ಸೂರ‍್ಯಕಾಂತಿ ಹೂವುಗಳು – ಒಂದು ಕಿರುನೋಟ

– ಡಾ. ರಾಮಕ್ರಿಶ್ಣ ಟಿ.ಎಮ್.

sunflower-sunflower-field-flora-field-87056

ಸೂರ‍್ಯಕಾಂತಿ ಸಾಮಾನ್ಯವಾಗಿ ಎಲ್ಲ ನಿಸರ‍್ಗ ಪ್ರಿಯರನ್ನು ಸೆಳೆಯುವ ಸುಂದರವಾದ ಹೂವು. ಗಾತ್ರದಲ್ಲಿ ದೊಡ್ಡದಾಗಿ ದುಂಡಗೆ ಅರಳಿರುವ ಹಳದಿ ಬಣ್ಣದ ಹೂವನ್ನು ನೋಡಿದಾಗ ಸರ‍್ವೆಸಾಮಾನ್ಯವಾಗಿ ಇದು ಒಂದು ದೊಡ್ಡ ಹೂವಿನಂತೆ ಕಾಣುತ್ತದೆ. ಆದರೆ ಇದೊಂದು ಹೂವಿನ ಗೊಂಚಲು ಅದಕ್ಕೆ ಹೆಡ್ ಅತವಾ ಕ್ಯಾಪಿಟುಲಮ್ (Head or Capitulum) ಎಂದು ಕರೆಯುತ್ತಾರೆ. ಸೂರ‍್ಯಕಾಂತಿಯ ಸಾಮಾನ್ಯಗಾತ್ರದ ಹೂವಿನ ಗೊಂಚಲಿನಲ್ಲಿ 500-1000 ಮತ್ತು ದೊಡ್ಡಗಾತ್ರದ ಹೂವಿನ ಗೊಂಚಲಿನಲ್ಲಿ 1000-3000 ಕಿರುಹೂವುಗಳಿರುತ್ತವೆ. ಅಂತಹ ಕಿರುಹೂವುಗಳಿಗೆ ಪ್ಲಾರೆಟ್‍ಗಳು(florets) ಎಂದು ಕರೆಯಲಾಗುತ್ತದೆ.

ಹೂಗೊಂಚಲಿನಲ್ಲಿ ಒಂದು ಅತವಾ ಎರಡು ತರಹದ ಕಿರುಹೂವುಗಳಿರುತ್ತವೆ. ಈ ಹೂಗೊಂಚಲಿನ ತಳಬಾಗದಲ್ಲಿ ವ್ರುತ್ತಾಕಾರವಾಗಿ ಸಣ್ಣ ಸಣ್ಣ ಎಲೆಗಳು ಜತೆಜತೆಯಲ್ಲಿದ್ದು ಒಂದು ಬಟ್ಟಲಿನ ಆಕಾರವನ್ನು ಪಡೆಯುತ್ತವೆ. ಈ ಬಟ್ಟಲಿನ ಹೊರ ಅಂಚಿನಲ್ಲಿ ರೇ-ಕಿರುಹೂವುಗಳು (ray-florets) ಮತ್ತು ಮದ್ಯಬಾಗದಲ್ಲಿ ಡಿಸ್ಕ್-ಕಿರುಹೂವುಗಳು (disc-florets) ಇರುತ್ತವೆ. ರೇ-ಕಿರುಹೂವುಗಳಲ್ಲಿ ಹೆಣ್ಣು ಜನಕಾಂಗ, ಡಿಸ್ಕ್-ಕಿರುಹೂವುಗಳಲ್ಲಿ ಹೆಣ್ಣು ಮತ್ತು ಗಂಡು ಜನಕಾಂಗಗಳಿರುತ್ತವೆ. ಇಂತಹ ರೇ-ಕಿರುಹೂವು ಮತ್ತು ಡಿಸ್ಕ್-ಕಿರುಹೂವುಗಳನ್ನು ಪಡೆದಿರುವ ಎಲ್ಲಾ ಸಸ್ಯಗಳು; ಒಂದು ಸಸ್ಯ ಕುಟುಂಬಕ್ಕೆ ಒಳಪಡುತ್ತವೆ. ಆ ಕುಟುಂಬದ ಹೆಸರು ಕಂಪಾಸಿಟೇ(Compositae) ಅತವಾ ಆಸ್ಟರೇಸಿಯೇ (Asteraceae) ಎಂದು ಕರೆಯುತ್ತಾರೆ.

ಒಂದು ಹೆಡ್‍ನಲ್ಲಿರುವ ರೇ-ಕಿರುಹೂವು ಮತ್ತು ಡಿಸ್ಕ್-ಕಿರುಹೂವುಗಳನ್ನು ಜೇನುನೊಣಗಳು ಇಲ್ಲವೇ ಇನ್ನಾವುದೇ ಪರಾಗ ಸ್ಪರ‍್ಶಕ್ರಿಯೆಯ ದುಂಬಿಯು ಒಂದೇ ಒಂದು ಸಂದರ‍್ಶನದಲ್ಲಿ ಎಲ್ಲಾ ಹೂವುಗಳಲ್ಲಿ ಪರಾಗಸ್ಪರ‍್ಶ ಕ್ರಿಯೆಯನ್ನು ನಡೆಸಿಕೊಡುತ್ತವೆ. ಈ ಬಗೆಯ ಅಂತರ ಪರಾಗಸ್ಪರ‍್ಶಕ್ರಿಯೆ ಆಗದೆ ಹೋದ ಪಕ್ಶದಲ್ಲಿ, ಹೂವುಗಳಲ್ಲಿ ಸ್ವಪರಾಗಸ್ಪರ‍್ಶಕ್ರಿಯೆಗೆ ಅನುಕೂಲವಾಗುವಂತೆ ಕಿರುಹೂವುಗಳು ಮಾರ‍್ಪಾಡು ಮಾಡಿಕೊಂಡಿರುತ್ತವೆ.

ಸೂರ‍್ಯಕಾಂತಿ ಚಲನೆ ಒಂದು ತಪ್ಪು ಕಲ್ಪನೆ!

ಸೂರ‍್ಯನಂತಿರುವ ಹೂವು “ಸೂರ‍್ಯಕಾಂತಿ ಹೂವು” ಎಂದು ಕರೆಯಲಾಗುತ್ತದೆ. ಸೂರ‍್ಯನು ಆಕಾಶದಲ್ಲಿ ಪೂರ‍್ವದಿಂದ ಪಶ್ಚಿಮಕ್ಕೆ ಚಲನೆ ಮಾಡುವಾಗ ಸೂರ‍್ಯಕಾಂತಿ ಹೂವು ಸೂರ‍್ಯನನ್ನು ಅನುಸರಿಸಿ ತಿರುಗುತ್ತದೆ ಎಂಬ ತಪ್ಪು ಕಲ್ಪನೆ ಸಾವಿರಾರು ಜನರಲ್ಲಿದೆ. ಹೀಗೆ ಸೂರ‍್ಯ ತಿರುಗಿದ ಕಡೆಗೆ ಹೂವು ತಿರುಗುವ ಪ್ರಕ್ರಿಯೆಗೆ ಹೀಲಿಯೋಟ್ರೋಪಿಜಮ್(Heliotropism) ಎಂದು ಕರೆಯುತ್ತಾರೆ. ಈ ತರಹದ ಹೀಲಿಯೋಟ್ರೋಪಿಜಮ್ ಕ್ರಿಯೆಯನ್ನು ಸೂರ‍್ಯಕಾಂತಿಯ ಮೊಗ್ಗುಗಳಲ್ಲಿ ಕಾಣಬಹುದು, ಆದರೆ ಅರಳಿರುವ ಸೂರ‍್ಯಕಾಂತಿ ಹೂವುಗಳು ಪೂರ‍್ವ, ಪಶ್ಚಿಮ ಅತವಾ ಯಾವುದೇ ದಿಕ್ಕಿಗೆ ಸಾಮಾನ್ಯವಾಗಿ ಮುಕಮಾಡಬಹುದು. ಇವು ಸೂರ‍್ಯ ತಿರುಗಿದಂತೆಯೇ ಯಾವಾಗಲು ತಿರುಗುವುದಿಲ್ಲ. ಸೂರ‍್ಯಕಾಂತಿ ಮೊಗ್ಗುಗಳ ತಳಬಾಗದಲ್ಲಿ ಟರ್‍ಗರ್ ಒತ್ತಡದಿಂದ (Turgor Pressure) ಹಿಂದು ಅತವಾ ಮುಂದಾಗಿ ಬದಲಾಗುತ್ತಿರುತ್ತವೆ. ಇದಕ್ಕೆ ಕಾರಣ ಹೀಲಿಯೋಟ್ರೋಪಿಜಮ್ ಎಂಬ ದೈಹಿಕ ಪ್ರಕ್ರಿಯೆ. ಪೂರ‍್ತಿ ಅರಳಿದ ಸೂರ‍್ಯಕಾಂತಿ ಹೂವುಗಳು ಹೀಲಿಯೋಟ್ರೋಪಿಜಮ್‍ನ್ನು ಅನುಕರಣೆ ಮಾಡುವುದಿಲ್ಲ.

ಕಿರುಹೂವುಗಳು ಹರಡಿರುವ 34/55 ರ ಬಗೆ

fibonacci-sunflower

ಕಿರುಹೂವುಗಳು ಹರಡಿರುವ ಬಗೆ – ಪಿಬೊನಾಚಿ (fibonacci) ಸಂಕ್ಯೆಗಳನ್ನು ಹೋಲುತ್ತದೆ. ಸೂರ‍್ಯಕಾಂತಿ ಹೂವಿನ ಹೆಡ್‍ನಲ್ಲಿ ಯಾವಾಗಲೂ ಕಿರುಹೂವುಗಳು ಸುರುಳಿಯಾಕಾರದ ಮಾದರಿಯಲ್ಲೆ ಹರಡಿರುತ್ತವೆ. ಸಾಮಾನ್ಯವಾಗಿ ಒಂದು ಕಿರುಹೂವು ಇನ್ನೊಂದರ ಜತೆಗೆ ಸುಮಾರು 137.5 ಕೋನದಲ್ಲಿ ನೆಲೆಸಿರುತ್ತವೆ. ಇದಕ್ಕೆ ‘ಗೊಲ್ಡನ್ ಆಂಗಲ್’ ಎಂದು ಕರೆಯುತ್ತಾರೆ. ಸುರುಳಿಯಾಕಾರದಲ್ಲಿ ಹರಡಿರುವ ಕಿರುಹೂವುಗಳಲ್ಲಿ ಪರಸ್ಪರ ಸಂಬಂದವಿದೆ. ಇಲ್ಲಿನ ಎಡ ಸುರುಳಿ ಸಂಕ್ಯೆಯ ಕಿರುಹೂವುಗಳು ಮತ್ತು ಬಲ ಸುರುಳಿ ಕಿರುಹೂವುಗಳ ಸಂಕ್ಯೆಯು ನಿರ‍್ದಿಶ್ಟವಾಗಿರುತ್ತದೆ. ಉದಾರಣೆಗೆ 34 ಎಡ ಸುರುಳಿ ಹೊಂದಿರುವ ಕಿರುಹೂವುಗಳಿದ್ದರೆ ಅದಕ್ಕೆ ಸಂಬಂದದ 55 ಬಲ ಸುರುಳಿ ಹೊಂದಿರುವ ಕಿರುಹೂವುಗಳಿರುತ್ತವೆ, ಅತವಾ 55 ಎಡ ಸುರುಳಿ ಕಿರುಹೂವುಗಳಿದ್ದರೆ ಅದಕ್ಕೆ ಸಂಬಂದದ 34 ಬಲ ಸುರುಳಿ ಕಿರುಹೂವುಗಳಿರುತ್ತವೆ. ಈ ಸಂಬಂದಕ್ಕೆ ಪಿಬೊನಾಚಿ ಸಂಕ್ಯೆಗಳು ಅಂತ ಕರೆಯುತ್ತಾರೆ. ಇಂತಹ ಪಿಬೊನೆಸಿ ಸಂಕ್ಯೆಗಳು ದೊಡ್ಡ ಸೂರ‍್ಯಕಾಂತಿ ಹೂವುಗಳಲ್ಲಿ 89/144 ಎಡ ಅತವಾ ಬಲ ಸುರುಳಿಯಾಕಾರದಲ್ಲಿರುತ್ತವೆ. ಇಲ್ಲಿ 89 ಎಡ ಸುರುಳಿಯವಾಗಿದ್ದರೆ 144 ಬಲ ಸುರುಳಿಯವಾಗಿರುತ್ತವೆ ಅತವಾ 89 ಎಡ ಸುರುಳಿಯವಾಗಿದ್ದರೆ 144 ಬಲ ಸುರುಳಿಯವಾಗಿರುತ್ತವೆ. ಒಟ್ಟಾರೆಯಾಗಿ ಪಿಬೊನಾಚಿ ಸಂಕ್ಯೆಗಳ 34/55ರ ಅತವಾ 89/144ರ ಅನುಪಾತ ವ್ರುತ್ತಾಕಾರದ ಕೋನದಲ್ಲಿ ಹೂವುಗಳು ಹರಡಿರುತ್ತವೆ. ಹೀಗೆ ಹರಡಿರುವುದಕ್ಕೆ ಕಾರಣ ಸಾವಿರಾರು ಹೂವುಗಳನ್ನು ಒಂದೇ ಗುಂಪಿನಲ್ಲಿರುವುದು ಅಲ್ಲದೆ ಕೀಟಗಳಿಗೆ ಪರಾಗಸ್ಪರ‍್ಶಮಾಡಲು ಅನುಕೂಲವಾUಲಿ ಎಂಬ ದೋರಣೆಯಿದ್ದರಬಹುದು.

(ಚಿತ್ರ ಸೆಲೆ: pexels.com, liaisonwithalison.wordpress.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: