ಪತ್ತೇದಾರಿ ಕತೆ: “ನಿನ್ನಾತ್ಮಕ್ಕೆ ಶಾಂತಿ ಸಿಗಲಿ”(ಕಂತು-3)

– ಬಸವರಾಜ್ ಕಂಟಿ.

detective3

ಕಂತು-1  ಕಂತು-2 ಕಂತು-3 

ಮರುದಿನ, ಅಂದರೆ ಶುಕ್ರವಾರ ಸುದಾಳನ್ನು ನೋಡಲು ಇಂದಿರಾನಗರದ ಅರಸ್ ಅವರ ಮನೆಗೆ ಹೊರಟೆವು. ಅವಳು ಸುದಾರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಬಂದಿದ್ದಳು. ಅವಳಿಗೆ ಏನೇನು ಕೇಳಬೇಕೆಂದು ನಾನು ಗಿರೀಶ್ ಮಾತಾಡಿಕೊಂಡಿದ್ದೆವು. ಇಬ್ಬರು ಗಾರ‍್ಡ್ ಗಳು ಸೇರಿ ಮನೆಯ ಗೇಟನ್ನು ಎಳೆದು ತೆಗೆದರು. ಸುಮಾರು ನೂರು ಮೀಟರ್ ಉದ್ದವಿದ್ದ ಬಂಗಲೆಯ ಹಾದಿಯನ್ನು ದಾಟಿ ಮನೆಯ ಮುಂದೆ ಗಾಡಿ ನಿಲ್ಲಿಸಿ ಇಳಿದೆವು. ಬಾಗಿಲಲ್ಲಿ ಇನ್ನೊಬ್ಬ ಗಾರ‍್ಡ್ ನಿಂತಿದ್ದ. ಅವನನ್ನು ದಾಟಿ ಒಳಹೊಕ್ಕಾಗ ಕಂಡಿದ್ದು ಸಿರಿ ಸಂಪತ್ತಿನ ಶ್ರೇಶ್ಟ ಉದಾಹರಣೆ. ಅರಸ್ ಅವರು ಸ್ವತಹ ಬರಮಾಡಿಕೊಂಡರು. ಕೋಟು ದರಿಸಿದ್ದ ಅತ್ಲೆಟಿಕ್ ಮೈ. ಪ್ರೆಂಚ್ ದಾಡಿಯ ಉದ್ದ ಮುಕ, ಕಣ್ಣಿಗೆ ಕನ್ನಡಕ.

ಗಿರೀಶ್ ನನ್ನ ಪರಿಚಯ ಮಾಡಿಕೊಟ್ಟ. ನಾನು ಅಲ್ಲಿಗೆ ಬಂದದ್ದು ಅವರಿಗೆ ಇಶ್ಟವಾಗಲಿಲ್ಲ. ಅದನ್ನು ಅವರು ಹೇಳಿದರೂ ಕೂಡ. ಆದರೆ ಅವರ ಪಕ್ಕದಲ್ಲಿದ್ದ ಇಬ್ಬರು ವಕೀಲರು “ಇರಲಿ ನೋಡೋಣ” ಎಂದದ್ದರಿಂದ ಸುಮ್ಮನಾದರು. ಅರಸ್ ಅವರು ವಕೀಲರ ಪರಿಚಯ ಮಾಡಿಕೊಟ್ಟರು. ಇಬ್ಬರೂ ಹೈಕೋರ‍್ಟಿನ ಹೆಸರಾಂತ ಕ್ರಿಮಿನಲ್ ವಕೀಲರು. ಸುದಾಳ ಕೋಣೆ ಮೊದಲ ಮಹಡಿಯಲ್ಲಿತ್ತು. ನಮ್ಮ ಜೊತೆ ಅರಸ್, ವಕೀಲರೂ ಅವಳ ಕೋಣೆಗೆ ಬಂದರು. ತೀರ ಬೆಳ್ಳನೆಯ ಪುಟ್ಟ, ಮುದ್ದಾದ ಮುಕ, ಕೂದಲನ್ನು ಬಾಚಿ ಜಡೆ ಹಾಕಿದ್ದಳು. ಅತ್ತು ಅತ್ತು ಕಣ್ಣು ಹೊಳಪು ಕಳೆದುಕೊಂಡಿದ್ದವು. ನೀಲಿ ಜೀನ್ಸ್, ಹಳದಿ ಟೀಶರ‍್ಟ್ ತೊಟ್ಟು, ಒಲ್ಲದ ಮನಸ್ಸಿನಿಂದಲೇ ಮಾನಸಿಕವಾಗಿ, ನಮ್ಮ ಬರುವಿಕೆಗಾಗಿ ತಯಾರಾಗಿದ್ದಳು ಎಂದು ತೋರುತ್ತಿತ್ತು. ಮೊದಲು ಅವಳ ಆರೋಗ್ಯದ ಬಗ್ಗೆ ವಿಚಾರಿಸಿದ ಗಿರೀಶ್, ಮೊಬೈಲ್ ಒಂದರಲ್ಲಿ ದನಿ ರೆಕಾರ‍್ಡ್ ಶುರುಮಾಡಿ, ಕೇಳ್ವಿಗಳನ್ನು ಒಂದೊಂದಾಗಿ ಎಸೆದ.

“ನೀವು ಕೊನೆ ಸಾರಿ ಸಂಜಯ್ ನೋಡಿದ್ದು ಯಾವಾಗ?”

“ಸೋಮವಾರ ಸಂಜೆ. ಅವ್ನು ಆಪೀಸಿನಿಂದ ಬಂದಮೇಲೆ ಅವನ ಮನೆಗೆ ಹೋಗಿದ್ದೆ… ನಾನು ಹೋದಾಗ ಐದು ಕಾಲಾಗಿತ್ತು, ವಾಪಸ್ಸು ಅಲ್ಲಿಂದ ಐದು ಮುಕ್ಕಾಲು ಗಂಟೆಗೆ ಹೊರಟು ಬಂದೆ”

“ನೀವು ಅವತ್ತು ಸಂಜೆ, ಅಂದ್ರೆ ಆರು ಗಂಟೆಯಿಂದ ಎಂಟು ಗಂಟೆ ನಡುವೆ ಎಲ್ಲಿದ್ರಿ?”

“ನಮ್ ಮನೆ ಹತ್ರ ಇರೋ ಬ್ಯುಟಿ ಪಾರ‍್ಲರ್ ನಲ್ಲಿ”

ಒಬ್ಬ ವಕೀಲ ನಡುವೆ ಬಾಯಿ ಹಾಕಿ, “ಪಾರ‍್ಲರ್ ನವರು ಬೇಕಿದ್ರೆ ಸಾಕ್ಶಿ ಹೇಳ್ತಾರೆ” ಎಂದ. ಗಿರೀಶ ಅವನೆಡೆಗೆ ನೋಡಿ, ನಕ್ಕು ಸುಮ್ಮನಾದ. ನಾನು ಮನಸ್ಸಿನಲ್ಲೇ, ಎಶ್ಟ್ ಸಾಕ್ಶಿ ಬೇಕಾದ್ರೂ ನೀವು ತಯಾರು ಮಾಡ್ತೀರಾ ಬಿಡಿ ಎಂದು ತಾತ್ಸಾರಿಸಿದೆ.

ಗಿರೀಶ್ ಮುಂದುವರೆಸಿದ, “ಸಂಜಯ್ ಅವರಿಗೆ ಏನಾದ್ರೂ ತೊಂದ್ರೆ ಇತ್ತಾ? ದುಡ್ಡಿನ ತೊಂದ್ರೆ, ಅತವಾ ಇನ್ನೇನಾದ್ರು?”

ಅವಳು ಯೋಚಿಸಿದಂತೆ ಮಾಡಿ, “ಇಲ್ಲಾ… ಆ ರೀತಿ ಏನೂ ಇರಲಿಲ್ಲ” ಎಂದಳು.

“ನಮಗ್ ಗೊತ್ತಿರೋ ಮಟ್ಟಿಗೆ ನಿಮ್ಮ ಮತ್ತು ಸಂಜಯ್ ಸಂಬಂದ ನಿಮ್ಮ ತಂದೆ, ಅಂದ್ರೆ ಅರಸ್ ಅವರಿಗೆ ಇಶ್ಟ ಇರಲಿಲ್ಲ. ಹಾಗಾಗಿ ಇದರ ಬಗ್ಗೆ ನಿಮ್ಮಿಬ್ಬರ ನಿರ‍್ದಾರ ಏನಿತ್ತು?”

“ನಾವು ಮದ್ವೆ ಮಾಡ್ಕೊಳ್ಳೇಬೇಕು ಬೇಕು ಅಂತಾ ತೀರ‍್ಮಾನಿಸಿದ್ವಿ”

“ನಿಮಗೆ ಯಾರ ಮೇಲಾದ್ರೂ ಅನುಮಾನ ಇದ್ಯಾ?” ಅವಳು ತಲೆ ಕೆಳಗೆಹಾಕಿ ಇಲ್ಲ ಎನ್ನುವಂತೆ ಅಲ್ಲಾಡಿಸಿದಳು. “ನೀವು ಯಾರಿಗೂ ಹೆದರಬೇಕಾಗಿಲ್ಲ, ನಿಮ್ಮ ಮನಸ್ಸಿನಲ್ಲಿ ಇರೋದನ್ನಾ ಹೇಳಿ” ಎಂದ.

ಅರಸ್ ಅವರು ಏನೋ ಹೇಳಲು ಮುಂದಾದಂತೆ ನನಗೆ ತೋರಿತು, ಆದರೆ ಪಕ್ಕದಲ್ಲಿದ್ದ ವಕೀಲರು ಅವರ ಕಯ್ ಹಿಡಿದು, ಸುಮ್ಮನಿರುವಂತೆ ಸೂಚಿಸಿದರು. ದಳದಳನೆ ಇಳಿದ ಕಣ್ಣೀರನ್ನು ವರೆಸಿಕೊಂಡು ತಲೆಯೆತ್ತಿ ಮತ್ತೆ ಅಲ್ಲಾಡಿಸಿದಳು. ನನಗೂ ಒಂದು ಕ್ಶಣ ಕರಳು ಚುರುಕ್ ಎಂದಿತು. ಗಿರೀಶ ನಿಟ್ಟುಸಿರು ಬಿಟ್ಟು ಮುಂದಿನ ಕೇಳ್ವಿಗೆ ಹೊರಳಿದ, “ಇಲ್ಲಿ ನಿಂತಿದ್ದಾರಲ್ಲಾ ಪುಲಕೇಶಿ”, ಎಂದ ನನ್ನಡೆ ತೋರಿಸುತ್ತಾ, “ಇವರು ಪ್ರೈವೇಟ್ ಡಿಟೆಕ್ಟೀವ್. ಕೊಲೆಯಾದ ಎರಡು ದಿನಗಳ ಹಿಂದೆ ಸಂಜಯ್ ಇವರನ್ನಾ ಸಂಪರ‍್ಕಿಸಿದ್ರಂತೆ. ಯಾಕೆ ಅಂತಾ ನಿಮಗೇನಾದ್ರು ಗೊತ್ತಾ?”

ಒಂದೆರಡು ಕ್ಶಣ ತಡೆದು, “ಇಲ್ಲಾ… ನಂಗೊತ್ತಿಲ್ಲಾ” ಅಂದ್ಳು.

“ಹೋಗ್ಲಿ… ಸಂಜಯ್ ಮನೆಯಲ್ಲಿ ಒಂದು ಹಿತ್ತಾಳೆ ಹೂದಾನಿ ಇತ್ತಲ್ಲಾ” ಎಂದು ಆ ತಿಟ್ಟವನ್ನು ತೋರಿಸಿದ. “ಈಗ ಅದು ಅಲ್ಲಿಲ್ಲ. ಇದರ ಬಗ್ಗೆ ನಿಮಗೇನಾದ್ರೂ ಗೊತ್ತಾ?”

ಅವಳು ಮತ್ತೆ “ಇಲ್ಲ” ಎನ್ನುವ ಕತೆಯನ್ನೇ ಮುಂದುವರೆಸಿದಳು. ಗಿರೀಶ ನನ್ನೆಡೆ ನೋಡಿದ. ನಾನು “ಇರಲಿ” ಎನ್ನುವಂತೆ ಕಣ್ಣಿನಲ್ಲೇ ಸನ್ನೆ ಮಾಡಿದೆ.

“ನಿಮ್ಮ ಮತ್ತು ನಿಮ್ಮ ತಂದೆ ನಡುವೆ ಜಗಳವಾದ ಮೇಲೆ, ಅವರು ನಿಮಗೆ ಅತವಾ ನೀವು ಅವರಿಗೆ ಪೋನಿನಲ್ಲಿ ಯಾವತ್ತೂ ಮಾತಾಡಿಲ್ಲ. ಆದ್ರೆ ಸಂಜಯ್ ತೀರಿಕೊಂಡ ದಿನವೇ ನೀವು ಅವರಿಗೆ ಕಾಲ್ ಮಾಡಿದ್ರಿ. ಯಾಕೆ?”

ಅರಸ್ ಬಾಯಿ ಹಾಕಿಯೇಬಿಟ್ಟರು, “ಅವಳು ಎಶ್ಟಾದ್ರೂ ನನ್ ಮಗ್ಳು, ನನಗೆ ಕಾಲ್ ಮಾಡೋದ್ರಲ್ಲಿ ತಪ್ಪೇನು?” ಎಂದು ಏರು ದನಿಯಲ್ಲಿ ಎದ್ದು ನಿಂತು ಮಾತಾಡಿದರು. ವಕೀಲರು ಅವರನ್ನು ಸಮಾದಾನಪಡಿಸಿ ಕುಳ್ಳರಿಸಿದರು.

ಗಿರೀಶ್ ಇನ್ನೂ ಉತ್ತರಕ್ಕಾಗಿ ಕಾಯುತ್ತಿದ್ದ. ಅವಳು, “ಹೇಗಿದೀಯಾ ಅಂತಾ ಕೇಳೋದಕ್ಕೆ ಕಾಲ್ ಮಾಡಿದ್ದು. ಬೇರೆನೂ ಇಲ್ಲ” ಎಂದಳು.

“ಸಂಜಯ್ ಪ್ರೆಂಡ್ಸ್ ಬಗ್ಗೆ ನಿಮಗೇನನಿಸುತ್ತೆ?”

“ಆಂ… ಗೋವಿಂದ್ ಅಂತಾ ಒಬ್ಬಾ ಇದಾನೆ… ಬಿಹಾರಿ. ಅವ್ನು ಯಾಕೋ ಅಶ್ಟು ಒಳ್ಳೆಯವ್ನು ಅಂತಾ ಅನ್ಸಿಲ್ಲಾ”

“ಅನೂಪ್ ಹೇಗೆ?”

“ಅವ್ನು ಒಳ್ಳೆಯವನು”

ನಮ್ಮ ಪ್ರಶ್ನೆಗಳು ಮುಗಿದಿದ್ದವು. ಗಿರೀಶ್ ಹೊರಡಲು ಎದ್ದು ನಿಂತು, “ಈ ಕೇಸಿನ ಬಗ್ಗೆ ನಿಮಗೆ ಇನ್ನೇನಾದರೂ ಹೇಳಬೇಕು ಎನಿಸಿದರೆ ನಮಗೆ ಕಾಲ್ ಮಾಡಿ” ಎಂದು ಮುಗುಳ್ನಕ್ಕನು. ಅವಳು ತಲೆದೂಗಿದಳು. ಎಲ್ಲರೂ ಕೋಣೆಯಿಂದ ಹೊರಡಲು ಎದ್ದು ನಿಂತರು. ನಾನು ಬೇಕು ಅಂತಲೇ ಸ್ವಲ್ಪ ನಿದಾನ ಮಾಡಿದೆ. ಎಲ್ಲರೂ ಬಾಗಿಲಲ್ಲಿದ್ದಾಗ ಮೆದುವಾಗಿ ಅವಳೆಡೆಗೆ ಮುಗುಳ್ನಗು ಬೀರುತ್ತಾ ಮಾತಾಡಿಸಿದೆ,

“ಯಾಕ್ ಹೀಗೆಲ್ಲಾ ಆಯ್ತು ಅನಿಸ್ತಿದೆ ಅಲ್ವಾ?”

ಅವಳು ದುಕ್ಕದ ಮುಕದಲ್ಲೇ “ಹೂಂ” ಎಂದಳು. “ಸ್ವಲ್ಪ ಟೈಮ್ ಕೊಡಿ, ಎಲ್ಲ ಸರಿ ಹೋಗುತ್ತೆ” ಎಂದೆ. ಅವಳು ತುಟಿ ತುಸು ಹಿಗ್ಗಿಸಿ, ಮತ್ತೆ ಕುಗ್ಗಿಸಿದಳು.

“ಅಂದ ಹಾಗೆ ಸಂಜಯ್ ಯಾವುದೋ ಬ್ಯುಸಿನೆಸ್ ಮಾಡ್ಬೇಕು ಅಂತಾ ಇದ್ನಲ್ಲಾ… ಅದರ ಬಗ್ಗೆ ನಿಮಗೆ ಗೊತ್ತಿರಬೇಕಲ್ಲಾ?” ಕಲ್ಲು ಹೊಡೆದೆ. ಎಲ್ಲರೂ ಬಾಗಿಲಲ್ಲಿ ನಿಂತು ನಮ್ಮೆಡೆಗೆ ನೋಡುತ್ತಿದ್ದರು. ನಮ್ಮ ಮಾತು ಅವರಿಗೆ ಕೇಳುತ್ತಿತ್ತು.

ಅವಳು ಮಾತಾಡಿದಳು, “ಅವ್ನು ಅನೂಪ್ ಜೊತೆ ಸೇರ‍್ಕೊಂಡು ಪ್ಲಿಪ್ ಕಾರ‍್ಟ್ ತರಾ ಆನ್ಲಾಯಿನ್ ಬ್ಯುಸಿನೆಸ್ ಶುರು ಮಾಡ್ಬೇಕು ಅಂತಾ ಇದ್ದಾ. ಅವನ ಐಡಿಯಾಗಳೇ ಬೇರೆ ಇದ್ವು. ಪೇಟೆಂಟ್ ಹಾಕ್ಬೇಕು ಅನ್ಕೊಂಡಿದ್ದ. ಹೀ ವಾಸ್ ಸ್ಮಾರ‍್ಟ್, ಆದ್ರೆ ದುಡ್ಡಿರಲಿಲ್ಲಾ ಅಶ್ಟೆ. ಅವನಿಗೆ ಯಾರ್ ಜೊತೆನೂ ಪಾರ‍್ಟನರ್ ಶಿಪ್ ಮಾಡೋ ಇಶ್ಟಾ ಇರಲಿಲ್ಲ, ಅದಕ್ಕೆ…” ಎಂದು ಸುಮ್ಮನಾದಳು.

“ಅದಕ್ಕೆ?” ನಾನು ಒತ್ತಿ ಕೇಳಿದೆ.

“ಅದೇ… ಅಪ್ಪಂಗೆ ಇಶ್ಟ ಇರಲಿಲ್ಲ”, ಎಂದು ಮಾತು ನುಂಗಿಕೊಂಡಳು. ನನಗೆ ಅರ‍್ತವಾಗಿ, ಹಣ್ಣು ಉದುರಿತು ಅಂದುಕೊಂಡು, “ಟೇಕ್ ಕೇರ‍್” ಎಂದು ಅಲ್ಲಿಂದ ಹೊರಟೆ. ಅರಸ್ ನನ್ನನ್ನೇ ದುರುಗುಟ್ಟುಕೊಂಡು ನೋಡುತ್ತಿದ್ದ. ನಾನು ಯಾರ ಮುಕವನ್ನೂ ನೋಡದೆ, ನೇರ ಹೊರ ನಡೆದೆ. ಹತ್ತು ನಿಮಿಶ ಬಿಟ್ಟು ಗಿರೀಶ ಮತ್ತು ಪೇದೆ ಹೊರಬಂದರು.

“ಏನಾಯ್ತು?” ನಾನು ಕೇಳಿದೆ.

“ಏನಿಲ್ಲ. ನೀವು ಹೇಳಿದ್ರಲ್ಲಾ… ಜಗಳ ಯಾವತ್ತಾಯ್ತು ಅಂತ ತಿಳ್ಕೊಳ್ಳೋಕೆ. ಅದನ್ನೇ ಮನೆಗೆಲಸದವರಿಗೆ ಕೇಳ್ದೆ. ನಿಮ್ಮ ಊಹೆ ನಿಜ. ಜಗಳ ಆದ್ಮೇಲೆನೇ ಸಂಜಯ್ ಗೆ ಬೇಜಾರಾಗಿತ್ತು ಅನ್ಸುತ್ತೆ. ಅಲ್ದೆ ಸುದಾ ಹೇಳಿದ ಹಾಗೆ ಅವ್ನು ಕಂಪೆನಿ ಶುರು ಮಾಡೋದಕ್ಕೆ ಅರಸ್ ಸಹಾಯ ಪಡೀಬೇಕು ಅಂತಾ ಇದ್ದಾ ಅನ್ಸುತ್ತೆ”

“ಎಲ್ಲ ಸರಿ. ಆದ್ರೆ ಯಾವ್ದೋ ಒಂದು ವಿಶಯ ನಮಗೆ ಸಿಗ್ತಾ ಇಲ್ಲ. ಸಂಜಯ್ ನನ್ ಹತ್ರಾ ಯಾಕ್ ಬಂದಿದ್ದಾ? ಅರಸ್ ಅವರೇ ಕೊಲೆ ಮಾಡಿಸಿದ್ರೆ ಸುದಾ ಯಾಕೆ ಅದನ್ನಾ ಮುಚ್ಚಿಡ್ತಾಯಿದಾಳೆ? ಅವಳ ಪ್ರೀತಿ ಮೇಲೆ ನನಗೆ ಕಂಡಿತಾ ಸಂಶಯ ಇಲ್ಲಾ” ಎಂದೆ. ಗಿರೀಶ್ ನನ್ನ ಮಾತುಗಳನ್ನು ಆಳವಾಗಿ ಯೋಚಿಸಿ ತಲೆದೂಗಿದ.

ಈಗ ಕೇಸಿನಲ್ಲಿ ಸಡಿಲವಾದ ಎರಡು ಕೊನೆಗಳು ಉಳಿದುಕೊಂಡಿದ್ದವು. ಒಂದು ಗೋವಿಂದ್, ಮತ್ತು ಅನೂಪ್ ಬಗ್ಗೆ ಇನ್ನಶ್ಟು ಮಾಹಿತಿ ಕಲೆಹಾಕುವುದು, ಮತ್ತು ಸಂಜಯ್ ಕರೆಗಳ ಪಟ್ಟಿಯಲ್ಲಿ ಸಿಕ್ಕ ಆ ಹೆಸರಿಲ್ಲದ ಮೊಬೈ ಲ್ ಅಂಕಿ ಹುಡುಕುವುದು. ಆ ಅಂಕಿಯನ್ನು ಆದಶ್ಟು ಬೇಗ ಪತ್ತೆ ಹಚ್ಚುತ್ತೇನೆ ಎಂದು ಗಿರೀಶ್ ಹೇಳಿದ. ಹಾಗೇ ಗೋವಿಂದ್ ಮತ್ತು ಅನುಪ್ ಹಿಂದೆ ಒಬ್ಬ ಪೇದೆಯನ್ನು ಬಿಡುತ್ತೇನೆ ಎಂದ. ನಾನು ಬಂದ ಕೆಲಸ ಮುಗಿದಿತ್ತು. ಇನ್ನು ನಾನು ಕೇಸಿನ ತನಿಕೆಯಲ್ಲಿ ತಲೆ ಹಾಕೊಲ್ಲ, ಹಾಗೇನಾದರೂ ನನ್ನ ಜೊತೆ ಮಾತಾಡಬೇಕಿದ್ದರೆ ಕರೆ ಮಾಡಲು ತಿಳಿಸಿ ಅಲ್ಲಿಂದ ಹೊರಟುಬಂದೆ.

*********************************************************

ಒಂದು ದಿನ ಕಳೆದಿತ್ತು. ಶನಿವಾರ ಬೆಳಗ್ಗೆ ಹನ್ನೊಂದರ ಸುಮಾರಿಗೆ ಗಿರೀಶ್ ಕರೆ ಮಾಡಿದ. ಕೇಸಿನಲ್ಲಿ ದೊಡ್ಡ ತಿರುವು ಸಿಕ್ಕಿತೆಂದು, ಮತ್ತು ಹೆಚ್ಚು ಕಮ್ಮಿ ಕೇಸು ಕ್ಲೋಸ್ ಎಂದು ಹೇಳಿದ.

“ಪುಲಕೇಶಿ… ಅದೇ ಆ ಒಂದು ಮೊಬೈಲ್ ನಂಬರ್ ಇತ್ತಾಲ್ಲಾ… ಅದನ್ನಾ ಟ್ರಾಕ್ ಮಾಡಿ ಒಬ್ಬನ್ನಾ ಹಿಡಿದ್ವಿ. ಅವ್ನು ಮಂಜಾ ಅಂತಾ… ರೌಡಿ ಶೀಟರ್… ಎರಡು ಕಿಡ್ನಾಪಿಂಗ್ ಕೇಸು ಅವ್ನ ಮೇಲಿದೆ. ಅವ್ನನ್ನಾ ಸ್ಟೇಶನ್ನಿಗೆ ಕರಕೊಂಡು ಬಂದು ಸ್ವಲ್ಪ ವರ‍್ಕ್ ಔಟ್ ಮಾಡಿದ ಮೇಲೆ ಬಾಯಿ ಬಿಟ್ಟ”

“ಏನಂತೆ?”

“ಸಂಜಯ್ ಮತ್ತು ಅವನ ಗೆಳೆಯ ಗೋವಿಂದ್, ಇವನ ಜೊತೆ ಸೇರಿಕೊಂಡು ಸುದಾಳನ್ನಾ ಕಿಡ್ನಾಪ್ ಮಾಡೋ ಪ್ಲಾನ್ ಮಾಡಿದ್ರಂತೆ. ಆದ್ರೆ ಕಿಡ್ನಾಪ್ ಮಾಡೋ ಜಾಗದಲ್ಲಿ ಮಂದಿ ಇದ್ದಿದ್ದರಿಂದ ಪ್ಲಾನು ವರ‍್ಕ್ ಆಗ್ದೆ, ಸುದಾ ಇವರ ಕಯ್ಯಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾಳೆ. ಇದರಲ್ಲಿ ಸಂಜಯ್ ಕಯ್ವಾಡ ಇದೆ ಅಂತಾ ಅವಳಿಗೆ ಗೊತ್ತಾಗಿಲ್ಲ”

“ಒಹ್ ಗಾಡ್! ಯಾವತ್ತು ಇದೆಲ್ಲಾ ಆಗಿದ್ದು?”

“ಹೋದ ಬುದವಾರ. ಗೋವಿಂದನನ್ನೂ ಎಳಕೊಂಡು ಬಂದು ಒಂದೆರಡು ಬಾರಿಸಿದ ಮೇಲೆ ನಿಜ ಒಪ್ಕೊಂಡ. ಅವನೇ ಸಂಜಯ್ ಗೆ ಈ ಪ್ಲಾನ್ ಹೇಳಿಕೊಟ್ಟಿದ್ದಂತೆ”

“ಇನ್ನೇನಾದ್ರು?”

“ಹೂಂ… ಇನ್ನೂ ಇದೆ… ಈ ಮಂಜಾ, ಸಂಜಯ್ ಗೆ ಬ್ಲಾಕ್ ಮೇಲ್ ಮಾಡೋದಕ್ಕೆ ಶುರುಮಾಡಿದ್ದಾನೆ. ದುಡ್ಡು ಕೊಡದಿದ್ರೆ ಅರಸ್ ಅವರಿಗೆ ಎಲ್ಲ ವಿಶ್ಯ ಹೇಳಿಬಿಡ್ತೀನಿ ಅಂತಾ”

“ಆಮೇಲೆ?”

“ಸಂಜಯ್ ದುಡ್ಡು ಕೊಟ್ಟಿಲ್ಲ… ಹಾಗಾಗಿ ಅರಸ್ ಅವರಿಗೆ ಒಂದು ಪತ್ರ ಬರೆದು ವಿಶಯ ತಿಳಿಸಿದ್ದಾನೆ ಬೂಪ”

ಗಿರೀಶ್ ಮಾತಾಡುತ್ತಿದ್ದತೆಯೇ ನನಗೆ ಕೇಸಿನ ವಿವರಗಳೆಲ್ಲಾ ಕಣ್ಣ ಮುಂದೆ ಬಂದು ಏನು ನಡೆದಿರಬಹುದು ಎಂದು ನಿಚ್ಚಳವಾಗಿ, ನನ್ನ ಪ್ರಶ್ನೆಗಳಿಗೆ ಎಲ್ಲ ಉತ್ತರಗಳೂ ಸಿಕ್ಕವು. ಗಿರೀಶ್ ಇನ್ನೂ ಮಾತಾಡುತ್ತಲೇ ಇದ್ದ,
“ನನಗನಿಸೋ ಪ್ರಕಾರ, ಮಂಜಾ ಅವತ್ತು ಸಂಜಯ್ ಮನೆಗೆ ಹೋಗಿ ದುಡ್ಡು ಕೇಳಿದ್ದಾನೆ. ಇಬ್ಬರ ನಡುವೆ ಜಗಳವಾಗಿ ಆ ಹೂದಾನಿಯಿಂದ ಸಂಜಯ್ ತಲೆಗೆ ಹೊಡೆದು, ಬಾಗಿಲು ಲಾಕ್ ಮಾಡಿಕೊಂಡು ಇವ್ನು ಪರಾರಿಯಾಗಿದ್ದಾನೆ. ತನ್ನ ಜೊತೆ ಇನ್ನಿಬ್ಬರನ್ನು ಕರೆದುಕೊಂಡು ಬಂದಿರಬಹುದು, ಬುರ‍್ಕಾ ವೇಶದಲ್ಲಿ, ಅಲ್ವಾ?”

“ಗಿರೀಶ್, ನನಗೆ ಒಂದೇ ಮಾಹಿತಿ ಬೇಕು, ಕೊಡ್ತೀರಾ?”

“ಹೇಳಿ”

“ಹೋದ ಶನಿವಾರ ಸಂಜೆ ಎಂಟು ಗಂಟೆ ಸುಮಾರಿಗೆ ಸಂಜಯ್ ಮೊಬಾಯಿಲಿಗೆ ಒಂದು ಕರೆ ಬಂದಿತ್ತು. ಅದು ಯಾರದೆಂದು ಹೇಳ್ತೀರಾ?”

ಗಿರೀಶ್ ಕರೆಗಳ ವಿವರ ತಡಕಾಡಿ ಹೇಳಿದ, “ಅವತ್ತು ಏಳೂವರೆಯಿಂದ ಎಂಟೂವರೆ ನಡುವೆ ಅವ್ನಿಗೆ ಒಂದೇ ಕಾಲ್ ಬಂದಿದೆ. ಆಂ… ಒಂಬತ್ತು ಒಂಬತ್ತು… ಅರೆ! ಇದು ಸುದಾ ನಂಬರ್. ಸುದಾ ಅವರೇ ಕಾಲ್ ಮಾಡಿರೋದು”

ನಿಂತಲ್ಲೆ ಜಿಗಿದೆ. “ತುಂಬಾ ತ್ಯಾಂಕ್ಸ್!” ಎಂದೆ.

“ಯಾಕೆ ಏನಾಯ್ತು?”

“ಏನಿಲ್ಲ. ನೀವು ಮುಂದುವರೆಸಿ”

“ಅದೇ… ಈ ಮಂಜ ನೋಡಿದ್ರೆ ಸಂಜಯ್ ಸತ್ತಿದ್ದು ನನಗೆ ಗೊತ್ತೇ ಇಲ್ಲ ಅಂತಾನೆ. ಇನ್ನೊಂದ್ ಸ್ವಲ್ಪ ವರ‍್ಕ್ ಔಟ್ ಮಾಡಿದ್ರೆ ನಿಜ ಒಪ್ಕೋಬಹುದು”

“ಸರಿ. ಇವತ್ತು ಸಂಜೆ ನನ್ನನ್ನು ಹೇಗಾದರೂ ಬೇಟಿ ಮಾಡಿ . ನನ್ನ ಕತೆಯನ್ನ ಪೂರ‍್ತಿ ಮಾಡ್ತೀನಿ”

“ಯಾವ್ ಕತೆ?”

“ಸಿಕ್ಕಾಗ ಹೇಳ್ತೀನಿ”
*********************************************************

(ಮುಂದುವರೆಯುವುದು : ಕೊನೆಯ ಕಂತು ನಾಳೆಗೆ)

( ಚಿತ್ರ ಸೆಲೆ: criticalindiegamer.com )

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: