಅಂದ ಹಾಗೆ ಚಿತ್ರದ 5ನೇ ಪ್ರಮುಕ ಪಾತ್ರದಾರಿ ಚಿತ್ರದ ಸಂಗೀತ. ಅನೂಪ್ ಕತೆಗೆ ಬೇಕಾದ ಸಂಗೀತದ ಮಟ್ಟುಗಳನ್ನು ಕೊಟ್ಟಿದ್ದಾರೆ. ಅವರದು ಇದರಲ್ಲಿ ಪಳಗಿದ ಕೈ. ಚಾಯಾಗ್ರಹಣ ಕಲಾತ್ಮಕ. ಹಾಗೆಂದರೇನು ಎಂದು ಕೇಳಬೇಡಿ. ಅಶ್ಟೇ ಹೇಳಲು ಸಾದ್ಯ.

ಕೊರೆತೆಗಳ ನಡುವೆಯೂ ಒಂದೆರೆಡು ಸಲ ನೋಡಬಹುದಾದ ಚಿತ್ರ ನೀರ್ ದೋಸೆ. ಒಮ್ಮೆ ಮಲ್ಟಿಪ್ಲೆಕ್ಸಿನ ತಣ್ಣನೆಯ ಮೌನದ ನಡುವೆ, ಮತ್ತೊಮ್ಮೆ ಸಾಮಾನ್ಯ ಚಿತ್ರಮಂದಿರದಲ್ಲಿನ ಶಿಳ್ಳೆಗಳ ನಡುವೆ. ಒಮ್ಮೆ ಜಗ್ಗೇಶ್, ದತ್ತಣ್ಣ, ಹರಿಪ್ರಿಯಾ, ಸುಮನ್‍ರವರಿಗಾಗಿ, ಮತ್ತೊಮ್ಮೆ ಕೇವಲ ವಿಜಯ್ ಪ್ರಸಾದ್‍ರವರು ಏನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದಕ್ಕಾಗಿ. ಒಮ್ಮೆ ನಗಲು, ಮತ್ತೊಮ್ಮೆ ನಗುವಿನ ನಡುವೆ ಇರುವ ವಿಶಾದಕ್ಕಾಗಿ.

ವಿಜಯ್ ಪ್ರಸಾದರ ಮುಂದಿನ ಚಿತ್ರ ಇದಕ್ಕಿಂತ ಚೆನ್ನಾಗಿರಲಿ. ಚಿತ್ರಗಳ ನಡುವೆ ಕಿರುತೆರೆಯ ಕಡೆಗೂ ಅವರು ಬಂದು ಹೋಗುತ್ತಿರಲಿ.

(ಚಿತ್ರ ಸೆಲೆ: newindianexpress.compressks.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: