ಹೊಸ ವರುಶ ಏನೋ ಹರುಶ

 ಗೌಡಪ್ಪಗೌಡ ಪಾಟೀಲ್.

hosadikku

ಹೊಸವರ‍್ಶ ಬಂತೆಂದರೆ ಹಲವರು ತುಂಬಾ ಉತ್ಸುಕರಾಗುತ್ತಾರೆ. ಹೊಸವರ‍್ಶ ಹೊಸತನದಿಂದಿರುತ್ತೆ ಅಂತ ಅಂದುಕೊಂಡು ಉಲ್ಲಸಿತರಾಗುತ್ತಾರೆ. ಹೊಸವರ‍್ಶ ಎಂಬುದು ನೆಪ ಮಾತ್ರ. ದಿನಂಪ್ರತಿ ದುಡಿದು ದಣಿದ, ಹಲವಾರು ಆಸೆಗಳನ್ನು ಮನದಲ್ಲಿ ಹುಗಿದವರಿಗೆ, ಈ ವರ‍್ಶವಾದರೂ ಒಳ್ಳೆಯದಾಗುತ್ತದೆ ಎಂಬ ನಿರೀಕ್ಶೆಯನ್ನು ಹೊತ್ತು ತರೋದು ಇದೇ ಹೊಸವರ‍್ಶ.

ಹಲವರು ಹೊಸವರ‍್ಶದಲ್ಲಿ ತಾನು ಏನೇನು ಸಾದಿಸಬೇಕು, ಏನೇನು ಮಾಡಬೇಕು, ತನ್ನನ್ನ ಯಾವ ವಿಚಾರದಲ್ಲಿ ಬದಲಾಯಿಸಿಕೊಳ್ಳಬೇಕು ಎಂದೆಲ್ಲಾ ಪಟ್ಟಿ ಮಾಡಿಕೊಂಡಿರುತ್ತಾರೆ. ಆ ಒಕ್ಕಣೆಗಳನ್ನ ಅನುಸರಿಸುವುದು ಬೇರೆ ಮಾತು. ಆದರೆ ಅದನ್ನು ತಯಾರಿಸುವುದರಲ್ಲಿ ಮಾತ್ರ ತುಂಬಾ ಶ್ರದ್ದೆ ತೋರುತ್ತಾರೆ.

ಹಿಂದೆ ಸಾದಿಸಲಾಗದ ಅತವಾ ಅನುಬವಿಸಲಾಗದ ವಿಚಾರಗಳಲ್ಲಿನ ಅಸಮಾದಾನಗಳನ್ನು ಹೋಗಲಾಡಿಸಿ ಮುಂದೆ ಇರುವ ಆಸೆ, ಕನಸು ಮತ್ತು ಕಲ್ಪನೆಗಳ ಆಶಾಗೋಪುರವನ್ನೇ ಹೊತ್ತು ತರುತ್ತದೆ ಹೊಸ ವರ‍್ಶ. ಬೇರೆ ಬೇರೆ ಜನ ಬೇರೆ ಬೇರೆ ರೀತಿಯಾಗಿ ಹಾಗೂ ಬೇರೆ ಬೇರೆ ಸಮಯದಲ್ಲಿ ಆಚರಿಸಿದರೂ ಈ ಹೊಸವರ‍್ಶ ತರುವುದು ಹತ್ತು ಹಲವು ನಿರೀಕ್ಶೆಗಳನ್ನು ಮಾತ್ರ. ಆ ನಿರೀಕ್ಶೆಗಳು ನನಸಾಗುತ್ತವೋ ಅತವಾ ಅವು ಅದೇ ಹಳೇ ಹಲುಬುವಿಕೆಯ ಗೂಡಾಗುತ್ತವೋ ಎನ್ನುವುದು, ಆ ವ್ಯಕ್ತಿ ಆಯಾ ವಿಚಾರಗಳಿಗೆ ನಿಗದಿಸಿದ ಹಾಗು ವ್ಯಯಿಸಿದ ಸಮಯ ಮತ್ತು ದ್ರುಡಸಂಕಲ್ಪವನ್ನು ಆದರಿಸಿರುತ್ತವೆ.

ಹಳೇ ವರ‍್ಶ ಒಳಿತಾಯಿತೊ ಕೆಡುಕಾಯಿತೊ ಎಂದು ಅವಲೋಕಿಸುವಾಗ ನೆನಪಿರಲಿ “ಈ ಸಮಯ ಕಳೆದು ಹೋಗುತ್ತದೆ”, ಒಳಿತಾದರೂ ಅತವಾ ಕೆಡುಕಾದರೂ! ಮುಂದಿನ ವರ‍್ಶ ನಿರೀಕ್ಶೆಗಳ ಬಾರವನ್ನೇ ಹೊತ್ತು ಬಾರವಾಗದಿರಲಿ, ಏಕೆಂದರೆ ಹೊಸದೊಮ್ಮೆ ಹಳೆಯದಾಗುತ್ತದೆ. ಹೊಸ ವರ‍್ಶ ಹೊಸತನವ ತರಲಿ, ಎಲ್ಲರ ಅಬಿಲಾಶೆಗಳನ್ನ ಈಡೇರಿಸಿ ಪ್ರತಿಯೊಬ್ಬರೂ ಸಹ ಬೇರೆಯವರಿಗೆ ನೆರವಾಗಿ, ಬೂಮಿಯ ಎಲ್ಲ ಜೀವಿಗಳಿಗೂ ಸಹಜೀವಿಯಾಗಲಿ ಎಂದು ಹಾರೈಸುತ್ತೇನೆ.

ಪ್ರತಿ ದಿನದ ಅನುಬವ ನಿಮ್ಮನ್ನು ಜೀವನದಾನಂದದ ಉತ್ತುಂಗಕ್ಕೆ ಒಯ್ಯಲಿ. ಹಾಗೆಯೇ ನಿಮ್ಮ ಹೊಸವರ‍್ಶದ ಬರಮಾಡಿಕೊಳ್ಳುವಿಕೆ, ಸವಿನೆನಪಿನ ಹುಂಡಿಗೆ ಇನ್ನೊಂದು ಕಾಣಿಕೆಯಾಗಲಿ.

( ಚಿತ್ರ ಸೆಲೆ : thrivingcollective.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: