‘ಸ್ಕೈಪ್’ ವೀಡಿಯೋ ಕರೆಯಲ್ಲೊಂದು ಹೊಸ ಮಿಂಚು!

– ರತೀಶ ರತ್ನಾಕರ.

skype-3ಬೇರೆ ಬೇರೆ ನುಡಿಯಾಡುವ ಇಬ್ಬರ ನಡುವೆ ಅನಿಸಿಕೆಗಳ ಹಂಚಿಕೆ ಹಾಗೂ ಮಾತುಕತೆಯನ್ನು ನಡೆಸಲು ನುಡಿಯೇ ಒಂದು ದೊಡ್ಡ ಅಡ್ಡಗೋಡೆ ಎಂಬ ಅನಿಸಿಕೆ ಹಿಂದಿತ್ತು. ಈಗ ಈ ಅಡ್ಡಗೋಡೆಯನ್ನು ಹಂತ ಹಂತವಾಗಿ ಕೆಡವಿಹಾಕುವ ಕೆಲಸವನ್ನು ಗೂಗಲ್ ಟ್ರಾನ್ಸ್ ಲೇಟರ್ ನಂತಹ ನುಡಿಮಾರುಗಗಳು (translator) ಮಾಡುತ್ತಿವೆ. ಇದೀಗ ಮೈಕ್ರೋಸಾಪ್ಟ್ ಕಂಪನಿಯು ಒಂದು ಹೆಜ್ಜೆ ಮುಂದೆ ಹೋಗಿ ‘ಸ್ಕೈಪ್ ನುಡಿಮಾರುಗ’ವನ್ನು (Skype translator) ಹೊರತಂದಿದೆ. ಇದರ ನೆರವಿನಿಂದ ಜರ‍್ಮನ್ ಹಾಗೂ ಪ್ರೆಂಚ್ ನುಡಿಯಾಡುವವರು ಅವರವರ ನುಡಿಯಲ್ಲಿಯೇ, ವೀಡಿಯೋ ಕರೆಯಲ್ಲಿ ಮಾತನಾಡಿಕೊಳ್ಳಬಹುದು!

ಚೂಟಿಯುಲಿ (smartphone) ಇಲ್ಲವೇ ಎಣ್ಣುಕ(computer)ವನ್ನು ಬಳಸಿ ವೀಡಿಯೋ ಕರೆಗಳ ಮೂಲಕ ನೇರವಾಗಿ ಮಾತನಾಡಲು ಸ್ಕೈಪ್ ಅನ್ನು ಬಳಸುತ್ತಾರೆ. ಈಗಿರುವ ‘ಸ್ಕೈಪ್’ ಬಳಕವನ್ನು(application) ಹೊಸದಾಗಿಸಿ ಅದಕ್ಕೊಂದು ನುಡಿಮಾರುಗವನ್ನು ಸೇರಿಸಿಲಾಗಿದೆ. ಒಂದು ಸ್ಕೈಪ್ ವೀಡಿಯೋ ಕರೆಯಲ್ಲಿ ಒಬ್ಬ ಇಂಗ್ಲಿಶ್ ನುಡಿಯನ್ನು, ಮತ್ತೊಬ್ಬ ಪ್ರೆಂಚ್ ನುಡಿಯನ್ನು ಆಯ್ದುಕೊಂಡು ಮಾತನಾಡುತ್ತಿದ್ದರೆ, ನುಡಿಮಾರುಗದ ತೆರೆಯ ಹಿಂದೆ ಈ ಕೆಳಗಿನ ಕೆಲಸಗಳು ನಡೆಯುತ್ತಿರುತ್ತವೆ;

  1. ವೀಡಿಯೋ ಕರೆಯಲ್ಲಿ ಇಂಗ್ಲಿಶಿನವನು/ಪ್ರೆಂಚಿನವನು ಮಾತನಾಡಿದ್ದನ್ನು ಈ ಬಳಕವು ಬರಹವನ್ನಾಗಿ ಮಾರ‍್ಪಾಡಿಸುತ್ತದೆ.
  2. ಈ ಬರಹವು ಇನ್ನೊಬ್ಬ ಆಯ್ದುಕೊಂಡ ಪ್ರೆಂಚ್/ಇಂಗ್ಲಿಶ್ ನುಡಿಗೆ ಮಾರ‍್ಪಾಟುಗೊಳ್ಳುತ್ತದೆ.
  3. ಬಳಿಕ ಆ ಪ್ರೆಂಚ್/ಇಂಗ್ಲಿಶ್ ಬರಹವನ್ನು ಮಾತಾಗಿ ಮಾರ‍್ಪಾಡಿಸಿ ವೀಡಿಯೋ ಕರೆಯಲ್ಲಿ ಎದುರಿದ್ದವನಿಗೆ ಕೇಳಿಸಲಾಗುತ್ತದೆ.

ಮೇಲಿನ ಹಂತಗಳೆಲ್ಲಾ ಮುಗಿದು ಒಬ್ಬ ಮಾತನಾಡಿದ್ದು ಇನ್ನೊಬ್ಬನಿಗೆ ಕೇಳಿಸಲು ಕೆಲವು ಸೆಕೆಂಡುಗಳ ಹೊತ್ತು ತಗೆದುಕೊಳ್ಳಬಹುದು. ಈ ಹೊತ್ತನ್ನು ಕಡಿಮೆಗೊಳಿಸಲು ಮೈಕ್ರೋಸಾಪ್ಟ್ ಪ್ರಯತ್ನಿಸುತ್ತಿದೆ. ಆದರೆ ಇಬ್ಬರ ನಡುವಿನ ಮಾತುಕತೆಗೆ ಕೆಲವು ಸೆಕೆಂಡುಗಳಶ್ಟು ತಡವಾಗುವುದು ದೊಡ್ಡ ಅಡ್ಡಿಯೇನಲ್ಲ. ಅವರು ತಮ್ಮದೇ ನುಡಿಯಲ್ಲಿ ಮನಬಿಚ್ಚಿ ಮಾತುಕತೆ ನಡೆಸಬಹುದು. ಇದಲ್ಲದೇ ವೀಡಿಯೋ ಕರೆಯಲ್ಲಿ ಬೇರೆ ಬೇರೆ ನುಡಿಯಲ್ಲಿ ಮಾತನಾಡುವಾಗ ತೆರೆಯ ಬದಿಯಲ್ಲಿ ‘ಬರಹವಾಗಿ ಮಾರ‍್ಪಾಟುಗೊಂಡ ಅವರ ಮಾತುಗಳು’ ಇಬ್ಬರಿಗೂ ಕಾಣುತ್ತಿರುತ್ತವೆ. ಒಂದು ವೇಳೆ ನುಡಿಮಾರ‍್ಪಾಟಾದ ಮಾತು ಸರಿಯಾಗಿ ಕೇಳದಿದ್ದರೆ ಇಲ್ಲವೇ ತಿಳಿಯದಿದ್ದರೆ, ಕೂಡಲೇ ಅಲ್ಲಿರುವ ಬರಹವನ್ನು ಓದಿಕೊಳ್ಳಬಹುದು.

ಯಾವ ಯಾವ ನುಡಿಗಳಿಗೆ ಈ ಸೇವೆ ಸಿಗುತ್ತಿದೆ?

skype2ಸದ್ಯಕ್ಕೆ ಅರಾಬಿಕ್, ಚೈನೀಸ್, ಇಂಗ್ಲಿಶ್, ಪ್ರೆಂಚ್, ಜರ‍್ಮನ್, ಇಟಾಲಿಯನ್, ಪೋರ‍್ಚುಗೀಸ್, ಪೋರ‍್ಚುಗೀಸ್ ಬ್ರೆಜಿಲಿಯನ್, ರಶಿಯನ್ ಹಾಗೂ ಸ್ಪ್ಯಾನಿಶ್ ನುಡಿಗಳು ಸೇರಿ ಒಟ್ಟು 8 ನುಡಿಗಳಿಗೆ ಅವರದೇ ನುಡಿಯಲ್ಲಿ ಸ್ಕೈಪ್ ವೀಡಿಯೋ ಕರೆ ಮಾಡುವ ಸೇವೆ ಸಿಗುತ್ತಿದೆ.

ಇದಲ್ಲದೇ ಸುಮಾರು 50 ನುಡಿಗಳಲ್ಲಿ ಸ್ಕೈಪ್ ನಲ್ಲಿ ಹರಟಬಹುದು (chat). ಹರಟೆಯಲ್ಲಿ ಇಂಗ್ಲಿಶಿನವನು ಬರೆದ ಸಾಲುಗಳು ನೇರವಾಗಿ ಪ್ರೆಂಚಿನವನಿಗೆ ಪ್ರೆಂಚ್ ನುಡಿಯಲ್ಲಿ ಮಾರ‍್ಪಾಟಾಗಿ ಕಾಣಿಸಿಕೊಳ್ಳುತ್ತದೆ. ಇದೇ ಬಗೆಯಲ್ಲಿ 50 ಬೇರೆ ಬೇರೆ ನುಡಿಯಾಡುಗರು ಅವರದೇ ನುಡಿಯಲ್ಲಿ ಹರಟಬಹುದು!

ಸ್ಕೈಪ್ ನುಡಿಮಾರುಗವನ್ನು ಅಳವಡಿಸಿಕೊಳ್ಳುವುದು ಹೇಗೆ?

ಇದಕ್ಕೆ ವಿಂಡೋಸ್ 7 ಕ್ಕಿಂತ ಮೇಲಿನ ನಡೆಸೇರ‍್ಪಾಟು(Operating system) ನಿಮ್ಮ ಎಣ್ಣುಕದಲ್ಲಿರಬೇಕು. ಆಂಡ್ರಾಯ್ಡ್ ಹಾಗು ಐಓಎಸ್ ಚೂಟಿಯುಲಿಗಳಿಗೂ ಈ ಸೇವೆ ಸಿಗುತ್ತಿದೆ. ಮೊದಲು ಸ್ಕೈಪ್ ಬಳಕವನ್ನು ಇಳಿಸಿಕೊಂಡು ಅಳವಡಿಸಿದರಾಯಿತು. ನಿಮ್ಮ ಎಣ್ಣುಕ/ಚೂಟಿಯುಲಿಯಲ್ಲಿರುವ ಸ್ಕೈಪ್ ಹಳೆಯ ವರಸೆ(version) ಆಗಿದ್ದರೆ ಅದನ್ನು ಹೊಸದಾಗಿಸಿ. ಇನ್ನು ಸ್ಕೈಪ್ ನುಡಿಮಾರುಗವನ್ನು ಬಳಸಲು ಕೆಳಗಿನ ಹಂತಗಳನ್ನು ಪಾಲಿಸಿ.

  1.  ಯಾರೊಂದಿಗೆ ಮಾತನಾಡಲು ಬಯಸುವಿರೋ ಅವರ ಹೆಸರನ್ನು ಆರಿಸಿಕೊಳ್ಳಿ.
  2. ಅವರ ಹೆಸರಿನ ಜೊತೆ ಒಂದು ನೆಲೆ(globe) ತಿಟ್ಟ ಕಾಣುತ್ತದೆ (ಕೆಳಗಿನ ಚಿತ್ರ ನೋಡಿ), ಅದನ್ನು ಒತ್ತಿ.
  3. ಆಗ ಒಂದು ಪುಟ್ಟ ತೆರೆ ಕಾಣಿಸಿಕೊಳ್ಳುತ್ತದೆ. ಅಲ್ಲಿ ಸ್ಕೈಪ್ ನುಡಿಮಾರುಗವನ್ನು ಆಯ್ದುಕೊಳ್ಳಿ.
  4. ಬಳಿಕ ನಿಮ್ಮ ನುಡಿ ಮತ್ತು ನೀವು ಮಾತನಾಡಲು ಬಯಸುವವರ ನುಡಿಯನ್ನು ಆರಿಸಿಕೊಳ್ಳಿ.
  5. ನಿಮ್ಮ ವೀಡಿಯೋ ಕರೆಯನ್ನು ಶುರುಮಾಡಿ. ಅಶ್ಟೆ.

skype1

ವೀಡಿಯೋ ಕರೆ ಮಾಡುವಾಗ ಹೆಡ್ ಸೆಟ್ ಬಳಸಿದರೆ ನುಡಿಮಾರ‍್ಪಾಟಾದ ಮಾತು ಚೆನ್ನಾಗಿ ಕೇಳಿಸುತ್ತದೆ ಎಂದು ಸ್ಕೈಪ್ ಹೇಳುತ್ತದೆ. ಹಾಗೆಯೇ ತೊಡಕಿಲ್ಲದೇ ಸ್ಪಶ್ಟವಾಗಿ ಮಾತನಾಡಿದರೆ ಮಾತುಕತೆ ಚೆನ್ನಾಗಿ ಸಾಗುತ್ತದೆ. ಈ ನುಡಿಮಾರುಗಕ್ಕೆ ಬಳಸಿರುವ ಚಳಕ ಇನ್ನೂ ಚೆನ್ನಾಗಿ ಕೆಲಸ ಮಾಡಲು ನುಡಿಮಾರುಗವನ್ನು ಹೆಚ್ಚು ಹೆಚ್ಚು ಮಂದಿ ಬಳಸಬೇಕಿದೆ. ಹೆಚ್ಚು ಬಳಸಿದಂತೆಲ್ಲಾ, ಹೆಚ್ಚು ಪದಗಳ ಬಳಕೆ ಆಗುತ್ತದೆ, ಆ ಪದಗಳು ನುಡಿಮಾರ‍್ಪಾಟಿನ ಕಣಜಕ್ಕೆ ಸೇರಿಕೊಳ್ಳುತ್ತವೆ ಇದರಿಂದ ನುಡಿಮಾರ‍್ಪಾಟು ಹೆಚ್ಚು ಸರಿಯಾಗುತ್ತಾ ಹೋಗುತ್ತದೆ ಎಂದು ಮೈಕ್ರೋಸಾಪ್ಟ್ ಹೇಳಿಕೊಂಡಿದೆ.

ನಿಮ್ಮ ನುಡಿಯಲ್ಲೂ ಈ ಸ್ಕೈಪ್ ನುಡಿಮಾರುಗ ಸಿಗಬೇಕೆಂದರೆ ಏನು ಮಾಡಬೇಕು?

ಬೇರೆ ಬೇರೆ ನುಡಿಯಾಡುಗರ ಪಾಲ್ಗೊಳ್ಳುವಿಕೆಯಿಂದ ಈ ನುಡಿಮಾರುಗವನ್ನು ಕಟ್ಟಲಾಗಿದೆ. ಹಾಗಾಗಿ ನಿಮ್ಮ ನುಡಿಯಲ್ಲಿ ಈ ಸೇವೆ ಬೇಕೆಂದರೆ ನುಡಿಮಾರ‍್ಪಾಟಿನ ಕೆಲಸದಲ್ಲಿ ಪಾಲ್ಗೊಳ್ಳಬಹುದು ಅದಕ್ಕಾಗಿ ಈ ಕೊಂಡಿಯನ್ನು ನೋಡಬಹುದು.

ಜಗತ್ತಿನಲ್ಲಿ ಹರಡಿರುವ ಬೇರೆ ಬೇರೆ ನುಡಿಯಾಡುವ ಮಂದಿಯನ್ನು ತಲುಪುವುದರ ಜೊತೆಗೆ ಈ ಮಂದಿಯನ್ನು ಬೆಸೆಯುವುದಕ್ಕೂ ನುಡಿಮಾರುಗದ ಚಳಕಗಳು ನೆರವಾಗುತ್ತಿವೆ. ಕನ್ನಡದವ ಕನ್ನಡದಲ್ಲೇ ಮಾತನಾಡಿಕೊಂಡು, ಬೆಂಗಾಲಿಯವ ಬೆಂಗಾಲಿಯಲ್ಲೇ ಮಾತನಾಡಿಕೊಂಡು ಇಬ್ಬರೂ ಹರಟೆ ಹೊಡೆಯಲು ನೆರವಾಗುವಂತಹ ಎಣಿಗಳು (devices) ಬರುವ ಕಾಲ ದೂರವಿಲ್ಲ.

(ಮಾಹಿತಿ ಸೆಲೆ: skype.com)
(ಚಿತ್ರ ಸೆಲೆ: skype.comngradio.gr )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: