ಮಾರುಕಟ್ಟೆಗೆ ಬರಲಿವೆ ಬಳುಕುವ ಮೊಬೈಲ್‍ಗಳು!

– ರತೀಶ ರತ್ನಾಕರ.

flexible-smartphone

ಚೂಟಿಯುಲಿಯ(smartphones) ಚಳಕಗಳು ಬೆಳಕಿನ ವೇಗದಲ್ಲಿ ಬೆಳೆಯುತ್ತಿವೆ. ಕಳೆದ ಹತ್ತು ವರುಶಗಳಲ್ಲಿ ಕಪ್ಪುಬಿಳುಪಿನ ಚೂಟಿಯುಲಿಗಳಿಂದ ಸಾವಿರಾರು ಬಣ್ಣಗಳನ್ನು ತೋರುವ, ಸಾವಿರಾರು ಆಯ್ಕೆಗಳಿರುವ ಚೂಟಿಯುಲಿಗಳವರೆಗೆ ಇದರ ಮಾರುಕಟ್ಟೆಯು ಬೆಳೆದು ನಿಂತಿದೆ. ಮುಂದೆ ಇನ್ನೇನು ಹೊಸತಾಗಿ ಬರಲಿದೆ ಎಂದು ಹುಡುಕಿದರೆ ನಮಗೆ ಸಿಗುವುದು ‘ಬಳುಕುವ ಚೂಟಿಯುಲಿಗಳು’!

ಏನಿವು ‘ಬಳುಕುವ ಚೂಟಿಯುಲಿಗಳು’?

ಹೆಸರೇ ಹೇಳುವಂತೆ ಇವು ಹೇಗೆ ಬೇಕೋ ಹಾಗೆ ಬಳುಕುತ್ತವೆ. ಈಗಿರುವ ದೊಡ್ಡ ಚೂಟಿಯುಲಿಗಳನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡಲು ಕೊಂಚ ತೊಡಕಾಗುತ್ತದೆ. ಬಳುಕುವ ಚೂಟಿಯುಲಿಗಳಾದರೆ ಜೇಬಿನ ಆಕಾರಕ್ಕೆ ಬಾಗುವುದರಿಂದ ತೊಡಕಿರುವುದಿಲ್ಲ. ಇವನ್ನು ಮಡಚಿ ಜೇಬಿನೊಳಗೂ ಇಟ್ಟುಕೊಳ್ಳಬಹುದು! ಇವೆಲ್ಲಕ್ಕಿಂತ ಸೊಗಸಾದ ಆಯ್ಕೆ ಎಂದರೆ ನಿಮ್ಮ ಬಳುಕುವ ಚೂಟಿಯುಲಿಯನ್ನು ಕೈಗಡಿಯಾರವನ್ನು ಕಟ್ಟಿಕೊಳ್ಳುವ ಹಾಗೆ ಕೈಗೆ ಸುತ್ತಿಕೊಂಡು ಬಳಸಬಹುದು! ಮುಂದೆ ಇಂತಹ ನೂರಾರು ಆಯ್ಕೆಗಳು ಬಳಕೆದಾರರಿಗೆ ಸಿಗುವುದರಲ್ಲಿ ಅನುಮಾನವಿಲ್ಲ.

fs1

ಈಗಿರುವ ಚೂಟಿಯುಲಿಯ ತೆರೆಗಳಲ್ಲಿ ಎರಡು ಮಡಿಕೆಗಳಿವೆ. ಮೇಲಿನ ಮಡಿಕೆಯು ಗಾಜಿನದ್ದಾದರೆ ಅದರ ಕೆಳಗಿನದ್ದು ಎಲೆಕ್ಟ್ರಾನಿಕ್ ವಸ್ತುಗಳ ಮಡಿಕೆ. ಈ ಎಲೆಕ್ಟ್ರಾನಿಕ್ ವಸ್ತುಗಳು ಮಡಿಕೆಯು ಕಡುಚಿಕ್ಕ ಎಲ್‍ಸಿಡಿ(LCD) ಹರಳುಗಳು ಹಾಗೂ ಹಲಬಗೆಯ ಅರಿವುಕಗಳನ್ನು(sensors) ಒಳಗೊಂಡಿರುತ್ತವೆ. ಎಲೆಕ್ಟ್ರಾನಿಕ್ ವಸ್ತುಗಳ ಮಡಿಕೆಯೇ ನಮಗೆ ಬೇಕಾದ ನೋಟವನ್ನು ತೋರಿಸುವುದು ಹಾಗೂ ನಾವು ತೆರೆಯನ್ನು ಮುಟ್ಟಿದಾಗ ಮಾರ‍್ನುಡಿಯುವುದು. ಈ ಎಲ್‍ಸಿಡಿಗಳನ್ನು ಸಾಮಾನ್ಯವಾಗಿ ಗಾಜಿನಿಂದ ಮಾಡುತ್ತಾರೆ. ಇತ್ತೀಚೆಗೆ ಈ ಚಳಕವು ಬೆಳೆದು ಎಲ್‍ಸಿಡಿಗಳ ಜಾಗವನ್ನು ಎಲ್‍ಇಡಿ(LED)ಗಳು ಪಡೆದುಕೊಂಡವು. ಈಗ ಇನ್ನೂ ಮುಂದುವರೆದು ಎಲ್‍ಇಡಿಗಳ ಬದಲಾಗಿ ಒಎಲ್ಇಡಿಗಳ(Organic Light Emitting Diode) ಬಳಕೆಯಾಗುತ್ತಿದೆ. ಒಎಲ್‍ಇಡಿಗಳನ್ನು ಗಾಜಿನ ಬದಲಾಗಿ ಪ್ಲಾಸ್ಟಿಕ್ ನಂತಹ ವಸ್ತುವಿನಿಂದ ಮಾಡುವುದನ್ನು ಕಂಡುಹಿಡಿದಿದ್ದಾರೆ. ಈ ಕಂಡುಹಿಡಿಯುವಿಕೆಯೇ ಬಳಕುವ ಚೂಟಿಯುಲಿಗಳ ಕನಸನ್ನು ನನಸಾಗಿಸಲಿದೆ. ಪ್ಲಾಸ್ಟಿಕ್ಕಿನಿಂದ ಮಾಡಿದ ಒಎಲ್‍ಇಡಿಗಳನ್ನು ಬಳಸಿ ಒಂದು ತೆರೆಯನ್ನು ಮಾಡಲಿದ್ದಾರೆ, ಈ ತೆರೆಯನ್ನು ಬಾಗಿಸಿದಾಗ ಗಾಜಿನಂತೆ ಬಿರುಕು ಬಿಡದೆ, ಒಡೆದು ಹೋಗದೆ ತೆಳು ಪ್ಲಾಸ್ಟಿಕ್‍ ಬಾಚಣಿಗೆಯಂತೆ ಬಾಗಲಿದೆ. ಇದನ್ನು ಚೂಟಿಯುಲಿಯಲ್ಲಿ ಬಳಸಿ ಬಳಕುವಂತೆ ಮಾಡುವ ಕೆಲಸಕ್ಕೆ ಈಗ ದೊಡ್ಡ ದೊಡ್ಡ ಕಂಪನಿಗಳು ಕೈಹಾಕಿದ್ದಾರೆ.

ಇದಲ್ಲದೇ ಒಎಲ್ಇಡಿಯ ಹರಳುಗಳಿಗೆ ಮಿಂಚನ್ನು ಹರಿಸಿದರೆ ತಮಗೆ ಬೇಕಾದ ಬೆಳಕನ್ನು ತಾವೇ ಹುಟ್ಟಿಸಿಕೊಳ್ಳುತ್ತವೆ. ಈ ಮುಂಚೆ ಎಲ್‍ಸಿಡಿಗಳಿಗೆ ಬೇಕಾದ ಬೆಳಕನ್ನು ಬೇರೊಂದು ಸೆಲೆಯಿಂದ ಹರಿಸುವ ಏರ‍್ಪಾಡು ಮಾಡಬೇಕಿತ್ತು. ಈ ಮಾರ‍್ಪಾಟು ಕೂಡ ಬಳುಕುವ ತೆರೆಯನ್ನು ತರಲು ನೆರವಾಗಲಿದೆ.

ಬಳುಕುವ ಚೂಟಿಯುಲಿಗಳಿಂದ ಏನೆಲ್ಲಾ ಉಪಯೋಗಗಳಿವೆ?

ಇವು ಬಳಕೆದಾರರ ಆಯ್ಕೆಗಳನ್ನು ಹೇಗೆ ಹೆಚ್ಚಿಸುತ್ತದೆ ಎಂದು ಬರಹದ ಮೊದಲಿಗೆ ತಿಳಿಸಿದ್ದೆ. ಅದನ್ನು ಸೇರಿಸಿ ಮತ್ತೂ ಕೆಲವು ಉಪಯೋಗಗಳಿವೆ.
1. ಹೆಚ್ಚು ಬಾಳಿಕೆ ಬರುತ್ತದೆ: ಗಾಜಿನ ತೆರೆಗಳು ಇರುವ ಚೂಟಿಯುಲಿಗಳು ಒಡೆದು ಹೋಗುವುದು, ಬಿರುಕು ಬಿಡುವುದು ಇಲ್ಲವೇ ಜಜ್ಜಿ ಹೋಗುವುದು ಸಾಮಾನ್ಯವಾಗಿದೆ. ಬಳುಕುವ ಚೂಟಿಯುಲಿಗಳ ಹೆಚ್ಚಿನ ಪಾಲು ಪ್ಲಾಸ್ಟಿಕ್‍ನಿಂದ ಮಾಡುವುದರಿಂದ ಈ ತೊಂದರೆಗಳಾಗುವುದಿಲ್ಲ.
2. ಹಗುರವಾಗಿರುತ್ತವೆ: ಗಾಜಿನ ಜಾಗದಲ್ಲಿ ಪ್ಲಾಸ್ಟಿಕ್ ಬಳಸುವುದರಿಂದ ಒಟ್ಟಾರೆ ಚೂಟಿಯುಲಿಯ ತೂಕ ಹಗುರವಾಗಿರುತ್ತದೆ.
3. ತೆಳುವಾಗಿರುತ್ತವೆ: ಯಾವುದೇ ವಸ್ತು ಬಳುಕ ಬೇಕೆಂದರೆ ಅದು ತೆಳುವಾಗಿದ್ದರೆ ಒಳ್ಳೆಯದು. ಹಾಗಾಗಿ ಈ ಚೂಟಿಯುಲಿಗಳನ್ನು ತೆಳುವಾಗಿಯೇ ಇರುವಂತೆ ನೋಡಿಕೊಳ್ಳಲಾಗುವುದು. ತೆಳ್ಳಗಿನ ಚೂಟಿಯುಲಿಗಳನ್ನು ಬಳಸಲು ಸುಳುವಾಗಿರುತ್ತದೆ ಎಂಬುದು ಹೆಚ್ಚಿನ ಬಳಕೆದಾರರ ಅನಿಸಿಕೆಯಾಗಿದೆ.

fs2

ಬಳಕುವ ಚೂಟಿಯುಲಿ ಮಾಡಲು ಇರುವ ಅಡ್ಡಿಯೇನು?

ಬಳುಕುವ ಚೂಟಿಯುಲಿಗಳಿಗೆ ಪ್ಲಾಸ್ಟಿಕ್‍ನಿಂದ ಮಾಡಿದ ಬಳುಕುವ ತೆರೆಯೊಂದು ಸಾಕಾಗುವುದಿಲ್ಲ. ಚೂಟಿಯುಲಿ ಒಳಗಿರುವ ಮಿಂಕಟ್ಟು(battery) ಮತ್ತಿತರ ಗಟ್ಟಿಸರಕುಗಳ ಮೇಲೆ ಗಮನಹರಿಸಬೇಕಿದೆ.

  • ನಮಗೆಲ್ಲಾ ತಿಳಿದಿರುವ ಹಾಗೆ ಮಿಂಕಟ್ಟು ಗಟ್ಟಿಯಾದ ವಸ್ತುವಾಗಿದ್ದು ಅದನ್ನು ಬಳಕುವಂತೆ ಮಾಡುವುದು ದೊಡ್ಡ ಸವಾಲಾಗಿದೆ.
  • ಒಎಲ್‍ಇಡಿಗೆ ನೀರು, ಉಸಿರ‍್ಗಾಳಿ ಇಲ್ಲವೇ ನೀರಿನ ಪಸೆ ಕೊಂಚ ಸೋಕಿದರು ಸಾಕು ಹಾಳಾಗಿಬಿಡುತ್ತದೆ. ಇಂತಹ ಒಎಲ್‍ಇಡಿಯಿಂದ ಮಾಡಿದ ತೆರೆಯನ್ನು ಇವುಗಳಿಂದ ಕಾಪಾಡಬೇಕು. ಹಾಗೆ ಕಾಪಾಡುವ ಏರ‍್ಪಾಟು ಕೂಡ ಬಳುಕುವಂತಿರಬೇಕು.
  • ಒಎಲ್‍ಇಡಿಯಿಂದ ಮಾಡಿರುವ ತೆರೆಯು ಈಗಿರುವ ಎಲ್‍ಸಿಡಿ/ಎಲ್‍ಇಡಿ ತೆರೆಗಿಂತ ಹೆಚ್ಚಿನ ಹುರುಪನ್ನು ಬೇಡುತ್ತಿದೆ. ಹೆಚ್ಚಿನ ಹುರುಪನ್ನು ಕೊಡಬೇಕೆಂದರೆ ಮಿಂಕಟ್ಟನ್ನು ದೊಡ್ಡದು ಮಾಡಬೇಕಾಗುತ್ತದೆ. ಇದರ ಬದಲಾಗಿ ಒಎಲ್‍ಇಡಿ ತೆರೆಯು ಕಡಿಮೆ ಮಿಂಚನ್ನು ಬಳಸಿಕೊಂಡು ಹೆಚ್ಚು ಕೆಲಸ ಮಾಡುವಂತೆ ಮಾಡಬೇಕು.
  • ಚೂಟಿಯುಲಿಯ ಒಳಗೆ ಬಳಸುವ ಎಲೆಕ್ಟ್ರಾನಿಕ್ ಸುತ್ತುಗಳು(circuits), ನೆಪ್ಪುಗಟ್ಟಿಗಳು(memory) ಹೀಗೆ ಹಲವಾರು ತುಣುಕುಗಳು ಬಳುಕುವ ಏರ‍್ಪಾಟಿಗೆ ನೆರವಾಗುವಂತಿರಬೇಕು.
ಸುಮಾರು ಕಂಪನಿಗಳು ಈ ಕೆಲಸಕ್ಕೆ ಆಗಲೇ ಕೈಹಾಕಿವೆ

ಬಳುಕುವ ಚೂಟಿಯುಲಿ ಮಾಡಲು ನೂರಾರು ತೊಡಕುಗಳಿದ್ದರೂ ಹಂತ ಹಂತವಾಗಿ ಅವುಗಳನ್ನು ಎದುರಿಸುವ ಕೆಲಸವನ್ನು ಹಲವು ಕಂಪನಿಗಳು ಮಾಡುತ್ತಿವೆ. ಹೆಸರುವಾಸಿ ಕಂಪನಿಯಾದ ಸ್ಯಾಮ್‍ಸಂಗ್ ನವರು ಗ್ಯಾಲಕ್ಸಿ ರೌಂಡ್ ಎಂಬ ಚೂಟಿಯುಲಿಯನ್ನು ಹೊರತಂದಿದ್ದಾರೆ. ಇದು ಬಳುಕುವುದಿಲ್ಲ ಆದರೆ ಇದರ ತೆರೆ ತಗ್ಗುಗಾಜಿನಂತೆ ಬಾಗಿಕೊಂಡಿದೆ. ಎಲ್‍ಜಿ ಕಂಪನಿಯವರು ಕೂಡ ಇಂತಹದ್ದೆ ಚೂಟಿಯುಲಿಯನ್ನು ‘ಎಲ್‍ಜಿ ಪ್ಲೆಕ್ಸ್’ ಎಂಬ ಹೆಸರಿನಲ್ಲಿ ಹೊರತಂದಿದ್ದಾರೆ. ಇವೆಲ್ಲವೂ ಬಳಕುವ ಚೂಟಿಯುಲಿಗಳನ್ನು ಮಾಡುವತ್ತ ಇಟ್ಟ ಹೆಜ್ಜೆಗಳಾಗಿವೆ ಎಂದು ಕಂಪನಿಗಳು ಹೇಳುತ್ತಿವೆ.

ಚೀನಾದ ಪುಟ್ಟ ಕಂಪನಿಯಾದ ಅರುಬಿ‍ಕ್ಸ್(Arubixs) ಹಾಗೂ ಕೆನಾಡಾದ ಕ್ವೀನ್ಸ್ ಕಲಿಕೆವೀಡಿನ ಹ್ಯೂಮನ್ ಮೀಡಿಯಾ ಲ್ಯಾಬ್ ನವರು ಬಳುಕುವ ಚೂಟಿಯುಲಿಗಳ ಒಂದೊಂದು ಮಾದರಿಗಳನ್ನು ಹೊರತಂದಿದ್ದಾರೆ. ಜಗತ್ತಿನ ಹಲವಾರು ನಾಡುಗಳಲ್ಲಿ ಇದರ ಮೇಲೆ ಅರಕೆ ನಡೆಯುತ್ತಿವೆ. ಇದನ್ನೆಲ್ಲಾ ನೋಡಿದರೆ ಬಳಕುವ ಚೂಟಿಯುಲಿಗಳನ್ನು ಹಿಡಿದುಕೊಂಡು ಓಡಾಡುವ ಕಾಲ ತುಂಬಾ ಹತ್ತಿರದಲ್ಲಿದೆ ಅನಿಸುತ್ತದೆ.

(ಮಾಹಿತಿ ಸೆಲೆ: hongkiat.comcnet.com, arstechnica.com)

(ಚಿತ್ರ ಸೆಲೆ: arstechnica.comknowyourmobile.comtrendhunter.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks