ಬೆಣ್ಣೆ ಕಾಯಿಸಿ ತುಪ್ಪ ಮಾಡುವ ಬಗೆ

ಸುನಿತಾ ಹಿರೇಮಟ.

ghee_inidan_food_idiva

ನೆಲದ ಸೊಗಡು ಅಂತಾರೆ ಅದೇನು ಹೇಗಿರತ್ತೆ ಅನ್ನೋದು ಹಳ್ಳಿಯಿಂದ ಬಂದು ಪಟ್ಟಣವಾಸಕ್ಕೆ ಸರಿಹೋಗದ ಮನಸ್ಸಿಗೆ ಬಹಳ ಬೇಗ ಅರಿವಾಗತ್ತೆ. ಹೌದು, ರೊಟ್ಟಿ ಎಣ್ಣೆಗಾಯಿ ಬದನೇಕಾಯಿ, ಹುಚ್ಚೆಳ್ಳು ಪುಡಿಗೆ ಶೆಂಗಾ ಎಣ್ಣಿ ಜೊತಿಗಿ ಕಣ್ಣಾಗ ನೀರ್ ಬರೋ ಹಸಿ ಉಳ್ಳಾಗಡ್ಡಿ ಇದರ ಮುಂದ್ ಯಾವ್ ಊಟಾ ಬೇಕ್ರಿ ನಮಗ?

ಇರ‍್ಲಿ ಈ ಸೊಗಡನ್ನ ನೆನಸಕೊಂಡು ನಾ ಹೇಳೋದ್ ಮರೆತ ಬಿಟ್ಟೆ, ಅದೇನಂದ್ರ ಬೆಣ್ಣೆ ಕಾಯಿಸೋದು. ಕರೆ, ಈಗಿನ ಬಾಳಾ ಮಂದಿಗೆ ತುಪ್ಪ ಅಂತಂದ್ರ ಮಾಲ್ ನ್ಯಾಗ ಸಿಗೋ ರೆಡಿಮೇಡ್ ಡಬ್ಬಿ ಒಂದೇ. ಆದ್ರ ಅದಕಿಂತ ನಮ್ಮ ಹಿರಿಯರು ಹೇಳ್ಕೊಟ್ಟ ತುಪ್ಪ ಮಾಡೋ ಬಗೆಯನ್ನ ಒಮ್ಮೆ ಕೇಳಿದ್ರೆ ಆ ರೆಡಿಮೇಡ್ ಡಬ್ಬಿ ಮರಿತಿರಿ.

ಒಂದೊಂದು ನೆಲದ ಅಂದರೆ ಊರಿನ ಹವಾಗುಣಕ್ಕೆ ತಕ್ಕಂತೆ ಬೆಣ್ಣೆ ಕಾಯಿಸುವ ಪದ್ದತಿ ಇದೆ. ಕಾಯಿಸಿದ ತುಪ್ಪ ಕೆಡದಂತೆ ತಿಂಗಳುಗಟ್ಟಲೆ ಕಾಪಾಡಲು ಅಡಿಗೆ ಮನೆಯಲ್ಲಿರುವ ಹಲವಾರು ಮಸಾಲೆ ಸಾಮಾನುಗಳನ್ನು ಬಳಸುತ್ತಾರೆಯೇ ಹೊರತು ಯಾವುದೇ ರಾಸಾಯನಿಕಗಳನ್ನಲ್ಲ. ಕರಿಮೆಣಸು, ಅರಿಸಿನದ ಪುಡಿ, ಒಣಮೆಣಸಿನಕಾಯಿ, ಹುಣಿಸೇಹಣ್ಣು, ಉಪ್ಪು, ಕರಿಬೇವು, ವೀಳ್ಯದ ಎಲೆ, ನುಗ್ಗೆ ಸೊಪ್ಪು, ಮೆಂತ್ಯ ಕಾಳು ಹೀಗೆ ಆಯಾ ನೆಲದ ಊಟ ಅತವಾ ಅಡಿಗೆ ಮನೆಗೆ ತಕ್ಕಂತೆ ಹತ್ತು ಹಲವಾರು ಸಾಮಾನುಗಳನ್ನು ಬಳಸಿ ಬೆಣ್ಣೆ ಕಾಯಿಸುತ್ತಾರೆ.

ಇಲ್ಲಿದೆ ಒಂದು ಬೆಣ್ಣೆ ಕಾಯಿಸುವ ಬಗೆtuppa3

ಅರ‍್ದ ಕೆಜಿ ಬೆಣ್ಣೆ. ಹಳ್ಳಿಯ ಬೆಣ್ಣೆ ಸಿಗಲ್ಲಿಲ್ಲ ಅಂದ್ರೆ ಉಪ್ಪಿಲ್ಲದ ನಂದಿನಿ ಇಲ್ಲವೇ ನಿಮಗೆ ಗೊತ್ತಿರುವ ಬೆಣ್ಣೆ
ಎರಡರಿಂದ ಮೂರು ತೊಳೆದು ನೀರು ಆರಿದ ವೀಳ್ಯದ ಎಲೆ
ಒಂದು ಚಮಚ ಮೆಂತ್ಯ ಕಾಳು
ನಾಲ್ಕು ಒಣ ಮೆಣಸಿನಕಾಯಿ
ಕಾಲು ಟೀ ಚಮಚ ಅರಿಸಿನ ಪುಡಿ
ಚಿಟಿಕೆ ಉಪ್ಪು
ಒಂದು ತೊಳೆ ಹುಣಿಸೆಹಣ್ಣು

ದಪ್ಪ ತಳ ಇರುವ ಪಾತ್ರೆಯಲ್ಲಿ ಬೆಣ್ಣೆ ಹಾಕಿ ಸಣ್ಣ ಉರಿಯ ಒಲೆಯ ಮೇಲಿಡಿ. ನೆನಪಿರಲಿ ಅದು ಕಾಯುವಾಗ ಉಕ್ಕಬಾರದೆಂದು ಕಾಯುವಾಗ ಚಮಚದಿಂದ ಕೈಯಾಡಿಸುತ್ತಿರಿ. ಚೆನ್ನಾಗಿ ಕಾದು ಒಂದು ತೆಳು ಕೆಂಪು ಬಣ್ಣಕ್ಕೆ ಬಂದ ನಂತರ ಒಲೆಯ ಮೇಲಿಂದ ಕೆಳಗಿಳಿಸಿ. ಆ ತಕ್ಶಣ ಅದಕ್ಕೆ ಮೇಲೆ ತಿಳಿಸಿದ ಎಲ್ಲವನ್ನು ಹಾಕಿ ಮುಚ್ಚಿಡಿ. ಒಂದು ಗಂಟೆಯ ನಂತರ ಸೋಸಿ ಗಾಜಿನ ಬರಣಿಗೆ ಹಾಕಿದರೆ ಒಳ್ಳೆಯ ಗಮಗಮ ತುಪ್ಪ ಸಿದ್ದ.

ಬಿಸಿ ಬಿಸಿ ಅನ್ನ, ಕಾರ ಚಟ್ನಿ, ತಾಲಿಪೆಟ್ಟು, ದೋಸೆ ಹೀಗೆ ಯಾವುದರ ಜೊತೆಗೂ ತಿನ್ನೋಕೆ ಮಜಾ ಕೊಡತ್ತೆ. ಸೋಸಿದ ಮೇಲಿನ ಬಾಗದ ಗಸಿಯನ್ನು ಸಹ ನೀವು ಅಡುಗೆಗೆ ಬಳಸಬಹುದು. ಗರಿಗರಿಯಾದ ಎಲೆಯನ್ನು ಹಾಗೆ ತಿನ್ನಲು ಬಲು ರುಚಿ ಮತ್ತು ಆ ಗಸಿಯನ್ನು ಬಳಸಿ ಟೊಮ್ಯಾಟೋ ಸಾರು ಮಾಡಿದರೆ ಬಹಳ ರುಚಿಯಾಗಿರುತ್ತದೆ.

ತುಪ್ಪದ ಕಂಪನ್ನು ನಮ್ಮ ವಚನಗಳಲ್ಲೂ ಹೋಲಿಕೆಗಾಗಿ ಬಳಸಿದ್ದಾರೆ, ಓದಿ ನೋಡಿ.

ಸ್ವತಂತ್ರ ಸಿದ್ಧಲಿಂಗ
ಪಕ್ವ ಫಲದಲ್ಲಿಹ ಸ್ವಾದುವಿನಂತೆ,
ತುಪ್ಪದಲ್ಲಿಹ ಕಂಪಿನಂತೆ, ಚಿನ್ನದಲ್ಲಿಹ ಬಣ್ಣದಂತೆ,
ಅಲ್ಲಿಯೆ ಹುಟ್ಟಿ ಅಲ್ಲಿಯೆ ತೋರುವಂತೆ,
ಎನ್ನಂತರಂಗದಲ್ಲಿರ್ದು ತೋರುತ್ತಿಹ ನಿಮ್ಮ ನಿಜವನು,
ನಿಮ್ಮಿಂದರಿದೆನು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.

(ಚಿತ್ರ ಸೆಲೆ: idiva.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: