ವಿಶ್ವದ ಅತಿ ದೊಡ್ಡ ಪಿರಂಗಿ ತೋಪು ಇರುವುದು ನಮ್ಮ ಕಲಬುರಗಿಯಲ್ಲಿ!

– ನಾಗರಾಜ್ ಬದ್ರಾ.

thopu3

ಕಲಬುರಗಿ ನಗರವು ಹಲವಾರು ಹಿನ್ನಡವಳಿಯ ತಾಣಗಳು ಹಾಗೂ ವಸ್ತುಗಳಿಗೆ ಪ್ರಸಿದ್ದವಾಗಿದೆ. ಇಂದು ಈ ನಗರದ ಹೆಮ್ಮೆಗೆ ಮತ್ತೊಂದು ಗರಿ ಸೇರಿಕೊಂಡಿದೆ. ಕಲಬುರಗಿಯ ಕೋಟೆಯಲ್ಲಿರುವ 29 ಅಡಿ ಉದ್ದದ ಪಿರಂಗಿ ತೋಪನ್ನು ವಿಶ್ವದ ಅತ್ಯಂತ ದೊಡ್ಡ ಪಿರಂಗಿ ತೋಪು ಎಂದು ಗುರುತಿಸಲಾಗಿದೆ. ಕಲಬುರಗಿಯ ಕೋಟೆಯನ್ನು 14 ನೆ ಶತಮಾನದಲ್ಲಿ ರಾಜ ಗುಲ್ಚಂದ್ ಅವರು ಕಟ್ಟಿಸಿದರು, ಬಳಿಕ 1347 ರಲ್ಲಿ ಬಹಮನಿ ಸುಲ್ತಾನರು ಕೋಟೆಯನ್ನು ದೊಡ್ಡದಾಗಿಸಿದರು. ಸುಮಾರು 74.10 ಎಕರೆ ಜಾಗದಲ್ಲಿ ಕಟ್ಟಲಾಗಿರುವ ಈ ಕೋಟೆಯ ಒಳಗಡೆ ಹಲವಾರು ಮನಸೆಳೆಯುವ ಕಟ್ಟಡಗಳು ಹಾಗೂ ತೋಪುಗಳಿವೆ. ಕಲಬುರಗಿಯ ಕೋಟೆಯಲ್ಲಿ ಒಟ್ಟು 26 ತೋಪುಗಳಿವೆ. ಅದರಲ್ಲಿ 25 ತೋಪುಗಳು 26 ಅಡಿ ಉದ್ದವಾಗಿದ್ದು, ಒಂದು ಮಾತ್ರ 29 ಅಡಿ ಉದ್ದವಿದೆ.

ರಾಶ್ಟ್ರೀಯ ಪ್ರಶಸ್ತಿ ಪಡೆದಿರುವ ಕಲೆಗಾರ ಹಾಗೂ ಚಾಯಾಗ್ರಾಹಕ ಮೊಹಮ್ಮದ ಅಯುಜುದ್ದಿನ್, ಉತ್ತರ ಕರ‍್ನಾಟಕದ ಇಂಡೋ-ಇಸ್ಲಾಮಿಕ್ ಕಲೆಯ ಸಂಶೋದಕ ರೆಹಮಾನ ಪಟೇಲ್ ಮತ್ತು ನಾಣ್ಯ ಸಂಗ್ರಾಹಕ ಮೊಹಮ್ಮದ್ ಇಸ್ಮಾಯಿಲ್ ಅವರು ಕಲಬುರಗಿಯ ಕೋಟೆಯಲ್ಲಿನ ತೋಪುಗಳನ್ನು ಅಳತೆ ಮಾಡಿ 29 ಅಡಿ ಉದ್ದದ (8832.2 ಮಿಲಿಮೀಟರ್ ಉದ್ದ) ಬಾರ ಗಾಜಿ (Bara Gazi) ತೋಪನ್ನು ವಿಶ್ವದ ಅತ್ಯಂತ ದೊಡ್ಡ ತೋಪು ಎಂದು ಗುರುತಿಸಿದ್ದಾರೆ. ಇದಕ್ಕೂ ಮುಂಚೆ 2013 ರಲ್ಲಿ ತೆಲಂಗಾಣ ನಾಡಿನ ನಿಜಾಮಾಬಾದ್ ಜಿಲ್ಲೆಯ ಕೌಲಸ್ ಕೋಟೆಯಲ್ಲಿನ 23 ಅಡಿ ಉದ್ದದ ಜಗದಂಬಾ ಬವಾನಿ ತೋಪನ್ನು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ತೋಪು ಎಂದು ಗುರುತಿಸಲಾಗಿತ್ತು, ಆದರೆ ಈಗ ಆ ಬಿರುದನ್ನು ನಮ್ಮ ಕಲಬುರಗಿಯ ಬಾರ ಗಾಜಿ ಪಿರಂಗಿ ತೋಪು ಗಳಿಸಿಕೊಂಡಿದೆ.

ಬಾರ ಗಾಜಿ ತೋಪಿನ ವಿವರನ್ನು ಇನ್ನೂ ಗಿನ್ನಿಸ್ ಬುಕ್ಕಿಗೆ ಸೇರಿಸಿಲ್ಲ!

ಬಾರ ಗಾಜಿ ತೋಪನ್ನು 14 ನೇ ಶತಮಾನದಲ್ಲಿ ಬಹಮನಿ ಸಾಮ್ರಾಜ್ಯ ಆಳ್ವಿಕೆಯಲ್ಲಿ ಕಟ್ಟಲಾಗಿದ್ದು, ಇದನ್ನು ಟರ‍್ಕಿಶ್ ಪರಿಣಿತರು ಐದು ಲೋಹಗಳನ್ನು ಬಳಸಿ ಕಟ್ಟಿದ್ದಾರೆ. ಸುಮಾರು 2 ಅಡಿ ಅಡ್ಡಳತೆ ಹಾಗೂ 7 ಇಂಚು ದಪ್ಪವಾಗಿದ್ದು, 29 ಅಡಿ ಉದ್ದ ಹಾಗೂ 7.6 ಸುತ್ತಳತೆಯನ್ನು ಹೊಂದಿದೆ. ಸದ್ಯಕ್ಕೆ ಗಿನ್ನಿಸ್ ಬುಕ್ಕಿನಲ್ಲಿ ರಶ್ಯಾ ದೇಶದ ತ್ಸಾರ್ ತೋಪನ್ನು ವಿಶ್ವದ ಅತ್ಯಂತ ದೊಡ್ಡ ತೋಪು ಎಂದು ನಮೂದಿಸಲಾಗಿದೆ. ಆದಶ್ಟು ಬೇಗ ಇಂಡಿಯಾದ ಪುರಾತತ್ವ ಸಂಸ್ತೆ ಹಾಗೂ ರಾಜ್ಯ ಪುರಾತತ್ವ ಇಲಾಕೆಯು ಕಲಬುರಗಿಯ ಬಾರ ಗಾಜಿ ತೋಪನ್ನು ವಿಶ್ವ ದಾಕಲೆಯ ಗಿನ್ನಿಸ್ ಬುಕ್ಕಿನಲ್ಲಿ ಸೇರಿಸಲು ಕ್ರಮ ತೆಗೆದುಕೊಳ್ಳಬೇಕಿದೆ.

thopu-4

ತೋಪುಗಳು ಮೊದಲು ಬಳಕೆಯಾಗಿದ್ದು ಚೀನಾದಲ್ಲಿ

ಪಿರಂಗಿ ತೋಪುಗಳು ನೂರಾರು ವರ‍್ಶಗಳ ಹಿನ್ನಡವಳಿಯನ್ನು ಹೊಂದಿವೆ. ಇವನ್ನು 12 ನೇ ಶತಮಾನದಲ್ಲಿ ಚೀನಾ ದೇಶದವರು ಕಂಡುಹಿಡಿದರು. ಇದಕ್ಕೆ ಮುಂಚೆ ಯುದ್ದದಲ್ಲಿ ಬಂದೂಕಿನ ಸಿಡಿಮದ್ದು ತೋಪುಗಳು (gunpowder artillery), ಆಕ್ರಮಣ ಯಂತ್ರಗಳು (siege engines) ಹಾಗೂ ಶಕ್ತಿಯನ್ನು ಹೆಚ್ಚಿಸುವ ಇತರೆ ಆಯುದಗಳನ್ನು ಉಪಯೋಗಿಸುತ್ತಿದ್ದರು. ಇಂಡಿಯಾದಲ್ಲಿ ಪಿರಂಗಿ ತೋಪನ್ನು ಮೊಟ್ಟಮೊದಲ ಬಾರಿಗೆ 1526 ರಲ್ಲಿ ನಡೆದ ಮೊದಲನೆಯ ಪಾಣಿಪತ್ ಕದನದಲ್ಲಿ ಬಾಬರನು ಬಳಿಸಿದ್ದಾನೆ ಎಂದು ಇತಿಹಾಸಕಾರರು ಹೇಳುತ್ತಾರೆ.

ತೋಪುಗಳ ಸಾಮಾನ್ಯ ವಿನ್ಯಾಸ

ತೋಪುಗಳು ಯುದ್ದದಲ್ಲಿ ಉಪಯೋಗಿಸಲು ಉದ್ದವಾದ ಕೊಳವೆ ಆಕಾರದ ಉಕ್ಕಿನಿಂದ ಮಾಡಿರುವ ಆಯುದ. ಸಾಮಾನ್ಯವಾಗಿ ತೋಪುಗಳ ಮುಂದಿನ ಬಾಗವು ಮೊಟಕುಗೊಂಡ ಬೆಣೆಯಾಕಾರದ (truncated cone) ರಚನೆಯನ್ನು ಹೊಂದಿರುತ್ತದೆ. ಹಾಗೆಯೇ ಸಿಡಿಯುವ ವಸ್ತುಗಳನ್ನು ಹಿಡಿದಿಡಲು ಹಾಗೂ ಮುಂದಕ್ಕೆಸೆಯಲು ಒಳಗಡೆ ಉರುಳೆ ಆಕಾರದ ತೂತು ಇರುತ್ತದೆ. ತೋಪಿನ ಗಟ್ಟಿಯಾದ ಬಾಗವು ಸಿಡಿಯುವ ವಸ್ತುಗಳನ್ನು ಎಲ್ಲಾ ದಿಕ್ಕುಗಳಲ್ಲಿ ಸಮನಾಗಿ ಹರಡುವಂತೆ ಮಾಡುತ್ತದೆ. ಮೊದಮೊದಲು ತೋಪುಗಳನ್ನು ಹೆಚ್ಚಾಗಿ ಕಂಚಿನಿಂದ ಮಾಡಲಾಗುತ್ತಿತ್ತು ಬಳಿಕ ಇವುಗಳನ್ನು ಎರೆಕಬ್ಬಿಣದಿಂದ (Cast Iron) ಮಾಡಲಾಗುತ್ತಿತ್ತು, ಕಡೆಗೆ ಉಕ್ಕಿನಿಂದ ಮಾಡಲಾರಂಬಿಸಿದ್ದರು.

(ಮಾಹಿತಿ ಸೆಲೆ: panoramio.com, wiki, thehindu, newindianexpress, wiki/cannon, quora)

(ಚಿತ್ರ ಸೆಲೆ: panoramio.com)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks