ಕತೆ – ಸಂದ್ಯಾದೀಪ

– ಕೆ.ವಿ.ಶಶಿದರ.

old-age-home

ಕಂತು – 1

ರಾಗವೇಂದ್ರ ರಾಯರು ಸಂದ್ಯಾದೀಪ ವ್ರುದ್ದಾಶ್ರಮದ ಮ್ಯಾನೇಜರ್ ವಾಮನಾಚಾರ‍್ಯರ ಗಮನವನ್ನು ಸೆಳೆಯಲು ಪ್ರಯತ್ನಸಿದರು.

ವಾಮನಾಚಾರ‍್ಯರ ನಡೆ, ನುಡಿ, ಶ್ರದ್ದೆ, ನಿಶ್ಟೆ, ಶುದ್ದ ಹಸ್ತದ ಬಗ್ಗೆ ಚನ್ನಾಗಿ ಅರಿತಿದ್ದರು ರಾಯರು. ಆಚಾರ‍್ಯರ ಟೇಬಲ್ ತುಂಬಾ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಡತಗಳು. ಅದರಲ್ಲೇ ಮುಳುಗಿದ್ದ ಆಚಾರ‍್ಯರು. ಆ ಸ್ತಿತಿಯಲ್ಲಿ ಆಚಾರ‍್ಯರನ್ನು ನೋಡಿದವರಿಗೆ ಅವರು ಅತಿ ಮುಕ್ಯವಾದ ವಿಶಯವನ್ನು ಕೆದಕಿ, ಬೆದಕಿ, ಹೆಕ್ಕಿ ಹೊರ ತೆಗೆಯಲು ಶತ ಪ್ರಯತ್ನ ಪಡುತ್ತಿದ್ದುದು ಕಂಡು ಬರುತ್ತಿತ್ತು. ಇಹದ ಪರಿವೆಯೇ ಇಲ್ಲದಂತೆ ಕೆಲಸದಲ್ಲಿ ಮಗ್ನರಾಗಿದ್ದರು. ರಾಯರ ವಂದನೆ ಅವರ ಏಕಾಗ್ರತೆಯನ್ನು ಬಂಗಗೊಳಿಸಲಿಲ್ಲ. ವಾಮನಾಚಾರ‍್ಯರು ರಾಯರತ್ತ ಗಮನವನ್ನೂ ಹರಿಸಲಿಲ್ಲ. ಪ್ರತಿ ವಂದನೆಯ ಮಾತಿರಲಿ, ಕತ್ತೆತ್ತಿಯೂ ಸಹ ನೋಡಲಿಲ್ಲ. ಕೆಲಸದಲ್ಲಿ ತಲ್ಲೀನರಾಗಿದ್ದರು.

ತಿಂಗಳ ಆಯ-ವ್ಯಯ ಪಟ್ಟಿಯನ್ನು ಹೊಂದಿಸಲು ವಿವರವನ್ನು ಕಲೆಹಾಕುತ್ತಿದ್ದರು. ಸಾರ‍್ವಜನಿಕರಿಂದ ಬಂದ ದೇಣಿಗೆ, ದ್ರವ್ಯ ರೂಪದಲ್ಲಾಗಲಿ, ವಸ್ತು ರೂಪದಲ್ಲಾಗಲಿ ಬಂದಿದ್ದು, ಆ ವಸ್ತುವಿನ ಪ್ರಸ್ತುತ ಮಾರುಕಟ್ಟೆ ಬೆಲೆ ಎಲ್ಲಾ ವಿವರವನ್ನು ಸಂಗ್ರಹಿಸುವುದೇ ಪ್ರತಿ ತಿಂಗಳ ಮೊದಲನೆಯ ವಾರದ ಕಾಯಕ. ಕರ‍್ಚಿನ ಪೂರ‍್ಣ ವಿವರವನ್ನು ಆಡಳಿತ ಮಂಡಳಿಗೆ ನೀಡಬೇಕಿತ್ತು. ಮ್ಯಾನೇಜ್‍ಮೆಂಟ್ ಮೀಟಿಂಗ್‍ಗೆ ಇನ್ನೆರೆಡು ದಿನ ಮಾತ್ರ ಬಾಕಿ ಇತ್ತು. ಹಿಡಿದ ಕೆಲಸ ಮುಗಿಸದೇ ಅವರು ಮೇಲೆಳುತ್ತಿರಲಿಲ್ಲ. ಕಾಯಕವೇ ಅವರಿಗೆ ಕೈಲಾಸ. ಪ್ರತಮ ಆದ್ಯತೆ ಅದಕ್ಕೆ. ರಾಯರಿಗಿದು ತಿಳಿದ ವಿಶಯವೇ ಆಗಿತ್ತ್ತು. ಮೊದಲೇ ಗೊಂದಲದ ಗೂಡಾಗಿದ್ದ ರಾಯರ ಮನಸ್ತಿತಿ ಯಾವುದನ್ನೂ ಅಪೇಕ್ಶಿಸಿರಲಿಲ್ಲ. ಉತ್ತರವೂ ಬೇಕಿರಲಿಲ್ಲ. ಬಂದ ಉದ್ದೇಶ ಈಡೇರಿದರೆ ಸಾಕಿತ್ತು.

ನೆತ್ತಿ ಸುಡುವ ಬಯಂಕರ ಬಿಸಿಲಲ್ಲಿ ನಡೆದು ಬಂದದ್ದರಿಂದಲೋ ಅತವಾ ಇಳಿ ವಯಸ್ಸಿನ ಕಾರಣವೋ ಅತವಾ ಅರೆಹೊಟ್ಟೆಯ ಕಾರಣವೋ ಅತವಾ ಎಲ್ಲವೂ ಒಟ್ಟಾಗಿ ಸೇರಿದ ಕಾರಣವೋ, ರಾಯರಿಗೆ ತುಂಬಾ ಆಯಾಸವಾಗಿತ್ತು. ದಣಿವಾಗಿತ್ತು. ವ್ರುದ್ದಾಶ್ರಮಕ್ಕೆ ಬರುವವರ, ಸಂದರ‍್ಶಕರ ಅನುಕೂಲಕ್ಕಾಗಿ ಅಲ್ಲೇ ಜಗ್‍ನಲ್ಲಿ ಇರಿಸಿದ್ದ ನೀರನ್ನು ಲೋಟಕ್ಕೆ ಹಾಕಿಕೊಂಡು ಕುಡಿದರು, ತಣ್ಣಗಿನ ಬಿಸಲೇರಿ ನೀರು. ಹಿತವೆನಿಸಿತು. ಆರಾಮವೆನಿಸಿತು.

ರಾಯರು ಟೇಬಲ್ ಬಳಿಯಿದ್ದ ಚೇರನ್ನು ಏಳೆದು ಸರಿ ಪಡಿಸಿಕೊಂಡು ಕೂತರು. ಆಚಾರ‍್ಯರ ಕೆಲಸ ಮುಗಿಯುವವರೆಗೂ ಕಾಯುವುದು ಅನಿವಾರ‍್ಯ. ಕಾಯಲು ಬೇಸರವಾದರೂ ವಿದಿಯಿಲ್ಲ. ಕಾಯಲೇಬೇಕು. ಅಂತಹ ಗಟ್ಟ ತಲುಪಿದ್ದರು ರಾಯರು. ಯಾರಿಗೂ ಬೇಡವಾದ ಸ್ತಿತಿ. ವಿದಿಯ ಆಟ. ಇಲ್ಲಿಗೆ ತಂದು ನಿಲ್ಲಿಸಿತ್ತು. ಈ ಆಶ್ರಮ ತಮ್ಮದೇ ಆಯ್ಕೆಯ ಜಾಗ. ಕಂಡ ಜಾಗ. ಒಳಗೆ ಒಂದಿಬ್ಬರು ಹಳೆಯ ಸ್ನೇಹಿತರು ಇದ್ದರೂ ಇರಬಹುದು.

ಆಯಾಸವನ್ನು ಪರಿಹರಿಸಿಕೊಳ್ಳಲು ಪ್ಯಾನ್ ತಿರುಗುತ್ತಿದ್ದರೂ ಸಹ ಅಬ್ಯಾಸ ಬಲದಂತೆ ಪಂಚೆಯ ತುದಿಯಿಂದ ಗಾಳಿಯನ್ನು ಹಾಕಿಕೊಂಡರು. ಹಾಯೆನಿಸಿತು. ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಹಾಗೆಯೇ ಒಂದರೆಕ್ಶಣ ಹಿಂದಕ್ಕೆ ಒರಗಿದರು.

ಡಿಸೆಂಬರ್ ತಿಂಗಳ ಒಂದು ದಿನ. ಚುಮು ಚುಮು ಚಳಿ. ತಣ್ಣನೆಯ ಗಾಳಿ ಬೀಸುತ್ತಿತ್ತು. ಸುರಿಯುತ್ತಿರುವ ಮಂಜನ್ನು ಹೊಡೆದೊಡಿಸಲು ಸೂರ‍್ಯನ ಕಿರಣಗಳು ಹರಸಾಹಸ ಪಡುತ್ತಿದ್ದವು. ಕೊಂಚ ಸಪಲತೆಯನ್ನೂ ಗಳಿಸಿತ್ತು ಕೂಡ.

****************************************************

ಕರ‍್ತವ್ಯ ನಿಶ್ಟೆಯ ರಾಯರು ಚಳಿ ಮಳೆ ಗಾಳಿ ಯಾವುದಕ್ಕೂ ಸೊಪ್ಪು ಹಾಕದೇ, ಯಾವುದನ್ನೂ ಗಮನಿಸದೆ, ಲೆಕ್ಕಿಸದೆ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಿದ್ದರು. ಕಚೇರಿಯ ಒಳ ಹೊಕ್ಕು ತಮ್ಮ ಆಸನದಲ್ಲಿ ಇನ್ನೇನು ಕೂರಬೇಕೆನ್ನುವಾಗ, ಹಿಂದೆ ಯಾರೋ ಬಂದಂತಾಗಿ ತಿರುಗಿ ನೋಡಿದರು. ಬಂದವ ಆರು ಅಡಿಯ ಆಜಾನುಬಾಹು ವ್ಯಕ್ತಿ. ಸೂಟು ಬೂಟು ಟೈ ಹಾಕಿ ಕೊಂಡಿದ್ದ. ಚಳಿಗಾಲಕ್ಕೆ ಸೂಕ್ತವಾದ ಬೆಚ್ಚಗಿನ ಡ್ರೆಸ್. ಗಮ್ಮೆನ್ನುವ ಸೆಂಟ್. ಮುಕದಲ್ಲಿ ಗಾಂಬೀರ‍್ಯತೆ ಎದ್ದು ಕಾಣುತ್ತಿತ್ತು. ಅಸಾದಾರಣ ವ್ಯಕ್ತಿತ್ವವುಳ್ಳ ಮನುಶ್ಯ. ಇದೇ ಮೊದಲ ಬಾರಿ ಆತನ ಮುಕ ದರ‍್ಶನ. ಯಾರೆಂದು ನೆನೆಪಾಗಲಿಲ್ಲ. ಎಲ್ಲಿಯೂ ನೋಡಿದಂತೆ ಕಾಣಿಸುತ್ತಿಲ್ಲ. ಯಾರಿರಬಹುದು? ಯೋಚಿಸಿದರು. ಹೊಳೆಯಲಿಲ್ಲ. ರಾಯರು ಗೊಂದಲಕ್ಕೆ ಸಿಲುಕಿದರು.

ಆತ ರಾಯರನ್ನು ನೋಡಿ ಮುಗುಳ್ನಕ್ಕು ‘ನಮಸ್ಕಾರ ಸಾರ‍್’ ಎಂದು ಕೈ ಮುಗಿದ. ಅಚಾನಕವಾಗಿ ರಾಯರೂ ಕೈ ಮುಗಿದರು.

ಬಂದವ ಸಾಮಾನ್ಯನಾಗಿದ್ದಿದ್ದರೆ ಸ್ವಲ್ಪಹೊತ್ತು ಬಿಟ್ಟು ಬರುವಂತೆ ನೇರವಾಗಿ ಹೇಳಬಹುದಿತ್ತು. ಈಗ ಬಂದಿರುವಾತನ ಮುಕಚರ‍್ಯೆ, ನಡವಳಿಕೆ, ವೇಶ ಬೂಶಣ ನೋಡಿದಲ್ಲಿ ರಾಯರಿಗೆ ಈತ ಸಾಮಾನ್ಯ ಅನಿಸಲಿಲ್ಲ. ಪ್ರಮುಕ ಕೆಲಸದ ಮೇಲೆ ಬಂದಿರವ ಪ್ರಬಾವಿ ವ್ಯಕ್ತಿಯಿರಬೇಕು ಎಂದೆನಿಸಿತು. ಮುಕಚರ‍್ಯೆಯಿಂದಲೇ ವ್ಯಕ್ತಿಯನ್ನು ಅಳೆಯುವ ಕಲೆ ರಾಯರಿಗೆ ಕರಗತವಾಗಿತ್ತು. ಆತನ ಗತ್ತು ಗೈರತ್ತು ಅದಕ್ಕೆ ಪುಶ್ಟಿ ಕೊಟ್ಟ್ತಿತ್ತು. ಯೋಚನಾ ಲಹರಿಯಲ್ಲೇ ರಾಯರು ಮುಳುಗಿದರು.

“ತಮ್ಮ ಅಬ್ಯಂತರವಿಲ್ಲದಿದ್ದರೆ ನಾನು ಕೂರಬಹುದೇ…….?“

ಬಂದಿದ್ದ ವ್ಯಕ್ತಿ ನೇರವಾಗಿ ರಾಯರನ್ನು ಕೇಳಿದ್ದರು. ರಾಯರು ಕೈ ಸನ್ನೆಯಿಂದಲೇ ಕುರ‍್ಚಿಯತ್ತ ತೋರಿಸಿದರು. ಕುರ‍್ಚಿಯಲ್ಲಿ ಕುಳಿತ. ರಾಯರ ಕೂರುವಿಕೆಯ ಹಾದಿಯನ್ನೇ ಎದುರು ನೋಡುತ್ತಿದ್ದ ಆಗಂತುಕ ವ್ಯಕ್ತಿ.

ರಾಯರ ಮನದಲ್ಲಿ ಹಲವಾರು ಯೋಚನೆಗಳು ಹರಿದಾಡಿದವು. ಯಾರೀತ? ನನ್ನಿಂದ ಏನನ್ನು ಬಯಸಿ ಇಲ್ಲಿಗೆ ಬಂದಿದ್ದಾರೆ? ದೇಣಿಗೆ ಯಾಚಿಸಲು ಬಂದಂತೆ ಕಾಣುತ್ತಿಲ್ಲ. ಯಾರ ಪರವಾಗಿ ಬಂದಿರಬಹುದು? ಲಂಚ ಕೊಟ್ಟು ಕೆಲಸ ಸಾದಿಸಿಕೊಳ್ಳಲು ಬಂದಿರಬಹುದೇ? ಬೆಳ್ಳಂಬೆಳಿಗ್ಗೆನೆ ಬರಲು ಕಾರಣವಾದರೂ ಏನು? ಏನಿರಬಹುದು ಅವನ ಮನಸ್ಸಿನಲ್ಲಿ? ನನ್ನಿಂದ ಏನಾದರೂ ತಪ್ಪಾಗಿದೆಯೇ? ಎಲ್ಲಾದರೂ ಎಡವಿದ್ದೇನೆಯೇ? ಯಾರಿಗಾದರೂ ಕಾನೂನಿನ ಚೌಕಟ್ಟು ಬಿಟ್ಟು ಹೊರ ಹೋಗಿ ಕೆಲಸ ಮಾಡಿ ಕೊಟ್ಟಿದ್ದೇನೆಯೆ? ನನ್ನ ಮೇಲೆ ಯಾರಾದರೂ ಇಲ್ಲ ಸಲ್ಲದ ದೂರನ್ನು ನೀಡಿರಬಹುದೇ? ಆರೋಪವನ್ನು ಹೊರಸಿರಬಹುದೇ? ಅದರ ವಿಚಾರಣೆಗೆ ಬಂದಿರುವ ಅದಿಕಾರಿಯೇ? ವಿಜಿಲೆನ್ಸ್ ಇಲಾಕೆಯವರೇ? ನನ್ನ ಸಂದರ‍್ಶನಕ್ಕೆ ಬಂದಿರುವ ಪತ್ರಿಕೆಯವರೇ? ನೂರೆಂಟು ಪ್ರಶ್ನೆಗಳು ಒಟ್ಟಿಗೆ ರಾಯರ ತಲೆ ಮುತ್ತಿದವು. ಕೊಂಚ ವಿಚಲಿತರಾದಂತೆ ಕಂಡು ಬಂದರು ರಾಯರು. ತಬ್ಬಿಬ್ಬಾದರು. ಅಳುಕು ಒಂದರೆಕ್ಶಣ ಅವರಲ್ಲಿ ತಲೆ ಎತ್ತಿತು.

ಮಾಡದ ಕೆಲಸಕ್ಕೆ ಹೆದರಬೇಕೇಕೆ? ತಮ್ಮನ್ನು ತಾವೇ ಸಂತೈಸಿಕೊಂಡರು, ಯಾರೆಂದು ತಿಳಿದುಕೊಳ್ಳುವ ಆಕಾಂಕ್ಶೆ ಬಲವಾಯಿತು. ದೈರ‍್ಯ ಬಂತು. ಮನದ ಗೊಂದಲದಿಂದ ಹೊರಬಂದು, ಬಂದಿದ್ದ ವ್ಯಕ್ತಿಯನ್ನು ನೇರವಾಗಿ ಕೇಳಿದರು.

“ತಮ್ಮ ಪರಿಚಯವಾಗಲಿಲ್ಲ……..”

“ದಯವಿಟ್ಟು ಕ್ಶಮಿಸಿ. ನನ್ನನ್ನು ನಾನು ಮೊದಲೇ ಪರಿಚಯಿಸಿಕೊಳ್ಳಬೇಕಿತ್ತು. ಪ್ರದ್ಯುಮ್ನ ನನ್ನ ಹೆಸರು. ನಾನು ಈ ರಾಜ್ಯದಲ್ಲಿ ಅತ್ಯದಿಕ ಪ್ರಸಾರದ ಬಾಗ್ಯ ಪಡೆದಿರುವ ಕನ್ನಡ ದಿನ ಪತ್ರಿಕೆಯಲ್ಲಿ ಒಬ್ಬ ಹಿರಿಯ ಅದಿಕಾರಿ. ತಮ್ಮಿಂದ ಒಂದು ಪೇವರ್ ಆಗಬೇಕಿತ್ತು. ಅದಕ್ಕಾಗಿ ಕಾಣಲು ಬಂದೆ. ಕಚೇರಿ ತೆರೆಯುವ ವೇಳೆಗೇ ಬಂದಿದ್ದಕ್ಕೆ ಕ್ಶಮೆಯಿರಲಿ”

“ರಾಯರೇ, ತಮ್ಮ ಬಗ್ಗೆ ಬಹುಶಃ ತಮಗಿಂತ ಚನ್ನಾಗಿ ನಾವು ಬಲ್ಲೆವು ಎಂದರೆ ತಮಗೆ ಆಶ್ಚರ‍್ಯವಾಗುತ್ತಲ್ಲವೇ? ನಿಜ. ನಾವು ತಿಳಿದುಕೊಂಡಿದ್ದೇವೆ. ಎಶ್ಟಾದರೂ ಪತ್ರಿಕೆಯಲ್ಲಿ ನಮ್ಮ ಕೆಲಸ ನೋಡಿ. ಜನರಿಗೆ ಬ್ರೇಕಿಂಗ್ ನ್ಯೂಸ್ ಕೊಡಲು ಇವೆಲ್ಲಾ ಅವಶ್ಯ. ಶೇಕಡ ತೊಂಬತ್ತರಶ್ಟು ಸರ‍್ಕಾರಿ ಅದಿಕಾರಿಗಳ ರೀತಿ, ನೀತಿ, ನಿಶ್ಟೆ, ಅವರ ಗಾಡ್ ಪಾದರ್‍ಗಳು, ಹಿಂದಿರುವ ರಾಜಕಾರಣಿಗಳು, ವ್ಯವಹಾರಗಳು, ಹಣದ ಶಕ್ತಿ, ಜನ ಬಲ, ಜಾತಿ ಬಲ ಎಲ್ಲಾ ವಿವರವು ನಮ್ಮಲ್ಲಿದೆ. ಬೇಕೆಂದ ಕೋಡಲೇ ಸಂಗ್ರಹಿಸಲು ಕಶ್ಟ ಸಾದ್ಯ ನೋಡಿ, ಅದಕ್ಕೆ ಮೊದಲೇ ಸಂಗ್ರಹಿಸಿ ರೆಡಿ ಇಟ್ಟಿರುತ್ತೇವೆ. ಬೇಕೆನಿಸಿದಾಗ ಉಪಯೋಗಕ್ಕೆ ಬರುತ್ತೆ ಅನ್ನುವ ಏಕೈಕ ದ್ರುಶ್ಟಿಯಿಂದ. ಸರಿಯಲ್ಲವೇ?”

“ಅಂದ ಹಾಗೆ ಬಂದ ಉದ್ದೇಶವನ್ನು ನೇರವಾಗಿ ಹೇಳುತ್ತೇನೆ. ಅದೇ ನನ್ನ ಅಬ್ಯಾಸ. ಸ್ವಬಾವ ಸಹ. ಸುತ್ತಿ ಬಳಸಿ ಮಾತನಾಡುವನಲ್ಲ ನಾನು. ಏನೇ ಇದ್ದರೂ ನೇರ ಮಾತುಗಳು. ಕಡ್ಡಿ ತುಂಡು ಮಾಡಿದಂತೆ. ನಿಮಗೂ ನೇರ ಮಾತುಗಳೆಂದರೆ ಇಶ್ಟ ಎಂದು ಬಲ್ಲೆ”

“ಇನ್ನು ನಾಲ್ಕಾರು ತಿಂಗಳಲ್ಲಿ ತಾವು ವಯೋ ನಿವ್ರುತ್ತಿ ಹೊಂದುತ್ತಿರುವ ವಿಶಯ ಗೊತ್ತು. ಸರ‍್ಕಾರದ ಸೇವೆಯಲ್ಲಿ ಇದ್ದಶ್ಟು ದಿನ ತಾವು ಯಾವುದೇ ಆಮಿಶಕ್ಕೆ ಒಳಗಾಗದೆ ಕೆಲಸ ಮಾಡಿದ್ದೀರಿ. ನೇರವಾಗಿ, ದಿಟ್ಟವಾಗಿ, ನಿಶ್ಟೂರವಾಗಿ ಹಾಗೂ ಯಾರ, ಯಾವ ಮುಲಾಜಿಗೂ ತುತ್ತಾಗದೆ ನಿಶ್ಟೆಯಿಂದ ಕೆಲಸ ನಿರ‍್ವಹಿಸಿದ್ದೀರಿ. ನಿಯತ್ತಿಗೆ ಸರ‍್ಕಾರದಲ್ಲಿ ಲಬ್ಯವಿರುವ ವರ‍್ಗಾವಣೆಯಂತ ತಲೆದಂಡವನ್ನೂ ಸಹ ತೆತ್ತಿದ್ದೀರಿ. ಅದೂ ಆರಾರು ತಿಂಗಳಿಗೆ ಒಮ್ಮೆ. ಆದರೂ ಯಾವುದಕ್ಕೂ ಬಗ್ಗದೆ ಸೆಟೆದು ನಿಂತು ಸೇವೆಯ ಕೊನೆ ಹಂತಕ್ಕೆ ಬಂದು ತಲುಪಿದ್ದೀರಿ. ನಿವ್ರುತ್ತಿಯ ಅಂಚಿಗೆ ಬಂದಿದ್ದೀರಿ. ಅದಕ್ಕಾಗಿ ಹ್ರುತ್ಪೂರ‍್ವಕ ದನ್ಯವಾದಗಳು, ನಮ್ಮ ಪತ್ರಿಕೆಯ ಕಡೆಯಿಂದ. ದಯವಿಟ್ಟು ಸ್ವೀಕರಿಸಿ”

“ಕ್ರಿಕೆಟ್ ಮೈದಾನದಲ್ಲಿ ಸೂಜಿಯನ್ನು ಹುಡುಕುವಶ್ಟೇ ಕಶ್ಟ ಸರ‍್ಕಾರಿ ಸೇವೆಯಲ್ಲಿ ನಿಶ್ಟ, ನಿಸ್ವಾರ‍್ತ ಅದಿಕಾರಿಗಳನ್ನು ಹುಡುಕುವುದು. ನಾನು ಕಂಡ ಅಪರೂಪದ ದಕ್ಶ ಅದಿಕಾರಿ ತಾವು. ದಿಟ್ಟ ಸರ‍್ಕಾರಿ ಅದಿಕಾರಿಗಳನ್ನು ಕಂಡರೆ ನನಗೆ ವೈಯುಕ್ತಿಕವಾಗಿ ಬಹಳ ಗೌರವ. ಅಂತಹ ಅದಿಕಾರಿಗಳನ್ನು ಹುಡುಕಿ ಅರಸಿಕೊಂಡು ಹೋಗಿ ಪರಿಚಯಿಸಿಕೊಂಡು ನಮ್ಮ ಬಳಗಕ್ಕೆ ಸೇರಿಸಿಕೊಳ್ಳುವುದೇ ನನ್ನ ಪ್ರತಮ ಆದ್ಯತೆ”

“ತಾವು ಮರೆತಿರುವ ಒಂದು ವಿಚಾರವನ್ನು ನೆನೆಪಿಸುವ ಸಮಯ ಸನ್ನಿಹಿತವಾಗಿದೆ. ತಮಗೆ ಕಾಲೇಜಿನ ದಿನಗಳಲ್ಲಿ ಬರೆಯುವ ಹವ್ಯಾಸ ಇದ್ದ ಬಗ್ಗೆ ಕೇಳಿದ್ದೀನಿ. ತಾವು ಬರೆದ ಬರಹಗಳು ನೇರವಾಗಿ ವಿಶಯಕ್ಕೆ ಸಂಬಂದಿಸಿದಂತೆ ಹಾಗೂ ನಿಶ್ಟೂರವಾಗಿ ಇರುತ್ತಿದ್ದುದರ ಬಗ್ಗೆ ತಮ್ಮನ್ನು ಬಲ್ಲವರಿಂದ ಕೇಳಿ ತಿಳಿದುಕೊಂಡಿದ್ದೀನಿ. ಅವರು ಕೊಟ್ಟ ನಿಮ್ಮ ಒಂದೆರೆಡು ಲೇಕನವನ್ನೂ ಓದಿದ್ದೀನಿ. ಸೊಗಸಾಗಿದೆ. ಬರವಣಿಗೆಯಲ್ಲಿ ತೀಕ್ಶ್ಣತೆಯಿದೆ, ಹಿಡಿತವಿದೆ”

“ಸರ‍್ಕಾರಿ ಕೆಲಸಕ್ಕೆ ಸೇರಿದ ಮೇಲೆ ಬರವಣಿಗೆಯ ಆಸೆ ಮೊಟುಕಾಗಿರಬೇಕಲ್ಲವೆ? ಇಲ್ಲವೇ ಇಲ್ಲ ಎಂದರೂ ಸರಿ ಎನಿಸುತ್ತದೆ. ಒಪ್ಪುತ್ತದಲ್ಲವೇ? ಸರ‍್ಕಾರಿ ಕೆಲಸ ಬುದ್ದಿವಂತರನ್ನೂ ದಡ್ಡರನ್ನಾಗಿಸುತ್ತೆ. ಜೀ ಹುಜೂರ್‍ಗಳನ್ನಾಗಿ ಮಾಡುತ್ತೆ”

“ಬರೆಯುವ ತುಡಿತ ಈಗಲೂ ತಮ್ಮಲ್ಲಿ ಸುಪ್ತವಾಗಿದೆ ಎಂದು ನನ್ನ ಅನಿಸಿಕೆ. ಏನಂತೀರಿ? ಆ ತುಡಿತಕ್ಕೆ ಸಾವಿಲ್ಲ. ನಿಮ್ಮ ಬರವಣಿಗೆಯ ಸುಪ್ತ ಚೇತನವನ್ನು ಬಡಿದೆಬ್ಬಸುವ ಕೆಲಸ ಮಾಡಲು ಉತ್ಸುಕವಾಗಿದೆ ನಮ್ಮ ಪತ್ರಿಕೆ. ನೀವು ನಮ್ಮ ಪತ್ರಿಕೆಗೆ ಬರೆಯಬೇಕು. ತಮ್ಮ ನೇರ ನಿಶ್ಟೂರ ನಿರ‍್ಬಯ ಬರವಣಿಗೆಯಿಂದ ನಮ್ಮ ಪತ್ರಿಕೆ ಪ್ರಕಾಶಮಾನವಾಗಬೇಕು. ಜನರ ಮನಕ್ಕೆ ಸ್ಪಂದಿಸಬೇಕು, ಹತ್ತಿರವಾಗಬೇಕು. ಇದು ನನ್ನ ಕಾಳಜಿ”

“ಈ ಕೂಡಲೇ ಅಲ್ಲ. ತಮ್ಮ ಕಟ್ಟು ಪಾಡುಗಳು ಚನ್ನಾಗಿ ತಿಳಿದಿದೆ. ನಿವ್ರುತ್ತಿಯ ನಂತರ ತಾವು ನಮ್ಮ ಬಳಗವನ್ನು ಸೇರಬಹುದು. ತಮಗಾಗಿ ನಮ್ಮಲ್ಲಿ ಒಂದು ಮುಕ್ಯವಾದ ಕೆಲಸವಿದೆ. ಯಾವುದಕ್ಕೂ ತಾವು ನಿವ್ರುತ್ತಿಯ ನಂತರ ದಯವಿಟ್ಟು ನನ್ನನ್ನು ಕಾಣಿ. ಬೇಟಿಯಾಗಿ. ನನ್ನ ಪ್ರತಮ ಆಯ್ಕೆ ತಾವು. ಆ ಕೆಲಸವನ್ನು ತಾವು ಅಚ್ಚುಕಟ್ಟಾಗಿ ನಿರ‍್ವಹಿಸುತ್ತೀರೆಂಬ ಬರವಸೆಯಿಂದಲೇ ತಮಗೆ ಈ ಆಹ್ವಾನ. ಆ ಕೆಲಸವನ್ನು ತಮಗೆ ವಹಿಸಬೇಕೆಂಬುದೇ ನನ್ನ ಇರಾದೆ ಕೂಡ ಆಗಿದೆ. ಈ ಆಪರ್‍ಗೆ ನಾನು ತಮ್ಮಿಂದ ನೇರ ದಿಟ್ಟ ಉತ್ತರವನ್ನೇ ನಿರೀಕ್ಶಿಸಿದ್ದೇನೆ. ಅಲ್ಲಗೆಳಯಲಾರಿರಿ ಎಂದು ಬಲ್ಲೆ. ತಾವು ನಿವ್ರುತ್ತಿ ಹೊಂದುವವರೆಗೂ ನಾವು ಕಾಯಲು ಸಿದ್ದ. ತಮ್ಮ ವ್ಯಕ್ತಿತ್ವಕ್ಕೆ ಸರಿ ಹೊಂದುವ ಕೆಲಸ. ಯೋಚಿಸಿ. ಸಕಾರಾತ್ಮಕ ಉತ್ತರದ ನಿರೀಕ್ಶೆ ನಂದು. ಇದೇ ನಾನು ಬಯಸುವ ಪೇವರ್”

“ನಾನು ತಮ್ಮನ್ನು ಮುಕತಹ ಬೇಟಿಯಾಗಿ ನನ್ನ ಮನದಾಳದ ಮಾತುಗಳನ್ನು ಹೇಳಬೇಕಿತ್ತು. ಹೇಳಿದ್ದೇನೆ. ಅದಕ್ಕಾಗಿ ಬೆಳ್ಳಂಬೆಳಿಗ್ಗೆನೆ ತಾವು ಕೆಲಸದಲ್ಲಿ ತಲ್ಲೀನರಾಗುವ ಮುನ್ನವೇ ಕಂಡಲ್ಲಿ ಉತ್ತಮ ಎಂಬ ದ್ರುಶ್ಟಿಯಿಂದ ಬೇಗನೆ ಬಂದೆ. ನನ್ನಿಂದ ತಪ್ಪಾಗಿದ್ದಲ್ಲಿ ದಯವಿಟ್ಟು ಕ್ಶಮಿಸಿ”

“ನಾನು ಬಂದ ಕೆಲಸ ಆಯ್ತು. ಇದು ನನ್ನ ಕಾರ‍್ಡ್. ಇದರಲ್ಲಿ ಕಚೇರಿಯ ಜೊತೆಗೆ ನನ್ನ ಮನೆಯ ವಿಳಾಸ, ದೂರವಾಣಿ ನಂಬರ್ ಸಹ ಇದೆ. ಬರುವ ಮುಂಚೆ ದಯವಿಟ್ಟು ಪೋನ್ ಮಾಡಿ ಬನ್ನಿ. ಕಚೇರಿಯಲ್ಲಾಗಲಿ ಮನೆಯಲ್ಲಾಗಲಿ ಎಲ್ಲಿ ಬೇಕಾದರೂ ತಾವು ನನ್ನನ್ನು ಬೇಟಿ ಮಾಡಬಹುದು. ನನಗೆ ತಡವಾಗಿದೆ. ನಾನಿನ್ನು ಬರಲೇ. ದಯವಿಟ್ಟು ಹೊರಡಲು ಅನುಮತಿ ಕೊಡಿ. ತಮ್ಮ ಸಮಯವನ್ನು ಹಾಳು ಮಾಡಿದ್ದಲ್ಲಿ ಕ್ಶಮೆಯಿರಲಿ. ಮತ್ತೆ ಬೇಟಿಯಾಗೋಣ”

ರಾಯರ ಉತ್ತರಕ್ಕೂ ಕಾಯದೆ ಆಜಾನುಬಾಹು ವ್ಯಕ್ತಿ ಹೊರಡಲು ಎದ್ದು ನಿಂತ. ಏನು ಮಾಡಬೇಕೆಂದು ರಾಯರಿಗೆ ಆ ಕ್ಶಣ ತೋಚಲಿಲ್ಲ.

“ಒಂದ್ನಿಮಿಶ…..” ಎಂದು ಕಾಲಿಂಗ್ ಬೆಲ್ ಒತ್ತಿದರು.

ಅಟೆಂಡರ್ “ಸಾರ್……” ಎನ್ನುತ್ತಾ ಹಾಜರಾದ. ಬಿಸಿಬಿಸಿ ಎರೆಡು ಕಾಪಿ ತರುವಂತೆ ಅವನಿಗೆ ಆಜ್ನಾಪಿಸಿದರು.

ರಾಯರಿಗೆ ತಮ್ಮ ಬಗ್ಗೆ ಹೆಮ್ಮೆ ಎನಿಸಿತು. ತಮ್ಮ ಇಶ್ಟು ದಿನದ ನಿಸ್ವಾರ‍್ತ ಸೇವೆಗೆ ಸಿಕ್ಕ ಪ್ರತಿಪಲ ಎನ್ನಿಸಿತು. ನಿವ್ರುತ್ತಿಗೆ ಮುನ್ನವೇ ಕೆಲಸದ ಆಪರ್. ಬಯಕೆಯ ಬರವಣಿಗೆ ಕೆಲಸ. ರಾಯರಿಗೆ ನಿರುಮ್ಮಳ.

ರಾಯರ ಮನಸ್ಸಿನಲ್ಲಿ ಮಂತನ ಶುರುವಿಟ್ಟಿತು. ಯಾವ ರೀತಿಯ ಕೆಲಸವಿರಬಹುದು? ಕಚೇರಿಯಲ್ಲಿ ಕುಳಿತೇ ಮಾಡುವುದೇ? ಸಮಾಜದ ಗಣ್ಯ ವ್ಯಕ್ತಿಗಳ ಅತವಾ ರಾಜಕಾರಣಿಗಳ ಸಂದರ‍್ಶನವೇ? ಇಲ್ಲ ಸಾರ‍್ವಾಜನಿಕ ಸಂಪರ‍್ಕಾದಿಕಾರಿಯ ಕೆಲಸವೇ? ಗೊಂದಲವಾಯಿತು. ಬರವಣಿಗೆಯ ಕೆಲಸ ಎಂದು ಅವರಂದಿದ್ದು ಕೊಂಚ ಮುದ ನೀಡಿತ್ತು. ಯಾವುದಾದರಾಗಲಿ ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ. ಒಂದು ಕೈ ನೋಡುವ ಎನಿಸಿತು.

ಅಂದು ತಮ್ಮ. ದಿನ ನಿತ್ಯದ ಕೆಲಸದಲ್ಲಿ ತೊಡಗಿಸಿಕೊಳ್ಳವ ಪ್ರಯತ್ನ ಪಲಿಸಲಿಲ್ಲ. ಪ್ರದ್ಯುಮ್ನ ಬಿಟ್ಟ ಹುಳು ಕೊರೆಯುತ್ತಲೇ ಇತ್ತು ಬೈರಿಗೆಯಂತೆ. ಅಂದಿನ ಕೆಲಸದಲ್ಲಿ ಹಲವಾರು ತಪ್ಪುಗಳು ನುಸುಳಿದವು. ಕೆಲಸವನ್ನು ಮೊಟುಕುಗೊಳಿಸಿ ವಿರಮಿಸಿದರು.

(ಮುಂದುವರೆಯುವುದು : ಕೊನೆ ಕಂತು ನಾಳೆಗೆ)

 (ಚಿತ್ರ ಸೆಲೆ: nursing-care.org )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: