ತನ್ನಿಂದ ತಾನೇ ಸರಿದೂಗಿಸಿಕೊಳ್ಳಬಲ್ಲ ಬೈಕ್

– ಜಯತೀರ‍್ತ ನಾಡಗವ್ಡ.

honda-riding-assist

ತನ್ನಿಂದ ತಾನೇ ಓಡಾಡುವ ನಾಲ್ಗಾಲಿ ಬಂಡಿಯ ಬಗ್ಗೆ ಈಗಾಗಲೇ ಕೇಳಿಯೇ ಇರುತ್ತೇವೆ. ಗೂಗಲ್, ಜಿಎಮ್, ಪೋಕ್ಸ್‌‍ವ್ಯಾಗನ್, ಪೋರ‍್ಡ್, ವೋಲ್ವೊ ಹೀಗೆ ಬಹುತೇಕ ಎಲ್ಲ ಕಾರು ತಯಾರಕರು ತನ್ನಿಂದ ತಾನೇ ಓಡುವ ಕಾರನ್ನು ತಯಾರಿಸುವಲ್ಲಿ ತೊಡಗಿದ್ದಾರೆ. ಕಾರಶ್ಟೇ ಏಕೆ ಇದೀಗ ತನ್ನಿಂದ ತಾನೇ ಓಡುವ ಬೈಕ್ ಕೂಡ ತಯಾರಾಗುತ್ತಿದೆ. ಲಾಸ್ ವೇಗಾಸ್‌ನಲ್ಲಿ ಈ ವರುಶದ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಶೋ ಇದೇ ಜನವರಿ 12ನೇ ತಾರೀಕಿನಂದು ಕೊನೆಗೊಂಡಿತು. ಎಲೆಕ್ಟ್ರಾನಿಕ್ಸ್ ವಸ್ತುಗಳ ತಯಾರಕರು, ಅದಕ್ಕೆ ಸಂಬಂದಿಸಿದ ಎಣ್ಣುಕ, ಮೆದುಜಾಣ್ಮೆ ಕೂಟಗಳು, ರೊಬೋಟ್ ಅಣಿಗೊಳಿಸುವ ಕೂಟಗಳು, ತಾನೋಡದ ಮತ್ತು ಅವುಗಳ ಬಿಡಿಬಾಗದ ಕಯ್ಗಾರಿಕೆಯವರು – ಹೀಗೆ ಸಾವಿರಾರು ಕೂಟಗಳು ಈ ತೋರ‍್ಪಿನಲ್ಲಿ ಬಾಗಿಯಾಗಿದ್ದರು. ಎಲೆಕ್ಟ್ರಾನಿಕ್ಸ್‌ಗೆ ಸಂಬಂದಪಟ್ಟ ತಮ್ಮ ಹೊಸ ಅರಕೆಗಳು, ಮುಂಬರುವ ಚಳಕಗಳನ್ನು ಎಲ್ಲರ ಮುಂದಿಟ್ಟು ನಾವು ಯಾರಿಗೂ ಕಮ್ಮಿಯಿಲ್ಲ ಎನ್ನುವುದನ್ನು ಸಾರಿ ಹೇಳಿದರು.

ಜಪಾನಿನ ಹೆಸರುವಾಸಿ ತಾನೋಡ ಕೂಟವಾದ ‘ಹೋಂಡಾ ಕೂಟ’ ಕೂಡ ಇದರಲ್ಲಿ ಪಾಲ್ಗೊಂಡಿತ್ತು. ಈ ತೋರ‍್ಪಿನಲ್ಲಿ ಹೊಸದೊಂದು ಚಳಕ ತೋರ‍್ಪಡಿಸಿ, ಎಲ್ಲರ ಗಮನ ಸೆಳೆಯಿತು. ತನ್ನಿಂದ ತಾನೇ ಸರಿದೂಗಿಸಿಕೊಂಡು ಓಡಬಲ್ಲ ಇಗ್ಗಾಲಿ ಬಂಡಿಯೊಂದನ್ನು ಹೋಂಡಾ ಕೂಟ ತಯಾರಿಸಿದೆ. ಹಟಾತ್ತನೆ ಎದುರಾಗುವ ತಿರುವಿನ ರಸ್ತೆಗಳಲ್ಲಿ ಸಾಗುವಾಗ ಇಗ್ಗಾಲಿ ಬಂಡಿ ವೇಗ ತಗ್ಗಿಸಿ, ಮೆಲ್ಲಗೆ ತಿರುಗಿಸಬೇಕು. ಸರ‍್ರನೆ ವೇಗದಿಂದ ಅಡ್ಡಾದಿಡ್ಡಿಯಾಗಿ ತಿರುಗಿಸಿದರೆ ಜೀವಕ್ಕೇ ತೊಂದರೆ. ಅಶ್ಟೇ ಅಲ್ಲದೇ ಹೀಗೆ ಬಂಡಿಗಳು ತಿರುವುಗಳಲ್ಲಿ ತಿರುಗಿಸಿಕೊಂಡು ಹೋಗುವಾಗ ಬಂಡಿಯ ಮೇಲೆ ಬಲವಾದ ಹಿಡಿತವಿರಲೇಬೇಕು. ಬಾರೀ ತೂಕದ ಬುಲೆಟ್‌ನಂತ ಬಂಡಿಯಿದ್ದು, ಕಡಿಮೆ ವೇಗದಲ್ಲಿ ಅದನ್ನು ತಿರುಗಿಸುತ್ತ, ಹಿಡಿಕೆಯ ಮೇಲಿನ ಪಟ್ಟು ಸಡಿಲಿಸದೇ ಸರಿದೂಗಿಸಿಕೊಂಡು ಓಡಿಸುವುದು ಕೆಲವೊಮ್ಮೆ ಕಶ್ಟವಾಗಿ ಬಿಡುತ್ತದೆ. ಇವೆಲ್ಲಕ್ಕೆ ಹೋಂಡಾದ ಹೊಸ ಬಂಡಿ ಕೊನೆ ಹಾಡಲಿದೆ.

ಬಿಎಮ್‌ಡಬ್ಲ್ಯೂ ಮೋಟರ‍್ರಾಡ್‍ವಿಶನ್ ನೆಕ್ಸ್ಟ್‌ನಲ್ಲಿ ಬಳಸಿದಂತೆ ಅರಿವಿಕ(sensor) ಮತ್ತು ಸುತ್ತಳಕಗಳನ್ನು(gyroscope) ಹೋಂಡಾದ ಇಗ್ಗಾಲಿ ಬಂಡಿಯಲ್ಲಿ ಬಳಸಿಲ್ಲ, ಬದಲಾಗಿ ಹೋಂಡಾದ ಹೆಸರುವಾಸಿ ರೊಬೋಟ್ “ಅಸಿಮೊ” ಮತ್ತು ಯೂನಿ-ಕಬ್ ಮಿಂಚಿನ ಸ್ಕೂಟರ‍್‌ನಲ್ಲಿ ಬಳಸಲಾದ ಸರಿದೂಗಿಕೆಯ ಏರ‍್ಪಾಟನ್ನೇ ಹೋಂಡಾದ ಈ ಹೊಸ ಇಗ್ಗಾಲಿ ಬಂಡಿಯಲ್ಲಿ ಬಳಸಲಾಗಿದೆ.

ಬಂಡಿಯ ವೇಗ ಗಂಟೆಗೆ 3 ಮಯ್ಲಿಗಿಂತ ಕಡಿಮೆಯಾದಾಗ, ಬಂಡಿಯ ಸರಿದೂಗಿಕೆಯ ಏರ‍್ಪಾಟು(Balancing System) ಕೆಲಸ ಮಾಡಲು ಶುರುವಾಗುತ್ತದೆ. ಬಂಡಿಯನ್ನು ಓಡಿಸುಗನ ನೆರವಿಲ್ಲದೇ ತಿರುಗಿಸಲು ಈ ಬಂಡಿಗೆ ಮಿಂಚಿನ ತಿಗುರಿಯ ಸ್ಟೀಯರ್ ಬೈ ವೈರ್ ಏರ‍್ಪಾಟನ್ನು(Steer by Wire system) ಅಳವಡಿಸಲಾಗಿದೆ. ಈ ಏರ‍್ಪಾಟು ಕೆಲಸ ಮಾಡುತ್ತಿದ್ದಂತೆ, ಬಂಡಿಯ ಹಿಡಿಕೆ(Handle Bar) ಮುಂಬದಿಯ ಸಳಿಗಳಿಂದ(Front Fork) ಬೇರ‍್ಪಟ್ಟು ತನ್ನಿಂದ ತಾನೇ ಸುಳುವಾಗಿ ತಿರುಗಬಲ್ಲದು.

ಬೈಕು ಓರೆಯಾಗುತ್ತಿದ್ದಂತೆ ಅರಿವಿಕಗಳು ಬೈಕಿನ ಎಣ್ಣುಕಕ್ಕೆ ಮಾಹಿತಿ ಒದಗಿಸಿ ಹಿಡಿಕೆಯನ್ನು ಮತ್ತು ಮುಂಬಾಗದ ಗಾಲಿಗಳನ್ನು ಸುಲಬವಾಗಿ ತಿರುಗುವಂತೆ ಮಾಡುತ್ತವೆ. ಬಂಡಿಯ ಹಿಡಿಕೆ ಮತ್ತು ಮುಂಬದಿಯ ಸಳಿ ಇವೆರಡಕ್ಕೂ ಬೇರೆಯದೇ ಆದ ಎರಡು ಮಿಂಚಿನ ಓಡುಗೆಗಳನ್ನು(motor) ಸೇರಿಸಿದ್ದಾರೆ. ಮಿಂಚಿನ ಓಡುಗೆಗಳು ಹಿಡಿಕೆ ಮತ್ತು ಮುಂಬದಿಯ ಸಳಿಗೆ ಕಸುವು ತುಂಬಿ ಅವುಗಳನ್ನು ಮುನ್ನಡೆಸುತ್ತವೆ. ಇಗ್ಗಾಲಿ ಬಂಡಿಯ ವೇಗ ಗಂಟೆಗೆ 3 ಮಯ್ಲಿಗಿಂತ ಹೆಚ್ಚಾಗುತ್ತಿದ್ದಂತೆ, ಹಿಡಿಕೆ ಮತ್ತು ಸಳಿಗಳು ಕೂಡಿಕೊಂಡು ಮಾಮೂಲಿ ಬಂಡಿಯಂತೆ ಕೆಲಸಮಾಡಲು ಶುರುಮಾಡುತ್ತವೆ.

ವಯಸ್ಸಾದವರಿಗೆ, ಕುಳ್ಳರಿಗೆ ಮತ್ತು ಹೆಚ್ಚಿನ ತೂಕದ ಬಂಡಿಗಳನ್ನು ಆರಾಮಾಗಿ ತಿರುಗಿಸಲು ಬಂಡಿಯ ಮೇಲೆ ಹಿಡಿತವಿಟ್ಟುಕೊಂಡು ಸಾಗಲು ಈ ಬಂಡಿ ಹೆಚ್ಚು ಸಹಾಯವಾಗಲಿದೆ ಎಂಬುದು ಹೋಂಡಾದ ಕೆಲಸಗಾರ ಲೀ ಎಡ್ಮಂಡ್ಸ್‌ ಅವರ ಅಂಬೋಣ.

(ಮಾಹಿತಿ ಮತ್ತು ಚಿತ್ರ ಸೆಲೆ: wired.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: