ಮೂಡಣ ಯುರೋಪಿನ ಹೆಬ್ಬಾಗಿಲು ಪ್ರಾಗ್

– ಜಯತೀರ‍್ತ ನಾಡಗವ್ಡ.

dsc_0400

ಮದ್ಯ ಮತ್ತು ಮೂಡಣ ಯುರೋಪಿನ ಪ್ರಮುಕ ನಾಡು ಜೆಕ್ ಗಣನಾಡು. ಮುಂಚೆ ಜೆಕೊಸ್ಲೊವಾಕಿಯಾ ಎಂದು ಕರೆಯಲ್ಪಡುತ್ತಿದ್ದ ಈ ನಾಡು, ಜೆಕ್ ಮತ್ತು ಸ್ಲೊವಾಕಿಯಾಗಳು ಬೇರ‍್ಪಟ್ಟ ನಂತರ ಜೆಕ್ ಗಣನಾಡಾಗಿ ಬೆಳೆದಿದೆ. ಜೆಕ್ ನಾಡಿನ ನೆಲೆವೀಡು ಪ್ರಾಗ್ ಬಲು ಅಂದದ ಊರು. ಮೂಡಣ ಯುರೋಪಿನ ಹೆಬ್ಬಾಗಿಲೆಂದೇ ಹೆಸರು ಪಡೆದಿರುವ ಪ್ರಾಗ್ ಊರು ಯುರೋಪ್ ಒಕ್ಕೂಟದ ದೊಡ್ಡ ಊರುಗಳಲ್ಲೊಂದು. ನಮ್ಮ ನಾಗರೀಕತೆಗಳು ಹೆಚ್ಚಾಗಿ ಹೊಳೆ ದಡದಲ್ಲಿ ಬೆಳೆದುಕೊಂಡುಬಂದಂತವು. ಇದಕ್ಕೆ ಪ್ರಾಗ್ ಊರು ಕೂಡ ಹೊರತಾಗಿಲ್ಲ. ಪ್ರಾಗ್, ವ್ಲಾಟ್ವಾ ಹೊಳೆ ತಟದಲ್ಲಿ ನೆಲೆಸಿದೆ. ಇಲ್ಲಿಯ ಮಂದಿಯ ತಾಯ್ನುಡಿ ಜೆಕ್. ಜೆಕ್ ನುಡಿಗರು ಈ ಊರಿಗೆ ಪ್ರಾಹಾ ಎನ್ನುವರು. ವಿಶ್ವದ ಬೇರೆಡೆ ಕೆಲವರು ಇದನ್ನು ಪ್ರೇಗ್ ಎಂದು ಕರೆಯುವುದುಂಟು. ವ್ಲಾಟ್ವಾ ತೀರದ ಮೇಲೆ ನೆಲೆಸಿರುವ ಪ್ರಾಗ್ ಸಾಕಶ್ಟು ಕಣ್ ಮನ್ಸೆಳೆಯುವ ತಾಣಗಳನ್ನು ಹೊಂದಿದೆ. ಪ್ರಾಗ್ ಊರಿನತ್ತ ಒಂದು ಸುತ್ತು ತಿರುಗಾಡೋಣ ಬನ್ನಿ.

ಪ್ರಾಗ್ ಕಾಸಲ್ (Prague Castle):

ಪ್ರಾಗ್ ಊರಿನಲ್ಲಿ ನೋಡಲೇಬೇಕಾದ ತಾಣವೆಂದರೆ ಇಲ್ಲಿನ ಕಾಸಲ್. ಕಾಸಲ್‌ಗಳು ಇಲ್ಲಿನ ದೊರೆಗಳ ಕೋಟೆಮನೆಗಳು. ಕಾಸಲ್‌ಗಳಲ್ಲಿ ತಮ್ಮ ಅರಮನೆ, ಉಗ್ರಾಣ, ತೋಟ, ಕಾಳಗ ಪಡೆ ತಂಗುವ ದಾಣ, ಚರ‍್ಚ್, ಪ್ರಾರ‍್ತನಾ ಕೋಣೆ ಹೀಗೆ ಎಲ್ಲವೂ ಇರುತ್ತಿದ್ದವು. ಶತ್ರುಗಳು ದಾಳಿ ಮಾಡಿದಾಗ ಪಾರಾಗಲು ಗುಟ್ಟಾದ ದಾರಿಗಳನ್ನು ಕಾಸಲ್ ಹೊಂದಿರುತ್ತಿದ್ದವು.  ಪ್ರಾಗ್ ಕಾಸಲ್‌ನಲ್ಲಿ ಹೆಚ್ಚು ಕಡಿಮೆ ಇವೆಲ್ಲವೂ ನೋಡ ಸಿಗುತ್ತವೆ. ಕಾಸಲ್ ಒಳಗೆ ಬರುತ್ತಿದ್ದಂತೆ ಎದುರಿಗೆ ದೊಡ್ಡ ಹೆಬ್ಬಾಗಿಲು ನಿಮಗೆ ನಲ್ಬರವು ನೀಡುತ್ತದೆ. ಹೆಬ್ಬಾಗಿಲು ದಾಟಿ ಒಳಗೆ ಬಂದರೆ ಕಾಸಲ್ ನಡುಬಾಗದಲ್ಲಿ ಸೆಂಟ್ ವೈಟಸ್ ಕೆತೆಡ್ರಲ್ (Saint Vitus Cathedral) ಎಂಬ ಚರ‍್ಚ್ ಕಾಣಸಿಗುತ್ತದೆ. ಸೆಂಟ್ ವೈಟಸ್ ಕೆತೆಡ್ರಲ್ ಒಳಗೆ ಸೆಂಟ್ ವೈಟಸ್ ಅಲ್ಲದೇ, ಸೆಂಟ್ ವೆನ್ಸೆಸ್ಲಾಸ್ (St.Wenceslas), ಸೆಂಟ್ ಅಡಾಲ್ಬರ‍್ಟ್ (St.Adalbert) ಮತ್ತು ಸೆಂಟ್ ಜಾನ್ (St.John) ಇವರುಗಳ ಚರ‍್ಚ್ ಕೂಡ ಇದೆ. ಹಿಂದೆ, ಇಲ್ಲಿಯೇ ಬೊಹೇಮಿಯಾದ ಅರಸು,ರಾಣಿಯರಿಗೆ ಕಿರೀಟ ತೊಡಿಸಿ ಪಟ್ಟಕ್ಕೇರಿಸುವ ಸಮಾರಂಬ ನಡೆಯುತ್ತಿತ್ತಂತೆ. ಅಂದಿನ ಅರಸು, ರಾಣಿಯರು ತೊಡುತ್ತಿದ್ದ ಕಿರೀಟ ಮುಂತಾದ ಒಡವೆಗಳನ್ನು ಇಲ್ಲಿ ಕಾಣಬಹುದು. ಇಸವಿ 1344ರಲ್ಲಿ ಈ ಕೆತೆಡ್ರಲ್ ಕಟ್ಟಲು ಆರಂಬಿಸಿ ಸುಮಾರು 600 ವರುಶಗಳ ನಂತರ, 1929ರಲ್ಲಿ ಕಟ್ಟುವಿಕೆ ಕೊನೆಗೊಳಿಸಲಾಯಿತಂತೆ. ಕೆತೆಡ್ರಲ್ ಪಕ್ಕದಲ್ಲಿಯೇ ಗ್ರೇಟ್ ಸೌತ್ ಟವರ್ ಆಪ್ ಕೆತೆಡ್ರಲ್ ಇದೆ. ಈ ಗೋಪುರ ಸುಮಾರು 100 ಮೀಟರುಗಳಶ್ಟು ಎತ್ತರವಾಗಿದ್ದು, ಅದರ ಮೇಲಿಂದ ಪ್ರಾಗ್‌ ಊರಿನ ಚೆಂದದ ನೋಟ ನೋಡುಗರಿಗೆ ಹಬ್ಬ. ಈ ಗೋಪುರದ ಮೇಲ್ಬಾಗದಲ್ಲಿ 15 ಟನ್ ತೂಕದ ಬಾರಿ ಗಾತ್ರ ಗಂಟೆಯೊಂದಿದೆ. “ಜಿಕ್ಮಂಡ್ (Zikmund)” ಹೆಸರಿನ ಈ ಗಂಟೆ ಜೆಕ್ ನಾಡಿನಲ್ಲೇ ಅತಿ ದೊಡ್ಡ ಗಂಟೆ. ಜೆಕ್ ನಾಡಿನ ಹಿನ್ನಡವಳಿ ಮೆಲುಕು ಹಾಕಿದಾಗ ಇದು ಬಹುಪಾಲು ಬೊಹೇಮಿಯಾ ಅರಸರ ಆಳ್ವಿಕೆಯಲ್ಲಿತ್ತೆಂದು ತಿಳಿದು ಬರುತ್ತವೆ. ಸೆಂಟ್ ವೈಟಸ್ ಚರ‍್ಚ್ ಒಳಗಡೆ, ಗೋಪುರದ ಗಂಟೆ ಮುಂತಾದೆಡೆ ಬೊಹೇಮಿಯಾ ಕಾಲದ ಕೆತ್ತನೆಗಳು ಇದರ ಕುರುಹುಗಳಾಗಿ ನಿಂತಿವೆ.  ಕೆಲವು ಹೆಜ್ಜೆಗಳು ದೂರ ನಡೆದರೆ ಸೆಂಟ್ ಜಾರ‍್ಜ್ ಬೆಸಿಲಿಕಾ (St.George Basilica) ಎಂಬ ಇನ್ನೊಂದು ಚರ‍್ಚ್ ನೋಡ ಸಿಗುತ್ತದೆ. ಯುವರಾಜ ವ್ರಾತಿಸ್ಲಾವ್(Vratislav) ಈ ಚರ‍್ಚಿನ ಬೆಳವಣಿಗೆಗೆ ಹೆಚ್ಚಿನ ಗಮನ ನೀಡಿದನೆಂದು ಹೇಳಲಾಗುತ್ತದೆ. ಸೆಂಟ್ ವೆನ್ಸೆಸ್ಲಾಸ್‌ನ ತಂದೆಯಾಗಿದ್ದ ಈತನ ಸಮಾದಿಯು ಇಲ್ಲಿ ಕಂಡು ಬರುತ್ತದೆ. ಬೊಹೇಮಿಯಾದ ಸಾಮ್ರಾಜ್ಯ ಜೆಕ್ ನಾಡಿನಲ್ಲಿ ಆಳಿದ ಪ್ರಮುಕ ಅರಸು ಮನೆತನ. ನೂರಾರು ವರುಶಗಳವರೆಗೆ ಬೊಹೇಮಿಯಾದ ಅರಸರು ಜೆಕ್ ನಾಡನ್ನು ಆಳಿದ್ದಾರೆ. ರೋಮನ್ ಸಾಮ್ರಾಜ್ಯದ ಅಂಗವಾಗಿದ್ದ ಬೊಹೇಮಿಯಾ ಅರಸು ಮನೆತನ, ಜೆಕ್ ಅಶ್ಟೇ ಅಲ್ಲದೇ ಮದ್ಯ ಮೂಡಣ ಯುರೋಪ್‌ನಲ್ಲಿ ಆಳ್ವಿಕೆ ಮಾಡಿ ಕಲೆ, ಕಟ್ಟಡದರಿಮೆಗೆ ಸಾಕಶ್ಟು ಕೊಡುಗೆ ನೀಡಿದೆ.

dsc_0378

(ಪ್ರಾಗ್ ಕಾಸಲ್‌ನ ಹೆಬ್ಬಾಗಿಲು)

ಪ್ರಾಗ್ ಕಾಸಲ್ ಇನ್ನೊಂದು ವಿಶೇಶವೆಂದರೆ ಇಲ್ಲಿನ ಕಾವಲುಪಡೆ ನಡೆಸುವ ಶಿಸ್ತಿನ ಮೆರವಣಿಗೆ. ಪ್ರತಿಗಂಟೆಗೊಮ್ಮೆ, ಹೆಬ್ಬಾಗಿಲು ಕಾಯುವ ಕಾವಲು ಪಡೆ, ಕಾಸಲ್‌ನ ಬಲಬಾಗದ ಬಾಗಿಲು ಕಾಯುವ ಪಡೆ ಅದಲು ಬದಲುಗೊಳ್ಳುತ್ತಾರೆ. ಕಾಳಗಪಡೆಗಳು ನಡೆಸುವ ಬದ್ದತೆಯನ್ನೇ ರೂಡಿಸಿಕೊಂಡಿರುವ ಇವರು ಬಾವುಟಗಳನ್ನು ಬದಲಾಯಿಸುತ್ತ ತುಂಬಾ ಶಿಸ್ತಿನಿಂದ ನಡೆಸುವ ಮೆರವಣಿಗೆ ನೋಡುಗರಿಗೆ ಹಬ್ಬ. ಬೇಸಿಗೆ, ಚಳಿಗಾಲಗಳಿಗೆ ತಕ್ಕಂತೆ ಕಾವಲು ಪಡೆಯ ಈಡುಡುಗೆಯು (Uniform) ಬದಲಾಗುತ್ತದೆ. ಕಾಸಲ್‌ನ ಬಲಬಾಗದ ಬಾಗಿಲು(ಈಸ್ಟ್ ಗೇಟ್) ದಾಟಿದರೆ ಹೊರಗಡೆ ಸದರ‍್ನ್ ಗಾರ‍್ಡನ್ಸ್ ಎಂಬ ಬಯಲು ತೋಟ ಕಂಡು ಬರುತ್ತದೆ. ಈ ತೋಟದಲ್ಲಿ ಸುತ್ತಾಡಲು ಬರುವವರಿಗೆಂದೇ ಕೂರಲು ಬೆಂಚ್‌ಗಳನ್ನು ಮಾಡಿದ್ದಾರೆ. ಈ ತೋಟವನ್ನು ಮೂರು ಬಾಗವಾಗಿ ಮಾಡಲಾಗಿದೆ. ಪ್ರಾಗ್ ಕಾಸಲ್‌ನಲ್ಲಿ ಆಳಿದ ಮೂವರು ದೊರೆಗಳ ಆಳ್ವಿಕೆಯ ಹೊತ್ತಿನಲ್ಲಿ ಇವುಗಳನ್ನು ಬೆಳೆಸಿದ್ದರಿಂದ ಅವರು ಹೆಸರುಗಳನ್ನು ಪಡೆದಿವೆ. ಈ ತೋಟದ ಒಂದು ಬದಿ ಕಾಪಿ, ತಿಂಡಿ ಸವಿಯಲು ಚಿಕ್ಕ ಮಳಿಗೆಗಳು ಕಂಡು ಬರುತ್ತವೆ.

dsc_0399

(ಕಾಸಲ್‌ನ ಬಲಬಾಗದ ಬಾಗಿಲು)

ಪ್ರಾಗ್ ಕಾಸಲ್‌ನಲ್ಲಿ ಎರಡು ಅರಮನೆಗಳಿವೆ. ಸೌತ್ ಕೆತೆಡ್ರಲ್ ಟವರ್ ಬಲಕ್ಕೊಂದು ರಾಯಲ್ ಅರಮನೆ(Royal Palace) ಮತ್ತು  ಕಾಸಲ್‌ನ ಹಿಂದುಗಡೆ ರೊಸನ್‌ಬರ‍್ಗ್ ಅರಮನೆ(Rosenberg Palace) ಗಳಿವೆ. ರಾಯಲ್ ಅರಮನೆ ಇವೆರಡರಲ್ಲಿ ಹಳೆಯದು. ನಾಲ್ಕನೇ ಚಾರ‍್ಲ್ಸ್ ದೊರೆಯ ಆಳ್ವಿಕೆಯಲ್ಲಿ ಇದರ ಅರಮನೆಯ ಕಟ್ಟುವಿಕೆ ಪೂರ‍್ತಿಗೊಳಿಸಲಾಯಿತಂತೆ. ನಂತರ ಬಂದ ಅರಸರು ಈ ಅರಮನೆಯನ್ನು ಬೆಳೆಸುತ್ತ ಸಾಗಿದರಂತೆ. ವ್ಲಾಡಿಸ್ಲಾವ್ ದೊರೆಯು ಈ ಅರಮನೆಯನ್ನು ದೊಡ್ಡದಾಗಿಸಿ ಮರು ಕಟ್ಟಿದನಂತೆ. ಹೆಚ್ಚಾಗಿ ಕಟ್ಟಿಗೆಯನ್ನು ಬಳಸಿ ಕಟ್ಟಿದ ಅರಮನೆಗಳಲ್ಲಿ ಇದು ಒಂದು. ಒಳಗೆ ದೊಡ್ಡದಾದ ಸಬೆ, ಸಮಾರಂಬಗಳನ್ನು ನಡೆಸುವಂತ ಕೋಣೆಯೊಂದಿಲ್ಲಿದೆ. ಇದಕ್ಕೆ ವ್ಲಾಡಿಸ್ಲಾವ್ ಹಾಲ್ (Vladislav Hall) ಎಂದು ಹೆಸರಿಡಲಾಗಿದೆ. ಇಲ್ಲಿಯೂ ಕೂಡ ಅರಸು,ಅರಸಿಯರನ್ನು ಪಟ್ಟಕ್ಕೇರಿಸಿ ಕಿರೀಟ ತೊಡಿಸುವ ಸಮಾರಂಬಗಳು ನಡೆಯುತ್ತಿದ್ದವು. ಹಳೆಯ ಯುರೋಪ್‌ನ ಕಟ್ಟಡದರಿಮೆಯನ್ನು(Architecture) ಇಲ್ಲಿ ನೋಡಬಹುದಾಗಿದೆ. ರೊಸೆನ್‌ಬರ‍್ಗ್ ಅರಮನೆಯು ಮುಂಚೆ ರೊಸೆನ್‌ಬರ‍್ಗ್ ಕುಟುಂಬಕ್ಕೆ ಸೇರಿತ್ತು. ಸುಮಾರು 16ನೇ ನೂರೇಡಿನ ಹೊತ್ತಿಗೆ 2ನೇ ರುಡಾಲ್ಪ್ (Rudolf-II) ಅರಸನು ಇದನ್ನು ತನ್ನ ತೆಕ್ಕೆಗೆ ತೆಗೆದುಕೊಂಡನು. ಈ ಎರಡು ಅರಮನೆಗಳಲ್ಲಿ ಆ ಹೊತ್ತಿನ ದೊರೆಗಳು ಉಡುತ್ತಿದ್ದ ಉಡುಗೆಗಳು, ಅವರು ಬಳಸುತ್ತಿದ್ದ ಆಯುದ, ಮತ್ತಿತರೆ ವಸ್ತುಗಳನ್ನು ತೋರ‍್ಪಿಗೆ ಇಡಲಾಗಿದೆ.

ಕಾಸಲ್‌ನ ಬಡಗಣ ದಿಕ್ಕಿನಲ್ಲಿ ಗೋಲ್ಡನ್ ಲೇನ್ (Golden Lane) ಹೆಸರಿನ ಬೀದಿಯಿದೆ. ಇಲ್ಲಿ ಸಾಲು ಸಾಲಾಗಿ ಮನೆಗಳು ಕಂಡು ಬರುತ್ತವೆ. ಈ ಮನೆಗಳಲ್ಲಿ ಸೈನಿಕರು, ಅರಸನ ಆಳುಗಳು, ಕಮ್ಮಾರರು ನೆಲೆಸಿರುವ ಮನೆಗಳಾಗಿರುತ್ತಿದ್ದವು. ಈಗಲೂ ಗಟ್ಟಿ ಮುಟ್ಟಾಗಿ ಕಂಡು ಬರುವ ಈ ಮನೆಗಳಲ್ಲಿ ಕೆಲವು, ನೆನೆಹಗಳನ್ನು(souvenior) ಮಾರಲ್ಪಡುವ ಅಂಗಡಿಗಳಾಗಿವೆ. ಅರಸರ ಹೊತ್ತಿನಲ್ಲಿ ಬಂಗಾರದ ಒಡವೆ ತಯಾರಿಸುತ್ತಿದ್ದ ಕಮ್ಮಾರರು ಇಲ್ಲಿ ನೆಲೆಸಿದ್ದ ಕಾರಣ ಇದಕ್ಕೆ ಗೋಲ್ಡ್ ಸ್ಮಿತ್ ಲೇನ್ ಎಂದು ಕರೆಯಲಾಗುತ್ತಿತ್ತು. ದಿನಗಳೆದಂತೆ ಅದು ಚುಟುಕಾಗಿ ಗೋಲ್ಡ್ ಲೇನ್ ಆಯಿತು. ಕೆತೆಡ್ರಲ್‌ನ ಬಳಿ ಸೌತ್ ಟವರ್ ಇರುವಂತೆ, ಎಡಬಾಗದ ಹೊರಕ್ಕೆ ಮಿಹುಲ್ಕಾ(Mihulka) ಪೌಡರ್ ಟವರ್ ತಲೆಯೆತ್ತಿ ನಿಂತಿದೆ. ಇಲ್ಲಿ ಕಾಳಗಕ್ಕೆ ಬೇಕಾಗುವ ಸಿಡಿಮದ್ದಿನ ಪುಡಿ ಮತ್ತು ತೋಪುಗಳನ್ನು ತಯಾರಿಸಿಡಲಾಗುತ್ತಿತ್ತು. ಇದರಿಂದಲೇ ಇದು ಪೌಡರ್ ಟವರ‍್ ಎಂಬ ಕ್ಯಾತಿ ಪಡೆಯಿತು. ಜಗತ್ತಿನ ಹಳಮೆಯ ಕಾಸಲ್‌, ಇದೆಂದು ಗಿನ್ನಿಸ್ ದಾಕಲೆ ಹೊಂದಿರುವ ಪ್ರಾಗ್ ಕಾಸಲ್, ಇದೀಗ ಜೆಕ್ ಗಣರಾಜ್ಯದ ಅದ್ಯಕ್ಶರ ಮನೆಯಾಗಿರುತ್ತದೆ.

ಚಾರ‍್ಲ್ಸ್ ಸೇತುವೆ (Charles Bridge):

ಪ್ರಾಗ್ ಎಂದ ಕ್ಶಣ ತಟ್ಟನೆ ನೆನಪಿಗೆ ಬರುವುದು ಚಾರ‍್ಲ್ಸ್ ಸೇತುವೆಯ ಹೆಸರು. 1342ರ ಹೊತ್ತಿನಲ್ಲಿ ಪ್ರಾಗ್‌ನಲ್ಲಿ ವ್ಲಾಟ್ವಾ ಹೊಳೆ, ನೆರೆಗೆ ತುತ್ತಾಗಿತ್ತಂತೆ. ಹೊಳೆ ದಾಟಲು ಇದ್ದ ಜುಡಿತ್ ಸೇತುವೆ(Judith Bridge) ಹಾನಿಗೊಳಗಾಯಿತು. ಮುಂದೆ 1357ರಲ್ಲಿ ನಾಲ್ಕನೇ ಚಾರ‍್ಲ್ಸ್ ಈ ಸೇತುವೆಯ ಮರುಕಟ್ಟುವಿಕೆಯ ಕೆಲಸಕ್ಕೆ ಮುಂದಾದ. 1402ರಲ್ಲಿ ಈ ಸೇತುವೆ ಪೂರ‍್ತಿಯಾಗಿ ಕಟ್ಟಲಾಯಿತಂತೆ. ಆಗ ಇದು ಸ್ಟೋನ್ ಬ್ರಿಜ್ ಎಂಬ ಹೆಸರು ಪಡೆದಿತ್ತು. ನಾಲ್ಕನೇ ಚಾರ‍್ಲ್ಸ್ ದೊರೆ ಈ ಸೇತುವೆ ಕಟ್ಟುವಿಕೆಗೆ ನೀಡಿದ ಕೊಡುಗೆಗಾಗಿ 1870ರಲ್ಲಿ ಈತನ ಹೆಸರನ್ನು ಇಡಲಾಯಿತು. ಇಂಗ್ಲಿಶ್‌ನಲ್ಲಿ ಚಾರ‍್ಲ್ಸ್ ಬ್ರಿಜ್ ಎಂದೇ ಕ್ಯಾತಿ ಪಡೆದಿರುವ ಈ ಸೇತುವೆ ಮಂದಿ ಓಡಾಟಕ್ಕೆ ಮಾತ್ರ, ಬಂಡಿಗಳನ್ನು ಇಲ್ಲಿ ಓಡಾಡಿಸುವಂತಿಲ್ಲ. ಚಾರ‍್ಲ್ಸ್ ಬ್ರಿಜ್‌ನ ವಿಶೇಶವೆಂದರೆ ಸೇತುವೆಯ ಎರಡು ಬದಿಯಲ್ಲಿ, ಒಂದರ ಪಕ್ಕ ಒಂದೆಂಬಂತೆ 30 ಮಹಾ ಸಂತರ, ಅರಸರ, ಗಣ್ಯರ ಮೂರ‍್ತಿಯನ್ನು ನಿಲ್ಲಿಸಲಾಗಿದೆ. ಈ ಮೂರ‍್ತಿಗಳು ಚಾರ‍್ಲ್ಸ್ ಸೇತುವೆಯ ಮೆರಗು ಹೆಚ್ಚಿಸಿವೆ. ದಿನವೂ ಸಾವಿರಾರು ಮಂದಿ ಪಯಣಿಗರು ಇದನ್ನು ನೋಡಲು ಬರುತ್ತಾರೆ. ಚಾರ‍್ಲ್ಸ್ ಸೇತುವೆ ಮೇಲೆ ಹಲವಾರು ಓಡುತಿಟ್ಟಗಳನ್ನು(Movies) ಮಾಡಲಾಗಿದೆ. 2011-12ರಲ್ಲಿ ತೆರೆಕಂಡ ಹೆಸರುವಾಸಿ ಮಿಶನ್ ಇಂಪಾಸಿಬಲ್-4 (Mission Impossible-4) ಓಡುತಿಟ್ಟದಲ್ಲಿ ಚಾರ‍್ಲ್ಸ್ ಸೇತುವೆ ಕಾಣಿಸಿಕೊಂಡಿದೆ. ಯಾವತ್ತಿಗೆ ಮಂದಿಯ ಓಡಾಟದಿಂದ ಗಿಜಿಗಿಡುವ ಈ ಸೇತುವೆ ಪ್ರಾಗ್‌ನ ಹಳಮೆಯ ಸಿರಿತನ ಎತ್ತಿತೋರಿಸುತ್ತದೆ.

charles-bridge

(ಚಾರ‍್ಲ್ಸ್ ಸೇತುವೆ)

ವೆನ್ಸೆಸ್ಲಾಸ್ ಸ್ಕ್ವೇರ್ (Wenceslas Square):

ವೆನ್ಸೆಸ್ಲಾಸ್ ಸ್ಕ್ವೇರ್ ಪ್ರಾಗ್ ಊರಿನ ದೊಡ್ಡ ಮಾರುಕಟ್ಟೆ. ವೆನ್ಸೆಸ್ಲಾಸ್ ಸ್ಕ್ವೇರ್ 1.5 ಕಿಮೀಗಳಶ್ಟು ಉದ್ದದ ಬೀದಿ. ಬೀದಿ ಎರಡು ಬದಿಯಲ್ಲಿ ಸಾಲು ಸಾಲು ಅಂಗಡಿಗಳು, ದೊಡ್ಡ ಕೂಟಗಳ ಕೆಲಸದೆಡೆಗಳು, ತಿಂಡಿ ತಿನಿಸಿನ ಹೋಟೆಲ್‌ಗಳು, ಬ್ಯಾಂಕ್‌ಗಳು, ಕಲೆಮನೆಗಳು(theatre) ಕಂಡುಬರುತ್ತವೆ. ಮಯೂರ ಹೆಸರಿನ ಬಾರತದ ತಿಂಡಿ ತಿನಿಸಿನ ಹೋಟೆಲ್ ಕೂಡ ಇಲ್ಲುಂಟು. ಶಾಪಿಂಗ್ ಒಲವಿಗರ ನೆಚ್ಚಿನ ತಾಣವಿದು. ಬೀದಿಯ ಮದ್ಯದಲ್ಲಿ ಸೊಬಗಿನ ಹೂತೋಟ ಬೆಳೆಸಲಾಗಿದೆ. ಹಳದಿ, ಗುಲಾಬಿ ಬಣ್ಣದ ವಿವಿದ ಬಗೆಯ ಹೂವುಗಳು ವೆನ್ಸೆಸ್ಲಾಸ್ ಸ್ಕ್ವೇರ್‌ನ ಅಂದ ಇಮ್ಮಡಿಗೊಳಿಸಿವೆ. ಈ ಬೀದಿ ಕೊನೆಯಲ್ಲಿ ಅಂದರೆ ತೆಂಕಣ ಬಾಗದಲ್ಲಿ ಬೊಹೇಮಿಯಾದ ಪ್ರಮುಕ ಸಂತರಲ್ಲೊಬ್ಬನಾದ ವೆನ್ಸೆಸ್ಲಾಸ್‌ನ ದೊಡ್ಡ ಮೂರ‍್ತಿಯೊಂದು ಕೂಡಿಸಲಾಗಿದೆ. ಇದರ ಹಿಂಬಾಗದಲ್ಲಿ ದೊಡ್ಡದಾಗಿ ಹರಡಿಕೊಂಡಿರುವ ಜೆಕ್‌ನ ನ್ಯಾಶನಲ್ ಮ್ಯೂಸಿಯಂನ ಕಟ್ಟಡವಿದೆ. ಸ್ಕ್ವೇರ್‌ನ ತೆಂಕಣಬಾಗ ಏರುಮುಕದಲ್ಲಿರುವುದರಿಂದ ಅತ್ತ ಬದಿಯಿಂದ ಎದುರು ಬರುವ ನೋಡುಗರಿಗೆ ಇದು ಬಲು ಸೊಗಸಾಗಿ ಕಾಣಿಸುವುದು. ಮೊದ ಮೊದಲು ಈ ಜಾಗ ಕುದುರೆಗಳ ಮಾರುಕಟ್ಟೆಯಾಗಿತ್ತು. ನಾಲ್ಕನೇ ಚಾರ‍್ಲ್ಸ್ ನ ಆಳ್ವಿಕೆಯಲ್ಲಿ ಇದು ಸಾಮಾನ್ಯ ಮಾರುಕಟ್ಟೆಯಾಗಿ ಬೆಳವಣಿಗೆ ಹೊಂದಿತು. ಇಂದು ಪ್ರಾಗ್‌ನ ದೊಡ್ಡ ಮಾರುಕಟ್ಟೆ ತಾಣವಾಗಿ ಬೆಳೆದು ನಿಂತಿದೆ.

 

dsc_0333

(ವೆನ್ಸೆಸ್ಲಾಸ್ ಸ್ಕ್ವೇರ್)

ವಸೇಹ್ರಾಡ್ (Vysehrad):

ಪ್ರಾಗ್‌ನ ಹಳೆಯ ಕೋಟೆಮನೆಯೇ ವಸೇಹ್ರಾಡ್. ಸುಮಾರು 10ನೇ ನೂರೇಡಿನಲ್ಲಿ ಇದು ಕಟ್ಟಲ್ಪಟ್ಟಿತ್ತು. ಪ್ರಾಗ್ ಕಾಸಲ್ ಕಟ್ಟುವ ಮೊದಲು ವಸೇಹ್ರಾಡ್ ಅರಸರ ಆಳ್ವಿಕೆಯ ಮೂಲ ನೆಲೆ. ಪ್ರಾಗ್ ಕಾಸಲ್‌ನಲ್ಲಿರುವಂತೆ ಇಲ್ಲಿಯೂ ನಾಡಿನ ಪ್ರಮುಕರ ಮೂರ‍್ತಿಗಳು, ಕೆತ್ತನೆಗಳು ಕೈಬೀಸಿ ಕರೆಯುತ್ತವೆ. ಊರ ಹೊರಗಿನ ಒಂದು ದಿಬ್ಬದ ಮೇಲೆ ಪ್ರಾಗ್ ಕಾಸಲ್ ನೆಲೆಗೊಂಡಿದ್ದರೆ, ಇನ್ನೊಂದು ದಿಬ್ಬದಲ್ಲಿ ವಸೇಹ್ರಾಡ್ ನೆಲೆಸಿದೆ. ವಸೇಹ್ರಾಡ್‌ ಕೂಡ ಸಾಕಶ್ಟು ಚರ‍್ಚ್‌ಗಳಿಗೆ ನೆಲೆ ಒದಗಿಸಿದೆ. ಹಸಿರು ಹಸಿರಾಗಿ ಕಂಗೊಳಿಸುವ ದೊಡ್ಡ ತೋಟ, ಇಲ್ಲಿಗೆ ಬೇಟಿ ನೀಡುವ ಪ್ರವಾಸಿಗರಿಗೆ ಮುದನೀಡುತ್ತವೆ. ವಸೇಹ್ರಾಡ್ ಕೋಟೆ ಸುತ್ತಲೂ ಹಸಿರನ್ನು ಉಳಿಸಿ ಬೆಳೆಸಿರುವ ಸ್ತಳೀಯರ ಕೆಲಸಕ್ಕೆ ಬೆನ್ನು ತಟ್ಟಲೇಬೇಕು. ವಸೇಹ್ರಾಡ್ ಮೂಲಕವೂ ಪ್ರಾಗ್ ಊರಿನ ಹರಿವಿನ ನೋಟ (Panorama View) ನೋಡಲು ಸಿಗುತ್ತದೆ.

dsc_0348

ಒಲ್ಡ್ ಟೌನ್ ಸ್ಕೇರ‍್ (Old Town Square):

ಒಲ್ಡ್ ಟೌನ್ ಸ್ಕ್ವೇರ್ ಹಳೆಯ ಪ್ರಾಗ್ ಊರಿನ ಜಾಗ. ವೆನ್ಸೆಸ್ಲಾಸ್ ಸ್ಕ್ವೇರ್ ದಿಂದ ಚಾರ‍್ಲ್ಸ್ ಸೇತುವೆಗೆ ಸಾಗುವಾಗ ದಾರಿಯಲ್ಲಿ ಒಲ್ಡ್ ಟೌನ್ ಸ್ಕ್ವೇರ್ ಸಿಗುತ್ತದೆ. ಗೋಪುರವೊಂದು ಇಲ್ಲಿದ್ದು ದೊಡ್ಡ ಗಡಿಯಾರವನ್ನು ಅದಕ್ಕೆ ಜೋಡಿಸಲಾಗಿದೆ. ಪ್ರತಿಗಂಟೆಗೊಮ್ಮೆ ಈ ಗಡಿಯಾರ ಜೋರಾಗಿ ಬಡಿದುಕೊಳ್ಳುತ್ತದೆ. ಸ್ಕ್ವೇರ‍್ ನಲ್ಲಿ ಅಂದಿನ ದಾರ‍್ಮಿಕ ಸುದಾರಕ ಜಾನ್ ಹುಸ್(Jan Hus) ರ ದೊಡ್ಡ ಪ್ರತಿಮೆಯೊಂದನ್ನು ನಿಲ್ಲಿಸಿದ್ದಾರೆ. ಸಂತ ನಿಕೋಲಾಸ್‌ನ ಚರ‍್ಚ್, ರೊಕೊಕೊ ಕಿನ್ಸ್ಕಿ ಅರಮನೆ ಇಲ್ಲಿ ನೋಡತಕ್ಕ ಇತರೆ ಸ್ತಳಗಳು.

dsc_0368

(ಜಾನ್ ಹುಸ್‌‌ರ ಪ್ರತಿಮೆ)

 ಡಾನ್ಸಿಂಗ್ ಹೌಸ್(Dancing House):

ಕುಣಿಯುತ್ತಿರುವ ಜೋಡಿಯೊಂದನ್ನು ಆದರಿಸಿ ಕಟ್ಟಲಾದ ಕಟ್ಟಡವೇ ಈ ಡಾನ್ಸಿಂಗ್ ಹೌಸ್. ಜಗತ್ತಿನಲ್ಲಿ ಹೆಸರುವಾಸಿ ಕಟ್ಟಡದರಿಗರಾದ ವ್ಲಾಡೊ ಮಿಲುನಿಕ್ (Vlado Mulinic) ಮತ್ತು ಪ್ರಾಂಕ್ ಗೆಹ್ರಿ(Frank Gehry) ಈ ಕಟ್ಟಡವನ್ನು 1992-96 ರಲ್ಲಿ ಕಟ್ಟಿದ್ದಾರೆ. ಪ್ರೆಡ್ ಮತ್ತು ಜಿಂಜರ್ ಕುಣಿತದ ಜೋಡಿಯೊಂದರ ಕುರುಹಂತೆ, ಈ ಕಟ್ಟಡಕ್ಕೆ ಹೆಸರಿಸಲಾಗಿದೆ. ಕಟ್ಟಡದ ಒಂದು ಬಾಗ ಗಾಜು ಮತ್ತೊಂದು ಸಿಮೆಂಟ್ ಮತ್ತು ಕಲ್ಲಿನಿಂದಾದದ್ದು. ಕಟ್ಟಡದ ಗಾಜಿನ ಬಾಗ ಹೆಂಗಸು ಕುಣಿಯುತ್ತಿರುವಂತೆ ಮತ್ತು ಸಿಮೆಂಟ್ ಬಾಗ ಗಂಡು ಕುಣಿಯುತ್ತಿರುವಂತೆ ಕಟ್ಟಿಸಿರುತ್ತಾರೆ. ಕುಣಿಯುತ್ತಿರುವ ಜೋಡಿಯನ್ನು ಹೋಲುವಂತೆ ಈ ಕಟ್ಟಡವನ್ನು ಅಂಕುಡೊಂಕಾಗೇ ಕಟ್ಟಿಸಿದ್ದಾರೆ.

ನೋಡತಕ್ಕ ಇತರೆ ಜಾಗಗಳು:

ಪ್ಯಾರಿಸ್‌ನ ಐಪೆಲ್ ಟವರ್ ಹೋಲುವ ಪೆಟ್ರಿನ್ ಟವರ್ (Petrin Tower), ಚಾರ‍್ಲ್ಸ್ ಸೇತುವೆಯ ಹತ್ತಿರದಲ್ಲೇ ರುಡೋಲ್ಪಿನಿಯಮ್(Rudolfinium) ಎಂಬ ಕಲೆಮನೆ, ನ್ಯಾಶನಲ್ ತಿಯೇಟರ್ ಇತರೆ ನೋಡತಕ್ಕ ಜಾಗಗಳಾಗಿವೆ. ವ್ಲಾಟ್ವಾ ಹೊಳೆ ಮೇಲೆ ದೋಣಿ ಸುತ್ತಾಟವನ್ನೂ ನಡೆಸಬಹುದು.

ಪ್ರಾಗ್ ತಲುಪುವ ಬಗೆ:

ಬಾರತ ಸೇರಿದಂತೆ ಹಲವಾರು ನಾಡುಗಳಿಂದ ಪ್ರಾಗ್‌ಗೆ ನೇರವಾಗಿ ಬಾನೋಡದ ಮೂಲಕ ತಲುಪಬಹುದಾಗಿದೆ. ಯುರೋಪ್‌ನ ಪ್ಯಾರಿಸ್, ಅಮ್ಸ್ಟರ್ ಡ್ಯಾಮ್, ಮ್ಯುನಿಕ್, ಪ್ರಾಂಕ್ ಪರ‍್ಟ್, ರೋಮ್, ಬುಡಾಪೆಸ್ಟ್ ಮುಂತಾದ ಊರುಗಳು ಪ್ರಾಗ್‌ಗೆ ಹತ್ತಿರವಿರುವ ದೊಡ್ಡ ಊರುಗಳಾಗಿದ್ದು, ಇಲ್ಲಿಂದಲೂ ಪ್ರಾಗ್‌ಗೆ ತಲುಪಬಹುದು. ಯುರೋಪ್‌ ಒಕ್ಕೂಟದ ಹಲವು ನಾಡುಗಳು ಒಳ್ಳೆಯ ರೈಲಿನ ಹರವು ಹೊಂದಿವೆ. ಜರ‍್ಮನಿಯ ಬರ‍್ಲಿನ್, ನ್ಯೂರೆಂಬರ‍್ಗ್, ಪೋಲೆಂಡ್‌ನ ವಾರ‍್ಸಾ ಮೂಲಕ ಪ್ರಾಗ್‌ಗೆ ನೇರ ರೈಲುಗಳು ಇವೆ. ನಾಜಿಗಳ(Nazi) ನೆಲೆವೀಡಾಗಿದ್ದ ತೆಂಕಣ ಜರ‍್ಮನಿಯ ನ್ಯೂರೆಂಬರ‍್ಗ್, ಎರ‍್ಲಾಂಗನ್ ಊರುಗಳಿಂದ ಪ್ರಾಗ್ ಊರಿಗೆ ಹೋಗಲು ಬಸ್ಸುಗಳು ಇವೆ.

ಪ್ರಾಗ್ ಊರಿನ ಸ್ತಳೀಯ ಸಾರಿಗೆ: ಪ್ರಾಗ್ ಊರಿನ ಮೆಟ್ರೋ ಹಾಗೂ ಟ್ರಾಮ್ ರೈಲಿನ ಹರವು ಚೆನ್ನಾಗಿದ್ದು, ಈ ಎಲ್ಲ ನೋಡತಕ್ಕ ತಾಣಗಳನ್ನು ನೀವು ಮೆಟ್ರ‍ೋ, ಟ್ರಾಮ್ ರೈಲುಗಳ ಮೂಲಕವೇ ತಲುಪಬಹುದು. ಸ್ತಳೀಯ ಸಾರಿಗೆ ಬಸ್ಸುಗಳ ಸೌಲಬ್ಯವೂ ಇದೆ. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಕೊಂಡಿ ಕ್ಲಿಕ್ಕಿಸಿ.

dpp.cz

ಪ್ರಾಗ್‌ನಲ್ಲಿ ಉಳಿದುಕೊಳ್ಳಲು ಸಾಕಶ್ಟು ಒಳ್ಳೆಯ ಹೋಟೆಲ್‌ಗಳಿವೆ. ಅವುಗಳ ಬಗ್ಗೆ ಈ ಕೆಳಗಿನ ಕೊಂಡಿಯಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಸಸ್ಯಾಹಾರಿ ತಿಂಡಿ ತಿನಿಸುಗರಿಗೂ ಸಾಕಶ್ಟು ತಿಂಡಿ ತಿನಿಸಿನ ರೆಸ್ಟಾರೆಂಟ್‌ಗಳು ಸಿಗುತ್ತವೆ.

www.prague.eu

ನಿಮಗೂ ಜೆಕ್ ಇಲ್ಲವೇ ಜೆಕ್ ಅಕ್ಕಪಕ್ಕದ ನಾಡುಗಳಿಗೆ ಹೋಗುವ ಅವಕಾಶ ಸಿಕ್ಕರೆ, ರಜಾ ದಿನಗಳಲ್ಲಿ ಪ್ರಾಗ್ ಊರಿಗೆ ಹೋಗಲು ಮರೆಯದಿರಿ.

(ಮಾಹಿತಿ ಮತ್ತು ತಿಟ್ಟ ಸೆಲೆ:  prague.eu)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: