ಕತೆ – ಸಂದ್ಯಾದೀಪ (ಕೊನೆ ಕಂತು)

– ಕೆ.ವಿ.ಶಶಿದರ.

old-age-home

ಕಂತು – 1 ಕಂತು – 2

ಪತ್ನಿಯ ವಿಯೋಗ ರಾಯರ ಜೀವನದಲ್ಲಿ ಬಂದೊದಗಿದ ಬಹು ದೊಡ್ಡ ಆಗಾತ. ಈ ಆಗಾತ ಕಂಡ ಕಂಡ ದೇವರುಗಳನ್ನೆಲ್ಲಾ ಶಪಿಸಿಸುವಂತೆ ಮಾಡಿತ್ತು. ಯಾವ ತಪ್ಪಿಗೆ ಈ ಶಿಕ್ಶೆ? ಎಂದು ತಿಳಿಯದೆ ಪರಿತಪಿಸಿದ್ದರು. ನೊಂದಿದ್ದರು. ಒಂಟಿತನ ಬಹಳವಾಗಿ ಕಾಡಿತ್ತು. ಊಟ ತಿಂಡಿಯ ಗೊಡವೆಯನ್ನೇ ಮರೆತಿದ್ದರು. ಆಗಾತದಿಂದ ಚೇತರಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದರು. ಹಗಲಿರುಳು ಕೆಲಸಕ್ಕೆ ಮೊರೆ ಹೋಗಿದ್ದರು. ಆದರೂ ಸಹ ಮದ್ಯೆ ಮದ್ಯೆ ಅವಳ ನೆನಪು ತೂರಿ ಬಂದು ಕೆಣಕುತ್ತಿತ್ತು. ಅವರ ಎಲ್ಲಾ ಆಸೆಗಳೂ ಆಕಾಂಕ್ಶೆಗಳೂ ಅವಳೊಡನೆ ಕರಿಗಿಹೋಗಿದ್ದವು. ಅವರ ಎಲ್ಲಾ ಬೇಕು ಬೇಡಗಳೂ ಅವಳೊಂದಿಗೆ ಬಸ್ಮವಾಗಿದ್ದವು. ಅವಳಿದ್ದಾಗ ಕಟ್ಟಿದ್ದ ಗೋಪುರವೆಲ್ಲಾ ನೆಲ ಕಚ್ಚಿತ್ತು. ಅವಳಿಲ್ಲದ ಮುಂದಿನ ಜೀವನದ ಕಲ್ಪಿಸಿಕೊಂಡು ರಾಯರು ಅನೇಕ ಬಾರಿ ಬಹಳಶ್ಟು ಸಂಕಟ ಪಟ್ಟಿದ್ದರು, ನೊಂದಿದ್ದರು. ಕೆಲಸದಲ್ಲಿ ಸಂಪೂರ‍್ಣವಾಗಿ ತೊಡಗಿಸಿಕೊಂಡು ಸಹದರ‍್ಮಿಣಿಯ ವಿಯೋಗದ ನೋವನ್ನು ಮರೆಯಲು ಯತ್ನಿಸಿದ್ದರು. ಪ್ರಯತ್ನಿಸುತ್ತಿದ್ದರು. ಯಶಸ್ಸು ಮಾತ್ರ ಮರೀಚಿಕೆಯಾಗಿತ್ತು. ರಾಯರು ಪತ್ನಿಯನ್ನು ಬಹುವಾಗಿ ಮಿಸ್ ಮಾಡಿಕೊಂಡಿದ್ದರು. ಒಂದು ವಿದದಲ್ಲಿ ಆಕೆಯೇ ದನ್ಯೆ. ಬೇಗನೆ ಕಣ್ಮುಚ್ಚಿಕೊಂಡಿದ್ದಳು. ಇಹದ ಜಂಜಾಟ ಮುಗಿಸಿದ್ದಳು.

ಇನ್ನಾರು ತಿಂಗಳ ನಂತರ ನಿವ್ರುತ್ತಿ. ನಂತರ ಮನೆಯಲ್ಲಿದ್ದು ಮಾಡುವುದಾದರು ಏನು? ರಾಯರನ್ನು ಕಾಡುತ್ತಿದ್ದ ಬ್ರುಹತ್ ಪ್ರಶ್ನೆ ಇದು. ಅದಕ್ಕೀಗ ಸೂಕ್ತ ಉತ್ತರ ಸಿಕ್ಕಿದೆ. ಮುಂದಿನ ಯೋಚನೆಯಿಲ್ಲ. ಒಂದು ರೀತಿಯ ನೆಮ್ಮದಿ. ಮನೆಯಲ್ಲೇ ಕೂತು ಸಮಯ ದೂಡುವ ಪ್ರಮೇಯವಿಲ್ಲ. ನಿವ್ರುತ್ತಿಯನ್ನು ಸಂತೋಶದಿಂದ ಸ್ವೀಕರಿಸಬಹುದು. ಒಂತರಾ ನಿರಾಳ.

ಇನ್ನು ಮಗ, ಅವನ ಪತ್ನಿ. ಅವರಾಯ್ತು ಅವರ ಕೆಲಸವಾಯ್ತು. ಅವರ ಪಾಡಿಗೆ ಅವರು. ದುಡಿತದಲ್ಲೇ ಅವರುಗಳು ಹೈರಾಣು. ನನ್ನೊಡನೆ ಹರಟಲು ಅವರಿಗೆ ಸಮಯವೆಲ್ಲಿ? ಅವರಿಂದ ಅದನ್ನು ನಿರೀಕ್ಶಿಸಲೂ ಬಾರದು. ತಪ್ಪಾಗುತ್ತದೆ.

ಸ್ವಂತ ಮನೆ. ಬಾಳು ಕಟ್ಟಿ ಕೊಟ್ಟ ಮನೆ. ಪತ್ನಿಯ ಅಗಲಿಕೆಯ ನಂತರ ರಾಯರು ಮನೆ ಮಗ ಎಲ್ಲದರ ಮೇಲೂ ಮೋಹವನ್ನು ಕಳೆಕೊಂಡಿದ್ದರು. ಮನೆಯನ್ನೂ ಸಹ ಮಗನ ಹೆಸರಿಗೆ ರಿಜಿಸ್ಟರ್ ಮಾಡಿಸಿ ಇಹದ ಸಂಕೋಲೆಗಳನ್ನು ಕಳಚಿಕೊಂಡ ಅಯಾಚಿತ ಆನಂದ ಅನುಬವಿಸಿದ್ದರು. ಯಾವುದರ ಮೇಲೂ ಅವರಿಗೆ ಆಸಕ್ತಿ ಇರಲಿಲ್ಲ. ಯಾವುದೂ ಬೇಕಿರಲಿಲ್ಲ. ಇಚ್ಚಾ ಮರಣವಿದ್ದಿದ್ದರೆ ಎಶ್ಟು ಚನ್ನಾ ಎನಿಸದಿರಲಿಲ್ಲ.

ಸುಂದರ ಸರಳ ಸಮಾರಂಬದಲ್ಲಿ ಸೇವೆಯಿಂದ ಬೀಳ್ಕೊಡುಗೆ ಶಾಸ್ತ್ರ ನಡೆಯಿತು. ಹಿರಿಯ ಕಿರಿಯ ಅದಿಕಾರಿಗಳ ಹೊಗಳಿಕೆಗೆ ರಾಯರು ಕುಬ್ಜರಾದರು. ಹೂವು ಹಣ್ಣು ಶಾಲು ನೀಡಿ ಸನ್ಮಾನಿಸಲಾಯಿತು. ಸಹೋದ್ಯೋಗಿಗಳೆಲ್ಲ ಹಣ ಪೂಲ್ ಮಾಡಿ ತಂದಿದ್ದ ಗಿಪ್ಟ್ ಅನ್ನು ರಾಯರು ನಯವಾಗಿ ತಿರಸ್ಕರಿಸಿದರು. ಇಡೀ ಸೇವಾ ಅವದಿಯಲ್ಲಿ ಬಿಡಿಗಾಸನ್ನು ಮುಟ್ಟದ ರಾಯರು ಗಿಪ್ಟ್‍ನ್ನು ಸಹ ಲಂಚದ ಒಂದು ರೂಪ ಎಂದೇ ತಿಳಿದಿದ್ದರು.

ಶಾಶ್ವತ ಎಂದು ಕೊಂಡಿದ್ದ ಒಂದು ಅದ್ಯಾಯ ಅಲ್ಲಿಗೆ ಮುಗಿದಿತ್ತು. ಇನ್ನು ಮುಂದೆ ಇದು ಕೇವಲ ನೆನಪು ಮಾತ್ರ. ಕೇವಲ ನೆನೆಪು. ಅಳಿವಿಲ್ಲದ ನೆನಪು.

ನಿವ್ರುತ್ತಿಯಾದ ದಿನ ರಾತ್ರಿಯೆಲ್ಲಾ ಯೋಚಿಸಿದ ರಾಯರು ಬೆಳಿಗ್ಗೆ ಮಗನಲ್ಲಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು. ನಾಲ್ಕು ದಿನ ಹಾಯಾಗಿದ್ದು ವಿಶ್ರಾಂತಿ ಪಡೆದು ನಂತರ ಹೋಗಬಹುದಲ್ವೇ? ಎನ್ನುವ ಮಗನ ಪ್ರಶ್ನೆಗೆ ರಾಯರು ಸಮ್ಮತಿಸಲಿಲ್ಲ.

ದೇಹ ಬಳಲಿದ್ದರೂ ಮನಸ್ಸಿಗೆ ವಿಶ್ರಾಂತಿ ಬೇಕಿರಲಿಲ್ಲ. ಮನಸ್ಸು ಯಾವಾಗಲೂ ಕೆಲಸದಲ್ಲಿರಬೇಕಿತ್ತು. ನೋವನ್ನು ಮರೆಯಲು. ಸಹದರ‍್ಮಿಣಿಯ ಅಗಲಿಕೆಯ ಯೋಚನಾ ಲಹರಿಯಿಂದ ಹೊರ ಬರುವ ಪ್ರಯತ್ನ ನಿರಂತರವಾಗಿ ನಡೆಯಬೇಕಿತ್ತು. ರಾಯರಿಗೆ ಸಂಪಾದನೆ ಗೌಣ. ಹಣಕ್ಕೆ ಯಾವುದೇ ಪ್ರಾಮುಕ್ಯತೆ ಇರಲಿಲ್ಲ. ನೆಮ್ಮದಿ ಬೇಕಿತ್ತು. ಅದನ್ನರಸೇ ಹೊರಟಿದ್ದರು ರಾಯರು ದಿನ ಪತ್ರಿಕೆಯ ಕೆಲಸಕ್ಕೆ. ಪ್ರದ್ಯುಮ್ನರವರ ಆಪರ್ ಒಪ್ಪಿ.

ಪ್ರದ್ಯುಮ್ನ ಅವರು ವಹಿಸಿದ ಕಾರ‍್ಯ ಅವರೇ ಹೇಳಿದಂತೆ ರಾಯರಂತಹವರಿಗೆ ಹೇಳಿ ಮಾಡಿಸಿದಂತಿತ್ತು. ಸ್ಟಿಂಗ್ ಆಪರೇಶನ್. ನಗರದಲ್ಲಿರುವ ಮೂರ‍್ನಾಲ್ಕು ವ್ರುದ್ದಾಶ್ರಮದ ಬಗ್ಗೆ. ಅದರ ಒಳ ಹೊಕ್ಕು ಅಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ವ್ಯವಹಾರ-ಅವ್ಯವಹಾರಗಳನ್ನು ಕೂಲಂಕುಶವಾಗಿ ಪರಶೀಲಿಸಿ ಹುಳುಕುಗಳನ್ನು ಬಯಲಿಗೆಳೆದು ಜನತೆಯ ಮುಂದಿಡುವ ಕೆಲಸ. ಬಹಳ ಗುಟ್ಟಾಗಿ, ಗೌಪ್ಯವಾಗಿ ನಡೆಯಬೇಕಾದ ಆಪರೇಶನ್ ಅದು. ಯಾರಿಗೂ ತಮ್ಮ ಸ್ಟಿಂಗ್ ಆಪರೇಶನ್ ಬಗ್ಗೆ ಮಾಹಿತಿ ಸಿಗದಂತೆ, ಕೊಂಚವೂ ಅನುಮಾನ ಬರದಂತೆ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಿತ್ತು. ಜಾಗರೂಕತೆಯಿಂದ ಜಾಣ್ಮೆಯಿಂದ ರೀತಿ ನೀತಿಗಳನ್ನು ರೂಪಿಸಿಕೊಂಡು ಚಾಕಚಕ್ಯತೆಯಿಂದ ಹೆಜ್ಜೆ ಇಡಬೇಕಿತ್ತು. ಕತ್ತಿಯ ಅಲಗಿನ ಮೇಲಣ ನಡಿಗೆ. ತನಗಾಗಲಿ, ತಾನು ಪ್ರತಿನಿದಿಸುವ ಪತ್ರಿಕೆಯ ಹೆಸರಿಗಾಗಲಿ ಮಸಿ ತಾಕದಂತೆ ಗಮನಿಸುವುದು ಪ್ರಮುಕವಾಗಿತ್ತು.

ದೀರ‍್ಗ ಆಲೋಚನೆಯ ನಂತರ ಒಂದು ನಿರ‍್ದಾರಕ್ಕೆ ಬಂದರು. ಹೆಣೆದಿದ್ದ ರೂಪರೇಶೆಗಳನ್ನು, ಕೈಗೊಂಡ ನಿರ‍್ದಾರವನ್ನು ಪ್ರದ್ಯುಮ್ನರವರ ಗಮನಕ್ಕೂ ತಂದು ಅವರಿಂದ ಸಮ್ಮತಿ ಪಡೆದು ಕೆಲಸ ಪ್ರಾರಂಬಿಸಿದರು

ಇಶ್ಟು ವರ‍್ಶದ ಸೇವೆಯ ಅನುಬವವೆಲ್ಲಾ ಕೆಲಸಕ್ಕೆ ಬಂತು. ಯಾವುದೇ ವಿಶಯವನ್ನು ಕೂಲಂಕುಶವಾಗಿ ವಿಚಾರಿಸಿ, ಪರಾಮರ‍್ಶಿಸಿ, ಅಳೆದು, ತೂಗಿ, ಎಲ್ಲಾ ದ್ರುಶ್ಟಿ ಕೋನದಲ್ಲಿಯೂ ನೋಡಿ ಸರಿ ಎಂದು ಕಂಡು ಬಂದಲ್ಲಿ ಮಾತ್ರ ವರದಿ ತಯಾರಿಸಬೇಕಿದೆ. ಸರ‍್ಕಾರಿ ರಿಪೋರ‍್ಟ್‍ಗೂ ಈಗ ಬರೆಯಬೇಕಿರುವ ವರದಿಗೂ ಅಜಗಜಾಂತರ ವ್ಯತ್ಯಾಸ. ಆದರೂ ಕಂಡಿದ್ದನ್ನು ಸ್ವತಂತ್ರವಾಗಿ ಬರಹದ ರೂಪದಲ್ಲಿ ಪ್ರಸ್ತುತ ಪಡಿಸುವ ವಿಚಾರ ಮನದಲ್ಲಿ ಸುಳಿದಾಗ ರಾಯರಿಗೆ ರೋಮಾಂಚನವಾಯ್ತು. ಸುಪ್ತ ಆಸೆ ಗರಿಕೆದರಿತು. ಮೊದಲ ಬಾರಿ ಏನನ್ನಾದರೂ ಸಾದಿಸುವ ಚಲ ಮೂಡಿತು. ಮುಂದಡಿಯಿಟ್ಟರು. ಕಾರ‍್ಯ ಪ್ರವ್ರುತ್ತರಾದರು.

ಯಾವುದೇ ತಪ್ಪು ಗ್ರಹಿಕೆಗೆಗಾಗಲಿ, ಅನುಮಾನಕ್ಕಾಗಲಿ ಆಸ್ಪದ ನೀಡದೆ ವಹಿಸಿದ್ದ ಕೆಲಸವನ್ನು ಸುಸೂತ್ರವಾಗಿ ಪೂರೈಸಿದ್ದರು. ಲ್ಯಾಪ್ ಟಾಪ್ ಮೂಲಕ ಮೇಲ್ ಮಾಡಿದ್ದ ರಿಪೋರ‍್ಟ್‍ಗಳನ್ನು ನೋಡಿದ್ದ ಪ್ರದ್ಯುಮ್ನ ಮೇಲ್ ಮೂಲಕವೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೆಗಲೇರಿಸಿಕೊಂಡಿದ್ದ ಕೆಲಸವನ್ನು ಮುತುವರ‍್ಜಿಯಿಂದ ನಿರ‍್ವಹಿಸಿದ ಸಂತ್ರುಪ್ತಿ. ಸಾರ‍್ತಕ ಬಾವ ರಾಯರಿಗೆ.

ಸ್ಟಿಂಗ್ ಆಪರೇಶನ್‍ನ ಅವದಿ ಮುಗಿದಿತ್ತು. ಪ್ರದ್ಯುಮ್ನರವರನ್ನು ಮುಕತಹ ಬೇಟಿಯಾಗಿ ಎಲ್ಲವನ್ನೂ ಸವಿಸ್ತಾರವಾಗಿ ವಿವರಿಸುವ, ವಿಶದ ಪಡಿಸುವ ತವಕ, ಕಾತರ, ದಾವಂತ ರಾಯರಿಗೆ. ನೇರ ಅವರ ಕಚೇರಿಗೆ ನಡೆದರು. ಅವರಿಂದ ವಿವರಣೆ ಪಡೆದ ಪ್ರದ್ಯುಮ್ನ, ಬೈಗು-ಬೆಳಕು, ಬಾಳ ಸಂಜೆ , ಸಂದ್ಯಾದೀಪ, ಮುಸ್ಸಂಜೆ – ನಾಲ್ಕೂ ವ್ರುದ್ದಾಶ್ರಮದ ಮ್ಯಾನೇಜ್‍ಮೆಂಟ್ ಜೊತೆ ಒಂದು ಸಂದರ‍್ಶನ ಮಾಡಿ, ಅವರ ಹೇಳಿಕೆಗಳನ್ನು ದಾಕಲಿಸಿಕೊಂಡು ತಮ್ಮ ರಿಪೋರ‍್ಟ್ ಜೊತೆಗೆ ತಾಳೆ ಮಾಡಿ ನಂತರ ವಿಸ್ರುತ ವರದಿಯನ್ನು ಪ್ರಕಟಿಸುವುದಾಗಿ ಹೇಳಿದರು. ರಾಯರಿಗೆ ನೆಮ್ಮದಿ. ಬಹಳ ದಿನದ ನಂತರ ಸಿಕ್ಕ ನೆಮ್ಮದಿ. ದೇಹ ಹಗುರವಾದ ಅನುಬವ. ಮಾನಸಿಕವಾಗಿ ಚಿಕ್ಕವರಾದರು ರಾಯರು.

ಸಂತ್ರುಪ್ತಿ ಬಾವದಿಂದ ಹೊರಬಂದ ರಾಯರಿಗೆ ಬಹಳ ದಿನಗಳ ನಂತರ, ಪತ್ನಿಯ ವಿಯೋಗದ ಆನಂತರ, ಮೊದಲ ಬಾರಿಗೆ ಮಗನನ್ನು ನೋಡುವ ತವಕ ಕಾಡತೊಡಗಿತು. ನೇರ ಮನೆಯ ಕಡೆ ಬಿರುಬಿರನೆ ನಡೆದರು. ಮಗ ಕೇಳಬಹುದಾದ ಪ್ರಶ್ನೆಗಳು, ತಾವು ಅದಕ್ಕೆ ನೀಡಬೇಕಾದ ಉತ್ತರ, ಸಮಜಾಯಿಶಿ ಎಲ್ಲವನ್ನೂ ಮನದಲ್ಲೇ ಯೋಚಿಸಿಕೊಂಡರು. ಮನೆ ಹತ್ತಿರ ಹತ್ತಿರವಾದಂತೆ ಎದೆ ಬಡಿತ ಅವರಿಗೇ ಕೇಳುವಶ್ಟು ಜೋರಾಯಿತು. ಮೊದಲ ಬಾರಿಗೆ ರಾಯರಿಗೆ ಅಯಾಚಿತ ಆನಂದ. ಒಂದು ರೀತಿಯ ತಳಮಳ.

ಮನೆ ಬಳಿ ಬಂದಾಗ ಕಂಡಿದ್ದು ಬೀಗ ಹಾಕಿದ್ದ ಗೇಟು ಮತ್ತು ಮನೆ. ರಾಯರಿಗೆ ನಿಂತಲ್ಲೇ ಕುಸಿದು ಪಾತಾಳ ಕಂಡ ಅನುಬವ. ಉಸಿರು ಕಟ್ಟಿದಂತಾಯ್ತು. ಉತ್ಸಾಹಕ್ಕೆ ತಣ್ಣೀರು ಎರೆಚಿದಂತಾಯ್ತು. ಎದೆ ಬಡಿತ ಜೋರಾದ ಅನುಬವ. ಅನಿರೀಕ್ಶಿತ ಆಗಾತ ಅಪ್ಪಳಿಸಿತ್ತು. ದಿಕ್ಕು ತೋಚದಾಯ್ತು. ಮುಂದೇನು? ಮತ್ತದೇ ಪ್ರಶ್ನೆ ಬ್ರುಹದಾಕಾರವಾಗಿ ತಲೆ ಎತ್ತಿ ನಿಂತಿತ್ತು.

ಎದುರು ಮನೆಯ ಬಾಗಿಲಲ್ಲಿದ್ದ ಚಂದ್ರಣ್ಣ ರಾಯರನ್ನು ಗಮನಿಸಿ ತಮ್ಮ ಮನೆಗೆ ಕರೆದರು. ಕೊಂಚ ಜೀವ ಬಂದಂತಾಯಿತು. ನೇರ ಅವರ ಮನೆಗೆ ಹೋದರು. ಕುಡಿಯಲು ನೀರನ್ನು ನೀಡಿದ ಚಂದ್ರಣ್ಣ. ರಾಯರು ಹೋದ ನಂತರ ಮಗ ಸೊಸೆ, ಸೊಸೆಯ ತಂದೆ-ತಾಯಿಯರನ್ನು ಕರೆಸಿ ಕೊಂಡಿದ್ದು, ಒಂದೆರೆಡು ತಿಂಗಳ ನಂತರ ಅವರುಗಳು ಹಿಂದಿರುಗಿದ್ದೂ, ದಿನ ಪತ್ರಿಕೆಯಲ್ಲಿ ಮನೆ ಮಾರಾಟದ ಬಗ್ಗೆ ಜಾಹೀರಾತು ಪ್ರಕಟವಾಗಿದ್ದೂ, ಒಂದೂವರೆ ಕೋಟಿಗೆ ಮನೆಯನ್ನು ಮಾರಿದ್ದು, ಮೂರು ತಿಂಗಳ ಹಿಂದೆ ಮಗ ಮತ್ತು ಸೊಸೆ ಅಮೇರಿಕಕ್ಕೆ ವಲಸೆ ಹೋದದ್ದು…..ಇನ್ನೂ ಹೇಳುತ್ತಲೇ ಇದ್ದರು ಚಂದ್ರಣ್ಣ. ರಾಯರು ಗೇಟು ದಾಟಿ ತಮ್ಮ ಮನೆಯತ್ತ ತಿರುಗಿಯೂ ನೋಡದೆ ಬಂದ ವೇಗದಲ್ಲೇ ತಲೆ ತಗ್ಗಿಸಿಕೊಂಡು ನಡೆದಿದ್ದರು. ಸುಡು ಬಿಸಿಲು ಸಹ ಅವರನ್ನು ತಡೆಯಲಿಲ್ಲ. ಅವರಿಗೆಲ್ಲಾ ಅರ‍್ತವಾಗಿತ್ತು. ಸ್ಟಿಂಗ್ ಆಪರೇಶನ್‍ನ ಮಹತ್ವ ಮತ್ತು ಅದರ ಅಚ್ಚಳಿಯದ ಚಾಪು.

ಬಹುಶ ಹತ್ತಿರದ ನೆಂಟರ ಬಳಿ ತನ್ನೆಲ್ಲಾ ವಿವರವನ್ನು ಮಗ ಕೊಟ್ಟು ಹೋಗಿರಬಹುದು. ತಿಳಿದುಕೊಳ್ಳುವ ಬಯಕೆ ಒಂದು ಕಡೆಯಾದರೆ, ವ್ಯತಿರಿಕ್ತ ಬಾವನೆ ಮತ್ತೊಂದೆಡೆ. ಅವರುಗಳು ಕೇಳ ಬಹುದಾದ ಪ್ರಶ್ನೆಗಳು, ತಮ್ಮಿಂದ ತಡವರಿಸುವ ಉತ್ತರ, ನಗೆಪಾಟಲಿಗೀಡಾಗುವುದು ಬೇಕಿರಲಿಲ್ಲ. ಮಗನ ಬಗ್ಗೆ ನೆಂಟರಿಂದ ತಿಳಿದುಕೊಳ್ಳುಲು ಹಿಂಜರಿಯುವ ರಾಯರಿಗೆ ಅಲ್ಲೇ ಟಿಕಾಣಿ ಹೂಡಲು ಹೇಗೆ ಸಾದ್ಯ? ಆ ಪ್ರಶ್ನೆಗಳ ಚಕ್ರವ್ಯೂಹದಿಂದ, ಇರುಸುಮುರುಸಿನಿಂದ ಪಾರಾಗಬೇಕಿತ್ತು. ಬೇರೆ ವ್ಯವಸ್ತೆ ಉತ್ತಮ ಎಂದೆನಿಸಿತು.

ಹುಟ್ಟಿದಾರಬ್ಯ ಅರೆ ಹೊಟ್ಟೆಯಾದರೂ ಇನ್ನೊಬ್ಬರ ಎದುರು ಕೈ ಚಾಚಿರಲಿಲ್ಲ ರಾಯರು. ಮನೆ ಪಾಟ ಹೇಳಿ ಹೊಟ್ಟೆ ಹೊರೆದು ಓದಿದ್ದರು. ಇದ್ದುದರಲ್ಲೇ ಚೆನ್ನಾಗಿ ಬಾಳಿ ಬದುಕಿದ ಜೀವ. ಹಂಗಿನಲ್ಲಿರಲು ಮನಸ್ಸು ಸುತರಾಂ ಒಪ್ಪಲಿಲ್ಲ.

ಮತ್ತದೇ ಪ್ರಶ್ನೆ. ಮುಂದೇನು?

ಆಗ ಕಣ್ಮುಂದೆ ಸುಳಿದಿದ್ದೇ ವ್ರುದ್ದಾಶ್ರಮ. ಸ್ಟಿಂಗ್ ಆಪರೇಶನ್‍ಗಾಗಿ ತಾವೇ ಅಳೆದು ತೂಗಿ ಅದರ ಒಳ ಹೊಕ್ಕು ನೋಡಿ ನೀಡಿದ್ದ ಗ್ರೇಡ್‍ನಲ್ಲಿ ಉತ್ತಮವೆನಿಸಿದ ತಮ್ಮ ಮುಂದಿನ ಉಳಿದ ಜೀವನಕ್ಕೆ ಸರಿಯಾದ, ಸ್ವತಂತ್ರವಾಗಿ ಬದುಕನ್ನು ಕಳೆಯಬಹುದಾದ ಜಾಗ ಸಂದ್ಯಾದೀಪ ವ್ರುದ್ದಾಶ್ರಮ. ಮನಸ್ಸಿಗೆ ಆರಾಮವೆನಿಸಿತು. ನೆಲೆ ಸಿಕ್ಕ ಸಂತ್ರುಪ್ತಿ.

****************************************************

“ಓ…. ರಾಗವೇಂದ್ರರಾಯರು, ಬನ್ನಿ ಬನ್ನಿ…..ಮತ್ತೆ ಸುಸ್ವಾಗತ”

ತಮ್ಮದೇ ಆದ ಲೋಕದಲ್ಲಿ ಮುಳುಗಿದ್ದ ತಾವು ನಡೆದು ಬಂದ ಹಾದಿಯ ಏರು ಪೇರುಗಳನ್ನು ಮನದಲ್ಲೇ ಪರಾಮರ‍್ಶಿಸುತ್ತಿದ್ದ ರಾಯರು ಗಡಿಬಿಡಿಯಿಂದ ಮತ್ತೊಮ್ಮೆ ‘ನಮಸ್ಕಾರ’ ಎಂದು ಕುಳಿತಲ್ಲೇ ಎದ್ದಂತೆ ಮಾಡಿ ಕೈಮುಗಿದರು ವಾಮನಾಚಾರ‍್ಯರಿಗೆ.

“ನಂಗೊತ್ತಿತ್ತು. ತಾವು ಬಂದೇ ಬರುತ್ತೀರ ಅಂತ. ಎಲ್ಲರೂ ಹಾಗೆಯೇ. ಮೊದಲು ಇಲ್ಲಿಗೆ ಬರ‍್ತಾರೆ, ಮೂರ‍್ನಾಲ್ಕು ತಿಂಗಳಿದ್ದು ಇದಕ್ಕಿಂತ ಇನ್ನೂ ಉತ್ತಮ ನಿರ‍್ವಹಣೆಯ ವ್ರುದ್ದಾಶ್ರಮವನ್ನು ಅರಸಿಕೊಂಡು ಹೋಗಿ, ಬೈಗು-ಬೆಳಕು, ಬಾಳ ಸಂಜೆ, ಮುಸ್ಸಂಜೆ ಅಂತ ಎಲ್ಲಾ ವ್ರುದ್ದಾಶ್ರಮಗಳನ್ನೂ ಸುತ್ತಿ ಮತ್ತೆ ಇಲ್ಲಿಗೇ ವಾಪಸ್ ಬರ‍್ತಾರೆ, ಇದು ಮಾಮೂಲಿ. ಒಮ್ಮೆ ಇಲ್ಲಿ ಬಂದ ಮೇಲೆ ಬೇರಾವುದೇ ವ್ರುದ್ದಾಶ್ರಮ ರುಚಿಸಲ್ಲ. ತಾವೇನು ಇದಕ್ಕೆ ಅಪವಾದವಲ್ಲ ಬಿಡಿ……” ಆಚಾರ‍್ಯರು ಮಾತನ್ನು ಮುಂದುವರೆಸಿದ್ದರು.

ಸ್ಟಿಂಗ್ ಆಪರೇಶನ್‍ನ ಅಜ್ನಾತವಾಸ ಸುಸೂತ್ರವಾಗಿ ನಡೆಯಲು ಹಣೆದಿದ್ದ ರೂಪುರೇಶೆಗಳಿಗೆ, ವಿದಿಸಿಕೊಂಡಿದ್ದ ಕಟ್ಟುಪಾಡಿನ ಬಲೆಗೆ ತಾವೇ ಬಲಿಯಾಗಿದ್ದರು. ತಾವೇ ಹಾಕಿಕೊಂಡ ಸಂಕೋಲೆ ಒಂದು ದಿನ ತಮ್ಮ ಕೈಯನ್ನೇ ಕಟ್ಟಿಹಾಕುತ್ತದೆ. ಮುಳುವಾಗುತ್ತ್ತದೆ ಎಂದು ಗ್ರಹಿಸಿರಲಿಲ್ಲ ರಾಯರು. ಗೌಪ್ಯತೆಯನ್ನು ಕಾಪಾಡಲು ವರ‍್ಶವಿಡೀ ಮಗನೊಡನೆ ಸಂಪೂರ‍್ಣ ಸಂಪರ‍್ಕ ಕಡಿದುಕೊಂಡಿದ್ದ್ದರ ಪರಿಣಾಮ ಇದು ಎಂದು ಅರಿವಾಗಿತ್ತು. ಬರಿಸಲಾರದ ಆಗಾತ ಸಂಬವಿಸಿತ್ತು. ಕಾಲ ಮಿಂಚಿತ್ತು.

ವಾಮನಾಚಾರ‍್ಯರ ಮಾತುಗಳಿಗೆ ರಾಗವೇಂದ್ರ ರಾಯರ ಮೌನವೇ ಉತ್ತರವಾಗಿತ್ತು.

(ಮುಗಿಯಿತು)

(ಚಿತ್ರ ಸೆಲೆ: nursing-care.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: