‘ಟೈಟಾನಿಕ್’ – ಕೆಲ ಕುತೂಹಲದ ಸಂಗತಿಗಳು

 ವಿಜಯಮಹಾಂತೇಶ ಮುಜಗೊಂಡ.

titanic-sinking

‘ಟೈಟಾನಿಕ್’ – ತನ್ನ ಮೊದಲ ಪಯಣದಲ್ಲಿಯೇ ಅಪಗಾತಕ್ಕೀಡಾಗಿ ಮುಳುಗಿಹೋದ ದೊಡ್ಡ ಹಡಗು. ಜಗತ್ತಿನ ಹಿನ್ನಡವಳಿಯಲ್ಲಿ ನಡೆದ ಅತಿದೊಡ್ಡ ದುರಂತಗಳಲ್ಲಿ ಟೈಟಾನಿಕ್ ದುರಂತವೂ ಒಂದು. ಇಂಗ್ಲೆಂಡಿನ ಸೌತ್‍ಹ್ಯಾಂಪ್ಟನ್‍ನಿಂದ ಅಮೇರಿಕಾದ ನ್ಯೂಯಾರ್‍ಕ್‌ಗೆ ಹೊರಟ ಟೈಟಾನಿಕ್ ತನ್ನ ಸೇರ್‍ದಾಣ ಕಾಣಲೇ ಇಲ್ಲ. ‘ಮುಳುಗಲಾರದ ಹಡಗು’ ಎಂದೇ ಪ್ರಚಾರ ಪಡೆದಿದ್ದ ಟೈಟಾನಿಕ್ 1912, ಏಪ್ರಿಲ್ 14-15ರ ನಡುರಾತ್ರಿ ನೀರ್‍ಗಲ್ಲೊಂದಕ್ಕೆ ಅಪ್ಪಳಿಸುವ ಮೂಲಕ ದಾರುಣ ಕೊನೆ ಕಂಡಿತು. ಟೈಟಾನಿಕ್ ಕುರಿತ ಕೆಲ ಸಂಗತಿಗಳು ಇಲ್ಲಿವೆ.

  • ಟೈಟಾನಿಕ್ ಮುಳುಗಲು ಕಾರಣವಾದ ನೀರ್‍ಗಲ್ಲು ಸುಮಾರು ಒಂದು ಲಕ್ಶ ವರ್‍ಶ ಹಳೆಯದು ಎಂದು ಅಂದಾಜಿಸಲಾಗಿದೆ. ಗ್ರೀನ್‍ಲ್ಯಾಂಡಿನ ಮಂಜುಗಡ್ಡೆಯಿಂದ ಉಂಟಾದ ಈ ನೀರ್‍ಗಲ್ಲು ಟೈಟಾನಿಕ್‍ಗೆ ಅಪ್ಪಳಿಸಿದಾಗ ಅದು ನೀರಿನ ಮಟ್ಟದಿಂದ ಮೇಲೆ 100 ಅಡಿ ಎತ್ತರ ಇದ್ದು ಸುಮಾರು 1.5 ಮಿಲಿಯನ್ ಟನ್ ತೂಕ ಹೊಂದಿತ್ತು.
  • ನೀರ್‍ಗಲ್ಲನ್ನು ಗುರುತಿಸಿದ ಬಳಿಕ 30 ಸೆಕೆಂಡುಗಳ ಮೊದಲೇ ದಾರಿ ಬದಲಿಸಲು ಹೇಳಿದ್ದರೆ ಟೈಟಾನಿಕ್ಅನ್ನು ಉಳಿಸಬಹುದಿತ್ತು. ನೀರ್‍ಗಲ್ಲಿಗೆ ಅಪ್ಪಳಿಸಿದ ಬಳಿಕ ಟೈಟಾನಿಕ್ ಹಡಗು ಮುಳುಗಲು 2 ಗಂಟೆ 40 ನಿಮಿಶ ಬೇಕಾಯಿತು. ಈ ದುರಂತದಲ್ಲಿ ಸತ್ತವರ ಸಂಕ್ಯೆ 1,517 ಆದರೆ ಸಿಕ್ಕ ಹೆಣಗಳು 306 ಮಾತ್ರ.
  • ಟೈಟಾನಿಕ್‍ನ ಕಟ್ಟುವಿಕೆಯ ರೂವಾರಿಯಾಗಿದ್ದ ತಾಮಸ್ ಆಂಡ್ರ್ಯೂಸ್(Thomas Andrews), ದುರಂತದ ಹೊತ್ತಿನಲ್ಲಿ, “ಅಯ್ಯೋ ದೇವರೇ! ನೀರ್‍ಗಲ್ಲನ್ನು ತಡೆಯಬಲ್ಲ ಉಕ್ಕನ್ನು ಬಳಸಬೇಕೆಂದು ಗೊತ್ತಿದ್ದರೂ ದುಡ್ಡು ಉಳಿಸಲು ಅದನ್ನು ಬಳಸಲಿಲ್ಲ” ಎಂದು ತಲೆಚಚ್ಚಿಕೊಂಡ. ಟೈಟಾನಿಕ್‍ ದುರಂತದಲ್ಲಿ ಸತ್ತವರಲ್ಲಿ ತಾಮಸ್ ಆಂಡ್ರ್ಯೂಸ್ ಕೂಡ ಸೇರಿದ್ದಾರೆ.
  • ತುರ್‍ತುಪರಿಸ್ತಿತಿಯಲ್ಲಿ ಬಳಸಲೆಂದು ಟೈಟಾನಿಕ್‍ನೊಂದಿಗೆ 20 ಕಾಪುತೆಪ್ಪಗಳು(lifeboat) ಮತ್ತು 3,560 ಕಾಪಂಗಿಗಳನ್ನು(life-jacket) ಕೊಂಡೊಯ್ಯಲಾಗಿತ್ತು. ಕಾಪಂಗಿಗಳನ್ನು ಬೆಂಡು(cork) ಮತ್ತು ನಾರುಬಟ್ಟೆಗಳನ್ನು(canvas) ಬಳಸಿ ಮಾಡಲಾಗಿತ್ತು. 2,200ಕ್ಕಿಂತ ಹೆಚ್ಚು ಮಂದಿಯನ್ನು ಉಳಿಸುವ ಸಾಮರ‍್ತ್ಯ ಕಾಪುತೆಪ್ಪಗಳಿಗೆ ಇದ್ದರೂ ಹಲವು ಕಾಪುತೆಪ್ಪಗಳು ತಮ್ಮ ಪೂರ್‍ತಿ ಸಾಮರ‍್ತ್ಯಕ್ಕಿಂತ ಕಡಿಮೆ ಮಂದಿಯನ್ನು ಕೊಂಡೊಯ್ದವು. ಹೀಗಾಗಿ ಕೇವಲ 1,178 ಮಂದಿ ಅಶ್ಟೇ ಕಾಪುತೆಪ್ಪಗಳನ್ನು ಹತ್ತಲು ಆಯಿತು.
  • ಮುಳುಗುತ್ತಿರುವ ಹಡಗಿನಿಂದ ಹೊರಬಂದ ಬಳಿಕ ಹ್ರುದಯಾಗಾತದಿಂದ ಮತ್ತು –2° ಸೆಂಟಿಗ್ರೇಡ್ ಕಾವಳತೆಯ ತಣ್ಣೀರಿಗೆ ಸ್ಪಂದಿಸದೇ ಹೆಚ್ಚಿನ ಮಂದಿ ಸತ್ತರು. ಸುಮಾರು 2 ಗಂಟೆಗಳ ಕಾಲ ಟೈಟಾನಿಕ್‍ನ ಮುಕ್ಯ ಬಾಣಸಿಗ ಚಾರ್‍ಲ್ಸ್ ಜೂಹಿನ್(Charles Joughin) ಕೊರೆಯುವ ತಣ್ಣೀರಿನಲ್ಲೇ ತೇಲುತ್ತಿದ್ದರು. ಬಳಿಕ ಕಾಪುತೆಪ್ಪದ ಮೂಲಕ ಅವರನ್ನು ಪಾರುಮಾಡಲಾಯಿತು. ಹೆಂಡ ಕುಡಿದಿದ್ದರಿಂದ ನೀರಿನಲ್ಲಿ ಅಶ್ಟಾಗಿ ಚಳಿಯ ಅನುಬವ ಆಗಲಿಲ್ಲ ಎಂದು ಅವರೇ ಹೇಳಿಕೊಂಡಿದ್ದರು.
  • ದುರಂತವಾದ 73 ವರುಶದ ಬಳಿಕ ಟೈಟಾನಿಕ್‍ನ ಉಳಿಕೆಗಳು(wrecks) ಸಿಕ್ಕವು. ಇತ್ತೀಚಿಗೆ ಕಂಡುಹಿಡಿಯಲಾದ ತುಕ್ಕು ತಿನ್ನಬಲ್ಲ ಬ್ಯಾಕ್ಟೀರಿಯಾಗಳನ್ನು ಬಳಸಿ ಟೈಟಾನಿಕ್‍ನ ಉಳಿಕೆಗಳನ್ನು ಸಂಪೂರ್‍ಣವಾಗಿ ಹಾಳುಮಾಡಲು 20 ವರ್‍ಶಗಳು ಬೇಕು.
  • ಟೈಟಾನಿಕ್ ಮುಳುಗಿದ 29 ದಿನಗಳ ಬಳಿಕ ಈ ಕುರಿತ ಮೊದಲ ಮೂಕಿ ಕಿರುಚಿತ್ರ ‘ಸೇವ್ಡ್ ಪ್ರಮ್ ದ ಟೈಟಾನಿಕ್’(Saved from the Titanic) ಬಿಡುಗಡೆ ಆಯಿತು. ಹತ್ತು ನಿಮಿಶಗಳ ಈ ಕಿರು ಓಡುತಿಟ್ಟದಲ್ಲಿ ನಟಿಸಿದ ಡರೋತಿ ಗಿಬ್ಸನ್ ಟೈಟಾನಿಕ್ ದುರಂತದಲ್ಲಿ ಬದುಕುಳಿದವರಲ್ಲಿ ಒಬ್ಬರು.
  • ಟೈಟಾನಿಕ್ ಮುಳುಗಿದ ಜಾಗದಲ್ಲಿ ಕಂಡ ಉಳಿಕೆಗಳ ಕುರಿತು ಮೂಡಿದ ಸೆಳೆತ ಜೇಮ್ಸ್ ಕೆಮರೂನ್‍‍ಗೆ ಟೈಟಾನಿಕ್ ಚಲನಚಿತ್ರವನ್ನು ನಿರ್‍ದೇಶಿಸಲು ಹುರುಪು ನೀಡಿತು. 1997ರಲ್ಲಿ ತೆರೆಕಂಡ ಈ ಚಲನಚಿತ್ರಕ್ಕೆ ಒಟ್ಟು 11 ಆಸ್ಕರ್ ಪ್ರಶಸ್ತಿಗಳು ಸಿಕ್ಕಿವೆ. ಇದೇ ಚಿತ್ರದ ನಟನೆಯ ಮೂಲಕ ಲಿಯೊನಾರ್‍ಡೋ ಡಿಕಾಪ್ರಿಯೋ ಮತ್ತು ಕೇಟ್ ವಿನ್‍ಸ್ಲೆಟ್ ಜಗತ್ತಿನಲ್ಲೆಲ್ಲ ಹೆಸರಾದರು. ಆದರೂ ನಟನೆಗೆ ಯಾವುದೇ ಆಸ್ಕರ್ ಸಿಗದೆ ಇದ್ದುದು ಇನ್ನೊಂದು ಅಚ್ಚರಿಯ ವಿಶಯ.
  • ಮೊದಲ ದರ್‍ಜೆಯ ಪ್ರಯಾಣಿಕರಿಗೆ ನೀಡಲಾಗಿದ್ದ ಕೊನೆಯ ರಾತ್ರಿಯೂಟದಲ್ಲಿ 11 ಬಗೆಯ ತಿಂಡಿಗಳಿದ್ದವು. 352 ಹಾಡುಗಳಿರುವ ಹೊತ್ತಗೆಯೊಂದನ್ನು ಮೊದಲ ದರ್‍ಜೆಯಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರಿಗೆ ನೀಡಲಾಗಿತ್ತು. ಪ್ರಯಾಣಿಕರು ಕೇಳಿದರೆ ಹಾಡಲು ಅಲ್ಲಿದ್ದ ಹಾಡುಗಾರರಿಗೆ ಎಲ್ಲ ಹಾಡುಗಳು ಗೊತ್ತಿರಬೇಕಾಗಿತ್ತು.
  • ಅಮೆರಿಕಾದ ಜಂಬಾರಿಗ, ಬಂಡವಾಳ ಹೂಡಿಕೆದಾರ ಜಾನ್ ಜಾಕೋಬ್ ಆಶ್ಟರ್(John Jacob Astor IV) ದುರಂತದಲ್ಲಿ ಸತ್ತ ಅತೀ ಶ್ರೀಮಂತ ವ್ಯಕ್ತಿ. ಸುಮಾರು 85 ಮಿಲಿಯನ್ ಡಾಲರುಗಳ ಒಡೆಯನಾಗಿದ್ದ 47ರ ಹರೆಯದ ಈತ ಅಂದು ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದ. ದುರಂತದ ಹೊತ್ತಿನಲ್ಲಿ ಒಟ್ಟು 6 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ದುಡ್ಡು, ಒಡವೆ ಮತ್ತು ಮುಚ್ಚಳಿಕೆ ಕಾಗದಗಳನ್ನು ಟೈಟಾನಿಕ್ ಹಡಗಿನಲ್ಲಿ ಕೊಂಡೊಯ್ಯಲಾಗುತ್ತಿತ್ತು.
  • ಮೊದಲ ದರ್‍ಜೆಯ ಪ್ರತಿ ಪ್ರಯಾಣಿಕನಿಗೆ ತನ್ನದೇ ಆದ ಕಾಸಗೀ ಮೀದೊಟ್ಟಿಗಳು(bathtub) ಇದ್ದರೆ, ಮೂರನೆಯ ದರ್‍ಜೆಯ ಎಲ್ಲ 700 ಪ್ರಯಾಣಿಕರ ನಡುವೆ ಇದ್ದದ್ದು ಬರೀ 2 ಮೀದೊಟ್ಟಿಗಳು, ಒಂದು ಗಂಡಸರಿಗೆ ಮತ್ತೊಂದು ಹೆಂಗಸರಿಗೆ. ಮೊದಲ ದರ್‍ಜೆಯ ಟಿಕೆಟ್ ದರ ಸುಮಾರು 4,350 ಅಮೆರಿಕನ್ ಡಾಲರ್ ಆದರೆ ಮೂರನೆಯ ದರ್‍ಜೆಯದು 30 ಡಾಲರ್ ಇತ್ತು.
  • ಟೈಟಾನಿಕ್ ಮುಳುಗಿದ ವಾರದ ಬಳಿಕ ನ್ಯೂಯಾರ್‍ಕ್ ಟೈಮ್ಸ್ ಸುದ್ದಿಹಾಳೆ 75 ಪುಟಗಳ ವಿಶೇಶ ವರದಿ ನೀಡಿತ್ತು. 1912ರ ಏಪ್ರಿಲ್ 16ರಂದು “ಟೈಟಾನಿಕ್ ಮುಳುಗಿದೆ, ಯಾವುದೇ ಸಾವಿಲ್ಲ” ಎಂದು ದ ಲಂಡನ್ ಡೈಲಿ ಮೇಲ್ ಸುದ್ದಿಹಾಳೆ ವರದಿ ಮಾಡಿತ್ತು.

(ಮಾಹಿತಿ ಮತ್ತು ಚಿತ್ರ ಸೆಲೆ: factsd.com, dailymail.co.uk, ವಿಕಿಪೀಡಿಯ, wikipedia.orgdailymail.co.uk)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: