ಮತ್ತೆ ಚಿಗುರಿತೆ ಮೈಕ್ರೋಸಾಪ್ಟ್ ಕೂಟ?

ಪ್ರವೀಣ ಪಾಟೀಲ.

microsoft-3

ಎಣ್ಣುಕ(Computer) ಹಾಗು ಚೂಟಿಯುಲಿ(Smartphone) ತಯಾರಕ ಕೂಟಗಳಾದ ಮೈಕ್ರೋಸಾಪ್ಟ್ ಮತ್ತು ಆಪಲ್ ನಡುವೆ ಹತ್ತಾರು ವರುಶಗಳಿಂದ ನಡೆದುಕೊಂಡು ಬಂದ ಜಟಾಪಟಿ ಈಗಾಗಲೇ ಜಗತ್ತಿಗೆ ತಿಳಿದಿದೆ. ಒಂದು ಕಾಲದಲ್ಲಿ ಎಣ್ಣುಕ ಜಗತ್ತಿನಲ್ಲಿ ಮೈಕ್ರೋಸಾಪ್ಟ್ ತನ್ನ ಮಂದಿಯೊಲುಮೆಯ ವಿಂಡೋಸ್ ಮೆದುಸರಕಿನಿಂದ(software) ಮಾರುಕಟ್ಟೆಯನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಿತ್ತು. ಎಣ್ಣುಕ ಎಂದ ಮರುಹೊತ್ತಲೇ ಕೊಳ್ಳುಗರ ನೆನಪಿಗೆ ವಿಂಡೋಸ್ ಬಿಟ್ಟರೆ ಬೇರಾವ ಮೆದುಸರಕು ಬರುತ್ತಿರಲಿಲ್ಲ, ಕಾರಣ ಆಗಿನ ಹೊತ್ತಲ್ಲಿ ಹೇಳಿಕೊಳ್ಳುವಂತಹ, ಮಂದಿಯೊಲುಮೆ ಗಳಿಸಿದ ಯಾವ ನಡೆಸೇರ‍್ಪಾಟು (Operating System) ಇರಲಿಲ್ಲ.

ಆದರೆ ನಾಳುಗಳು ಕಳೆದಂತೆ, ಹಣಕಳೆದುಕೊಂಡು ಮುಚ್ಚುವಿಕೆಗೆ ಹತ್ತಿರ ಬಂದ ಹೊತ್ತಲ್ಲೇ, ಮುಂದಾಳುವಿನ ಮಾರ‍್ಪಾಡಿನಿಂದಾಗಿ ಆಪಲ್ ಮತ್ತೆ ತಲೆ ಎತ್ತಿ ನಿಂತಿತು. ಸಾಲುಸಾಲಾಗಿ ಹೊಸ ಬರೆಮಣೆ ಹಾಗು ಮಡಿಲೆಣ್ಣುಕಗಳು(laptops) ಬಿಡುಗಡೆಯಾದವು. ಇದರಿಂದಾಗಿ ಮೈಕ್ರೋಸಾಪ್ಟ್ ಕೂಟವು ಮಾರುಕಟ್ಟೆಯ ಮೇಲಿನ ತನ್ನ ಹತೋಟಿಯನ್ನು ಕೊನೆಗೂ ಕಳೆದುಕೊಂಡಿತು. ಆಪಲ್, ವಿಂಡೋಸ್ ಎಣ್ಣುಕಗಳಿಗೆ ಸೆಡ್ಡು ಹೊಡೆದು ಒಂದು ದೊಡ್ಡ ಕೂಟವಾಗಿ ಹೊರಹೊಮ್ಮಿತು. ಮೈಕ್ರೋಸಾಪ್ಟ್ ಕೂಟವು ಮಾರುಕಟ್ಟೆಯಲ್ಲಿ ಇಳಿಜಾರಿನ ಹಾದಿ ಹಿಡಿಯಲು ಮೊದಲನೇ ಕಾರಣ – ತಾನು ದೊಡ್ಡ ಮಟ್ಟದಲ್ಲಿ ಯಾವುದೇ ಹೊಸ ಎಣ್ಣುಕವಾಗಲಿ ಇಲ್ಲವೇ ಮೆದುಸರಕನ್ನು ಹೊರತರುವಲ್ಲಿ ಸೋತಿರುವುದು. ಕೊಂಚ ಮಟ್ಟಿಗೆ ಮಾರ‍್ಪಾಡುಗಳು ಕಂಡರೂ ಮಂದಿ ಹಿಂತಿರುಗಿ ನೋಡುವಂತಹ ಯಾವುದೇ ಹೊಸ ಚಳಕ ಹೊರಬರಲಿಲ್ಲ.

ಹೊತ್ತಿನ ಗಾಲಿ ಈಗ ತಿರುಗಿ ನಿಂತಿದೆ. ಆಪಲ್ ತನ್ನ ಗೆಲುವಿನ ದಾರಿ ಹಿಡಿಯುತ್ತಿದ್ದಂತೆ ಇದೀಗ ಮೈಕ್ರೋಸಾಪ್ಟ್ ಕೂಟದ ಮೇಲೆ ಹೊರಿಸಿದ ತಪ್ಪುಹೊರಿಕೆಗಳನ್ನು ಆಪಲ್ ಮೇಲೆಯೂ ಹೊರಿಸುತ್ತಿದ್ದಾರೆ. ತಕ್ಕ ಮಟ್ಟಿಗೆ ಅದು ದಿಟವು ಕೂಡ. ಏಕೆಂದರೆ ಕಳೆದ 4-5 ಏಡುಗಳಿಂದ ಆಪಲ್ ತನ್ನ ಎಣ್ಣುಕಗಳಲ್ಲಿ ಯಾವುದೇ ಹಿರಿಯ ಮಾರ‍್ಪಾಡುಗಳನ್ನು ಮಾಡಿಲ್ಲ. ರಾಮ್ ಮತ್ತು ಪ್ರಾಸೆಸ್ಸರ್ ಬಿಟ್ಟರೆ ಹೆಚ್ಚೇನೂ ಮೇಲ್ಮಟ್ಟಗೊಳಿಸಿಲ್ಲ. ಹೀಗಾಗಿ ಆಪಲ್ ಕೂಡ ವಿಂಡೋಸ್ ಎಣ್ಣುಕಗಳು ಹಿಡಿದ ಹಾದಿಯನ್ನು ಹಿಡಿದಿದೆಯೆ ಎಂಬ ಅನುಮಾನ ಎಲ್ಲೆಡೆ ಹರಡುತ್ತಿದೆ.

cortana-errorsಹೀಗಿರುವಾಗ, ಮೈಕ್ರೋಸಾಪ್ಟ್ ಮತ್ತೆ ಚಿಗುರಲು ಸಜ್ಜಾಗಿ ನಿಂತಿದೆ. ಸಿ.ಈ.ಎಸ್ (ಕನ್ಸೂಮರ್ ಎಲೆಕ್ಟ್ರಾನಿಕ್ ಶೊ) 2017ನೇ ಕಾರ‍್ಯಕ್ರಮದಲ್ಲಿ ತಾನು ತೋರಿಸಿದ ಚಳಕ ಹಾಗು ಹೊಸ ಎಣ್ಣುಕಗಳನ್ನು ನೋಡಿದ ಮಂದಿ ಬೆರಗಾಗಿದ್ದಾರೆ. ಮೈಕ್ರೋಸಾಪ್ಟ್ ಕೂಡ ಗೂಗಲ್ ಹಾದಿಯನ್ನೇ ತುಳಿದು, ತಾನೋಡ ಬಂಡಿ, ಹುಸಿಜಾಣ್ಮೆ (Artificial Intelligence), ಹುಸಿದಿಟತನ (Virtual Reality) ಮತ್ತು ಹತ್ತು ಹಲವಾರು ಚಳಕಗಳಲ್ಲಿ ಕೈ ಹಾಕಿದೆ. ‘ಕೊರ‍್ಟಾನ’ ಎಂಬ ನೆರವಿಕ ಸರಕು ಈಗಾಗಲೇ ವಿಂಡೋಸ್ 10 ರಲ್ಲಿ ಸದ್ದು ಮಾಡಿ ಮಂದಿಯೊಲುಮೆ ಗಳಿಸಿದೆ. ಈಗ ಅದೇ ಕೊರ‍್ಟಾನ ತಾನೋಡ ಬಂಡಿ ಹಾಗು ಹುಸಿದಿಟತನ ಚಳಕದ ಉಸಿರಾಗಲಿದೆ.

ಆಪಲ್‍ನ ಮುಂದಿನ ಹಂಚಿಕೆಗಳನ್ನ ನೋಡಿದರೆ ಸೋಜಿಗ ಅನಿಸೋಲ್ಲ. ಕೊರ‍್ಟಾನದ ಪೈಪೋಟಿಯಾದ ‘ಸಿರಿ’ ಇನ್ನು ಮೊದಲನೆಯ ಹಂತದಲ್ಲಿ ಇದ್ದಹಾಗೆ ಇದೆ. ಹೆಚ್ಚೇನೂ ಹೊಸ ಬಳಕಗಳನ್ನು ಆಪಲ್ ಉಂಟುಮಾಡಿಲ್ಲ. ಇದೆಲ್ಲ ಗಮನಿಸಿದರೆ ಆಪಲ್‍ನ ಮುಂದಿನ ಹಾದಿಯಲ್ಲಿ ಹೂವಿಗಿಂತ ಮುಳ್ಳುಗಳೇ ಹೆಚ್ಚು ಕಾಣುತ್ತಿವೆ. ಆದರೆ ಮೈಕ್ರೋಸಾಪ್ಟ್ ಕೊಳ್ಳುಗರ ಮನಸ್ಸಿನಲ್ಲಿ ನಂಬಿಕೆ ಹುಟ್ಟಿಸುವಲ್ಲಿ ಗೆದ್ದಂತಿದೆ. ಅದಕ್ಕೆ ಸಾಕ್ಶಿಯಾಗಿ ಹತ್ತಾರು ಉತ್ಪನ್ನಗಳು ಹಾಗು ಸೇವೆಗಳು ಹಲವರ ನಿದ್ದೆ ಕೆಡೆಸಿವೆ. ಮೈಕ್ರೋಸಾಪ್ಟ್ ನಿಂದ ಬರುವ ದೊಡ್ಡ ಮಟ್ಟದ ಚಳಕಗಳನ್ನು ಬಳಸಲು ಹಲವಾರು ಮಂದಿ ತಮ್ಮ ಕಾಲಬೆರಳ ತುದಿಯಲ್ಲಿ ನಿಂತು ಕಾಯುತ್ತಿದ್ದಾರೆ.

(ಚಿತ್ರ ಸೆಲೆ: wccftech.com, laptopoutlet.co.uk)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: