ನನಗಾದ ಆಕ್ಸಿಡೆಂಟ್

– ಕಾರ‍್ತಿಕ್ ಪತ್ತಾರ.

bike-accident

ಅದೊಂದು ಸಾಮಾನ್ಯ ದಿನ. ಸೂರ‍್ಯನ ಉದಯ ಬದಲಾಗದೆ ಸೂರ‍್ಯ, ಪೂರ‍್ವದಲ್ಲೇ ತಲೆ ಎತ್ತಿದ ದಿನ. ಬಯಾನಕ ಕನಸಿಲ್ಲದೇ ನೆಮ್ಮದಿಯ ನಿದಿರೆ ಕೊನೆಯಾಗಿ ಸೂರ‍್ಯನ ಎಳೆ ಕಿರಣಗಳು ಕಣ್ಣ ರೆಪ್ಪೆಯನ್ನು ತೆರೆಸಿದ ದಿನ. ಯಾವುದೇ ಆತಂಕ ಮತ್ತು ರುಣಾತ್ಮಕತೆಯಿಲ್ಲದೆ ಪ್ರಾರಂಬವಾದ ದಿನದಲ್ಲಿ ಎಸ್ ಎಲ್ ಬೈರಪ್ಪ ಅವರ ಆವರಣ ಪುಸ್ತಕವನ್ನು ಓದಲೇಬೇಕು, ಅದರೊಳಗಿನ ಮಾಹಿತಿಯನ್ನು ತೂಕಕ್ಕೆ ಹಾಕಿ ನಾನೂ ಒಬ್ಬ ವಿಮರ‍್ಶಕನಂತೆ ಚಿಂತಿಸಬೇಕು ಎಂಬ ಹಾತೊರೆತ. ಮೊದಲ ನಾಲ್ಕೈದು ಪುಟಗಳಲ್ಲಿನ ಲೇಕನ ಮನಸ್ಸಿನಾಳದ ಕುತೂಹಲತೆಯನ್ನ ಅಗೆದು ಹೊರಗೆಳೆದ್ದಿತ್ತು.

ಕೆಲಸಕ್ಕೆ ಹೋಗುವ ಸಮಯವದು, ಸ್ನೇಹಿತ ನನ್ನ ಬರುವಿಕೆಗೆ ಕಾಯುತ್ತಿರುವುದನ್ನು ನೆನೆದು ಆಪೀಸಿಗೆ ಹೋಗಲು ತಯಾರಾದೆ. ಬೈಕ್ ಹತ್ತುವವರೆಗೂ ಹೋಗುವುದೋ ಬೇಡವೋ ಎಂಬ ಚಂಚಲತೆಯ ಬೂತ ಇಬ್ಬರನ್ನೂ ಕಾಡುತ್ತಿತ್ತು. ಸೂರ‍್ಯನಿಗೆ ಹತ್ತಿರವಾದ ಹೈದರಾಬಾದ್, ಸೂರ‍್ಯನ ಪ್ರೀತಿಗೆ ಪಾತ್ರವಾಗಿ ಕಾವೇರುತ್ತಿದ್ದ ಸಮಯವದು; ‘ಇಲ್ಲಿ ಸೆಕೆ ಜಾಸ್ತಿ, ಆಪೀಸ್ ಅಲ್ಲಿ ಎ.ಸಿ ಹಾಕಿರ‍್ತಾರೆ ಹೋಗೋಣ ಬಾ’ ಎಂಬ ಅವನ ಮಾತಿಗೆ ಮನಸ್ಸು ಅವಿರೋದತೆಯಿಂದ ಒಪ್ಪಿತು.

ಹೆಲ್ಮೆಟ್ ಕಡ್ಡಾಯವಲ್ಲದ ನಗರಿಯಲ್ಲಿ ಕಿವಿಗೆ ಹಾಡಿನ ಇಂಪಿರಲಿ ಎಂದು ಹೆಡ್ ಪೋನ್ ಹಾಕಿ ಹೊರಟ ಆ ಕಿರು ಪ್ರಯಾಣ ಜೀವಕ್ಕೆ ಮಾರಕವಾಗುವ ಸೂಚನೆಯನ್ನು ಕೊಡಲೇ ಇಲ್ಲ. 150CCಯ ಪ್ರೀತಿಯ ಬೈಕು ಮದ್ಯಪಾನಿತ ಕುದುರೆಯಂತೆ ಮುನ್ನುಗ್ಗುತ್ತಿದ್ದ ವೇಳೆಯಲ್ಲಿ ಕಿವಿಗೆ ತಾಕುತ್ತಿದ್ದ ಸಂಗೀತದ ಉಲ್ಲಾಸ ಬೈಕಿನ ವೇಗಕ್ಕೆ ಕಾರಣವಾಯಿತು. ಸಿಕ್ಕಿದ ಎರಡುವರೆ ಅಡಿ ಸಂದಿಯ ದಾರಿಯಲ್ಲಿ ಬೈಕನ್ನು ನುಗ್ಗಿಸಿ ಸಾಗುತ್ತ ಬೆಣ್ಣೆ ಸಾರಿದಂತೆ ನುಣುಪಾದ ವರ‍್ತುಲ ರಸ್ತೆಯನ್ನು ತಲುಪಿದೆವು. ಆರು ಪತದ ನುಣುಪಾದ ರಸ್ತೆ, ವಾಹನಗಳ ವೇಗವನ್ನೇ ಬಯಸುತ್ತಿತ್ತು. ರಸ್ತೆ ತಲುಪಿ ಬಲಕ್ಕೆ ತಿರುಗಿದಾ ಕ್ಶಣ ಹೆಡ್ ಪೋನಿನ ಹಾಡಿನ ತಾಳದ ವೇಗ ಹೆಚ್ಚಿತ್ತು. ಗಂಟೆಗೆ 100 ಕಿಮೀ ವೇಗಕ್ಕೆ ಕಮ್ಮಿ ಇರದೆ ಹೊರಟ ಬೈಕು ಮುಂದಿನ ಎಲ್ಲ ವಾಹನಗಳನ್ನು ಹಿಮ್ಮೆಟ್ಟಿ ವೇಗವನ್ನು ಕಡಿಮೆ ಮಾಡಲು ಅವಕಾಶವೇ ಬೇಡವೆಂದಿತು.

ಎಡ ಅಂಚಿನ ದಾರಿಯಲ್ಲಿದ್ದ ನಾನು ಮುಂದಿರುವ ಕಾರನ್ನು ಬಲಬದಿಯಿಂದ ಹಿಮ್ಮೆಟ್ಟಿ ದೂಮಕೇತುವಿನಂತೆ ಮುನ್ನುಗ್ಗಿದೆ. ಮದ್ಯ ದಾರಿಯಲ್ಲಿ ಹೊರಟಿದ್ದ ಬಸ್ಸಿನ ಎತ್ತರ ತನ್ನ ಮುಂದೆ ಚಲಿಸುತ್ತಿದ್ದ ವಾಹನಗಳ ಮಾಹಿತಿಯನ್ನು ನನ್ನ ಕಣ್ಣಿಗೆ ಕೊಡಲಿಲ್ಲ. ಕ್ಶಣಕಾಲ ಬಸ್ಸಿನ ಮುಂದಿರುವ ವಾಹನದ ಚಿತ್ರಣವಿಲ್ಲದೆ, ವೇಗವನ್ನು ಕಡಿಮೆ ಮಾಡುವ ಮನಸ್ಸಾಗದೆ ಬಸ್ಸನ್ನು ಬಲಬಾಗದಿಂದ ಹಿಂದೆ ಹಾಕುವ ಮನಸ್ಸು ಮಾಡಿದೆ. ಅಂತೆಯೇ ಬಲಕ್ಕೆ ಸಾಗಿದ ನನಗೆ ಮ್ರುತ್ಯುಲೋಕದ ಆಹ್ವಾನ ಸಿದ್ದವಾಗಿತ್ತು. ಬಲ ಅಂಚಿನಲ್ಲಿ U-TURN ಮಾಡಲು ಕಾಯುತ್ತಿದ್ದ ವಾಹನಗಳ ಸಾಲು ಕೇವಲ 25 ಮೀಟರ್ ದೂರವಿತ್ತು, ಸಾಲಿನ ಕಡೆಯಲ್ಲಿದ್ದ ಕಾರು ನನ್ನ ರಬಸದ ಹೊಡೆತಕ್ಕೆ ಸಿದ್ದವಾಗಿ ನಿಂತಿತ್ತು.

ಏನು ಮಾಡುವುದು ಎಂದು ಚಿಂತಿಸಲು ಸಹ ಸಮಯವಿಲ್ಲದ ನನಗೆ ಬ್ರೇಕ್ ಹಾಕುವುದು ಅನಿವಾರ‍್ಯವಾಗಿತ್ತು. ಗಂಟೆಗೆ 100 ಕಿಮೀ ವೇಗವನ್ನು 25 ಮೀ ಅಂತರದಲ್ಲಿ ಸೊನ್ನೆಗೆ ತರಿಸುವುದು ಅಸಾದ್ಯದ ಮಾತು. ಒತ್ತಿ ಹಿಡಿದ ಬ್ರೇಕು, ಹಿಂದಿನ ಚಕ್ರದ ಜಾರಿಕೆಯ ಅನುಬವ, ಮುಂದೆ ನಿಂತಿರುವ ಕಾರಿಗೆ ಇಕ್ಕುತ್ತೇವೆ ಎಂಬ ಆಗಾತಕಾರಿ ಆಲೋಚನೆ ಮಿದುಳನ್ನು OFF ಮಾಡುವ ಗುಂಡಿಯನ್ನು ಒತ್ತಿತು.

ಅದೇನು ಆಯಿತೋ ಅರಿಯೆ. ಗುಯ್ ಗುಟ್ಟುವ ತಿಳಿಯಾದ ಸದ್ದು ತಲೆಯನ್ನು ಆವರಿಸಿತು. ನಾವು ಕಾರಿಗೆ ಗುದ್ದಿರುವೆವೆಯೋ, ಅತವಾ ಬ್ರೇಕ್ ಹಾಕಿದ್ದರಿಂದ ಅಪಾಯ ತಪ್ಪಿತೋ ಅತವಾ ಕೆಳಗೆ ಬಿದ್ದ ನಮ್ಮ ಮೇಲೆ ವಾಹನ ಹರಿದು ಮ್ರುತ್ಯುಲೋಕವನ್ನು ಸೇರಿರುವೆವೆಯೋ – ಒಂದೂ ಅರಿವಿಲ್ಲ. ಆ ಮಂಪರಿನಲ್ಲಿಯೇ ಎಲ್ಲೋ ಹೋಗುತ್ತಿರುವ ಅನುಬವ, ಸಂಕಟದಿಂದ ಕ್ಶಣಕಾಲ ಆದ ಎಚ್ಚರಿಕೆ ನಿದ್ದೆಯಲ್ಲಿನ ಕೆಟ್ಟ ಕನಸಿರಬೇಕು, ಎಚ್ಚರವಾದಮೇಲೆ ಸರಿಹೋಗಬಹುದು ಎಂದುಕೊಂಡೆ ಆದರೆ ಆ ಕನಸು ಕನಸಾಗಿಯೇ ಉಳಿಯಿತು. ಆಸ್ಪತ್ರೆಯಲ್ಲಿ ಪೂರ‍್ಣವಾಗಿ ಎಚ್ಚರವಾದ ಮೇಲೆ ಅಪಗಾತದಿಂದ ಇಲ್ಲಿ ಸೇರಿದ್ದೇವೆ ಎಂಬ ವಿಚಾರ ನಂಬಲಿಕ್ಕೂ ಕಶ್ಟವಾಯಿತು.

( ಚಿತ್ರ ಸೆಲೆ:  pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: