ಅಲ್ಲಮನ ವಚನಗಳ ಓದು – 9ನೆಯ ಕಂತು

– ಸಿ.ಪಿ.ನಾಗರಾಜ.

ಅಕ್ಷರವ ಬಲ್ಲೆವೆಂದು ಅಹಂಕಾರವೆಡೆಗೊಂಡು ಲೆಕ್ಕಗೊಳ್ಳರಯ್ಯ
ಗುರುಹಿರಿಯರು ತೋರಿದ ಉಪದೇಶದಿಂದ
ವಾಗದ್ವೈತವ ಕಲಿತು ವಾದಿಪರಲ್ಲದೆ ಆಗುಹೋಗೆಂಬುದನರಿಯರು
ಭಕ್ತಿಯನರಿಯರು ಮುಕ್ತಿಯನರಿಯರು ಯುಕ್ತಿಯನರಿಯರು
ಮತ್ತೂ ವಾದಿಗೆಳಸುವರು
ಹೋದರು ಗುಹೇಶ್ವರ ಸಲೆ ಕೊಂಡ ಮಾರಿಂಗೆ.

ಓದುಬರಹವನ್ನು ಕಲಿತ ಮಾತ್ರದಿಂದಲೇ ಇತರರಿಗಿಂತ ತಾವೇ ದೊಡ್ಡವರೆಂದು ಸೊಕ್ಕಿನಿಂದ ಮೆರೆಯುತ್ತಾ , ಕೇವಲ ಮಾತಿನ ಚತುರತೆಯಿಂದಲೇ ಎಲ್ಲವನ್ನೂ ಗೆಲ್ಲುತ್ತ , ಜನಸಮುದಾಯದ ಒಳಿತನ್ನು ಕಡೆಗಣಿಸುವಂತಹ ವ್ಯಕ್ತಿಗಳನ್ನು ಅಲ್ಲಮನು ಕಟುವಾಗಿ ಟೀಕಿಸಿದ್ದಾನೆ.

( ಅಕ್ಷರ=ನುಡಿಯ ಓದು/ಬರಹ ; ಬಲ್ಲೆವ್+ಎಂದು ; ಬಲ್ಲ=ತಿಳಿದ/ಅರಿತ ; ಬಲ್ಲೆವು=ತಿಳಿದಿರುವೆವು/ಅರಿತಿದ್ದೇವೆ ; ಅಕ್ಷರ ಬಲ್ಲೆವೆಂದು=ನಾವು ಓದುಬರಹವನ್ನು ಕಲಿತವರು ಎಂಬ ಒಳಮಿಡಿತದಿಂದ ಕೂಡಿ ; ಅಹಂಕಾರ+ಎಡೆ+ಕೊಂಡು ; ಅಹಂಕಾರ=ನಾವೇ ದೊಡ್ಡವರು/ಉತ್ತಮರು/ಮೇಲಿನವರು ಎಂಬ ಸೊಕ್ಕಿನ ನಡೆನುಡಿ ; ಎಡೆ+ಕೊಂಡು ; ಎಡೆ=ಜಾಗ/ಅವಕಾಶ/ಪಡೆ/ಹೊಂದು ; ಎಡೆಗೊಂಡು=ತಳೆದು/ಹೊಂದಿದವರಾಗಿ/ಒಳಗಾಗಿ ; ಲೆಕ್ಕ+ಕೊಳ್ಳರ‍್+ಅಯ್ಯ ; ಲೆಕ್ಕ=ಗಣನೆ/ಎಣಿಸುವುದು  ; ಲೆಕ್ಕಗೊಳ್=ಇತರರನ್ನು ಒಲವುನಲಿವಿನಿಂದ ಕಾಣುವುದು ಎಂಬ ತಿರುಳಿನಲ್ಲಿ ಬಳಕೆಯಾಗಿರುವ ನುಡಿಗಟ್ಟು; ಲೆಕ್ಕಗೊಳ್ಳರ‍್=ಇತರರ ಬಗ್ಗೆ ಒಲವುನಲಿವಿನಿಂದ ನಡೆದುಕೊಳ್ಳದೆ , ಎಲ್ಲವನ್ನೂ/ಎಲ್ಲರನ್ನೂ ಕೀಳಾಗಿ ಕಾಣುತ್ತಾರೆ ; ತೋರಿದ=ಕಾಣುವಂತೆ/ತಿಳಿಯುವಂತೆ ಮಾಡಿದ  ; ಉಪದೇಶ+ಇಂದ ; ಉಪದೇಶ=ಹೇಳಿದ ನುಡಿಗಳು/ಆಡಿದ ಮಾತುಗಳು/ಕಲಿಸಿದ ವಿದ್ಯೆ ; ವಾಕ್+ಅದ್ವೈತ ; ವಾಕ್=ನುಡಿ/ಮಾತು ; ಅದ್ವೈತ=ಜೀವಾತ್ಮ ಮತ್ತು ಪರಮಾತ್ಮ ಎಂಬುವು ಬೇರೆ ಬೇರೆಯಲ್ಲ , ಅವೆರಡೂ ಒಂದೇ ಎಂಬ ನಿಲುವು  ; ವಾಗದ್ವೈತವ ಕಲಿತು=” ಯಾವುದೇ ಸಂಗತಿಯನ್ನು ಕುರಿತ ಚರ‍್ಚೆಯ ಸನ್ನಿವೇಶದಲ್ಲಿ ಎದುರಾಳಿಯನ್ನು ಸೋಲಿಸುವಂತಹ ಮಾತುಗಾರಿಕೆಯನ್ನು/ಮಾತಿನ ಬಳಕೆಯಲ್ಲಿ ಹೆಚ್ಚಿನ ಜಾಣ್ಮೆಯನ್ನು ಕರಗತ ಮಾಡಿಕೊಳ್ಳುವುದು ; ಆಡುವುದು ಒಂದು , ಮಾಡುವುದು ಮತ್ತೊಂದು ಎನಿಸುವ ಇಬ್ಬಗೆಯ ನಡೆನುಡಿಯನ್ನು ಅಳವಡಿಸಿಕೊಳ್ಳುವುದು ; ನಿಜಜೀವನದಲ್ಲಿ ಆಚರಣೆಯಲ್ಲಿಲ್ಲದ ಆದರ‍್ಶದ ನುಡಿಗಳನ್ನಾಡುವುದು ” ಎಂಬ ತಿರುಳಿನಲ್ಲಿ ಬಳಕೆಯಾಗಿರುವ ನುಡಿಗಟ್ಟು  ; ವಾದಿಪರ‍್+ಅಲ್ಲದೆ ; ವಾದ=ಯಾವುದೇ ಸಂಗತಿಯನ್ನು ಕುರಿತು ಚರ‍್ಚಿಸುವಾಗ ತಾವಾಡುವ ನುಡಿಗಳೇ/ತಮ್ಮ ನಿಲುವೇ ಸರಿಯೆಂಬ ನಿಲುವು ; ವಾದಿಪರ‍್=ವಾದವನ್ನು ಮಾಡುತ್ತಾರೆ  ; ವಾದಿಪರ‍್+ಅಲ್ಲದೆ ; ವಾದಿಪರಲ್ಲದೆ=ಸೊಗಸಾಗಿ ಮಾತನಾಡುತ್ತಾರೆಯೇ ಹೊರತು ; ಆಗುಹೋಗು+ಎಂಬುದನ್+ಅರಿಯರು ; ಆಗುಹೋಗು=ಲೋಕದಲ್ಲಿನ/ಸಮಾಜದಲ್ಲಿನ ಜನಸಮುದಾಯದ ನೋವುನಲಿವು/ಏಳುಬೀಳು ; ಎಂಬುದನ್=ಎನ್ನುವುದನ್ನು ; ಅರಿ=ತಿಳಿ ; ಅರಿಯರು=ಅವರಿಗೆ ತಿಳಿದಿಲ್ಲ/ಗೊತ್ತಿಲ್ಲ ; ಭಕ್ತಿ+ಅನ್+ಅರಿಯರು ; ಭಕ್ತಿ=ದೇವರನ್ನು ಪೂಜಿಸಲು/ಒಲಿಸಿಕೊಳ್ಳಲು ವ್ಯಕ್ತಿಯು ಹೊಂದಿರಬೇಕಾದ ಒಳ್ಳೆಯ ನಡೆನುಡಿ; ಅನ್=ಅನ್ನು ; ಮುಕ್ತಿ+ಅನ್+ಅರಿಯರು ; ಮುಕ್ತಿ=ಮಯ್ ಮನಗಳಲ್ಲಿ ತುಡಿಯುವಂತಹ ಕೆಟ್ಟ ಒಳಮಿಡಿತಗಳನ್ನು ಹೋಗಲಾಡಿಸಿಕೊಂಡು ಒಳ್ಳೆಯ ರೀತಿಯಲ್ಲಿ ಬದುಕುವುದು ; ಯುಕ್ತಿ+ಅನ್+ಅರಿಯರು ; ಯುಕ್ತಿ=ಮಯ್ ಮನಗಳನ್ನು ಹತೋಟಿಯಲ್ಲಿಟ್ಟುಕೊಂಡು ಒಳಿತಿನ ನಡೆನುಡಿಗಳಿಂದ ಬಾಳುವ ಬಗೆ/ರೀತಿ ; ಮತ್ತೂ=ಪದೇ ಪದೇ/ಯಾವಾಗಲೂ/ಒಂದೇ ಸಮನೆ ; ವಾದಿಗೆ+ಎಳಸುವರು ; ವಾದಿಗೆ=ವಾದವನ್ನು ಮಾಡುವುದಕ್ಕೆ/ತಮ್ಮ ಮಾತು/ನಿಲುವನ್ನೇ ಮುಂದೊಡ್ಡುವುದಕ್ಕೆ ; ಎಳಸು=ಬಯಸು/ಪ್ರಯತ್ನಿಸು/ಹಂಬಲಿಸು ; ಗುಹೇಶ್ವರ=ಶಿವ/ಅಲ್ಲಮನ ಮೆಚ್ಚನ ದೇವರು ; ಸಲೆ=ಸಂಪೂರ‍್ಣವಾಗಿ/ನಿಜವಾಗಿ ; ಕೊಂಡ=ಪಡೆದ ; ಮಾರಿಂಗೆ=ಮಾರಿ ದೇವತೆಗೆ ; ಸಲೆ ಕೊಂಡ ಮಾರಿಂಗೆ ಹೋದರು=ಮಾರಿ ದೇವತೆಯ ಕ್ರೂರನೋಟಕ್ಕೆ ಸಿಲುಕಿ ಸಂಪೂರ‍್ಣವಾಗಿ ನಾಶವಾದರು ಎಂಬ ತಿರುಳಿನಲ್ಲಿ ಬಳಕೆಯಾಗುವ ಶಾಪದ ಮಾತು)

ಆಚಾರವರಿಯದೆ ವಿಭವವಳಿಯದೆ
ಕೋಪವಡಗದೆ ತಾಪ ಮುರಿಯದೆ
ಬರಿದೆ ಭಕ್ತರಾದೆವೆಂದು ಬೆಬ್ಬನೆ ಬೆರೆವವರ ಕೇಡಿಂಗೆ
ನಾನು ಮರುಗುವೆನು ಕಾಣಾ ಗುಹೇಶ್ವರ.

ಮಯ್ ಮನಗಳಲ್ಲಿ ತುಡಿಯುವ ಒಳಮಿಡಿತಗಳನ್ನು ಹತೋಟಿಯಲ್ಲಿಟ್ಟುಕೊಂಡು , ಒಳ್ಳೆಯ ನಡೆನುಡಿಗಳಿಂದ ಬದುಕನ್ನು ನಡೆಸದೆ , ಇತರರ ಮುಂದೆ ” ತಾವು ದೇವರನ್ನು ಒಲಿದು ಪೂಜಿಸುವ ವ್ಯಕ್ತಿಗಳು ” ಎಂದು ಹೇಳಿಕೊಂಡು ಮೆರೆದಾಡುವವರನ್ನು ಕುರಿತು ಅಲ್ಲಮನು ಕಳವಳವನ್ನು ವ್ಯಕ್ತಪಡಿಸಿದ್ದಾನೆ.

( ಆಚಾರ+ಅರಿಯದೆ ; ಆಚಾರ=ಒಳ್ಳೆಯ ನಡೆನುಡಿ ; ಅರಿ=ತಿಳಿ ; ಅರಿಯದೆ=ತಿಳಿಯದೆ ; ಆಚಾರವರಿಯದೆ=ಒಳ್ಳೆಯತನದ ನಡೆನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳದೆ ; ವಿಭವ+ಅಳಿಯದೆ ; ವಿಭವ=ಸಿರಿ/ಸಂಪತ್ತು/ಶಕ್ತಿ/ಬಲ/ಹಿರಿಮೆ ; ಅಳಿ=ನಾಶ/ಇಲ್ಲವಾಗುವುದು ; ವಿಭವವಳಿಯದೆ=ಸಿರಿಸಂಪದಗಳಿಂದ/ಪಡೆದ ವಿದ್ಯೆ ಗದ್ದುಗೆಯಿಂದ ಉಂಟಾದ ಸೊಕ್ಕಿನ ನಡೆನುಡಿಗಳನ್ನು ತೊರೆಯದೆ/ಬಿಡದೆ/ಇಲ್ಲವಾಗಿಸಿಕೊಳ್ಳದೆ ; ಕೋಪ+ಅಡಗದೆ ; ಕೋಪ=ಇತರರ ನಡೆನುಡಿಗಳಿಂದ ಅಡ್ಡಿ/ಆತಂಕ/ನೋವು/ಹಾನಿ ಉಂಟಾದಾಗ ವ್ಯಕ್ತಿಯ ಮನದಲ್ಲಿ ಕೆರಳುವ ಒಳಮಿಡಿತ ; ಅಡಗು=ನಾಶಹೊಂದು/ಇಲ್ಲವಾಗದೆ ; ತಾಪ=ಸಂಕಟ/ವೇದನೆ/ಯಾತನೆ ; ಮುರಿ=ಕೆಡು/ಹಾಳಾಗು/ನಾಶವಾಗು ; ತಾಪ ಮುರಿಯದೆ=ಮನದೊಳಗಿನ ಆಕ್ರೋಶ/ಕುದಿತ ಕಡಮೆಯಾಗದೆ ; ಬರಿದೆ=ಸುಮ್ಮನೆ ; ಭಕ್ತರ‍್+ಆದೆವ್+ಎಂದು ; ಭಕ್ತ=ಒಳ್ಳೆಯ ನಡೆನುಡಿಗಳಿಂದ ದೇವರನ್ನು ಪೂಜಿಸುವವನು ; ಆದೆವ್=ಆದೆವು/ಆಗಿದ್ದೇವೆ ; ಬೆಬ್ಬನೆ=ಅತಿಯಾಗಿ/ಬಹಳವಾಗಿ ; ಬೆರೆವ+ಅವರ ; ಬೆರೆ=ಹೆಮ್ಮೆ/ಜಂಬ/ಉಬ್ಬು/ಸೊಕ್ಕು ; ಬೆರೆವವರ=ಇತರರಿಗಿಂತ ತಾವೇ ದೊಡ್ಡವರು/ಉತ್ತಮರು/ಮೇಲಿನವರು ಎಂಬ ಸೊಕ್ಕಿನಿಂದ ನಡೆದುಕೊಳ್ಳುವ ವ್ಯಕ್ತಿಗಳ ; ಕೇಡು=ಹಾನಿ/ನಾಶ/ಕೊನೆ ; ಕೇಡಿಂಗೆ=ಕೆಟ್ಟ ವರ‍್ತನೆಗೆ ; ಮರುಗು=ಕನಿಕರ/ಕರುಣೆ/ಕಳವಳ ; ಕಾಣಾ=ಕಂಡೆಯಾ/ತಿಳಿದಿರುವೆಯಾ ; ಗುಹೇಶ್ವರ=ಶಿವ/ಅಲ್ಲಮನ ಮೆಚ್ಚಿನ ದೇವರು)

ಅಗ್ಘವಣಿ ಪತ್ರೆ ಧೂಪ ದೀಪ ನಿವಾಳಿಯಲ್ಲಿ
ಪೂಜಿಸಿ ಪೂಜಿಸಿ ಬಳಲುತ್ತೈದಾರೆ
ಏನೆಂದರಿಯರು ಎಂತೆಂದರಿಯರು
ಜನ ಮರುಳೋ ಜಾತ್ರೆ ಮರುಳೊ ಎಂಬಂತೆ
ಎಲ್ಲರೂ ಪೂಜಿಸಿ ಏನನೂ ಕಾಣದೆ
ಲಯವಾಗಿ ಹೋದರು ಗುಹೇಶ್ವರ.

ವಿಗ್ರಹ ರೂಪದಲ್ಲಿರುವ ದೇವರಿಗೆ ಮಾಡುವ ಯಾವುದೇ ಬಗೆಯ ಆಚರಣೆಗಳನ್ನಾಗಲಿ ಇಲ್ಲವೇ ದೇವರ ಪೂಜೆಗೆಂದು ಬಳಸುವ  ಸಾಮಗ್ರಿಗಳನ್ನಾಗಲಿ ಶಿವಶರಣಶರಣೆಯರು ದೊಡ್ಡದೆಂದು ಪರಿಗಣಿಸಿಲ್ಲ. ಏಕೆಂದರೆ ಯಾವುದೇ ವ್ಯಕ್ತಿಯು ತನಗೆ ಮತ್ತು ತನ್ನ ಕುಟುಂಬಕ್ಕೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ಸಾಮಾಜಿಕ ನಡೆನುಡಿಗಳಲ್ಲಿ ಅವರು ದೇವರನ್ನು ಕಾಣುತ್ತಿದ್ದರು. ಈ ಬಗೆಯ ನಿಲುವನ್ನು ಅಲ್ಲಮನು ಈ ವಚನದಲ್ಲಿ ನಿರೂಪಿಸಿದ್ದಾನೆ.

(ಅಗ್ಘವಣಿ=ದೇವರ ವಿಗ್ರಹಗಳನ್ನು ತೊಳೆಯುವುದಕ್ಕೆ ಬಳಸುವ ನೀರು ; ಪತ್ರೆ=ಬಿಲ್ವ/ಬನ್ನಿ ಮರದ ಇಲ್ಲವೇ ತುಳಸಿ ಗಿಡದ ಎಲೆ/ದಳ ; ಧೂಪ=ಕೆಂಡದ ಮೇಲೆ ಹಾಕಿದಾಗ ಉಂಟಾಗುವ ಹೊಗೆಯಲ್ಲಿ ಒಳ್ಳೆಯ ಕಂಪನ್ನು ಬೀರುವ ಸಾಂಬ್ರಾಣಿ/ಹಾಲುಮಡ್ಡಿ ಮುಂತಾದ ವಸ್ತುಗಳು ; ದೀಪ=ದೀವಿಗೆ/ಸೊಡರು ; ನಿವಾಳಿ+ಅಲ್ಲಿ ; ನಿವಾಳಿ=ಆರತಿಯನ್ನು ಎತ್ತುವಿಕೆ ; ದೀಪ ನಿವಾಳಿಯಲ್ಲಿ=ಬೆಳಗುತ್ತಿರುವ ಜ್ಯೋತಿ/ಉರಿಯುತ್ತಿರುವ ಕರ‍್ಪೂರವನ್ನು ಒಳಗೊಂಡ ತಟ್ಟೆಯನ್ನು ದೇವರ ವಿಗ್ರಹದ ಮುಂದೆ ಎತ್ತಿ ಹಿಡಿದು ಅತ್ತಿತ್ತ ಆಡಿಸುವ ಆಚರಣೆ ; ಬಳಲುತ್ತ+ಐದಾರೆ ; ಬಳಲು=ಆಯಾಸಪಡು/ದಣಿಯುವುದು/ಶ್ರಮಪಡುವುದು ; ಐದಾರೆ=ಅಯ್ದಾರೆ<ಎಯ್ದಾರೆ/ಇದ್ದಾರೆ ; ಏನ್+ಎಂದು+ಅರಿಯರು ; ಎಂತು+ಎಂದು+ಅರಿಯರು ;  ಎಂತು=ಯಾವ ರೀತಿ/ಬಗೆ ; ಅರಿ=ತಿಳಿ ; ಅರಿಯರು=ತಿಳಿಯರು/ಗೊತ್ತಿಲ್ಲದವರು ; ಏನೆಂದರಿಯರು ಎಂತೆಂದರಿಯರು=ಈ ರೀತಿಯ ಆಚರಣೆಗಳನ್ನು ಏಕೆ ಮಾಡಬೇಕು , ದೇವರಿಗೂ ಈ ಆಚರಣೆಗಳಿಗೂ ಇರುವ ನಂಟು ಯಾವುದು , ಇವು ಹೇಗೆ ಪರಿಣಾಮವನ್ನು ಬೀರುತ್ತವೆ ಎಂಬುದರ ಬಗ್ಗೆ  ಯಾವೊಂದು ಬಗೆಯ ತಿಳುವಳಿಕೆಯೂ ಇಲ್ಲದವರು. ಹಿಂದಿನಿಂದಲೂ ದೇವರನ್ನು ಪೂಜಿಸಿಕೊಂಡು ಬಂದಿರುವ ಆಚರಣೆಗಳನ್ನು ಯತಾವತ್ತಾಗಿ ಮಾಡುತ್ತಿರುತ್ತಿರುವವರು ; ಮರುಳು=ದಡ್ಡತನ/ತಿಳಿಗೇಡಿತನ/ಹುಚ್ಚು/ಮೋಹ ; ಜಾತ್ರೆ=ನೂರಾರು ಸಾವಿರಾರು ಮಂದಿ ಜತೆಗೂಡಿ ಮಾಡುವ ದೇವರ ಉತ್ಸವ ; ಜನ ಮರುಳೋ ಜಾತ್ರೆ ಮರುಳೊ=ಒಳಿತು/ಕೆಡುಕಿನ ಇಲ್ಲವೇ ಸರಿ/ತಪ್ಪುಗಳ ಅರಿವಿಲ್ಲದೆ/ವಿವೇಚನೆಯಿಲ್ಲದೆ ಮಾಡುವ ಕೆಲಸ ಎಂಬ ತಿರುಳಿನಲ್ಲಿ ಬಳಕೆಯಲ್ಲಿರುವ ನಾಣ್ಣುಡಿ ; ಏನನೂ=ಏನನ್ನೂ/ಯಾವುದನ್ನೂ ; ಕಾಣದೆ=ಸರಿಯಾಗಿ ತಿಳಿಯದೆ ;  ಲಯ+ಆಗಿ ; ಲಯ=ನಾಶ/ಹಾಳು/ಇಲ್ಲವಾಗುವುದು ; ಗುಹೇಶ್ವರ=ಶಿವ/ಅಲ್ಲಮನ ಮೆಚ್ಚಿನ ದೇವರು)

 ನಿಮ್ಮಲ್ಲಿ ನೀವು ತಿಳಿದು ನೋಡಿರೇ ಅನ್ಯವಿಲ್ಲ ಕಾಣಿರಣ್ಣ
ಅರಿವು ನಿಮ್ಮಲ್ಲಿಯೇ ತದ್ಗತವಾಗಿಯದೆ
ಅನ್ಯಭಾವವ ನೆನೆಯದೆ
ತನ್ನೊಳಗೆ ತಾನೆಚ್ಚರಬಲ್ಲಡೆ
ತನ್ನಲ್ಲಿಯೆ ತನ್ಮಯ ಗುಹೇಶ್ವರ ಲಿಂಗವು.

ಒಂದೆಡೆ ನಿಸರ‍್ಗದ ಸೆಳೆತ , ಮತ್ತೊಂದೆಡೆ ಸಾಮಾಜಿಕ ಸಂಪ್ರದಾಯ/ಕಟ್ಟುಪಾಡುಗಳ ನಡುವೆ ಸಿಲುಕಿರುವ ಮಾನವ ಜೀವಿಯು ತನ್ನ ಮಯ್ ಮನಗಳನ್ನು ತಾನೇ ಹತೋಟಿಯಲ್ಲಿಟ್ಟುಕೊಂಡು , ತನ್ನ ಬದುಕನ್ನು ರೂಪಿಸಿಕೊಳ್ಳಬೇಕಾದ ಅಗತ್ಯವನ್ನು ಈ ವಚನದಲ್ಲಿ ಅಲ್ಲಮನು ಹೇಳಿದ್ದಾನೆ.

( ನಿಮ್ಮ+ಅಲ್ಲಿ ; ತಿಳಿ=ಅರಿ/ಕಲಿ/ಆಲೋಚಿಸು ; ನಿಮ್ಮಲ್ಲಿ ನೀವು ತಿಳಿದು ನೋಡಿರೇ=ಪ್ರತಿಯೊಬ್ಬ ವ್ಯಕ್ತಿಯು ತನ್ನ ಮಯ್ ಮನಗಳಲ್ಲಿ ತುಡಿಯುವಂತಹ ಒಳಮಿಡಿತಗಳನ್ನು ಮತ್ತು ತನ್ನ ಸುತ್ತಮುತ್ತಣ ಸಮಾಜದಲ್ಲಿನ ಆಗುಹೋಗುಗಳನ್ನು ಪರಸ್ಪರ ಒರೆಹಚ್ಚಿ ನೋಡಿದಾಗ , ಸಾಮಾಜಿಕ ವ್ಯಕ್ತಿಯ ಇತಿಮಿತಿಗಳು ಏನೆಂಬುದು ತಿಳಿದುಬಂದು , ತನ್ನನ್ನು ಒಳಗೊಂಡಂತೆ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಳಿತು/ಕೆಡುಕಿನ ನಡೆನುಡಿಗಳಿರುವುದು ಅರಿವಿಗೆ ಬರುತ್ತದೆ. ಈ ಬಗೆಯ ಒಳನೋಟದಿಂದ ಸದಾಕಾಲ ಜೀವನದ ಉದ್ದಕ್ಕೂ ನಮ್ಮನ್ನು ನಾವು ತಿದ್ದಿಕೊಂಡು ಬಾಳುತ್ತಿರಬೇಕು ಎಂಬ ಎಚ್ಚರ ಮತ್ತು ಅರಿವನ್ನು ಹೊಂದುವುದು ; ಅನ್ಯ+ಇಲ್ಲ ; ಅನ್ಯ=ಬೇರೆ/ಇತರ ; ಕಾಣಿರಿ+ಅಣ್ಣಾ ; ಕಾಣ್=ನೋಡು/ತಿಳಿ/ಅರಿ ; ಅರಿವು=ಯಾವುದು ಒಳ್ಳೆಯದು/ಕೆಟ್ಟದ್ದು-ಯಾವುದು ಸರಿ/ತಪ್ಪು ಎಂಬುದರ ಬಗೆಗಿನ ತಿಳುವಳಿಕೆ ; ನಿಮ್ಮ+ಅಲ್ಲಿಯೇ ; ನಿಮ್ಮಲ್ಲಿಯೇ=ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ; ತದ್ಗತ+ಆಗಿ+ಅದೆ ; ತದ್ಗತ=ಅದರಲ್ಲಿಯೇ ಲೀನವಾಗಿರುವುದು/ಅಡಗಿರುವುದು/ನೆಲೆಸಿರುವುದು ; ನಿಮ್ಮಲ್ಲಿಯೇ ತದ್ಗತವಾಗಿಯದೆ=ಪ್ರತಿಯೊಬ್ಬ ವ್ಯಕ್ತಿಯ ಮಯ್ ಮನಗಳಲ್ಲಿ ನೆಲೆಸಿದೆ/ಅಡಗಿದೆ/ವ್ಯಾಪಿಸಿದೆ ; ಅನ್ಯಭಾವ=ಇನ್ನಿತರ ಸಂಗತಿ/ವಿಚಾರಗಳನ್ನು ; ನೆನೆ=ಆಲೋಚಿಸು/ಚಿಂತಿಸು/ಕಲ್ಪಿಸು ; ಅನ್ಯಭಾವವ ನೆನೆಯದೆ=ಮತ್ತೊಂದನ್ನು ಅರಸದೆ/ಹುಡುಕದೆ ಇಲ್ಲವೇ ಹೊರಗಡೆ ಕಾಣಲು ತವಕಿಸದೆ ; ತನ್ನ+ಒಳಗೆ ; ತನ್ನೊಳಗೆ=ತನ್ನ ನಡೆನುಡಿಗಳಲ್ಲಿ/ಆಲೋಚನೆಯಲ್ಲಿ ; ತಾನ್+ಎಚ್ಚರ+ಬಲ್ಲಡೆ ; ಬಲ್ಲಡೆ=ಶಕ್ತನಾದರೆ/ಕಸುವನ್ನು ಹೊಂದಿದರೆ ; ತನ್ನೊಳಗೆ ತಾನೆಚ್ಚರಬಲ್ಲಡೆ=ತನ್ನ ಮಯ್ ಮನಗಳನ್ನು ಹತೋಟಿಯಲ್ಲಿಟ್ಟುಕೊಂಡು ಒಳ್ಳೆಯ ನಡೆನುಡಿಗಳಿಂದ ಬಾಳಲು ಶಕ್ತನಾದರೆ ; ತನ್ನ+ಅಲ್ಲಿಯೆ ; ತನ್ನಲ್ಲಿಯೆ=ವ್ಯಕ್ತಿಯಲ್ಲಿಯೆ ; ತನ್ಮಯ=ಅದರಲ್ಲಿಯೇ ಮಗ್ನ/ಲೀನ/ಒಳಗೊಂಡಿರುವುದು ; ತನ್ನಲ್ಲಿಯೆ ತನ್ಮಯ ಗುಹೇಶ್ವರ ಲಿಂಗವು=ತನ್ನನ್ನು ತಾನು ಅರಿತುಕೊಂಡು/ತಿದ್ದಿಕೊಂಡು ಒಳ್ಳೆಯ ನಡೆನುಡಿಗಳಿಂದ ಬಾಳುತ್ತಿರುವಂತಹ ವ್ಯಕ್ತಿಯ ಮಯ್ ಮನಗಳಲ್ಲಿಯೇ ಗುಹೇಶ್ವರನು ನೆಲೆಸಿರುತ್ತಾನೆ. ವ್ಯಕ್ತಿಯ ಸಾಮಾಜಿಕ ಒಳ್ಳೆಯ ನಡೆನುಡಿಗಳು ಮತ್ತು ದೇವರು ಒಂದರೊಡನೊಂದು ಲೀನವಾಗಿರುತ್ತವೆ ಎಂಬುದು ಶಿವಶರಣೆಯರ ನಿಲುವು)

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: