ಹೊಸ ಜಾಗದಲ್ಲಿ ನಿದ್ದೆ ಏಕೆ ಬರುವುದಿಲ್ಲ?

ವಿಜಯಮಹಾಂತೇಶ ಮುಜಗೊಂಡ.

poor-sleep

ಬೇರೆ ಊರಿನಲ್ಲಿ ಇಲ್ಲವೇ ಗೆಳೆಯರ ಮನೆಯಲ್ಲಿ ರಾತ್ರಿ ಉಳಿದುಕೊಳ್ಳಬೇಕಾಗಿ ಬಂದಾಗ ಒಮ್ಮೊಮ್ಮೆ ರಾತ್ರಿಯೆಲ್ಲಾ ಸರಿಯಾಗಿ ನಿದ್ದೆಯಿಲ್ಲದೆ ನರಳುತ್ತೇವೆ. ಮಲಗುವ ಜಾಗ ಬದಲಾದರೆ ಎಂದಿನಂತೆ ನಿಶ್ಚಿಂತೆಯಿಂದ ನಿದ್ದೆ ಮಾಡುವುದು ಕಶ್ಟ ಎನ್ನುವುದು ಎಲ್ಲರ ಅನುಬವಕ್ಕೆ ಬಂದಿರುತ್ತದೆ. ಇದು ಕೆಲವರಲ್ಲಿ ಕಾಣುವ ತೊಂದರೆ ಅಲ್ಲ, ಹೆಚ್ಚೂ ಕಡಿಮೆ ಎಲ್ಲರಿಗೂ ಹೊಸ ಜಾಗದಲ್ಲಿ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ. ಹೀಗೇಕೆ? ಯಾವುದೇ ಹೊಸ ಜಾಗದಲ್ಲಿ ಸರಿಯಾಗಿ ಏಕೆ ನಿದ್ದೆ ಬರುವುದಿಲ್ಲ? ಇದಕ್ಕೆ ವಿಜ್ನಾನಿಗಳು ಇತ್ತೀಚಿಗೆ ಉತ್ತರ ಕಂಡುಕೊಂಡಿದ್ದಾರೆ.

ಅಮೆರಿಕಾದ ಬ್ರೌನ್ ಕಲಿಕೆವೀಡಿನ ಅರಿಗರು ಮಯ್ಯೊಳಿತುಳ್ಳ(healthy) 35 ಮಂದಿಯನ್ನು ಅರಕೆಮನೆಯಲ್ಲಿ ಮಲಗಿಸಿ ಅವರಲ್ಲಿ ಆಗುವ ಬದಲಾವಣೆಗಳನ್ನು ಕುರಿತು ಅರಕೆ ನಡೆಸಿದ್ದಾರೆ. ಹೊಸ ಜಾಗದಲ್ಲಿ ಮಲಗಿದವರ ಮೆದುಳಿನಲ್ಲಿ ನಡೆಯುವ ಚಟುವಟಿಕೆಗಳನ್ನು ಗಮನಿಸಿ, ಹೊಸ ಜಾಗದಲ್ಲಿ ಮಲಗುವ ಬಹುತೇಕ ಮಂದಿಗೆ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ ಎನ್ನುವುದನ್ನು ನಿಕ್ಕಿಮಾಡಿದ್ದಾರೆ. ಈ ಕುರಿತ ಅರಕೆಹಾಳೆಯೊಂದು ಕರೆಂಟ್ ಬಯಾಲಜಿ ಎನ್ನುವ ಅರಿಮೆ ನಾಳ್ಕಡತವೊಂದರಲ್ಲಿ(journal) ಮೂಡಿಬಂದಿದೆ.

ಹೊಸ ಜಾಗದಲ್ಲಿ ಮಲಗಿದವರ ಮೆದುಳಿನಲ್ಲಿ ಹೊಸ ಬಗೆಯ ಚಟುವಟಿಕೆಯೊಂದು ನಡೆಯುತ್ತದೆ. ಅದೇನೆಂದರೆ, ಮೆದುಳಿನ ಎಡಬಾಗವು ಎಚ್ಚರವಾಗಿದ್ದು, ಬಲಬಾಗ ಮಾತ್ರ ನಿದ್ದೆ ಮಾಡುತ್ತಿರುತ್ತದೆ. ಮೆದುಳಿನ ಅರ‍್ದಬಾಗ ಎಚ್ಚರ ಇರುವ ಈ ನಡವಳಿಕೆ, ಮನುಶ್ಯರಲ್ಲಿ ಮಾತ್ರವಲ್ಲದೇ ತಿಮಿಂಗಲ, ಹಂದಿಮೀನು(dolphin) ಮತ್ತು ಹಕ್ಕಿಗಳಲ್ಲಿಯೂ ಕಂಡುಬಂದಿದೆ. ಮೆದುಳಿನ ಅರ‍್ದಬಾಗ ರಾತ್ರಿ ಕಾವಲಿನ ಕೆಲಸ ಮಾಡುತ್ತದ. “ನಾವು ಮಲಗಿರುವ ಜಾಗ ಹೊಸದಾಗಿರುವುದರಿಂದ, ನಿದ್ದೆ ಮಾಡುತ್ತಿರುವಾಗ ಏನಾದರೂ ನಡೆದರೆ ಗೊತ್ತಾಗುವಂತೆ ಕಾವಲು ಕಾಯುವಂತಹ ಏರ‍್ಪಾಡು ಬೇಕಾಗುವುದು” ಎನ್ನುತ್ತಾರೆ ಅರಕೆಹಾಳೆಯ ಬರಹಗಾರರಲ್ಲಿ ಒಬ್ಬರಾದ ಮಸಾಕೊ ಟಮಾಕಿ(Masako Tamaki). ಮಲಗಿರುವಾಗ ನಾವು ಅಪಾಯಕ್ಕೆ ಒಳಗಾಗಬಹುದಾದ ಅವಕಾಶಗಳು ಹೆಚ್ಚು. ಇಂತಹ ಹೊತ್ತಿನಲ್ಲಿ, ನಮ್ಮ ಮೆದುಳು ಅರೆನಿದ್ದೆಯ ಮೂಲಕ ನಮ್ಮನ್ನು ಕಾಯುತ್ತಿರಬಹುದು ಎಂಬುದು ಅವರ ಅನಿಸಿಕೆ.

ಹಾಗೆಯೇ ಕಿವಿಯುಲಿಗಳನ್ನು(earphones) ಬಳಸಿ ನಿದ್ದೆ ಮಾಡುತ್ತಿರುವಾಗ, ಗಟ್ಟಿಯಾದ ದನಿಗೆ ಮೆದುಳಿನ ಎಡಬದಿಯ ಸ್ಪಂದನೆ ಹೆಚ್ಚಾಗಿರುವುದು ಕಂಡುಬಂದಿದೆ. ಮಲಗಿರುವಾಗ ಮೆದುಳಿನ ಎಡಬದಿಯು ಹೆಚ್ಚು ಎಚ್ಚರಿಕೆಯಿಂದ ಇರುತ್ತದೆ ಎನ್ನುವುದು ಇದರಿಂದ ಸಾಬೀತಾಗಿದೆ.

ಮೆದುಳಿನ ಎಡಬದಿಯೇ ಏಕೆ ಎಚ್ಚರವಾಗಿರುವುದು? ಬಲಬದಿ ಏಕಿರುವುದಿಲ್ಲ? ಎನ್ನುವ ಹಲವು ಕೇಳ್ವಿಗಳನ್ನು ಈ ಅರಕೆಯು ಹುಟ್ಟುಹಾಕಿದೆ. ಇದಕ್ಕಿನ್ನೂ ಉತ್ತರ ಸಿಕ್ಕಿಲ್ಲ. ಮೆದುಳಿನ ಒಂದು ಬದಿಯು ಎಚ್ಚರವಾಗಿದ್ದು, ಇನ್ನೊಂದು ಬದಿ ನಿದ್ದೆ ಮಾಡುವ ಈ ಪರಿಯು ಹೊಸ ಜಾಗದಲ್ಲಿ ಮಲಗಿದ ಮೊದಲ ದಿನವಶ್ಟೇ ಕಂಡುಬರುವುದು ಕುತೂಹಲಕಾರಿ ಸಂಗತಿ. ಮುಂದಿನ ಸಲ ಹೊಸ ಜಾಗದಲ್ಲಿ ಮಲಗಿದಾಗ ಚೆನ್ನಾಗಿ ನಿದ್ದೆ ಬಾರದಿದ್ದರೆ ಅದಕ್ಕೆ ಕಾರಣ ಏನೆಂದು ನಿಮಗೀಗ ಗೊತ್ತು!

(ಮಾಹಿತಿ ಮತ್ತು ಚಿತ್ರ ಸೆಲೆ: time.comdailymail.co.uk)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: